fbpx

ಅಸೀಫಾಳ ಕೈಗೆ ಕುಡುಗೋಲು ಕೊಡುತ್ತಿದ್ದೆ..

ಶ್ರೀಪಾದ ಹೆಗ್ಡೆ 

ನಾನು ದೇವರಾಗಿದ್ದರೆ
ಅತ್ಯಾಚಾರಿಗಳ ಕೈ ಕಡಿಯುವುದಕ್ಕೆ
ಅಸೀಫಾಳ ಕೈಗೆ ಕುಡುಗೋಲು ಕೊಡುತ್ತಿದ್ದೆ

ನಾನು ದೇವರಾಗಿದ್ದರೆ
ಆ ಪಾಪಿಗಳ ತೊಡೆ ಮುರಿಯುವದಕ್ಕೆ
ಅಸೀಫಾಳ ಕೈಗೆ ಗದೆ ಕೊಡುತ್ತಿದ್ದೆ

ನಾನು ದೇವರಾಗಿದ್ದರೆ
ಅವರ ಶಿಶ್ನವನ್ನು ಕತ್ತರಿಸುವುದಕ್ಕೆ
ಅಸೀಫಾಳ ಕೈಗೆ ಹರಿತ ಕತ್ತರಿ ಕೊಡುತ್ತಿದ್ದೆ

ನಾನು ದೇವರಾಗಿದ್ದರೆ
ಈ ಎಲ್ಲ ಕೆಲಸ ಸಾಧ್ಯವಾಗಿಸಲು
ಅಸೀಫಾಳಿಗೆ ನನ್ನೆಲ್ಲ ಶಕ್ತಿ ಧಾರೆ ಎರೆಯುತ್ತಿದ್ದೆ.

ಪಾಪ ! ಕಲ್ಲು ದೇವರು
ಕಣ್ಣಿದ್ದೂ ಕಾಣಲಾರದ ಕುರುಡ
ಕಿವಿಯಿದ್ದೂ ಕೇಳಲಾರದ ಕಿವುಡ
ಕಾಲಿದ್ದೂ ಚಲಿಸಲಾರದ ಕುಂಟ
ಕೈಯಿದ್ದೂ ಎತ್ತಿ ಬಾರಿಸಲಾರದ ಅಬಲ
ಅಸೀಫಾಳ ಗೋಳ ಕರೆಯ ಕೇಳದಾದ

ಅವಳ ನೋವು ನರಳಾಟ ನೋಡದಾದ
ತನ್ನೆದುರೇ ನಡೆದ ಅತ್ಯಾಚಾರ ತಡೆಯದಾದ
ಕಲ್ಲಿನಿಂದ ತಲೆ ಜಜ್ಜಿ ಅಯ್ಯೋ! ಕೊಂದೇ ಬಿಟ್ಟರು

ಕಲ್ಲೊಳಗೆ ಸಿಲುಕಿ ಕೊಂಡ ದೇವರು ಹೊರಬರದಾದ
ತನ್ನ ಅಸಹಾಯಕತೆಗೆ ಮರುಗಿ ಮೂಕನಾಗಿ ಹೋದ
ನ್ಯಾಯಧೀಶರೆದುರು ಇನ್ನು ಅವ ಸಾಕ್ಷಿಯನ್ನೂ ಹೇಳಲಾರ
ದೇವರು ನಿಜವಾಗಿಯೂ ಕಲ್ಲಾದ.

ಅಂತಃಕರುಣವಿರುವ ಮನುಜರೇ ಬನ್ನಿ
ನೀವೇ ಅಸಿಫಾಳಿಗೆ ನ್ಯಾಯ ಕೊಡಿಸಿ.

Leave a Reply