fbpx

ಅವರು ಮಾತಾಡಿಬಿಟ್ಟರು..

ಪ್ರಸಾದ್ ರಕ್ಷಿದಿ 

ಸಾಮಾನ್ಯವಾಗಿ ಮಾತಿನಲ್ಲಿ ಸಭ್ಯತೆಯ ಎಲ್ಲೆ ಮೀರದ ದಿನೇಶ್ ಗುಂಡೂರಾವ್ ಇಂದು ಮೀರಿದರು. ಇಂದಿನ ನಮ್ಮ ರಾಜಕಾರಣಿಗಳು ಒಬ್ಬರನ್ನೊಬ್ಬರು ಮೀರಿಸುವಂತೆ ವೈಯಕ್ತಿಕ ನಿಂದನೆಯಲ್ಲಿ ತೊಡಗುವುದು, ಮಹಿಳೆಯರ ಬಗ್ಗೆ ಕೀಳು ಮಾತನಾಡುವುದು ಪಕ್ಷಾತೀತವಾಗಿ ನಡೆದಿದೆ.

ಈ ಬಗ್ಗೆ ಮೊನ್ನೆ ಹಿರಿಯರೊಬ್ಬರೊಡನೆ ಮಾತನಾಡುವಾಗ ಅವರು ಹೀಗಂದರು ನಾವು ಗುರಿಸಾಧನೆಗಾಗಿ ಮಾಡುವ ಯಾವುದೇ ಅಪಮಾರ್ಗ ನಮಗೆ ಇಂದು ಸಣ್ಣದಾಗಿ ಕಾಣಬಹುದು, ಅದರಿಂದ ಸಿಗುವ ಲಾಭವನ್ನು ಪರಿಗಣಿಸಿದರೆ ಅದೇನಂಥ ತಪ್ಪಲ್ಲವೆಂದೂ, ಅನ್ನಿಸಬಹುದು , ಆದರೆ ದೀರ್ಘಾವಧಿಯಲ್ಲಿ ಅದು ಘೋರ ಪರಿಣಾಮವನ್ನು ಬೀರುತ್ತದೆ ಎಂದರು.

ನಂತರ ಇಂದಿನ ವೈಯಕ್ತಿಕ ಟೀಕೆಗಳ ಬಗ್ಗೆ ಹೇಳುತ್ತ ಸ್ವಾತಂತ್ರ ಸಿಕ್ಕಿದ ನಂತರ ಸಂಸತ್ತಿನಲ್ಲಿ ಅಂದಿನ ಸ್ವತಂತ್ರ ಪಾರ್ಟಿಯ ಅಧ್ಯಕ್ಷರಾದ ರಾಜಾಜಿಯವರು ನೆಹರೂರವರ ಪ್ರಮುಖ ಟೀಕಾಕಾರರಾಗಿದ್ದರು. ನೆಹರೂ ಅವರನ್ನು ಅಪಾರ ಗೌರವದೊಂದಿಗೇ ಟೀಕಿಸುತ್ತಿದ್ದ ಅವರ ಪ್ರಖರ ಟೀಕೆಗಳು ನೆಹರೂ ಪದೇ ಪದೇ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದವು. ಅಂದಿನ ದಿನಗಳಲ್ಲಿ ಸಂಸತ್ತಿನಲ್ಲಿ ಹೋಗಲಿ ಸಾರ್ವಜನಿಕ ಸಭೆಗಳಲ್ಲೂ ಕೂಡಾ ವೈಯಕ್ತಿಕ ಟೀಕೆಗಿಳಿಯುತ್ತಿರಲಿಲ್ಲ.

ಅದೊಂದು ದಿನ ರಾಜಾಜಿಯವರ ಟೀಕೆಯೆಂದ ಸಿಟ್ಟಿಗೆದ್ದ ನೆಹರೂ ರಾಜಾಜಿಯವರನ್ನು ವೈಯಕ್ತಿಕವಾಗಿ ಬಯ್ದರು. ನಂತರ ಕ್ಷಮೆ ಕೇಳಿದರೂ ಕೂಡಾ. ಸ್ವತಂತ್ರ ಪಕ್ಷದ ಅಂದಿನ ಕಾರ್ಯದರ್ಶಿಯಾಗಿದ್ದ ಮಿನೂ ಮಸಾನಿಯವರು “ನೆಹರೂಜಿ ನೀವಿಂದು ಸಂಸತ್ತಿನ ಸಭ್ಯತೆಯ ಕಟ್ಟಡದ ತಳಪಾಯದ ಕಲ್ಲೊಂದನ್ನು ಕಿತ್ತು ಹಾಕಿದ್ದೀರಿ, ಅದು ಮುಂದೆ ದುಷ್ಪಲಗಳನ್ನು ನೀಡಲಿದೆ” ಎಂದರು.

ಇನ್ನೊಂದು ವಿಚಾರ ಜೀವಮಾನವಿಡೀ ಕಾಂಗ್ರೆಸ್ಸಿಗರಾಗಿದ್ದ ಹಾಗೂ ದೇವರಾಜ ಅರಸರು ತುಂಬ ಗೌರವಿಸುತ್ತಿದ್ದ ಸಾಹಿತಿ, ಯಕ್ಷಗಾನ ಕಲಾವಿದ ದೇರಾಜೆ ಸೀತಾರಾಮಯ್ಯನವರ ಕಾಲದ ಸಂಗತಿ.

ಒಮ್ಮೆ ದೇವರಾಜ ಅರಸರು ತಾವು ಶಾಸಕರಿಗೆ ತಿಂಗಳಿಗೆ ಒಂದಷ್ಟು ಆದಾಯ ಬರುವಂತೆ ಮಾಡಿಕೊಟ್ಟು ಅವರನ್ನು ಜೊತೆಯಲ್ಲಿರಿಸಿಕೊಳ್ಳಬೇಕಾದ ಅನಿವಾರ್ಯತೆಯ ಬಗ್ಗೆ ಹೇಳಿದರು. ಆಗ ದೇರಾಜೆಯವರು ಒಂದು ಕಾಂಗ್ರೆಸ್ಸಿನ ಸಾರ್ವಜನಿಕ ಸಭೆಯಲ್ಲೇ ಹೀಗೆ ಅರಸರು ಮಾಡುವುದಕ್ಕಿಂತ ರಾಜೀನಾಮೆ ಕೊಟ್ಟು ಹೋಗುವುದು ಮೇಲೆ ಇದು ಮುಂದೊಂದು ದಿನ ಭೂತಾಕಾರವಾಗಿ ಕಾಡಲಿದೆ ಎಂದಿದ್ದರು.
ಅದೂ ಕೂಡಾ ಇಂದು ನಮ್ಮ ಅನುಭವಕ್ಕೆ ಪ್ರತಿದಿನ ಬರುತ್ತಿದೆ.

ಗಾದೆ ಮಾತು “ಅಕ್ಕಿ ತಿನ್ನೋನ ಬಿಟ್ಕೊಂಡು ಕೂತ್ರೆ ಬತ್ತ ತಿನ್ನೋನೇ ಬರ್ತಾನೆ” ಸುಮ್ಮನೆ ಹೇಳಿದ್ದಲ್ಲ.
ಗಾಂಧಿಯ ಮಾತು “ಗುರಿ ಮಾತ್ರವಲ್ಲ ಮಾರ್ಗವೂ ಶುದ್ಧವಾಗಿರಬೇಕು” ಇದೂ ಕೂಡಾ ಸುಮ್ಮನೆ ಹೇಳಿದ್ದಲ್ಲ.

Leave a Reply