fbpx

ಅಯ್ಯೋ.. ಈ ಮುಗಿಯದ ಉಪ್ಪಿನಕಾಯಿ ಪುರಾಣ ನೆನಪಾಗಿದ್ದು ತಮ್ಮಣ್ಣ ಬೀಗಾರರ ‘ಪುಟ್ಟನ ಕೋಳಿ’ ಸಂಕಲನದ ಉಪ್ಪಿನಕಾಯಿ ಕಥೆಯನ್ನು ಓದಿದಾಗ..

“ನಿನಗೆ ಚಿಕ್ಕ ಭರಣಿಯಲ್ಲಿ ಉಪ್ಪಿನಕಾಯಿ ಇಟ್ಟಿದ್ದೀನಿ. ತಗೊಂಡು ಹೋಗು.”

-ಹಿಂದಿನ ವರ್ಷ ಅಮ್ಮಹೇಳಿದಾಗಲೇ ಬಾಯಿ ನೀರೂರಲಾರಂಭಿಸಿತ್ತು. ಹಿಂದೆಲ್ಲ ದೊಡ್ಡ ದೊಡ್ಡ ಭರಣಿಗಳಲ್ಲಿ ಉಪ್ಪಿನಕಾಯಿ ಮಾಡುತ್ತಿದ್ದ ಅಮ್ಮ ಇತ್ತೀಚಿನ ವರ್ಷಗಳಲ್ಲಿ ಅನಾರೋಗ್ಯದಿಂದಾಗಿ ಉಪ್ಪಿನಕಾಯಿ ಮಾಡುವುದನ್ನೇ ನಿಲ್ಲಿಸಿದ್ದಳು. ಆದರೆ ಹಿಂದಿನ ವರ್ಷ ಒಂದಿಷ್ಟು ಉಪ್ಪಿನಕಾಯಿ ಮಾಡಿದವಳು ಅದರ ಸಿಂಹಪಾಲನ್ನು ನನಗೇ ಎತ್ತಿಟ್ಟಿದ್ದಳು

“ಅಮ್ಮಮ್ಮ ಮಾಡಿದ ಮಾವಿನ ಮಿಡಿ ಉಪ್ಪಿನಕಾಯಿ ಅಂದ್ರೆ ಈ ಅಮ್ಮ ಯಾಕೆ ಅಷ್ಟೆಲ್ಲ ಇಷ್ಟಪಡ್ತಾಳೆ ಅಂತಾ ನನಗೀಗ ಗೊತ್ತಾಯ್ತು..” ಮಗ ತಾನೂ ಒಂದಿಷ್ಟು ಉಪ್ಪಿನಕಾಯಿಯ ರಸ ಚಪ್ಪರಿಸುತ್ತ ಹೇಳಿದ್ದ. ಅಮ್ಮ ಮಾಡಿದ ಉಪ್ಪಿಕಾಯಿ ಇದ್ದರೆ ಮೀನಿನ ಸಾರಿನ ಜೊತೆಗೂ ಚಪ್ಪರಿಸುವವಳು ನಾನು.

ಮದುವೆಯಾಗಿ ಆರು ತಿಂಗಳು ಕಳೆದಿತ್ತೇನೋ.. ಒಂದು ದಿನ ದೋಸೆಗೆ ಮಿಡಿ ಉಪ್ಪಿನಕಾಯಿ ರಸ ಹಾಗೂ ಕೊಬ್ಬರಿ ಎಣ್ಣೆ ಹಾಕಿಕೊಂಡು ಬಾಯಿ ಚಪ್ಪರಿಸಿ ತಿನ್ನುತ್ತಿದ್ದೆ.ಅದೇಕೋ ಅಜಾನಕ್ ಆಗಿ ನನ್ನನ್ನು ನೋಡಿದ ಅತ್ತೆ ಕಂಗಾಲಾಗಿ ಹೋಗಿದ್ದರು.

“ಪವಿ, ಇದು ನೋಡೋ ನಿನ್ನ ಹೆಂಡತಿ ಕೆಲಸಾನಾ..” ಎನ್ನುತ್ತ ಆಶ್ಚರ್ಯದಿಂದ ಪ್ರವೀರನನ್ನು ಕರೆದೇ ಬಿಟ್ಟಿದ್ದರು. ಏನು ಮಾಡಿದಳೋ ಈ ಎಡವಟ್ಟು ಹೆಂಡತಿ ಎಂಬ ಆತಂಕದಲ್ಲಿ ಬಂದವರು ನನ್ನನ್ನು ಉಪ್ಪಿನಕಾಯಿಯನ್ನು ಬದಲಿಸಿ ನೋಡುತ್ತ ಸುಮ್ಮನೆ ನಿಂತರು.

ಹೊಟ್ಟೆಯಲ್ಲಿ ಚೊಚ್ಚಿಲು ಮೂರು ತಿಂಗಳ ಮಗುವನ್ನು ಹೊತ್ತುಕೊಂಡಿರುವ ಸೊಸೆ ಹೀಗೆ ದೋಸೆಗೆ ಉಪ್ಪಿನಕಾಯಿ ಹಾಕಿಕೊಂಡರೆ ಗತಿ ಏನು ಎಂಬ ಆತಂಕ ಅತ್ತೆಯದ್ದು. ಎಳೆ ಬಸುರಿಯರು ಉಪ್ಪಿನಕಾಯಿ ತಿನ್ನಬಾರದು, ಪಪ್ಪಾಯಿ, ಅನಾನಸ್, ಕಲ್ಲಂಗಡಿ ತಿನ್ನಬಾರದು. ಇವೆಲ್ಲ ತುಂಬಾ ಉಷ್ಣ. ಅದರಿಂದ ಮೈ ಇಳಿದು ಹೋಗುತ್ತದೆ ಎಂಬ ನಂಬಿಕೆ ಅವರದ್ದು.

ಆದರೆ ನಾನೋ ತೆಕ್ಕೆಯಷ್ಟು ಉಪ್ಪಿನಕಾಯಿ ರಸದಲ್ಲಿ ಬೆಳಂಬೆಳಿಗ್ಗೆಯೇ ದೋಸೆ ತಿನ್ನುತ್ತಿದ್ದೆ. ಉಪ್ಪಿನಕಾಯಿ ತಿನ್ನುವ ಅಪರಾಧ ಒಂದು ಕಡೆಯಾದರೆ, ದೋಸೆಗೆ ಉಪ್ಪಿನಕಾಯಿ ನೆಂಚಿಕೊಂಡು ತಿನ್ನುವ ಹೊಸತೇ ಆದ ವಿಧಾನವನ್ನು ಕಂಡಿದ್ದ ಅತ್ತೆ ವಿಚಿತ್ರ ಎಂಬಂತೆ ನೋಡುತ್ತಿದ್ದರೆ ಪ್ರವೀರ್ ಗೆ ನನ್ನ ವಿಚಿತ್ರ ರೂಢಿಯ ಬಗ್ಗೆ ಮೊದಲೇ ಗೊತ್ತಿದ್ದರೂ ಅದನ್ನು ಸಮರ್ಥಿಸಿಕೊಳ್ಳಲಾಗದೆ ಸುಮ್ಮನೆ ನಿಂತಿದ್ದರು.

ಅಮ್ಮ ರುಚಿ ರುಚಿಯಾದ ಮಿಡಿ ಉಪ್ಪಿನಕಾಯಿ ಮಾಡುತ್ತಿದ್ದರು. ಸುಮಾರು ಫೆಬ್ರವರಿ ತಿಂಗಳು ಬಂತೆಂದರೆ ಸಾಕು, ಉಪ್ಪಿನಕಾಯಿ ಮಿಡಿ ತಂದು ಕೊಡುವವರ ಶೋಧ ಪ್ರಾರಂಭವಾಗುತ್ತಿತ್ತು. ಹೊಳೆ ಬದಿಯ ಮರದ, ಜೀರಿಗೆ ವಾಸನೆ ಹೊಮ್ಮುವ ಉಪ್ಪಿನಕಾಯಿಗೆಂದೇ ಮಾವಿನ ಮಿಡಿಗಳನ್ನು ತರಿಸುವುದು ಸುಲಭದ ಮಾತಾಗಿರಲಿಲ್ಲ.

ಉಪ್ಪಿನಕಾಯಿ ಮಿಡಿ ಎಂದು ಗುಂಡಪ್ಪೆ ಮರದಿಂದ ಮಿಡಿ ತಂದುಕೊಟ್ಟು ಉಪ್ಪು ನೀರಲ್ಲಿ ತಿಂಗಳು ಇಟ್ಟರೆ ಸಾಕು ಕೊಳೆತು ಹೋಗುವಂತಹ ಮಿಡಿ ತಂದುಕೊಡುವವರೂ ಇದ್ದರು. ಹೀಗಾಗಿ ಈ ವಿಶೇಷ ಮಾವಿನ ಮಿಡಿಯನ್ನು ಅದಕ್ಕೆಂದೇ ಮೀಸಲಾದ ಮರಗಳಿಂದ ತರಬೇಕಿತ್ತು. ಮಿಡಿಯನ್ನು ಒಂದಿಷ್ಟೂ ತೊಟ್ಟು ಮುರಿಯದಂತೆ ತಂದು ಅದೇ ದಿನ ಅದನ್ನು ಸ್ವಚ್ಛವಾಗಿ ಒರೆಸಿ ದೊಡ್ಡದೊಂದು ಬರಣಿಯಲ್ಲಿ ಉಪ್ಪು ಹಾಕಿ, ಒಂದಿಷ್ಟು ನೀರಿಟ್ಟು ಪದರ ಪದರಕ್ಕೂ ಉಪ್ಪು ಹಾಕಿ, ಮೇಲೆ ಹೊಳೆದಂಡೆಯಿಂದ ತಂದಂತಹ ಭಾರವಾದ ಚಪ್ಪಟೆ ಕಲ್ಲನ್ನು ಹೇರಿ ಗಾಳಿ ನೀರು ತಾಕದಂತೆ ಬಿಗಿಯಾಗಿ ಭರಣಿಯ ಬಾಯಿ ಕಟ್ಟಿ ಭದ್ರವಾಗಿಡಬೇಕು.

ಆದರೆ ಅದೆಲ್ಲಕ್ಕಿಂತ ಮುಖ್ಯವಾಗಿ ಮಿಡಿಯ ಮೇಲಿರುವ ಉದ್ದುದ್ದ ತೊಟ್ಟನ್ನು ನಾಜೂಕಾಗಿ ಮುರಿಯಬೇಕು. ಮುರಿದ ತೊಟ್ಟಿನಿಂದ ಬರುವ ಸೊನೆ ಒಂದಿಷ್ಟೂ ವೇಸ್ಟ್ ಆಗದೇ ಅದೇ ಭರಣಿಯಲ್ಲಿ ಒಸರುವಂತೆ ನೋಡಿಕೊಳ್ಳಬೇಕು. ತೊಟ್ಟು ಮುರಿದು ಸೊನೆ ಇಲ್ಲದ ಮಾವಿನಮಿಡಿಯನ್ನು, ಕೊಯ್ದು ಎರಡು ದಿನ ಕಳೆದು ಸೊನೆಯೆಲ್ಲ ಬತ್ತಿ ಹೋದ ಮಿಡಿಯನ್ನು ಸುತಾರಾಂ ತೆಗೆದುಕೊಳ್ಳುವಂತಿಲ್ಲ.

ಇಷ್ಟೆಲ್ಲ ಆದ ಮೇಲೆ ಸುಮಾರು ತಿಂಗಳು ಕಳೆದು, ಅಂದರೆ ಮಾರ್ಚ ತಿಂಗಳ ಮಧ್ಯದಲ್ಲಿ ಅಮ್ಮನ ಉಪ್ಪಿನಕಾಯಿಯ ಸಂಭ್ರಮ ಪ್ರಾರಂಭವಾಗುತ್ತಿತ್ತು. ಆದರೆ ಸಿಕ್ಕಪಟ್ಟೆ ಉಢಾಳ ಹುಡುಗಿಯಾಗಿದ್ದ ನಾನು ಉಪ್ಪಿನಕಾಯಿ ಮಾಡುವಾಗ ಅತ್ತ ಕಡೆ ತಲೆ ಹಾಕುವುದು ಬಿಡಿ, ಕಣ್ಣ ಕೊನೆಯಿಂದಲೂ ನೋಡುವಂತಿಲ್ಲ. ಎಲ್ಲಾದರೂ ನಾನು ನನ್ನ ಮಾಮೂಲಿ ಹುಡುಗಾಟಕ್ಕೆ ಎಂಬಂತೆ ನೀರ ಹನಿ ಸಿಡಿಸಿದರೆ ಅಷ್ಟೆಲ್ಲ ಶ್ರಮವಹಿಸಿ ಮಾಡಿದ ಉಪ್ಪಿನಕಾಯಿ ತಿಂಗಳಲ್ಲೇ ಜೀವೋತ್ಪತ್ತಿಯ ಕೇಂದ್ರವಾಗಿ ಮಿಜುಗುಡಲು ಪ್ರಾರಂಭವಾಗಿಬಿಡುತ್ತಿತ್ತು.

ಅಯ್ಯೋ.. ಈ ಮುಗಿಯದ ಉಪ್ಪಿನಕಾಯಿ ಪುರಾಣ ನೆನಪಾಗಿದ್ದು ತಮ್ಮಣ್ಣ ಬೀಗಾರರ ‘ಪುಟ್ಟನ ಕೋಳಿ’ ಮಕ್ಕಳ ಕಥಾ ಸಂಕಲನದ ಉಪ್ಪಿನಕಾಯಿ ಕಥೆಯನ್ನು ಓದಿದಾಗ.

ಮಾವಿನಕಾಯಿ ಕೊಯ್ಯಲು ಹೋದ ರವಿಯ ಮೂಲಕ ತಮ್ಮಣ್ಣ ಬೀಗಾರರು ಬರೀ ಉಪ್ಪಿನಕಾಯಿಯ ಬಗ್ಗೆಯಷ್ಟೇ ಹೇಳುವುದಿಲ್ಲ. ಅದರ ಸುತ್ತಮುತ್ತಲಿನ ಹತ್ತಾರು ವಿಷಯಗಳನ್ನೂ ನಮಗೆ ತಿಳಿಸಿಕೊಡುತ್ತಾರೆ. ಮಲೆನಾಡಿನ ಅಡಿಕೆ ತೋಟದ ಬಗ್ಗೆ, ಅಡಿಕೆ ಬಿದ್ದದ್ದನ್ನು ಬೆಳಿಗ್ಗೆ ಶಾಲೆಗೆ ಹೋಗುವ ಮೊದಲು ಮಕ್ಕಳು ತೆಗೆದುಕೊಂಡು ಬರುವ ಬಗ್ಗೆ ಹೇಳುತ್ತಲೇ ಈ ಅಡಿಕೆ ತೋಟದವರ ಕಷ್ಟಗಳ ಬಗ್ಗೆಯೂ ತಿಳಿಸುತ್ತಾರೆ.

ಹೊಳೆದಂಡೆಯಲ್ಲಿರುವ ಮಾವಿನ ಮರ ಹತ್ತಿದವನು ಅಲ್ಲಿರುವ ಕೆಂಪಿರುವೆಗಳ ಬಗ್ಗೆಯೂ ಹೇಳುತ್ತಾರೆ. ಚಗಳೆ ಎನ್ನುವ ಈ ಇರುವೆಯಿಂದ ಕಚ್ಚಿಸಿಕೊಳ್ಳುವ ಶಿಕ್ಷೆಯನ್ನು ನಾನೂ ಬೇಕಾದಷ್ಟು ಸಲ ಮರ ಹತ್ತಿದಾಗಲೆಲ್ಲ ಅನುಭವಿಸಿದ್ದೇನೆ. ಕೈ ಒದರಲು ಹೋಗಿ ಮರದಿಂದ ಜಾರಿಯೂ ಬಿದ್ದಿದ್ದೇನೆ. ಬಾಯಿಯೊಳಗೆ ಹೋಗಿ ಹುಳಿ ಹುಳಿಯಾಗಿ ಅದನ್ನು ಉಗುಳುವ ಮುನ್ನವೇ ನಾಲಿಗೆಗೆ ಕಚ್ಚಿ ಬೊಬ್ಬೆ ಹೊಡೆದೂ ಬಿಟ್ಟಿದ್ದೇನೆ. ಇಲ್ಲಿ ತಮ್ಮಣ್ಣ ಬೀಗಾರರು ಚಗಳಿ ಏಕೆ ಹುಳಿಹುಳಿ ಎಂಬುದನ್ನು ತಿಳಿಸಿಕೊಡುತ್ತಾರೆ.

ಮಕ್ಕಳ ಕವಿ ಅಥವಾ ಕಥೆಗಾರರಾಗುವುದು ಅಷ್ಟೊಂದು ಸುಲಭವಲ್ಲ. ನನ್ನ ಮಗನಿಗೆ ಪ್ರತಿದಿನ ರಾತ್ರಿ ಮಲಗುವಾಗಲೂ ಒಂದು ಕಥೆ ಹೇಳಲೇಬೇಕು. ಆ ಕಥೆಯ ಮೇಲೆ ಹತ್ತಾರು ಪ್ರಶ್ನೆಗಳು. ಒಂದು ಪ್ರಶ್ನೆಗೆ ಉತ್ತರಿಸುವುದರೊಳಗೆ ಅದಕ್ಕೆ ನೂರಾರು ಉಪಪ್ರಶ್ನೆಗಳು. ಹೀಗೇ ಆತನ ಸಾವಿರಾರು ಪ್ರಶ್ನೆಗಳಿಗೆ ಉತ್ತರಿಸುವಷ್ಟರಲ್ಲಿ ಆತ ನಿದ್ರೆಗೆ ಜಾರಿರುತ್ತಾನೆ.

ಯಾವುದಾದರೂ ಕಥೆ ಹೇಳಿ ಎರಡು ಮೂರು ತಿಂಗಳಾದ ಮೇಲೆ ಮತ್ತೆ ಹೇಳಿದರೆ ಅದರ ಒಂದೇ ಒಂದು ಸಾಲು ಬದಲಾದರೂ “ಅಮ್ಮಾ ಆ ದಿನ ನೀನು ಈ ಕಥೆಯನ್ನು ಬೇರೆ ತರಹ ಹೇಳಿದ್ದೆ…” ಎಂದು ಬಿಡುತ್ತಾನೆ. ಹೀಗಾಗಿ ಮಕ್ಕಳಿಗೆ ಕಥೆ ಹೇಳುವುದೆಂದರೆ ಅದೆಷ್ಟು ಕಷ್ಟದ ಕೆಲಸ ಎನ್ನುವುದು ನನಗೆ ಗೊತ್ತಿದೆ. ಹಾಗಿರುವಾಗ ತಮ್ಮಣ್ಣ ಬೀಗಾರರು ಮಕ್ಕಳಿಗಾಗಿ ಕವನ ಸಂಕಲನ ತರುವುದು, ಕಥಾ ಸಂಕಲವಷ್ಟೇ ಅಲ್ಲ, ಇತ್ತೀಚೆಗೆ ಕಾದಂಬರಿಯನ್ನೂ ತರುವ ಸಾಹಸ ಮಾಡಿದ್ದಾರೆ.

ಮಕ್ಕಳ ಮನಸ್ಸಿಗೆ ಹತ್ತಿರವಾಗುವ ಹಾಗೆ ಬರೆಯಬೇಕೆಂದರೆ ನಾವು ಮಗುವಿನ ಮನಸ್ಸನ್ನು ಹೊಂದಬೇಕು. ಅಂತಹ ಮುಗ್ಧ ನಗು ತಮ್ಮಣ್ಣ ಬೀಗಾರರ ಮುಖದಲ್ಲಿದೆ. ಅವರ ಮನಸ್ಸಿನಲ್ಲಿ ಮಗುವಿನ ಕುತೂಹಲವಿದೆ. ಹೀಗಾಗಿಯೇ ಇಂತಹ ಸಹಜ ಕುತೂಹಲದ ಕಥೆಗಳು ಮೂಡಿ ಬರುತ್ತವೆ.

“ನೀವು ಏನಾದರೂ ಮಾಡಿಕೊಳ್ಳಿ. ನಮ್ಮನ್ನು ಊರಿಗೆ ಕಳಿಸಿ” ಪರೀಕ್ಷೆ ಮುಗಿದದ್ದೇ ತಡ. ಮಕ್ಕಳಿಬ್ಬರೂ ಅಜ್ಜ ಅಜ್ಜಿಯರ ಬಳಿ ಹೋಗಲು ಹಠ ಹಿಡಿದಿದ್ದರು. ನನ್ನ ಎಸ್ ಎಸ್ ಎಲ್ ಸಿ ಯ ಪೇಪರ್ ವಾಲ್ಯುಯೇಷನ್ ನಿಮಿತ್ತ ಊರಿಗೆ ಹೋಗಲು ತಡವಾಗುತ್ತದೆ ಎಂದಿದ್ದಕ್ಕೆ ಮಕ್ಕಳು ಹೀಗೆ ಹೇಳಿ ಹೊರಟುಬಿಟ್ಟಿದ್ದರು. ಶಾಲೆಗೆ ಎರಡು ದಿನ ರಜೆ ಇದ್ದರೂ ಸಾಕು. “ಊರಿಗೆ ಹೋಗೋಣ” ಎಂಬುದು ಅವರು ಯಾವಾಗಲೂ ಮಾಡುವ ಹಠ. ಮೊಮ್ಮಕ್ಕಳಿಗೆ ಯಾವಾಗಲೂ ಅಜ್ಜ ಅಜ್ಜಿಯರೆಂದರೆ ತುಂಬಾ ಪ್ರೀತಿ.

ಅಜ್ಜ ಅಜ್ಜಿಯರಿಗೂ ಅಷ್ಟೇ. ಮೊಮ್ಮಕ್ಕಳೆಂದರೆ ಮಕ್ಕಳಿಗಿಂತಲೂ ಹೆಚ್ಚು ಪ್ರೀತಿ. ದುಡಿಯುವ ಧಾವಂತದಲ್ಲಿ ತಾವು ಮಕ್ಕಳಿಗೆ ಕೊಡಲಾಗದ ಪ್ರೀತಿ, ವಾತ್ಸಲ್ಯವನ್ನು ಮೊಮ್ಮಕ್ಕಳಿಗೆ ಧಾರಾಳವಾಗಿ ನೀಡುತ್ತಾರೆ. ಅಜ್ಜ ಸಂಕಲನದ ಮೊದಲ ಕಥೆ. ಮೊಮ್ಮಕ್ಕಳ ಮತ್ತು ಅಜ್ಜನ ಪ್ರೀತಿಯನ್ನು ಈ ಕಥೆ ಹೇಳುತ್ತದೆ. ಅಜ್ಜನ ಜೊತೆ ಮಾತನಾಡಿದರೆ ಟೈಂ ವೇಸ್ಟ್ ಎಂದುಕೊಳ್ಳುವ ಅಪ್ಪ ಇಲ್ಲಿ ಖಳನಾಯಕನ ಹಾಗೆ ಕಾಣುತ್ತಾನೆ.

ಈ ಅಜ್ಜನ ವಿಷಯ ಬಂದಾಗ ನನಗೆ ಈಗಲೂ ಒಂದು ಗಿಲ್ಟಿ ಫೀಲಿಂಗ್ ಕಾಡುತ್ತಲೇ ಇರುತ್ತದೆ. ನನ್ನ ಅಪ್ಪನ ಚಿಕ್ಕಪ್ಪನಿಗೆ ನಾನೆಂದರೆ ಅತಿಯಾದ ಪ್ರೀತಿ. ಸ್ವಂತ ಅಜ್ಜ- ಅಜ್ಜಿಯರ ಪ್ರೀತಿ ಕಾಣದ ನನಗೆ ಅಪ್ಪನ ಚಿಕ್ಕಪ್ಪನೇ ಎಲ್ಲ.

ನನ್ನ ಚಿಕ್ಕಪ್ಪನ ಮನೆಯಲ್ಲೇ ಇರುತ್ತಿದ್ದ ಸಿಣ್ಣಪ್ಪ ಎಂದು ನಾವೆಲ್ಲ ಕರೆಯುತ್ತಿದ್ದ ಈ ಅಜ್ಜ ಸ್ವಾತಂತ್ರ್ಯ ಬಂದ ಹೊಸತರಲ್ಲಿ ವಿನೋಭಾ ಭಾವೆಯವರು ಪ್ರಾರಂಭಿಸಿದ್ದ ಸರ್ವೋದಯದ ನಿಷ್ಟಾವಂತ ಕಾರ್ಯಕರ್ತರಾಗಿದ್ದರು. ತಮ್ಮ ಆಸ್ತಿಯನ್ನೂ ಅದಕ್ಕಾಗಿ ಮೀಸಲಿಟ್ಟು ಕೆಲವೊಂದು ಆಸ್ತಿಯನ್ನು ಕಳೆದುಕೊಂಡಿದ್ದರೆಂಬುದು ಹಿರಿಯರ ಗುಸುಗುಸು ಮಾತಿನಿಂದ ಅಷ್ಟಿಷ್ಟು ಕಿವಿಗೆ ಬಿದ್ದಿದೆಯಾದರೂ ನಾನು ಅದರ ಬಗ್ಗೆ ನಿರ್ದಿಷ್ಟವಾಗಿ ಹೇಳಲಾರೆ.

ಆದರೆ ವಯಸ್ಸಾದ ಮೇಲೆ ಕೆಲವೊಮ್ಮೆ ಊರ ಕಟ್ಟೆಯಲ್ಲಿ ಕುಳಿತು ಇಸ್ಪೀಟು ಆಡುತ್ತಿದ್ದರು. ಅದರ ಮಧ್ಯೆ ಗುಟ್ಟಾಗಿ ನಾವೆಲ್ಲ ಮೊಮ್ಮಕ್ಕಳಿಗೂ ಇಸ್ಪೀಟ್ ಆಡುವುದನ್ನು ರೂಢಿಸಿದ್ದರು. ತಮಗೆ ಟೈಂ ಪಾಸ್ ಆಗುತ್ತೆ ಎಂಬ ಕಾರಣಕ್ಕೆ. ನಾವೇನಾದರೂ ಮಕ್ಕಳೆಲ್ಲ ರಜೆಯಲ್ಲಿ ಒಟ್ಟಾಗಿದ್ದಾಗ ಇಸ್ಪೀಟ್ ಆಡುವುದನ್ನು ಕಂಡರೆ ಅಪ್ಪ, ಚಿಕ್ಕಪ್ಪಂದಿರೆಲ್ಲ ನಮ್ಮನ್ನೆಲ್ಲ ಹಾಳು ಮಾಡಿದ್ದಕ್ಕಾಗಿ ಅಜ್ಜನ ಮೇಲೆ ಒಂದಿಷ್ಟು ಸಿಟ್ಟು ಮಾಡಿಕೊಳ್ಳುತ್ತಿದ್ದರು.

ಆದರೆ ನಿಜವಾದ ವಿಷಯ ಎಂದರೆ ನಮ್ಮೆಲ್ಲರ ಚೆಸ್ ಗುರು ಅವರೇ. ಅವರಿಂದಲೇ ಆಟ ಕಲಿತ ಅಣ್ಣ ಮುಂದೊಮ್ಮೆ ಇಂಜಿನಿಯರಿಂಗ್ ಕಲಿಯುವಾಗ ಯುನಿವರ್ಸಿಟಿ ಬ್ಲ್ಯೂ ಆದಾಗ, ನ್ಯಾಶನಲ್ ಲೇವಲ್ ಆಟಗಾರನಾದಾಗ ಎಲ್ಲರಿಗಿಂತ ಹೆಚ್ಚು ಹೆಮ್ಮೆ ಪಟ್ಟಿದ್ದು ಈ ಸಿಣ್ಣಪ್ಪನೇ.

ಇಂತಹ ಪ್ರೀತಿಯ ಅಜ್ಜನಿಗೆ ಕೊನೆ ಕೊನೆಗೆ ಓಡಾಡುವ ಶಕ್ತಿ ಇರಲಿಲ್ಲ. ಒಮ್ಮೆಯಂತೂ ನಡೆಯಲಾಗದಿದ್ದರೂ ಚಿಕ್ಕಪ್ಪನ ಮನೆಯಿಂದ ಹೇಗೋ ನಡೆದುಕೊಂಡು ಹೇಗೋ ನಮ್ಮ ಮನೆಗೆ ಬಂದು ಬಿಟ್ಟಿದ್ದರು. ನಾನು ಕಂಗಾಲಾಗಿಬಿಟ್ಟಿದ್ದೆ. “ಕೈಯ್ಯಲ್ಲಾಗದಿದ್ದರೂ ಯಾಕೆ ಬಂದೆ? ಎಲ್ಲಾದರೂ ಬಿದ್ದು ಬಿಟ್ಟಿದ್ದರೆ…” ನನ್ನ ರೇಗುವಿಕೆಗೆ ಅವರು ಕಿವಿಗೊಡದೇ “ಭಾರತಿ ಮಗು ನೋಡೋಕೆ ದಿವಸಾ ಬರ್ತಿದ್ದೆ. ಈ ಈ ಅಜ್ಜನನ್ನು ನೋಡಲು ಮೂರು ದಿನ ಆದರೂ ಬರಲಿಲ್ಲ….” ಎನ್ನುತ್ತ ತಮ್ಮದೇ ತಕರಾರು ಹೇಳುತ್ತಿದ್ದರು.

ನನ್ನ ಚಿಕ್ಕಪ್ಪನ ಮಗಳು ಭಾರತಿಗೆ ಮಗಳು ಹುಟ್ಟಿದ್ದರಿಂದ ಆ ಮಗುವನ್ನು ನೋಡಲೆಂದು ದಿನವೂ ಚಿಕ್ಕಪ್ಪನ ಮನೆಗೆ ಹೋಗುತ್ತಿದ್ದ ನಾನು ಭಾರತಿಯನ್ನು ಅವಳ ಗಂಡನ ಮನೆಗೆ ಕಳಿಸಿದ ನಂತರ ಮೂರು ದಿನ ಆ ಕಡೆ ಹೋಗಿರಲಿಲ್ಲ. ಹೀಗಾಗಿಯೇ ನನ್ನನ್ನು ಹುಡುಕಿಕೊಂಡು ಅವರೇ ಬಂದು ಬಿಟ್ಟಿದ್ದರು.

“ಇದೊಂದು ದಿನ ಇಲ್ಲಿಯೇ ಉಳಿಯುತ್ತೇನೆ” ಎಂದು ಗೋಗರೆದವರನ್ನು ಔಷಧ ಇಲ್ಲ ಎಂಬ ಕಾರಣ ಹೇಳಿ ನಾನೇ ಬರುತ್ತೇನೆ ಎಂದು ಒಪ್ಪಿಸಿ ಕತ್ತಲಾಗುತ್ತಿದೆ ಎಂಬ ಗಡಿಬಿಡಿಯಲ್ಲಿ ಪುನಃ ಅವರನ್ನು ಕರೆದುಕೊಂಡು ಹೋಗಿ ಚಿಕ್ಕಪ್ಪನ ಮನೆಗೆ ಬಿಟ್ಟಿದ್ದೆ. ಅದಾದ ಕೆಲವೇ ದಿನಗಳಲ್ಲಿ ಸಿಣ್ಣಪ್ಪ ತೀರಿಕೊಂಡಿದ್ದರು. ನಮ್ಮ ಮನೆಯಲ್ಲಿ ನನ್ನ ಜೊತೆ ಇರಬೇಕು ಎಂಬ ಆಸೆಯನ್ನು ಕೊನೆಗೂ ನಾನು ಈಡೇರಿಸಲು ಆಗಲೇ ಇಲ್ಲ ಎಂಬ ಗಿಲ್ಟ ಈಗಲೂ ನನ್ನನ್ನು ಸುಡುತ್ತಿದೆ.

ಒಳ ದಾರಿಯಲ್ಲಿ ಹೋದರೆ ಹತ್ತೇ ಹೆಜ್ಜೆಗೆ ಸಿಗುತ್ತಿದ್ದ ಚಿಕ್ಕಪ್ಪನ ಮನೆಗೆ ಹೋಗಿ ಔಷಧ ತರಬಹುದಾಗಿದ್ದರೂ ಅಜ್ಜನ ಆಸೆಯನ್ನು ಅರ್ಥ ಮಾಡಿಕೊಳ್ಳದೇ ತರಾತುರಿಯಿಂದ ಕಳುಹಿಸಿದ ನನ್ನ ವರ್ತನೆ ನನ್ನನ್ನು ಈಗಲೂ ಸುಡುತ್ತಿದೆ. ವಯಸ್ಸಾದ ಅಜ್ಜ ಅಜ್ಜಿಯರಿಗೆ ಮೊಮ್ಮಕ್ಕಳ ಪ್ರೀತಿಯನ್ನು ಬಿಟ್ಟು ಇನ್ನೇನೂ ಬೇಕಿರುವುದಿಲ್ಲ ಎಂಬುದನ್ನು ಕಥೆಗಾರ ತುಂಬಾ ಚೆಂದವಾಗಿ ಹೇಳಿದ್ದಾರೆ.

ಅದಕ್ಕಿಂತ ಹೆಚ್ಚಾಗಿ ನಮ್ಮ ಶಿರಸಿಯ ಮನೆಗೆ ಬರುತ್ತಿದ್ದ ಸಿಣ್ಣಪ್ಪ ಯಾವಾಗಲೂ ಪೇಪರ್ ಪುಸ್ತಕ ಓದುತ್ತ ಇರುತ್ತಿದ್ದ ಸಿಣ್ಣಪ್ಪ ನನ್ನ ಓದುವ ಆಸಕ್ತಿಗೆ ಮೂಲ ಕಾರಣ. ಈ ಕಥೆಯಲ್ಲಿಯೂ ಅಜ್ಜ ಮೊಮ್ಮಗನ ಓದುವ ಚಟಕ್ಕೆ ಮೂಲ ಕಾರಣ. ಇಂತಹ ಓದಿನ ಪ್ರೀತಿ ಹುಟ್ಟಿಸುವ ಅಜ್ಜ ಅಜ್ಜಿ ಎಲ್ಲ ಮೊಮ್ಮಕ್ಕಳಿಗೂ ಸಿಗಲಿ.

‘ಪುಟ್ಟನ ಕೋಳಿ’ ಕಥೆಯಂತೂ ಮಕ್ಕಳ ಮನಸ್ಸನ್ನು ಎಳೆ ಎಳೆಯಾಗಿ ತೆರೆದಿಡುವಲ್ಲಿ ಯಶಸ್ವಿಯಾಗಿದೆ. ಕೋಳಿಯನ್ನು ಅತಿಯಾಗಿ ಪ್ರೀತಿಸುವ ಪುಟ್ಟನಿಗೆ ಶಾಲೆಗೆ ಹೋಗುವಾಗಲೂ ಕೋಳಿಗಳದ್ದೇ ಚಿಂತೆ. ಹದ್ದು ಬಂದು ಕೋಳಿಯನ್ನೂ ಅದರ ಆರು ಮರಿಗಳನ್ನು ಹೊತ್ತೊಯ್ದರೆ ಎಂಬ ಚಿಂತೆಯಲ್ಲಿ ಕೋಳಿಯನ್ನು ಮುಚ್ಚಿಟ್ಟೇ ಹೋಗುತ್ತಿದ್ದ.

ಮೊದಲು ಒಮ್ಮೆ ಅಪ್ಪ ಕೋಳಿಯನ್ನು ದೇವರಿಗೆ ಕೊಟ್ಟು ಬಿಟ್ಟಿದ್ದ. ಅದೂ ಪುಟ್ಟನಿಗೆ ಜ್ವರ ಬಂದಾಗ ಮಾಡಿಕೊಂಡ ಹರಕೆಗೆ ಎಂಬ ವಿಷಯ ಪುಟ್ಟುವಿಗೆ ತೀವ್ರ ನೋವನ್ನು ಕೊಟ್ಟಿತ್ತು. ಅದಾದ ನಂತರ ಹೇಂಟೆ ಮರಿ ಹಾಕಿತ್ತು. ಹೀಗಾಗಿ ಆ ನೋವನ್ನು ಮರೆತು ಹೆಂಟೆ ಮತ್ತು ಮರಿಯ ಆರೈಕೆಯಲ್ಲಿ ತೊಡಗಿದವನಿಗೆ ಒಂದು ದಿನ ಶಾಲೆಯಿಂದ ಬರುವಾಗ ದಪ್ಪನೆಯ ಬೀದಿ ನಾಯಿಯೊಂದು ಹೆಂಟೆಯನ್ನು ತಿಂದು ಬಿಟ್ಟಿತ್ತು.

ಕೋಳಿ ಮರಿಗಳ ಚಿಕ್ ಚಿಕ್ ಎಂಬ ಆರ್ತನಾದ ಪುಟ್ಟುವಿನ ಕಿವಿ ತುಂಬಿತ್ತು ಎಂದು ಕಥೆಗಾರ ಕಥೆ ಮುಗಿಸಿದರೂ ಪುಟ್ಟುವಿನ ಮನಸ್ಸಿಗಾದ ನೋವು, ಪೀಮರಿಗಳ ಚಿಕ್ ಚಿಕ್ ಆರ್ತನಾದ ಬಹಳ ಹೊತ್ತಿನವರೆಗೆ ನಮ್ಮನು ಕಾಡಿಸದೇ ಬಿಡದು. ಇದು ಕೇವಲ ಹೆಂಟೆ, ಹುಂಜ, ಪೀಮರಿಗಳ ಕಥೆಯಾಗಿ ಮಾತ್ರ ನಮ್ಮನ್ನು ಕಾಡದೇ ಇಡೀ ಸಮಾಜದಲ್ಲಿ ನಡೆಯುವ ಶೋಷಣೆಯನ್ನೇ ಪ್ರತಿನಿಧಿಸುತ್ತಿದೆಯೇನೋ ಎಂಬಂತೆ ಭಾಸವಾಗುತ್ತದೆ.

ಕೆಲವು ದಿನಗಳ ಹಿಂದೆ ಕಾರವಾರದ ಬಸ್ ಸ್ಟಾಂಡ್ ನಲ್ಲಿ ಬಸ್ ಗೆ ಕಾಯುತ್ತಿರುವಾಗ ಒಬ್ಬ ಹುಡುಗಿ ಬಂದು ಕೈ ಹಿಡಿದು ಟೀಚರ್ ಎನ್ನುತ್ತ ಸಂಭ್ರಮಿಸಿದ್ದಳು. ನನಗೆ ಅವಳನ್ನು ನೋಡಿ ಎಷ್ಟು ಖುಷಿ ಆಗಿತ್ತೆಂದರೆ ಒಂದು ಕ್ಷಣ ಆರು ವರ್ಷದ ಹಿಂದಿನ ಆಗ ತಾನೆ ಎಂಟನೆ ತರಗತಿಗೆ ಬಂದು ದೊಡ್ಡ ಕಣ್ಣಿನ ಮುದ್ದು ಹುಡುಗಿ ನೆನಪಾಗಿದ್ದಳು.

“ಸಾಕು ಸುಮ್ನಿರಿ. ಯಾಕೆ ಆ ಹುಡುಗಿನ ಪರ ವಹಿಸಿಕೊಂಡು ಮಾತನಾಡ್ತೀರಿ? ಅವಳು ಶತ ಆಲಸಿ. ಅದಕ್ಕೇ ಶಾಲೆಗೆ ಬರೋದಿಲ್ಲ” ಒಬ್ಬ ಹುಡುಗಿಯ ಬಗ್ಗೆ ಪದೇ ಪದೇ ಕಂಪ್ಲೇಂಟ್ ಬರುತ್ತಿದ್ದರೂ ಸಪೋರ್ಟ ಮಾಡಿಕೊಳ್ಳುತ್ತಿದ್ದ ನನ್ನನ್ನು ಉಳಿದ ಶಿಕ್ಷಕರು ವಿರೋಧಿಸುತ್ತಿದ್ದರು.

ನನಗೋ ಅವಳು ಮತ್ತೆ ಮತ್ತೆ ಶಾಲೆ ತಪ್ಪಿಸುವುದಕ್ಕೆ ನಿಜವಾದ ಕಾರಣ ಬೇಕಿತ್ತು. ಚಂದದ ಹುಡುಗಿ ಆಕೆ. ಅದರೆ ಓದು ಮಾತ್ರ ಬೇಡ. ಅವಳ ಕ್ಲಾಸಿನ ಕ್ಲಾಸ್ ಟೀಚರ್ ನಾನು. ಅವಳ ಬಗ್ಗೆ ತಿಳಿದು ಕೊಳ್ಳಬೇಕು ಎನ್ನುತ್ತಲೇ ಅರ್ಧ ವರ್ಷ ಮುಗಿದು ಹೋಗಿತ್ತು. ಅಕ್ಟೋಬರ್ ರಜೆಯ ಕೊನೆಯಲ್ಲಿಯೇ ದೀಪಾವಳಿ ಹಬ್ಬವೂ ಬಂದಿತ್ತು. ರಜೆ, ಹಬ್ಬ ಎಲ್ಲ ಮುಗಿಸಿ ಬಂದರೆ ಹುಡುಗಿಯರೆಲ್ಲ ಸಪ್ಪಗಿದ್ದರು.ರಜೆ ಮುಗಿದ ನಂತರ ಶಾಲೆಗೆ ಬರೋದಕ್ಕೆ ಬೇಸರವಾಗಿರಬಹುದೆಂದು ಕೊಳ್ಳುತ್ತ ತಮಾಷೆ ಮಾಡಿದರೂ ಯಾರೂ ಸ್ಪಂದಿಸುತ್ತಿಲ್ಲ.

ಕಾರಣ ಕೇಳಿದಾಗ “ಸರ್ವಮಂಗಳಾ ತಂದೆ ತೀರಿಕೊಂಡರು’ ಎಂದಿದ್ದರು. ಅಜಾನುಬಾಹುವಾಗಿದ್ದ ಅವರು ಆಗಾಗ ಮಗಳ ಬಗ್ಗೆ ಕೇಳಿಕೊಂಡು ಶಾಲೆಗೆ ಬರುತ್ತಿದ್ದರು. “ಸ್ವಲ್ಪ ದಡ್ಡಿ. ಆದರೂ ಸ್ವಲ್ಪ ಗಮನ ಕೊಡಿ ಟೀಚರ್” ಪ್ರತಿ ಸಲವೂ ಹೋಗುವ ಮುನ್ನ ಮತ್ತೆ ಮತ್ತೆ ಅವರು ಹೇಳುವ ಮಾತು ನೆನಪಾಯಿತು. ಯಾಕೋ ಬೇಸರವೆನ್ನಿಸಿ “ಸಂಜೆ ಸರ್ವಮಂಗಳಾಳನ್ನೂ ಅವಳ ಅಮ್ಮನನ್ನೂ ಮಾತನಾಡಿಸಿಕೊಂಡು ಬರೋಣ” ಅವಳ ಪಕ್ಕದ ಮನೆಯವಳೊಂದಿಗೆ ಹೇಳಿದೆ.

“ಅವಳಿಗೆ ಅಮ್ಮ ಇಲ್ಲ ಟೀಚರ್, ಚಿಕ್ಕಮ್ಮ ಇದ್ದಾಳೆ..” ಅವಳ ಗೆಳತಿ ಹೇಳಿದಳು. ಮನಸ್ಸಿನ ತುಂಬಾ ನೂರಾರು ಗುಂಗಿ ಹುಳುಗಳು ಗುಯ್ಯ್ ಗುಟ್ಟಲಾರಂಭಿಸಿದವು. “ ಓಹೋ… ಮಲತಾಯಿಯ ಕಾಟಕ್ಕೇ ಈಕೆ ಹೀಗಾಗಿದ್ದಾಳೆ. ಅದಕ್ಕೇ ಶಾಲೆಗೂ ಸರಿಯಾಗಿ ಬರ್ತಿಲ್ಲ. ಈಗ ಅಪ್ಪನೂ ತೀರಿಕೊಂಡಿದ್ದಾರೆ. ಎಷ್ಟು ಕಷ್ಟ ಅನುಭವಿಸಬೇಕಾಗುತ್ತದೋ…” ನನಗೆ ಕಸಿವಿಸಿ. ಏನಾದರಾಗಲಿ ಎಂದು ಸಂಜೆ ಅವಳ ಮನೆಗೆ ಹೊರಟೆ.

ಮೂಲೆಯಲ್ಲಿ ಕುಳಿತವಳು ನನ್ನನ್ನು ಕಂಡವಳೇ ಓಡಿ ಬಂದು ತೆಕ್ಕೆಬಿದ್ದು ಅಳತೊಡಗಿದಳು. ಅವಳು ಕುಳಿತಿದ್ದ ರೀತಿ, ನನ್ನನ್ನು ಅಪ್ಪಿಕೊಂಡು ಅತ್ತ ರೀತಿಗೆ ನನಗೆ ಇವಳು ಮಲತಾಯಿ ಕಾಟಕ್ಕೆ ಹೀಗಾಗಿದ್ದಾಳೆ ಎನ್ನೋದು ಕನ್ಫರ್ಮ ಆಗಿ ಹೋಗಿತ್ತು. ಹೊರಗೆ ಅಂಗಳದಲ್ಲಿ ಎರಡನೆಯ ತರಗತಿ ಓದುತ್ತಿದ್ದ ಆಕೆಯ ತಮ್ಮ ಇದಾವುದರ ಪರಿವೆಯೇ ಇಲ್ಲದೇ ಆಟ ಆಡಿಕೊಂಡಿದ್ದ.

ಬಹುಶಃ ಮಲತಾಯಿಯ ಮಗನಿರಬಹುದು ನಾನು ಆಂದಾಜು ಮಾಡಿದೆ. ಅವಳ ಅಳುವ ದನಿಗೆ ಮಲತಾಯಿ ಹೊರಗೆ ಬಂದಳು. ಅವಳ ಜೊತೆ ವಯಸ್ಸಾದ ಒಬ್ಬ ಹೆಂಗಸು. ಬಹುಶಃ ಆಕೆಯ ತಾಯಿ ಇರಬಹುದು ಎಂದುಕೊಂಡೆ. ಆಕೆಯನ್ನು ಕಂಡವಳೇ ಈ ಹುಡುಗಿ ನೆಲದ ಮೇಲೆ ಕುಳಿತವಳ ಮಡಿಲಲ್ಲಿ ಹುದುಗಿ ಮತ್ತೆ ಅಳತೊಡಗಿದಳು.

“ನೋಡಿ ಟೀಚರ್ ಇವಳು. ಎಷ್ಟು ಸಮಾಧಾನ ಮಾಡಿದರೂ ಅಳೋದು ನಿಲ್ಲಸ್ತಿಲ್ಲ. ನೀವಾದ್ರೂ ಹೇಳಿ….” ಮಲತಾಯಿ ಇವಳ ತಲೆ ಸವರುತ್ತ ಸಮಾಧಾನ ಮಾಡತೊಡಗಿದಳು. ನನ್ನ ತಪ್ಪು ಕಲ್ಪನೆಯಲ್ಲಿ ಒಂದು ಟಪ್ ಎಂದು ಕಳಚಿ ಬಿತ್ತು. ಮಾತಿನ ಮಧ್ಯೆ ಆ ವಯಸ್ಸಾದ ಹೆಂಗಸು ಸರ್ವಮಂಗಳಾಳ ನಿಜವಾದ ಅಜ್ಜಿ ಎಂಬುದೂ, ಮಲತಾಯಿ ಈ ಇಬ್ಬರು ಮಕ್ಕಳನ್ನು ನೋಡಿಕೊಳ್ಳುವುದಕ್ಕೆಂದೇ ತಾನು ತಾಯಿ ಆಗಲಿಲ್ಲ ಎಂಬ ವಿಷಯವೂ ತಿಳಿಯಿತು.

“ಇವಳು ನನ್ನ ಮಗಳಿಗಿಂತ ಚೆನ್ನಾಗಿ ಮಕ್ಕಳನ್ನು ನೋಡ್ಕೋತಿದ್ದಾಳೆ” ಆ ವಯಸ್ಸಾದ ಹಿರಿಯರು ಆ ಚಿಕ್ಕಮ್ಮನಿಗೆ ಸರ್ಟಿಫಿಕೇಟ್ ಕೊಟ್ಟ ಮೇಲೆ ನನ್ನ ವಿಪರೀತದ ಕಲ್ಪನೆಗಳಿಗೆ ನಾಚಿಕೆಯೂ ಆಯಿತು.

ಇಷ್ಟೆಲ್ಲ ಆದ ಮೇಲೆ ಆ ಹುಡುಗಿಯನ್ನು ಮತ್ತೆ ಶಾಲೆಗೆ ಕರೆತರಲು ನಾನು ಬಹಳಷ್ಟು ಸಲ ಅವಳ ಮನೆಗೆ ಹೋಗಬೇಕಾಯ್ತು. ಅಂತೂ ಹತ್ತನೆ ಕ್ಲಾಸ್ ಮುಗಿಸಿದ ಆ ಹುಡುಗಿಯನ್ನೇನಾದರೂ ನಾನು ಆಲಸಿ ಎಂದು ಸುಮ್ಮನೇ ಬಿಟ್ಟು ಬಿಟ್ಟಿದ್ದರೆ ಎಂದು ಯೋಚಿಸಿದರೆ ಮನಸ್ಸು ಸಣ್ಣಗೆ ನಡುಗುತ್ತದೆ.

ಈ ಸಂಕಲನದ ‘ಪೇರು’ ಕಥೆಯಲ್ಲಿ ಪೇರು ಎಂಬ ಬಾಲಕನ ಕಥೆ ಕೂಡ ಅಷ್ಟೇ. ಕುರುಡನಾದ ಅಪ್ಪ, ಬಡತನದ ಜೀವನದಲ್ಲಿ ಎಲ್ಲವನ್ನೂ ನಿಭಾಯಿಸಬೇಕಾದ ಪೇರುವಿನ ಒತ್ತಡವನ್ನೂ ನಾಟಕ ಎನ್ನುವ ಶಿಕ್ಷಕರು, ಕೊನೆಗೆ ಪೇರುವಿನ ಕಣ್ಣೂ ಕಾಣಿಸದಾದಂತೆ ಆದಾಗ ಆತನ ಸಹಾಯಕ್ಕೆ ನಿಂತ ಗಣಿತ ಶಿಕ್ಷಕರು ಎಲ್ಲವೂ ನನಗೆ ಮತ್ತೆ ಮತ್ತೆ ಸರ್ವಮಂಗಳಾಳನ್ನು ನೆನಪಿಸಿ ಕೊಳ್ಳುವಂತೆ ಮಾಡಿತು.

ನಮ್ಮ ಮೂಲ ಮನೆಯ ಸಮೀಪ ನನ್ನ ಅಡ್ಡ ಹೆಸರಿಗೆ ಕಾರಣವಾದ ಒಂದು ದೊಡ್ಡ ಕೆರೆ ಇದೆ. ಹೈಸ್ಕೂಲಿಗೆ ಹೋಗುವ ಹೊತ್ತಿಗೆ ಆ ಕೆರೆಯಲ್ಲಿ ಹೂಳು ತುಂಬಿ ಹೋಗಿತ್ತು. ಆ ಕೆರೆಗೆ ನಮ್ಮ ಮಾವಿನ ಮರವೊಂದು ಮುರಿದು ಬಿದ್ದು ಅದು ಹಾಗೆಯೇ ಹಣ್ಣು ಕೊಡುತ್ತಿತ್ತು.

ಆ ವರ್ಷ ಎಪ್ರಿಲ್ ತಿಂಗಳಲ್ಲೇ ಅಕಾಲಿಕ ಮಳೆಯಾಗಿ ಕೆರೆ ತುಂಬಿಕೊಂಡಿತ್ತು. ಮೇ ತಿಂಗಳ ಹೊತ್ತಿಗೆ ಮಾವಿನ ಮರದಲ್ಲಿ ಕಾಯಿ ಕೆಂಬಣ್ಣಕ್ಕೆ ತಿರುಗಿ ಆಸೆ ಹುಟ್ಟಿಸುವಂತಾಗುತ್ತಿತ್ತು. ಆ ದಿನ ಮನೆಯಲ್ಲಿ ಚಿಕ್ಕಪ್ಪ ಚಿಕ್ಕಮ್ಮ ಇರಲಿಲ್ಲ. ಅಂದರೆ ನಮ್ಮ ಕಿತಾಪತಿಗೆ ಪೂರ್ತಿ ಸಮಯ ಎಂದರ್ಥ. ಹಣ್ಣು ಕೊಯ್ಯಲೆಂದು ಭಾರತಿ ಆ ಮರದ ಕೆರೆಗೆ ಚಾಚಿಕೊಂಡಿರುವ ಕೊಂಬೆ ಹತ್ತಿದ್ದಳು.

ಒಂದು ಅರೆಗೆಂಪು ಹಣ್ಣನ್ನು ನನಗೆ ಕೊಟ್ಟು ಮತ್ತೊಂದು ಹಣ್ಣನ್ನು ತೆಗೆಯುವ ಸರ್ಕಸ್ ನಲ್ಲಿರುವಾಗ ಅವಳ ಕೈ ಜಾರಿತ್ತು. ಇನ್ನೇನು ಕೆರೆಗೆ ಬೀಳುತ್ತಾಳೆಂದು ನಾನು ಬೊಬ್ಬಿರುವ ಹೊತ್ತಿಗೇ ಆಕೆ ಟೊಂಗೆ ಹಿಡಿದುಕೊಂಡಿದ್ದಳು. ಅಂತೂ ಇಂತೂ ಪ್ರಯಾಸಪಟ್ಟು ನಾನೂ ಕೊಂಬೆ ಮೇಲೆ ಮಲಗಿ ಅವಳನ್ನು ಎಳೆದುಕೊಂಡಾಗಿತ್ತು.

ಆದರೂ ಆಕೆ ತನ್ನ ಕೈಯ್ಯಲ್ಲಿದ್ದ ಮಾವಿನ ನಸುಗೆಂಪು ಹಣ್ಣನ್ನು ಬಿಟ್ಟಿರಲಿಲ್ಲ. ಮೈ ಕೈ ತರಚಿದ ಗಾಯದೊಂದಿಗೇ ನಾವು ಹುಳಿ ಹುಳಿಯ ಆ ಹಣ್ಣನ್ನು ಚಪ್ಪರಿಸಿದ್ದೆವು. ಆದರೆ ಹಿರಿಯರಿಂದ ತರಚಿದ ಗಾಯವನ್ನು ಮುಚ್ಚಿಡಲು ನಾವು ಮಾಡಿದ ಪ್ರಯತ್ನ ನೆನಪಿಸಿಕೊಂಡು ಈಗಲೂ ನಗುತ್ತಿರುತ್ತೇವೆ. ‘ನಾನು ಮತ್ತು ಪುಟ್ಟಿ’ ಕಥೆಯನ್ನೂ ‘ಮೊನ್ನಣ್ಣ ಮತ್ತು ನಾನು’ ಎಂಬ ಕಥೆಯನ್ನೂ ಓದಿದಾಗ ನನಗೆ ನಾನು ಮತ್ತು ಭಾರತಿ ಎಂದು ನಮ್ಮ ಕಥೆಯನ್ನೂ ಬರೆಯಬಹುದು ಎನ್ನಿಸಿದ್ದು ಸುಳ್ಳಲ್ಲ.

ತಮ್ಮಣ್ಣ ಬೀಗಾರರು ನೀರಿನ ಸಮಸ್ಯೆಯ ಕುರಿತು, ನಮ್ಮದಲ್ಲದ ತಪ್ಪಿಗೆ ನಾವು ಶಿಕ್ಷೆ ಅನುಭವಿಸುವ ಕುರಿತು, ಬಾಲಕಾರ್ಮಿಕ ಪದ್ದತಿಯ ಕ್ರೂರತೆಯ ಕುರಿತು, ಹಾವು, ನವಿಲು ಮುಂತಾದ ಪ್ರಾಣಿಗಳ ಕುರಿತು, ಶಾಲೆ ತಪ್ಪಿಸುವ ಹುಡುಗನನ್ನು ಹೇಗೆ ಪುನಃ ಶಾಲೆಗೆ ಸೇರಿಸಬೇಕು ಎಂಬುದರ ಕುರಿತು ಚಂದದ ಭಾಷೆಯಲ್ಲಿ ಕತೆಯಾಗಿಸಿದ್ದಾರೆ.

‘ಸೆಲ್ಫಿ’ ಎಂಬ ಕತೆಯಂತೂ ಮಕ್ಕಳು ಮಾಡುವ ಸಾಹಸಗಳು ಒಮ್ಮೊಮ್ಮೆ ಎಂತಹ ಅಪಾಯಕ್ಕೆ ನೂಕಿ ಬಿಡಬಹುದು ಎಂಬುದನ್ನು ಸವಿಸ್ತಾರವಾಗಿ ಹೇಳುತ್ತದೆ. ಶಿರಸಿ ಹಾಗು ಸುತ್ತಮುತ್ತ ಹತ್ತಾರು ಜಲಪಾತಗಳಿಗೆ. ಕೆಲವು ಪ್ರಸಿದ್ದ ಜಲಪಾತಗಳಾಗಿದ್ದರೆ ಕೆಲವೊಂದು ಸ್ಥಳೀಯರಿಗಷ್ಟೇ ಗೊತ್ತಿರುವ ಅಜ್ಞಾತ ಜಲಪಾತಗಳು.

ಕಾಲೇಜಿನಲ್ಲಿರುವಾಗ ನಾವೂ ಕೂಡ ಯಾರಿಗೂ ಹೇಳದೇ ಕೇಳದೇ ಎಂಟು ಹತ್ತು ಜನ ಇಂತಹ ಅಜ್ಞಾತ ಜಲಪಾತಗಳ ಜಾಡು ಹಿಡಿದು ಕಾಡು ಸುತ್ತುತ್ತಿದ್ದುದು, ಕೆಲವೊಮ್ಮೆ ಕಾಡಿನಲ್ಲಿ ದಾರಿ ತಪ್ಪಿ ಅಲೆದಾಡಿದ್ದು ಎಲ್ಲವನ್ನೂ ನೆನಪಿಸಿ ಇಡೀ ಸಂಕಲನ ಮತ್ತೆ ಮತ್ತೆ ಬಾಲ್ಯಕ್ಕೆ ಕಾಲೇಜು ದಿನಗಳಿಗೆ ಮರಳುವಂತೆ ಮಾಡಿತು.

ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ಈ ಪುಟ್ಟನ ಕೋಳಿಯನ್ನು ಮುದ್ದಾಂ ಆಗಿ ಓದಿ. ಮಕ್ಕಳ ಮನಸ್ಸು ಅರ್ಥವಾಗುತ್ತದೆ. ಮಾತು ಮಾತಿಗೂ ಮಕ್ಕಳ ತುಂಟಾಟಕ್ಕೆ ಬೈಯ್ದು ಹೀಯಾಳಿಸಿ ಹೊಡೆಯುವ ಬದಲು ಆ ಮಕ್ಕಳ ಮನಸ್ಸನ್ನು ಅರಿಯಲು ಸಹಕಾರಿಯಾಗುತ್ತದೆ.

ಮನೆಯಲ್ಲಿ ಮಕ್ಕಳಿಲ್ಲದಿದ್ದರೆ, ಮಕ್ಕಳು ಬೆಳೆದು ದೊಡ್ಡವರಾಗಿದ್ದರೂ ಮಕ್ಕಳ ಮುಗ್ಧತೆಯನ್ನು ರೂಢಿಸಿಕೊಳ್ಳಲಾದರೂ ಈ ಪುಸ್ತಕವನ್ನು ನೀವು ಓದಲೇ ಬೇಕು. ಇಲ್ಲವೆಂದರೆ ಪಕ್ಕದ ಮನೆಯಲ್ಲಿ ಆಟ ಆಡುತ್ತಿರುವ ಮಕ್ಕಳ ಕೇ…. ಕೇ… ನಮಗೆ ನಮ್ಮ ನೆಮ್ಮದಿಯನ್ನು ನಾಶಪಡಿಸುವ ಅಟ್ಟಹಾಸದಂತೆ ಕೇಳಿಸುತ್ತದೆ.

ಅಲ್ಲೆಲ್ಲೋ ಪುಟ್ಟ ಸ್ಥಳದಲ್ಲೇ ಗ್ರೌಂಡ್ ಮಾಡಿಕೊಂಡು ಬ್ಯಾಟು ಬೀಸುವ ಮಕ್ಕಳು ನಮ್ಮನ್ನು ಕೆರಳಿಸುವ ಅಸುರರಂತೆ ಭಾಸವಾಗುತ್ತಾರೆ. ಪ್ಲಾಟ್ ಗಳಲ್ಲಿ ಮೇಲಿನ ಅಂತಸ್ತಿನಲ್ಲಿ ವಾಸವಾಗಿರುವ ಮಕ್ಕಳ ದಡಬಡ ಓಡುವ ಸದ್ದು ನಮ್ಮ ಎದೆಯನ್ನೇ ಒದ್ದಂತೆ ನೋವಾಗುತ್ತದೆ.

ಹೀಗೆಲ್ಲ ನಾವು ರಕ್ಕಸರ ಪುನರಾವತಾರಗಳಂತೆ ವರ್ತಿಸದೇ ಮಕ್ಕಳ ಆಹ್ಲಾದತೆಯನ್ನು ನಮ್ಮಲ್ಲಿ ತುಂಬಿಕೊಳ್ಳಬೇಕೆಂದರೆ ನೀವು ಈ ಪುಸ್ತಕವನ್ನೊಮ್ಮೆ ಓದಲೇಬೇಕು. ಕೊನೆಯ ಪಕ್ಷ ಪ್ರತಿ ಕಥೆಯೂ ನೆನಪಿಸುವ ನಮ್ಮ ಬಾಲ್ಯದ ಹತ್ತಾರು ಸುಂದರ ನೆನಪುಗಳನ್ನು ಬೊಗಸೆಯಲ್ಲಿ ತುಂಬಿಟ್ಟುಕೊಂಡು ನಿರಾಳವಾಗುವುದಕ್ಕಾದರೂ ಒಮ್ಮೆ ಈ ಪುಸ್ತಕ ಓದಿ.

9 Responses

 1. ರಾಜು ಪಾಲನಕರ ಕಾರವಾರ says:

  ಶ್ರೀದೇವಿ ಮೇಡಂ ಅವಧಿಯಲ್ಲಿ ತಮ್ಮಣ್ಷ ಬೀಗಾರ ಅವರ ಪುಟ್ಟನ ಕೋಳಿ ಪುಸ್ತಕದ ಕುರಿತು ನಿಮ್ಮ ವಿಮರ್ಶೆ ತುಂಬಾ ಚೆನ್ನಾಗಿದೆ ಉ್ಪಪ್ಪಿನಕಾಯಿ ಕಥೆ ತುಂಬಾ ಸ್ವಾರಸ್ಯಕರವಾಗಿದೆ ನಿಮ್ಮ ವಿಮರ್ಶಗೆ ಅಭಿನಂದನೆಗಳು

 2. askumar says:

  super

 3. ಉಪ್ಪಿನ ಕಾಯಿ ಸಂಭ್ರಮ ಊರಿಗೆ ಕರಕ್ಕೊಂಡೋಯ್ತು
  ಮಕ್ಕಳ ಕಥೆಯ ಅಬ್ಬರ ಬಾಲ್ಯಕೆ ಎಳಕಂಡೋಯ್ತು

 4. Sreedhar says:

  sridevi Madam,

  analysis of book is excellent , tears found in my ears while reading servangala story definitely I will read this book

 5. ಸುಂದರವಾದ ರೀತಿಯಲ್ಲಿ ತಮ್ಮ ಬಾಲ್ಯವನ್ನೂ, ತಮ್ಮಣ್ಣ ಬೀಗಾರರ ಪುಟ್ಟಣ್ಣ ನ ಕೋಳಿಯನ್ನೂತಳಕು ಹಾಕಿದುದು ಉಪ್ಪಿನಕಾಯಿ ಜೊತೆಗೆ ಕೆನೆಮೊಸರನ್ನ ತಿಂದಷ್ಟೇ ರುಚಿ…

 6. nutana doshetty says:

  eshtu dodda canvas Sredevi..!!

  Nutana Doshetty

 7. ಉಪ್ಪಿನಕಾಯಿ ಕತೆ ತುಂಬಾ ಸ್ವಾರಸ್ಯಕರವಾಗಿ ಬಿಚ್ಚಿಟ್ಟಿದ್ದೀರಿ ತಮ್ಮಣ್ಣ ಸರ್ ಅವರ ಪುಸ್ತಕ ವಿಮರ್ಶೆ ಚೆನ್ನಾಗಿ ಮೂಡಿ ಬಂದಿದೆ. ಬಾಲ್ಯದ ಸವಿನೆನಪು ಮರುಕಳಿಸಿದವು
  ಅಭಿನಂದನೆಗಳು ಈರ್ವರಿಗೂ
  ಅವಧಿ ಪತ್ರಿಕೆಗೆ ಧನ್ಯವಾದಗಳು

 8. ತಮ್ಮಣ್ಣ ಬೀಗಾರ says:

  ಅವಧಿಯ ಮೂಲಕ ನನ್ನ “ಪುಟ್ಟನ ಕೋಳಿ” ಪರಿಚಯಿಸಿದ ಶ್ರೀದೇವಿ ಅವರಿಗೆ, ಸಂಪಾದಕ ಮೋಹನ್ ಅವರಿಗೆ ಹಾಗೂ ಓದುಗರಿಗೆ ಆತ್ಮೀಯ ಕೃತಜ್ಞತೆಗಳು

 9. ತಮ್ಮಣ್ಣ ಬೀಗಾರರ ” ಪುಟ್ಟನ ಕೋಳಿ ” ಶ್ರೀ ದೇವಿ ಮೇಡಮ್ ರಿಂದ ಬಲು ಅರ್ಥ ಬದ್ಧವಾಗಿ ವಿಮರ್ಶೆಗೊಳಪಟ್ಟಿದೆ.ತಮ್ಮಣ್ಣ ಬೀಗಾರರು ಪುಟ್ಟನ ಕೋಳಿಯ ಮೂಲಕ ಮಕ್ಕಳ ಮುಟ್ಟುವಂತೆ ಕಥೆಗಳನ್ನು ಬಿಂಬಿಸಿದ್ದಾರೆ.” ನಾನು ಮತ್ತು ಪುಟ್ಟಿ ” ,” ಮೊನ್ನಣ್ಣ ಮತ್ತು ನಾನು ” ಮತ್ತು ” ಸೆಲ್ಫೀ ” ಕಥೆಗಳ ಮೂಲ ವಿಮರ್ಶೆಯೊಂದಿಗೆ ಶ್ರೀ ದೇವಿಯವರು ಮಾವಿನಕಾಯಿ ಉಪ್ಪಿನಕಾಯಿ ಚಪ್ಪರಿಸುವ ತಮ್ಮ ನೆನಪನ್ನು ತಳಕು ಹಾಕಿ ಬಾಲ್ಯದಲ್ಲಿಗಿಡ ಏರಿ ಮಾವಿನಕಾಯಿ ಕೀಳುವ ಸಾಹಸ ಅವರ ಅಲ್ಲದೇ ಮಕ್ಕಳ ಬಾಲ್ಯವನ್ನು ಕಣ್ಣ ಮುಂದೆ ತರುತ್ತದೆ .ಚಿಕ್ಕಪ್ಪನ ತಂದೆ ಅಂದರೆ ಸಣ್ಣ ಅಜ್ಜ ” ಸಿಣ್ಣಪ್ಪ” ನೊಂದಿಗಿನ ಒಡನಾಟ ಅಜ್ಜ ಮೊಮ್ಮಕ್ಕಳ ಪ್ರೀತಿಯ ಬೆಸುಗೆಯನ್ನು ಮತ್ತಷ್ಟು ಗಟ್ಟಿ ಗೊಳಿಸಿದೆ.ಒಟ್ಟಿನಲ್ಲಿ ಶ್ರೀ ದೇವಿ ಅವರ ವಿಮರ್ಶೆ ತಮ್ಮಣ್ಣ ಬೀಗಾರರ ಪುಟ್ಟನ ಕೋಳಿಯ ಪ್ರತಿ ಸಾಲನ್ನು ಓದಿಸಿಕೊಂಡು ಹೋಗಲು ಪ್ರೇರೇಪಿಸುತ್ತಿದೆ.

Leave a Reply

%d bloggers like this: