ಮಧುಸೂದನ ನಾಯರ್ ಹೊಸ ಕವಿತೆಗಳು ಇಲ್ಲಿವೆ

ಕು ಸ ಮಧುಸೂದನ ನಾಯರ್ /  ರಂಗೇನಹಳ್ಳಿ

 

ಅಪ್ಪಚ್ಚನ ಅದೊಂದು ಮನೆಯೂ, ನನ್ನ ಸೋದರತ್ತೆಯೂ!

 

ಅದೊಂದು ಮನೆಯಿತ್ತು ನನ್ನದೂ

ನನ್ನ ಅಪ್ಪಚ್ಚನ ಕಾಲದ್ದು

ಅವನ ವಿರೋಧಿಸಿ ಮನೆ ಬಿಟ್ಟು ಬಂದ ಅಚ್ಚ ಮತ್ತೆ ಅದರೊಳಗೆ ಕಾಲಿಡದೆಲೆ ಸತ್ತು ಹೋಗಿ

ನನ್ನನ್ನೂ ಅಪರಿಚಿತ ಊರಲ್ಲಿ ಪರದೇಸಿಯಾಗಿಸಿದ ನಂತರವೂ

ಮೊಮ್ಮಗ ಬರುತ್ತಾನೆಂದು

ಸಾಯುವ ತನಕ ಕಾವಲು ಕಾಯುತ್ತಿದ್ದ ಮುದುಕ

ಅಷ್ಟು ವರುಷ  ಇಲ್ಲದ್ದು ಮೊನ್ನೆ ಕಾಲುಜಾರಿ ಮನೆಯ ಹಿಂದಿನ ಅದೇ ಹಳೆಯ ಬಾವಿಗೆ ಬಿದ್ದು ಸತ್ತು ಹೋದನಂತೆ!

ವಿಷಯ ಕಿವಿಗೆ ಬಿದ್ದು ಬೇಜಾರೆನಿಸಿದರೂ

ಕರೆದಾಗವನು ಹೋಗಿಬಿಡಬೇಕಿತ್ತು

ನನ್ನದೆನ್ನುವ ಅದೊಂದು

ಮನೆಯನ್ನುನನ್ನದಾಗಿಸಿಕೊಳ್ಳಲು,

ಅನ್ನುವುದಕಿಂತಲೂ ಕತ್ತರಿಸಿ ಹೋಗಿದ್ದ ಕರುಳು ಬಳ್ಳಿಗಳ ಮತ್ತೆ ಬೆಸೆದುಕೊಳ್ಳುವ ಸಲುವಾಗಿಯೆನ್ನಬಹುದೇನೊ!

 

ಕೊನೆಯ ಗಳಿಗೆಯವರೆಗು

ಕೈಲಿ ಹಿಡಿದ ಕೋಲಿಂದ ಮನೆಯಷ್ಟು ಮೂಲೆಗಳನ್ನು ತಟ್ಟುತ್ತ ತನ್ನಿರುವಿಕೆಯನ್ನು ಕಿಟಕಿ ಬಾಗಿಲು ಗೋಡೆಗಳಿಗೆ ತಿಳಿಯ ಪಡಿಸಿ

ಬದುಕುತ್ತಿದ್ದವನ ಕೂಗಿಗೆ ಕಿವಿಗೊಟ್ಟು ಒಮ್ಮೆ ಹೋಗಿಬರಬಹುದಿತ್ತೆನಿಸಿದ್ದರೂ

ಹುಟ್ಟಿದಾಗಿನಿಂದ ಒಮ್ಮೆ ಮಾತ್ರ  ನೋಡಿದ್ದ ಆ ಮನೆ ನನಗೆ

ಯಾವತ್ತಿಗೂ ಅಚ್ಚನಂತೆಯೇ ಅಪರಿಚಿತವಾಗುಳಿದಿತ್ತು.

ಅಮ್ಮನನ್ನು ಹೊಸಿಲೊಳಗೆ ಬಿಟ್ಟುಕೊಳ್ಳದಾ ಮನೆ ನನಗೂ ಬೇಡವೆನಿಸಿತ್ತು,ನಿಜ!

 

ಆದರೂ ಸೋದರತ್ತೆ ಮೊನ್ನೆ  ಕರೆಮಾಡಿ

ಮುದುಕ ಬಲು ಘಾಟಿ

ಸಾಯುವ ಮೊದಲು ಮನೆಯನ್ನ

ಕಾನೂನಿನ ಪ್ರಕಾರ ನಿನ್ನ ಹೆಸರಿಗೇ ಬರೆದಿಟ್ಟಿದ್ದಾನೆ.

ಈಗ ಬೇರೆ ದಾರಿಯಿಲ್ಲ

ನಿನಗಾದರು ನೀನಿರುವ ಊರಿನಲ್ಲಿ ಏನಿದೆ?

ಮನೆಯಾ?ಮಠವಾ? ಹೇಳಿಕೊಳ್ಳಲೊಂದು ನೆಲೆಯ?

ಸುಮ್ಮನೆ ಇಲ್ಲಿಗೇ ಬಂದು ಬಿಡು ಖಾಲಿ ಮನೆ

ಬಹಳ ಕಾಲ ಹಾಳು ಬಿಡಬಾರದು!

ನೀನೊ ನಮ್ಮೆಲ್ಲರ ತೊರೆದುಕೊಂಡಂತೆ

ಅಲ್ಲಿನ  ಕನ್ನಡದ ಹುಡುಗಿಯನ್ನೇ ಮದುವೆಯಾಗಿದ್ದೀ.

ಪಾಪ! ಅವಳಾದರುಹೇಗೆ ಬಂದು ಬದುಕಿಯಾಳು ಬಾಷೆ ಗೊತ್ತಿರದ ಊರಲ್ಲಿ

ಇಲ್ಲೇ ಶಾಶ್ವತವಾಗಿ ನೆಲೆಯೂರಲು ನಿನಗಿಷ್ಟವಾಗದಿದ್ದರೆ

ಕೊನೆ ಪಕ್ಷ

ಮನೆಮಾರಿ ದುಡ್ಡು ತೆಗೆದುಕೊಂಡು ಹೋಗು

ಊರಿನಿಂದ ಹೊರಗಿರುವ ಮನೆಯೆಂದು

ಬೆಲೆ ಕಡಿಮೆ ಕೇಳಬಹುದು ಜನ

ಅಷ್ಟ್ಯಾಕೆ ಮಾತು ನಮ್ಮದನ್ನು  ಬೇರೆಯವರ ಕೈಗೊಪ್ಪಿಸಲು

ನನಗೂ ಸಂಕಟವಾಗುತ್ತೆ

ಎಷ್ಟೆಂದರು ನಿನ್ನಪ್ಪನ ಜೊತೆ ನಾನೂ ಆಡಿಬೆಳೆದ ಮನೆಯದು

ನಾನೇ ಅದನ್ನು ಕೊಳ್ಳುತ್ತೇನೆ

ಅಮೇರಿಕಾದಲ್ಲಿರುವ ಮೊಮ್ಮಕ್ಕಳಿಗೆ ಸ್ವದೇಶದಲ್ಲಿ

ಒಂದು ಅಸ್ತಿಯಂತಾದರು ಆಗುತ್ತದೆ.ನೀನೇನು ಹೆದರಬೇಡ

ಮಾರುಕಟ್ಟೆಯ ದರವನ್ನೇ ಕೊಡುತ್ತೇನೆ. ನಮ್ಮ

ಸುಭದ್ರ ಚೇಚಿ ಗೊತ್ತಲ್ಲ ಅವಳ ಮಗನೀಗ ಈ ಊರಲ್ಲೇ ದೊಡ್ಡ ಬ್ರೋಕರ್

ಇಂತಾ ದಿನ ಬರುತ್ತೇನೆಂದು ಹೇಳು ಸಾಕು ಪತ್ರ ಹಣ ಎರಡನ್ನು ರೆಡಿ ಮಾಡಿಸಿಡುತ್ತೇನೆ

ಬೇಕೆಂದಾಗ ನೀನು ಬಂದುಹೊಗುವುದನ್ನೂ ಮಾಡಬಹುದು.

ಎಷ್ಟೆಂದರೂ

ನೀನು ನನ್ನ ಮಗನ ಹಾಗಲ್ಲವೇ

ನಿನ್ನ ಅಚ್ಚ ಬದುಕಿದ್ದಿದ್ದರೆ

ಈ ಮಾತುಗಳನ್ನು ನಾನು ಆಡಬೆಕಿರಲಿಲ್ಲ, ನೋಡು.

 

ಸೋದರತ್ತೆಯ ಮಾತುಗಳು ಯಾರೋ ಅಪರಿಚಿತ

ವ್ಯಾಪಾರಸ್ಥನೊಬ್ಬನ ಮಾತಿನ ಹಾಗೆ ಕೇಳಿಸಿ

ಏನೂ ಮಾತಾಡದೆ ಪೋನಿಟ್ಟೆ

ಅಚ್ಚ ಬದುಕಿದ್ದರೆ ಅಂದ ಮಾತು ಮಾತ್ರ

ಕಿವಿಯಲ್ಲುಳಿದು ಹೋಯಿತು.!

 

ಉರಿಯುವ ಹಗಲು

 

ಗಡಿಯಾರಗಳ ಮುಳ್ಳುಗಳು ತೆವಳುತಿವೆ!

ಎಷ್ಟು ಕತ್ತಿಗಳ ತಿವಿತ

ರಕ್ತ ಸ್ರಾವವಿರದೆ ಕೊಲ್ಲುವ ಹೊಸ ಮಾರ್ಗವನು ಅನ್ವೇಷಿಸಿದ

ಕೀರ್ತಿ ಪತಾಕೆಯ ಹೊತ್ತ

ಹಳೇ ಕುದುರೆಗಳ ಮೇಲೆ ಹೊಸ ದೊರೆ

ಊರ ತುಂಬಾ ಭಯದ ಕಂಪನಗಳು

ನಿಟ್ಟುಸಿರನ್ನೂ ಬಿಗಿ ಹಿಡಿದು

ಬಿಲ ಸೇರಿಕೊಂಡ ಹುಳುಗಳು

ಬಿಸಿಲ ಧಗೆಯ ನಡುವೆಯೆದ್ದ ಬಿಸಿ ಗಾಳಿಗೆದ್ದು ದೂಳಿನಬ್ಬರಕೆ

ಮೊಳಗಿಸಿದ ರಣಘೋಷಗಳು ದಿಕ್ಕುಗಳಿಗೆ ಹಬ್ಬಿ

ಸೇನಾಧಿಪತಿಗಳ ಆವೇಶ ಆಕ್ರೋಶಗಳನ್ನೆಲ್ಲ ಮೈಮೇಲೆ ಆವಾಹಿಸಿಕೊಂಡ ಕಾಲಾಳುಗಳು ಸ್ವತ: ರಕ್ಕಸರಂತೆ ಪರಾಕ್ರಮ ಮೆರೆಯ ತೊಡಗಿದರು

ಹಾಗೆ ಉರಿದೊಂದು ಸಂಜೆಗೆ ಬರಬಹುದಾದ ಬಿರು ಮಳೆಗೆ ಕಾದ

ಜನ  ಊರಾಚೆಯ ದಿಬ್ಬದ ಮೇಲೆ ನೆರೆದು ಹಾಡತೊಡಗಿದರು

ಹುಯ್ಯೋ ಹುಯ್ಯೋ ಮಳೆರಾಯ

ಮದ್ದು ಅರೆಯೋಣ!

 

ಉರಿಬಿಸಿಲಿಗೆ ಕಾದ ನೆಲದೊಳಗೆ

ಕಾಯುವ ಕಾಣದ ಕೆಂಪು

ಮದ್ಯಾಹ್ನದ ಧಗೆಗೆ  ಉಬ್ಬೆ ಹಾಕಿದಂತೆ

ನಿಸ್ತೇಜವಾಗಿ ಬಿಳಿಚಿಕೊಂಡ ಕಣ್ಣುಗಳಿಗೆ ಜೊಂಪು

ಹೊಲವಿದ್ದರೂ ಹಸಿರಿಲ್ಲ

ಹಸಿರಿದ್ದರೂ ಉಸಿರಿಲ್ಲ

ತೆವಳುವ ಮುಳ್ಳುಗಳ ಗಡಿಯಾರ ನಿಂತ ವರುಷ

ಜ್ಞಾಪಕಕೆ ಬರುತಿಲ್ಲ

ಮೊನ್ನೆ ಹಾರಿ ಹೋದ ಹಕ್ಕಿಗಳೂ

ಹಿಂದಿನ ಸಾಯಂಕಾಲ ಬಾರದೆ ಇರುಳಿಡೀ ಖಾಲಿಯುಳಿದ ಗೂಡುಗಳು

ಮೇಯಲು ಹೋದ ಹಸುವ ಹುಲಿ ಹಿಡಿಯಿತೊ

ಹುಲಿ ಹೆಸರಲಿ ಮನುಜರೇ ಮುಕ್ಕಿದರೊ

ಹುಡುಕುತ್ತ ಕಾಡಿಗೋದವನ ಹೆಣ ಹೊತ್ತು ತಂದರು

ಹಾಡಿಯ ಜನ ಗೋಣಿ ತಾಟೊಳಗೆ ಸುತ್ತಿ

ನಕ್ಷತ್ರಗಳಂತಿದ್ದವಳು  ಕಾಣೆಯಾಗಿ ಕಾಲವಾಯಿತು

ಹುಡುಕಬೇಕೆಂಬ ನೆದರಿದೆಯೇ ಯಾರಿಗಾದರೂ

ಗೊಣಗುತ್ತಲೇ  ವಂಶಾವಳಿಯ ಹೆಸರಿಡಿದು ಬಯ್ಯುತಿಹ ಮುದುಕಿಗೆ ಬಾಯಿ ಕೊಟ್ಟು ಉಳಿದವರುಂಟೆ

ಹಾರಿ ಹೋದ  ಹಕ್ಕಿಗಳು ಬಂದಾವು

ಮೂಡದೆ ಉಳಿದ ಚುಕ್ಕಿಗಳು ಮೂಡಿಯಾವು

ಹಾಡದೆ ಮೌನವಾಗುಳಿದ ಮಕ್ಕಳು ಹಾಡಿಯಾವು

ಅಂತಹದೊಂದು  ಹೊಸ ಮುಂಜಾನೆ

ಊರತುಂಬಾ ಹಸಿರು ಚಿಗುರಿ

ಮರಗಳ ತುಂಬ ಹೂಹಣ್ಣುಗಳ ಗೊನೆ ಗಳು ತೂಗಿ

ಸೂರ್ಯನೂ ಶಿರಬಾಗಿ

ಎಳೆಕಿರಣಗಳಲ್ಲಿ ಭೂಮಿಯ ಬೆಳಗುವನು

ಬಿಸಾಕು ನಿನ್ನ ಕೊಡಲಿಗಳ

ಅವಿತಿಟ್ಟ ಆಯುಧಗಳನೆಲ್ಲ

ಗುಂಡಿ ತೆಗೆದು ಹೂತು ಹಾಕು

ಅಲ್ಲಿವರೆಗೂ ಬಾ ಹತ್ತಿರದ ಕಾಡಿಗೋಗಿ ಔಷದಿ ಎಲೆಗಳ ಬಿಡಿಸಿ ತಂದು

ಎದೆಯ ಗಾಯಗಳಿಗೆ ಮದ್ದು ಅರೆಯೋಣ

Leave a Reply