fbpx

ನಾನು ಊಟ ಮಾಡಲು ನಿರಾಕರಿಸಿ ಮಠದ ಹಬ್ಬಾಗಿಲನ್ನು ದಾಟಿ ಬಂದು ಬಿಟ್ಟಿದ್ದೆ..

ನಾನು  ಹೈಸ್ಕೂಲಿಗೆ ಹೋಗುತ್ತಿರುವ ಸಮಯ ಅದು. ದೀಪಾವಳಿಯ ಸಂದರ್ಭ.

ಹಬ್ಬದ ದಿನ ಸಂಜೆ ಸಿಹಿ ಅಡಿಗೆ ಉಂಡು ಮನುಷ್ಯರನ್ನು ಹುಡುಕುತ್ತ ನಾನು ಮತ್ತು ಚಿಕ್ಕಪ್ಪನ ಮಗಳು ಮಾತನಾಡುತ್ತ ಕುಳಿತಿದ್ದೆವು.

ಯಾರೋ ಇಬ್ಬರು ‘ಒಡಿದೀರೆ..’ ಎನ್ನುತ್ತ ಮನೆ ಬಾಗಿಲಿಗೆ ಬಂದರು. ನೋಡಿದರೆ ನಮ್ಮ ಮನೆಯ ಗದ್ದೆ ಕೆಲಸಕ್ಕೆ ಖಾಯಂ ಆಗಿ ಬರುವ ಬೊಮ್ಮಯ್ಯ ಹಾಗೂ ಮತ್ತೊಬ್ಬ. ಇಬ್ಬರ ಕೈಯ್ಯಲ್ಲೂ ಸವತೆ ಕಾಯಿ, ಬೆಂಡೆಕಾಯಿ, ಪಡುವಲಕಾಯಿಯಂತಹ ಹಿತ್ತಲ ತರಕಾರಿಗಳು.

‘ಅಪ್ಪಾ, ಕಾಣುಕೆ ಬಂದಾರೆ ತಂಗಿ’ ದೊಡ್ಡದಾಗಿ ಹೇಳುತ್ತ ಅಡುಗೆ ಕೋಣೆಯತ್ತ ನಡೆದಳು. ಚಿಕ್ಕವಳಿದ್ದಾಗಿನಿಂದಲೂ
ಬೇರೆ ಊರುಗಳಲ್ಲೇ ಉಳಿದು ಬಿಟ್ಟಿದ್ದ ನನಗೆ ಈ ಕಾಣಲು ಬರುವ ಶಬ್ಧ ತೀರಾ ಹೊಸದು. ಹಾಗೆಂದರೇನು? ನಾನು ಅರ್ಥವಾಗದೇ ತಂಗಿಯನ್ನೇ ಕೇಳಿದ್ದೆ.

“ಅವರು ನಮ್ಮ ಗದ್ದೆ ಕೆಲಸಕ್ಕೆ ಬರುವವರು. ದೀಪಾವಳಿಗೆ ಅವರಿಗೂ ಹೊಸ ಲುಂಗಿ ತರ್ತಾರೆ. ಅದನ್ನು ತಗೊಂಡು, ಊಟ ಮಾಡಿ ಕೊಟ್ಟೆ ರೊಟ್ಟಿ (ಹಲಸಿನ ಎಲೆಯ ಕಡುಬು) ತಗೊಂಡು ಹೋಗ್ತಾರೆ. ಬರಿ ಕೈಯ್ಯಲ್ಲಿ ಹೇಗೆ ಬರೋದು ಅಂತಾ ಅವರ ಹಿತ್ತಲಲ್ಲಿ ಬೆಳೆದ ತರಕಾರಿ ಹಿಡಿದುಕೊಂಡು ಬರ್ತಾರೆ.”

ಯಾಕೋ ಈ ವಿವರಣೆಗಳು ನನ್ನನ್ನು ಒಂದಿಷ್ಟು ಆತಂಕಕ್ಕೆ ದೂಡಿದವು. ಗದ್ದೆ ಕೆಲಸಕ್ಕೆ ಖಾಯಂ ಆಗಿ ಬರುವವರಾದ್ದರಿಂದ ಮನೆಯ ಸದಸ್ಯರಂತೆಯೇ ಆಗಿಬಿಡುವುದರಿಂದ ಅವರಿಗೂ ದೀಪಾವಳಿಯಂದು ಹೊಸಬಟ್ಟೆ ಕೊಡುವುದೇನೋ ಸರಿ. ಊಟ, ಸಿಹಿ ತಿಂಡಿ, ಕೊಟ್ಟೆರೊಟ್ಟಿ ಕೊಡುವುದು ಎಲ್ಲವೂ ಸರಿ. ಬರಿಗೈಯ್ಯಲ್ಲಿ ಬಂದು ಊಟ ಮಾಡಿ  ಹೊಸಬಟ್ಟೆ ತೆಗೆದುಕೊಂಡು  ಹೋಗುವುದು ಎಂಬ ಅವರ ಯೋಚನೆಯೂ ಸರಿಯೇ.

ಆದರೆ ಆ “ಕಾಣುಕೆ ಬಂದವರು” ಎಂಬ ಹೆಸರು ಮಾತ್ರ ನನಗೆ ಒಂದು ರೀತಿಯ ಮುಜುಗರವನ್ನು ಹುಟ್ಟಿಸಿಬಿಟ್ಟಿತ್ತು.

ಅದಾದ ನಂತರದ ದೀಪಾವಳಿಯಂದು ಹೀಗೆ ‘ಕಾಣೂಕೆ ಬಂದವರ’ ಎದುರು ನಿಲ್ಲುವ  ನೈತಿಕ ಧೈರ್ಯವೇ ನನಗಿಲ್ಲ ಎಂದು ಎಷ್ಟೋ ಸಲ ಅನ್ನಿಸಿದ್ದಿದೆ. ಅದಾದ ನಂತರ ಕಾಲೇಜಿಗೆ ಕಾಲಿಟ್ಟ ಮೇಲೆ ಹೋರಾಟದಲ್ಲಿ ತೊಡಗಿಸಿಕೊಂಡ ಮೇಲೆ ಈ ಪದ್ದತಿಯೊಂದು ಸಾಮಾಜಿಕ ಶ್ರೇಣಿಕೃತ ಪದ್ದತಿಯಾಗಿ ಕಾಣಿಸತೊಡಗಿತು.

ಇಂತಹ ಸೂಕ್ಷ್ಮ ಶೋಷಣೆಗಳು ಆಗಾಗ ಕಣ್ಣಿಗೆ ಬೀಳುತ್ತಲೇ ಇರುತ್ತವೆ. ಒಂದು ಪ್ರಭಲವಾದ ಜನಾಂಗ ತನ್ನ ಸುತ್ತಮುತ್ತಲಿನ ಒಂದಿಷ್ಟು ತನಗಿಂತ ಸಾಮಾಜಿಕವಾಗಿ ಕೆಳ ಹಂತದಲ್ಲಿರುವ ನಾಲ್ಕಾರು ಜನಾಂಗಗಳನ್ನು ಶೋಷಿಸುತ್ತಲೇ ಇರುತ್ತದೆ. ಅದೊಂದು ಸಾಮಾಜಿಕ ನಡವಳಿಕೆಯಂತೆಯೇ ರೂಪುಗೊಂಡಿರುತ್ತದೆ. ಕೆಲವೊಮ್ಮೆ ಅದು ಶೋಷಣೆ ಎಂದೇ ಗುರುತಿಸಲಾಗದಷ್ಟು ನಮ್ಮ ನಡವಳಿಕೆಗಳಲ್ಲಿ ಹಾಸುಹೊಕ್ಕಾಗಿರುತ್ತದೆ. ನಮ್ಮದೇ ದೃಷ್ಟಿಯನ್ನಿಟ್ಟುಕೊಂಡು ನೋಡಿದರೆ ಅದೊಂದು ಸಾಮಾಜಿಕ ಶೋಷಣೆ ಎಂದೇ ಗುರುತಿಸಲಾಗದಂತಿರುತ್ತದೆ.

ಡಾ. ಬಾಬುರಾವ್ ಗಾಯಕವಾಡರವರು ಬರೆದ ಹನ್ನೆರಡು ಮರಾಠಿ ದಲಿತ ಕಥೆಗಳಿರುವ ‘ಮನುಷ್ಯರನ್ನು ಹುಡುಕುತ್ತ’ ಎಂಬ ಸಂಕಲನವನ್ನು  ಡಾ. ವಿಜಯ ಕಾಂಬಳೆ ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾರತದಲ್ಲಿ ಜಾತಿ ಪದ್ದತಿಯೇ ಇಲ್ಲ. ಅದೊಂದು ಬ್ರಿಟೀಷರ ಕಪೋಲಕಲ್ಪಿತ ಸೃಷ್ಟಿ ಎಂದು ಬೊಬ್ಬಿರಿಯುವವರು ಇದನ್ನು ಓದಲೇ ಬೇಕು.

ನಾನು ಸರಕಾರಿ ಪ್ರೌಢಶಾಲೆಯೊಂದರ ಶಿಕ್ಷಕಿ. ವರ್ಗ ಶಿಕ್ಷಕಿಯಾಗುವುದೆಂದರೆ ಆ ವರ್ಷ ನನ್ನ ಪಾಲಿಗೆ ನರಕ. ವರ್ಗ ಶಿಕ್ಷಕರಾದವರು ಆಯಾ ತರಗತಿಯ ಆಯಾ ಕಾಲಕ್ಕೆ ಇಲಾಖೆ ಕೇಳುವ ಎಲ್ಲಾ ಮಾಹಿತಿಗಳನ್ನು ತುಂಬಬೇಕಾಗುತ್ತದೆ. ವರ್ಗ ಶಿಕ್ಷಕಿ ಎಂದರೆ ಶಾಲೆ ಪ್ರಾರಂಭದ ಮೊದಲ ತರಗತಿಯೇ ಇರುತ್ತದೆ.  ಹೀಗಾಗಿ ‘ತರಗತಿಯಲ್ಲಿ ಯಾರು ಎಸ್ಸಿ ಮಕ್ಕಳಿದ್ದೀರಿ’ ಎಂದು ಕೇಳುವ ಮಾತು ಶಾಲೆಯ ಜವಾನನಿಂದಲೋ ಅಥವಾ ಗುಮಾಸ್ತನಿಂದಲೋ ಆಗಾಗ ಕೇಳಿ ಬರುತ್ತದೆ. ನಿಜಕ್ಕೂ ಇದು ನನಗೆ ಅದು ಕಿರಿಕಿರಿ ಅನ್ನಿಸುವ ವಿಷಯ.

ಪ್ರತಿ ವರ್ಷವೂ ಮಕ್ಕಳ ಪ್ರವೇಶವನ್ನು ಮಾಡಿಸಿಕೊಳ್ಳುವಾಗಲೇ ಮಕ್ಕಳ ಜಾತಿಯನ್ನು ಬರೆದಿಟ್ಟುಕೊಂಡಿರುತ್ತೇವೆ.  ವರ್ಗ ಶಿಕ್ಷಕರಿಗೆ, ಮುಖ್ಯೋಪಾಧ್ಯಾಯರಿಗೆ ಶಾಲೆಯ ಮಕ್ಕಳ ಜಾತಿವಾರು ಲೆಕ್ಕಾಚಾರಗಳಿರುತ್ತವೆ. ಮೇಲಾಧಿಕಾರಿಗಳಿಗೂ, ಶಿಕ್ಷಣ ಇಲಾಖೆಯ ಕಛೇರಿಗಳಿಗೂ ಈ ಬಗ್ಗೆ ಜೂನ್ ತಿಂಗಳಲ್ಲೇ ಮಾಹಿತಿಯನ್ನು ಕಳುಹಿಸಲಾಗಿರುತ್ತದೆಯಾದರೂ ತಕ್ಷಣದ ಮಾಹಿತಿ ಎಂಬ ಶೀರ್ಷಿಕೆ ಹೊತ್ತ ಜಾತಿವಾರು ಲೆಕ್ಕ ಮತ್ತೆ ಕೇಳುತ್ತಾರೆ.

ಶಿಕ್ಷಣ ಇಲಾಖೆಯ ಕಛೇರಿಗಳಿಂದ ಶಾಲೆಯ ಮುಖ್ಯೋಪಾಧ್ಯಾಯರಿಗೂ, ಮುಖ್ಯೋಪಾಧ್ಯಾಯರಿಂದ ತರಗತಿಯ ಶಿಕ್ಷಕರಿಗೂ ಈ ಮಾಹಿತಿಯನ್ನು ತುಂಬಬೇಕಾದ ಅತಿ ತುರ್ತು ಎಂಬಲಿಸ್ಟ್ ಮಾಡಬೇಕಾಗಿರುತ್ತದೆ. ಆಗ ಬರೆದಿಟ್ಟುಕೊಂಡ ಮಾಹಿತಿಯನ್ನು ಹುಡುಕಿ ಅದನ್ನು ತುಂಬಲು ಸಮಯ ಸಾಕಾಗುವುದಿಲ್ಲ ಎಂಬ ನೆಪ ಹೇಳಿ ಸೀದಾ ತರಗತಿಯ ಕೋಣೆಗೆ ಹೋಗಿ ಮಕ್ಕಳನ್ನು
ಒಂದಿಷ್ಟೂ ಮುಜುಗರವೂ ಇಲ್ಲದೇ ಜಾತಿ ಹೆಸರಿನಲ್ಲಿ ಎದ್ದು ನಿಲ್ಲಿಸುತ್ತೇವೆ.

ಜಾತಿ ಹೆಸರು ಹೇಳಿದ ತಕ್ಷಣ ಮುಜುಗರ ಪಟ್ಟುಕೊಳ್ಳುತ್ತ, ಎದ್ದು ನಿಲ್ಲುವುದೋ ಬೇಡವೋ ಎಂಬ ದ್ವಂದ್ವದಲ್ಲಿ ಅರೆ ಮನಸ್ಸಿನಿಂದ ನಾಚಿಕೆಯಲ್ಲಿ ಮುಖ ತಗ್ಗಿಸಿ ಎದ್ದು ನಿಲ್ಲುವುದನ್ನು ಕಂಡಾಗ  ನನಗೆ ಇದು ತೀರಾ ಅಮಾನುಷ ಎನ್ನಿಸಿ ಬಿಡುತ್ತದೆ.

ಜಾತಿವಾರು ಮಕ್ಕಳ ಹೆಸರನ್ನು  ನಮೂದಿಸುವುದು, ಅಲ್ಪಸಂಖ್ಯಾತರನ್ನು ಲಿಸ್ಟ್ ಮಾಡುವುದು, ದಲಿತರನ್ನು ಹೆಸರಿಸುವುದು ಒಂದು ರೀತಿಯಲ್ಲಿ ಮಕ್ಕಳಲ್ಲಿ ಬೇಧವನ್ನುಂಟು ಮಾಡಿದಂತೆನಿಸುತ್ತದೆ.  ನೀನು ದಲಿತ, ನೀನು ಮುಸ್ಲಿಂ, ನೀನು ಕ್ರಿಶ್ಚಿಯನ್, ನೀನು ಹಿಂದುಳಿದ ಒ.ಬಿ.ಸಿ.ಗೆ ಸೇರಿದವನು ಎಂದು ಮಕ್ಕಳನ್ನೆಲ್ಲ ವಿಭಾಗಿಸುವಾಗ ಜಾತಿ ಆಧಾರಿತ ಶಿಕ್ಷಣ ನೀಡುತ್ತಿದ್ದೇವೆಯೇ ಎಂಬ ಮುಜುಗರ  ಉಂಟಾಗುವುದೂ ಇದೆ.

‘ಮನುಷ್ಯರನ್ನು ಹುಡುಕುತ್ತ’ ಸಂಕಲನದ ಮೊದಲ ಕಥೆಯೇ ಹೀಗಿದೆ. ಆ ಊರಿನ  ದೇವಸ್ಥಾನಗಳಲ್ಲಿ ಶಾಲೆ ನಡೆಯುತ್ತಿತ್ತು. ದೇವಸ್ಥಾನದ ಒಳಗಡೆಯೇ ನಡೆಯುವ ಶಾಲೆಗೆ ಹೊಲೆ ಮಾದಿಗರು ಒಳಗೆ ಪ್ರವೇಶಿಸುವಂತಿಲ್ಲ. ಹೀಗಾಗಿ ಅವರು ದೇಗುಲದ ಹೊರ ಆವಾರದಲ್ಲಿಯೇ ಕುಳಿತು ಪಾಠ ಕೇಳಬೇಕಿತ್ತು. ಮಳೆ ಏನಾದರೂ ಬಂದರೆ. ದೇವಸ್ಥಾನದ ಸ್ವಲ್ಪ ದೂರದಲ್ಲಿರುವ ಆಲದ
ಮರದಡಿಯಲ್ಲಿ ಆಶ್ರಯ ಪಡೆಯಬೇಕಿತ್ತು. ಇಷ್ಟಾಗಿಯೂ ಜೋರು ಮಳೆಗೆ ಒದ್ದೆಯಾದರೆ ದಿನವಿಡೀ ಅದೇ ಒದ್ದೆ ಅಂಗಿಯಲ್ಲಿ ನಡುಗುತ್ತ ಕಾಲ ಕಳೆಯಬೇಕಿತ್ತು.

ಆದರೆ ಆ ಶಾಲೆಗೆ ಬಂದ ಹೊಸ ಮಾಸ್ತರರು ಶಾಲೆಯನ್ನು ಸರಕಾರಿ ಕಟ್ಟಡಕ್ಕೆ ವರ್ಗಾಯಿಸಿದ್ದಾಗಿಯೂ ಅವರ ಸ್ಥಿತಿಯಲ್ಲೇನೂ ಹೇಳಿಕೊಳ್ಳುವಂತಹ ಬದಲಾವಣೆ ಆಗಲೇ ಇಲ್ಲ. ಹೊಲಸು ಚೆಲ್ಲುವ ಮೂಲೆಗೆ ಕುಳಿತ ದಲಿತರನ್ನು ಆ ಮಾಸ್ತರರು ಒಂದಿಷ್ಟು ಕನಿಕರದಿಂದ ನೋಡಿಕೊಳ್ಳುತ್ತಿದ್ದಾರೆ ಎಂಬುದೇ ಊರ ಜನರು ಅವರನ್ನು ದ್ವೇಷಿಸಲು ಕಾರಣವಾಗುತ್ತದೆ. ವನಭೋಜನಕ್ಕೆ ಎಂದು ಹೊರಟ ವಿದ್ಯಾರ್ಥಿಗಳ ಗುಂಪಲ್ಲಿ ಇರುವ ಕಥೆಗಾರ ಉಳಿದ ಮಕ್ಕಳೊಂದಿಗೆ ಒಂದಿಷ್ಟು ಅಂತರ ಕಾಯ್ದುಕೊಂಡರೂ ಮಠದ ಮಾಳಿಗೆಯಲ್ಲಿ ಕುಳಿತುಕೊಳ್ಳಬೇಕಾದಾಗ ಮಾಸ್ತರರು ಗೊತ್ತಾಗದಂತೆ ಉಳಿದ ಮಕ್ಕಳ ಜೊತೆ ಬೆರೆತು ಕುಳಿತು ಕೊಳ್ಳಲು ಹೇಳಿದರೂ ದೂರ ಕುಳಿತು, ಮಠದ ಅಧಿಕಾರಿಗಳಿಂದ ಹೊಡೆಯಿಸಿಕೊಳ್ಳುವ ವಿವರಣೆಗಳು ಕಣ್ಣನ್ನು ಒದ್ದೆ ಮಾಡುತ್ತದೆ.

ಭಾರತದಲ್ಲಿ ಜಾತಿ ಪದ್ದತಿ ಎಷ್ಟು ಹಾಸುಹೊಕ್ಕಾಗಿದೆಯೆಂದರೆ ನಮ್ಮ ಮನೆಗೆ ಯಾರಾದರೂ ಸ್ನೇಹಿತರು ಬರುತ್ತಾರೆಂದರೆ ಅವರ ಜಾತಿ ಯಾವುದು ಎಂಬುದನ್ನು ನಾವು ಮೊದಲು ತಿಳಿದುಕೊಳ್ಳ ಬಯಸುತ್ತೇವೆ. ಇದು ಕೇವಲ ನಮ್ಮ ಮನೆಗಳಿಗಷ್ಟೇ ಸೀಮಿತವಾಗಿದ್ದರೆ ಅದು ಬೇರೆ ಮಾತು. ಆದರೆ ಅದನ್ನು ದೇವಸ್ಥಾನ ಹಾಗು ಮಠಗಳಮತಹ ಸಾಮಾಜಿಕ ಸ್ಥಳಗಳಲ್ಲೂ
ಅನುಸರಿಸುತ್ತೇವೆ.

ನಾನು ಬಿ ಇಡಿ ಮಾಡುವಾಗ ಒಂದು ಸ್ಥಳ ಸಮೀಕ್ಷೆಗೆಂದು ಹೋಗಬೇಕಿತ್ತು. ತೀರಾ ಹಳ್ಳಿಯಾದ ಅಲ್ಲಿ ಮೇಲ್ವರ್ಗದ ಒಂದು ಪ್ರಸಿದ್ಧವಾದ ಮಠವಿತ್ತು. ನನ್ನ ಜೊತೆ ಅದೇ ಮಠದ ಜಾತಿಗೆ ಸೇರಿದ ಸ್ನೇಹಿತೆಯೊಬ್ಬಳಿದ್ದಳು. ಮಧ್ಯಾಹ್ನದ ಊಟದ ಸಮಯ. ಅಲ್ಲಿಯವರೆಗೆ ಮಠದ ಕುರಿತು ಮಾಹಿತಿ ನೀಡಿದ್ದ ಆಡಳಿತಾಧಿಕಾರಿಗಳು  ನಾಜೂಕಾಗಿ ನನ್ನ ಬಳಿ ನನ್ನ ಜಾತಿಯ
ವಿಚಾರಣೆಗೆ ತೊಡಗಿದರು. ನಂತರ ಮಠದ ಆವಾರದ ಹಿಂದಿರುವ ಕೋಣೆಯಲ್ಲಿ ಊಟ ಮಾಡಲು ತಿಳಿಸಿ ನನ್ನ ಸ್ನೇಹಿತೆಯನ್ನು ಅವರದ್ದೇ ಆದ ವಿಶೇಷ ಕೋಣೆಯಲ್ಲಿ ಊಟ ಮಾಡಲು ತಿಳಿಸಿದ್ದರು.

ನಾನು ಊಟ ಮಾಡಲು ನಿರಾಕರಿಸಿ ಮಠದ ಹಬ್ಬಾಗಿಲನ್ನು ದಾಟಿ ಬಂದು ಬಿಟ್ಟಿದ್ದೆ.. ಅದೇ ಮಠಕ್ಕೆ ಚಿಕ್ಕಂದಿನಿಂದಲೂ ನಮ್ಮ ಮನೆಯ ಕೆಲಸಕ್ಕೆ ಬರುವ ಗಣಪಿ ಹಾಗೂ ನಾಗಪ್ಪ ಪ್ರತಿ ವರ್ಷವೂ ಹೊರಸೇವೆ ಎಂದು ಬಿಟ್ಟಿ ಸೇವೆ ಮಾಡುತ್ತಿದ್ದುದು ನನಗೆ ಗೊತ್ತಿತ್ತು. ಆದರೆ ಅವರಿಗೆ ಎಂದೂ ಮಠದ ಹೊರಕೋಣೆಯನ್ನು ಬಿಡಿ, ಅಂಗಳದಲ್ಲೂ ಊಟಕ್ಕೆ ಕೊಡುತ್ತಿರಲಿಲ್ಲ.
ದೂರದ ಬಯಲಿನಲ್ಲಿ ಊಟ ಬಡಿಸುತ್ತಿದ್ದುದನ್ನು ಎಷ್ಟೋ ಸಲ ಗಣಪಿ ರಾಗವಾಗಿ ನನಗೆ ಹೇಳಿದ್ದಳು. ‘ಮಣ್ಣುಗೂಡಿದ ಅನ್ನದಗಳು’ ಎಂಬ ಕಥೆ ನನಗೆ ಮತ್ತೆ ಮತ್ತೆ ಈ ಎಲ್ಲ ಘಟನೆಗಳನ್ನು ನೆನಪಿಸಿ ಆಕ್ರೋಶ, ವಿಷಾದ, ನೋವು ಎಲ್ಲವನ್ನು ಏಕಕಾಲದಲ್ಲಿ ಅನುಭವಿಸುವಂತೆ ಮಾಡಿತು.

ಇಲ್ಲಿಯ ಎಲ್ಲಾ ಕಥೆಗಳೂ ತೀವ್ರವಾದ ದಲಿತ ಸಂವೇದನೆಯನ್ನು ಇಟ್ಟುಕೊಂಡೇ ಹುಟ್ಟಿದ ಕಥೆಗಳು. ಮರಾಠಿ ಸಾಹಿತ್ಯ ವಲಯದಲ್ಲಿ ದಲಿತ ಪ್ಯಾಂಥರ್ಸ್ ಸಾಹಿತ್ಯ ಚಳುವಳಿಯ ಛಾಪು ಇದರಲ್ಲಿದ್ದು, ಪ್ಯಾಂಥರ್ಸ್ ಚಳುವಳಿ ಕನ್ನಡ ಸಾಹಿತ್ಯವಲಯದಲ್ಲೂ ಹಬ್ಬಿದ ಸಮಯದಲ್ಲೇ ಈ ಪುಸ್ತಕವೂ ಕನ್ನಡಕ್ಕೆ ಅನುವಾದಗೊಂಡಿರುವುದರಿಂದ ತೀರಾ ಪ್ರಸ್ತುತ
ಎನ್ನಿಸುತ್ತದೆ.

ಈ  ಸಮಯದಲ್ಲಿ ಒಬ್ಬ ನಿವೃತ್ತಿ ಹೊಂದಿದ ದಲಿತ ಶಿಕ್ಷಕರು ಹೇಳಿದ ಘಟನೆ ನೆನಪಿಗೆ ಬರುತ್ತದೆ. ತೀರಾ ಚಿಕ್ಕದಾದ ಹಾಗೂ ಹೆಚ್ಚಿನವರು ಮೇಲ್ವರ್ಗಕ್ಕೆ ಸೇರಿದ ಜನಾಂಗವಿರುವ ಒಂದು ಹಳ್ಳಿ ಅದು. ಆ ಹಳ್ಳಿಯ  ಶಾಲೆಯಲ್ಲಿ ಪ್ರತಿ ವರ್ಷ ಚೌತಿಗೆ
ಗಣಪನ್ನು ಕುಳ್ಳರಿಸುವ ಪರಿಪಾಟ ಇತ್ತಂತೆ. ಆ ವರ್ಷ ಕೂಡ ಅಲ್ಲಿ ಗಣಪನ್ನು ಕುಳ್ಳರಿಸಿದ್ದರಂತೆ. ಈ ಶಿಕ್ಷಕರೋ  ಆ ಶಾಲೆಗೆ ಬಂದ ಹೊಸತು. ಶಾಲೆಯಲ್ಲಿನ ಗಣಪನ ಪೂಜೆಗೆ ಉತ್ಸಾಹದಿಂದ ಹೋದರೆ ಆದರೆ ಹಿಂದುಳಿದ ದಲಿತ ವರ್ಗಕ್ಕೆ ಸೇರಿದ ಆ ಶಿಕ್ಷಕರಿಗೆ ಗಣಪನ ಹತ್ತಿರ ಬರಲೂ ಅವಕಾಶ ನೀಡಿರಲಿಲ್ಲವಂತೆ. ಏಕ ಶಿಕ್ಷಕರಾಗಿದ್ದ ಆ ಶಾಲೆಯಲ್ಲಿ ಶಿಕ್ಷಕರ ಬದಲು ಮುಂದುವರಿದ ಜಾತಿಯ ವಿದ್ಯಾರ್ಥಿಗಳಿಂದ ಗಣಪತಿಯನ್ನು ಪೂಜೆ ಮಾಡಿಸಿದ ಆ ಊರಿನವರ ಬಗ್ಗೆ ಇಂದಿಗೂ ಆ ಹಿರಿಯ ಶಿಕ್ಷಕರಿಗೆ ವಿಷಾದವಿದೆ.

ಈ ಕಥಾ ಸಂಕಲನವು ಕೇವಲ ದಲಿತ ಸಂವೇದನೆಯನ್ನಷ್ಟೇ ಅಲ್ಲದೇ ಸ್ತ್ರೀಪರ ಸಂವೇದನೆಗಳನ್ನೂ ಹೊತ್ತುಕೊಂಡಿರುವಂತೆ ನನಗೆ ಭಾಸವಾಗುತ್ತದೆ. ಹೆಚ್ಚಿನ ಕಥೆಗಳಲ್ಲಿ ದಲಿತ ಹೆಣ್ಣೊಬ್ಬಳು ಹೇಗೆ ಕೂಲಿ ಕೆಲಸಕ್ಕೆ ಹೋದರೂ ತನ್ನ ಮಾನವನ್ನು ಪಣವಾಗಿ ಇಡಬೇಕಾಗುತ್ತದೆ ಎಂಬುದನ್ನು ವಿವರಿಸುವಾಗ ಮನಸ್ಸು ವಿಹ್ವಲಗೊಳ್ಳುತ್ತದೆ.

‘ಗಳಿಗೆ ಮೂಸಿದ ನಾಯಿ’ ಕಥೆಯಲ್ಲಿ ಒಡೆಯನ ಮನೆಗೆ ಹೆಂಡಿ ಕೆಲಸಕ್ಕೆ ಹೋಗುವ ಶಾಂತಾ ಸಾಹುಕಾರನ ದೌರ್ಜನ್ಯಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡರೆ ಮಾನವೂ ಆಡಿನಂತೆ ಕಥೆಯಲ್ಲಿ ಮಾಲಾಳನ್ನು ಸಾಹುಕಾರ ಬಯಸುವುದು ಗೊತ್ತಿದ್ದೂ ಏನೂ ಮಾಡಲಾಗದ ಅಸಹಾಯಕತೆ ಕಾಡುವುದನ್ನು ನೋಡಬಹುದು.

ಮಾಲಾಳ ಬದಲಿಗೆ ಮನೆಯ ಮುಂದೆ ಮೇಯುತ್ತಿದ್ದ ಇನ್ನೇನು ಎರಡು ಮೂರು ದಿನಗಳಲ್ಲೇ ಈಯುತ್ತಿದ್ದ ಆಡನ್ನು ಸಾಲದ ಬದಲಿಗೆ ಅಡವಿಟ್ಟುಕೊಳ್ಳಲು ದರದರನೆ ಎಳೆದುಕೊಂಡು ಹೋಗುವ ಸಾಹುಕಾರ ತೀರಾ ವಿಕೃತನಾಗಿ ಕಾಣುತ್ತಾನೆ. ವಯಸ್ಸಿಗೆ ಬಂದ ಹುಡುಗಿಯನ್ನು ದೇಗುಲದ ಪೂಜಾರಿ ಮೀಸಲು ಮುರಿಯುವ ಪದ್ದತಿ ಇತ್ತೀಚಿನ ವರ್ಷಗಳವರೆಗೂ ಕೆಲವೊಂದು ಹಳ್ಳಿಗಳಲ್ಲಿ ರೂಢಿಯಲ್ಲಿತ್ತಂತೆ.

ಮದುವೆಯಾದ ಹೆಣ್ಣಿನ ಮೊದಲ ರಾತ್ರಿಯ ಹಕ್ಕನ್ನೂ ಕೂಡ ಕೆಲವು ಕಡೆ ಇದೇ ಪೂಜಾರಿ ವಹಿಸಿಕೊಂಡಿದ್ದರಂತೆ. ಹೆಣ್ಣುಬಾಕರಾದ ಈ ಸಾಹುಕಾರರು, ಪೂಜಾರಿಗಳು ಮಾತೆತ್ತಿದರೆ ಜಾತಿ ಎನ್ನುತ್ತ, ನೆರಳನ್ನೂ ತಾಕಿಸಿಕೊಳ್ಳಲು ಹಿಂಜರೆಯುವಾಗ ಹೆಣ್ಣಿನ ವಿಷಯದಲ್ಲಿ ಮಾತ್ರ ಅದೆಲ್ಲವನ್ನೂ ಗಾಳಿಗೆ ತೂರುವುದನ್ನು ಕಂಡಾಗ ಆಹಾ ಪುರುಷಹಂಕಾರವೇ ಎನ್ನಿಸದೇ ಇರಲಾರದು.

ಕೆಲವು ದಿನಗಳ ಹಿಂದೆ ಊರಿಗೆ ಹೋದಾಗ ಅಲ್ಲಿ ದೊಡ್ಡದೊಂದು ಜಗಳ ನಡೆಯುತ್ತಿದ್ದುದನ್ನು ಗಮನಿಸಿದ್ದೆ. ಕೆಲಸದವಳು ಬೇಕೆಂದೇ ಕಸಬರಿಗೆಯನ್ನೂ ಗೆರಸಿಯನ್ನು ಜೊತೆಗಿಟ್ಟಿದ್ದಾಳೆ ಎಂಬುದು ಮನೆಯೊಡತಿಯ ಆರೋಪ.  ಎಲ್ಲೋ ಕಸವನ್ನು
ಗೆರಸಿಯಲ್ಲಿ ತೆಗೆಯುವಾಗ ಹಾಗೇ ಉಳಿದುಹೋಗಿರಬಹುದು ಎಂಬ ಸಮಜಾಯಿಶಿಯನ್ನು ಒಪ್ಪಲು ಮನೆಯೊಡತಿ ಸಿದ್ಧಳಿಲ್ಲ. ನನಗೋ ಈ ಗೆರಸಿ ಹಾಗೂ ಕಸಬರಿಗೆಯ ಯಾವ ವಿಷಯವೂ ಗೊತ್ತಿಲ್ಲ.

ಹೀಗಾಗಿ ನಮ್ಮ ಮನೆಗೆ ಬರುವ ಬೇಬಕ್ಕನ ಬಳಿ ಅದೇನೆಂದು ಕೇಳಿದ್ದೆ. “ನೀನು ಎಷ್ಟು ಓದಿದರೇನು? ಎಷ್ಟು ಬರೆದರೇನು? ಇದೂ ಗೊತ್ತಿಲ್ಲ ಎಂದರೆ”ಎನ್ನುತ್ತ ಆಕೆ ನನ್ನನ್ನು ತೀರಾ ಕನಿಕರದಿಂದ ನೋಡಿದ್ದಳು. “ಮೊರ (ಗೆರಸಿ) ಮತ್ತೆ ಹಿಡಿ (ಕಸಬರಿಗೆ)
ಜೊತೆಗಿದ್ದರೆ ಆ ಮನೆಯಲ್ಲಿ ಯಾವಾಗಲೂ ಜಗಳ ಆಗ್ತದಂತೆ” ಆಕೆ ಯಾವುದೋ ಗುಟ್ಟು ಹೇಳುವಂತೆ ಹೇಳಿದ್ದಳು.

“ಇರಬಹುದು ಬಿಡು. ಹಾಗೆ ಇಟ್ಟಿದ್ದಕ್ಕೇ ಈಗ ಇಷ್ಟು ದೊಡ್ಡ ರಾದ್ಧಾಂತ ಆಗಿದ್ದು.” ನಾನು ತಣ್ಣಗೆ ಹೇಳಿ ಅವಳ ಮಾತನ್ನು ನಂಬಿದಂತೆ ತೋರಿಸಿಕೊಂಡಿದ್ದೆ. ಹೀಗಾಗಿಯೇ ಕಸಬರಿಗೆಯ ಕುರಿತಾದ ಮತ್ತಿಷ್ಟು ಸ್ವಾರಸ್ಯಕರ ವಿಷಯಗಳೂ ನನಗೆ ಕೇಳಲು ಸಿಕ್ಕಿತ್ತು.

ಕಸಬರಿಗೆಯನ್ನು ಮಲಗಿಸಿಟ್ಟರೆ ಮನೆಯೊಳಗೆ ಯಾವಾಗಲೂ ಅನಾರೋಗ್ಯವಂತೆ. ಮತ್ತೂ ಸ್ವಾರಸ್ಯಕರವಾದ ವಿಷಯವೆಂದರೆ  ತುದಿಯನ್ನು ಮೇಲ್ಮುಖವಾಗಿಟ್ಟರೆ ಮನೆಯಲ್ಲಿ ದುಡ್ಡು ನಿಲ್ಲೋದಿಲ್ಲವಂತೆ. ಯಾಕೆಂದರೆ ಕಸಬರಿಗೆ ಲಕ್ಷ್ಮಿಯಂತೆ. ನನ್ನ ಕಸಬರಿಗೆ ಲಕ್ಷ್ಮಿಯಾದದ್ದು ಹೇಗೆ ಎಂಬ ಅಚ್ಚರಿಯ ಪ್ರಶ್ನೆಗೆ “ಈ ತಂಗಿಗೆ ಏನೂ ತಿಳಿಯೂದಿಲ್ಲ. ಹಿಡಿ ಅಂದ್ರೆ ಅದು ಲಕ್ಷ್ಮೀನೇ” ಎಂದು ದೊಡ್ಡ ಕಣ್ಣು ಬಿಟ್ಟು ನನ್ನನ್ನು ಒಪ್ಪಿಸಿದ್ದಳು.

ಅದಕ್ಕೆ ಪೂರಕವಾಗಿ ರಾಧಿಕಾ ನಾಯಕಿಯಾಗಿ ಅಭಿನಯಿಸಿರುವ ಒಂದು ಸಿನೇಮಾದ ಕಥೆಯನ್ನೂ ವಿವರಿಸಿದ್ದಳು. ಆ ಸಿನೇಮಾದಲ್ಲಿ ರಾಧಿಕಾಳನ್ನೂ, ಅವಳ ಗಂಡನನ್ನು ಹೊರಹಾಕಿದ ಅವಳ ಅತ್ತೆ ಅವಳ ಪಾಲಿಗೆ ಬಂದಿದ್ದು ಎಂದು ಒಂದು ಕಸಬರಿಗೆ ಎಸೆಯುತ್ತಾಳಂತೆ. ರಾಧಿಕಾ ಅದನ್ನು ಸೆರಗಿನಲ್ಲಿ ಹಿಡಿದುಕೊಂಡು ಕಣ್ಣಿಗೆ ಒತ್ತಿಕೊಳ್ಳುತ್ತಾಳಂತೆ. ನಂತರ ಅವಳು ದೊಡ್ಡ ಶ್ರೀಮಂತೆ ಆಗುತ್ತಾಳಂತೆ.

ಹೀಗಾಗಿ ಕಸಬರಿಗೆ ಲಕ್ಷ್ಮಿ ಎಂಬ ಗುಟ್ಟನ್ನು ಹೇಳಿದ್ದಳು. ಇಲ್ಲಿಯೂ ಕೂಡ ಕಸಬರಿಗೆ ಲಕ್ಷ್ಮಿ ಆದ ಕಥೆಯನ್ನು ಕಥೆಗಾರ ವಿವರಿಸುತ್ತಾರೆ.

ಎರಡು  ದಿನಗಳಿಂದ ಹೊಟ್ಟೆಗೇನೂ ಇಲ್ಲದ್ದರಿಂದ ಗಂಡ ಮಾಡಿಕೊಟ್ಟ ಕಸಬರಿಗೆ ಹಿಡಿದು ಹೊರಡುವ ಗಂಗೂಬಾಯಿ ಸಾಹುಕಾರ್ತಿ ಸೋನಾಬಾಯಿಗೆ ತೆಗೆದುಕೊಂಡು ಹೋಗಿ ಕೊಡುತ್ತಾಳೆ. ಕಸಬರಿಗೆಗೆ ನೀರು ಹಾಕಿ. ಕುಂಕುಮ ಹಾಕಿ ಮಡಿ ಮಾಡಿಕೊಳ್ಳುವ ಸೋನಾಬಾಯಿ ರೊಟ್ಟು ಆಗುವವರೆಗೆ ಮನೆಯ ಅಂಗಳ ಸ್ವಚ್ಛ ಮಾಡಲು ಗಂಗೂ ಬಾಯಿಗೇ ಹೇಳುತ್ತಾಳೆ.

ಆಗತಾನೆ ತಂದಿಟ್ಟ ಕಸಬರಿಗೆಯನ್ನು ಹಿಡಿಯಲು ಹೋದರೆ ಹೌಹಾರಿದ ಸಾಹುಕಾರ್ತಿ ಗಂಗುಬಾಯಿಗೆ ಅದನ್ನು ಮುಟ್ಟಲೂ ಕೊಡುವುದಿಲ್ಲ. ತನ್ನ ಗಂಡ ಮಾಡಿಕೊಟ್ಟ,  ತಾನೇ ತನ್ನ ಕೈಯ್ಯಾರೆ ತಂದುಕೊಟ್ಟ ಕಸಬರಿಗೆ ನೀರಿಟ್ಟು. ಕುಂಕುಮವಿಟ್ಟಾಕ್ಷಣ ಲಕ್ಷ್ಮಿ ಆಗಿ ಬಿಡುವ ಸೋಜಿಗಕ್ಕೆ ಬೆಚ್ಚಿ ಬೀಳುತ್ತಾಳೆ. ಆದರೆ ಹಸಿವೆ ಬಹಳ ಕೆಟ್ಟದ್ದು. ಕಸಬರಿಗೆ ಹೇಗೆ ಲಕ್ಷ್ಮಿ ಆಯ್ತು ಎಂಬುದನ್ನು ಯೋಚಿಸುವಷ್ಟೂ ಆಕೆಗೆ ಸಮಯವಿಲ್ಲ. ಬೇಗ ಕೆಲಸ ಮುಗಿದರೆ ರೊಟ್ಟಿ ಬೇಗ ಸಿಗಬಹುದು ಎಂಬ ಯೋಚನೆಯೇ ಮುಖ್ಯವಾಗಿ ಬಿಡುತ್ತದೆ.

ಇಡೀ ಕಥಾ ಸಂಕಲನದ  ಎಲ್ಲಾ ಕಥೆಗಳಲ್ಲೂ ಮುಖ್ಯ ಪಾತ್ರದಾರಿ ಹಸಿವು. ಹಸಿವೆಯನ್ನು ನೀಗಿಸಿಕೊಳ್ಳಲೆಂದೇ ಹೊರಡುವ ಉಳಿದೆಲ್ಲ ಪಾತ್ರಗಳು ವಿವಿಧ ರೀತಿಯ ಶೋಷಣೆಗೆ ಗುರಿಯಾಗುವುದನ್ನು ಸಂಕಲನ ಮಾರ್ಮಿಕವಾಗಿ ವಿವರಿಸುತ್ತದೆ. ಹಸಿವೆಯಿಂದಾಗಿಯೇ ಹೊಲೆ ಮಾದಿಗರಂತಹ ದಲಿತರು ತಮ್ಮ ಸ್ವಾಭಿಮಾನವನ್ನು ಅಡವಿಡಬೇಕಾಗುತ್ತದೆ ಎಂಬುದನ್ನು
ಕಥೆಗಳು ಸೂಕ್ಷ್ಮವಾಗಿ ಹೇಳುತ್ತವೆ.

ಹೊಟ್ಟೆಯ ಹಸಿವಿನಿಂದ ಅಸಹಾಯಕನಾಗುವ ಕಾಶೀಬಾ ತನ್ನನ್ನು ಶಾಲೆಗೆ ಏಕೆ ಕಳಿಸಿದೆ? ಎಂದು ಅಪ್ಪ ದೇವಪ್ಪನಲ್ಲಿ ಮುನಿಸು ತೋರುತ್ತಾನೆ. ಕಾಲೇಜು ಮುಗಿಸಿದರೂ ಕೆಲಸ ಸಿಗುವ ಬಗ್ಗೆ ಭರವಸೆ ಇಲ್ಲ. ವಯಸ್ಸಾದ  ಅಪ್ಪ ಅವ್ವಳನ್ನು ನೋಡಿಕೊಳ್ಳುವ ಚಿಂತೆ ಒಂದೆಡೆ. ಯಾವುದೋ ಕೂಲಿ ನಾಲಿ ಮಾಡುತ್ತೇನೆಂದರೆ “ಸಾಲಿ ಕಲ್ತಾಂವಂಗೆ ಈ ಕೆಲ್ಸಾ ಎಲ್ಲಾ
ನೀಗೂದಿಲ್ಲ” ಎಂದು ತಮಗೆ ತಾವೇ ಹೇಳಿಕೊಂಡು ಕೂಲಿ ಕೊಡದ ಸಾಹುಕಾರ ಮಂದಿ. ಈ ಎಲ್ಲದರ ನಡುವೆ ಕಾಶಿಬಾ ಹಸಿವು, ಅಸಹಾಯಕತೆ, ಅಪಮಾನದಿಂದ ಕುದಿಯುತ್ತಾನೆ. ಶಾಲೆ ಕಲಿಯುವ ಬದಲು ಮೊದಲೇ ಕೂಲಿಗೆ ಹೋಗಿದ್ದರೆ ಇಷ್ಟರಲ್ಲಾಗಲೇ ವಯಸ್ಸಾದ ತಂದೆ ತಾಯಿಯರನ್ನು ಕೆಲಸ ಬಿಡಿಸಬಹುದಿತ್ತು ಎಂಬ ಆಲೋಚನೆಯೇ ಆತನನ್ನು ಸ್ವ ಮರುಕಕ್ಕೆ ಈಡು ಮಾಡುತ್ತದೆ.

ಹಸಿವು ಮತ್ತು ಬಡತನ ಊರ  ಸಾಹುಕಾರನಲ್ಲಿ ಸಾಲ ಮಾಡಲು ಪ್ರೇರೇಪಿಸುತ್ತದೆ. ಹೆಚ್ಚಿನ ಕಥೆಗಳಲ್ಲಿ ಒದಿನ ಸಲುವಾಗಿ ಪಡೆದುಕೊಂಡ ಸಾಲವು ಕುತ್ತಿಗೆಗೆ ಬಂದು ನಿಂತು ರುದ್ರ ನರ್ತನವನ್ನಾಡುವುದನ್ನು ಕಾಣಬಹುದು. ಇದರೊಟ್ಟಿಗೆ ಜಾತಿ ಎಂಬ ಪೆಡಂಬೂತವು ಕುತ್ತಿಗೆ ಹಿಸುಕುತ್ತಲೇ ಇರುತ್ತದೆ. ಯಾರೋ ಒಳ್ಳೆಯವರೆಂದು ಒಂದಿಷ್ಟು ಮೈಮರೆತರೂ ಆ ಪೆಡಂಭೂತ ಬಲಿತೆಗೆದುಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ.

ಕಲಿತ ದಲಿತ ಹುಡುಗ ಮದುವೆಯಾಗಿ ಬಂದ ಹುಡುಗಿಯ ಸೌಂದರ್ಯವನ್ನು ಆಸ್ವಾದಿಸುವ ನೆಪದಲ್ಲಿ ಮನೆಗೆ ಊಟಕ್ಕೆ ಕರೆಯುವ ಸಾಮಾಜಿಕ ಕಾರ್ಯಕರ್ತ, ಊರಿನ ಇನ್ನೊಬ್ಬ ದಲಿತರ ಮನೆಯಿಂದ ಪಾತ್ರೆ, ಬಟ್ಟಲು ತರಿಸುತ್ತಾನೆ. ತಮ್ಮೂರಲ್ಲಿ ಜಾತಿ ಪದ್ದತಿಯೇ ಇಲ್ಲ ಎಂದು ಸರಕಾರಕ್ಕೆ ಸುಳ್ಳು  ಪ್ರಮಾಣಪತ್ರ ಸಲ್ಲಿಸಿ ಸರಕಾರದಿಂದ ಸಹಾಯ ಪಡೆದು ಸನ್ಮಾನ ಮಾಡಿಸಿಕೊಳ್ಳುವ ಪ್ಲಾನ್ ಮಾಡುತ್ತಾನೆ.

ಬಡತನ, ಹಸಿವು ಹೇಗೆ ಒಂದಕ್ಕೊಂದು ತಳಕು ಹಾಕಿಕೊಂಡಿದೆ ಎಂಬುದು ಎಲ್ಲಾ ಕಥೆಗಳಲ್ಲೂ ವೇದ್ಯವಾಗುವ ಹಾಗೆ ಆ ಬಡತನದ ಕಾರಣದಿಂದ ಮಾಡುವ ಸಾಲವು ಹೇಗೆ ಸ್ವಾಭಿಮಾನವನ್ನೇ ಅಡವಿಟ್ಟುಕೊಂಡು ಅವಮಾನವನ್ನೇ  ಉಸಿರಾಡುವಂತೆ ಮಾಡುತ್ತದೆ ಎಂಬುದನ್ನು ತಿಳಿಸುತ್ತದೆ. ಮಾಡಿದ ಸಾಲವು ಕೇವಲ ಅಪಮಾನದ ಸುರುಳಿಯನ್ನೇ ಬಿಚ್ಚುವುದಷ್ಟೇ ಅಲ್ಲ,  ಹೇಗೆ ತಪ್ಪಿಲ್ಲದಿದ್ದರೂ ಹೆಣ್ಣನ್ನು ಇದರಲ್ಲಿ ಬಲಿಪಶುವನ್ನಾಗಿಸಲಾಗುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಹೇಳಲಾಗಿದೆ. ಪ್ರತಿ ಕಥೆಯೂ
ಒಂದಿಷ್ಟು  ಮಾನವೀಯತೆ ಇರುವ ಮನುಷ್ಯರ  ಹುಡುಕಾಟದಲ್ಲಿರುವಂತೆಯೇ ಭಾಸವಾಗುತ್ತದೆ.

ಮೊದಲ ಕಥೆಯಲ್ಲಿ ಬರುವ ಮಾಸ್ತರರ ಹೊರತಾಗಿ ಉಳಿದ ಯಾವ ಕಥೆಗಳಲ್ಲೂ ಈ ಹಸಿದ ದಲಿತರ ಪಾಲಿಗೆ ಮನುಷ್ಯರು ಕಾಣಸಿಗುವುದೇ ಇಲ್ಲ. ಬದಲಾಗಿ ಮನುಷ್ಯ ರೂಪಿ ಮೃಗಗಳೇ ವಿಜೃಂಭಿಸುವುದು ವಿಪರ್ಯಾಸದ. ಇಂದಿನ ಆಧುನಿಕ ಯುಗದಲ್ಲೂ  ಈ ಪರಿಸ್ಥಿತಿಯಲ್ಲಿ ಹೆಚ್ಚೇನೂ ಬದಲಾವಣೆ ಆಗದಿರುವುದೇ ಖೇದಕರ.

ಒಂದೆರಡು ಅಸ್ಪಷ್ಟ ಹಾಗೂ ಈ ಸಂಕಲನಕ್ಕೆ  ಪ್ರಸ್ತುತವಲ್ಲದ ಕಥೆಗಳನ್ನು ಹೊರತುಪಡಿಸಿದರೆ ಎಲ್ಲಾ ಕಥೆಗಳೂ ತಮ್ಮ ಸಂವೇದನೆಯ ಕಾರಣಕ್ಕಾಗಿ ಮತ್ತೆ ಮತ್ತೆ ಓದಿಸಿಕೊಳ್ಳುತ್ತವೆ.

ಅನುವಾದಿತ ಕಥೆಗಳಲ್ಲಿ ಆಸಕ್ತಿ ಇರುವವರು, ದಲಿತ ಸಂವೇದನೆಗಳ ಬಗ್ಗೆ ಒಂದಿಷ್ಟು ಮಾಹಿತಿ ಬೇಕೆನ್ನುವವರು ಈ ಪುಸ್ತಕವನ್ನೊಮ್ಮೆ ಓದಲೇಬೇಕು. ಮರಾಠಿ ಸಾಹಿತ್ಯದ ಪ್ಯಾಂಥರ್ಸ್ ಚಳುವಳಿಯ ಸ್ವರೂಪವನ್ನು ಅರಿಯಲಾದರೂ ಸಾಹಿತ್ಯದ ವಿದ್ಯಾರ್ಥಿಗಳು ಇದನ್ನು ಓದಲೇ ಬೇಕು.

7 Responses

 1. ರಾಜು ಪಾಲನಕರ ಕಾರವಾರ says:

  ಶ್ರೀದೇವಿ ಮೇಡಂ ಅವಧಿಯಲ್ಲಿ..ಬಾಬುರಾವ್ ಗಾಯಕವಾಡ ಅವರ ಮನುಷ್ನರನ್ನು ಹುಡುಕುತ್ತ ಪುಸ್ತಕದ ಕುರಿತು ನಿಮ್ಮ ವಿಮರ್ಶೆ ತುಂಬಾ ಚೆನ್ನಾಗಿದೆ ಎಲ್ಲರಿಗೂ ಮನದಟ್ಟಾಗುವ ಹಾಗೆ ವಿಮರ್ಶೆಯನ್ನು ತುಂಬಾ ಚೆನ್ನಾಗಿ ಬರೆಯುತ್ತಿರುವಿರಿ ನೀವು ನಮ್ಮ ಉತ್ತರ ಕನ್ನಡ ಜಿಲ್ಲೆಯ ಎಲ್ಲರ ಅಚ್ಚುಮೆಚ್ಚಿನ ಲೇಖಕಿಯಾಗಿರುವಿರಿ ನಿಜಕ್ಕೂ ನಿಮ್ಮ ಶ್ರೀದೇವಿ ರೆಕಮೆಂಡ್ಸ್ ಅಂಕಣ ತುಂಬಾ ಚೆನ್ನಾಗಿ ಬರುತ್ತಿದೆ ನಿಮಗೆ ಅಭಿನಂದನೆಗಳು

 2. 9448589566 says:

  ಮೆೇಡ೦ ದಲಿತರೂ.ಶೋಷಣೆಗೆ ಒಳಗಾಗೋದು.ಅಲ್ಲಿಯ ವ್ಯವಸ್ಥೆಯನ್ನು ಅವಲಂಬಿಸಿ ಪ್ರಜ್ಞಾವಂತ ನಾಗರಿಕರು ಸಮಾಜದ ಒಳಿತಿಗಾಗಿ ತಮ್ಮನ್ನು ತಾವು ಸರಿಯಾದ ರೀತಿಯಲ್ಲಿ ಅಂದರೆ ಮಾನವೀಯತೆಯ ತಳಹದಿ ಮೇಲೆ ಸಮರ್ಪಿಸಿಕೊಂಡಿದೆ ಹೌದಾಗಿದ್ದರೆ ಇಂದು ಜಾತಿ ಧರ್ಮ ಯಾವುದೆೇ ರಿೀತಿಯ ಯುದ್ಧವೇ ನಡೆಯುತ್ತಿರಲಿಲ್ಲ.ಇಂದು ಕೂಡ ಅದು ಜೀವಂತ ಇದೆ ಎಂದರೆ ಬೇರೂರಿದ ಇಂಥ ಮೂಢನಂಬಿಕೆ ಅಥವಾ ಹಿಂದಿನಿಂದ ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯಗಳು ಸುಲಭದಲ್ಲಿ ಮುರಿದು ಬೀಳಲು ಸಾಧ್ಯನಾ?????

  • Shreedevi keremane says:

   ಮುರಿದು ಬಿದ್ದರೆ ಮಾತ್ರ ಸಮಾಜದ ಬದಲಾವಣೆ ಸಾಧ್ಯ

 3. ರಮೇಶ ಗಬ್ಬೂರ್ says:

  ಕೆರೆಮನೆಯವರ ಬರಹದ ಆಪ್ತತೆಯಲ್ಲಿ ನನ್ನನ್ನು ಹುಡುಕಿಕೊಳ್ಳುತ್ತಲೇ ಕಳೆದುಹೋಗುತ್ತೇನೆ.. ಆಗಾಗ ಕಾಣಿಸುವ ಅವರ ಬದುಕ ಮತ್ತು ಬರಹ ನನ್ನಂತಹ ಪಾತ್ರಕ್ಕೂ ನ್ಯಾಯ ಒದಗಿಸುತ್ತದೆ. ಕಥೆಗಾರರ ಮೂಲ ಆಶಯಗಳಾಚೆಗೂ ಮಾನವೀಯತೆ ಮನುಷ್ಯರನ್ನು ಹುಡುಕುವ ಅವರ ವಿಮರ್ಶೆ ಬಹಳ ಆಪ್ತವಾಗುತ್ತದೆ…
  ತುಂಬಾ ಚೆನ್ನಾಗಿದೆ ಮೇಡಂ ನಿಮ್ಮ ರೆಕಮಂಡ್ಸ್… ಧನ್ಯವಾದಗಳು…
  ರಮೇಶ ಗಬ್ಬೂರ್.

 4. Lalita N Patil says:

  ” ಮನುಷ್ಯರನ್ನು ಹುಡುಕುತ್ತ” ಕಥಾ ಸಂಕಲನದ ವಿಮರ್ಶೆ ಓದಿದಾಗ ನಿಜಕ್ಕೂ ಬಡತನ ,ಹಸಿವು ಮತ್ತು ಜಾತಿ ಈಮೂರು ಪದಗಳ ಹಂಗು ಅವರ ಅರಿವಿನಾಚೆ ಸುಳಿಯುತ್ತಿದ್ದವೇನೊ ನಾವು ಚಿಕ್ಕವರಿದಗದ್ದಾಗ ಕೆಲಸಗಾರರಿಗೆ ಅಂಗಳದಲ್ಲಿ ಊಟ ಹಾಕುತ್ತಿದ್ದರು ಆದರೆ ನನ್ನ ಅಜ್ಜನಿಗೆ ಇದು ಇಷ್ಟವಾಗುತ್ತಿರಲಿಲ್ಲ ಅವರು ಮನೆಯಲ್ಲಿದ್ದಾಗ ತಮ್ಮ ಜೊತೆ ಕೂರಿಸಿಕೊಳ್ಳುತ್ತಿದ್ದರು .ಉಳಿದವರು ಸಿಡಿಮಿಡಿಗೊಳ್ಳುತ್ತಿದ್ದರು ಅರ್ಜಿಯಲ್ಲಿ ಮೊದಲು ಜಾತಿ ತಗೆದು ಹಾಕಬೇಕು .ಈ ಜಾತಿ ಗರಿಕೆಯಂತೆ ಬೆಳೆಯುತ್ತಿದೆ .ಇಲ್ಲಿ ಕಥೆಗಳ ಬಗ್ಗೆ ಓದಿ ಕಥೆ ಓದಬೇಕೆನಿಸುತ್ತದೆ ವಿಮರ್ಶಾ ಲೇಖನ ನಿಮ್ಮ ಚಂದ ಬರವಣಿಗೆಯ ಸುಂದರ ಲೋಕ

Leave a Reply

%d bloggers like this: