fbpx

ಸಿಜಿಕೆ ಉತ್ಸವದಲ್ಲಿ ಇಂದು ‘ಶಿಖಂಡಿ’

ಅಂಬೆ – ಶಿಖಂಡಿ ಮಹಾಭಾರತದ ದಿನಗಳಿಂದ ಹಿಡಿದು, ಇಂದಿಗೂ ನಮ್ಮನ್ನು ಕಾಡುವ ಪಾತ್ರಗಳು. ’ಸೋಲೆನು’ ಎನ್ನುವ ಅಂಬೆ ಮತ್ತು ಸೋಲಿಸಲೆಂದೇ ಹುಟ್ಟಿ ಬಂದ ಶಿಖಂಡಿ, ನಮ್ಮ ಸಂವೇದನೆಗಳಿಗೆ ಸವಾಲು ಹಾಕುವ ಪಾತ್ರಗಳು ಇವು.

ನಾಟಕ : ಶಿಖಂಡಿ
ನಿರ್ದೇಶಕಿ : ಫೈಝೆ ಜಲಾಲಿ
ತಂಡ : NCPA ಮತ್ತು FATS, The Arts, ಮುಂಬೈ
ನಾಟಕರಚನೆ : ಫೈಝೆ ಜಲಾಲಿ
ನಾಟಕದ ಅವಧಿ : 1 ಗಂಟೆ, 30 ನಿಮಿಷಗಳು
ಭಾಷೆ : ಇಂಗ್ಲಿಷ್

 

ನಾಟಕ 

ಶಿಖಂಡಿ ಬಹುಶಃ ಪುರಾಣದ ಮೊಟ್ಟಮೊದಲ ಟ್ರ್ಯಾನ್ಸ್ ಕ್ಯಾರೆಕ್ಟರ್. ಹಿಂದಿನ ಜನ್ಮದ ಅಪಮಾನದ ಸೇಡು ತೀರಿಸಿಕೊಳ್ಳಲು ಈ ಜನ್ಮದಲ್ಲಿ ಅಂಬೆ ಗಂಡಾಗಿ ಹುಟ್ಟಿದಳು ಎನ್ನುವುದು ಪುರಾಣ. ಆದರೆ ಅದಕ್ಕೂ ದೊಡ್ಡ ವಿಧಿಯ ಆಟವೆಂದರೆ, ಹೆಣ್ಣಾಗಿ ಹುಟ್ಟಿದ ಆಕೆಯನ್ನು ಗಂಡಿನಂತೆ ಬೆಳೆಸಲಾಗುತ್ತದೆ,

ಮದುವೆಯ ರಾತ್ರಿ, ಕಾಡಿನಲ್ಲಿ, ಯಕ್ಷನೊಬ್ಬನ ಕಾರಣದಿಂದ ಆಕೆಯ ಲಿಂಗ ಬದಲಾವಣೆ ಆಗುತ್ತದೆ, ಕಡೆಗೂ ಭೀಷ್ಮನ ಸಾವಿಗೆ ಕಾರಣವಾಗುವುದರ ಮೂಲಕ ಅವಳ ಹುಟ್ಟಿನ ಕಾರಣ ಪೂರ್ಣವಾಗುತ್ತದೆ. ಶಿಖಂಡಿಯ ಕಥೆಯನ್ನು ಇಲ್ಲಿ ಹಾಸ್ಯದ ಮೂಲಕ, ಪುರಾಣ ಮತ್ತು ಸಮಕಾಲೀನ ವಿಷಯಗಳನ್ನು ಬಳಸಿಕೊಂಡು ಹೇಳಲಾಗಿದೆ.

ನಾಟಕ ’ಗಂಡುತನ’, ’ಹೆಣ್ಣುತನ’ ಮತ್ತು ಈ ಎರಡರ ನಡುವಿನ ಅನೇಕ ಪ್ರಶ್ನೆಗಳನ್ನು ನಮ್ಮೆದುರಿಗಿಡುತ್ತದೆ. ೨೦೧೬ ರ ಸುಲ್ತಾನ್ ಪದಮ್ ಸೀ ನಾಟಕ ರಚನಾ ಪುರಸ್ಕಾರದಲ್ಲಿ ಈ ನಾಟಕ ರನ್ನರ್ ಅಪ್ ಆಗಿತ್ತು. ಇದಕ್ಕೆ ೨೦೧೭ ರಲ್ಲಿ ಅತ್ಯುತ್ತಮ ನಾಟಕ ಎಂದು ಲಾಡ್ಲೀ ಮಾಧ್ಯಮ ಪುರಸ್ಕಾರ ಸಹ ಸಿಕ್ಕಿದೆ.

ನಿರ್ದೇಶಕರ ಮಾತು

ಮಹಾಭಾರತ ಮತ್ತು ದೇವದತ್ ಪಟ್ನಾಯಕ್ ಅವರ ’ದ ಪ್ರೆಗ್ನೆಂಟ್ ಕಿಂಗ್’ ಓದುವಾಗ ನನ್ನನ್ನು ತೀವ್ರವಾಗಿ ಕಾಡಿದ ಪಾತ್ರ ಶಿಖಂಡಿಯದ್ದು. ಹಾಗಾಗಿ ನಾನು ೨೦೧೦ರಲ್ಲಿ, ಜರ್ಮನಿಯ ಬರ್ಲಿನ್ ನಲ್ಲಿ ಪ್ರದರ್ಶಿಸಲು ೨೦ ನಿಮಿಷಗಳ ಒಂದು ಏಕ ಸ್ತ್ರೀ ಪ್ರದರ್ಶನವನ್ನು ರಚಿಸಿದೆ. ಕಡೆಗೆ ೨೦೧೪ ರಲ್ಲಿ ಅದನ್ನು ಒಂದು ಪೂರ್ಣ ಪ್ರಮಾಣದ ನಾಟಕವಾಗಿಸಿದೆ.

ನಮ್ಮ ಪುರಾಣ, ಇತಿಹಾಸಗಳಲ್ಲಿ ಹಲವಾರು ಟ್ರ್ಯಾನ್ಸ್ ಜೆಂಡರ್ ವ್ಯಕ್ತಿಗಳ ಉಲ್ಲೇಖ ಕಂಡುಬರುತ್ತದೆ, ಆದರೂ ಅವರನ್ನು ನಾವು ಗುರುತಿಸುವುದಿಲ್ಲ. ಸಾಂಪ್ರದಾಯಿಕ ಫಾರ್ಮ್ ಗಳ ಮೂಲಕ ನಾಟಕ ಸಮಕಾಲೀನ ಸತ್ಯಗಳನ್ನು ಹೇಳುತ್ತಲೇ, ಲಿಂಗ ಮತ್ತು ಲೈಂಗಿಕತೆಯ ಸ್ಟೀರಿಯೋಟೈಪ್ ಮಿಥ್ಯೆಗಳನ್ನು ಒಡೆಯುತ್ತಾ, ನಮ್ಮನ್ನು ನಾವು ’ನಾನು ಯಾರು?’ ಎನ್ನುವ ಪ್ರಶ್ನೆಯನ್ನು ಕೇಳಿಕೊಳ್ಳುವಂತೆ ಮಾಡುತ್ತದೆ.

ಏಕೆಂದರೆ ನಾವೆಲ್ಲರೂ ಒಳ್ಳೆಯದು-ಕೆಟ್ಟದು, ಹೆಣ್ಣು-ಗಂಡು, ಸಂಪ್ರದಾಯ-ಆಧುನಿಕತೆ, ಪೂರ್ವ-ಪಶ್ಚಿಮ, ಕಪ್ಪು-ಬಿಳುಪು ಎಲ್ಲದರ ನಡುವಿನೆಲ್ಲೆಲ್ಲೋ ಇರುವವರು. ನಮ್ಮ ಈ ತೊಯ್ದಾಟ ನಮಗೇ ಅರ್ಥವಾದಾಗ ಪ್ರತಿಯೊಬ್ಬರನ್ನೂ ಅವರು ಇರುವಂತೆಯೇ ಒಪ್ಪಿಕೊಳ್ಳುವುದು ನಮಗೆ ಸಾಧ್ಯವಾಗುತ್ತದೆ.

ನಿರ್ದೇಶಕಿ, ನಾಟಕಗಾರ್ತಿ

ಫೈಝೆ ಜಲಾಲಿ, ನಟಿ, ನಿರ್ದೇಶಕಿ, ನಿರ್ಮಾಪಕಿ, ನೃತ್ಯ ನಿರ್ದೇಶಕಿ, ಗುರು, ಬರಹಗಾರ್ತಿ, ವೈಮಾನಕಿ ಮತ್ತು FATS ಥಿಯೇಟರ್, ಮುಂಬೈ-ನ ಸ್ಥಾಪಕಿ.

ವಿಸ್ಕಾನ್ಸಿನ್ ನ ಬೆಲಾಯ್ಟ್ ಕಾಲೇಜಿನ ಥಿಯೇಟರ್ ಆರ್ಟ್ಸ್ ವಿಭಾಗದಲ್ಲಿ ಪದವಿ ಪಡೆದ ಇವರು, ಟೆನ್ನೆಸ್ ನ ವಿಶ್ವವಿದ್ಯಾಲಯದಲ್ಲಿ ಫೈನ್ ಆರ್ಟ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತನ್ವೀರ್ ನಾಟ್ಯಧರ್ಮೆ ಪುರಸ್ಕಾರ್ ಒಳಗೊಂಡಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ’ಜಾಲ್’, ’ಆಲ್ ಇನ್ ದ ಟೈಮಿಂಗ್’, ರಿ ಲೇ, ಡ್ರೀಮ್ ಕ್ಯಾಚರ್ ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ.

Leave a Reply