fbpx

ಶಿವಶಂಕರ ಭಟ್ ಅವರಿಗೆ ಮತ್ತೊಮ್ಮೆ ನಮಸ್ಕಾರ..

ಪ್ರಿಯ ಶಿವಶಂಕರ ಭಟ್ ಅವರಿಗೆ,

ಹೇಗಿದ್ದೀರಿ ? ನಿಮ್ಮ ಪರಿಚಯ ನನಗಿಲ್ಲ. ಆದರೂ ನಿಮ್ಮೊಂದಿಗೆ ಸಂವಾದಿಸಲು ತೊಡಗಿರುವೆ.

ಇರಲಿ ,ನೀವು ಬಿ.ಎಸ್.ವೆಂಕಟಲಕ್ಷ್ಮಿಯವರನ್ನು ಪ್ರಸ್ತಾಪಿಸಿ ನಾನೊಬ್ಬ ಲೇಖಕನಾಗಿ ಲಂಕೇಶ್ ಅವರಿಗೆ ಅಷ್ಟು ಅಂಟಿಕೊಳ್ಳಬಾರದು ಎಂದು ಅವರು ಹೇಳಿರುವುದನ್ನು ದಾಖಲಿಸಿದ್ದೀರಿ.ಅದನ್ನು ಗೌರವಿಸುವೆ.

ಆದರೆ ಸಮಸ್ಯೆ ಇರುವುದು; ಬಿ.ಎಸ್.ವಿ ಅವರು ನೋಡಿದ ರೀತಿಯಲ್ಲಿ ನಾನು ಲಂಕೇಶ್ ಅವರನ್ನು ನೋಡಬೇಕಾಗಿಲ್ಲ. ಅವರ ರೀತಿಯಲ್ಲಿ ಒಬ್ಬ ಪ್ಯೂರಿಟಾನ್ ನೋಟದ ಮೂಲಕ ಯಾರನ್ನೂ ನೋಡಬಾರದು ಎಂಬುದು ನನ್ನ ಧೋರಣೆ. ಈ ವ್ಯಕ್ತಿತ್ವ ಅವರಲ್ಲಿ ಗಾಢವಾಗಿ ಇದ್ದುದರಿಂದ ಯಾವ ಮಹಿಳಾ ಲೇಖಕಿಯ ಜೊತೆಯಲ್ಲಿ ಸಂಬಂಧವನ್ನು ಕಾಪಾಡಿಕೊಳ್ಳಲಿಲ್ಲ. ಸದಾ ವಿಕ್ಷಿಪ್ತತೆಯಿಂದ ನರಳುತ್ತಿದ್ದರು.

ಒಂದು ಬಹುಮುಖಿ ಸಮಾಜದಲ್ಲಿ ಲೇಖಕ ಅಥವಾ ಲೇಖಕಿ ವಿಭಿನ್ನ ಮನಸ್ಸುಗಳನ್ನು ಒಳಗೆ ಬಿಟ್ಟುಕೊಂಡು ಗ್ರಹಿಸಲು ನಿರಂತರ ಪ್ರಯತ್ನಶೀಲರಾಗಿರಬೇಕು. ಇದನ್ನು ಮಗುಮ್ ಆಗಿ ಸ್ವೀಕರಿಸಿ ಪುರುಷರ ಜೊತೆ ಮಿಕ್ಸ್ ಆದಷ್ಟು ಮಹಿಳೆಯರ ಜೊತೆಯಲ್ಲಿ ಆಗುತ್ತಿರಲಿಲ್ಲ.

ಇದನ್ನು ರೋಜ ಲುಕ್ಸಮ್ ಬರ್ಗ್ ಅವರ ಪತ್ರಗಳನ್ನು ಅನುವಾದಿಸಿ ‘ಶೂದ್ರ’ದಲ್ಲಿ ಪ್ರಕಟಿಸುವಾಗ ಮತ್ತು ಸಿಮನ್ ದಿ ಬುವಾಹಿರ್ ಅವರ ‘ಸೆಕೆಂಡ್ ಸೆಕ್ಸ್ ‘ ಕುರಿತು ಅವರಿಂದ ಬರೆಸಲು ಪ್ರಯತ್ನಿಸಿದಾಗ ಅನುಭವಿಸಿರುವೆ. ಅತ್ಯಂತ ಸೂಕ್ಷ್ಮ ಸಂವೇದನೆಯ ಲೇಖಕಿ. ‘ಶೂದ್ರ’ದ ಲೇಖನಗಳ ಮೂಲಕ ಲಂಕೇಶ್ ಗೆ ಪರಿಚಯವಾದವರು. ಅಲ್ಲಿ ಅತ್ಯಂತ ಚೆನ್ನಾಗಿ ಬರೆದರು.

ಇದೇ ಸಮಯದಲ್ಲಿ ಬಿ.ಎಸ್.ವಿ ಯವರು ಇಸಡಾರ ಡಂಕನ್ (ಗ್ರೇಟ್ ಡ್ಯಾನ್ಸರ್)ಳ ‘ ಮೈ ಲೈಫ್ ‘ ಕೃತಿಯನ್ನು ಅನುವಾದಿಸಿ ಪ್ರಕಟಿಸಿದರು. ಪ್ರತಿವಾರ. ಪರೋಕ್ಷವಾಗಿ ಅದು ಅನುವಾದಗೊಳ್ಳುವುದಕ್ಕೆ ಕೆ.ಎಸ್.ಅರುಣ ಮತ್ತು ನಾನು ಕಾರಣ. ಇರಲಿ ,ಇದ್ದಕ್ಕಿದ್ದಂತೆ ಮುನಿಸಿಕೊಂಡು ಬಿ.ಎಸ್.ವಿ
ಅವರು ಪತ್ರಿಕೆಯಿಂದ ಹೊರಬಂದರು.

ಇದನ್ನು ನಾನು ಊಹಿಸಿದ್ದೆ. ಯಾಕೆಂದರೆ, ಅವರ ಮಾನಸಿಕ ಒದ್ದಾಟ ಆ ರೀತಿಯದಾಗಿತ್ತು. ಈ ನೆಲೆಯಲ್ಲಿ ಅವರನ್ನು ಸಾಕ್ಷಿಭೂತವಾಗಿ ತೆಗೆದುಕೊಳ್ಳಲು ಆಗುತ್ತಿರಲಿಲ್ಲ. ಇದೇ ಸಮಯದಲ್ಲಿ ರಾಜಲಕ್ಷ್ಮಿ ಎನ್.ರಾವ್ ಅವರ ಜೊತೆ ನಡೆಸಿದ ಸಂವಾದ ಚಾರಿತ್ರಿಕವಾದದ್ದು. ಅದನ್ನು ಈಗಲೂ ಹೇಗೆ ದಾಖಲಿಸುವುದೆಂದು ಒದ್ದಾಡುತ್ತಿರುವೆ. ಲಂಕೇಶ್ ಅವರಷ್ಟೇ ವೈರುಧ್ಯಗಳನ್ನು ತುಂಬಿಕೊಂಡಿದ್ದ ಲೇಖಕಿ.
ಅವರ ಓದಿನ ದಾಹ ಅಷ್ಟೇ ತೀವ್ರವಾಗಿತ್ತು.

ಶಿವಶಂಕರ ಭಟ್ಟರೆ, ಲಂಕೇಶ್ ಪತ್ರಿಕೆ ಕೆಲವು ದೋಷಗಳ ನಡುವೆಯೂ ಅದ್ಭುತ ಕೆಲಸವನ್ನು ಮಾಡಿದೆ. ಅದನ್ನು ಇಲ್ಲಿ ಪಟ್ಟಿಮಾಡಲು ಹೋಗುವುದಿಲ್ಲ. ಕೆಲವು ಕೃತಿಗಳ ಬಗ್ಗೆ ಮತ್ತು ಲೇಖಕರನ್ನು ಕುರಿತು ನಿರ್ದಾಕ್ಷಿಣ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ಅದಕ್ಕೆ ಸಂಬಂಧಪಟ್ಟವರು ತೀವ್ರವಾಗಿ ಪ್ರತಿಕ್ರಿಯಿಸಬಹುದಾಗಿತ್ತು. ಹಾಗೆ ನೋಡಿದರೆ ನಾನೇ ನನ್ನ ‘ನಗರ ಸ್ಪಂದನ’ ಅಂಕಣ ಬರಹದಲ್ಲಿ ಅವರನ್ನು ತಮಾಷೆ ಮಾಡಿ ಬರೆದಿದ್ದರೂ ಎಂದೂ ಒಂದೇ ಒಂದು ಶಬ್ದವನ್ನು ಎಡಿಟ್ ಮಾಡಿದವರಲ್ಲ.

ಜೊತೆಗೆ ಎಲ್ಲಾ ಜಾತಿಯವರೊಡನೆ ಮಿಕ್ಸ್ ಆಗುವುದನ್ನು ನಮಗೆ ಕಲಿಸಿದರು. ಯಾವಾಗಲೂ ತಮ್ಮ ತಮ್ಮ ಜಾತಿಯವರನ್ನು ಕರೆದುಕೊಂಡು
ಹೋದರೆ ಛೀಮಾರಿ ಹಾಕುತ್ತಿದ್ದರು. ಅದನ್ನು ಕೆಲವರು ಅನು‌ಭವಿಸಿದ್ದಾರೆ. ಅವರ‌ ಬಳಿ ನೀವು ಹೇಳುವ ರೀತಿಯಲ್ಲಿ
ತೇಜೋವದೆ ಮಾಡುವ ಆಸ್ಥಾನ ವಿಮರ್ಶಕರು ಇರಲಿಲ್ಲ.

ಭಟ್ಟರೆ, ನೀವು ಕೆಲವು ವಿಷಯಗಳ ಬಗ್ಗೆ ತುಂಬಾ ಸೆನ್ಸಿಟೀವ್ ಆಗಿ ಸಾಕಷ್ಟು ಗುಮಾನಿಗಳನ್ನು ತುಂಬಿಕೊಂಡಿದ್ದೀರಿ. ಅದರಿಂದ ನಿಮಗೆ ಲಂಕೇಶ್ ಅಂತಹವರನ್ನು ಸರಳವಾಗಿ ನೋಡಲು ಆಗದೇ ಹೋಗಿದೆ. ನನಗೆ ಬದುಕನ್ನು ನೋಡುವುದನ್ನು ಕಲಿಸಿದ್ದಾರೆ. ಅವರ ಜೊತೆ ಕರ್ನಾಟಕದ ಉದ್ದಗಲಕ್ಕೂ ಸುತ್ತಾಡಿದ್ದೇನೆ. ಅದರ ಅನುಭವವನ್ನು ಇಲ್ಲಿ ದಾಖಲಿಸಿದರೆ ನೀವು ನಂಬದೇ ಹೋಗಬಹುದು.

ಮಾನವೀಯ ಗುಣಗಳನ್ನು ದಟ್ಟವಾಗಿ ಹೊಂದಿದ್ದವರು. ಇದರ ಜೊತೆಗೆ ಅವರಲ್ಲಿದ್ದ ವೈರುಧ್ಯಗಳನ್ನು ಪಟ್ಟಿಮಾಡಿ ತೋರಿಸುವ ಕೆಲಸಕ್ಕೆ ನಾನು ಹೋಗುವುದಿಲ್ಲ. ಆದ್ದರಿಂದಲೇ ಅವರು ಗುಣಮುಖ, ಸಂಕ್ರಾಂತಿ, ಈಡಿಪಸ್, ಬೋದಿಲೇರ್ ನ ಪಾಪದ ಹೂಗಳು, ಕಲ್ಲು ಕರಗುವ ಸಮಯದಂತಹ ಕೃತಿಗಳನ್ನು ಕೊಡಲು ಸಾಧ್ಯವಾಗಿದ್ದು.

ನನ್ನ ಅರಿವಿನ ಮಿತಿಯಲ್ಲಿ ಕುವೆಂಪು, ಅನಂತಮೂರ್ತಿಯವರ ನಂತರ ಗ್ರೇಟೆಸ್ಟ್ ಗದ್ಯ ಬರಹಗಾರರು. ಇಂಥವರನ್ನು ಅವರ ಪತ್ರಿಕೆ ಬರುವ ಕೆಲವು ವರ್ಷಗಳ ಮುನ್ನ ಆಗತಾನೆ  ಒಂದಷ್ಟು ವರ್ಷಗಳ ಹಿಂದೆ ಹುಟ್ಟಿದ್ದ ದಿನ ಪತ್ರಿಕೆಯಲ್ಲಿ ನಾಲ್ಕೈದು ದಿವಸ ಲಂಕೇಶ್ ಅವರಿಗೆ ಕನ್ನಡ ಬರೆಯಲು ಬರುವುದಿಲ್ಲ ಎಂದು ಕೆಲವು ಲೇಖಕರಿಂದ ಬರೆಸಿದ್ದರು. ಅದಕ್ಕೆ ಅವರು ಎಷ್ಟು ತಲ್ಲಣಗೊಂಡಿದ್ದರು. ಆಗ ‘ಶೂದ್ರ’ದಲ್ಲಿ ಪ್ರತಿಕ್ರಿಯಿಸಲು ಕಿ.ರಂ ಸಿದ್ಧತೆ
ನಡೆಸಿದಾಗ ಲಂಕೇಶ್ ಅವರು ಅದಕ್ಕೆ ಅವಕಾಶ ಕೊಡಲಿಲ್ಲ.

ಅತ್ಯಂತ ತೀವ್ರವಾಗಿ ಬದುಕುತ್ತಲೇ ಬರವಣಿಗೆಯ ವಿವಿಧ ಸಾಧ್ಯತೆಗಳ ಕುರಿತು ನಿರಂತರ ತಹತಹವನ್ನು ತುಂಬಿಕೊಂಡಿದ್ದವರು. ಅವರ ಚಿಂತನೆಯ ಹುಡುಕಾಟ ವಿಚಿತ್ರವಾದದ್ದು. ಆದ್ದರಿಂದಲೇ ಸದಾ ಒಂದು ವಿಧದ ಅತೃಪ್ತಿಯನ್ನು ತುಂಬಿಕೊಂಡಿದ್ದರು. ಅದು ಅರಿವಿನ ನೆಲೆಗಳಿಗೆ ಸಂಬಂಧಿಸಿದ್ದು. ಅತ್ಯಂತ ಮಿತಭಾಷಿಯಾದ ಅವರು ಬೇರೆಯವರ ಮಾತನ್ನು ಗಂಭೀರವಾಗಿ ಕೇಳಿಸಿಕೊಳ್ಳುತ್ತಿದ್ದರು. ಅನಗತ್ಯ ಮಾತುಕತೆಗೆ ಅವಕಾಶವೇ ಇರುತ್ತಿರಲಿಲ್ಲ. ಈ ಮಾತು ಭಟ್ಟರೆ, ನಿಮಗೆ ಆರಾಧನೆಯ ರೂಪದಲ್ಲಿ ಕಂಡರೆ ದಯವಿಟ್ಟು ಕ್ಷಮಿಸಿ.

‘ಜಾಗೃತ ಸಾಹಿತ್ಯ ಸಮಾವೇಶ ‘ ಅತ್ಯಂತ ಚಾರಿತ್ರಿಕವಾದಂತಹದ್ದು. ಅದರಲ್ಲಿ ಎಂತೆಂತಹ ಗಂಭೀರ ಲೇಖಕರು, ಕಲಾವಿದರು, ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು ಭಾಗಿಯಾದರು. ಅಡಿಗರು, ಶಾಂತಿನಾಥ ದೇಸಾಯಿ, ರಾಮಚಂದ್ರ ಶರ್ಮ, ಯಶವಂತ ಚಿತ್ತಾಲ, ಅನುಪಮ ನಿರಂಜನ,  ಕೆ.ವಿ. ಸುಬ್ಬಣ್ಣ ಮುಂತಾದ ಎಷ್ಟೋ ಮಂದಿ ಸಂಭ್ರಮದಿಂದ ಭಾಗವಹಿಸಿದ್ದೇ ಅಪೂರ್ವ ಅನುಭವ. ಕಿ.ರಂ., ಡಿ.ಆರ್ ಮತ್ತು ನಾನು ಸಂಚಾಲಕರಾಗಿದ್ದರೂ ಅದರ ಹಿಂದೆ ಇದ್ದ ಚೈತನ್ಯ ಲಂಕೇಶ್ ಮತ್ತು ಅನಂತಮೂರ್ತಿ ಯವರದ್ದು.

ಇನ್ನು ಭಟ್ಟರೆ, ನೀವು ಹೇಳಿದಂತೆ ಕಲಾಕ್ಷೇತ್ರದಲ್ಲಿ ಅನಂತಮೂರ್ತಿಯವರ‌ ಸನ್ಮಾನದ ಸಮಯದಲ್ಲಿ ಲಂಕೇಶ್ ಅವರಿಂದ ಅವಮಾನಕ್ಕೆ ಒಳಗಾಗಿ ಮಧ್ಯದಲ್ಲಿಯೇ ಅನಂತಮೂರ್ತಿಯವರು ಎದ್ದು ಹೋದದ್ದನ್ನು ಪ್ರಸ್ತಾಪಿಸಿದ್ದೀರಿ. ಅದು ನಡೆದದ್ದು ರೇಸ್ ಕೋರ್ಸ್ ನ ಕ್ಲಬ್ ನಲ್ಲಿ. ಅಂದು ನಿಜವಾಗಿಯೂ ಲಂಕೇಶ್ ಅವರು ಅತ್ಯಂತ ಕೆಟ್ಟದಾಗಿ ನಡಕೊಂಡರು .ನಾವೆಲ್ಲರೂ ಅನಂತಮೂರ್ತಿಯವರ ಪರ ನಿಂತು ಲಂಕೇಶ್ ಅವರಿಗೆ ಛೀಮಾರಿ ಹಾಕಿದೆವು. ಇದಕ್ಕಾಗಿ ಲಂಕೇಶ್ ಅವರೂ ಸಾಕಷ್ಟು ಒದ್ದಾಡಿದ್ದರು. ಅನಂತಮೂರ್ತಿಯವರ ಬಗ್ಗೆ ಎಷ್ಟು ಅಭಿಮಾನವಿತ್ತೋ ಅಷ್ಟೇ ಅಸೂಯೆಯೂ ಇತ್ತು. ಸುಮಾರು ನಾಲ್ಕು ದಶಕಗಳ ಹಿಂದೆ ದೇವನೂರು ಮಹಾದೇವ ಅವರು ಕನ್ನಡ ಸಾಹಿತ್ಯ ಸಂದರ್ಭದ ಸವತಿಗಳು ಎಂದು ಹೇಳಿದ್ದು ಈ ಅರ್ಥದಲ್ಲಿ.

ಒಂದು ಬಹು ದೊಡ್ಡ ಸಾಹಿತ್ಯ ಸಂದರ್ಭದಲ್ಲಿ ಎಂತೆಂಥ ಪ್ರಜ್ಞಾವಂತರ ನಡುವೆ ಏನೇನೋ ನಡೆದು ಹೋಗಿರುತ್ತದೆ. ಅದಕ್ಕೆಲ್ಲ ಅವರನ್ನು  ಕಟಕಟೆಯಲ್ಲಿ ನಿಲ್ಲಿಸಿ ತೀರ್ಪುಕೊಡಲು ಹೋಗಬಾರದು. ಯಾಕೆ ಹೀಗೆಲ್ಲ ನಡೆಯುತ್ತದೆ ಎಂದು ಗ್ರಹಿಸಲು ಪ್ರಯತ್ನಿಸಬೇಕು. ಆಗ ಮಾತ್ರ ಅತ್ಯಂತ ಅನನ್ಯಭಾವದಿಂ‌ದ ಆ ಸಂದರ್ಭವನ್ನು  ನೋಡಲು ಸಾಧ್ಯ.

ಅನಂತಮೂರ್ತಿ ಬಗ್ಗೆ 50 ವರ್ಷಗಳ ಬಹುದೊಡ್ಡ ಕಾರ್ಯಕ್ರಮವನ್ನು ಬೆಂಗಳೂರಿನ ಸೆನೆಟ್ ಭವನದಲ್ಲಿ ನಡೆಸಿದೆವು. ಅದಕ್ಕೆ ಮುಖ್ಯ ಕಾರಣ: ಲಂಕೇಶ್ ಅವರು. ಅಲ್ಲಿಯ ಚರ್ಚೆ ವಾಗ್ವಾದಗಳನ್ನು ಕಂಡು ಪ್ರಜಾವಾಣಿಯ ಹರಿಕುಮಾರ್ ಅವರು ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದರು.

ಸಾಹಿತ್ಯದ ಉತ್ತುಂಗ ಆರಾಧಕರಾಗಿದ್ದ ಲಂಕೇಶ್ ಅವರು ಸಾಹಿತ್ಯಕ್ಕೆ ವಿರುದ್ಧ ಎನ್ನುವ ರೀತಿಯಲ್ಲಿ ಪತ್ರಿಕೆ ಬರಲು ಪ್ರಾರಂಭವಾಯಿತು. ಆಗ ಡಿ.ಆರ್ ಮತ್ತು ನಾನು ಅದರ ಬಗ್ಗೆ ಸೂಚಿಸಿದಾಗ ನಮಗೆ ಛೀಮಾರಿ ಹಾಕಿದ್ದರು. ಆದರೆ ಶೂದ್ರದ ಹದಿನೈದನೆಯ ವರ್ಷದ ಕಾರ್ಯಕ್ರಮದಲ್ಲಿ ಮೂರೂ ದಿವಸವೂ ಸಂಭ್ರಮದಿಂದ ಭಾಗವಹಿಸಿದ್ದರು. ಜೊತೆಗೆ ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರು ಇಲ್ಲದಿದ್ದರೂ ಕವಿಗೋಷ್ಟಿಯಲ್ಲಿ
ಕೆ.ಎಸ್.ನರಸಿಂಹ ಸ್ವಾಮಿಯವರು ಅಧ್ಯಕ್ಷತೆ ವಹಿಸಿದ್ದರು. ಅದನ್ನು ಸಿ.ಆರ್.ಸಿಂಹ ಅವರು ನಿರೂಪಿಸುತ್ತಿದ್ದರು. ಆಗ ಲಂಕೇಶ್ ಅವರು ಸಭಿಕರ ಮಧ್ಯದಿಂದ ಒಂದು ಚೀಟಿ ಕಳಿಸಿದರು. “ನಾನೂ ಒಂದು ಕವಿತೆ ಓದಬಹುದಾ ?” ಎಂದು. ಆಗ ಡಿ.ಆರ್ ಮತ್ತು ಟಿ.ಎನ್.ಸೀತಾರಾಂ ಕೆ.ಎಸ್.ನ ಅವರಿಗೆ ಆ ಚೀಟಿ ಕೊಟ್ಟಾಗ ಅವರು ಅಭಿಮಾನದಿಂದ ಬರಮಾಡಿಕೊಂಡರು.

ಆಗ ಲಂಕೇಶ್ಅವರು ಯವನಿಕಾದ ವೇದಿಕೆಯ ಮೇಲೆ ಬರದೆ ವೇದಿಕೆಯ ಮುಂದಿನ ಭಾಗದಲ್ಲಿ ನಿಂತು ‘ಅವ್ವ- 2’ ಕವಿತೆಯನ್ನು ಓದಿದರು. ಮೂರನೆಯ ದಿನ ಕೊನೆಯಲ್ಲಿ ಉಸ್ತಾದ್ ಬಾಲೇಖಾನ್ ಅವರ ಸಂಗೀತವನ್ನು ಬಿಳಿಗಿರಿ ಮತ್ತು ಶಂಕರ ಮೊಕಾಶಿ ಪುಣೇಕರ್ ಅವರ ಪಕ್ಕದಲ್ಲಿ ಕೂತು ಆಲಿಸಿದ್ದರು. ಜೊತೆಗೆ ಕಪ್ಪಣ್ಣ ಅವರಿಗೆ ಹಿಂದಿನ ದಿವಸವೇ ತಿಳಿಸಿ ಬಸವನ ಗುಡಿಯ ಒಂದು ಛತ್ರದಲ್ಲಿ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದ್ದರು. ಡ್ರಿಂಕ್ಸ್ ಸಮೇತ.

ಪ್ರಿಯ ಭಟ್ಟರೆ, ಇಂತಹದಕ್ಕೆ ಹೊಂದಿಕೊಂಡಂತೆ ಏನೇನೋ ಹೇಳಬಹುದು. ಆದರೆ ಒಂದಂತೂ ನಾವೆಲ್ಲರೂ ಅರಿಯಬೇಕು. ನಾವು ಪರಿಪೂರ್ಣರು ಎಂಬ ಅಹಂ ನಮ್ಮಲ್ಲಿ ಬಂದಾಗ ಅಂದೇ ನೈತಿಕವಾಗಿ, ಸಾಮಾಜಿಕವಾಗಿ ಸತ್ತಿರುತ್ತೇವೆ. ಭಟ್ಟರೆ ಎಂದಾದರು ಸಿಗಲು ಪ್ರಯತ್ನಿಸಿ. ಆಗ ನಮ್ಮ ಮುಖಗಳೇ ಒಂದಷ್ಟು ಮುಖಾಮುಖಿ ಮಾತಾಡಿಕೊಳ್ಳಲಿ.

ನಿಮ್ಮ ,      

ಶೂದ್ರ ಶ್ರೀನಿವಾಸ್

2 Responses

 1. Prasad says:

  Beautifully written…

 2. ಶಿವಶಂಕರ ಭಟ್ಟ says:

  ಹಿರಿಯರಾದ ಶೂದ್ರ ಶ್ರೀನಿವಾಸರಿಗೆ ನಮಸ್ಕಾರಗಳು–
  ೧.ನಾನು ಬಿ.ಎಸ್. ವೆಂಕಟಲಕ್ಷ್ಮಿ ಅವರ ಲೇಖನವನ್ನು ಪ್ರಸ್ತಾಪಿಸಿದ್ದು ಲಂಕೇಶ್ ಮತ್ತು ನಿಮ್ಮ ನಡುವಿನ ಆಪ್ತತೆಗೆ ಒಂದು ದಾಖಲೆಗಾಗಿ ಅಷ್ಟೇ. ಏಕೆಂದರೆ ನಮ್ಮ ನಡುವಿನ ಮಾತು ಕೇವಲ ‘ಕಾಲಕ್ಷೇಪ’ವಾಗಬಾರದೆಂದು ನಂಬಿರುವವನು ನಾನು. ಅದನ್ನು ಬಿಟ್ಟು ಬಿ.ಎಸ್.ವಿ. ಅವರ ವ್ಯಕ್ತಿತ್ವದ ವಿಮರ್ಶೆ ಬಗ್ಗೆ ಅಲ್ಲ. ಶಂಕರ ಮೊಕಾಶಿ ಪುಣೇಕರರನ್ನೂ ಸಹ ವಿಕ್ಷಿಪ್ತ ವ್ಯಕ್ತಿ ಎಂದು ಅವರ ಶಿಷ್ಯರೇ ಲೇಖನ ಬರೆದಿದ್ದಾರೆ. ಹಾಗೆ ನೋಡಿದರೆ ನಾವೆಲ್ಲರೂ ಇನ್ನೊಬ್ಬರಿಗೆ ವಿಕ್ಷಿಪ್ತ ವ್ಯಕ್ತಿಗಳಾಗಿ ಕಾಣಬಹುದು. ಬಿ.ಎಸ್.ವಿ. ಅವರು ನೋಡಿದ ರೀತಿಯಲ್ಲೇ ನೀವು ಲಂಕೇಶರನ್ನು ನೋಡಬೇಕಾಗಿಲ್ಲ. ಅದು ಸರಿಯಾದ ಮಾತು. ನಿಮ್ಮ ಆ ಮಾತೇ ನಾವುಗಳು ಒಬ್ಬರಂತೆ ಮತ್ತೊಬ್ಬರಿಲ್ಲ ಎಂಬುದಕ್ಕೆ ಪುರಾವೆ.
  ೨. ಲಂಕೇಶ್ ಪತ್ರಿಕೆಯಲ್ಲಿ ಬರುತ್ತಿದ್ದ ‘ಕೆಲವು ಕೃತಿಗಳ ಮತ್ತು ಲೇಖಕರನ್ನು ಕುರಿತ ನಿರ್ದಾಕ್ಷಿಣ್ಯ’ ವಾದ ಪ್ರತಿಕ್ರಿಯೆಗಳ ಬಗ್ಗೆ ಬಹು ಹಿಂದೆಯೇ ಮಲ್ಲಾಡಿಹಳ್ಳಿಯಿಂದ ರಾಘವೇಂದ್ರ ಪಾಟೀಲರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ‘ಸಂವಾದ’ ಎಂಬ ಸಾಹಿತ್ಯ ಪತ್ರಿಕೆಯಲ್ಲಿ ಸ್ವತಃ ರಾಘವೇಂದ್ರ ಪಾಟೀಲರೇ ಲಂಕೇಶರ ವಿಮರ್ಶಾ ಪ್ರಜ್ಞೆಯ ಬಗ್ಗೆ ಹಾಗೂ ಲಂಕೇಶ್ ಪತ್ರಿಕೆಯಲ್ಲಿ ಬರುತ್ತಿದ್ದ ವಿಮರ್ಶೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ತಾವು ಆ ಲೇಖನ ಓದಿರಬಹುದು. ಲಂಕೇಶ್ ಪತ್ರಿಕೆಯ ಆಸ್ಥಾನ ವಿದ್ವಾಂಸರು/ವಿಮರ್ಶಕರು ಎಂದು ನಾನು ಬರೆದದ್ದು ತಮಗೆ ತಪ್ಪಾಗಿ ಕಂಡರೆ ಲಂಕೇಶರ ಪ್ರಿಯ ಶಿಷ್ಯರು ಎಂದು ಓದಿಕೊಳ್ಳಬಹುದು.
  ೩.’ಲಂಕೇಶ್ ಪತ್ರಿಕೆ ಕೆಲವು ದೋಷಗಳ ನಡುವೆಯೂ ಅದ್ಭುತ ಕೆಲಸಮಾಡಿದೆ’ ಎಂದಿರುವಿರಿ. ‘ಆ ಅದ್ಭುತ ಕೆಲಸವನ್ನು’ ಸಾಹಿತ್ಯಾಸಕ್ತರು ‘ ಅವರವರ ಭಾವಕ್ಕೆ ಅವರವರ ಭಕುತಿ’ಗೆ ತಕ್ಕಂತೆ ಪರಿಭಾವಿಸಿಕೊಳ್ಳಲಿ.
  ೪.ನಮ್ಮ ಕಾಲದ ಬಹುಪಾಲು ಸಾಹಿತಿಗಳ, ಚಿಂತಕರ ಜತೆ ತಮಗೆ ವಿಸ್ತಾರವಾದ ಒಡನಾಟವಿತ್ತು. ಅದು ಈಗಲೂ ಮುಂದುವರೆದಿದೆ. ಅದರ ಬಗ್ಗೆ ನನಗೆ ನಿಮ್ಮ ಮೇಲೆ ಅಪಾರವಾದ ಗೌರವವಿದೆ. ಎಲ್ಲರಿಗೂ ದೊರಕುವಂತಹುದಲ್ಲ ಅಂತಹ ಒಡನಾಟದ ಭಾಗ್ಯ

Leave a Reply

%d bloggers like this: