ನಾವು ಅಂದು ಓಡುತ್ತಲೇ ಇದ್ದೆವು.

31

‘ಪಾರ್ಕಿಂಗ್ ಪ್ರಹಸನಗಳೆಂಬ ಮುಗಿಯದ ಸಾಹಸಗಳು”

ನಾವು ಅಂದು ಓಡುತ್ತಲೇ ಇದ್ದೆವು.

ಅದು ಮ್ಯಾರಥಾನ್ ಆಗಿರಲಿಲ್ಲ. ಮುಂಜಾನೆಯ ಜಾಗಿಂಗ್ ಕೂಡ ಆಗಿರಲಿಲ್ಲ. ನಡುಮಧ್ಯಾಹ್ನದ ಸೂರ್ಯ ನೆತ್ತಿಯ ಮೇಲೆ ಸುಡುತ್ತಿದ್ದ. ನೂರಾರು ವಾಹನಗಳು ಎಡೆಬಿಡದೆ ಜನನಿಬಿಡ ಶಹರದ ಮುಖ್ಯರಸ್ತೆಯಲ್ಲಿ ಸಾಗುತ್ತಿದ್ದವು. ಇನ್ನು ಇವೆಲ್ಲವುಗಳನ್ನು ಸಂಭಾಳಿಸುತ್ತಾ ಆಕ್ಷನ್ ಚಿತ್ರದ ಹೀರೋಗಳಂತೆ ನಾವು ಗಡಿಬಿಡಿಯಿಂದ ಓಡುತ್ತಿದ್ದೆವು.

ಆಕ್ಷನ್ ಚಿತ್ರಗಳಲ್ಲಿ ಪೋಲೀಸರ ವಾಹನಗಳು ಇತರರ ವಾಹನಗಳನ್ನು ಬೆನ್ನಟ್ಟಿ ಹೋಗುವುದು ಸಾಮಾನ್ಯ. ಆದರೆ ಇಲ್ಲಿ ಮಾತ್ರ ಕಥೆಯು ಉಲ್ಟಾ ಹೊಡೆದಂತೆ ನಾವು ಪೋಲೀಸರ ಟ್ರಕ್ ಒಂದನ್ನು ಬೆನ್ನಟ್ಟುತ್ತಿದ್ದೆವು. ನನ್ನ ಜೊತೆ ಪೋಲೀಸರ ಲಾರಿಯನ್ನು ಬೆನ್ನಟ್ಟುತ್ತಿದ್ದ ಉಳಿದಿಬ್ಬರಿಗೆ ಏನನ್ನಿಸುತ್ತಿತ್ತೋ ಗೊತ್ತಿಲ್ಲ. ಆದರೆ ನನಗಂತೂ ಅದು ಸಾವು-ಬದುಕಿನ ಪ್ರಶ್ನೆಯಂತೆ ಕಂಡಿದ್ದು ಸತ್ಯವೇ.

ನೀವೇನೇ ಹೇಳಿ. ನಡುಮಧ್ಯಾಹ್ನದ ವೇಳೆಯಲ್ಲಿ ಊಟವೊಂದನ್ನು ಬಿಟ್ಟರೆ ಆಪ್ಯಾಯಮಾನವೆನಿಸುವುದು ನಿದ್ದೆ ಮಾತ್ರ. ಹಾಗಿರುವಾಗ ಓಟವೆಂಬುದು ಅದೆಷ್ಟು ತ್ರಾಸವನ್ನು ತರಿಸಲಿಕ್ಕಿಲ್ಲ? ಅದರಲ್ಲೂ ಕಾಂಕ್ರೀಟ್ ಕಾಡುಗಳಂತಹ ಶಹರಗಳಲ್ಲಿ ಸೂರ್ಯ ನೆತ್ತಿಯ ಮೇಲಿದ್ದಾಗ ಓಡಾಡುವುದೆಂದರೆ ಅದ್ಯಾವ ಶಿಕ್ಷೆಗೂ ಕಮ್ಮಿಯಿಲ್ಲ. ಗುರುಗ್ರಾಮದಂತಹ ಶಹರಗಳಲ್ಲಿ ಇಂಥಾ ಸ್ಥಿತಿಯನ್ನು ನಾನು ಈ ಹಿಂದೆ ಅನುಭವಿಸಿದ್ದುಂಟು. ಪ್ರಾಣ ಹೋಗುತ್ತಿದ್ದರೂ ಕೊಂಚ ನೆರಳಿನಲ್ಲಿ ಜೀವ ಬಿಡೋಣವೆಂದು ಹಾತೊರೆದರೆ ಇಲ್ಲಿ ಒಂದೇ ಒಂದು ಗಿಡವೂ ಕಣ್ಣಿಗೆ ಬೀಳದು.

ಹಾಗೆ ನೋಡಿದರೆ ಈ ನಿಟ್ಟಿನಲ್ಲಿ ಗುರುಗ್ರಾಮಕ್ಕಿಂತ ಅದರ ಬಗಲಿನಲ್ಲಿರುವ ದೆಹಲಿಯೇ ವಾಸಿ. ಲುವಾಂಡಾದ ಕೆಲ ಭಾಗಗಳು ನನಗೆ ಆಗಾಗ ಗುರುಗ್ರಾಮದ ಬೇಸಿಗೆಯ ಬಿಸಿಕಾವಲಿಯಂತಹ ದಿನಗಳನ್ನೇ ನೆನಪಿಸುವುದುಂಟು. ಅಂಗೋಲಾದ ಇತರ ಭಾಗಗಳಲ್ಲಿ ಕಾಣುವ ಹಸಿರಿನ ಜಾತ್ರೆ, ಮಳೆಯ ಆಹ್ಲಾದಗಳು ಲುವಾಂಡಾದಲ್ಲಿ ಕಾಣಸಿಗುವುದು ತೀರಾ ಕಮ್ಮಿ. ಅಲ್ಲೇನಿದ್ದರೂ ಧೂಳು, ಧಗೆ, ಟ್ರಾಫಿಕ್ ನದ್ದೇ ಅಟ್ಟಹಾಸ. ಈ ಬಾರಿ ಲುವಾಂಡಾದಲ್ಲಿ ಹೆಚ್ಚಿನ ಮಳೆಯಾಯಿತೆಂದು ಕೇಳಿಬಂದಾಗ ನಾನು ಸಂತೋಷಪಟ್ಟಿದ್ದೆ. ಆದರೆ ಮಳೆಯಿಂದಾಗಿ ನಗರದ ಕೆಲ ಭಾಗಗಳು ಕೊಚ್ಚಿಹೋಗಿದ್ದಲ್ಲದೆ ಗಲ್ಲಿಗಳು ನದಿಯಂತಾಗಿ ನಮ್ಮ ಬೆಂಗಳೂರು, ಮುಂಬೈಗಳನ್ನು ನೆನಪಿಸಿದಾಗ ನಿರಾಶೆಯಾಗಿದ್ದಂತೂ ಸತ್ಯ.

ಈ ಓಟದ ಪ್ರಹಸನಕ್ಕೊಂದು ವಿಚಿತ್ರ ಹಿನ್ನೆಲೆಯೂ ಇತ್ತು ಅನ್ನಿ. ಲುವಾಂಡಾ ನಗರದ ದೊಡ್ಡ ದೊಡ್ಡ ಸಮಸ್ಯೆಗಳನ್ನು ಪಟ್ಟಿ ಮಾಡುತ್ತಾ ಹೋದಲ್ಲಿ ಅದರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವುದು ಪಾರ್ಕಿಂಗ್ ವ್ಯವಸ್ಥೆ. ಲುವಾಂಡಾದಲ್ಲಿ ಪಾರ್ಕಿಂಗ್ ಸ್ಥಳಗಳನ್ನು ಹುಡುಕುವುದೆಂದರೆ ಅದು ಭಗವಂತನನ್ನು ಹುಡುಕಿದಂತೆಯೇ. ಹಣ ತೆತ್ತು ಪಾರ್ಕ್ ಮಾಡುವ ಜಾಗಗಳನ್ನಾದರೂ ಹುಡುಕೋಣ ಎಂದರೆ ಅವುಗಳ ಸಂಖ್ಯೆಯೂ ಕಮ್ಮಿ.

ಲುವಾಂಡಾದ ಖ್ಯಾತ ಬೀದಿಯಾದ ಮಾರ್ಜಿನಲ್ ನಲ್ಲಿರುವ ಒಂದು ದೊಡ್ಡ ಪಾರ್ಕಿಂಗ್ ಸ್ಥಳವನ್ನು ಹೊರತುಪಡಿಸಿದರೆ ವಾಹನಗಳನ್ನು ನಿಲ್ಲಿಸಲು ಸೂಕ್ತವಾದ ಜಾಗವನ್ನು ಹುಡುಕುವುದೆಂದರೆ ಅದು ಯಾವ ಸಾಹಸಕ್ಕೂ ಕಮ್ಮಿಯಿಲ್ಲ. ಹೇರ್ ಕಟ್ ಗೆಂದು ವೀಜ್ ನಿಂದ ಲುವಾಂಡಾದವರೆಗೆ ಮುನ್ನೂರೈವತ್ತು ಚಿಲ್ಲರೆ ಕಿಲೋಮೀಟರ್ ದೂರವನ್ನು ಕ್ರಮಿಸಿ ಬರುತ್ತಿದ್ದ ದಿನಗಳ ಬಗ್ಗೆ ಈ ಹಿಂದೆ ಬರೆದಿದ್ದೆ. ಆ ಸಂದರ್ಭಗಳಲ್ಲಾಗುತ್ತಿದ್ದ ಮತ್ತೊಂದು ದೊಡ್ಡ ಸಮಸ್ಯೆಯೆಂದರೆ ಪಾರ್ಕಿಂಗ್ ನದ್ದೇ.

ಯಾವುದೋ ಮೂಲೆಯಲ್ಲಿ ಕಷ್ಟಪಟ್ಟು ನಮ್ಮ ವಾಹನವನ್ನು ನಿಲ್ಲಿಸಿ, ಇನ್ಯಾವುದೋ ಮೂಲೆಯಲ್ಲಿದ್ದ ಕ್ಷೌರದಂಗಡಿಯನ್ನು ತಲುಪಲು ಮತ್ತೆ ಕಾಲ್ನಡಿಗೆ ಅಥವಾ ಕಂದೊಂಗೈರು (ಟ್ಯಾಕ್ಸಿ)ಗಳನ್ನು ಅವಲಂಬಿಸುತ್ತಿದ್ದ ಪರಿಸ್ಥಿತಿ ನಮ್ಮದು. ಹೀಗಾಗಿ ಕೇವಲ ಪಾರ್ಕಿಂಗ್ ಸ್ಥಳವನ್ನು ಹುಡುಕುತ್ತಾ ಅದೆಷ್ಟೋ ಕಿಲೋಮೀಟರುಗಳ ದಾರಿಯನ್ನು ನಾವು ಶಹರದಲ್ಲಿ ಸುತ್ತುತ್ತಲೇ ಕಳೆದಿದ್ದುಂಟು. ಥೇಟು ಚಕ್ರವ್ಯೂಹದಲ್ಲಿ ಸಿಲುಕಿ ಹೊರದಾರಿಗಾಗಿ ತಡಕಾಡುತ್ತಿದ್ದ ಅಭಿಮನ್ಯುವಿನಂತೆ.

ಅಂದು ಆಗಿದ್ದು ಕೂಡ ಅದೇ. ಇಮಿಗ್ರೇಷನ್ ಸಂಬಂಧಿ ಚಿಕ್ಕಪುಟ್ಟ ಕೆಲಸಕ್ಕೆಂದು ನಾನು ಮತ್ತು ದುಭಾಷಿ ಮೂಲೆಯೊಂದರಲ್ಲಿ ವಾಹನವನ್ನು ನಿಲ್ಲಿಸಿ ಓಡಾಡುತ್ತಲೇ ಇದ್ದೆವು. ವಾಹನದೊಂದಿಗೆ ನಮ್ಮ ಡ್ರೈವರ್ ಅಗುಸ್ಟೋನಂತೂ ಹೇಗೂ ಇದ್ದ. ಹೀಗಾಗಿ ಕೆಲಸವನ್ನು ಮುಗಿಸಿ ಕಾಲ್ನಡಿಗೆಯಲ್ಲೇ ಮರಳಿ ಬಂದು ಕಾರಿನಲ್ಲಿ ತೆರಳುವುದೆಂದು ಪೂರ್ವನಿರ್ಧಾರಿತವಾಗಿತ್ತು.

ಹಾಗೆಂದು ಹೊರಟ ನಾವಿಬ್ಬರು ನಮ್ಮ ಕೆಲಸಗಳನ್ನು ಮುಗಿಸಿ ಬಂದರೆ ನಾವಂದು ನೋಡುತ್ತಿದ್ದಿದ್ದೇನು? ಅಂಗೋಲಾದ ಟ್ರಾಫಿಕ್ ಪೋಲೀಸರು ನಮ್ಮ ಕಣ್ಣೆದುರೇ ನಮ್ಮ ವಾಹನವನ್ನು ಕ್ರೇನಿನಲ್ಲಿ ಎತ್ತಿ ತಮ್ಮ ಲಾರಿಯಲ್ಲಿ ಹೊತ್ತೊಯ್ಯುತ್ತಿದ್ದರು. ಯದ್ವಾತದ್ವಾ ಹೊಡೆತ ತಿಂದು ಪ್ರಜ್ಞೆತಪ್ಪಿರುವ ಅಪರಾಧಿಯೊಬ್ಬನನ್ನು ಪೋಲೀಸರು ಆತನ ಕೊರಳಪಟ್ಟಿ ಹಿಡಿದು ಎಳೆದೊಯ್ಯುವಂತೆ, ಅನಾಥವಾಗಿದ್ದ ನಮ್ಮ ಶ್ವೇತವರ್ಣದ ಕಾರನ್ನು ತನ್ನ ಬೆನ್ನಿನಲ್ಲಿ ಹೇರಿಕೊಂಡು ಹೊರಡಲು ತಯಾರಾಗುತ್ತಿತ್ತು ಅಂಗೋಲನ್ ಟ್ರಾಫಿಕ್ ಪೋಲೀಸರ ಲಾರಿ.

ಇಂಥದ್ದೊಂದು ದೃಶ್ಯವನ್ನು ನೋಡಿ ಏಕಾಏಕಿ ಗೊಂದಲಕ್ಕೊಳಗಾದ ನಾವು ತಕ್ಷಣ ಆ ಲಾರಿಯತ್ತ ಓಡತೊಡಗಿದ್ದೆವು. ”ಅಯ್ಯೋ ನಿಲ್ಲಯ್ಯಾ… ನಮ್ಮ ಡ್ರೈವರ್ ಎಲ್ಲಿದ್ದಾನೆ? ಕಾರೊಳಗೆ ಅವನೂ ಇದ್ದಾನೋ ಹೇಗೆ?”, ಎಂದು ನಾನು ತಲೆಕೆರೆದುಕೊಂಡೆ. ಅಷ್ಟರಲ್ಲಿ ಎಲ್ಲೋ ಹೋಗಿದ್ದ ಅಗುಸ್ಟೋ ನಾವಿದ್ದಲ್ಲಿಗೆ ಬಂದು ಪಾರ್ಕ್ ಮಾಡಿದ್ದ ವಾಹನವನ್ನು ಕಾಣದೆ ಕಂಗಾಲಾಗಿ ತಡಬಡಿಸಿದ. ‘

‘ಈಗಷ್ಟೇ ಸ್ವಲ್ಪ ಆಚೆ ಹೋಗಿದ್ದೆ. ಬರೋವರಷ್ಟರಲ್ಲಿ ಹೀಗಾಯ್ತಾ?”, ಎಂದು ನಿಡುಸುಯ್ದ. ಅಷ್ಟರಲ್ಲಿ ನನ್ನ ಪಾಸ್-ಪೋರ್ಟು, ಒಂದಿಷ್ಟು ಕಾಸು ಮತ್ತು ಬಹುಮುಖ್ಯ ದಸ್ತಾವೇಜುಗಳನ್ನೊಳಗೊಂಡಿದ್ದ ಚೀಲವೊಂದು ಕಾರಿನಲ್ಲೇ ಇರುವ ನೆನಪಾಗಿ ಗಾಬರಿಯಾಯಿತು. ಅತ್ತ ನಮ್ಮ ಕಾರನ್ನು ಹೊತ್ತುಕೊಂಡು ಆ ದೈತ್ಯಲಾರಿಯು ಯೂ-ಟರ್ನ್ ಒಂದರಲ್ಲಿ ತಿರುಗಲು ಒದ್ದಾಡುತ್ತಿದ್ದರೆ ನಾವು ಇನ್ನೇನು ಕಾದಿದೆಯೋ ಎಂದು ನಿಂತಲ್ಲೇ ಬೆವರತೊಡಗಿದೆವು. ಅಂಗೋಲನ್ ಪೋಲೀಸರ ಲಂಚಕೋರತನದ ಬಗ್ಗೆ ಮೊದಲೇ ತಿಳಿದಿದ್ದ ನಾನು ಇನ್ನೆಷ್ಟು ಕಾಸು ಪೀಕಬೇಕಾಗುತ್ತೋ ಎಂದು ಚಿಂತಿಸತೊಡಗಿದೆ. ಇನ್ನು ಜಪ್ತಿಯ ಈ ಗಡಿಬಿಡಿಯಲ್ಲಿ ಪಾಸ್-ಪೋರ್ಟ್ ಏನಾದರೂ ಮಾಯವಾದರೆ ಉಂಟಾಗಬಹುದಾದ ಮಹಾಗೊಂದಲಗಳ ಬಗ್ಗೆ ಯೋಚಿಸುವಾಗಲೇ ಪೇಚಿಗಿಟ್ಟುಕೊಂಡಿತು.

ಮುಂದೇನು? ಅಂಗೋಲನ್ ಟ್ರಾಫಿಕ್ ಪೋಲೀಸರ ಲಾರಿ ಯಾವ ಕಡೆ ಹೋಗುತ್ತಿತ್ತು ಎಂಬುದು ನನಗಂತೂ ಗೊತ್ತಿರಲಿಲ್ಲ. ಈ ಬಗ್ಗೆ ದುಭಾಷಿಯನ್ನು ವಿಚಾರಿಸಿದರೆ ಅವರ ಇಲ್ಲಿಯ ಆಫೀಸಿನ ವಿಳಾಸವಂತೂ ನನಗ್ಗೊತ್ತಿಲ್ಲ ಅಂದುಬಿಟ್ಟ. ಅಗುಸ್ಟೋ ಲುವಾಂಡಾಗೆ ಹೊಸಬನಲ್ಲದಿದ್ದರೂ ಆತನಿಗೆ ಶಹರದ ಬಹುತೇಕ ಒಳಮಾರ್ಗಗಳ ಬಗ್ಗೆ ತಿಳಿದಿರಲಿಲ್ಲ. ಇನ್ನೇನು ಮಾಡುವುದು? ಟ್ರಕ್ಕಿನಲ್ಲಿ ಮತ್ತೊಂದು ವಾಹನವನ್ನು ಹೇರುವಷ್ಟು ಸ್ಥಳಾವಕಾಶವಿಲ್ಲದ್ದರಿಂದ ಅವರು ಅದನ್ನು ನೇರವಾಗಿ ಸ್ಥಳೀಯ ಕಾರ್ಯಾಲಯಕ್ಕೇ ಕರೆದೊಯ್ಯುತ್ತಾರೆ ಎಂದು ನಾವು ನಿಂತ ನಿಲುವಲ್ಲೇ ಲೆಕ್ಕಹಾಕಿದೆವು. ಹೀಗಾಗಿ ಆ ಲಾರಿಯನ್ನು ಹಿಂಬಾಲಿಸುವುದರ ಹೊರತು ಬೇರೆ ದಾರಿಯೇ ಇರಲಿಲ್ಲ.

ನಾವು ಮೂವರೂ ಒಲಿಂಪಿಕ್ಸ್ ಓಟಗಾರರಂತೆ ಟ್ರಾಫಿಕ್ ಪೋಲೀಸರ ಲಾರಿಯನ್ನು ಬೆನ್ನಟ್ಟುತ್ತಾ ಓಡಲು ಶುರು ಮಾಡಿದ್ದು ಆಗಲೇ.

ತನ್ನ ತೀವ್ರ ಧಗೆಯಿಂದ ಸುಡುವಂತಿದ್ದ ಸೂರ್ಯದೇವನೊಂದಿಗೆ ಸೆಣಸಾಡುತ್ತಾ, ಎಲ್ಲಾ ಕಡೆಯಿಂದಲೂ ನಮ್ಮನ್ನು ತಿಂದುಹಾಕಲೆಂದೇ ಬರುತ್ತಿದ್ದಂತೆ ಕಾಣುತ್ತಿದ್ದ ಕರ್ಕಶವಾಗಿ ಗಂಟಲು ಅರಚಿಕೊಳ್ಳುತ್ತಿದ್ದ ವಾಹನಗಳನ್ನು ಸಂಭಾಳಿಸುತ್ತಾ, ಟಾರ್ಚು, ಬನ್ನು, ಪುಸ್ತಕ, ಸೋಪು, ದಿನಪತ್ರಿಕೆ ಇತ್ಯಾದಿಗಳನ್ನು ಮಾರುತ್ತಿದ್ದ ಝುಂಗೇರಾ ಮಹಿಳೆಯರಿಗೆ ಢಿಕ್ಕಿಹೊಡೆಯದಂತೆ ಎಚ್ಚರ ವಹಿಸುತ್ತಾ, ಆಕ್ಷನ್ ಚಿತ್ರದ ನಾಯಕ ನಟರಂತೆ ಬಿರುಸಿನಿಂದ ನಾವು ಓಡತೊಡಗಿದ್ದೆವು.

ಅಗುಸ್ಟೋ ಈ ಹಿಂದೆ ಸೈನ್ಯದಲ್ಲಿ ಸೇವೆ ಸಲ್ಲಿಸಿದವನಾದ್ದರಿಂದ ನಮ್ಮೆಲ್ಲರಿಗಿಂತ ವೇಗವಾಗಿ ಚಿರತೆಯಂತೆ ಓಡಿ ಲಾರಿಯ ಮುಂಭಾಗದತ್ತ ಬಹುತೇಕ ತಲುಪುವಲ್ಲಿ ಯಶಸ್ವಿಯಾದ. ಶಾಲಾದಿನಗಳಿಂದಲೂ ಕ್ರೀಡಾ ಚಟುವಟಿಕೆಗಳಲ್ಲಿ ನಾಲಾಯಕ್ಕಾದ ನಾನು ಹಿಂದೆಯೇ ಉಳಿದುಬಿಟ್ಟೆ. ಅಂತೂ ಸುಮಾರು ಓಟ, ಏದುಸಿರು, ಗೊಂದಲಗಳ ಬಳಿಕ ನಾವು ತಲುಪಬೇಕಾದಲ್ಲಿ ತಲುಪಿದ್ದೆವು.

ಈ ನಿಟ್ಟಿನಲ್ಲಿ ಅಗುಸ್ಟೋನ ವೇಗವು ಮೆಚ್ಚುವಂಥದ್ದು. ಮಾರ್ಗಮಧ್ಯದಲ್ಲಿ ಟ್ರಾಫಿಕ್ಕೆಂದು ಲಾರಿಯು ಮೆಲ್ಲನೆ ನಿಂತಾಗಲೆಲ್ಲಾ ಇಲಾಖೆಯ ಸಮವಸ್ತ್ರದಲ್ಲಿದ್ದ ಅಧಿಕಾರಿ/ಚಾಲಕನೊಂದಿಗೆ ಕಾರನ್ನು ಬಿಟ್ಟುಕೊಡಲು ಅಗುಸ್ಟೋ ವಿನಂತಿಸುತ್ತಿದ್ದ. ಪ್ರತೀ ಪೋಲೀಸರಂತೆ ಈತನಿಗೂ ಹಲವು ಡಿಮಾಂಡುಗಳಿದ್ದಿರಬೇಕು. ಚೌಕಾಶಿಯ ಚರ್ಚೆಗಳು ನಿರಂತರವಾಗಿ ನಡೆಯುತ್ತಿದ್ದವು. ಆತ ಲಾರಿಯೊಳಗೆ, ಅಗುಸ್ಟೋ ಲಾರಿಯ ಹೊರಗೆ.

ಕೆಟ್ಟ ಟ್ರಾಫಿಕ್ಕಿನಿಂದಾಗಿ ಪೋಲೀಸಪ್ಪನದ್ದು ಸ್ವಲ್ಪ ಚಲನೆ, ಸ್ವಲ್ಪ ವಿಶ್ರಾಂತಿ. ಇತ್ತ ಅಗುಸ್ಟೋನದ್ದೂ ಸ್ವಲ್ಪ ಓಟ, ಸ್ವಲ್ಪ ಚರ್ಚೆ. ಅಂಗೋಲಾದ ಕೆಲ ಹಳ್ಳಿಗಳಲ್ಲಿ ಮೀಟಿಂಗುಗಳನ್ನು ರಸ್ತೆಬದಿಯಲ್ಲೇ ನಿಂತುಕೊಂಡು ನಡೆಸುವುದನ್ನು ನಾನು ಕಂಡಿದ್ದೇನೆ. ಆದರೆ ಇಂಥದ್ದೊಂದು ಚರ್ಚಾಪ್ರಕ್ರಿಯೆಯನ್ನು ನಾನು ಈ ಮೊದಲು ಕಂಡೇ ಇರಲಿಲ್ಲ. ರೈಲಿನಲ್ಲಿ ಹೋಗುತ್ತಿರುವ ತನ್ನ ಪ್ರೇಯಸಿಯನ್ನು ಬೈಕಿನಲ್ಲಿ ಹಿಂಬಾಲಿಸುತ್ತಾ ಪ್ರೀತಿಯ ಹಾಡನ್ನು ಹಾಡುವ ಸಿನೆಮಾ ಹೀರೋನಂತೆ ಅಗುಸ್ಟೋ ಆ ಲಾರಿಯ ಜೊತೆಜೊತೆಗೇ ಓಡುತ್ತಿದ್ದ. ಡೀಲ್ ಕುದುರಿಸಿಕೊಳ್ಳಲು ಯತ್ನಿಸುತ್ತಿದ್ದ. ಆದರೆ ಪೋಲೀಸಪ್ಪ ದೊಡ್ಡ ಮೊತ್ತದ ಹಣವನ್ನು ಕೇಳಿದಾಗ ಮತ್ತು ಅಷ್ಟೇ ಕೊಡಬೇಕೆಂದು ಪಟ್ಟುಹಿಡಿಯುವ ಮೂಲಕ ಈ ವಿಲಕ್ಷಣ `ಅಂದರ್-ಬಾಹರ್’ ಸಂಧಾನವು ವಿಫಲವಾಯಿತು. ಒಟ್ಟಾರೆಯಾಗಿ ಈ ಪ್ರಹಸನವು ಅಲ್ಲಿಗೇ ಮುಗಿಯುವಂತೆ ನನಗಂತೂ ಆ ಕ್ಷಣದಲ್ಲಿ ಕಾಣಲಿಲ್ಲ.

ಮುಂದೆ ಅಲ್ಲಿಂದ ಕೊಂಚ ನಡೆದು, ಕೊಂಚ ಓಡಿ, ಏದುಸಿರುಬಿಡುತ್ತಾ ನಾವು ಆ ಲಾರಿಯ ಗಮ್ಯವನ್ನು ಮುಟ್ಟುವುದರಲ್ಲಿ ಯಶಸ್ವಿಯಾದೆವು. ಕೊಳಚೆಪ್ರದೇಶವನ್ನು ಹೋಲುವಂತಿದ್ದ ಜಾಗವೊಂದರಲ್ಲಿ ತಲೆಯೆತ್ತಿ ನಿಂತಿದ್ದ ಒಂದು ಹಳೆಯ ಕಟ್ಟಡವೇ ಇವರ ಕಾರ್ಯಾಲಯವಾಗಿತ್ತು. ಕೋಟೆಯೊಂದರ ಹೆಬ್ಬಾಗಿಲಿನಂತಿದ್ದ ಲೋಹದ ಮುಖ್ಯದ್ವಾರವನ್ನೊಳಗೊಂಡಂತೆ ಕಟ್ಟಡದ ಪಾಗಾರಗಳು ಅದೆಷ್ಟು ಎತ್ತರವಾಗಿದ್ದವೆಂದರೆ ಆ ಗೋಡೆಯ ಆಚೆಗೇನಿರಬಹುದೆಂಬುದನ್ನು ಕಿಂಚಿತ್ತು ಕಾಣುವುದೂ ಸಾಧ್ಯವಿರಲಿಲ್ಲ.

ಇನ್ನು ಎತ್ತರದ ಪಾಗಾರದುದ್ದಕ್ಕೂ ಅಳವಡಿಸಲಾಗಿದ್ದ ಸುರುಳಿಯಾಕಾರದ ಲೋಹದ ಮುಳ್ಳುತಂತಿಗಳು ವಿಚಿತ್ರ ಕಿರೀಟದಂತಿದ್ದು ನಿಗೂಢ ಭಾವವನ್ನು ಹುಟ್ಟುಹಾಕುತ್ತಿದ್ದವು. ನಾವೆಲ್ಲರೂ ನೋಡನೋಡುತ್ತಲೇ ನಮ್ಮ ಕಾರನ್ನು ಹೊತ್ತುಕೊಂಡಿದ್ದ ಲಾರಿಯು ಮುಖ್ಯದ್ವಾರದ ಮೂಲಕ ಒಳಹೊಕ್ಕ ಬೆನ್ನಿಗೇ ಆ ದೈತ್ಯಬಾಗಿಲು ಮುಚ್ಚಿಹೋಯಿತು. ಬಾಗಿಲು ಕಾಯಲು ಒಬ್ಬ ಚೌಕೀದಾರನೂ ಇಲ್ಲದ್ದಲ್ಲದೆ, ಪ್ರವೇಶ ನಿರ್ಬಂಧದ ಸಂಕೇತದಂತೆ ಗೇಟನ್ನು ಮುಚ್ಚಿದ ಪರಿಣಾಮವಾಗಿ ಯಾರೊಂದಿಗೆ ವಿಚಾರಿಸಬೇಕೆಂದು ತೋಚದೆ ನಾವು ಮತ್ತಷ್ಟು ಗೊಂದಲಕ್ಕೊಳಗಾದೆವು. ರೊಟ್ಟಿಯು ಬಾಣಲೆಯಿಂದ ಬೆಂಕಿಗೆ ಬಿದ್ದಿತ್ತು.

”ಜೋ ಮಝಾ ಇಂತೆಝಾರ್ ಮೇ ಹೇಂ, ವೋ ದೀದಾರ್ ಮೇ ಹೇಂ ಕಹಾಂ”, ಎಂದು ಯಾರು ಹೇಳಿದ್ದಾರೋ ಗೊತ್ತಿಲ್ಲ. ಆದರೆ ಕಾಯುವುದೆಂದರೆ ಬಲುಕಷ್ಟವೇ. ಅಂದು ಯಾರಾದರೂ ಒಳಹೋಗುತ್ತಾರೆಂದು ಅಥವಾ ಒಳಗಿನಿಂದ ಹೊರಬರುತ್ತಾರೆಂದು ಸುಮಾರು ಒಂದೂವರೆ ತಾಸು ಕಾದೆವು. ಆದರೆ ಹಾಗೇನೂ ಆಗಲಿಲ್ಲ. ಕೂರಲು ಜಾಗವೂ ಇಲ್ಲದೆ, ಅಲ್ಲಿಂದ ಹೋಗಲೂ ಆಗದೆ ಧೂಳು ತಿನ್ನುತ್ತಾ ಆ ಬಿಸಿಲಿನಲ್ಲಿ ಒಣಮೀನಿನಂತೆ ಚೆನ್ನಾಗಿ ಒಣಗಿದ್ದಾಯಿತು.

ಕೊನೆಗೆ ಅಗುಸ್ಟೋ ನಮ್ಮ ಲುವಾಂಡಾ ಕಾರ್ಯಾಲಯಕ್ಕೆ ಕರೆ ಮಾಡಿ ಹೀಗ್ಹೀಗಾಯ್ತು ಎಂದು ವಿವರಿಸಿ, ದಸ್ತಾವೇಜುಗಳು ಕಾರಿನೊಂದಿಗೇ ಒಳಹೋಗಿದ್ದಲ್ಲದೆ ವಾಪಾಸು ಬರಲು ಕಾಸೂ ಇಲ್ಲವೆಂದು ಹೇಳಿದ್ದರಿಂದಾಗಿ ಒಂದು ತಾಸಿನ ನಂತರ ಸಹೋದ್ಯೋಗಿಯೊಬ್ಬ ಕಾರಿನೊಂದಿಗೆ ಬಂದ. ಅವನನ್ನು ಕಂಡಕೂಡಲೇ ನಮಗೆ ಆಶಾಕಿರಣವೊಂದನ್ನು ಕಂಡಂತಾಗಿ ಕಳೆದುಹೋಗಿದ್ದ ಹುಮ್ಮಸ್ಸೆಲ್ಲವೂ ಮತ್ತೆ ಮರಳಿಬಂದಿತು. ಆತ ಎಲ್ಲೆಲ್ಲೋ ಕರೆ ಮಾಡಿ, ಏನೇನೋ ಕರಾಮತ್ತು ನಡೆಸಿದ ಪರಿಣಾಮವಾಗಿ ಮೊದಲ ಹಂತದ ಪರಿಹಾರವೆಂಬಂತೆ ಕಾರಿನೊಂದಿಗೆ ಒಳಸೇರಿದ್ದ ನನ್ನ ಚೀಲವು ಹೊರಬಂದಿತು. ಪಾಸ್-ಪೋರ್ಟ್ ಸೇರಿದಂತೆ ಎಲ್ಲವೂ ಸರಿಯಾಗಿರುವುದನ್ನು ಖಚಿತಪಡಿಸಿಕೊಂಡ ನಾನು ಸಮಾಧಾನದ ನಿಟ್ಟುಸಿರಿಟ್ಟೆ. ಬಹುಷಃ ಆವರೆಗೆ ಯಾರ ಕಣ್ಣೂ ಅದರ ಮೇಲೆ ಬಿದ್ದಿರಲಿಲ್ಲ.

”ನಿಮ್ಮಲ್ಲಿ ಸ್ವಲ್ಪ ನಗದೇನಾದರೂ ಇದ್ದರೆ ನನಗೆ ಕೊಡಿ. ನಾನು ಆಫೀಸಿನಿಂದಲೂ ತಂದಿದ್ದೇನೆ. ಆದರೆ ಇಲ್ಲಿ ನೋಡುವಾಗ ಕಮ್ಮಿಯಾಗುತ್ತಿದೆ”, ಎಂದು ನನ್ನಲ್ಲಿ ವಿನಂತಿಸಿದ ಆ ಸಹೋದ್ಯೋಗಿ. ಆದರೆ ದುರಾದೃಷ್ಟವಶಾತ್ ಅಷ್ಟು ದೊಡ್ಡ ಮೊತ್ತದ ನಗದು ಆ ಕ್ಷಣದಲ್ಲಿ ನನ್ನ ಬಳಿಯಿರಲಿಲ್ಲ. ಇನ್ನು ನಾನು ಸ್ಥಳೀಯ ಬ್ಯಾಂಕುಗಳಲ್ಲಿ ಯಾವುದೇ ಖಾತೆಗಳನ್ನು ಹೊಂದಿಲ್ಲದ ಪರಿಣಾಮವಾಗಿ ಎ.ಟಿ.ಎಮ್ ಗಳಿಂದ ನಗದನ್ನು ತೆಗೆಯುವಂತೆಯೂ ಇರಲಿಲ್ಲ. ಆದರೆ ಒಂದು ವಿಷಯವಂತೂ ದೃಢವಾಗಿತ್ತು. ಅಷ್ಟು ದೊಡ್ಡ ಮೊತ್ತವು ಪಾರ್ಕಿಂಗ್ ಪ್ರಮಾದದ ತಪ್ಪಿಗಾಗಿ ಕಟ್ಟಬೇಕಾಗಿರುವ ದಂಡವಾಗಿರಲು ಸಾಧ್ಯವೇ ಇರಲಿಲ್ಲ. ಸಲ್ಲಬೇಕಿದ್ದ ಕಡೆಗೆ ಸಲ್ಲಲೇಬೇಕಾಗಿದ್ದ ಲಂಚದ ಆಗ್ರಹದ ವಾಸನೆ ಬಲವಾಗಿ ಬಡಿಯುತ್ತಿತ್ತು.

ನಾವು ಮೂವರು ಈಗಾಗಲೇ ಅತಂತ್ರ ಸ್ಥಿತಿಯಲ್ಲಿರುವುದಲ್ಲದೆ ನಮ್ಮನ್ನು ಕರೆದೊಯ್ಯಲು ಬಂದ ರಾಯಭಾರಿಯೂ ಕೂಡ ಕೈಚೆಲ್ಲಬೇಕಾದ ಪರಿಸ್ಥಿತಿಯು ಒದಗಿ ಬಂದ ಪರಿಣಾಮವಾಗಿ ಒಳಗಿದ್ದ ವಾಹನವನ್ನು ಮರೆತು ಆತ ಬಂದ ಕಾರಿನಲ್ಲೇ ನಾವು ಮರಳಬೇಕಾಯಿತು. ರಾಯಭಾರಿ ಮಹೋದಯ ತನ್ನ ಕಾರ್ಯಾಲಯದಿಂದ ಮತ್ತಷ್ಟು ನಗದನ್ನು ಹಿಡಿದುಕೊಂಡು ಹೋಗಿ ಇಲಾಖೆಯಿಂದ ವಶಪಡಿಸಿಕೊಳ್ಳಲಾಗಿದ್ದ ಕಾರನ್ನು ಬಿಡುಗಡೆಗೊಳಿಸುವ ಕಾರ್ಯವನ್ನಾರಂಭಿಸಿದ. ಅನಗತ್ಯ ಓಡಾಟಗಳಿಂದ ಬೇಸತ್ತುಹೋಗಿದ್ದ ನಾನು ವಸತಿಗೃಹಕ್ಕೆ ಮರಳಿಬಂದು ವಿಶ್ರಾಂತಿಗೆಂದು ಹಾಸಿಗೆಯ ಮೇಲೆ ಮೈಚೆಲ್ಲಿದೆ. ಅರ್ಧದಿನವಂತೂ ಕಾಯುವುದರಲ್ಲೇ ಕರಗಿಹೋಗಿತ್ತು. ನಮ್ಮ ವಾಹನವನ್ನು ನಾಲ್ಕು ದಿನಗಳ ತರುವಾಯ ಇಲಾಖೆಯ ಕಾರ್ಯಾಲಯದಿಂದ ಬಿಡಿಸಿಕೊಳ್ಳಲಾಯಿತು ಎಂಬ ವರ್ತಮಾನವು ನನಗೆ ನಂತರ ತಿಳಿದುಬಂದಿತು.

ರಸೀದಿಯ ದಾಖಲೆಗಳಿಲ್ಲದ ಆ ಕೊಡುಕೊಳ್ಳುವಿಕೆಯಲ್ಲಿ ನಿಜಕ್ಕೂ ಖರ್ಚಾಗಿದ್ದೆಷ್ಟು ಎಂಬುದು ಕೊನೆಗೂ ನಿಗೂಢವಾಗಿಯೇ ಉಳಿಯಿತು. ಅದೊಂದು ‘ದೊಡ್ಡ ಮೊತ್ತ’ ಎಂದಷ್ಟೇ ಹೇಳುತ್ತಾ ಮುಂದೆ ಈ ಪ್ರಕರಣಕ್ಕೆ ತೆರೆಯನ್ನೆಳೆಯಲಾಯಿತು.

**********

ಇಲ್ಲದ ಪಾರ್ಕಿಂಗ್ ಸ್ಥಳ ಮತ್ತು ಹುಟ್ಟಿಕೊಂಡ ದಂಧೆಗಳು

ಲುವಾಂಡಾದಲ್ಲಿ ನೀವು ಪಾರ್ಕಿಂಗ್ ಸ್ಥಳಕ್ಕಾಗಿ ಹುಡುಕುತ್ತಾ ಶಾಂತಿಗಾಗಿ ಅಲೆದಾಡುತ್ತಿರುವ ಆತ್ಮದಂತೆ ಅಲೆಯುತ್ತಲೇ ಇರುತ್ತೀರಿ. ಎತ್ತ ನೋಡಿದರೂ ವಾಹನಗಳೇ ಕಾಣುತ್ತದೆಯೇ ಹೊರತು ಖಾಲಿ ಜಾಗಗಳಿಲ್ಲ. ಅಷ್ಟರಲ್ಲಿ ಚುರುಕಿನ, ನೋಡಲು ಇಪ್ಪತ್ತರಿಂದ ಮೂವತ್ತು ವರ್ಷದ ಪ್ರಾಯದ ತರುಣನೊಬ್ಬ ಬಂದು ವಾಹನವನ್ನು ನಿಲ್ಲಿಸಲು ಅಲ್ಲೆಲ್ಲೋ ಜಾಗವಿದೆ ಅನ್ನುತ್ತಾನೆ.

ನಿಮಗೆ ಖುಷಿಯಾಗಿ ಅವನ ಹಿಂದೆಯೇ ಡ್ರೈವ್ ಮಾಡುತ್ತಾ ಆ ಸ್ಥಳವನ್ನು ತಲುಪುತ್ತೀರಿ. ”ಪಾರ್ಕಿಂಗ್ ದರವನ್ನು ಮೊದಲೇ ನೀಡಬೇಕು”, ಎನ್ನುತ್ತಾನೆ ಅವನು. ”ವಾಹನ ಇಲ್ಲೇ ಇರಲಿ. ಹೊರಡುವಾಗ ಕೊಡುತ್ತೇನೆ”, ಅನ್ನುತ್ತೀರಿ ನೀವು. ಆದರೆ ಅದಕ್ಕಾತ ಒಪ್ಪುವುದಿಲ್ಲ. ಬೇಸತ್ತ ನೀವು ಕೊನೆಗೂ ಐನೂರು ಕ್ವಾಂಝಾದ ನೋಟೊಂದನ್ನು ಅವನಿಗೆ ನೀಡುತ್ತೀರಿ. ”ನೀವು ನಿಶ್ಚಿಂತೆಯಾಗಿ ಹೋಗಿಬನ್ನಿ ಸಾರ್”, ಎಂದು ಆತ ನಿಮಗೆ ಆಶ್ವಾಸನೆಯನ್ನು ನೀಡುತ್ತಾ ಶಿಸ್ತಿನಿಂದ ಸಲಾಂ ಹೊಡೆಯುತ್ತಾನೆ.

ಆದರೆ ನೀವು ನಿಮ್ಮ ಕೆಲಸಗಳನ್ನೆಲ್ಲಾ ಮುಗಿಸಿ ಬಂದಾಗ ಮಾತ್ರ ಆ ಜಾಗದಲ್ಲಿ ಬೇರೆಯದೇ ಒಬ್ಬ ತರುಣ ನಿಂತಿರುತ್ತಾನೆ. ಈ ಹಿಂದೆ ಅಲ್ಲಿ ನಿಂತಿದ್ದವನು ಈಗ ಎಲ್ಲೂ ಇಲ್ಲ. ನೀವು ನಿಮ್ಮ ಪಾಡಿಗೆ ಕಾರಿನೊಳಗೆ ಕುಳಿತು ಹೊರಡಲು ಅನುವಾದರೆ ಈ ಹೊಸ ಹುಡುಗ ನಿಮ್ಮಲ್ಲಿಗೆ ಬಂದು ಪಾರ್ಕಿಂಗ್ ಫೀ ಅನ್ನು ಕೇಳುತ್ತಾನೆ. ಈಗಾಗಲೇ ಕೊಟ್ಟಾಗಿದೆ ಎಂದರೆ ಆತ ಯಾವ ಕಾರಣಕ್ಕೂ ಕೇಳಲು ತಯಾರಿಲ್ಲ.

ಆತ ಶರಂಪರ ಜಗಳವಾಡುತ್ತಾನೆ, ಕೈಕೈ ಮಿಲಾಯಿಸುವವನಂತೆ ಏರಿ ಬರುತ್ತಾನೆ, ಬೇಕಿದ್ದರೆ ತನ್ನ ಗ್ಯಾಂಗಿನ ಹುಡುಗರನ್ನೂ ಕರೆಸುತ್ತಾನೆ ಅಥವಾ ಹಾಗೆ ಮಾಡುವೆನೆಂದು ನಿಮ್ಮನ್ನು ಹೆದರಿಸುತ್ತಾನೆ. ”ಥೋ… ಇಂದಿನ ದಿನವೇ ಸರಿಯಿಲ್ಲ”, ಎಂದು ತನಗೆ ತಾನೇ ಶಪಿಸಿಕೊಳ್ಳುತ್ತಾ ಬೇರೆ ದಾರಿಯಿಲ್ಲದೆ ಐನೂರು ಕ್ವಾಂಝಾ ಅವನಿಗೂ ಪಾರ್ಕಿಂಗ್ ಫೀ ಕೊಟ್ಟು ನೀವು ಅಲ್ಲಿಂದ ಹೊರಡುತ್ತೀರಿ.

ಹೀಗೆ ಲುವಾಂಡಾದ ಬೀದಿಗಳು ನಿಮ್ಮನ್ನು ಅಣಕಿಸುತ್ತವೆ. ಪ್ರತೀಬಾರಿಯೂ ಪಾರ್ಕಿಂಗ್ ಮೂಲೆಗಾಗಿ ತಡಕಾಡುವಂತೆ ಕಾಡುತ್ತವೆ. ಸ್ವಂತ ವಾಹನವಿದ್ದರೂ ವಿನಾಕಾರಣ ಟ್ಯಾಕ್ಸಿಗಳಲ್ಲಿ ಪ್ರಯಾಣಿಸುವಂತೆ ನಿಮ್ಮನ್ನು ಅನಿವಾರ್ಯ ಸ್ಥಿತಿಗೆ ದೂಡುತ್ತವೆ. ಒಟ್ಟಿನಲ್ಲಿ ಪ್ರಯಾಣಗಳು ನಿಲ್ಲುವುದಿಲ್ಲ. ಹಾಗೆಯೇ ತಲಾಶೆಗಳೂ!

**********

4 thoughts on “ನಾವು ಅಂದು ಓಡುತ್ತಲೇ ಇದ್ದೆವು.”

  1. ಆಹಾ… ಪ್ರಸಾದರ ನಿರೂಪಣೆ ಓದಲು ಅದೆಷ್ಟು ಖುಷಿ

Leave a Reply