ಅಂಗೋಲದಲ್ಲಿ ಕಾಲನೆಂಬ ಪ್ರಾಣಿ..

”ನಿಧಾನವೇ ಪ್ರಧಾನ, ಇದೇ ಆದ್ರೆ ಇನ್ನೇನ್ಮಾಡಾಣ…”

ನಾಲ್ಕೈದು ಪುಟಗಳ ದಸ್ತಾವೇಜನ್ನು ನನಗೀಗ ಅಂಗೋಲಾದಿಂದ ಭಾರತಕ್ಕೆ ಕಳಿಸಬೇಕಿದೆ.

ಇದಕ್ಕಾಗಿಯೇ ನಾನು ವೀಜ್ ನಿಂದ ಲುವಾಂಡಾದವರೆಗೆ ಬಂದಿದ್ದೇನೆ. ಲುವಾಂಡಾದಿಂದ ಭಾರತಕ್ಕೆ ಹೀಗೆ ಏನನ್ನಾದರೂ ಅಂಚೆಯ ಮೂಲಕ ಕಳಿಸುವುದೆಂದರೆ ಬಲು ದುಬಾರಿ. ಊದಿದರೆ ಹಾರಿಹೋಗುವ ಒಂದೇ ಒಂದು ಕಾಗದವಾದರೂ ಅದಕ್ಕೆ ದೊಡ್ಡ ಮೊತ್ತವನ್ನು ವ್ಯಯಿಸಬೇಕಾಗಿರುವುದು ಖಚಿತ. ಇನ್ನು ಈ ಸಂಸ್ಥೆಯ ಕಾರ್ಯಾಲಯಗಳು ಅಲ್ಲಲ್ಲಿ ಕಂಡರೂ ಭಾರತಕ್ಕೆ ಏನಾದರೂ ಕಳಿಸಬೇಕೆಂದಿದ್ದರೆ ಲುವಾಂಡಾದ ಸೆಗ್ರಾದಾ ಫಮೀಲಿಯಾ ಏರಿಯಾದಲ್ಲಿರುವ ಮುಖ್ಯಕಚೇರಿಗೇ ಹೋಗಬೇಕು. ಪ್ರತೀ ತಿಂಗಳೂ ಇಂಥಾ ದಸ್ತಾವೇಜುಗಳನ್ನು ಭಾರತಕ್ಕೆ ಕಳಿಸುವುದು ಕಡ್ಡಾಯವಾಗಿರುವುದರಿಂದ ನಾನಿಲ್ಲಿ ಬರಲೇಬೇಕು. ದುಬಾರಿ ಬೆಲೆಯನ್ನು ತೆತ್ತು ಕೈತೊಳೆದುಕೊಳ್ಳಬೇಕು.

ಅಲ್ಲಿ ಮೂರು ಕೌಂಟರುಗಳಿರುತ್ತವೆ. ಮೂರು ಕೌಂಟರುಗಳನ್ನಿಟ್ಟ ಖುಷಿಗಾದರೂ ಅಲ್ಲಿ ಮೂವರು ಸಿಬ್ಬಂದಿಗಳು ಗ್ರಾಹಕರ ಸೇವೆಗಾಗಿ ಕುಳಿತಿರಬೇಕು. ಆದರೆ ಹಾಗಾಗುವುದಿಲ್ಲ. ಒಂದು ಕೌಂಟರು ಯಾವಾಗಲೂ ಖಾಲಿಯೇ ಇರುತ್ತದೆ. ಉಳಿದೆರಡರಲ್ಲಿ ಒಬ್ಬ ಉದ್ಯೋಗಿ ಐದು ನಿಮಿಷ ಕೂತರೆ ಹತ್ತು ನಿಮಿಷ ಮಾಯವಾಗುತ್ತಾನೆ. ಅತ್ಯಾಧುನಿಕ ಕಾರ್ಯಾಲಯವನ್ನು ಹೊಂದಿರುವುದಲ್ಲದೆ ಬೇಕಿರುವ ಎಲ್ಲಾ ಉಪಕರಣಗಳೂ, ವಸ್ತುಗಳೂ ಅವರ ಜೊತೆಯಿದ್ದರೂ ಐದರಿಂದ ಆರು ಸಾಲಿನ ವಿಳಾಸವನ್ನು ಟೈಪ್ ಮಾಡಿ, ರೆಡಿಮೇಡ್ ಪ್ಯಾಕಿನೊಳಗೆ ಇರಿಸಿ, ಕಳಿಸಬೇಕಾಗಿರುವ ಸಾಮಾನನ್ನು ತಯಾರುಗೊಳಿಸಲು ಏನಿಲ್ಲವೆಂದರೂ ಗ್ರಾಹಕರೊಬ್ಬರಿಗೆ ಮೂವತ್ತರಿಂದ ನಲವತ್ತು ನಿಮಿಷಗಳನ್ನು ಇವರು ತೆಗೆದುಕೊಳ್ಳುತ್ತಾರೆ. ಗಮನವಿಟ್ಟು ಅದನ್ನು ಮಾಡುವುದೇ ಆದರೆ ಹತ್ತು ನಿಮಿಷಗಳೂ ತಗುಲದ ಸರಳವಾದ ಕೆಲಸವದು. ಈ ಮಧ್ಯೆ ಆ ಸಿಬ್ಬಂದಿ ಎದ್ದು ಹೋದರಂತೂ ಅಲ್ಲಿ ಅತಂತ್ರ ಪರಿಸ್ಥಿತಿಯು ನಿರ್ಮಾಣವಾಗುತ್ತದೆ.

ಈ ಕಛೇರಿಯು ನಡೆಯುವ ರೀತಿಯೇ ಹೀಗೆ. ಗ್ರಾಹಕರ ಸಾಲು ಅದಷ್ಟೇ ಉದ್ದವಿರಲಿ, ಪುಟ್ಟ ಕೆಲಸಗಳನ್ನು ಬೇಗಬೇಗನೆ ಮಾಡಿ ಮುಗಿಸುವ ಪರಿಪಾಠವೇ ಇಲ್ಲಿಲ್ಲ. ಅದೆಷ್ಟೇ ಗ್ರಾಹಕರಿದ್ದರೂ, ಜನರ ಸಾಲು ಹನುಮನ ಬಾಲದಂತೆ ಉದ್ದವಾಗುತ್ತಿದ್ದರೂ, ಕಾದು ಕಾದು ಸುಸ್ತಾದವರು ತಮ್ಮ ಪಾದರಕ್ಷೆಗಳನ್ನು ತಾವು ನಿಂತ ಜಾಗದಲ್ಲಿಟ್ಟು ಮೂಲೆಯಲ್ಲಿಟ್ಟಿರುವ ಕುರ್ಚಿಗಳ ಮೇಲೆ ಕುಳಿತು ಸುಧಾರಿಸಿಕೊಂಡವರೂ ಯಾವ ರೀತಿಯಲ್ಲೂ ಸಿಬ್ಬಂದಿಗಳ ಮೇಲೆ ಪ್ರಭಾವವನ್ನು ಬೀರಿದಂತೆ ಕಾಣುವುದಿಲ್ಲ. ಇನ್ನು ಇದಕ್ಕಿಂತಲೂ ಹೆಚ್ಚು ವಿಚಿತ್ರವಾದ ಸಂಗತಿಯೆಂದರೆ ಬಂದವರ್ಯಾರೂ ಈ ಬಗ್ಗೆ ವಿರೋಧಿಸುವುದಿಲ್ಲ, ವೃಥಾ ಗೊಣಗುವುದಿಲ್ಲ. ಅದೇನು ತಾಳ್ಮೆಯೋ, ನಿಷ್ಕ್ರಿಯತೆಯೋ, ಇನ್ನೊಂದೋ ಹೊರಗಿನವರಿಗಂತೂ ಅಷ್ಟು ಸುಲಭವಾಗಿ ತಿಳಿಯುವುದಿಲ್ಲ.

***********

ಅಂಗೋಲಾಗೆ ಬಂದಿಳಿದ ಆರಂಭದ ದಿನಗಳಲ್ಲಿ ಇಂಥಾ ಅನುಭವಗಳು ನನಗೆ ಬಹಳ ಕಿರಿಕಿರಿಯನ್ನು ತರುವಂಥವಾಗಿದ್ದವು. ವೃಥಾ ಕಾಯುವುದು ಕಷ್ಟವಾದರೂ ಕೆಲವೊಮ್ಮೆ ಅಂತಹ ಸಂದರ್ಭಗಳು ಬಂದಾಗ ಕಾಯದೆ ವಿಧಿಯಿಲ್ಲವೆಂಬುದು ಸತ್ಯ. ಆದರೆ ಕೆಲವೇ ನಿಮಿಷಗಳ ಕೆಲಸಗಳಿಗೂ ಅರ್ಧ-ಒಂದು ತಾಸುಗಳನ್ನು ವ್ಯಯಿಸುವುದೆಂದರೆ ಅದೊಂದು ಕೆಲಸಕ್ಕೆ ಬಾರದ ನಾಟಕದಂತೆ ಕಾಣುವುದು ಸಹಜ.

ಈ ಬಗ್ಗೆ ದುಭಾಷಿಯ ಜೊತೆ ಹಿಂದೊಮ್ಮೆ ಚರ್ಚಿಸುತ್ತಿರುವಾಗ ಆತ ಹೀಗೆಂದು ಹೇಳಿದ್ದ: ”ನಾವು ಅಂಗೋಲನ್ನರು. ನಾವು ಇರೋದೇ ಹೀಗೆ. ಅಂಗೋಲನ್ನರಿಂದ ನೀವು ಇಷ್ಟೆಲ್ಲಾ ನಿರೀಕ್ಷಿಸುವುದು ತಪ್ಪು”. ಆತನ ಈ ಮಾತನ್ನು ಹೇಗೆ ತೆಗೆದುಕೊಳ್ಳಬೇಕೆಂದೇ ತಿಳಿಯಲಾರದ ನಾನು ಒಂದು ಕ್ಷಣ ಗೊಂದಲಕ್ಕೊಳಗಾಗಿದ್ದೆ. ಅದೇನು ಸಿನಿಕತನದ ಮಾತೋ? ಹೆಮ್ಮೆಯದ್ದೋ? ನಿರಾಶಾವಾದವೋ ಅಥವಾ ಇನ್ನೇನೋ. ಒಟ್ಟಾರೆಯಾಗಿ ‘ನೋಡಿ ಸ್ವಾಮಿ, ನಾವಿರೋದೇ ಹೀಗೆ’ ಎಂದು ಕಡ್ಡಿ ಮುರಿದಂತೆ ಹೇಳಿದ್ದ ಆತ.

ಆದರೆ ಕ್ರಮೇಣ ಆತನ ಮಾತುಗಳಲ್ಲಿ ಎಷ್ಟು ಸತ್ಯವಿದೆ ಎಂಬ ಅಂಶವು ನನಗೆ ತಿಳಿಯುತ್ತಾ ಬಂದು, ಆಗುತ್ತಿದ್ದ ಕಿರಿಕಿರಿಗಳು ಕಮ್ಮಿಯಾಗಿ ಇವೆಲ್ಲವೂ ಸಹ್ಯವಾಗತೊಡಗಿತ್ತು. ಇಂಥಾ ಚಟುವಟಿಕೆಗಳು ಮೇಲೆ ಹೇಳಿರುವ ಕಚೇರಿಯಲ್ಲಷ್ಟೇ ಅಲ್ಲದೆ ಬಹುತೇಕ ಎಲ್ಲಾ ಕಡೆಗಳಲ್ಲೂ ನನಗೆ ಕಾಣಸಿಗುತ್ತಿದ್ದವು. ಅಂಗೋಲನ್ನರು ಅದ್ಹೇಗೆ ವ್ಯವಹರಿಸುತ್ತಿದ್ದರೆಂದರೆ ಅವರು ಒಂದು ಬಗೆಯ ಮುಗಿಯದ ಮೋಜಿನ ರಜಾದಿನಗಳಲ್ಲಿದ್ದಂತೆ, ಆ ಕ್ಷಣದ ಇರುವಿಕೆಯನ್ನು ಬಿಟ್ಟರೆ ಬೇರೆಲ್ಲವೂ ನಶ್ವರ ಮತ್ತು ಗೌಣವೆಂಬಂತೆ, ತನ್ನದೇ ಆದ ಹಿತವಾದ ಒಂದು ಕನಸಿನ ಲೋಕದಲ್ಲಿ ತೇಲಾಡುತ್ತಿರುವವರಂತೆ ನನಗವರು ಕಾಣುತ್ತಿದ್ದರು.

ಇಲ್ಲಿ ಯಾರಿಗೂ ಯಾವ ಅವಸರಗಳೂ ಇರಲಿಲ್ಲ. ಇಡೀ ದೇಶವೇ ಒಂದು ಬಗೆಯ ನಿಧಾನಗತಿಯಲ್ಲಿ ತೋರಿಸಲಾಗುವ ಸಿನಿಮೀಯ ದೃಶ್ಯದಂತೆ ಚಲಿಸುತ್ತಿತ್ತು. ಸಮಯಪಾಲನೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದ ನನ್ನಂತಹ ಆಸಾಮಿಗೆ ಇವೆಲ್ಲವೂ ಗೊಂದಲವನ್ನು ತಂದಿದ್ದರಲ್ಲಿ ಆಶ್ಚರ್ಯವೇ ಇರಲಿಲ್ಲ.

ತನ್ನ ಆಫ್ರಿಕಾ ದಿನಗಳ ಬಗ್ಗೆ ಪೋಲಿಷ್ ಪತ್ರಕರ್ತ ರೈಷಾರ್ಡ್ ಕಪುಶಿನ್ಸ್ಕಿಯವರು ಬರೆದ ‘The Shadow of the Sun’ ಕೃತಿಯು ವಿಶ್ವದಾದ್ಯಂತ ದೊಡ್ಡಮಟ್ಟಿನ ಖ್ಯಾತಿಯನ್ನು ಗಳಿಸಿರುವಂಥದ್ದು. ಈ ಕೃತಿಯನ್ನು ‘ಸೂರ್ಯನ ನೆರಳು’ ಎಂಬ ಹೆಸರಿನಲ್ಲಿ ಲೇಖಕಿ ಸಹನಾ ಹೆಗಡೆಯವರು ಸೊಗಸಾಗಿ ಕನ್ನಡಕ್ಕೆ ತಂದಿದ್ದಾರೆ. ನನಗಾದ ಅನುಭವಗಳು ಈತನದ್ದೂ ಆಗಿದ್ದವು ಎಂಬ ಸತ್ಯವನ್ನು ನಾನಿಲ್ಲಿ ಅನಿರೀಕ್ಷಿತವಾಗಿ ಕಂಡುಕೊಂಡಿದ್ದೆ.

ಉದಾಹರಣೆಗೆ ಇಲ್ಲೊಂದು ಪ್ರಸಂಗ ಬರುತ್ತದೆ. ಘಾನಾದಲ್ಲಿ ಬಸ್ಸೊಂದನ್ನು ಹತ್ತಿ ಕೂರುವ ರೈಷಾರ್ಡ್ ”ಬಸ್ಸು ಯಾವಾಗ ಹೊರಡುತ್ತದೆ?” ಎಂದು ಚಾಲಕನಲ್ಲಿ ಕೇಳುತ್ತಾನೆ. ”ಯಾವಾಗ ಹೊರಡುತ್ತದೆ ಅಂದ್ರೇನು ಅರ್ಥ? ಬಸ್ಸು ಪ್ರಯಾಣಿಕರಿಂದ ತುಂಬಿಹೋದ ನಂತರ ಹೊರಡುತ್ತದೆ”, ಎನ್ನುತ್ತಾನೆ ಚಾಲಕ. ಈ ಮಾತನ್ನು ಕೇಳಿ ಪೆಚ್ಚಾದ ಲೇಖಕ ತೆಪ್ಪಗಾಗಿ ವಿಧಿಯಿಲ್ಲದೆ ಇತರರಂತೆಯೇ ಕಾಯುವ ಕೆಲಸಕ್ಕೆ ಕೂರುತ್ತಾನೆ. ಶೂನ್ಯದತ್ತ ದಿಟ್ಟಿಸುತ್ತಾ ಕಾಯುವುದು ಎಂದರೆ ಆಫ್ರಿಕನ್ನರಲ್ಲಿ ಅದು ಉಸಿರಾಟದಷ್ಟೇ ಸಹಜವಾದ ಕ್ರಿಯೆ ಎಂದು ಬರೆಯುತ್ತಾನೆ ಕಪುಶಿನ್ಸ್ಕಿ.

ಈ ನಿಟ್ಟಿನಲ್ಲಿ ಕಪುಶಿನ್ಸ್ಕಿಯವರ ವಾದಸರಣಿಯು ಬಲು ಸ್ವಾರಸ್ಯಕರವಾಗಿರುವಂಥದ್ದು. ನನ್ನಂತಹ ಯೂರೋಪಿಯನ್ನರಲ್ಲಿ ಕಾಲವೆಂಬುದು ವಸ್ತುನಿಷ್ಠವಾಗಿದ್ದರೆ ಆಫ್ರಿಕನ್ನರಲ್ಲಿ ಅದು ಭಾವನಿಷ್ಠವಾಗಿದೆ ಎಂದು ಆತ ಬರೆಯುತ್ತಾನೆ. ಹಾಗೆಯೇ ಮುಂದುವರೆಸುತ್ತಾ ಯೂರೋಪಿಯನ್ನರು ಕಾಲದ ಚೌಕಟ್ಟಿನಲ್ಲಿ ಬಂಧಿಗಳಾಗಿರುತ್ತಾರೆ, ಒಂದೊಂದು ನಿಮಿಷವೂ ಅವರಿಗೆ ಅಮೂಲ್ಯ ಮತ್ತು ಲೆಕ್ಕಾಚಾರದ್ದಲ್ಲದೆ ಒಂದು ರೀತಿಯಲ್ಲಿ ಕಾಲದ ಕಪಿಮುಷ್ಟಿಯಲ್ಲೇ ದಿನದೂಡುವವರಂತೆ ಕಾಣುತ್ತಾರೆ.

ಆದರೆ ಆಫ್ರಿಕನ್ನರು ಹಾಗಲ್ಲ. ಆಫ್ರಿಕನ್ನರಿಗೆ ತಮ್ಮಿಂದಲೇ ಕಾಲದ ಅಸ್ತಿತ್ವವು ಸಾಬೀತಾಗುವ ಬಗ್ಗೆ ಹೆಚ್ಚಿನ ನಂಬಿಕೆ. ತನ್ನಿಂದ ಒಂದು ಕೆಲಸವು ಇಷ್ಟು ಸಮಯದಲ್ಲಿ ಆಗಿದ್ದೇ ಆದಲ್ಲಿ ಈ ಅವಧಿಯಲ್ಲಿ ಕೆಲಸವೊಂದು ಆಯಿತು ಎನ್ನಬಹುದು. ಆದರೆ ಅಂಥದ್ದೊಂದು ಕ್ರಿಯೆಯು ಆಗಿಯೇ ಇಲ್ಲದಿದ್ದಲ್ಲಿ ಕಾಲದ ಇರುವಿಕೆಗಾಗಲಿ, ಚೌಕಟ್ಟಿಗಾಗಲಿ ಅರ್ಥವೇ ಇಲ್ಲ ಎಂದು ಬರೆಯುತ್ತಾನೆ ಆತ. ಓದಿನ ನೆಲೆಯಲ್ಲಿ ಇವುಗಳೆಲ್ಲಾ ಬರೀ ಥಿಯಾರಿಟಿಕಲ್ ಅಷ್ಟೇ ಎಂದು ಓದುಗರಿಗೆ ಅನ್ನಿಸಿದರೆ ಅದು ಸಹಜವೇ. ಆದರೆ ಇದರ ಪ್ರತ್ಯಕ್ಷ ಅನುಭವವನ್ನು ಪಡೆಯಲು ನೀವು ಆಫ್ರಿಕಾಗೆ ಬರಲೇಬೇಕು. ಬರುವುದಷ್ಟೇ ಅಲ್ಲ, ಒಂದಿಷ್ಟು ಕಾಲ ಇಲ್ಲಿದ್ದು ಇಲ್ಲಿಯ ಜನಜೀವನವನ್ನು ಸೂಕ್ಷ್ಮವಾಗಿ ಅವಲೋಕಿಸಬೇಕು.

ರೈಷಾರ್ಡ್ ರಪುಶಿನ್ಸ್ಕಿ ಇವೆಲ್ಲವನ್ನೂ ಅರ್ಧ ಶತಮಾನಗಳ ಹಿಂದೆಯೇ ಬರೆದಿದ್ದರೂ ಸಾಮಾಜಿಕ ನೆಲೆಯಲ್ಲಿ ಹೆಚ್ಚಿನ ಬದಲಾವಣೆಗಳೇನೂ ಆಗಿಲ್ಲ ಎಂಬ ಸಂಗತಿಯೇ ನನ್ನನ್ನು ಬೆರಗಾಗಿಸಿತ್ತು.

ಇದನ್ನು ಆಲಸ್ಯವೆನ್ನಬೇಕೋ, ಜಡತ್ವವೆನ್ನಬೇಕೋ ಎಂಬುದನ್ನು ತಿಳಿಯದೆ ಹಲವು ಕಾಲ ತಲೆಕೆಡಿಸಿಕೊಂಡಿದ್ದ ದಿನಗಳೂ ಇವೆ. ಆದರೆ ಒಂದೇ ಪ್ರದೇಶದಲ್ಲಿ ದೀರ್ಘಾವಧಿಯವರೆಗೆ ಇದ್ದಾಗ ಕ್ರಮೇಣ ಇವೆಲ್ಲವೂ ಸಾಮಾನ್ಯವೆಂಬಂತೆ ಬದಲಾಗುವುದು ಸಹಜ. ಜೊತೆಗೇ ಹಾಗಾದರೂ ಕೂಡ ಅದು ತನ್ನದೇ ಆದ ಮಿತಿಯಲ್ಲೇ ಆಗುತ್ತದೆ ಎಂಬುದೂ ಸತ್ಯ. ಉದಾಹರಣೆಗೆ ಹೀಗೆ ಸ್ಲೋ-ಮೋಷನ್ನಿನಲ್ಲಿ ಬದುಕುವುದು ಸರಿಯೆಂಬುದು ನನ್ನ ವೈಯಕ್ತಿಕ ಅಭಿಪ್ರಾಯವೇನೂ ಅಲ್ಲ. ಆದರೆ ಇದು ನೆಲದ ಸಂಸ್ಕøತಿಯೇ ಎಂಬಷ್ಟು ಗಾಢವಾಗಿ ಇಲ್ಲಿ ಬೇರೂರಿರುವಾಗ ಅದನ್ನು ಧಿಕ್ಕರಿಸುವುದು ವ್ಯರ್ಥ.

ಗ್ರಾಹಕನೊಬ್ಬ ಕಣ್ಣ ಮುಂದಿದ್ದರೂ ಹರೆಯದ ಹುಡುಗಿಯಂತೆ ಚೆಲ್ಲುಚೆಲ್ಲಾಗಿ ತನ್ನ ಟೆಲಿಫೋನ್ ಕರೆಯಲ್ಲೇ ಮುಳುಗಿರುವ ಅಂಗಡಿಯಾತ, ಮಾಡುತ್ತಿರುವ ಕೆಲಸವೊಂದು ಇನ್ನೇನು ಮುಗಿಯಲಿದೆ ಎಂಬ ಹಂತದಲ್ಲಿ ಎದ್ದು ಹೋಗಿ ಅರ್ಧ-ಮುಕ್ಕಾಲು ತಾಸು ಮಾಯವಾಗುವ ಸಿಬ್ಬಂದಿ, ನಾಳೆ ಮುಂಜಾನೆ ಹತ್ತಕ್ಕೆ ಬನ್ನಿ ಎಂದು ಕರೆದು ಈ ಸೂಚನೆಯಂತೆ ಹತ್ತಕ್ಕೆ ಸರಿಯಾಗಿ ಹೋದರೆ ‘ಅಯ್ಯೋ, ನಾನು ಇಲ್ಲಿಲ್ಲ, ರಜೆಯಲ್ಲಿದ್ದೇನೆ. ಹತ್ತು ದಿನಗಳ ನಂತರವೇ ನಾನು ಬರುವುದು’ ಎಂದು ಕರೆ ಮಾಡಿದಾಗ ಟೆಲಿಫೋನಿನಲ್ಲಿ ಹಾಯಾಗಿ ಹೇಳುವ ಅಧಿಕಾರಿ, ನಿಧಾನಗತಿಯ ಸೇವೆಗಳಿಂದಾಗಿ ಜನರಿಂದ ತುಂಬಿಹೋಗಿರುವ ಬ್ಯಾಂಕುಗಳು… ಇತ್ಯಾದಿಗಳು ಇಲ್ಲಿಯ ಸ್ಥಳೀಯರಿಗೆ ತಲೆಕೆಡಿಸಿಕೊಳ್ಳಬೇಕಾದ ಸಂಗತಿಯೇ ಅಲ್ಲ. ನಿಧಾನಗತಿಯ ಚಲನೆಯು ಅವರ ಜೀವನವೇ ಆಗಿಬಿಟ್ಟಿದೆ.

”ನೀವು ಒಪ್ಪಿಕೊಳ್ಳಿ ಅಥವಾ ಬಿಟ್ಟುಬಿಡಿ. ಆದರೆ ಒಂದಂತೂ ಸತ್ಯ. ನಾವು ಅವಸರದಲ್ಲಿದ್ದೇವೆ ಎಂಬ ಮಾತ್ರಕ್ಕೆ ಇಲ್ಲಿ ಕೆಲಸಗಳಾಗುವುದಿಲ್ಲ”, ಎಂದು ಮೆಕ್ಸಿಕನ್ ಹೆಂಗಸೊಬ್ಬಳು ನನ್ನಲ್ಲಿ ಅಂದು ಹೇಳುತ್ತಿದ್ದಳು. ಅಂದು ನಾವು ಗುಂಪಾಗಿ ಕಾಯುತ್ತಾ ಇದ್ದಿದ್ದು ಇಮಿಗ್ರೇಷನ್ ವಿಭಾಗದ ಕಾರ್ಯಾಲಯವೊಂದರಲ್ಲಿ. ಇಂಥಾ ಜಾಗಗಳಿಗೆ ಬಂದರೆ ಅರ್ಧ ಅಥವಾ ಒಂದಿಡೀ ದಿನವು ವ್ಯರ್ಥವಾಗುವುದು ಖಚಿತ ಎಂಬುದು ಆಕೆಯ ಅಭಿಪ್ರಾಯವಾಗಿತ್ತು.

ನಿಸ್ಸಂದೇಹವಾಗಿ ಅದು ನನ್ನ ಲೆಕ್ಕಾಚಾರವೂ ಆಗಿತ್ತು. ಹಲವು ಪೂರ್ವನಿರ್ಧಾರಿತ ಭೇಟಿಗಳನ್ನು ಮುಂಚಿತವಾಗಿ ಸೂಚನೆಯನ್ನೇ ನೀಡದೆ ಏಕಾಏಕಿ ರದ್ದುಗೊಳಿಸುವುದನ್ನು, ರದ್ದಾದ ಪಕ್ಷದಲ್ಲಿ ಸೌಜನ್ಯಕ್ಕಾದರೂ ಈ ಬಗ್ಗೆ ತಿಳಿಸದವರನ್ನು, ನಂತರ ಇವೆಲ್ಲಾ ಗಂಭೀರ ವಿಷಯಗಳೇ ಅಲ್ಲ ಎಂದು ವರ್ತಿಸುವವರನ್ನು ಅಂಗೋಲಾದಲ್ಲಿ ನಾನು ಹಲವಾರು ಬಾರಿ ಕಂಡಿದ್ದೆ. ನೀವು ಸಮಯ ಪರಿಪಾಲಕರಾದರೆ, ತುರ್ತಿನಲ್ಲಿರುವವರಾದರೆ ಅಂಗೋಲಾ ನಿಮಗೆ ಹೇಳಿಮಾಡಿಸಿದ ದೇಶವಲ್ಲ.

ಹಿಂದೊಮ್ಮೆ ಪೋರ್ಚುಗೀಸ್ ಮೂಲದ ಗೆಳೆಯನೊಬ್ಬ ನನಗೆ ಅಪರಾಹ್ನದ ಒಂದು ಘಂಟೆಗೆ ಔತಣಕೂಟವೆಂದು ಆಹ್ವಾನಿಸಿದ್ದ. ಎಂದಿನಂತೆ ಭರ್ತಿ ಒಂದಕ್ಕೆ ನಾನು ಆತನ ನಿವಾಸದಲ್ಲಿದ್ದೆ. ಆದರೆ ಅಲ್ಲಿ ನಡೆಯುತ್ತಿದ್ದ ಬೆಳವಣಿಗೆಗಳನ್ನು ಕಂಡು ನಾನು ತಲೆಯ ಮೇಲೆ ಕೈಯಿಡುವುದಷ್ಟೇ ಬಾಕಿ. ನನ್ನನ್ನು ಆಹ್ವಾನಿಸಿದ ಆತಿಥೇಯರು ಇನ್ನೂ ಮನೆಯಲ್ಲಿ ಧರಿಸುವ ಬಟ್ಟೆಗಳಲ್ಲೇ ಹಾಯಾಗಿದ್ದರು. ಮೀನು, ಮಾಂಸಗಳು ಬೇಯುವುದು ಹಾಗಿರಲಿ, ಅವುಗಳು ಇನ್ನೂ ತೊಳೆಯುವ ಹಂತದಲ್ಲೇ ಇದ್ದವು.

ಉಳಿದ ಅಡುಗೆಗಳು ಅಡುಗೆಮನೆಯಲ್ಲಿ ಆರಂಭಿಕ ಹಂತಗಳಲ್ಲಿದ್ದವು. ”ಅಂಗೋಲನ್ನರು ಮಾತ್ರ ಹೀಗೆ ಅಂದುಕೊಂಡಿದ್ದೆ. ನೀವೂ ಹೀಗೇನಾ?”, ಎಂದು ನಾನು ನನ್ನನ್ನು ಆಹ್ವಾನಿಸಿದ ಗೆಳೆಯನ ಕಾಲೆಳೆದೆ. ”ನಾವು ಬೇಗ ಮಾಡಿದರೇನು ಪ್ರಯೋಜನ? ಬರಬೇಕಾದವರು ಬರಬೇಕಲ್ಲವೇ?”, ಎಂದು ನಗುತ್ತಾ ಹೇಳಿದ ಆತ. ಆತನ ಲೆಕ್ಕಾಚಾರವು ನಿಜವಾಗಿತ್ತು. ಸುಮಾರು ಮೂರರ ಹೊತ್ತಿಗೆ ಎಲ್ಲಾ ಆಹ್ವಾನಿತರೂ ಬಂದು ಸೇರಿ ಮೂರೂವರೆಯವರೆಗೆ ಮಧ್ಯಾಹ್ನದ ಊಟವನ್ನು ಸವಿಯಲು ನಾವು ತಯಾರಾಗಿದ್ದೆವು. ಅಷ್ಟರಲ್ಲಿ ನಾನು ಏನಿಲ್ಲವೆಂದರೂ ಒಂದೂವರೆ ಬಾಟಲ್ ಪೋರ್ಚುಗೀಸ್ ವೈನ್ ಅನ್ನು ಸವಿದು ನಿರುಮ್ಮಳನಾಗಿದ್ದೆ. ಹಲವು ಅಂಗೋಲನ್ ಮತ್ತು ಪೋರ್ಚುಗೀಸ್ ಖಾದ್ಯಗಳನ್ನೊಳಗೊಂಡಿದ್ದ ಭೋಜನವು ಐದರವರೆಗೆ ಮುಂದುವರಿದಿತ್ತು.

ಭಾರತದಿಂದ ನಮ್ಮಲ್ಲಿಗೆ ಅತಿಥಿಗಳಾಗಿ ಬಂದಿದ್ದ ಹಿರಿಯ ಅಧಿಕಾರಿಯೊಬ್ಬರಿಗೆ ಇಂಥದ್ದೊಂದು ಅನುಭವವಾದಾಗ ತೀವ್ರ ಸಿಡಿಮಿಡಿಗೊಂದು ಕೈಕೈಹಿಸುಕಿದ್ದ ದಿನಗಳು ನನಗಿನ್ನೂ ನೆನಪಿವೆ. ಇಲ್ಲಿಯ ಪ್ರಾಂತದ ಸೋಬಾ (ಊರಿನ ಸರಪಂಚ್) ಈ ಅಧಿಕಾರಿಯೊಂದಿಗೆ ನನ್ನ ಉಪಸ್ಥಿತಿಯಲ್ಲೇ ಒಂದು ಪುಟ್ಟ ಚರ್ಚೆಯನ್ನು ನಿಗದಿಪಡಿಸಿದ್ದ. ಹೆಚ್ಚೆಂದರೆ ಹದಿನೈದು ನಿಮಿಷಗಳಲ್ಲಿ ಮುಗಿದುಹೋಗಬೇಕಿದ್ದ ಚರ್ಚೆಯದು.

ನಮ್ಮೆಲ್ಲಾ ಮನೆಕೆಲಸಗಳನ್ನು ಬೇಗಬೇಗನೆ ಮುಗಿಸಿ ಮುಂಜಾನೆಯ ಒಂಭತ್ತಕ್ಕೆ ಸರಿಯಾಗಿ ಸೋಬಾ ಹೇಳಿದ್ದ ಶಾಲೆಯನ್ನು ಅಂದು ನಾವು ತಲುಪಿದ್ದೆವು. ಆದರೆ ಅಚ್ಚರಿಯ ವಿಷಯವೆಂದರೆ ಆ ಶಾಲೆಯ ಸಭಾಂಗಣದಲ್ಲಿ ಆಗಲೇ ಕಾರ್ಯಕ್ರಮವೊಂದು ನಡೆಯುತ್ತಿತ್ತು. ನಮ್ಮಲ್ಲಿ ನಡೆಯುವ ಗ್ರಾಮಪಂಚಾಯತ್ ಮೀಟಿಂಗ್ ನಂತೆ ಕಾಣುತ್ತಿದ್ದ ಆ ಸಭೆಯಲ್ಲಿ ಗ್ರಾಮಸ್ಥರು ಜೋರಾಗಿ ಸೂರು ಕಿತ್ತುಹೋಗುವಂತೆ ಬೊಬ್ಬಿರಿಯುತ್ತಾ ಚರ್ಚಿಸುತ್ತಿದ್ದರು. ಸೋಬಾ ಸಾಹೇಬ್ರು ಈಗ ಬರುತ್ತಾರೆ, ಮತ್ತೆ ಬರುತ್ತಾರೆ ಎಂದು ಕಾಯುತ್ತಾ ನಿಂತಿದ್ದ ನಮಗೆ ಸಿಕ್ಕಿದ್ದು ಮಾತ್ರ ನಿರಾಶೆ. ಅಂತೂ ಮೂವತ್ತು ನಿಮಿಷಗಳು ನೋಡನೋಡುತ್ತಿರುವಂತೆಯೇ ನಿರರ್ಥಕವಾಗಿ ಕಳೆದುಹೋದವು.

ಅರ್ಧತಾಸಿನ ಬಳಿಕ ಫೋನಿಗೆ ಸಿಕ್ಕ ಸೋಬಾ ಲಗುಬಗೆಯಿಂದ ನಮ್ಮನ್ನು ಸ್ವಾಗತಿಸುತ್ತಾ ”ನೀವು ಇಲ್ಲೇ ನನಗಾಗಿ ಕಾಯುತ್ತಿರಿ. ಎರಡೇ ನಿಮಿಷದಲ್ಲಿ ಬಂದು ಬಿಡುತ್ತೇನೆ”, ಎನ್ನುತ್ತಾ ಬಂದ ವೇಗದಲ್ಲೇ ಮಾಯವಾದ. ಸುಮಾರು ಇಪ್ಪತ್ತು ನಿಮಿಷಗಳು ಸರಿದುಹೋದವು. ಮತ್ತೆ ಬಂದ ಅದೇ ವ್ಯಕ್ತಿ ”ಎರಡೇ ಎರಡು ನಿಮಿಷ ಸಾರ್, ಬಂದೆ ಇರಿ” ಎನ್ನುತ್ತಾ ಎರಡನೇ ಬಾರಿ ಮಾಯವಾದ. ಮಂದೆ ಇದು ಏನಿಲ್ಲವೆಂದರೂ ಮೂರು ಬಾರಿ ಪುನರಾವರ್ತನೆಯಾಯಿತು. ಮುಂಜಾನೆಯ ಸೌಮ್ಯ ಸೂರ್ಯ ಈಗ ನೆತ್ತಿಯ ಮೇಲೆ ಬರುತ್ತಾ ಇನ್ನಿಲ್ಲದಂತೆ ಧಗಧಗಿಸತೊಡಗಿದ್ದ.

ಸಂಸತ್ತಿನಂತೆ ಶಾಲೆಯ ಸಭಾಂಗಣದಿಂದ ಜನರ ಸದ್ದು ಇನ್ನೂ ಬರುತ್ತಲೇ ಇತ್ತು. ಕಳೆದ ಎರಡೂವರೆ ತಾಸುಗಳಿಂದ ಏನೂ ಬದಲಾಗಿರಲಿಲ್ಲ. ನಾವು ಮಾತ್ರ ಬಿಸಿಲಿನ ಝಳಕ್ಕೆ ಒಣಗುತ್ತಾ ಕೂರಲು ಒಂದು ಪುಟ್ಟ ಜಾಗವೂ ಇಲ್ಲದೆ ಬೆವರೊರೆಸುವ ಕಾರ್ಯದಲ್ಲೇ ಮಗ್ನರಾಗಿದ್ದೆವು. ಕೊನೆಗೂ ಏನಾಗುತ್ತಿದೆಯೆಂಬುದನ್ನು ತಿಳಿಯದೆ ಸಿಡಿಮಿಡಿಗೊಂಡ ನಮ್ಮೊಂದಿಗಿದ್ದ ಅಧಿಕಾರಿ ನನ್ನ ದುಭಾಷಿಗೆ ಸ್ಪಷ್ಟವಾಗಿ ಹೀಗೆಂದು ಹೇಳಿದ: ”ಇದೇ ಕೊನೆ. ಸೋಬಾನಿಗೆ ಕರೆ ಮಾಡಿ ಏನೆಂದು ಕೇಳು. ಆತ ತಯಾರಿದ್ದರೆ ಮಾತನಾಡೋಣ. ಇಲ್ಲವಾದರೆ ಮರಳೋಣವಂತೆ. ಮಧ್ಯಾಹ್ನದ ಊಟದ ಸಮಯವೂ ಆಯಿತು”.

ಅಧಿಕಾರಿಯ ಆಣತಿಯನ್ನು ಪಾಲಿಸಿದ ನನ್ನ ದುಭಾಷಿ ಸೋಬಾನಿಗೆ ಕರೆ ಮಾಡಿದ್ದೂ, ಸಂಭಾಷಣೆಯನ್ನು ಸ್ಪೀಕರ್ ಮೋಡ್ ನಲ್ಲಿ ಹಾಕಿದ್ದೂ ಆಯಿತು. ಸೋಬಾ ಅತ್ತ ಕಡೆಯಿಂದ ಇನ್ನೂ ಹೇಳುತ್ತಲೇ ಇದ್ದ: ”ಸಾರ್, ಎರಡು ನಿಮಿಷ… ಎರಡೇ ಎರಡು ನಿಮಿಷ…!”

1 comment

Leave a Reply