fbpx

ಅಪ್ಪನಿಗೆ ಕವಳವೆಂದರೆ ಪ್ರೀತಿ..

ಇಲ್ಲಿ ಮಗ ವಿಠ್ಠಲ ಭಂಡಾರಿ ತಾನು ಅಪ್ಪನನ್ನು ಕಂಡ ಬಗೆಯನ್ನು ಬಣ್ಣಿಸಿದ್ದಾನೆ. ಒಂದಷ್ಟು ಕಂತಿನಲ್ಲಿ ಅವರ ಬಗೆಗೆ ಒಂದು ನೋಟವನ್ನು ಕಟ್ಟಿಕೊಡಲು ‘ಅವಧಿ’ ಪ್ರಯತ್ನಿಸುತ್ತದೆ.

ಈ ಹಿಂದೆ ಖ್ಯಾತ ಪ್ರೊಫೆಸರ್ ಎಚ್ ಎಸ್ ಈಶ್ವರ್ ಅವರು ತನ್ನ ಅಣ್ಣ , ಕನ್ನಡ ಲೋಕ ಕಂಡ ಮಹತ್ವದ ವಿಮರ್ಶಕ ಡಾ ಹಾಮಾ ನಾಯಕ್ ಅವರ ಬಗ್ಗೆ ಬರೆದಿದ್ದರು. ಡಾ ಹಾ ಮಾ ನಾಯಕ್ ಅವರ ಬದುಕು ಹೀಗಿತ್ತು ಎಂದು ಎಷ್ಟೋ ಓದುಗರಿಗೆ ಗೊತ್ತಾಗಿದ್ದು ಆ ಬರಹ ಸರಣಿಯಿಂದಾಗಿಯೇ

ಈಗ ವಿಠ್ಠಲನ ಸರದಿ. ಅಪ್ಪನನ್ನ ಅಂತೆಯೇ ನಮ್ಮ ಮುಂದೆ ನಿಲ್ಲಿಸಲಿದ್ದಾನೆ

ನೆನಪು 2.

ರಸಗವಳ

ಮಧ್ಯಾಹ್ನ ಮತ್ತು ರಾತ್ರಿ ಊಟದ ನಂತರ ಎರಡು ಮಹತ್ವದ ಮತ್ತು ಮಹಾ ಕವಳವನ್ನು ಆತ ಹಾಕುತ್ತಿದ್ದ. ಖಂಡಿತವಾಗಿ ಅದು ರಸಗವಳದೇ ಆಗಿರುತ್ತಿತ್ತು. ನನ್ನ ಆಯಿ (ಅಜ್ಜಿ -ತಂದೆಯವರ ತಾಯಿ) ಕೂಡ ಕವಳ ಪ್ರಿಯೆ. ಯಾವತ್ತೂ ಬಾಯಲ್ಲಿ ಕವಳ ಇರಲೇಬೇಕು. ಸಣ್ಣ ಕವಳ ಅದು. ಒಂದು ಅಡಿಕೆ ಹೋಳು, ಅರ್ಧ ಎಲೆ, ಚಿಟಿಕೆ ಸುಣ್ಣ, ಸಣ್ಣ ತಂಬಾಕು ಅಷ್ಟೆ, ಚಾಲಿ ಅಡಿಕೆಯದರಂತೂ ತುಂಬಾ ಖುಷಿ.

ಯಾಕೆಂದರೆ ಆಕೆಗೆ ಹಲ್ಲು ಗಟ್ಟಿ ಇತ್ತು. 80ನೇ ವರ್ಷದಲ್ಲೂ ಚಾಲಿ ಅಡಿಕೆ ಪುಡಿ ಮಾಡುವ ಹಲ್ಲು ಅವಳದು. ಅಣ್ಣ ಅಡಿಕೆ ಎಲೆ ಕಲ್ಲಲ್ಲಿ ಜಜ್ಜಿ ತಿನ್ನುವುದು ನೋಡಿ “ಕವಳ ಕುಟ್ಟಿ ತಿನ್ನುವ ಮುದುಕನನ್ನು ನೋಡಿ” ಎಂದು ನಗುತ್ತಿದ್ದಳು. ಪ್ರೀತಿಯಿಂದ ಕವಳದ ಬಟ್ಟಲನ್ನು ಸಿದ್ಧಪಡಿಸಿ ಇಟ್ಟಿರುತ್ತಿದ್ದಳು. ಅಣ್ಣ ಊಟ ಮಾಡಿದ ಮೇಲೆ “ಹಿಡ್ಯೋ ಹುಡ್ಗ, ಸುಣ್ಣ ಸ್ವಲ್ಪ ಹಾಕು, ಜೋರ್ ಘಾಟು, ಚಿಪ್ಪಿ ಸುಣ್ಣ ಇದು” ಎಂದು ಎಚ್ಚರಿಸಿ ಅವನ ಮುಂದೆ ಇಡುತ್ತಿದ್ದಳು. (ಮಗನನ್ನು ಆಕೆ ಯಾವಾಗಲೂ ಹುಡ್ಗ ಎಂದೇ ಸಂಬೋಧಿಸುವುದು.).

ಅಣ್ಣ ಕವಳದ ಚೊಬ್ಬೆ ಹಿಡಿದು 3-4 ಎಲೆಯನ್ನು (ಕುಮಟಾ ಕರಿ ವೀಳ್ಯದ ಎಲೆ) ತೊಡೆಯ ಮೇಲೆ ಒಂದರ ಮೇಲೆ ಒಂದನ್ನು ಇಟ್ಟು, ಹದಕ್ಕೆ ತಕ್ಕ ಸುಣ್ಣವನ್ನು ಇಡೀ ಎಲೆಗೆ ಹಚ್ಚಿ, ಮಲಬಾರ ತಂಬಾಕನ್ನು ಒಂದು ಎಲೆಯಷ್ಟು ದೊಡ್ಡದು ತೆಗೆದುಕೊಂಡು ಎಲೆಯ ಮೇಲಿಟ್ಟು, 2-3 ಅಡಿಕೆ ಹೋಳನ್ನು ಮೇಲಿಟ್ಟು ಪಕ್ಕದ ಕಲ್ಲಿನ ಮೇಲೆ ಜಪ್ಪಿ ಬಾಯಲ್ಲಿ ಹಾಕಿಕೊಂಡನೆಂದರೆ 2-3 ತಾಸು ಅವರ ಸವಿಯೊಂದಿಗೆ ಆತನ ಓದು ಮಿಳಿತವಾಗುತ್ತಿತ್ತು.

ಆಗ ಬಾಯ್ತುಂಬ ಕವಳದಿಂದಾಗಿ ಆತನ ಮುಖದಲ್ಲಿಯ ಗಂಭೀರತೆ ಹೊರಟು ಹೋಗಿ ಭಯ ಕಡಿಮೆ ಆಗುತ್ತಿತ್ತು. ಹಾಗೆಯೇ ಆತ ಅದನ್ನು ತಕ್ಷಣ ಉಗಿಯದಿರುವುದರಿಂದ ಮಾತನಾಡಲು ಸಾಧ್ಯ ಆಗುತ್ತಿರಲಿಲ್ಲ. ತಲೆಯ ಮತ್ತು ಕೈ ಸನ್ನೆಯ ಮೂಲಕವೇ ಮಾತನಾಡುತ್ತಿರುವುದರಿಂದ ಯಾವುದೇ ಕಾರಣಕ್ಕೆ ಬೈಯಲು ಅವಕಾಶವೇ ಇರುತ್ತಿರಲಿಲ್ಲ. ಹಾಗಾಗಿ ಆತನ ಎದುರು ಬೇಡಿಕೆ ಇಡಲು ಇದೇ ಸೂಕ್ತ ಸಮಯವೆಂದು ಬೇಡಿಕೆ ಇಡುತ್ತಿದ್ದೆ. ಹೀಗಿತ್ತು ಅವನೆದುರಿಗಿನ ನಮ್ಮ ಭಯ.

ಆಮೇಲೆ ಆತ ಹೊಸ ಹಲ್ಲು ಸೆಟ್ ಬಂದ ನಂತರ ಕವಳ ಹಾಕುವುದನ್ನೇ ಬಿಟ್ಟ. ಯಾಕೆಂದರೆ ಹಲ್ಲು ಕೆಂಪಾಗುವದೆಂಬ ಬೇಸರ, ಮತ್ತೆ ಕವಳವನ್ನು ಸ್ವಲ್ಪವೂ ಅಗಿಯದಿದ್ದರೆ ಅದಕ್ಕೊಂದು ಮಜಾ ಬರಲಾರದೆಂಬ  ಕಾರಣಕ್ಕಿರಬಹುದು ಎಂದು ಕೊಂಡಿದ್ದೆ. ಆದರೆ ಅದಕ್ಕಾಗಿರಲಿಲ್ಲ ಎಂದು ಆಮೇಲೆ ತಿಳಿಯಿತು. ಆತನನ್ನೇ ಕೇಳಿ ತಿಳಿದೆ.

ಕವಳ ಹಾಕಲು ಮತ್ತು ಆಮೇಲೆ ಹಲ್ಲು ತೊಳೆದುಕೊಳ್ಳಲು ಸುಮಾರು ಅರ್ಧ ಗಂಟೆ ಬೇಕಾಗುತ್ತದೆ. ಅಷ್ಟು ಸಮಯ ಸುಮ್ಮನೆ ವ್ಯರ್ಥ ಮಾಡುವುದಕ್ಕಿಂತ ಓದುವುದು-ಬರೆಯುವುದು ಒಳ್ಳೆಯದು ಎನ್ನುವುದೇ ಕಾರಣವಾಗಿತ್ತು.

ಸಾಮಾನ್ಯವಾಗಿ ಆತ ಮನೆಯಲ್ಲಿ ಮಾತ್ರ ಕವಳ ಹಾಕುತ್ತಿದ್ದ. ಪೇಟೆಗೆ ಹೋಗಿ ಬೀಡಾ ತಿನ್ನುವುದಾಗಲೀ, ಶಾಲೆಯಲ್ಲಿ ಕವಳ ಅಗಿಯುವುದಾಗಲೀ ಆತ ಮಾಡುತ್ತಿರಲಿಲ್ಲ ಮತ್ತು ಹಾಗೆ ಮಾಡುವವರನ್ನು ಕಂಡರೆ ಆತ ಬೇಸರ ಮಾಡಿಕೊಳ್ಳುತ್ತಿದ್ದ. ಬೇರೆ ಮನೆಗೆ ಊಟಕ್ಕೆ ಹೋದಾಗ ಅಥವಾ ತಾಳಮದ್ದಲೆಗೆ ಹೋದಾಗ ಆತ ಬಹುತೇಕ ಕವಳ ಹಾಕುತ್ತಿರಲಿಲ್ಲ. ಯಾಕೆಂದರೆ ಹೋದಲ್ಲೆಲ್ಲಾ ಕವಳ ಜಪ್ಪುವ ಕಲ್ಲು ಸಿಗುತ್ತಿರಲಿಲ್ಲ.

ಅಜ್ಜನ ಮನೆಗೆ ಅಥವಾ ಬಿ.ವಿ. ಭಂಡಾರಿಯವರ ಮನೆಗೆ ಹೋದಾಗ ಅಲ್ಲಿ ಇವನಿಗಾಗಿ ಕವಳದ ಕಲ್ಲನ್ನು ಸಿದ್ಧಪಡಿಸಿಡುತ್ತಿದ್ದರು. ಆಕಾಲದ ಅತಿಥಿ ಸತ್ಕಾರದ ಕ್ರಿಯಾಚರಣೆಯಲ್ಲಿ ಕವಳ ಪ್ರಮುಖವಾಗಿದ್ದಾಗಿತ್ತು. ಆದರೆ ಕೆಳ ಜಾತಿರವರಿಗೆ ಮತ್ತು ದಲಿತರಿಗೆ ಕವಳದ ಚೊಬ್ಬೆ ನೀಡುತ್ತಿರಲಿಲ್ಲ. ಮೇಲಿಂದ ಅದನ್ನು ಅಂಗೈಗೆ ಒಗೆಯುತ್ತಿದ್ದರು. ಇದಕ್ಕೂ ಜಾತೀಯತೆಯ ಮೋಡ ಕವಿದಿತ್ತು. ಈಗಲೂ ಅದು ಮುಂದುವರಿದಿದೆ.

ಆದೆ ನಮ್ಮ ಮನೆಯಲ್ಲಿ ಹೀಗೆ ಯಾರಿಗೂ ಕೈಗೆ ಒಗೆಯುವ ಪದ್ಧತಿ ಇರಲಿಲ್ಲ. ಆದರೆ ದಲಿತನಾದ ಹೋಡ್ಪುತ್ತುವಿಗೆ ಕವಳ ಚೊಬ್ಬೆಯನ್ನು ಕೊಡಲು ಮುಂದಾದಾಗೆಲ್ಲ ಹೋಡ್ಪುತ್ತು ಅದನ್ನು ನಿರಾಕರಿಸುತ್ತಿದ್ದ. ಹೀಗೆ ತೆಗೆದುಕೊಂಡರೆ ದೇವರು ಅವನಿಗೇ ಶಿಕ್ಷೆ ಕೊಡುತ್ತಾನೆಂದೇ ಆತ ತಿಳಿದಿದ್ದ. ಆದರೆ ಆತನಿಗೆ ತಿಳಿ ಹೇಳುವ ನಿರಂತರ ಪ್ರಯತ್ನದಿಂದ ಮತ್ತು ಅಜ್ಜಿಯ ಮನಸ್ಸಿನ ಬದಲಾವಣೆಯಿಂದ ಆತನ ಕೈಗೆ ಕವಳದ ಜೊಬ್ಬೆಯನ್ನೇ ಕೊಡುವಲ್ಲಿ ಅಣ್ಣ ಯಶಸ್ವಿಯೂ ಆಗಿದ್ದ.

ಅಣ್ಣ ಯಾವತ್ತೂ ಬೈಯುತ್ತಿರಲಿಲ್ಲ; ಅಪರೂಪಕ್ಕೊಮ್ಮೆ, ಅಕ್ಕ (ತಾಯಿಗೆ ನಾವು ಅಕ್ಕ ಎನ್ನುವುದು. ಅಪ್ಪನಿಗೆ ಅಣ್ಣ ಎನ್ನುವುದು. ಅಜ್ಜಿಗೆ ಆಯಿ ಎನ್ನುವುದು.) ಯಾವಾಗಲೋ ಬೈದಾಗ ಅವನು ಸಿಟ್ಟುಗೊಳ್ಳುತ್ತಿದ್ದ. ಹಾಗೆ ದಿನನಿತ್ಯ ಬೈಯ್ಯಬಾರದು ಎನ್ನುತ್ತಿದ್ದ. ಆತ ಬೈದಾಗೆಲ್ಲಾ ಅಳುವುದು ಬಿಟ್ಟರೆ ಬೇರೆ ದಾರಿ ಇರಲಿಲ್ಲ. ಅಕ್ಕ ಬೈದಾಗ ಸಿಟ್ಟು ಬರುತ್ತಿತ್ತು. ಅಣ್ಣ ಬೈದಾಗ ಅಳು ಬರುತ್ತಿತ್ತು. ಅವಮಾನವಾದಂತೆ ಎನಿಸುತ್ತಿತ್ತು. ಏನೋ ತಪ್ಪು ಮಾಡಿದೆ ಎನಿಸುತ್ತಿತ್ತು. ಇನ್ನೊಮ್ಮೆ ಆ ತಪ್ಪು ಮಾಡುತ್ತಿರಲಿಲ್ಲ. ತಪ್ಪು ಮಾಡುವ ಸಂದರ್ಭ ಬಂದಾಗಲೆಲ್ಲ ಅಣ್ಣನ ನೆನಪಾಗಿ ನಾವು ಸಂಭಾವಿತರಾಗುತ್ತಿದ್ದೆವು.

। ಇನ್ನು ನಾಳೆಗೆ ।

Leave a Reply