fbpx

ಕುವೆಂಪು ‘ಕೋಳಿಪುರಾಣ’

ಚಂದ್ರಶೇಖರ ನಂಗಲಿ 

ಕುವೆಂಪು ಕಾದಂಬರಿಗಳಲ್ಲಿರುವ ‘ತಿರ್ಯಕ್ ಆಲಂಬನ'( = ಆನಿಮೇಷನ್) ಕುರಿತು ಮರುಚಿಂತನೆ ನಡೆಯಬೇಕಾಗಿದೆ.

ಈ ದೃಷ್ಟಿಯಿಂದ ಕಾದಂಬರಿಗಳಲ್ಲಿರುವ ಶ್ವಾನ ಪುರಾಣ, ಕುಕ್ಕುಟ ಪುರಾಣಗಳು ಗಮನಾರ್ಹ! ಇಂಥ ತಿರ್ಯಕ್ ಪುರಾಣಗಳು ಅಂತಿಮವಾಗಿ ಮಾನವ ಪುರಾಣವಾಗಿ ಪರಿವರ್ತನೆ ಗೊಳ್ಳುವುದನ್ನು ಗ್ರಹಿಸದಿದ್ದರೆ, ಹಣ್ಣಿನ ತಿರುಳನ್ನು ಎಸೆದು ಸಿಪ್ಪೆಯನ್ನು ಭುಜಿಸಿದಂತಾಗುತ್ತದೆ. ‘ಕಾನೂರುಹೆಗ್ಗಡಿತಿ’ ಯಲ್ಲಿರುವ ಕುಕ್ಕುಟ ಪುರಾಣವನ್ನು ಕಥನಕ್ರಮದ ಒಟ್ಟುವಿನ್ಯಾಸದಲ್ಲಿ ಕಂಡುಕೊಳ್ಳ ಬೇಕು. ಈ ಕಾದಂಬರಿಯಲ್ಲಿರುವ ಮೂರು ಬಗೆಯ ಕೋಳಿಗಳನ್ನು ಪರಿಚಯಿಸಿ ಕೊಳ್ಳುವ ಸಲುವಾಗಿ ಕುವೆಂಪು ಅವರ ಮಾತುಗಳನ್ನೇ ಆಯ್ದು ಉಲ್ಲೇಖಿಸಲಾಗಿದೆ.

(1) ಕಾಡುಕೋಳಿ:

ಕಾಡುಪರಿಸರದಲ್ಲಿ ಕಂಗೊಳಿಸುವ ವನಕುಕ್ಕುಟ ರಾಜನನ್ನು ಕುವೆಂಪು ಬಿಂಬಜ್ಞಾನದಿಂದ ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ.

“ತೊಂಡೆಯ ಹಣ್ಣನ್ನು ನಗುವಂತೆ ಕೆಂಪು ದಾಸವಾಳವನ್ನೂ ಮೀರಿ ಆರಕ್ತವಾಗಿದ್ದ ಅದರ ಚೊಟ್ಟಿ ನೆತ್ತಿಯನ್ನು ಕೋಮಲ ರಮಣೀಯವಾಗಿ ಅಲಂಕರಿಸಿತ್ತು. ಅದರ ಕತ್ತಿನ ಮೇಲಿದ್ದ ಪೀತವರ್ಣದ ತುಪ್ಪುಳು ಗರಿಗಳು ನವಿಲಿನ ಕಂಠಶ್ರೀಯನ್ನು ನೆನಪಿಗೆ ತರುವಂತೆ ಕೋಲುಬಿಸಿಲಿನಲ್ಲಿ ನುಣ್ಣಗೆ ಮಿರುಗುತ್ತಿದ್ದವು. ಅದರ ರೆಕ್ಕೆ ಮತ್ತು ಪುಕ್ಕದ ಗರಿಗಳು ತರತರದ ಬಣ್ಣಗಳಿಂದ ಶೋಭಿಸುತ್ತಿದ್ದವು. ಮೂರು ಕವಲಾಗಿದ್ದ ಅದರ ಪಾದಗಳೆರಡೂ ಮಣ್ಣಿಡಿದು ಮಾಸಿದ್ದುವು. ಪಾದಗಳ ಮೇಲೆ ಕಡುಗೆಂಪು ಬಣ್ಣವಾಗಿದ್ದ ಅದರ ಮುಂಗಾಲುಗಳ ಹಿಂಭಾಗದಲ್ಲಿ ಕಠಿಣ ಕಂಟಕಗಳಂತೆ ನಖಗಳೆರಡು ಅರ್ಧ ಅಂಗುಲದಷ್ಟು ಉದ್ದವಾಗಿ ಆಯುಧಗಳಂತಿದ್ದವು.

“…ಪುಕ್ಕದಲ್ಲಿದ್ದ ನೀಳವಾದ ಕರ್ರನೆ ಗರಿಗಳೆರಡು ಗರ್ವಿತ ವಿನ್ಯಾಸದಿಂದ ಕೊಂಕಿ ನೆಲದ ಮೇಲೊರಗಿ ಮಿರುಗುತ್ತಿದ್ದವು. ಮೇಲ್ಮೊಗವಾಗಿದ್ದ ಅದರ ಕಣ್ಣುರೆಪ್ಪೆ ಮುಚ್ಚಿ ಜೀವನದ ಮೇಲೆ ಮರಣದ ಪರದೆ ಬಿದ್ದಂತಿತ್ತು …..ಷಿಕಾರಿಯಾದ ಸಂತೋಷದಲ್ಲಿ ಸೆಟ್ಟರು ಕೋವಿಗೆ ವಿರಾಮವಾಗಿ ಈಡು ತುಂಬುತ್ತ ನಿಂತಿದ್ದರು. ಮಸಿಯನ್ನು ಹಾಕಿ ಅದರಮೇಲೆ ಕತ್ತವನ್ನು ಗಜದಲ್ಲಿ ಇಡಿಯುತ್ತಿದ್ದಾಗ ಅದುವರೆಗೂ ಕಂಬಳಿಯ ಪಕ್ಕದಲ್ಲಿ ನಿಷ್ಪಂದವಾಗಿ ಬಿದ್ದಿದ್ದ ಹುಂಜವು ಲಿಬಿಲಿಬಿ ಒದ್ದಾಡಿ ಕೊಂಡಿತು. ಸತ್ತಿದೆ ಎಂದು ಭಾವಿಸಿದ್ದ ಸೆಟ್ಟರಿಗೆ ಸ್ವಲ್ಪ ಆಶ್ಚರ್ಯವಾಗಿ ಕೆಳಗೆ ನೋಡಿದರು…”

“..ಹುಂಜವು ಮತ್ತೆ ನಿಶ್ಚಲವಾಯಿತು. ಎಲ್ಲಿಯೋ ಪ್ರಾಣವಿತ್ತು, ಅದೂ ಹೋಯಿತು ಎಂದು ಜೇಬಿನಿಂದ ಚೆರೆಯನ್ನು ತೆಗೆದು ಅಂಗೈಯ ಮೇಲೆ ಅದರ ಪ್ರಮಾಣ ನಿರ್ಣಯ ಮಾಡುತ್ತಿದ್ದಾಗ ಕೋಳಿ ಬಡಬಡನೆ ಒದ್ದಾಡಿಕೊಂಡು ಎದ್ದುನಿಂತು ತೂರಾಡುತ್ತ ಓಡತೊಡಗಿತು. ಸೆಟ್ಟರು ಚೆರೆಯನ್ನು ಫಕ್ಕಫಕ್ಕನೆ ನಳಿಕೆಗೆ ಸುರಿದು ಎಡಗೈಯಲ್ಲಿ ಕೋವಿಹಿಡಿದು, ಬಲಗೈಯಿಂದ ಆ ಪ್ರಾಣಿಯನ್ನು ಹಿಡಿದು ಕೊಳ್ಳಲು ಹೋದರು. ಅದು ತಪ್ಪಿಸಿಕೊಂಡು ಹೋಗುತ್ತದೆಂದು ಅವರು ಕನಸಿನಲ್ಲಿಯೂ ಭಾವಿಸಿರಲಿಲ್ಲ. ಆದರೆ ಕೋಳಿ ವಕ್ರವಕ್ರವಾಗಿ ತೂರಾಡಿಕೊಂಡು ಪೊದೆಪೊದೆಗಳಲ್ಲಿ ನುಸುಳತೊಡಗಿತು. ಒಂದು ಮಾರು, ಎರಡು ಮಾರು, ಹತ್ತು ಮಾರಾಯಿತು. ಸೆಟ್ಟರಿಗೆ ದಿಗಿಲಾಗಿ ಕೋವಿಯನ್ನು ಕೆಳಗಿಟ್ಟು, ಕೈಗಳೆರಡನ್ನೂ ಮುಂದಕ್ಕೆ ಚಾಚಿ, ಹುಂಜವನ್ನು ಹಿಡಿಯಲು ಸರ್ವಪ್ರಯತ್ನವನ್ನೂ ಮಾಡಿದರು. ಕೋಳಿ ಅಲ್ಲಿ ನುಗ್ಗಿ, ಇಲ್ಲಿ ನುಸುಳಿ, ಕಡೆಗೆ ಒಂದು ನುಗ್ಗಲಾಗದಿದ್ದ ಪೊದೆಗಳ ಹಿಂಡಿನಲ್ಲಿ ಕಣ್ಮರೆಯಾಯಿತು”

(2) ಅಂಕದ ಕೋಳಿ:

ಹಳ್ಳಿಗಾಡುಗಳಲ್ಲಿರುವ, ಮನುಷ್ಯರ ಆರೈಕೆಯಲ್ಲಿದ್ದರೂ ಸ್ವೇಚ್ಛೆಯಾಗಿ ಓಡಾಡಿ ಕೊಂಡಿರುವ, ನಾಟಿಕೋಳಿಗಳನ್ನು ಕೂಡ ಕುವೆಂಪು ವರ್ಣಿಸಿದ್ದಾರೆ. ” ಅಂಕಕ್ಕಾಗಿ ನೆರೆದಿದ್ದ ಕೋಳಿಹುಂಜಗಳನ್ನು ಜೊತೆ ಹಾಕುವುದರಲ್ಲಿ ಚೆನ್ನಾಗಿ ಪಳಗಿದ್ದ ಆ ಬಗಲಿಯು, ಹಿಂದೆ ಅನೇಕ ಅಂಕಗಳಲ್ಲಿ ಗೆದ್ದು ಹೆಸರುವಾಸಿಯಾಗಿ ‘ಅಭಿಮನ್ಯು’ ‘ಕರ್ಣ’ ‘ಅರ್ಜುನ’ ಮೊದಲಾದ ಪೌರಾಣಿಕ ಬಿರುದಾವಳಿಗಳನ್ನು ಪಡೆದು, ನೋಡುವುದಕ್ಕೆ ಲಕ್ಷಣವಾಗಿಯೂ ಧೀರವಾಗಿಯೂ ಇದ್ದು, ತಮ್ಮನ್ನು ಸಂದರ್ಶಿಸುವುದಕ್ಕೆ ಬಂದ ನರಾಕೃತಿಗಳನ್ನು ಅದೇನೋ ಒಂದು ಅಹಂಭಾವದಿಂದ ನೋಡುತ್ತಿದ್ದ ಕೋಳಿಹುಂಜಗಳನ್ನು ಮೈನೀವಿ ಶ್ಲಾಘಿಸಿ ಹುರಿದುಂಬಿಸುತ್ತ, ( ಆ ಬಗಲಿಯು) ಮುಂದೆ ಮುಂದೆ ಸರಿದನು.”

(3) ಕಟ್ಟಿಸಾಕಿದ ಕೋಳಿ:

ಹುಟ್ಟು-ಬೆಳವಣಿಗೆ – ಸಾವು ಈ ಮೂರೂ ಹಂತಗಳಲ್ಲೂ ಪಂಜರಗಳಲ್ಲೇ ಇದ್ದು ಕೊನೆಯುಸಿರೆಳೆಯುವ ಬ್ರಾಯ್ಲರ್ ಕೋಳಿಗಳನ್ನು ಮಾಂಸಕ್ಕಾಗಿಯೇ ಸಾಕುತ್ತಾರೆ. ಸ್ವಲ್ಪಮಟ್ಟಿಗೆ ಇದನ್ನೇ ಹೋಲುವಂಥ ಕುವೆಂಪು ವರ್ಣನೆ ಇಲ್ಲಿದೆ.

“ಸೋಮನಿಗೆ ಹುಂಜದ ಗುರುತು ಸಿಕ್ಕಲಿಲ್ಲ. ಸಿಕ್ಕಿದ್ದರೆ ತಾನು ಕೆಲವು ತಿಂಗಳುಗಳ ಹಿಂದೆ ಹಳೆಪೈಕದ ತಿಮ್ಮನ ಒಡ್ಡಿಯಿಂದ ಕದ್ದುಕೊಂಡುಹೋಗಿ ಕೊಟ್ಟಿದ್ದ ಹುಂಜವು ಅದು ಎಂಬುದು ಗೊತ್ತಾಗುತ್ತಿತ್ತು! ಕತ್ತಲೆಯಲ್ಲಿ ಕದ್ದುಕೊಂಡುಹೋಗಿ ಮುಚ್ಚುಮರೆಮಾಡಿ ಗಾಬರಿಯಿಂದ ಕೊಟ್ಟುಬಂದಿದ್ದುದರಿಂದ ಆಗ ಅವನು ಆ ಹುಂಜವನ್ನು ಚೆನ್ನಾಗಿ ನೋಡಿಯೂ ಇರಲಿಲ್ಲ. ನೋಡಿದ್ದರೂ ಚೊಟ್ಟಿ ಪುಕ್ಕಗಳನ್ನು ಕತ್ತರಿಸಿ, ಯಾರೂ ಕಾಣದಂತೆ ಕತ್ತಲೆಯಲ್ಲಿ ಕಟ್ಟಿ ಸಾಕಿದ್ದರಿಂದ ಅಸಹ್ಯವಾಗಿ ಬೊಜ್ಜುಬೆಳೆದಿದ್ದ ಅದನ್ನು ಈಗ ಗುರುತಿಸುವುದೂ ಸೋಮನಿಂದ ಸಾಧ್ಯವಾಗುತ್ತಿರಲಿಲ್ಲ. ಅಂತೂ ಕೊಯ್ದು ತಿನ್ನುವುದಕ್ಕೆ ಮಾತ್ರ ಲಾಯಖ್ಖಾಗಿದ್ದ ‘ಬೊಜ್ಜಣ್ಣ’ ನನ್ನು ಕಟ್ಟಿಸಾಕಿದ ಅಂಕದ ಹುಂಜವೆಂದು ಸುಳ್ಳುಹೇಳಿ ಅಂಗಡಿಯವನು ಸೋಮನಿಗೆ ಮೂರು ರೂಪಾಯಿಗೆ ಮಾರಿದನು.”

(1)ಕಾಡುಕೋಳಿ (2)ಅಂಕದ ಕೋಳಿ (3) ಕಟ್ಟಿಸಾಕಿದ ಕೋಳಿಗೆ ಸಂಬಂಧಪಟ್ಟ ಈ ಕುಕ್ಕುಟ ಪುರಾಣವನ್ನು ಪರಿಭಾವಿಸುತ್ತಿದ್ದರೆ, ಇದು ಮಾನವಪುರಾಣವೆಂದೇ ಅನ್ನಿಸುತ್ತದೆ.

ಹೀಗೆ ಅನ್ನಿಸಬೇಕಾದ ಸೂಚ್ಯಾರ್ಥ ಸೂಚನೆಗಳನ್ನಾಗಿ ‘ಅಭಿಮನ್ಯು’ ‘ಕರ್ಣ’ ‘ಅರ್ಜುನ’ ಮುಂತಾದ ಪೌರಾಣಿಕ ಬಿರುದಾವಳಿಗಳನ್ನು ಗ್ರಹಿಸಬೇಕು. ಕುವೆಂಪು ವರ್ಣಿಸಿರುವ ಮೂರುಬಗೆಯ ಕೋಳಿಗಳಲ್ಲಿ ಕ್ರಮವಾಗಿ ಆದಿವಾಸಿ ಕಾಡುಜನರು – ಹಳ್ಳಿಜನರು – ನಾಗರಿಕರು ಬೆರೆತುಹೋಗುತ್ತಾರೆ. ಸೇರೆಗಾರ ರಂಗಪ್ಪ ಸೆಟ್ಟರ ಕೋವಿಯೇಟಿಗೆ ಈಡಾಗಿದ್ದರೂ ಕಡೆಗೆ ಚೇತರಿಸಿಕೊಂಡು ಹಳುನುಗ್ಗಿ ಪರಾರಿಯಾಗುವ ಕಾಡುಹುಂಜವನ್ನು ಹೋಲುವ ನಾಯಿಗುತ್ತಿಯು ತನ್ನನ್ನು ಬಂಧಿಸಿ ಕರೆದೊಯ್ಯುತ್ತಿದ್ದ ಪೊಲೀಸನಿಗೆ ಚಳ್ಳೆಹಣ್ಣು ತಿನ್ನಿಸಿ, ಹಳುನುಗ್ಗಿ ಪರಾರಿ ಆಗುವುದನ್ನಿಲ್ಲಿ ಸ್ಮರಿಸಕೊಳ್ಳಬಹುದು. ಕುವೆಂಪು ಕಾದಂಬರಿಗಳಲ್ಲಿ ಚಿತ್ರಿತರಾಗಿರುವ ಗಿರಿಜನರೆಲ್ಲರು ನನ್ನ ಕಣ್ಣುಗಳಿಗೆ ‘ಅಂಕದಕೋಳಿ’ಗಳಂತೆಯೇ ಕಾಣುತ್ತಾರೆ. ಮಹಾನಗರಗಳಲ್ಲಿ ಕಟ್ಟಿ ಸಾಕಿದಂತಿರುವ ಆಧುನಿಕರಾದ ನಾಗರಿಕರ ಚಿತ್ರಣ ಕಾದಂಬರಿಗಳಲ್ಲಿ ಇಲ್ಲವಾದರೂ ಕುವೆಂಪು ವರ್ಣನೆಯ ಧ್ವನಿಶಕ್ತಿ ಇದನ್ನು ಬಿಂಬಿಸಬಲ್ಲುದು. ಈ ಸಾಲುಗಳನ್ನು ಮತ್ತೊಮ್ಮೆ ಪರಿಭಾವಿಸಿ:

– ಹುಂಜವೇನೋ ನೋಡುವುದಕ್ಕೆ ದಪ್ಪವಾಗಿತ್ತು. ಆದರೆ ಅದು ಬೊಜ್ಜಲ್ಲದೆ ನಿಜವಾದ ಪುಷ್ಟಿಯಾಗಿರಲಿಲ್ಲ……

– ಚೊಟ್ಟಿ ಪುಕ್ಕಗಳನ್ನು ಕತ್ತರಿಸಿ, ಯಾರೂ ಕಾಣದಂತೆ ಕತ್ತಲೆಯಲ್ಲಿ ಕಟ್ಟಿ ಸಾಕಿದ್ದರಿಂದ
ಅಸಹ್ಯವಾಗಿ ಬೊಜ್ಜು ಬೆಳೆದಿದ್ದ ಅದನ್ನು….

– ಅಂತೂ ಕೊಯ್ದು ತಿನ್ನುವುದಕ್ಕೆ ಮಾತ್ರ ಲಾಯಖ್ಖಾಗಿದ್ದ ಬೊಜ್ಜಣ್ಣನನ್ನು…..

– ಹುಂಜ ಚೊಟ್ಟಿಯಿಲ್ಲದೆ ಪುಕ್ಕವಿಲ್ಲದೆ ಬೊಜ್ಜುಬೆಳೆದು ನೋಟಕ್ಕೆ ವಿಕಾರವಾಗಿ ಇದ್ದುದಲ್ಲದೆ, ಕಾಲಿಗೆ ಎಂದೆಂದೂ ಕತ್ತಿ ಕಟ್ಟಿಸಿಕೊಂಡು ಅಭ್ಯಾಸವಿಲ್ಲದಿದ್ದ ಆ ಸ್ಥೂಲಪ್ರಾಣಿಗೆ ಸರಿಯಾಗಿ ಅಡಿಯಿಡಲು ಅಸಾಧ್ಯವಾಗಿ, ಕುಂಟುತ್ತ, ಅತ್ತಿತ್ತ ಒಲೆಯತೊಡಗಿತು…….

‘ಕಾನೂರು ಹೆಗ್ಗಡಿತಿ’ ಯ ಕೊನೆಯ ಅಧ್ಯಾಯ ‘ಹತ್ತು ವರ್ಷಗಳಾದ ಮೇಲೆ’ಯಲ್ಲಿ ‘ನವಜೀವನ ಸಂಕ್ರಾಂತಿ’ ಯ ಗಾನವಿದೆ. ಇದರ ಕೊನೆಯ ಸಾಲುಗಳಿವು:

– ಕೆಚ್ಚಿನ ನೆಚ್ಚಿನ ತನುಮನ ಪಟುತೆಯ
ಸಂಪಾದಿಸಿ ಓ ಮೇಲೇಳಿ;
ಕಣ್ದೆರೆಯಿರಿ ನವಕಾಂತಿಗೆ, ಶಾಂತಿಗೆ
ಓ ಕ್ರಾಂತಿಯ ಪುತ್ರರೆ, ಬಾಳಿ!

ಈ ಗಾನದಲ್ಲಿರುವ ‘ತನುಮನಪಟುತೆ’ ಎಂಬ ನುಡಿ ಬಹುಮುಖ್ಯವಾಗಿದೆ. ಸುಪ್ರಸಿದ್ಧವಾದ ನಾಣ್ಣುಡಿ ಎನ್ನಬಹುದಾದ “ಸೌಂಡ್ ಮೈಂಡ್ ಅಂಡ್ ಸೌಂಡ್ ಬಾಡಿ”ಯ ವಿಚಾರವನ್ನು ಹೇಳುತ್ತಿರುವ ‘ತನುಮನಪಟುತೆ’ಯು ಕಾಡುಕೋಳಿಗಳು ಮತ್ತು ಅಂಕದ ಕೋಳಿಗಳಿಗೆ ಅನ್ವಯಿಸುತ್ತದೆಯೇ ಹೊರತು ಕಟ್ಟಿಸಾಕಿದ ಕೋಳಿಗಳಿಗೆ ಅನ್ವಯಿಸುವುದಿಲ್ಲ. ನಿಸರ್ಗದಿಂದ ದೂರವಾದಂತೆಲ್ಲ ಮನುಷ್ಯರಿಗೊದಗುವ ವಿಕಾರಗಳು ಮತ್ತು ದುರಂತವನ್ನು ಕಾದಂಬರಿಯ ಹರಹಿನಲ್ಲಿರುವ ಕುಕ್ಕುಟ ಪುರಾಣದ ಮೂಲಕ ಬಿಂಬಿಸಿರುವ ಕುವೆಂಪು ಅವರ ಕಲಾಕೌಶಲ್ಯ ವಿಶಾಲವಾದ ಅರ್ಥದಲ್ಲಿ ಜೀವನಕಲೆಯ ಪ್ರತೀಕವಾಗಿದೆ.

ಇದೇ ಸಂದರ್ಭದಲ್ಲಿ U.R.ಅನಂತಮೂರ್ತಿಯವರ ‘ಸಂಸ್ಕಾರ’ ಕಾದಂಬರಿಯಲ್ಲಿರುವ ಕೋಳಿ ಅಂಕದ ಪ್ರಸಂಗವನ್ನು ಹೋಲಿಸಿ ನೋಡಬಹುದು. ಮಾಲೇರಪುಟ್ಟನೊಂದಿಗೆ ಪ್ರಾಣೇಶಾಚಾರ್ಯ ದರ್ಶಿಸುವ ಕೋಳಿ ಅಂಕವು ಸಂಸ್ಕೃತಿಯ ಒಂದು ಇಣುಕು ನೋಟ ಮಾತ್ರವಾಗಿದೆ. ಆದರೆ ಕುವೆಂಪು ಅವರು ವರ್ಣಿಸಿರುವ, ಎರಡು ಅಧ್ಯಾಯಗಳಲ್ಲಿ ವಿಸ್ತರಿಸಿಕೊಂಡಿರುವ ‘ಕೋಳಿ ಅಂಕದ ಪಟ್ಟೆಯಲ್ಲಿ’ ಮತ್ತು ‘ಸೋಮನ ಮೇಲೆ ಪ್ರಲೋಭನ ಪಿಶಾಚಿ’ ಯಲ್ಲಿರುವ ಕೋಳಿಅಂಕದ ಪ್ರಸಂಗಗಳು ಸಹಜವಾದ ಪೌರಾಣಿಕ ಬಿರುದಾವಳಿಯಿಂದ ಕೂಡಿದ್ದು ಯಕ್ಷಗಾನ- ಬಯಲಾಟಗಳನ್ನೇ ಹೋಲುತ್ತಾ, ಸಂಸ್ಕೃತಿ ದರ್ಶನದ ಮಹಾನ್ ರೂಪಕವಾಗಿ ಪರಿವರ್ತನೆಗೊಳ್ಳುತ್ತವೆ.ಅನಂತಮೂರ್ತಿಯವರು ನಿರೂಪಿಸಿರುವ ಕುತೂಹಲಮಾತ್ರವಾಗಿ ಉಳಿಯುವ ಸಂಸ್ಕೃತಿಯ ಇಣುಕು ನೋಟಕ್ಕೂ , ಕುವೆಂಪು ಅವರು ನಿರೂಪಿಸಿರುವ ‘ಡೌನ್ ಟು ಅರ್ತ್’ ಆಗಿರುವಂಥ ಸಂಸ್ಕೃತಿಯ ಸಮಗ್ರ ದರ್ಶನಕ್ಕೂ ಅಜಗಜಾಂತರ ವ್ಯತ್ಯಾಸವಿದೆ.

ಉಲ್ಲೇಖದ ಆಕರ:
=============
ಆಲಿಸಯ್ಯ ಮಲೆಯ ಕವಿ: ( =ವಸ್ತುಗತಿ ತತ್ವದ ಅಧ್ಯಯನ ) ವಿ.ಚಂದ್ರಶೇಖರ ನಂಗಲಿ,2005 ನವಕರ್ನಾಟಕ ಪ್ರಕಾಶನ, ಬೆಂಗಳೂರು

Leave a Reply