fbpx

ಉನ್ಮಾದದ ಕುಲುಮೆಯಲ್ಲಿ ಮತ ಕುಯ್ಲು!

ಎನ್. ರವಿಕುಮಾರ್ ಶಿವಮೊಗ್ಗ

“Man is by nature a political animal”

ಅವನು ಸದಾ ತನ್ನ ಬದುಕನ್ನು ರಾಜಕೀಯ ಆವರಣದಲ್ಲೇ ಕಟ್ಟಿಕೊಳ್ಳುವ ಹೋರಾಟದಲ್ಲೆ ಇರುತ್ತಾನೆ.ಅದಕ್ಕಾಗಿ ಅವನು ಏನು ಬೇಕಾದರೂ  ಮಾಡಬಲ್ಲ. ಎಲ್ಲವೂ ರಾಜಕೀಯ ಕೇಂದ್ರಿತವಾಗಿಯೇ ನಿರ್ಧಾರಕ್ಕೊಳಪಡಿಸುತ್ತಾನೆ.  ಆ ಕಾರಣಕ್ಕಾಗಿಯೇ ಮನುಷ್ಯ ಅವನೊಂದು  ರಾಜಕೀಯ ಪ್ರಾಣಿ . ಎಂದು ವ್ಯಾಖ್ಯಾನಿಸಲಾಗಿದೆ.

೧೯೯೦ ರ ನಂತರ ದೇಶದಲ್ಲಿ ನಡೆದ ರಾಜಕೀಯ ಸ್ಥಿತ್ಯಂತರಗಳನ್ನು  ಅವಲೋಕಿಸಿದರೆ ಅಧಿಕಾರ ರಾಜಕಾರಣಕ್ಕಾಗಿ ನಡೆದಿರುವುದು ಮಾತ್ರ ಉನ್ಮಾದಪೀಡಿತ ಭಾವಾನಾತ್ಮಕ ಸಂಗತಿಗಳೇ ಹೊರತು, ವೈಚಾರಿಕೆ ನೆಲೆಯ, ಅಭಿವೃದ್ದಿ ನೆಲೆಯ, ಮಾನವ ಕಲ್ಯಾಣದ ಸಂವಿಧಾನಿಕ ಆಶಯಗಳ ನೆಲೆಯಲ್ಲಿ ನಡೆದ ಬದಲಾವಣೆಗಳಲ್ಲ ಎಂಬ ಆತಂಕಕಾರಿ ಸಂಗತಿ ನಮ್ಮನ್ನು  ದಿಗಿಲು ಪಡಿಸದೆ ಇರವು.

ಈ ವಾರದಲ್ಲಿ ಎರಡು ಪ್ರಮುಖ ಘಟನೆಗಳು ಜನರನ್ನು ರಂಜಿಸಿದವು!.

ರಾಜ್ಯದಲ್ಲಿ  ಕ್ಯಾಂಪೇನ್‌ಗಾಗಿ ಬಂದ ಪ್ರಧಾನಿ ಮೋದಿ ಅವರು ಅಚಾನಕ್ಕಾಗಿ ಬಿಜೆಪಿ ನಾಯಕರೇ ಕಂಗಾಲಾಗುವ ಮಟ್ಟಿಗೆ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನು, ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಅವರನ್ನು ಕೊಂಡಾಡಿ ಬಿಟ್ಟರು. ಸ್ವತಃ ದೇವೇಗೌಡರೇ  ಮೋದಿ ಎಸೆದ ಗೂಗ್ಲಿಗೆ  ದಿಗಿಲು ಬಿದ್ದಿದ್ದರೂ ಅದನ್ನು ತೋರಿಕೊಳ್ಳದೆ ಹಿರಿಯನಾದ ನನಗೆ ಪ್ರಧಾನಿ ಕೊಟ್ಟ ಗೌರವ ಎಂದು ತಮ್ಮನ್ನು ತಾವೇ ಸಂತೈಸಿಕೊಂಡದ್ದು ಅಷ್ಟು ಸಲೀಸಾಗಿ ಯಾರಿಗೂ ಕಾಣಿಸಲಿಲ್ಲ.

ಆದರೆ ಇದೇ ಮೋದಿ ದಿನಕಳೆಯುವುದರೊಳಗೆ ಜೆಡಿಎಸ್ ಗೆ ಮತ ಹಾಕಬೇಡಿ , ಸೋಲಿಸಿ ಎಂದು ಕರೆ ನೀಡಿದ್ದು  ಮತ್ತೊಂದು ಸುತ್ತು ದೇವೇಗೌಡರಿಗೆ  ತಲೆ ಸುತ್ತು ಬಂದಂತಾಗಿದೆ.  ಕಲ್ಬುರ್ಗಿಗೆ ಹೋದ ಮೋದಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನಖರ್ಗೆ ಅವರನ್ನು ದೊಡ್ಡ ದಲಿತ ನಾಯಕ,  ಅವರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂದು ಪ್ರೀತಿ ಮೊರೆಯುತ್ತಾರೆ.

ಇದರ ಬೆನ್ನಲ್ಲೇ ಮಲ್ಲಿಕಾರ್ಜುನ ಖರ್ಗೆ ಅಕ್ರಮ ಆಸ್ತಿ ಮಾಡಿದ್ದಾರೆ ಎಂದೂ ಕೂಡ ದೂರಿ ಬಿಡುತ್ತಾರೆ. ನಿಜಲಿಂಗಪ್ಪ, ದೇವರಾಜ ಅರಸು..ಜೆ.ಹೆಚ್ ಪಟೇಲ್..ಹೀಗೆ ಹೋದ ಕಡೆಯಲೆಲ್ಲಾ ಇತಿಹಾಸ ಸೇರಿದ ನಾಯಕರನ್ನು ನೆನಪಿಸುವ ಕೆಲಸ ಮಾಡುತ್ತಿದ್ದಾರೆ. ಕುವೆಂಪು,  ಮದಕರಿನಾಯಕ,  ಒನಕೆ ಓಬವ್ವ, ಕೊನೆಗೆ ಮುಧೋಳ್ ನಾಯಿಯನ್ನು  ದೇಶಭಕ್ತಿಯ ಪ್ರತೀಕವೆಂಬಂತೆ ಕೊಂಡಾಡುತ್ತಾ  ಆ ಮೂಲಕ ಪ್ರಾದೇಶಿಕತೆಯ ಭಾವಾನಾತ್ಮಕತೆಯನ್ನು ಬಡಿದೆಬ್ಬಿಸುವ , ಇತಿಹಾಸ ಸೇರಿದ ನಾಯಕರ  ಅಭಿಮಾನಿಗಳನ್ನು, ಜಾತ್ಯಸ್ಥರನ್ನು ಎತ್ತಿಕಟ್ಟುವ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ.

ಗೋಹತ್ಯೆ ನಿಷೇಧ, ರಾಜ್ಯದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರ ಕೊಲೆ, ಹಿಂದೂತ್ವದ ಅಜೆಂಡಾಗಳು ರಾಜ್ಯದಲ್ಲಿ ಸವಕಲುಗೊಳ್ಳುತ್ತಿರುವ, ಮತದಾರ  ಮಣೆ ಹಾಕದಿರುವ  ಸುಳಿವು ಅರಿತ ಮೋದಿ ಈಗ ಎದುರಾಳಿ ಪಕ್ಷಗಳಲ್ಲೇ ವ್ಯಕ್ತಿಗತ ಒಡಕು , ವೈಷಮ್ಯ,ಅನುಮಾನಗಳ ಮಡಿಕೆಗೆ ಕಲ್ಲುಹೊಡೆದು ನೋಡುವ ಪ್ರಯತ್ನ ಮಾಡಿದ್ದಾರೆ.

ಕರ್ನಾಟಕದ ಮಟ್ಟಿಗೆ  ಮೋದಿ,ಅಮಿತ್ ಷಾ  ಅವರ ಬತ್ತಳಿಕೆಯಲ್ಲಿ ಅಸ್ತ್ರ ,ಶಸ್ತ್ರಗಳು ತುಕ್ಕುಹಿಡಿದು  ಕಳಚಿ ಉದರುತ್ತಿವೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ಕರ್ನಾಟಕದ ಜನರಲ್ಲಿ ಅಭಿವೃದ್ದಿ ಕುರಿತಾದ ವಿಶ್ವಾಸ ಮೂಡಿಸುವಲ್ಲಿ ಅವರ ನಾಲಿಗೆ ಸೋತಿದೆ. ಬಸವಣ್ಣನ ವಚನ, ಕುವೆಂಪು ಅವರ ದಾರ್ಶನಿಕ ಸೂತ್ರಗಳು, ಸಮುದಾಯ ಇತಿಹಾಸ ನಾಯಕರ ಕೊಂಡಾಟ, ದಲಿತ ಪ್ರೀತಿ, ಹಿಂದುಳಿದ ವರ್ಗಗಳ ಮೇಲಿನ ಕಳಕಳಿ ಎಲ್ಲವೂ ತುಟಿಮೇಲಿನ ಸೊಲ್ಲಲ್ಲದೆ ಈಗ ನಡೆಯುತ್ತಿರುವುದು ಧರ್ಮ, ಮತ ಪಂಥಗಳು, ಇತಿಹಾಸ ಪುರುಷರನ್ನು, ದಾರ್ಶನಿಕರನ್ನು ಜಾತಿಯ ಗರುಡಗಂಭಕ್ಕೆ ನಿಲ್ಲಿಸಿ ಭಾವಾನಾತ್ಮಕ ಉನ್ಮಾದದ  ಕುಲುಮೆಯಲ್ಲಿ ಮತ ಕುಯ್ಲು ಮಾತ್ರ.

ರಾಜ್ಯದಲ್ಲಿ ರಾಜಕೀಯ ಪಥ ಒಂದು ಸುತ್ತು ತಿರುಗಿ ಬಂದು ನಿಂತಿದೆ.

ಇದೀಗ  ಎರಡು ಸಿದ್ದಾಂತಗಳ ನಡುವಿನ ಹೋರಾಟವೆಂಬಂತೆ ಈಗ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ತನ್ನ ನಿಲುವನ್ನು ತಾನೇ ಸ್ಪಷ್ಟಪಡಿಸಿಕೊಳ್ಳುವ , ತನ್ನನ್ನು ತಾನೇ ಕೆತ್ತಿಕೊಂಡು ಮನುಷ್ಯರೂಪವಾಗುವ ಕಾಲಘಟ್ಟದ ಕರೆಯೊಂದನ್ನು ಎದುರುಗೊಂಡಿದ್ದಾನೆ.   ಒಂದೆಡೆ ಅಭಿವೃದ್ದಿಯ ಸಿದ್ದಮಾದರಿಗಳು ತಥಾಕಥಿತವಾಗಿ ಮತದಾರರನ್ನು ಆವರಿಸಿಕೊಳ್ಳುತ್ತಿದ್ದರೆ. ಮತ್ತೊಂದೆಡೆ  ಇದಕ್ಕಿಂತಲೂ ಅಪಾಯಕಾರಿಯಾದ ಮತ, ಧರ್ಮ, ಜಾತಿ, ಗೋವು ಎಂಬ ತೋರ‍್ಗಾಣಿಕೆಯ ಭಾವನಾತ್ಮಕ ಸಂಗತಿಗಳು ಎದೆಯಲ್ಲಿ ವಿಷ ತುಂಬುತ್ತಿವೆ.

ಇವೆಲ್ಲವೂ ಮತಗಳಿಗಾಗಿಯೇ, ಅಧಿಕಾರಕ್ಕಾಗಿಯೇ ಎಂಬುದು ಮಾತ್ರ ಸತ್ಯ. ಇದೀಗ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಭಾವಾನಾತ್ಮಕ ಉನ್ಮಾದದ ಪ್ರಚೋದನೆಗಳ ಸೋಂಕಿನ  ಆಚೆ ನಿಂತು ನಾವು ರಾಜಕಾರಣವನ್ನು ಸೋಸಿ ಕುಡಿದು ಆ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಾಯ್ದುಕೊಳ್ಳಬೇಕಿದೆ.

Leave a Reply