fbpx

ನಿಮ್ಮೆಲ್ಲರ ತಾಯಿಯಂತೆಯೇ ಇದ್ದ ಈ ಜಾನಕಿ

ಜಾನಕಿ ಜೀವನ ಜೈಜೈ ರಾಮ್…

ರಾಜೀವ ಜಾನಕಿ ನಾಯಕ

ಅದು ಹತ್ತೊಂಭತ್ತು ನೂರಾ ಅರವತ್ತೊಂದನೇ ಇಸವಿಯ ವೈಶಾಖದ ಒಂದು ಶುಭದಿನ. ಅಂಕೋಲೆಯ ಬೊಳೆಗ್ರಾಮದ ಹದಿನೆಂಟರ ಪ್ರಾಯದ ಜಾನಕಿಗೂ, ವಾಸರಕುದ್ರಿಗೆ ಊರಿನ ಶಾಲಾಶಿಕ್ಷಕ ನಾರಾಯಣನಿಗೂ ಸಂಭ್ರಮದ ವಿವಾಹವು ಜರುಗಿತು. ಇಷಾಡ ಮಾವಿನಹಣ್ಣಿಗೆ ಪ್ರಸಿದ್ಧವಾದ ಬೊಳೆಗ್ರಾಮದ ಮತ್ತು ದಪ್ಪ ಬೆಲ್ಲಕ್ಕೆ ಹೆಸರುವಾಸಿಯಾಗಿದ್ದ ವಾಸರಕುದ್ರಿಗೆ ಊರಿನ ಗುರುಹಿರಿಯರ ಸಮ್ಮುಖದಲ್ಲಿ ಜಾನಕಿ-ನಾರಾಯಣ ದಂಪತಿಗಳಾದರು.

ಮದುವೆ ಮಂಟಪದಲ್ಲಿ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದ  ಜಾನಕಿ, ಹತ್ತು ಮೈಲು ದೂರದಿಂದ ನಡೆದೇ ಬಂದಿದ್ದ ದಿಬ್ಬಣದೊಂದಿಗೆ ಸಹಸ್ರ ಸಹಸ್ರಪದಿ ಇಡುತ್ತಾ ಹೊಸ ಊರಿಗೆ ಕಾಲಿಟ್ಟಳು. ಪೇಟೆ ಸಮೀಪ ಬೆಳೆದಿದ್ದ ಜಾನಕಿಗೆ ಆ ಕಾಲದಲ್ಲಿ ದಟ್ಟ ಕಾಡಾಗಿದ್ದ ವಾಸರಕುದ್ರಿಗೆಗೆ ಮದುವಳತಿಯಾಗಿ ಬರುವಾಗ ಆತಂಕವೂ ಬೆರಗೂ ತುಂಬಿಕೊಳ್ಳುತ್ತಿತ್ತು. ಅಂಥ ಮಿಶ್ರಭಾವದ ಮನಸ್ಸಿನಿಂದ ಹೆಜ್ಜೆಯಿಡುತ್ತಿದ್ದ ಅವಳನ್ನು ದಾರಿಯುದ್ದಕ್ಕೂ ಪಕ್ಕದಲ್ಲೇ ಹರಿಯುತ್ತಿದ್ದ ಗಂಗಾವಳಿ ನದಿಯು ಕಲಶಬಟ್ಟಲು ಹಿಡಿದ ಸಹೋದರಿಯಂತೆ ಸಂತೈಸಿದ್ದಳಂತೆ!

ಆ ವರ್ಷದ ಮಳೆಗಾಲ ಜಾನಕಿಗೆ ಎಂದೂ ಮರೆಯಲಾಗದ ಅನುಭವ ನೀಡಿತ್ತು. ಪ್ರಳಯಸ್ವರೂಪಿಯಾದ ಮಹಾ ನೆರೆಹಾವಳಿಯಲ್ಲಿ ಗಂಗಾವಳಿ ನದಿತೀರದ ನೂರಾರು ಮನೆಗಳು ಜಲಾವ್ರತವಾಗಿದ್ದವು. ಜಾನಕಿ ಸೊಸೆಯಾಗಿ ಬಂದಿದ್ದ ಆ ಕಾಲದ ಪ್ರತಿಷ್ಟಿತ ಮನೆತನವಾಗಿದ್ದ ಕರ್ನಮನೆ ಎತ್ತರದಲ್ಲಿದ್ದರೂ ಮುಂದಿನ ಹಳ್ಳ ಹಿತ್ತಲು ಬಾವಿ ತುಂಬಿ ಮನೆಯಂಗಳವನ್ನು ದಾಟಿ ಕೋಣೆಕೋಣೆಗೂ ಜಲಪ್ರವೇಶವಾಯಿತು. ಏರುತ್ತಲೇ ಇರುವ ನೆರೆಯನ್ನು ಕಂಡು ಕಂಗಾಲಾದ ಕುಟುಂಬಸ್ತರು ಮನೆಸಾಮಾನು, ಅಕ್ಕಿಮೂಡೆ, ಬಟ್ಟೆಬರೆ, ತುಳಸಿಮನೆಯಲ್ಲಿ ತೇಲಿದ ದೇವರು- ಎಲ್ಲವನ್ನೂ ಮಾಳಿಗೆಗೆ ಸಾಗಿಸಿದರು.

ಅಷ್ಟಾದರೂ ನೆರೆ ನಿಲ್ಲದೇ ಅಟ್ಟಕ್ಕೇರಲು ಒಂದೇ ಫೂಟು ಇದೆ ಅಂಬೂವಾಗ ಹೆಂಗಸರು ಮಕ್ಕಳನೆಲ್ಲ ಬೆಲ್ಲ ಹದ ಮಾಡುವ ಕಾವಲಿಯಲ್ಲಿ ಕುಳ್ಳಿಸಿ ದೂರದ ಗುಡ್ಡದ ಜಾಗದಲ್ಲಿ ಇಳಿಸಿದರು. ಸುತ್ತಲೂ ಕಾರ್ಗತ್ತಲು. ನೀರು ನೀರು ಮತ್ತು ಬರೀ ನೀರು. ಪ್ರಳಯ ಮೌನ. “ಕಳಸಬಟ್ಟಲು ಹಿಡಿದು ಈ ಊರಿಗೆ ಕರೆದು ತಂದವಳು ನೀನು…ಹೀಗೆ ನಡುನೀರಲ್ಲಿ ಮುಳುಗಿಸಬೆಡಾ ತಾಯಿ” ಎಂದು ಜಾನಕಿ ಗಂಗಾವಳಿಯನ್ನು ಬೇಡಿಕೊಂಡಳಂತೆ. ಅವಳ ಕಣ್ಣೀರ ಹನಿಯೊಂದು ನೆರೆನೀರಿನಲ್ಲಿ ಬಿದ್ದ ಗಳಿಗೆಯಿಂದಲೇ ಇಳಿತ ಶುರುವಾಯ್ತಂತೆ!

ಆರು ದಶಕಗಳ ಹಿಂದಿನ ಹಕೀಕತ್ತನ್ನು ಹೀಗೆ ಕಥೆಯ ಸ್ವರೂಪದಲ್ಲಿ ಹೇಳುತ್ತಿದ್ದ ಈ ಜಾನಕಿ ಬೇರೆ ಯಾರೂ ಅಲ್ಲ; ನನಗೂ ನನ್ನೊಳಗಿನ ಕತೆಗಾರನಿಗೂ ಜನ್ಮ ನೀಡಿದ ತಾಯಿ. ಗಂಡ ದೂರದ ಊರುಗಳಲ್ಲಿ ಶಿಕ್ಷಕನಾಗಿರುವಾಗ ಮನೆ ಮಠ ಗದ್ದೆ ತೋಟ ಮಕ್ಕಳು ಆಳುಕಾಳುಗಳನೆಲ್ಲ ಇವಳೇ ಸಂಭಾಳಿಸಿದವಳು. ಮಾಸ್ತರನ ಹೆಂಡತಿಯಾದರೂ ಆ ಗರ್ವ ಇಟ್ಟುಕೊಳ್ಳದೇ ಕಾಯಕವೇ ಕೈಲಾಸ ಎಂಬಂತೆ ಸ್ವತ: ದುಡಿದಳು. ಹೆತ್ತ ಮೂರೂ ಮಕ್ಕಳ ಮೇಲೆ ಅಪಾರ ಅಕ್ಕರೆಯಿದ್ದರೂ ಹಿರಿಯವನಾದ ನಾನೆಂದರೆ ಆಕೆಗೆ “ಅರಸುಮಗ”! ಕೆನೆ ಹಾಲೇ ಕುಡಿಸಬೇಕು. ಅದೇ ದಿನ ಹೆಪ್ಪಿಗೆ ಹಾಕಿದ ಮೊಸರೇ ಕೊಡಬೇಕು. ಹಣ್ಣು ಕೊಯ್ದರೆ ಖಂಡದ ಭಾಗ ಈ ಅರಸುಮಗನಿಗೇ! ಮಕ್ಕಳಲ್ಲಾಗಲಿ ಅಥವಾ ಇತರ ಮಕ್ಕಳ ನಡುವೆಯಾಗಲಿ ತಕರಾರು ಬಂದರೆ ಇವಳು ಸದಾ ಈ ಅರಸುಮಗನ ಪರವಾಗಿಯೇ! ಮಮತೆಯ ತಾಯಿಯಾದ ಅವಳು ಮಕ್ಕಳಿಗೆ ಲೆಕ್ಕ ಹೇಳಿಕೊಡುವಾಗ ಮಾತ್ರ ಕಠಿಣವಾಗುವಳು.

ತನಗೆ ಕಲಿಯಲು ಸಾಧ್ಯವಾಗದ ಬಗ್ಗೆ ಅಪಾರ ನೋವು ಇಟ್ಟುಕೊಂಡಿದ್ದ ಆಕೆಗೆ ತನ್ನ ಮಕ್ಕಳು ಮಾತ್ರವಲ್ಲ ಕೇರಿಯ ಇತರ ಮಕ್ಕಳೂ ಕಲಿಯಲಿ ಎಂದು ಹಾರೈಸುತ್ತಿದ್ದಳು. ಮುಲ್ಕಿ ಪರೀಕ್ಷೆಯಲ್ಲಿ ಎರಡಾಣೆ ಫೀಸು ಕಟ್ಟಲು ಸಾಧ್ಯವಾಗದೇ ಆಕೆಯ ತಂದೆ ಶಾಲೆ ಬಿಡಿಸಿದ್ದು ಅವಳಲ್ಲಿ ಜೀವನದುದ್ದಕ್ಕೂ ಗಾಢ ವಿಷಾದವೊಂದು ಉಳಿಯುವಂತೆ ಮಾಡಿತ್ತು! ನಮ್ಮ ಊರಿನಲ್ಲಿ ಹೈಸ್ಕೂಲು ಇಲ್ಲದಿದ್ದರಿಂದ ಕಲಿಯಲು ನಮ್ಮನ್ನೆಲ್ಲ ಅಂಕೋಲೆಯ ಅಜ್ಜಿಮನೆಯಲ್ಲಿ ಇಟ್ಟಿದ್ದಳು. ಮಕ್ಕಳನ್ನು ಅಗಲಿ ಇರುವುದು ಕಷ್ಟವಾದರೂ ಅವರ ಭವಿಷ್ಯದ ಕಾರಣಕ್ಕಾಗಿ ಆ ನೋವನ್ನು ನುಂಗಿಕೊಳ್ಳುವುದು ಅವಳಿಗೆ ಅನಿವಾರ್ಯವಾಗಿತ್ತು. ಮುಂದೆ ನಾವು ದೊಡ್ಡಾದಂತೆ ಅಜ್ಜಿಮನೆಯೇ ಮನೆಯಂತಾಗಿ ಕಲಿತು ಮುಗಿದ ಮೇಲೂ ಊರಿಗೆ ಬರುವುದು ಕಡಿಮೆಯಾದಾಗ ಗಂಡನ ಪೆನ್ಶನ್ ಹಣವನ್ನೆಲ್ಲ ಬಳಸಿಕೊಂಡು ಪೇಟೆ ಸಮೀಪವೇ ಚಿಕ್ಕ ಮನೆ ಕಟ್ಟಿಸಿಕೊಂಡಿದ್ದಳು.

ಹೊಸ ಮನೆ ಕಟ್ಟಿದ ನಂತರದಲ್ಲಿ ಉದ್ಯೋಗ ನಿಮಿತ್ತ ನಾವೆಲ್ಲ ಬೇರೆಬೇರೆ ಕಡೆ ಚದುರಿದೆವು. ಅರಸುಮಗನಾದ ನಾನು ಮುಂಬೈವಾಸಿಯಾಗಿಬಿಟ್ಟಿದ್ದೆ. ಹೀಗಾಗಿ ಅವಳು ಸದಾ ಮಕ್ಕಳ ಸಾಮೀಪ್ಯದಿಂದ ವಂಚಿತಳಾಗಿಯೇ ಇರಬೇಕಾಯಿತು. ಏಳು ವರ್ಷಗಳ ಹಿಂದೆ ಸಹೋದರಿ ಸುಧಾಳ ಪತಿ ಅರುಣಗೆ ಅಂಕೋಲೆ ಕಾಲೇಜಿಗೆ ವರ್ಗವಾಗಿ ಬಂದಾಗಲೇ ಮಗಳ ಸಾಮೀಪ್ಯ ಸಾಧ್ಯವಾದದ್ದು.

ಅಷ್ಟರಲ್ಲಿ ಜಾನಕಿ ದೈಹಿಕವಾಗಿ ಸೊರಗಿದ್ದಳು. ಎಪ್ಪತ್ತನೆಯ ವಯಸ್ಸಿಗೆ ಕಾಯಿಲೆಯಲ್ಲದ ಕಾಯಿಲೆ ಶುರುವಾಗಿತ್ತು. ಕೆಲಸ ಮಾಡುವುದು ಕಷ್ಟವಾಯಿತು. ಕ್ರಮೇಣ ನಡೆಯುವುದಕ್ಕೂ ಸಾಧ್ಯವಾಗದೇ ವ್ಹೀಲ್ ಚೇರ್ ಬಳಸಬೇಕಾಯಿತು. ಬರಬರುತ್ತಾ ಸಂಪೂರ್ಣವಾಗಿ ಪರಾವಲಂಬಿಯಾಗಿಬಿಟ್ಟಳು. ಇತರರಿಗೆ ತೊಂದರೆ ನೀಡಿ ಬದುಕುವ ಪರಿಸ್ಥಿತಿ ಬಂದದ್ದಕ್ಕೆ ಮಾನಸಿಕವಾಗಿಯೂ ಕುಗ್ಗಿದಳು. ಸ್ವಾಭಿಮಾನಿಯಾಗಿದ್ದ, ಪರಾಧೀನರಾಗಿ ಬದುಕಬಾರದು ಎನ್ನುತ್ತಿದ್ದ ಜಾನಕಿಯಂಥ ಜಾನಕಿ ತನ್ನ ನಿತ್ಯಕ್ರಿಯೆಗಳಿಗೂ ಸತತ ಏಳು ವರ್ಷಗಳಿಂದ ನಮ್ಮ ಸಹೋದರಿಯ ಅಥವಾ ತಂದೆಯವರ ಆಸರೆ ಪಡೆಯಬೇಕಾಯಿತು. ಈ ಕಷ್ಟಕಾಲದಲ್ಲಿ ಅಳಿಯ ಅರುಣ ಕೂಡ ಸಹಕರಿಸಿ “ಅಳಿಯ ದೇವರು” ಎಂಬ ಮಾತನ್ನು ಅಕ್ಷರಶ: ಸತ್ಯವಾಗಿಸಿದರು.

ಕಾಯಿಲೆಬಿದ್ದ ಪ್ರಾರಂಭದಲ್ಲಿ ಮಂಗಳೂರು ಮಣಿಪಾಲಿನಲ್ಲಿ ” ಹೆಂಗಾರೂ ಮಾಡಿ ನಡೆದಾಡುವಂತೆ ಮಾಡಿ ಡಾಕ್ಟ್ರೇ” ಎಂದು ಆರ್ತವಾಗಿ ಬೇಡಿಕೊಳ್ಳುತ್ತಿದ್ದಳು. ಅವರು “ನಿಂಗೆ ಏನೂ ಕಾಯಿಲೆ ಇಲ್ಲಮ್ಮ, ಕಡಿಮೆಯಾಗುತ್ತೆ” ಅನ್ನುತ್ತಿದ್ದರು. ಡಾಕ್ಟರು ಆಕೆಗೆ ಪಾರ್ಕಿನ್ಸನ್ಸ್ ಇದ್ದಂತಿದೆ ಎಂದರೂ ನಮಗೆ ಅದನ್ನು ನಂಬುವುದು ಕಷ್ಟವಾಯಿತು. ಪಾರ್ಕಿನ್ಸನ್ಸ್ ಲಕ್ಷಣಗಳಾದ ಕೈಕಾಲು ತಲೆ ನಡುಗುವಂತದ್ದು ಏನೂ ಇರಲಿಲ್ಲ. ಆಕೆಯ ಮೆದುಳಿನ ಜೀವಕೋಶಗಳು ನಿಧಾನಗತಿಯಲ್ಲಿ ಕ್ಷಯಿಸುತ್ತಾ ಸಾಗಿದ್ದವು.  ಸೂಕ್ಷ್ಮಜ್ನಳೂ ತೀಕ್ಷ್ಣಮತಿಯೂ ಆಗಿದ್ದ ಜಾನಕಿಯ ಸಶಕ್ತ ಭಾಗವಾದ ಮೆದುಳಿಗೇ ಆ ದೇವರು ಎಂಬುವನು ದಾಳಿಮಾಡಿದ್ದ!

ಕ್ರಮೇಣ ಅವಳ ನೆನಪಿನ ಶಕ್ತಿ ಕುಂದತೊಡಗಿತು. ಮನೆಗೆ ಬಂದವರನ್ನು ಗುರುತಿಸಿದರೂ ತಕ್ಷಣಕ್ಕೆ ಹೆಸರುಗಳು ನೆನಪಾಗದೇ ಚಡಪಡಿಸಿದಳು. ಗಂಡನಿಗೆ ಬಾಯ್ತಪ್ಪಿ “ತಮ್ಮಾ” ಎಂದು ಕರೆದಳು.  ತನ್ನ ತಪ್ಪಿನ ಅರಿವಾಗಿ ವ್ಯಥೆಪಟ್ಟಳು. ವರ್ಷ ಕಳೆದರೂ ಆರೋಗ್ಯದಲ್ಲಿ ಸಧಾರಣೆ ಕಾಣದಿದ್ದಾಗ ಅವಳಿಗೆ ಡಾಕ್ಟರ್ ಮಾತಿನ ಮೇಲೆ ಭರವಸೆ ಕಮ್ಮಿಯಾಯಿತು. ಆದರೆ ತನ್ನ “ಅರಸುಮಗ” ಮುಂಬೈ ರಾಜ್ಯಕ್ಕಾದರೂ ಒಯ್ದು ಗುಣಮಾಡಿ ತರುವನು ಎಂಬ ಸುಪ್ತಆಸೆಯನ್ನು ಜೀವಂತವಾಗಿಟ್ಟುಕೊಂಡಿದ್ದಳು. ವೈದ್ಯಲೋಕವೇ ಅಸಹಾಯಕ ಆಗಿರುವಾಗ ಈ ಅರಸುಮಗನಾದರೂ ಏನು ಮಾಡಬಹುದಿತ್ತು?

ಮುಂಬೈಯಿಂದ ಪ್ರತಿದಿನವೂ  ಫೋನ್ ಮೂಲಕ ಅದುಇದು ಹೇಳಿ ಭರವಸೆ ತುಂಬುವ ಪ್ರಯತ್ನ ಮಾಡುತ್ತಿದ್ದೆ, ಅಷ್ಟೆ! ನನ್ನ ಮಾತು ಕೇಳಿ ಅವಳಲ್ಲಿ ಆಶಾಭಾವ ಚಿಗುರುತ್ತಿದ್ದರೂ, ನನ್ನ ಮಾತಿನ ಹುಸಿತನ ಮತ್ತು ಅಸಹಾಯಕತೆಯಿಂದ ನನಗೇ ದು:ಖ ಉಮ್ಮಳಿಸಿ ಬರುತ್ತಿತ್ತು. ಊರಿಗೆ ಬಂದಾಗ ಆಕೆಯ ನಿಷ್ಪಾಪ ಕಣ್ಣುಗಳನ್ನು ಎದುರಿಸುವ ಛಾತಿ ಇಲ್ಲವಾಯಿತು. ನನ್ನ ಪೊಳ್ಳು ಭರವಸೆಗಳು ಬಣ್ಣನೆ ಮಾತುಗಳು ಹೆಚ್ಚುದಿನ ಸಾಥ್ ನೀಡಲಿಲ್ಲ. ಪ್ರೀತಿ ಪ್ರೇಮ  ಮೋಜು ಮಸ್ತಿ ಭೋಜನ ಮೈಥುನ ಓದು ಬರೆಹ-ಎಲ್ಲವೂ ವಿಷಾದದಲ್ಲಿ ಕೊನೆಗೊಳ್ಳುತ್ತಿದ್ದವು. ಓ ದೇವರೆ, ಕಾಯಿಲೆಯಾಗಿರುವುದು ನನಗೋ ತಾಯಿಗೋ?

ನನ್ನ ಅಸಹಾಯಕತೆಯನ್ನು ಅರಿತವಳ ಹಾಗೆ ಮತ್ತು ಅಂಥ ನೋವಿನಿಂದ ತನ್ನ ಅರಸುಮಗನನ್ನು ಬಿಡುಗಡೆಗೊಳಿಸುವಂತೆ ಕಳೆದ ಒಂದು ವರ್ಷದಿಂದ ಜಾನಕಿಯಲ್ಲಿ ಅಚ್ಚರಿಯ ಬದಲಾವಣೆ ಆಗತೊಡಗಿತು. ಮಾತು ಕಮ್ಮಿಯಾಯ್ತು.  ಮುಖಭಾವದಲ್ಲಿ ದೈನ್ಯತೆ ಮರೆಯಾಗಿ ಅಲ್ಲಿ ಅಪೂರ್ವ ಶಾಂತಿ ಕಾಣಿಸಿತು.  ಆಕೆಯ ಪಕ್ಕ ಕುಳಿತರೆ ಸಂತನ ಸಾನಿಧ್ಯದಲ್ಲಿ ಇದ್ದಂತೆ ಅನಿಸತೊಡಗಿತು! ಅವಳಿಗೆ ಉಣಿಸುವುದು ತಿನಿಸುವುದು ಇತ್ಯಾದಿ ಸೇವೆ ಮಾಡುವಾಗ ಒಂದು ರೀತಿಯ ಆತ್ಮಸಂತೃಪ್ತಿಯಾಗುತ್ತಿತ್ತು. ಅವಳ ಮೌನ ಮುರಿಯಲು “ಜಾನೂ” ಎಂದು ಕರೆದರೆ ಚಿಕ್ಕ ಮಗುವಿನಂತೆ ಓಗೊಡುವಳು. “ಜಾನಕಮ್ಮ” ಅಂದರೆ ಬುದ್ಧನಂತೆ ಮುಗುಳ್ನಗುವಳು. ಅವಳ ಸ್ನಿಗ್ಧ ನಗು ಕಂಡ ಸ್ನೇಹಿತರು “ಮೋನಾಲೀಸಾ ಅಜ್ಜಿ” ಎಂದು ಹೆಸರಿಟ್ಟರು.

ಅವಳ ದೇಹವು ಕ್ರಮೇಣ ಕೃಶವಾಗುತ್ತಾ ಒಂದು ಹಕ್ಕಿಮರಿಯಂತೆ ಆದ ಮೇಲೆ ಅವಳನ್ನು ವ್ಹೀಲ್ ಚೇರ್ ಮೇಲೆ ಅಡ್ಡಾಡಿಸುವ ಬದಲು ಎತ್ತಿಕೊಂಡೇ ಹೋಗಲು ಶುರುಮಾಡಿದ್ದೆವು. ನಾನು ಹುಟ್ಟಿ ಮೂರ್ನಾಲ್ಕು ವರ್ಷ ಆಗುವಷ್ಟರಲ್ಲೇ ತಮ್ಮನೂ ತಂಗಿಯೂ ಹುಟ್ಟಿದ್ದರಿಂದ ಬಾಲ್ಯದಲ್ಲಿ ನನಗೆ ತಾಯಿಯ ಅಪ್ಪುಗೆ ಅಷ್ಟಾಗಿ ಸಿಕ್ಕಿರಲಿಲ್ಲ. ಈಗ ಅವಳ ಅಪ್ಪುಗೆ ಹಿತವೆನಿಸುತ್ತಿತ್ತು. ಅವಳ ಜೊತೆಗೆ ಸುಮ್ಮನೆ ಕೂತರೂ ಸಮಾಧಾನ ಅನಿಸುತ್ತಿತ್ತು. ಪ್ರಶಾಂತ ಪ್ರಭಾವಳಿಯೊಂದು ಅವಳನ್ನು ಅಲಂಕರಿಸಿತ್ತು. ಮನುಷ್ಯ ಬದುಕು ಉದ್ಧೇಶಹೀನ ಮತ್ತು ನಿರರ್ಥಕ ಎಂದು ಅನಿಸುವ ವಯಸ್ಸಿಗೆ ಸಮೀಪಿಸುತ್ತಿರುವ ಈ ಘಟ್ಟದಲ್ಲಿ ನನಗೆ, ತಾಯಿಯ ಈ ಸ್ಥಿತಿ ಅವಳ ಸೇವೆಗೈಯುವ ಅವಕಾಶಕ್ಕಾಗಿಯೇ ಸೃಷ್ಟಿಗೊಂಡ ಸನ್ನಿವೇಶವಿರಬಹುದೇ, ಎಂದು ಇತ್ತೀಚೆಗೆ ತೀವ್ರವಾಗಿ ಅನಿಸತೊಡಗಿತ್ತು.

ದೀರ್ಘ ರಜೆ ಹಾಕಿ ಅಥವಾ ಸ್ವಯಂ ನಿವೃತ್ತಿಯನ್ನಾದರೂ ಪಡೆದು ಹೆಚ್ಚುಹೆಚ್ಚು ತಾಯಿಯ ಸಾನಿಧ್ಯದಲ್ಲಿರಬೇಕೆಂದು ಯೋಚಿಸುತ್ತಿದ್ದೆ. ಆದರೆ ಆ ಅದೃಷ್ಟ ಇರಲಿಲ್ಲ. ನಿರ್ಧಾರ ಕೈಗೊಳ್ಳಲು ತಡವಾಗಿತ್ತು. ಕಳೆದ ತಿಂಗಳು ಏಪ್ರಿಲ್ ಹನ್ನೆರಡಕ್ಕೆ ಎಂದಿನಂತೆಯೇ ಇದ್ದ ಜಾನಕಿಯ ಜಾನ್ ಹಾರಿಹೋಯಿತು. ಅವಳ ಸಾವು ಅನಿರೀಕ್ಷಿತವಾಗಿರಲಿಲ್ಲ, ನಿಜ. ಆದರೆ ಹೀಗೆ ಇದ್ದಕ್ಕಿದ್ದಂತೆ ಎದ್ದು ಹೋಗುತ್ತಾಳೆ ಎಂದು ಗೊತ್ತಿರಲಿಲ್ಲ. ನಿರೀಕ್ಷಿಸುತ್ತಿದ್ದದ್ದು ವಿಳಂಬವಾಗಿ ಸಂಭವಿಸಿದಾಗ ಪರಿಣಾಮದಲ್ಲಿ ಅದು ಅನಿರೀಕ್ಷಿತಕ್ಕಿಂತ ಹೆಚ್ಚು ಘಾತ ಮಾಡುತ್ತದೆ!

ನಾವು ಮೂವರೂ ಮಕ್ಕಳಿಗೆ ನಡುವಯಸ್ಸು ದಾಟಿದರೂ ಅಂಕೋಲೆಯಲ್ಲಿ ನಮ್ಮನ್ನು ಗುರುತಿಸುವುದು ನಮ್ಮ ತಂದೆ ತಾಯಿಗಳ ಸಾತ್ವಿಕ ಗುಣಗಳಿಗಾಗಿಯೇ! ಬೊಳೆ ವಂದಿಗೆ ಮತ್ತು ಚೌಕದಳ್ಳಿಯಲ್ಲಿ ಈಗಲೂ ನಾವು ಜಾನಕಿ ಮಕ್ಕಳು; ವಾಸರಕುದ್ರಿಗೆ ಶಿರಗುಂಜಿ ಅಗಸೂರು ಕಡೆಯವರಿಗೆಲ್ಲ ನಾವು ನಾರಾಯಣ ಮಾಸ್ತರ ಮಕ್ಕಳು!  ಜಾನಕಿಯ ಮರಣದಲ್ಲಿ ನೂರಾರು ಜನ ಅವಳ ಸದ್ಗುಣಗಳನ್ನು ನೆನೆದರು. ಈಗ ಉತ್ತಮ ಸ್ಥಿತಿಗೆ ತಲುಪಿರುವ ಕೆಲವರು ತಮಗೆ ಬಡತನವಿದ್ದ ಅಂದಿನ ಕಾಲದಲ್ಲಿ ಜಾನಕಕ್ಕ ಮಾಡಿದ ಉಪಕಾರನ್ನು ಇನ್ನೂ ನೆನಪಿಟ್ಟುಕೊಂಡಿದ್ದರು. ಅವಳಿಂದ ರುಚಿಕಟ್ಟಾದ ಊಟ ತಿಂಡಿತಿನಿಸುಗಳನ್ನು ತಿಂದವರು ಅವಳ ಕೈಗುಣಗಳನ್ನು ಕೊಂಡಾಡಿದರು. ಜಾತಿಗೀತಿ ಆಳುಕಾಳು ಎಂಬ ಪಂಕ್ತಿಭೇದವಿಲ್ಲದೇ ಹೊಟ್ಟೆತುಂಬ ಉಂಡವರು  ಜಾನಕಮ್ಮನ ಗುಣವನ್ನು ಹೊಗಳಿದರು.

ಶರಣರ ಗುಣವನ್ನು ಮರಣದಲ್ಲಿ ನೋಡು ಎನ್ನುವ ಮಾತೇ ಇದೆ, ಬಿಡಿ! ಪ್ರತಿಯೊಬ್ಬರಿಗೂ ತಮ್ಮ ಹೆತ್ತ ತಾಯಿ ಕರುಣಾಮಯಿಯೂ ವಾತ್ಸಲ್ಯಮೂರ್ತಿಯೂ ಆಗಿರುತ್ತಾಳೆ ಎನ್ನುವುದೂ ನಿಜ. ತಾಯಿಯ ಸಾವಿನ ವ್ಯಯಕ್ತಿಕ ನೋವನ್ನು ಬರೆದು ಅದನ್ನು ಸಾರ್ವಜನಿಕ ಸಂತಾಪವಾಗಿಸುವುದು ಸರಿಯಲ್ಲ ಎನ್ನುವುದೂ ಗೊತ್ತಿದೆ. ತಾಯಿಯ ಮರಣವನ್ನೂ ಬರಹವಾಗಿಸುವ ಈ ಅಕ್ಷರವ್ಯಾಮೋಹ ಬಹುಶ: ಕ್ರೂರವೂ ಹೌದೇನೋ!

ನಿಮ್ಮೆಲ್ಲರ ತಾಯಿಯಂತೆಯೇ ಇದ್ದ ಜಾನಕಿಯಂಥ ಜಾನಕಿ ಬಗ್ಗೆ ಬರೆಯಲು ನನಗೆ ಮುಖ್ಯವಾಗಿ ಎರಡು ಕಾರಣಗಳಿವೆ. ಕಾರಣ ಒಂದು: ಚಿಕ್ಕ ಮಕ್ಕಳಿರುವ ಮತ್ತು ಮುಂದೆ ಮಕ್ಕಳನ್ನು ಪಡೆಯಲಿರುವ ಎಲ್ಲಾ ಅಮ್ಮಂದಿರಲ್ಲಿ  ಒಂದು ಸವಿನಯ ಪ್ರಾರ್ಥನೆ ಮಾಡಿಕೊಳ್ಳಲು. ತಾಯಂದಿರೇ, ಜಾನಕಿ ಮಾಡಿದ ಹಾಗೆ ನಿಮ್ಮ ಮಕ್ಕಳನ್ನು ಅರಸುಮಕ್ಕಳಂತೆ ಸಾಕಬೇಡಿ, ಸಲುಹಬೇಡಿ, ಮುದ್ದುಮಾಡಬೇಡಿ. ಯಾಕೆಂದರೆ ಮುಂದೆ ನಿಮ್ಮ ಮಕ್ಕಳು ಜಗತ್ತಿನ ಎಲ್ಲಾ ಪ್ರೀತಿಯಲ್ಲೂ ಕೊರತೆಯನ್ನೇ ಕಾಣುತ್ತಾರೆ ಮತ್ತು ಜೀವನ ಪರ್ಯಂತ ಅತೃಪ್ತ, ಅನಾಥ ಭಾವದಲ್ಲಿ ನರಳುತ್ತಾರೆ. ಕಾರಣ ಎರಡು: ಜಾನಕಿಯನ್ನು ಏಳು ವರ್ಷ ಕಾಡಿದ ಕಾಯಿಲೆಯ ಹೆಸರನ್ನೂ ಅದನ್ನು ಗುಣಪಡಿಸುವ ಔಷಧಿಯನ್ನೂ ಕಂಡುಹಿಡಿಯುವ ಅರಸುಮಗನೊಬ್ಬ ಈ ಜಗತ್ತಿನಲ್ಲಿ ಹುಟ್ಟಿಬರಲಿ!

3 Responses

  1. Shyamala Madhav says:

    ಜಾನಕಿ ಮಡಿಲ ಕಂದನಿಗೆ ನಮ್ಮೆಲ್ಲರ ಪ್ರೀತಿ.ದೇಹ ಇಲ್ಲವಾದರೇನು? ಬಂಧ ಅಮರ!

  2. Anasuya M R says:

    ಮನಸ್ಸಗೆ ಆಪ್ತವಾಗಿ ಕಣ್ತುಃಬಿ ಬಂತು. ಸಹೃದಯಿ
    ತಂದೆತಾಯಿಗಳಿಗೆ ಮಕ್ಕಳು

  3. Your article reminded me of my mother. I too am the eldest son and was away, far away from from my 12th year. Yet I was emotionally the closest to her of 3 sons. One of the reasons was I was born when my mother was only 14 years. If I continue to write about her, it will be a long essay. Anyway, you have once again reminded me of my mother after a long time. Thanks a lot.

Leave a Reply

%d bloggers like this: