fbpx

ಅಮ್ಮ ನೆನಪಾದಳು..

ಇವತ್ತೆಲ್ಲ ಅಮ್ಮನದೇ ನೆನಪು

ಗಂಗಾಧರ ಕೊಳಗಿ 

ಎಚ್ಚರದಲ್ಲಿ ಆಗಾಗ್ಗೆ ನೆನಪಾಗುತ್ತಲೇ ಇರುವ, ರಾತ್ರಿ ನಿದ್ದೆಯಲ್ಲಂತೂ ಒಂದು ಕ್ಷಣವಾದರೂ ಕಂಡುಹೋಗುವ ಅಮ್ಮ ನನ್ನ ಜೀವಸ್ಮೃತಿ. ಅವಳ ಬದುಕು ಕೆಂಡದ ಹಾಸಿಗೆಯಾಗಿತ್ತು. ಅದನ್ನ ಆಕೆ ಧನಾತ್ಮಕವಾಗಿ ತೆಗೆದುಕೊಂಡದ್ದು ನನಗೀಗಲೂ ಅಚ್ಚರಿ: ಅವಳ, ಅಪ್ಪನ, ಹತ್ತಿರದವರಿಂದ ಕೇಳಿದ ನಾನು ಹುಟ್ಟದ ಮೊದಲಿನ ಆಕೆಯ ಬದುಕು.

ಈಗಲೂ ನೆನಪಿದೆ: ಸುಮಾರು ನಾಲ್ಕನೇ ಕ್ಲಾಸಿನಲ್ಲಿದ್ದಾಗ ಒಮ್ಮೆ ನನ್ನನ್ನು ತನ್ನ ನೀಡಿದ ಕಾಲುಗಳ ನಡುವೆ ಮಲಗಿಸಿಕೊಂಡು ತಾನು ಮದುವೆಯಾಗಿ ಬಂದ ನಂತರದ ಅನುಭವವನ್ನ ಒಂದಿಷ್ಟು ಹೇಳಿದ್ದಳು. ನನ್ನ ಮೇಲೆ ಸಣ್ಣದಾಗಿ ಅವಳ ಕಣ್ಣಹನಿಗಳ ಸಿಂಚನವಾಗುತ್ತಿತ್ತು. ಅಷ್ಟೇ, ಮತ್ತೆಂದೂ ತನ್ನೊಳಗಿನದನ್ನ ತೋರಿಸಿಕೊಂಡವಳಲ್ಲ.

ಮಲೆಯಾಳಂನ್ನು ಮಾತೃಭಾಷೆಯಾಗಿ ಪಡೆದ ಓರ್ವ ಹೆಣ್ಣು ಕಾಣದ, ಕೇಳದ ಕರ್ನಾಟಕದ ಒಂದು ಮೂಲೆಯ ಕಗ್ಗಾಡಿನ ನಡುವಿನ ಹಳ್ಳಿಗೆ ಸುಮಾರು 75 ವರ್ಷದ ಹಿಂದೆ ಮದುವೆಯಾಗಿ ಬಂದು ಕನ್ನಡ ಮಾತನಾಡಲು, ಓದಲು, ಹಸ್ತಾಕ್ಷರ, ಒಂದಿಷ್ಟು ಸಾಲುಗಳನ್ನು ಬರೆಯಲು ಕಲಿತ ಆಕೆಯ ಸಾಧನೆ ಕಡಿಮೆಯೇ?

ಮಹಾಭಾರತ, ರಾಮಾಯಣ, ನಾರದಪುರಾಣ, ಮಂಕುತಿಮ್ಮನ ಕಗ್ಗ, ಕುಮಾರವ್ಯಾಸ ಭಾರತ ಇವೆಲ್ಲವನ್ನೂ ಆಕೆ ಓದುವದನ್ನ ಚಿಕ್ಕಂದಿನಲ್ಲಿ ಕಂಡಿದ್ದೆ. ಅಪ್ಪನಿಗೆ ಮಹಾತ್ಮಾ ಗಾಂಧಿ, ನೆಹರೂ ಅವರ ಪುಸ್ತಕಗಳೆಂದರೆ ಇಷ್ಟ. ಓದಿದ್ದು ನಾಲ್ಕನೇ ಕ್ಲಾಸಾದರೂ ಅವೆಲ್ಲವದರ ಬಗ್ಗೆ ಆಸಕ್ತಿ. ಅದರ ಜೊತೆಗೆ ಅನಕೃ, ತರಾಸು ಮುಂತಾದವರ ಜೊತೆಗೆ ಪತ್ತೇದಾರಿ ಕಾದಂಬರಿಗಳ ಹುಚ್ಚು. ಅವೆಲ್ಲವನ್ನ ನೋಡುತ್ತ ಅಮ್ಮ ಕಲಿತಳೋ? ಅವಳಿಗೆ ಕನ್ನಡವನ್ನ ಕಲಿಯುವ, ಓದುವ ಹಠ ಹುಟ್ಟಿಸುವಷ್ಟು ಆಕೆಯ ಅನುಭವ ದಾರುಣವಾಗಿತ್ತೋ?

ಅಮ್ಮ ಹುಟ್ಟಿದ್ದು ಕೇರಳದ ಪೈಯನೂರು ಸಮೀಪದ ತಾಯ್ನೇರಿ ಎನ್ನುವ ಹಳ್ಳಿಯಲ್ಲಿ. ಹವ್ಯಕ ಬ್ರಾಹ್ಮಣನಾದ ನನ್ನಪ್ಪನನ್ನು ಆಕೆ ಮದುವೆಯಾಗಿ ಬಂದದ್ದು ಹದಿನೆಂಟನೆ ವಯಸ್ಸಿನಲ್ಲಿ. ಅಮ್ಮ, ಅಪ್ಪನನ್ನು ಮದುವೆಯಾದ ಕಾರಣವೇ ಒಂದು ನೀಳ್ಗತೆಯಾದೀತು.

ಅಪ್ಪ ಅಡಕೆಗೆ ಔಷಧಿ ಸಿಂಪಡಿಸುವ, ಕೊನೆ ಕೊಯ್ಯುವ ಉದ್ಯೋಗದವ. ಓರ್ವ ಅಕ್ಕ, ಇಬ್ಬರು ಅಣ್ಣಂದಿರ ನಂತರ ಹುಟ್ಟಿದ ಅಪ್ಪ ಸಣ್ಣ ವಯಸ್ಸಿಗೇ ತಂದೆಯನ್ನ ಕಳೆದುಕೊಂಡ. ಕಿತ್ತು ತಿನ್ನುವ ಬಡತನದ ಮಧ್ಯೆ ಹತ್ತಿರದ ಶಿರಳಗಿಯಲ್ಲಿದ್ದ ಶಾಲೆಯಲ್ಲಿ ನಾಲ್ಕನೇ ತರಗತಿಯ ತನಕ ಓದಿದ. ಅವನೇ ಹೇಳುತ್ತಿದ್ದಂತೆ ಬೆಳಿಗ್ಗೆ ನೀರು ಕುಡಿದು ಶಾಲೆಗೆ ಹೋಗಿ ಬಂದರೆ ಮಧ್ಯಾಹ್ನ ಬಾಳೆಕಾಯಿ ಅಥವಾ ಹಣ್ಣು, ಇಲ್ಲವೇ ಆಯಾ ಶ್ರಾಯದಲ್ಲಿ ದೊರಕುವ ಫಲಗಳು, ರಾತ್ರಿ ಒಂದು ಮಡಕೆಯಲ್ಲಿ ಮಾಡಿದ ಗಂಜಿಯನ್ನು ಐವರೂ ಉಣ್ಣುವದು.

ದುಡಿಯಲೇ ಬೇಕಾದ, ದುಡಿದೇ ಬದುಕಬೇಕಾದ ಅನಿವಾರ್ಯತೆಯ ನಡುವೆ ಓದಿಗೆ ನಮಸ್ಕಾರ ಹೇಳಿ ಕೂಲಿ ಕೆಲಸಕ್ಕೆ ತೊಡಗಿದ. ಇದು ಒಂದು ಶತಮಾನದ ಹಿಂದಿನ ಸಂದರ್ಭ. ಸುಮಾರು 19918-19ರ ಎಡ-ಬಲ. ಇದ್ದ ಆಸ್ತಿಯೆಲ್ಲ ಪೇಟೆಯ ಕೊಂಕಣಿಗಳಿಗೆ ಅಡವಾಗಿತ್ತು. ಹಿರಿಯ ಅಣ್ಣಂದಿರಿಬ್ಬರೂ ಇವನಷ್ಟು ದಾಢಶೀಯಲ್ಲ. ಹಠ ಮತ್ತು ಛಲ ಅವರಿಗಿರಲಿಲ್ಲ. ಅನಿವಾರ್ಯತೆ ಇವನ ಹೆಗಲಿಗೇರಿ ಹೇಗೋ ಏನೋ ಅಡಕೆ ಬೇಸಾಯಕ್ಕೆ ಅಗತ್ಯವಾದ ಅಡಕೆ ಗೊನೆಗೆ ಹಾಳೆಕೊಟ್ಟೆ ಕಟ್ಟುವದು, ಗೊನೆ ಕೊಯ್ಯುವ ಕೆಲಸ ಕಲಿತ.

ಈ ಕೆಲಸ ನೋಡಲು ಸುಲಭ: ಮಳೆಗೆ ಹಾವಸೆ ಕಟ್ಟಿದ ಮರವನ್ನು ಐವತ್ತಡಿ ಎತ್ತರಕ್ಕೆ ಹತ್ತಬೇಕಾದ, ಸಾವಿನ ಸಮೀಪದ, ಹೆಚ್ಚಿನ ತಾಕತ್ತು ಬೇಕಾದ ಕೆಲಸ. ಬ್ರಾಹ್ಮಣನೊಬ್ಬ ಅಂಥ ಕೆಲಸ ಮಾಡತೊಡಗಿದ್ದು ಅದೇ ಮೊದಲೇನೋ? ಈಗಂತೂ ಆ ಕೆಲಸ ಲಾಭದಾಯಕ ವೃತ್ತಿ. ದಿನವೊಂದಕ್ಕೆ ಸಾವಿರಾರು ರೂಪಾಯಿ ವೇತನ: ಜೊತೆಗೆ ಇನ್ನುಳಿದ ಸೌಲಭ್ಯ. ಅಪ್ಪನ ಕಾಲದಲ್ಲಿ ಅವೆಲ್ಲ ಇರಲಿಲ್ಲ. ಅಪ್ಪ ಹೇಳುತ್ತಿದ್ದ: ಅವನು ಈ ಕೆಲಸಕ್ಕೆ ಹೋದಾಗ ಬ್ರಾಹ್ಮಣರ ಮನೆಯಲ್ಲೂ ಆತನಿಗೆ ಜಗಲಿಯಂಚಿಗೆ ಊಟ ಬಡಿಸುತ್ತಿದ್ದರಂತೆ. ದುಡಿದು ಸುಸ್ತಾಗಿ ಸಂಜೆ ಬಂದಾಗ ಎರಡ್ಮೂರು ಹಪ್ಪಳ ತಿನ್ನಲು ಕೊಡುತ್ತಿದ್ದರಂತೆ. ಪ್ರಾಯಶ: ಬಡತನ ಮತ್ತು ಮನೆಯವರನ್ನ ಸಾಕಬೇಕಾದ ಕಾರಣದಿಂದ ಆ ಅವಮಾನವನ್ನ ಸಹಿಸಿಕೊಂಡಿರುತ್ತಿದ್ದೆ ಎನ್ನುತ್ತಿದ್ದ.

ಅಷ್ಟರಲ್ಲಾಗಲೇ ಜರ್ಮನಿಯ ವಿಜ್ಞಾನಿಯೊಬ್ಬ ಸಂಶೋಧಿಸಿದ ಮೈಲುತುತ್ತ ಸಿಂಪರಣೆ ಶುರುವಾಗಿತ್ತಂತೆ. ಅಪ್ಪ ಆ ಕೆಲಸದಲ್ಲಿ ಎಕ್ಸಪರ್ಟ್ ಆಗಿಬಿಟ್ಟ. (ಹಳ್ಳಿಯೊಂದರಲ್ಲಿ ಮೈಲುತುತ್ತ ಸಿಂಪರಣೆ ಪ್ರಾತ್ಯಕ್ಷಿಕೆಯನ್ನು ಹಿರಿಯ ಬ್ರಿಟಿಷ್ ಅಧಿಕಾರಿಗಳಿಗೆ ಆಯೋಜಿಸಿದ್ದರಂತೆ. ತೋಟಕ್ಕೆ ಬಂದ ಅಧಿಕಾರಿಗಳ ಎದುರು ಅಪ್ಪ ಆ ಕೆಲಸಕ್ಕಾಗೇ ಇರುವ ಟಿಪಿಕಲ್ ವೇಷ ಧರಿಸಿ ಮರ ಹತ್ತುತ್ತ ಹೋದ. ಮರ ಏರಿದಂತೆಲ್ಲ ಬ್ರಿಟಿಷ್ ಅಧಿಕಾರಿಗಳು ತಲೆ ಎತ್ತುತ್ತ ಹೋದರು. ಕೊನೆಗೆ ಹಿರಿಯ ಅಧಿಕಾರಿ ಹ್ಯಾಟ್ ಹಿಂದೆ ಬಿದ್ದಿತಂತೆ. ಮರ ಇಳಿದು ಬಂದ ನಂತರ ಆ ಅಧಿಕಾರಿ ಅಪ್ಪನಿಗೆ ಆ ಹ್ಯಾಟ್ ಕೊಟ್ಟು ಪ್ರಶಂಸೆ ಮಾಡಿದನಂತೆ. ನನ್ನ ಅದೃಷ್ಠ: ಮನೆಯಲ್ಲಿದ್ದ ಆ ಹ್ಯಾಟನ್ನು ನನ್ನ ಮೂರನೇ ಕ್ಲಾಸಿನವರೆಗೂ ತಲೆಗೆ ಏರಿಸಿಕೊಂಡು ಓಡಾಡಿದ ನೆನಪು ಈಗಲೂ)

ಪಕ್ಕಾ ಶ್ರಮಿಕನಾದ ಅಪ್ಪ ದುಡಿದ ದುಡ್ಡಿನಿಂದ ಅಡವಿಗಿದ್ದ ಆಸ್ತಿ ಬಿಡಿಸಿ,ಮತ್ತೊಂದಿಷ್ಟು ಆಸ್ತಿ ಖರೀದಿಸಿ ಕುಟುಂಬವನ್ನ ತಹಬಂದಿಗೆ ತಂದ. ಅಣ್ಣಂದಿರ ಮದುವೆ ಮಾಡಿದ. ಅಷ್ಟಾದರೂ ತಿರುಕನ ಮನೆ ಎನ್ನುವ ನಮ್ಮ ಕುಟುಂಬಕ್ಕಿದ್ದ ಅಡ್ಡ ಹೆಸರು ಹೋಗಿರಲಿಲ್ಲ. ಮೂವತ್ತರ ಹತ್ತಿರವಾದರೂ ಹೆಣ್ಣು ಕೊಡುವವರಿಲ್ಲ. ಅಲ್ಲೂ ಅವಮಾನ, ಭರ್ತ್ಸ್ಯನೆ. ನಮ್ಮೂರಿನದೇ ಓರ್ವ ಶ್ರೀಮಂತ ಕುಟುಂಬದ ಹೆಣ್ಣೊಬ್ಬಳಿಗೆ ಜಾತಕ ಸರಿಯಿಲ್ಲದ ಕಾರಣಕ್ಕೆ ಲಗ್ನವಾಗಿರಲಿಲ್ಲ. ನಿಧಾನಕ್ಕೆ ಆಢ್ಯಸ್ಥ ಎನ್ನಿಸಿಕೊಳ್ಳುತ್ತಿದ್ದ ಅಪ್ಪನಿಗೆ ಅನಿವಾರ್ಯವಾಗಿ ಅವಳ ಸಂಬಂಧದ ಬಗ್ಗೆ ಪ್ರಸ್ತಾಪ ಮಾಡಿದರು.

ಇನ್ನೇನು ಮುಹೂರ್ತ ಫಿಕ್ಸ್ ಆಗಬೇಕು ಎನ್ನುವಾಗ ಅಪ್ಪನದು ಮೂಲಾ ನಕ್ಷತ್ರ: ಅರೆ ಆಯುಷ್ಯದಲ್ಲಿ ಸಾಯುತ್ತಾನೆ ಎನ್ನುವ ತಕರಾರು ತೆಗೆದು, ಅದನ್ನು ಹೇಳಲಾಗದೇ ಹತ್ತು ಚಿನ್ನದ ಹೂಗಳನ್ನ (ಆ ಕಾಲದಲ್ಲಿ ಹೆಂಗಸರು ಜಡೆಗೆ ಧರಿಸುತ್ತಿದ್ದರಂತೆ) ತೋರಿಸಿದರೆ ಒಪ್ಪಿಗೆ ಎಂದಾಗ ಅಪ್ಪ ದುಡ್ಡಿನ ಮುಖ ನೋಡಿ ಸಂಬಂಧ ಮಾಡೋದಿದ್ರೆ ಬೇಡ ಎಂದ. ಆದರೆ ಅಪ್ಪನ ಅಕ್ಕನ ಗಂಡ ಆ ಅಪಮಾನ ಸಹಿಸಲಾಗದೇ ಪರಶುರಾಮನಂತೆ ಕಿಡಿಗೆದರಿದ ಸೋದರತ್ತೆಯ ಅಳಿಯ ಅಪ್ಪನ ಮದುವೆಯಾಗುವ ತನಕ ಒಂದು ಹೊತ್ತೇ ಊಟ ಎಂದು ಶಫಥ ಮಾಡಿದ ಪ್ರಸಂಗವೂ ನಡೆಯಿತಂತೆ.

ಹಠ ಹಿಡಿದ ನನ್ನ ಸೋದರಮಾವ ಬಿಡಬೇಕಲ್ಲ.! ತಾಯ್ನೇರಿಯವರೇ ಆದ ಸಿದ್ದಾಪುರದಲ್ಲಿದ್ದ ಆಯುರ್ವೇದ ವೈದ್ಯ ಚಂದ್ರಶೇಖರ ಪಂಡಿತರು ಅವನಿಗೆ ಆಪ್ತರು. ಅವರಲ್ಲಿ ಈ ಪ್ರಸಂಗ ಹೇಳಿದಾಗ ತಮ್ಮ ಪುರೋಹಿತರ ಮಗಳು ಮದುವೆಗಿದ್ದಾಳೆ. ನಿಮಗೆ ಒಪ್ಪಿಗೆ ಇದ್ದರೆ ನೋಡುವಾ ಎಂದರು. ಆಗ ವಧುವಿನ ಕ್ಷಾಮ ಶುರುವಾಗಿ ಕುಂಬಳ ಸೀಮೆಯಿಂದ ಇಲ್ಲಿನವರು ಮದುವೆಯಾಗಿ ಬರಲು ಆರಂಬವಾಗಿತ್ತಂತೆ. ಇದು ಅದಕ್ಕಿಂತ ದೂರ: ಕುಂತಳ ದೇಶ. ಪಂಡಿತರೊಟ್ಟಿಗೆ ಬಾರ್ಕೂರು ಹೊಳೆಯಿಂದ ಪೈಯನ್ನೂರವರೆಗಿನ ಐದು ನದಿಗಳನ್ನ ದಾಟಿಸಿ, ಅಮ್ಮನ್ನ ಒಪ್ಪಿ ಅಪ್ಪ ಮದುವೆಯಾಗಿ ಬಂದ.

ನನ್ನಮ್ಮ ಎಣ್ಣೆಗಪ್ಪಿನ ಸುಂದರಿ: ದೇವಕಿ ಎನ್ನುವ ಹೆಸರು. ಭಾಷೆ ಬಾರದ, ನೋಡಲು ಇಲ್ಲಿನ ಹೆಂಗಸರಂತಿರದ ಅವಳಿಗೆ ಇಲ್ಲಿ ಬಂದಾಗ ದೊರಕಿದ್ದು ಹೀಗಳಿಕೆ. ಮನುಷ್ಯ ಭಾಷೆಯನ್ನು, ಲಿಪಿಯನ್ನು ಬಳಸತೊಡಗಿದ್ದು ಜೀವವಿಕಾಸದ ಹಾದಿಯ ಇತ್ತೀಚಿನ ಕೆಲವು ಸಾವಿರ ವರ್ಷಗಳ ಹಿಂದಿನಿಂದ ಇರಬಹುದು. ಭಾಷೆ ಮತ್ತು ಲಿಪಿಯ ಹಂಗಿಲ್ಲದೇ ಅಮ್ಮ ಬದುಕನ್ನು ಬೆಳೆಸಿಕೊಂಡದ್ದು ವಿಸ್ಮಯ.

ಯಾವುದೋ ಹೊಸ ವೇಷ ಬಂದಾಗ ನೋಡಬಂದವರಂತೆ ಆಕೆಯನ್ನು ನೋಡಲು ಬಂದವರು ಅವಳೆದುರೇ ಟೀಕೆ, ಟಿಪ್ಪಣಿ, ಮೂದಲಿಕೆ, ಅವಹೇಳನ ಮಾಡುತ್ತಿದ್ದರಂತೆ: ಅದರಲ್ಲಂತೂ ನಾವಂದಿದ್ದು ಅವಳಿಗೆ ಗೊತ್ತಾಗಲಲ್ವಾ ಎನ್ನುವ ಗಾಡವಿಶ್ವಾಸ. ಮುಖದ ಭಾವನೆ, ಹಾವಭಾವ ಇವುಗಳೇ ಸಾಕಲ್ಲವೇ. ಎದುರಿನವರ ಮನಸ್ಸನ್ನು ಅರಿಯಲು. ಅಮ್ಮನನ್ನ ಲೇವಡಿ ಮಾಡಿದವರಲ್ಲಿ ಹೆಂಗಸರೇ ಹೆಚ್ಚು ಎನ್ನುವದು ಆಕೆಗೂ ವಿಚಿತ್ರವಾಗಿತ್ತು. ಆ ಎಲ್ಲ ಅವಮಾನ, ಅಸಡ್ಡೆಗಳಿಗೆ ಕಣ್ಣಿರು ಹಾಕುತ್ತಿದ್ದ ಅಮ್ಮನಿಗೆ ಸಮಾಧಾನಿಸಿದವರು ಮೂವರೇ, ಅಪ್ಪ, ವಿಧವೆಯಾಗಿದ್ದ ಸೋದರತ್ತೆ, ತನ್ನ ಭಾವನಿಗೆ ಮದುವೆ ಮಾಡುವವರೆಗೂ ಒಂದೇ ಹೊತ್ತು ಊಟ ಎಂದು ಶಪಥ ಮಾಡಿದ ಆಕೆಯ ಅಳಿಯ.

ಆ ಕಾಲದ ಬ್ರಾಹ್ಮಣ ಹೆಂಗಸರಲ್ಲಿ, ಅದರಲ್ಲೂ ವಿಶೇಷವಾಗಿ ವಿಧವೆಯರಲ್ಲಿ ತೀರಾ ಭಿನ್ನವಾದ, ಅಪರೂಪದ ಮನಸ್ಥಿತಿಯವಳು ನನ್ನ ಅಪ್ಪನ ಅಕ್ಕ. ಆಕೆಯನ್ನ ನಾನು ನೋಡಿದ್ದು ವಿಧವೆಯಾದ ನಂತರ. ಬಿಳಿಯ ಸೀರೆಯುಟ್ಟ ಆಕೆ ಇವತ್ತಿಗೂ ಆಯುರ್ವೇದದಲ್ಲಿ ಪ್ರಮುಖವಾದ, ಮಕ್ಕಳಿಂದ ತೊಡಗಿ ವಯಸ್ಕರವರೆಗೂ ರಕ್ತ ಹೆಚ್ಚಿಸುವ, ಶುದ್ಧಿ ಮಾಡುವ ಏಕನಾಥನ ಬೇರು ಎನ್ನುವ ಮೂಲಿಕೆಯನ್ನ ನಮ್ಮ ಬೆಟ್ಟದಲ್ಲಿ ಕೆಲಸದವರಿಂದ ಅಗೆಸುತ್ತಿದ್ದುದಷ್ಟೇ ನನಗೆ ನೆನಪಿದೆ. ಆಕೆ ಅಮ್ಮನಿಗೆ ದೇವಕಿ ನೀನಗೆ ನಾನಿದ್ದೇನೆ. ಎನ್ನುವ ಮಾತನ್ನಾಡಿ ಜೀವ ಮತ್ತು ಧೈರ್ಯ ತುಂಬಿದಳಂತೆ. ಕೊನೆಯವರೆಗೂ ಆಕೆ ಅಮ್ಮನನ್ನ ಮಗಳಂತೆ ಕಂಡಳಂತೆ.

ಅಪ್ಪ ಎಷ್ಟೇ ದುಡಿದರೂ ಬೀಡಿ ಸೇದುವ ಚಟ ಬಿಟ್ಟು ಬೇರೆನನ್ನೂ ಕಲಿಯಲಿಲ್ಲ. ಮದ್ಯ, ಮಾಂಸ ಯಾವುದು ಇಲ್ಲ. ಅಮ್ಮ ಎಂದರೆ ಜೀವದಂಥ ಪ್ರೀತಿ. (ದೊಡ್ಡವನಾದ ಮೇಲೆ ಅಮ್ಮ ಹೇಳುತ್ತಿದ್ದಳು: ಒಂದೇ ಒಂದು ದಿನ ಕೈಯೆತ್ತುವದಿರಲಿ, ಗಟ್ಟಿಯಾಗಿ ಮಾತನಾಡಿದ್ದೂ ಇಲ್ಲ. ಹಾಗಂಥ ಮುಜುರೆ ಮಾಡುವದೂ ಅಲ್ಲ). ಆ ಕಾಲದಲ್ಲಿ ವಿದೇಶವೇ ಆದ ಊರಿನಿಂದ ಮದುವೆಯಾಗಿ ಬಂದವಳನ್ನು ಘನತೆ, ಮರ್ಯಾದೆಯಿಂದ ಕೊನೆತನಕ ಕಂಡದ್ದನ್ನ ನಾನೇ ನೋಡಿದ್ದೇನೆ.

ಅಮ್ಮನನ್ನ ಮದುವೆಯಾಗಿ ಬಂದ ಅಪ್ಪನಿಗೆ ಪೀಕಲಾಟ ಕಾಡಿತ್ತು: ಊರಿನ ಬ್ರಾಹ್ಮಣರೆಲ್ಲ ಜಗತ್ಪ್ರಸಿದ್ಧ ರಾಮಚಂದ್ರಾಪುರಮಠದ ಶ್ರೀಗಳನ್ನ ಕಂಡು ಯಾವುದೋ ಕೆಳಜಾತಿಯ, ಕೇರಳದ ಹೆಣ್ಣನ್ನ ಮದುವೆಯಾಗಿ ಬಂದಿದ್ದಾನೆ, ಅವನಿಗೆ ಜಾತಿಯಿಂದ ಬಹಿಷ್ಕಾರ ಹಾಕಬೇಕು ಎಂದು ಅಪೀಲು ಸಲ್ಲಿಸಿದ್ದಲ್ಲದೇ ಇದರ ವಿಚಾರಣೆಗಾಗಿ ಪಾದಪೂಜೆ, ಭಿಕ್ಷೆಯ ವ್ಯವಸ್ಥೆಯನ್ನೂ ಮಾಡಿಬಂದರಂತೆ. ಇಲ್ಲದಿದ್ದರೆ ಸ್ವಾಮಿಗಳು ಬರುವದಿಲ್ಲವಲ್ಲ. ಊರಿನ ಶ್ರೀಮಂತರಿಗೆ ಹೊಟ್ಟೆಯುರಿ ಎಂದರೆ ಅಡಕೆ ಕೊನೆ ಕೊಯ್ಯುವ ಮನುಷ್ಯ ಆಗಲೇ ಅಡವಿದ್ದ ಆಸ್ತಿ ಬಿಡಿಸಿ, ಇನ್ನಷ್ಟು ಆಸ್ತಿ ಕೊಂಡು, ಇಷ್ಟೆಲ್ಲ ಶ್ರೀಮಂತರನ್ನ ಬಿಟ್ಟು ಗ್ರಾಮದ ಪಟೇಲನಾಗಿ, ಪೊಲೀಸ್ ಪಾಟೀಲನಾದನಲ್ಲ ಎನ್ನುವ ಸಿಟ್ಟೂ ಬಹಳಷ್ಟಿತ್ತು. ಅವರ ಅಪೀಲಿಗೆ ಪುರಸ್ಕರಿಸಿರಂತೆ ಆಗಿನ ಶ್ರೀಗಳು. ಎಷ್ಟೆಂದರೂ ಸಂಸಾರಸ್ಥರಿಗಿಂತ ಸನ್ಯಾಸಿಗಳಿಗೆ ಲೌಕಿಕದ ಆಕರ್ಷಣೆ ಹೆಚ್ಚಲ್ಲವೇ?

ಶ್ರೀಗಳ ಸವಾರಿ ನಮ್ಮೂರಿನ ಆಡ್ಯಸ್ಥರ ಮನೆಗೆ ಬಂದಿತಂತೆ, ಓಹೋ, ಇಡೀ ಸೀಮೆಯ ಭಕ್ತಸಮೂಹ ಅವರ ಪಾದಸ್ಪರ್ಶಕ್ಕೆ ಮುಗಿಬಿದ್ದಿತಂತೆ. ಒಂದುದಿನ ಪೀಠದ ಬೆಳ್ಳಿ ದಂಡ ನಮ್ಮನೆ ಬಾಗಿಲಿಗೆ ಬಂತು.(ಆಗೆಲ್ಲ ತಮ್ಮ ವ್ಯಾಪ್ತಿಯ ಶಿಷ್ಯರ ವಿಚಾರಣೆಗೆ ಈ ದಂಡವನ್ನ ಬಳಸುತ್ತಿದ್ದರಂತೆ. ಮಠದ ಬೆಳ್ಳಿ ದಂಡ ಮನೆಬಾಗಿಲಿಗೆ ಬಂತೆಂದರೆ ಗ್ರಹಚಾರ ನಿಕ್ಕಿ ಅಂತಲೇ ತಿಳಿಯುತ್ತಿದ್ದರಂತೆ ಈಗ ದಂಡ ಮೊಂಡಾಗಿಬಿಟ್ಟಿದೆ. ಮಠ, ಸ್ವಾಮಿಗಳೇ ದಂಡ ಆಗಿದ್ದಾರೆ). ಮನೆ ಬಾಗಿಲಿಗೆ ದಂಡ ಹಿಡಿದು ಬಂದ ಪರಿಚಾರಕರಿಗೆ (ಅವರಿಗೆ ಆಗಲೂ, ಈಗಲೂ ಮಠದ ದಾಂಡಿಗರು ಅನ್ನೋದು ವಾಡಿಕೆ. ಭಕ್ತರು ಅರ್ಪಿಸಿದ ಹಣ್ಣು, ಒಣಗಿದ ಹಣ್ಣು, ಮಠದ ಬಿಟ್ಟಿ ಕೂಳು ತಿಂದು ಮೈ ಉಬ್ಬಿಸಿಕೊಂಡವರು) ಕೊಟ್ಟ ಸಮಯಕ್ಕೆ ಸರಿಯಾಗಿ ಆ ದೊಡ್ಡವರ ಮನೆಗೆ ಅಪ್ಪ ಹೋದ.

ಅವನ ವಿಚಾರಣೆಗಾಗಿಯೇ ಸೇರಿದ ವಿಶೇಷ ಸಭೆ ಆ ದಿನ. ಕುತೂಹಲ, ಮತ್ಸರಗಳ ಜೊತೆಗೆ ಮನರಂಜನೆಗೆ ಇಡೀ ಸೀಮೆಯ ಜನವೇ ಸೇರಿತ್ತಂತೆ. ಅಪ್ಪನಿಗೆ ಆಗೊಂದು ನೆನಪು ಬಂದಿತಂತೆ; ಆತ ಚಿಕ್ಕವನಿದ್ದಾಗ, ಆರೆಂಟು ವರ್ಷದವನಿದ್ದಾಗ ಅದೇ ಶ್ರೀಮಂತರ ಮನೆಯ ವಿಶೇಷ ಕಾರ್ಯಕ್ರಮದ ಊಟಕ್ಕೆ ಅಪ್ಪ, ಆತನ ಸ್ನೇಹಿತ ಗಣೇಶ ಎನ್ನುವವ ಹೋಗಿದ್ದರಂತೆ. ದಿನಾ ಅರೆ ಊಟ ಮಾಡುವ ಈ ಹುಡುಗರಿಗೇನು ಗೊತ್ತು? ಇಂದಾದರೂ ಮೃಷ್ಟಾನ್ನ ಮಾಡುವ ಎಂದು ಪಂಕ್ತಿಯಲ್ಲಿ ಹೋಗಿ ಕೂತರಂತೆ. ಊಟ ಬಡಿಸಲು ಶುರುವಾದಾಗ ಆ ಮನೆಯ ನೆಂಟ, ಪ್ರತಿಷ್ಠಿತ ವೈದಿಕ ನೋಡಿ ಇವರಿಬ್ಬರಿಗೂ ಬೈಯುತ್ತ ಅಪ್ಪನ ತೋಳನ್ನ ಎಳೆಯುತ್ತ ತಿರುಕನ ಮನೆಯ ಮಾಣಿಗೆ ಎಷ್ಟು ಸೊಕ್ಕೋ, ಇಲ್ಲಿ ಬಂದು ಕೂತುಕೊಳ್ಳೋಕೆ ಎಂದು ಎಳೆದುಬಿಟ್ಟನಂತೆ. (ಅಪ್ಪ ತಾನು ಬಳಸಿದ ಕೆಟ್ಟ ಶಬ್ದ ನನಗೆ ಹೇಳದೆ ಅವನಿಗೆ ಬೈಯ್ದು ಊಟ ಬಿಟ್ಟು ಅವರಿಬ್ಬರೂ ಎದ್ದು ಬಂದ ಸಂಗತಿ ಹೇಳಿದ್ದ)

ಅದು ನೆನಪಾಯಿತಂತೆ. ಸಭೆ ಶುರುವಾಯಿತು (ಪುಣ್ಯ ಅಮ್ಮನನ್ನ ಕರೆಸಲಿಲ್ಲ). ಕೆಂಪಗೆ ಕಂಗೊಳಿಸುವ ಸ್ವಾಮಿಗಳು ಮತ್ತಷ್ಟು ಕೆಂಪಗಾಗಿ ‘ಕರೀರಿ ಸುಬ್ರಾಯನ್ನ’ ಅಂದರು. ಈತ ಹೋಗಿ ನಿಂತ. ಮುಜುರೆ ಮಾಡಲಿಲ್ಲ. ‘ಏನೋ ಯಾವ್ದೋ ಜಾತಿ ಹುಡುಗಿ ಮದುವೆಯಾಗಿ ಬಂದಿದ್ದಿಯಂತೆ, ನಿನಗೆ ಬಹಿಷ್ಕಾರ ಹಾಕ್ತೀನಿ’ ಎಂದು ಗುಡುಗಿದರಂತೆ.

ಅಪ್ಪ ಮನಸ್ಸಿನಲ್ಲೇ ಇಷ್ಟು ವರ್ಷ ಆಗಿದ್ದು ಅದೇ, ಇದೇನು ಹೊಸತು ಅಂದ್ಕೊಂಡನಂತೆ. ‘ಏನಾರೂ ಮಾಡಿ’ ಎಂದ ಅವನ ಮಾತಿಗೆ ತಲೆ ತಗ್ಗಿಸಿ ಕಾಲಿಗೆ ಬೀಳುವ ಬದಲು ಹೀಗಂತಾನಲ್ಲಾ ಎಂದುಕೊಂಡರೇನೋ? ‘ಎಲ್ಲಿದೋ ಹುಡುಗಿ’ ಎಂದು ಶ್ರೀಪಾದರು ಮತ್ತೆ ಪ್ರಶ್ನಿಸಿದಾಗ ಉತ್ತರ ‘ಪೈಯನ್ನೂರಿನ ತಾಯ್ನೇರಿಯವಳು.’ ‘ಅಲ್ಲಿ ಯಾರ ಮನೆ?’ ಸ್ವಾಮಿಗಳ ಪ್ರಶ್ನೆ. ‘ಕಾಳಘಾಟ್ ನಂಬೂದರಿಗಳ ಮಗಳು’ ಅಪ್ಪನ ಉತ್ತರ.

ಒಂದುಕ್ಷಣ ಶ್ರೀಪಾದರು ಕಂಗಾಲು. ಕೆಂಪಗಿನ ಮುಖ ಬಿಳಿಚಿಕೊಂಡು ವಿಚಾರಣೆಗೆ ಕರೆಸಿದ ದೊಡ್ಡವರನ್ನ ಕರೆಸಿಕೊಂಡು ‘ಏನು, ಎಂಥಾ ಕೇಳದೇ ಹೀಗಮಾಡಿದಿರಲ್ರೀ, ಹುಡುಗಿ ಅಪ್ಪ ಕೇರಳದ ದೊಡ್ಡ ವಿದ್ವಾಂಸ, ವೈದಿಕ. ನಿಮ್ಮ ಕಥೆ ಹಾಳಾತು’ ಎಂದು ಉಗಿದರಂತೆ. ‘ಏ, ಮಾರಾಯಾ, ನಿಂಗೆ ಸುಮ್ನೆ ತೊಂದ್ರೆ ಆಯ್ತು’ ಎಂದು ಮಂತ್ರಾಕ್ಷತೆ ಕೊಡಲು ಕರೆದರಂತೆ. ‘ನನಗೆ ಪುರುಸೊತ್ತಾದಾಗ ನಾನು, ಮನೆಯವಳು ನಿಮ್ಮಲ್ಲಿಗೇ ಬಂದು ತಗೋತೀವಿ’ ಎಂದು ಅಪ್ಪ ಎದ್ದು ಬಂದನಂತೆ. (ನಮ್ಮನ್ನ ಸುಮ್ಮನೆ ಪುರೋಹಿತಶಾಹಿಗಳು, ಶೋಷಣೆ ಮಾಡುವವರು ಎಂದು ಬೊಬ್ಬೆ ಹಾಕುವವರಿಗೆ ಇಂಥ ಒಳ ತಲ್ಲಣಗಳು ಗೊತ್ತೇ ಇಲ್ಲ; ಅನುಭವವೂ ಇಲ್ಲ)

ಅಷ್ಟರಾಚೆಗೆ ಅಮ್ಮ ಕನ್ನಡ ಕಲಿತಳು, ಸಹಿ ಮಾಡುವಷ್ಟು, ನಾವು ಹೇಳಿಕೊಟ್ಟರೆ ಇನ್ನಷ್ಟು ಬರೆಯುವಷ್ಟು ಕಲಿತಳು. ಓದುವದಂತೂ ಬಿಡಿ; ಅವಳಿಗೆ ಒಬ್ಬ ಮಗ ಸಿಕ್ಕಿದ್ದ. ಯಕ್ಷಗಾನದ ಬಡಗು ತಿಟ್ಟಿನ ಪ್ರಸಿದ್ಧ ಪೋಷಕ ಕಲಾವಿದ ಅನಂತ ಹೆಗಡೆ. ಹುಟ್ಟಿದ ನಾಲ್ಕು ತಿಂಗಳಿಗೆ ಅಪ್ಪನನ್ನ ಕಳೆದುಕೊಂಡ, ಮೂರೋ, ನಾಲ್ಕೋ ವರ್ಷಕ್ಕೆ ಅಮ್ಮನ್ನ ಕಳೆದುಕೊಂಡ ಆತನಿಗೆ ಅಮ್ಮನ ಎಲ್ಲ ಕರ್ತವ್ಯವನ್ನ ಮಾಡಿಕೊಟ್ಟಳು ಅಮ್ಮ (ವಿಚಿತ್ರವೆಂದರೆ ಅಮ್ಮ ತೀರಿಕೊಂಡ 15 ದಿನದಲ್ಲೇ ನಾವೆಲ್ಲ ಸಣ್ಣಣ್ಣಯ್ಯ ಅಂತ ಕರೆಯುವ ಆತ ತೀರಿಕೊಂಡ, ಅವನ ಮನಸ್ಸು ಅಮ್ಮ ತೀರಿಕೊಂಡಾಗಿನಿಂದಲೇ ಕುಸಿಯತೊಡಗಿದ್ದು ನನಗೆ ಗೊತ್ತಾಗಿತ್ತು).

ನಾನು ದೊಡ್ಡವನಾದೆನಲ್ಲ; ‘ಲಂಕೇಶ್ ಪತ್ರಿಕೆ’ ಶುರುವಾದನಿಂದ (ಪ್ರಾಯಶ: ಪ್ರಥಮ ಸಂಚಿಕೆ ಬಂ,ಗುಂ. ಎನ್ನುವ ಶೀರ್ಷಿಕೆಯಿರಬೇಕು) ಪ್ರತಿವಾರ ಮನೆಗೆ ತರಲೇಬೇಕು. ಅದನ್ನ ಓದುತ್ತಲೇ ಬೆಳೆದವರು ನಾವೆಲ್ಲ. ನನ್ನಂಥವನಿಗೆ ಏನಾದರೂ ಒಂಚೂರು ವಿಚಾರ ಮಾಡಲು ಶಕ್ತಿ ಬಂದಿದ್ದಾದರೆ ಅದು ಲಂಕೇಶ್ ಪತ್ರಿಕೆಯಿಂದ.

ಆಗಲೆ ನನಗೆ ಸಾಹಿತ್ಯದ ಗೀಳು ಹತ್ತಿತ್ತು. ಒಂದು ಹಂತದ ಸಾಹಿತ್ಯಿಕ ಓದನ್ನು ದಾಟಿ ಲಂಕೇಶ್, ಅನಂತಮೂರ್ತಿ, ತೇಜಸ್ವಿಯವರನ್ನ ಓದುತ್ತ ನಾನು ಬೆಳೆಯುತ್ತಿದ್ದೇನೆ ಎನ್ನುವ ಒಣ ಹುಮ್ಮಸಿನಲ್ಲಿದ್ದೆ. ಅವರೆಲ್ಲರ ಪುಸ್ತಕಗಳನ್ನ ಖರೀದಿ ಮಾಡಿ ತರುತ್ತಿದ್ದೆ. ಅಮ್ಮ ಅವನ್ನೆಲ್ಲ ಓದುತ್ತಿದ್ದಳು. ಗೊತ್ತಾಗದ್ದನ್ನ ನನ್ನ ಬಳಿ ಕೇಳುತ್ತಿದ್ದಳು. ಪ್ರಾಯಶ: ನನಗಿಂತ ಹೆಚ್ಚಾಗಿ ಅವಳು ನನ್ನ ಸಂಗ್ರಹದಲ್ಲಿರುವ ಪುಸ್ತಕಗಳನ್ನ ಓದಿರಬಹುದು; ಅವಳಿಗೆ ಕಾದಂಬರಿ ಹೆಚ್ಚು ಇಷ್ಟವಾಗಿತ್ತು.

ಕುವೆಂಪು, ಕಾರಂತ, ಭೈರಪ್ಪ, ಅನಂತಮೂರ್ತಿ, ಲಂಕೇಶ್, ತೇಜಸ್ವಿಯಿಂದ ರವಿ ಬೆಳಗೆರೆಯವರ ಪುಸ್ತಕಗಳನ್ನ ಓದಿ, ಆ ಬಗ್ಗೆ ನನ್ನ ಬಳಿ ಚರ್ಚಿಸುತ್ತಿದ್ದುದು ಈಗಲೂ ನೆನಪಾಗುತ್ತದೆ. ಎಲ್ಲವೂ ಆಕೆಗೆ ಒಪ್ಪಿತವಾಗುತ್ತಿರಲಿಲ್ಲ. ಅದನ್ನು ನಿರ್ಧಾಕ್ಷಿಣ್ಯವಾಗಿ ಹೇಳುತ್ತಿದ್ದಳು. ಅರ್ಥವಾಗದ ಪೇಜಿನಲ್ಲಿ ಕಡ್ಡಿ ಚೂರನ್ನ ಸಿಕ್ಕಿಸಿಟ್ಟು ನಂತರ ನನಗೆ ಕೊಟ್ಟು ವಿವರ ಕೇಳುತ್ತಿದ್ದಳು.

ಮಜಾ ಅಂದರೆ ನಾವಿಬ್ಬರೇ ಮನೆಯಲ್ಲಿ. ರಾತ್ರಿ ಊಟವಾದ ನಂತರ ಅಮ್ಮ ಕವಳ ಹಾಕುತ್ತಿದ್ದಳು. ಅಂದರೆ ವೀಳ್ಯದೆಲೆ, ಅಡಕೆ ಜೊತೆಗೆ ತಂಬಾಕು. ಕವಳ ಹಾಕಿ ಅವಳು ಅಲ್ಲಿ ಪುಸ್ತಕ ಹಿಡಿದು ಕೂತರೆ ಇಲ್ಲಿ ನಾನೊಂದು ಕವಳ ಹಾಕಿ ಪುಸ್ತಕ ಹಿಡಿದು ಕೂರುತ್ತಿದ್ದೆ. ರಾತ್ರಿ ಎಷ್ಟೋ ಹೊತ್ತಿನ ನಂತರ ‘ ತಮಾ, ರಾತ್ರಿಯಾತೋ, ಮಲಗೋ’ ಎನ್ನುತ್ತಿದ್ದಳು ( ವಿಚಿತ್ರ ಎಂದರೆ ಮಗನಾದ ನನಗೆ ಅಪ್ಪ, ಅಮ್ಮ ಇಬ್ಬರೂ ‘ತಮ್ಮಾ’ ಅಂತಲೇ ಕರೀತಿದ್ರು!)

ಅಷ್ಟರಲ್ಲಾಗಲೇ ಅಪ್ಪ ತೀರಿಕೊಂಡಿದ್ದ: ನನ್ನ ತೊಡೆಯ ಮೇಲೆ ಮಲಗಿ ಜೀವ ಬಿಟ್ಟಿದ್ದ. ಅಮ್ಮ ನಿಧಾನಕ್ಕೆ ಕುಸಿಯತೊಡಗಿದ್ದಳು. ಅವಳಿಗೆ ತನ್ನ ಬದುಕಿನ ನೆನಪುಗಳನ್ನ ಕಳೆಯಲು ಓದು ಅನಿವಾರ್ಯವಾಗಿತ್ತೇನೋ? ಕಣ್ಣು ಮಂದವಾಗಿ, ಕನ್ನಡಕ ಬಂದರೂ ಅದರ ಪರಿವೆಯಿಲ್ಲದೇ ಓದುತ್ತಿದ್ದಳು. ಮನೆಯನ್ನ, ಕುಟುಂಬವನ್ನ ಬೆಳೆಸಿದ, ಕಾಪಾಡಿದ ಅಮ್ಮ ಬಿಡುವು ಸಿಕ್ಕಾಗ ಕೈಯಲ್ಲಿ ಹಿಡಿಯುತ್ತಿದ್ದುದು ಪುಸ್ತಕವನ್ನ. ಮಂಗಳವಾರ ಬಂದರೆ ಲಂಕೇಶ್, ಗುರುವಾರ ಹಾಯ್ ಬೆಂಗಳೂರ್, ಪ್ರತಿದಿನ ದಿನಪತ್ರಿಕೆ.. ಎಲ್ಲಾದರೂ ಮರೆತೆ ಎಂದರೆ ನನ್ನ ಮೇಲೆ ಸಿಡಿಮಿಡಿ.

ಅಮ್ಮ ಮತ್ತು ಸಣ್ಣಣ್ಣಯ್ಯ ಅವರು ಬದುಕಿರುವ ತನಕ ನನ್ನಲ್ಲಿರುವ ಪುಸ್ತಕ ಸಂಗ್ರಹದಲ್ಲಿನ ಕಥಾಸಂಕಲನ, ಕಾದಂಬರಿಗಳೆಲ್ಲವನ್ನ ಓದಿದರೇ ಹೊರತು ನಾನಲ್ಲ. ಅವರು ಅಳಿದ ಮೇಲೆ ನನ್ನ ಬಳಿ ನೂರಾರು ಪುಸ್ತಕ ಸೇರಿಕೊಂಡಿದೆ. ಪ್ರತಿ ಪುಸ್ತಕ ಕೊಂಡಾಗಲು ಅಮ್ಮನ ನೆನಪಾಗುತ್ತದೆ. ಈಗಲೂ ಓದುವಾಗೆಲ್ಲ ಅಮ್ಮ ಪಕ್ಕದಲ್ಲೇ ಇದ್ದಾಳೆ ಅನ್ನಿಸುತ್ತದೆ.

3 Responses

 1. ಮಂಜುಳಾ ಹುಲ್ಲಹಳ್ಳಿ says:

  ಸಂಕಷ್ಟದ ಕುಲುಮೆಯಲ್ಲಿ ಬೇಯುತ್ತಲೇ ಮಕ್ಕಳನ್ನು ಹೊಡೆದು ಬಡಿದು ಹದ ಮಾಡಿದ ನನ್ನ ಅಮ್ಮನನ್ನೂ ನೆನಪಿಸಿದಿರಿ.
  ವಂದನೆಗಳು.

 2. malati kudakavi says:

  amma emdare avlu sarvakalakku ammane… avala hodetavadu bari hodetavalla…devara prasada… adaralli tappugala tidduva shaktiyide…

 3. ತಮ್ಮಣ್ಣ ಬೀಗಾರ says:

  ಅಂದಿನ ದಿನದ ಕಷ್ಟಗಳನ್ನೆಲ್ಲ ತೆರೆದಿಟ್ಟಿದ್ದೀರಿ.ಆಗಿನ ಬದುಕಿನ ಕಷ್ಟ ಪರಂಪರೆಯಲ್ಲಿಯೂ ಪುಸ್ತಕ ಪ್ರೀತಿ, ಪರಿಸರ ಕಾಳಜಿ,ಕಲಾ ಉಪಾಸನೆ ಗಳು ಅವರ ಬದುಕನ್ನು ಎತ್ತರಕ್ಕೆ ಏರಿಸಿದ್ದಲ್ಲದೆ ನಮಗೆ ಒಂದಿಷ್ಟು ಶಕ್ತಿ ನೀಡಿದೆ.ಒಂದು ಒಳ್ಳೆಯ ಓದು ಒದಗಿಸಿದ್ದಕ್ಕಾಗಿ ನಿಮಗೆ ಮತ್ತು ಅವಧಿಗೆ ಅಭಿನಂದನೆಗಳು.

Leave a Reply

%d bloggers like this: