fbpx

ಆತ ನನಗೆ ಹೊಡೆದದ್ದು ಮಾತ್ರ ಇನ್ನೂ ನೆನಪಿದೆ..

ನನ್ನ ಅಪ್ಪ ಆರ್ ವಿ ಭಂಡಾರಿ..

ಬಂಡಾಯ ಸಾಹಿತ್ಯದ ಹಲವು ಮುಖಗಳಲ್ಲಿ ನನಗೆ ಆರ್ ವಿ ಭಂಡಾರಿಯವರದ್ದು ಮರೆಯಲಾಗದ ಮುಖ.

ಬಂಡಾಯ ಸಾಹಿತ್ಯ ಜನರ ಕೈಗೆ ಲೇಖನಿ ಕೊಡುವ ತವಕದಲ್ಲಿದ್ದಾಗ ಭಂಡಾರಿ ಅವರು ತಮ್ಮ ಊರಿನಲ್ಲಿ ನಡೆಸುತ್ತಿದ್ದ ಕೆಲಸಗಳು ಅದಾಗಲೇ ಆ ಎಲ್ಲಕ್ಕೂ ನಾಂದಿ ಹಾಡಿತ್ತು. ಬರೆಯಲು ಪ್ರೇರೇಪಿಸಿದ್ದರು, ಪ್ರಶ್ನಿಸಲು ಧೈರ್ಯ ಕೊಟ್ಟಿದ್ದರು. ಕ್ರಮೇಣ ಮನೆಯಿಂದ ಆರಂಭಿಸಿ ಸಮಾಜದಲ್ಲೂ ಇರುವ ಕಟ್ಟು ಕಟ್ಟಲೆಯನ್ನು ದಾಟುವ ಬಗೆ ಎಲ್ಲರಿಗೂ ಹೇಳಿಕೊಟ್ಟಿದ್ದರು.

ಇಲ್ಲಿ ಮಗ ವಿಠ್ಠಲ ಭಂಡಾರಿ ತಾನು ಅಪ್ಪನನ್ನು ಕಂಡ ಬಗೆಯನ್ನು ಬಣ್ಣಿಸಿದ್ದಾನೆ. ಒಂದಷ್ಟು ಕಂತಿನಲ್ಲಿ ಅವರ ಬಗೆಗೆ ಒಂದು ನೋಟವನ್ನು ಕಟ್ಟಿಕೊಡಲು ‘ಅವಧಿ’ ಪ್ರಯತ್ನಿಸುತ್ತದೆ.

ಈ ಹಿಂದೆ ಖ್ಯಾತ ಪ್ರೊಫೆಸರ್ ಎಚ್ ಎಸ್ ಈಶ್ವರ್ ಅವರು ತನ್ನ ಅಣ್ಣ , ಕನ್ನಡ ಲೋಕ ಕಂಡ ಮಹತ್ವದ ವಿಮರ್ಶಕ ಡಾ ಹಾಮಾ ನಾಯಕ್ ಅವರ ಬಗ್ಗೆ ಬರೆದಿದ್ದರು. ಡಾ ಹಾ ಮಾ ನಾಯಕ್ ಅವರ ಬದುಕು ಹೀಗಿತ್ತು ಎಂದು ಎಷ್ಟೋ ಓದುಗರಿಗೆ ಗೊತ್ತಾಗಿದ್ದು ಆ ಬರಹ ಸರಣಿಯಿಂದಾಗಿಯೇ

ಈಗ ವಿಠ್ಠಲನ ಸರದಿ. ಅಪ್ಪನನ್ನ ಅಂತೆಯೇ ನಮ್ಮ ಮುಂದೆ ನಿಲ್ಲಿಸಲಿದ್ದಾನೆ

ಒಮ್ಮೆ ಮಾಧವಿಗೆ  (ಸಣ್ಣ ಅಕ್ಕ- ಮಾಧವಿ ಭಂಡಾರಿ ಕೆರೆಕೋಣ) ಅಣ್ಣ ಅವಳಿಗೆ ಹೊಡೆಯಲು ಬಂದಿದ್ದನಂತೆ. ಆದರೆ ಓಡುವುದರಲ್ಲಿ ಜೋರಿದ್ದಳು ಆಕೆ. ಊರೆಲ್ಲ ಓಡಿದರೂ ಆಕೆ ಆತನ ಕೈಕೆ ಸಿಗಲಿಲ್ಲ. ಅಥವಾ ಸಿಕ್ಕಾಗ ಆತ ಸುಸ್ತಾಗಿ ಬಿಟ್ಟಿರಬೇಕು.

ಇನ್ನಕ್ಕ (ಹಿರಿಯ ಅಕ್ಕ) ಇವನಿಗೆ ಬಹು ಪ್ರಿಯಳಾಗಿದ್ದಳು. ಮತ್ತು ಅವಳೆಂದೂ ನಮ್ಮಂತೆ ಅಧಿಕ ಪ್ರಸಂಗಿಯಾಗಿರಲಿಲ್ಲ. ಮಕ್ಕಳಿಗೆ ದಿನ ನಿತ್ಯ ಬೈಯುವುದನ್ನು ಮತ್ತೆ ಮತ್ತೆ ಹೊಡೆಯುವುದನ್ನೂ ಆತ ವಿರೋಧಿಸುತ್ತಿದ್ದ. ನಾನು ಓದುವುದಿಲ್ಲ, ಬರೆಯುವುದಿಲ್ಲ, ಬರೇ ಆಟ ಆಡುತ್ತಿರುತ್ತೇನೆಂದು ಅಕ್ಕ (ಅಮ್ಮ) ಬೈದರೆ ಆತನಿಗೆ ಸಿಟ್ಟು ಬರುತ್ತಿತ್ತು. ಒಮ್ಮೆ ಹೊಡೆದರೆ ಅಥವಾ ಬೈದರೆ ಹಲವು ವರ್ಷ ನೆನಪಿರಬೇಕು ಎನ್ನುವುದು ಆತನ ನಿಲುವು.

ಆತ ನನಗೆ ಹೊಡೆದದ್ದು ಮಾತ್ರ ಇನ್ನೂ ನೆನಪಿದೆ. ನನ್ನ ಜೀವನದಲ್ಲಿ ಎರಡು-ಮೂರು ಬಾರಿ ಮಾತ್ರ ಹೊಡೆತ ಬಿದ್ದಿದ್ದು. ಎರಡು ಬಾರಿಯೂ ಉಚ್ಚೆ ಹೊಯ್ದುಕೊಂಡಿದ್ದೆ.

ಒಮ್ಮೆ ನಾನು ತೀರಾ ಸಣ್ಣವನಿದ್ದಾಗ. ಆಯಿ ನನ್ನನ್ನು ಸ್ನಾನ ಮಾಡಿಸಿಕೊಂಡು ಬರುವಂತೆ ಅಣ್ಣನಿಗೆ ಹೇಳಿದಳು. ಚಕ್ರ ಪಟ್ಟೆ (ಚಕ್ಕಪಾಟಿ) ಹಾಕಿ ಕುಳಿತ ನನ್ನನ್ನು ಬಕ್ಕಾಣೆ (ರಮಿಸುತ್ತಾ) ಮಾಡುತ್ತಾ ಸ್ನಾನ ಮಾಡಿಸಲು ಹಾಗೇ ಎತ್ತಿಕೊಂಡು ತನ್ನ ಹೆಗಲಮೇಲೆ ಕುಳ್ಳಿರಿಸಿ ಬಚ್ಚಲ ಕಡೆ ಹೋಗುತ್ತಿದ್ದ. ಸ್ನಾನ ಬೇಡವೆಂದು ಹಠ ಹಿಡಿದ ನಾನು (ನನಗೆ ಈಗಲೂ ಸ್ನಾನವೆಂದರೆ ಆಗದು; ಅಪರೂಪಕ್ಕೆ ಒಮ್ಮೆ ಸ್ನಾನ ತಪ್ಪಿಸಿಕೊಳ್ಳುವುದೆಂದರೆ ಕದ್ದು ತಿಂಡಿ ತಿಂದಷ್ಟೇ ಖುಷಿ.) ಜೋರಾಗಿ ಮಿಸುಕಾಡಿದೆ, ನನ್ನ ಕಾಲು, ಕೈ ಅವನ ಮುಖಕ್ಕೆ, ಕಣ್ಣಿಗೆ ತಾಗಿರಬೇಕು.

ಆತನಿಗೆ ಎಲ್ಲಿಂದ ಸಿಟ್ಟು ಬಂತೋ ಏನೋ ಗೊತ್ತಿಲ್ಲ. ಮೈಗೆ ಬಾಸುಂಡೆ ಬರುವಂತೆ ಹೊಡೆದಿದ್ದ, ಆಯಿ, ಅಕ್ಕ ತಪ್ಪಿಸಬಂದರೂ ಕೇಳಿರಲಿಲ್ಲ. ಹೊಡೆತದ ಉರಿಗೆ ಉಚ್ಚೆ ಹೊಯ್ದುಕೊಂಡಿದ್ದೆ; ಭಯಕ್ಕೆ ಇಡೀ ದಿನ ಮಲಗಿಯೇ ಕಳೆದಿದ್ದೆ.

ಸಂಜೆ ಆತ ಶಾಲೆ ಬಿಟ್ಟು ಬಂದಾಗಲೂ “ಇನ್ನು ನಾನು ಹಾಗೆ ಮಾಡುವುದಿಲ್ಲ. ಹೊಡೆಯಬೇಡ” ಎಂದು ನಾನು ಕನಸಿನಲ್ಲಿಯೂ ಅಂಗಲಾಚುತ್ತಿದ್ದೆನಂತೆ. ಆತ ಆಮೇಲೆ ತಾನು ಕೊಟ್ಟ ಹೊಡೆತದ ಬಗ್ಗೆ ತಾನೇ ಬೇಸರಪಟ್ಟುಕೊಂಡಿದ್ದನಂತೆ.

ಇನ್ನೊಮ್ಮೆ ನಾನು 5-6ನೇ ತರಗತಿ ಓದುತ್ತಿದ್ದೆ. ನಮ್ಮದು ಹಂಚಿನ ಮನೆ, ಮಣ್ಣು ಗೋಡೆ, ಮಣ್ಣು ನೆಲ. 2-3 ವರ್ಷಕ್ಕೊಮ್ಮೆ ಹೊಸದಾಗಿ ನೆಲವನ್ನು ಮಾಡುತ್ತಿರಬೇಕು. ಇಲ್ಲದಿದ್ದರೆ ಕೂಡ್ರಲು ಆಗದಷ್ಟು ಮಣ್ಣೇಳುತ್ತದೆ. ಮನೆಯ ಒಳಗಡೆಯ ನೆಲ ಮಾಡುತ್ತಿದ್ದರು. ಕೆಮ್ಮಣ್ಣು ಹಾಕಿ ನಂತರ ಹೊಳೆ ಬೇಲೆಯಿಂದ ತಂದ ನುಣುಪು ಕಲ್ಲಿನಿಂದ ಒರೆಯುತ್ತಿದ್ದರು (ತಿಕ್ಕುವುದು).

ಹೀಗೆ ಮಾಡುವುದರಿಂದ ನೆಲಕ್ಕೆ ಹೊಳಪು ಬರುತ್ತಿತ್ತು. ಮೇಲಿಂದ ರೆಡಾಕ್ಸೈಡ್‍ನ್ನು ಸಿಮೆಂಟಿನಲ್ಲಿ ಕಲಸಿ ತೆಳ್ಳಗೆ ಬಟ್ಟೆಯಲ್ಲಿ ಹಚ್ಚುತ್ತಿದ್ದರು. ಮತ್ತು ಕಲ್ಲಿನಿಂದ ಮತ್ತೆ ವರೆಯುತ್ತಿದ್ದರು. ಕೆಂಪಾದ ನೆಲ ಚಕಚಕನೆ ಹೊಳೆಯುತ್ತಿತ್ತು. ಹೀಗೆ ಹಾಕಿದ ಮಣ್ಣು, ಬಣ್ಣ ಒಣಗುವವರೆಗೆ ಹೆಜ್ಜೆ ಹಾಕಿದರೆ ಹಾಗೇ ಹೆಜ್ಜೆ ಮೂಡುತ್ತದೆ. ಮೇಲಿಂದ ಕಸ ಬಿದ್ದರೆ ಹಾಗೇ ಕಸ ನೆಲಕ್ಕೆ ಅಂಟಿಕೊಂಡುಬಿಡುತ್ತದೆ, ಹಾಗಾಗಿ ತೀರಾ ಕಾಳಜಿ ವಹಿಸುತ್ತಾರೆ.

ಮನೆಗೆ ಮೆತ್ತಿರಲಿಲ್ಲ. (ಮೆತ್ತು=ಮಾಳಿಗೆ) ಅಡಿಕೆ ದಬ್ಬೆ ಹಾಕಿ ಅಟ್ಟ ಮಾಡಿದ್ದರು. ಕೆಳಗೆ ಬೇಡದಿರುವ ಹರಗಣಗಳನ್ನು (ಸಾಮಾನುಗಳನ್ನು) ಅಲ್ಲಿಡುತ್ತಿದ್ದರು. ಹೀಗೆ ನೆಲ ಮಾಡಿ ಮುಗಿಸುವಾಗ ನಾನು ಅಟ್ಟ ಹತ್ತಿ ಏನೋ ಮಾಡುತ್ತಿದ್ದೆ. ನೆಲಕ್ಕೆ ಕಸ, ಮಣ್ಣು ಬೀಳುವುದೆಂದು ಅಕ್ಕ (ಅಮ್ಮ) ಬೈಯುತ್ತಿದ್ದಳು.

ನಾನು ನನ್ನ ಪಾಡಿಗೆ ಅಟ್ಟದ ಮೇಲೆಯೇ ಕುಳಿತು ಕಸ ಉದುರಿಸುವ ಕಾಯಕವನ್ನು ಮುಂದುವರಿಸಿದ್ದೆ. ಕೆಳಗಿಳಿ ಎಂದು ಎಷ್ಟೋ ಸಲ ಹೇಳಿದರೂ ನಾನು ಇಳಿದಿರಲಿಲ್ಲ. ಎರಡು ಗಂಟೆಯಾದರೂ ಊಟಕ್ಕೆ ಆಗಿರಲಿಲ್ಲ. ಊಟ ತಡವಾದ ಬಗ್ಗೆ, ಅಕ್ಕ ನನ್ನ ಬೈದ ಬಗ್ಗೆ ಅಣ್ಣ ಮೊದಲೇ ಸಿಟ್ಟುಗೊಂಡಿದ್ದನು. ನನ್ನನ್ನು ಊಟಕ್ಕೆ ಕರೆದರು; ನಾನು ಊಟಕ್ಕೆ ಬಾರದೇ ಏನೋ ಉದ್ದಟತನದ ಮಾತನ್ನು ಆಡಿದ್ದಿರಬೇಕು.

ಸಿಟ್ಟು ಬಂದು ಅಣ್ಣ ಒಳ ಬಂದು ನನ್ನ ಎತ್ತಿಕೊಂಡು ಹೊರಬಾಗಿಲಿಗೆ ಬಂದು ಹಾಗೇ ಆಂಗಳಕ್ಕೆ ದೂಡೇ ಬಿಟ್ಟ. ನನ್ನ ಪುಣ್ಯ, ನನ್ನ ದೊಡ್ಡಮ್ಮ ಅಂಗಳದಲ್ಲಿದ್ದವರು ನನ್ನ ಹಾಗೇ ಕೈಯಲ್ಲಿ ಹಿಡಿದು ಅಪ್ಪಿಕೊಂಡರು. ಹಾಗಾಗಿ ನಾನು ಇಂದು ಕೈಕಾಲು ಊನವಾಗದೇ ಬಚಾವಾದೆ. ಆಗಲೂ ಭಯದಿಂದ ಚಡ್ಡಿಯೆಲ್ಲಾ ಒದ್ದೆಯಾಗಿತ್ತು.

2 Responses

  1. ಡಿ.ಎಮ್.ನದಾಫ್ ಅಫಜಲಪುರ says:

    ಆರ್ ವಿ ಭಂಡಾರಿ ಬಂಡಾಯ ಸಾಹಿತ್ಯ ಸಂಘಟನೆ ಮೂಲಕ ನಾಡಿನಾದ್ಯಂತ ಹೆಸರುಳ್ಳವರಾಗಿದ್ದರು.ಬಹುಶಃ ಬಾಗಲಕೋಟೆಯಲ್ಲಿ ನಡೆದ ಬಂಡಾಯ ಸಾಹಿತ್ಯ ಸಮ್ಮೇಳನದಲ್ಲಿ ಇರಬಹುದು ಅವರು ಉಪನ್ಯಾಸ ಮಂಡಿಸಲು ಬಂದು ನಿಂತಾಗ ಅವರ ಸರಳತೆ ಕಂಡು ಇವರು ಕನ್ನಡ ಸಾಲಿ ಮಾಸ್ತರು ಇರಬಹುದು ಎಂದು ಅನಿಸಿದೆ.ಅದು ನಿಜ ಎಂದು ತಿಳಿದಾಗ ಹೆಮ್ಮೆಪಟ್ಟಿದ್ದೆ. ವಿಠ್ಠಲ ಭಂಡಾರಿ ಯವರ ಲೇಖನ ಮತ್ತೆ ಇದನ್ನೆಲ್ಲ ನೆನಪಿಸೇತು. ಧನ್ಯವಾದಗಳು.
    ಡಿ.ಎಮ್.ನದಾಫ್ ಅಫಜಲಪುರ

  2. Dr Prakash Mesta says:

    ಹೃದಯಪೂರ್ವ ನಮನಗಳು….ತಮ್ಮ ತಂದೆಯವರ ಸವಿ ನೆನಪುಗಳನ್ನು ಲೇಖನಿಯಲ್ಲಿ ಬರೆದಿದಕ್ಕೆ,, ,,

Leave a Reply

%d bloggers like this: