fbpx

ಮಾರ್ಕ್ಸ್ ಕಾರ್ಡ್ ಓದುವ ಬದಲು ಮಾರ್ಕ್ಸ್ ವಾದ ಓದಲು ಹೇಳುತ್ತಿದ್ದ

ನನ್ನ ಅಪ್ಪ ಆರ್ ವಿ ಭಂಡಾರಿ..

ಬಂಡಾಯ ಸಾಹಿತ್ಯದ ಹಲವು ಮುಖಗಳಲ್ಲಿ ನನಗೆ ಆರ್ ವಿ ಭಂಡಾರಿಯವರದ್ದು ಮರೆಯಲಾಗದ ಮುಖ.

ಬಂಡಾಯ ಸಾಹಿತ್ಯ ಜನರ ಕೈಗೆ ಲೇಖನಿ ಕೊಡುವ ತವಕದಲ್ಲಿದ್ದಾಗ ಭಂಡಾರಿ ಅವರು ತಮ್ಮ ಊರಿನಲ್ಲಿ ನಡೆಸುತ್ತಿದ್ದ ಕೆಲಸಗಳು ಅದಾಗಲೇ ಆ ಎಲ್ಲಕ್ಕೂ ನಾಂದಿ ಹಾಡಿತ್ತು. ಬರೆಯಲು ಪ್ರೇರೇಪಿಸಿದ್ದರು, ಪ್ರಶ್ನಿಸಲು ಧೈರ್ಯ ಕೊಟ್ಟಿದ್ದರು. ಕ್ರಮೇಣ ಮನೆಯಿಂದ ಆರಂಭಿಸಿ ಸಮಾಜದಲ್ಲೂ ಇರುವ ಕಟ್ಟು ಕಟ್ಟಲೆಯನ್ನು ದಾಟುವ ಬಗೆ ಎಲ್ಲರಿಗೂ ಹೇಳಿಕೊಟ್ಟಿದ್ದರು.

ಇಲ್ಲಿ ಮಗ ವಿಠ್ಠಲ ಭಂಡಾರಿ ತಾನು ಅಪ್ಪನನ್ನು ಕಂಡ ಬಗೆಯನ್ನು ಬಣ್ಣಿಸಿದ್ದಾನೆ. ಒಂದಷ್ಟು ಕಂತಿನಲ್ಲಿ ಅವರ ಬಗೆಗೆ ಒಂದು ನೋಟವನ್ನು ಕಟ್ಟಿಕೊಡಲು ‘ಅವಧಿ’ ಪ್ರಯತ್ನಿಸುತ್ತದೆ.

ಈ ಹಿಂದೆ ಖ್ಯಾತ ಪ್ರೊಫೆಸರ್ ಎಚ್ ಎಸ್ ಈಶ್ವರ್ ಅವರು ತನ್ನ ಅಣ್ಣ , ಕನ್ನಡ ಲೋಕ ಕಂಡ ಮಹತ್ವದ ವಿಮರ್ಶಕ ಡಾ ಹಾಮಾ ನಾಯಕ್ ಅವರ ಬಗ್ಗೆ ಬರೆದಿದ್ದರು. ಡಾ ಹಾ ಮಾ ನಾಯಕ್ ಅವರ ಬದುಕು ಹೀಗಿತ್ತು ಎಂದು ಎಷ್ಟೋ ಓದುಗರಿಗೆ ಗೊತ್ತಾಗಿದ್ದು ಆ ಬರಹ ಸರಣಿಯಿಂದಾಗಿಯೇ

ಈಗ ವಿಠ್ಠಲನ ಸರದಿ. ಅಪ್ಪನನ್ನ ಅಂತೆಯೇ ನಮ್ಮ ಮುಂದೆ ನಿಲ್ಲಿಸಲಿದ್ದಾನೆ

ನಾನು ಒಂದಿಷ್ಟಾದರೂ ಒಳ್ಳೆಯವನಾಗದೇ ಬೇರೆ ದಾರಿಯೇ ಇರಲಿಲ್ಲ

ಅಣ್ಣನ ವ್ಯಕ್ತಿತ್ವವೇ ಹಾಗಿತ್ತು. ಯಾರನ್ನೂ ಪ್ರಭಾವಿಸುವಂತಹುದು. ಹಾಗೂ ಆತ ಸಂಬಂಧದಲ್ಲಿ ಮಾತ್ರ ಅಲ್ಲ, ಬದುಕಿನಲ್ಲೂ ನಮದೊಂದು ‘ಮಾಡೆಲ್’ ಆಗಿದ್ದ. ಶುದ್ಧ ಪ್ರಾಮಾಣಿಕೆ; ಒಮ್ಮೊಮ್ಮೆ ನನಗೇ ಸಿಟ್ಟು ಬರುವಷ್ಟು, ಅತಿ ಅನ್ನಿಸುವಷ್ಟು ಪ್ರಾಮಾಣಿಕನಾಗಿದ್ದ. ಅವನ ವ್ಯಕ್ತಿತ್ವದಿಂದ ತಪ್ಪಿಸಿಕೊಂಡು ಬರುವುದು ಅಷ್ಟು ಸುಲಭದ ಕೆಲಸ ಆಗಿರಲಿಲ್ಲ ಮತ್ತು ಹಾಗೆ ತಪ್ಪಿಸಿಕೊಳ್ಳಬೇಕಾದ ಅಗತ್ಯವೂ ಇರಲಿಲ್ಲ.

ನಾನೂ ಹೈಸ್ಕೂಲು ಓದುವಾಗ ಪುಂಡನಾಗಿಯೇ ಬೆಳೆದೆ. ಬುದ್ಧಿವಂತ ಹುಡುಗನೇನೂ ಆಗಿರಲಿಲ್ಲ(ಈಗಲೂ ಅಲ್ಲ ಎನ್ನುವುದು ಬೇರೆ ಮಾತು). ಪಾಠಕ್ಕಿಂತ ಆಟ ಕೀಟಲೆಯಲ್ಲಿಯೇ ಹೆಚ್ಚು ಆಸಕ್ತಿ. ಜಗಳ, ಹೊಡೆದಾಟವೆಂದರೆ ಬಲು ಇಷ್ಟ. ಹೊಡೆದಾಡುವಷ್ಟು ಶಕ್ತಿಯಾಗಲೀ, ದೇಹ ದಾಢ್ಯವಾಗಲೀ ಇರಲಿಲ್ಲ, ಆದರೆ ಜಗಳಕ್ಕೆ ಒಂದು ತಂಡ ಕಟ್ಟಿಕೊಳ್ಳಬಹುದಾದಷ್ಟು ಸಾಮರ್ಥ್ಯ ಇತ್ತು. ಹಾಗಾಗಿ ಉದ್ಧಟ ಹುಡುಗರ ತಂಡದ ಒಬ್ಬ ಸದಸ್ಯನಾಗಿದ್ದೆ. ಬಹಿರಂಗವಾಗಿ ಪೂರ್ತಿಯಾಗಿ ಹಾಗೆ ತೋರಿಸಿ ಕೊಳ್ಳುವಂತಿರಲಿಲ್ಲ.

ಯಾಕೆಂದರೆ ನನ್ನ ಅಣ್ಣ ಕೂಡ ನಾನು ಓದುತ್ತಿರುವ ಅರೇಅಂಗಡಿಯ ಎಸ್.ಕೆ.ಪಿ ಹೈಸ್ಕೂಲಿನ ವಿದ್ಯಾರ್ಥಿ; ಶಿಕ್ಷಕರೆಲ್ಲ ಅವನ ಸ್ನೇಹಿತರು. ಅವನ ವಿದ್ವತ್ತಿನ ಬಗ್ಗೆ, ಅವನ ಭಾಷಣ, ಬರಹದ ಬಗ್ಗೆ ಅಪಾರ ಗೌರವ ಉಳ್ಳವರು ಮತ್ತು ಕೆಲವರು ಅಸೂಯೆ ಉಳ್ಳವರು.

ಆತ ಒಂದೇ ಒಂದು ದಿನ ನನ್ನ ಪರವಾಗಿ ಶಾಲೆಗೆ ಬಂದಿದ್ದಿಲ್ಲ, ಅಥವಾ ನನ್ನ ಪರವಾಗಿ ಶಿಕ್ಷಕರಿಗೆ ಹೇಳಿದ್ದಿಲ್ಲ, ಆದರೂ ಕೆಲವು ಪರೀಕ್ಷೆಯಲ್ಲ್ಲಿ ಆರ್.ವಿ. ಭಂಡಾರಿಯವರ ಮಗ ಎಂದೇ ನಾಲ್ಕು ಅಂಕ ಹೆಚ್ಚು ಹಾಕುತ್ತಿದ್ದರೆಂದು ಕಾಣುತ್ತದೆ. ಕೆಲವರು ಆರ್.ವಿ. ಭಂಡಾರಿ ಬ್ರಾಹ್ಮಣ ವಿರೋಧಿ ಎಂದು ನನಗೆ ನಾಲ್ಕು ಅಂಕ ಕಡಿಮೆ ಒಗೆದದ್ದು ಇದೆ.

ಆದರೆ ಅಣ್ಣನ ನಾಮ ಬಲದಿಂದಲೇ ನನ್ನನ್ನು ಹಲವರು ಗುರುತಿಸುತ್ತಿದ್ದರು. ಒಮ್ಮೊಮ್ಮೆಯಂತೂ “ಅಪ್ಪ ನೋಡಿದರೆ ಅಷ್ಟು ಬುದ್ಧಿವಂತ; ನೀನೋ..” ಎಂದು ರಾಗ ಎಳೆದದ್ದೂ ಇದೆ; ಮೂಗು ಮುರಿದದ್ದೂ ಇದೆ; ಮತ್ತು ಅಂತೂ ದಡ್ಡ ಮಗ ಹುಟ್ಟಿದ ಎಂದು ಖುಷಿಯಿಂದ ಕರುಣೆ ತೋರಿಸಿದವರೂ ಇದ್ದರು.

ಒಂದು ದಿನವಂತೂ ನಮ್ಮ ಮಂಗಾಟ ತಾರಕಕ್ಕೇರಿತು. ತರಗತಿಯಲ್ಲಿ ಹಿಂದಿನ ಬೇಂಚಿನಲ್ಲಿ ಕುಳಿತು ಮುಂದಿದ್ದವರಿಗೆ ಕಿಸೆಯಲ್ಲಿ ತುಂಬಿಕೊಂಡು ಬಂದ ಕಲ್ಲಿನಿಂದ ಹೊಡೆಯುತ್ತಿದ್ದೆವು. ಮಾಸ್ತರರು ಬೋರ್ಡಿನ ಕಡೆ ತಿರುಗಿದಾಗಲೆಲ್ಲ ನಮ್ಮ ಕಿಸೆಯಲ್ಲಿದ್ದ ಕಲ್ಲು ಮುಂದಿದ್ದವರ ತಲೆಗೆ, ಗುರಿ ತಪ್ಪಿದರೆ ಅವನ ಬೆನ್ನಿಗೆ ಬೀಳುತ್ತಿತ್ತು. ಹಿಂದಿನಿಂದ ಹೊಡೆಯುತ್ತಾರೆಂದು ಹೇಳುವ ಧೈರ್ಯವನ್ನು ಮುಂದಿನ ಹುಡುಗರಾರೂ ತೋರಿರಲಿಲ್ಲವಾದರೂ ಕಲ್ಲು ಗುರಿತಪ್ಪಿ ಬೋರ್ಡಿನವರೆಗೂ ಹೋಗಿತ್ತು.

ಒಮ್ಮೆ ಮಾಸ್ತರರು ನಮ್ಮನ್ನು ಮಾಲು ಸಹಿತ ಹಿಡಿದೇ ಬಿಟ್ಟರು. 4-5 ಜನರನ್ನು ಕರೆದುಕೊಂಡು ಪ್ರಾಚಾರ್ಯರ ಕೊಠಡಿಗೆ ಹೋದರು. ಆಗ ಪ್ರಾಚಾರ್ಯರಾಗಿದ್ದವರು ಹೆಸರಾಂತ ಕನ್ನಡ ಪಂಡಿತ ಜಿ.ಆರ್. ಭಟ್ ವಾಲಗಳ್ಳಿಯವರು. ಅದ್ಭುತ ಮಾಸ್ತರರು. ಅವನ ಬಾಯಲ್ಲಿ ಕೇಳಿದ ವ್ಯಾಕರಣ, ಕಾವ್ಯ ಭಾಗ, ಕುಮಾರವ್ಯಾಸನ ಕರ್ಣ-ಕೃಷ್ಣರ ಸಂಭಾಷಣೆ, ಆತನ ಕೊನೆ, ರತ್ನನ ಕೌರವ.. ಅವರ ಬಾಯಿಂದಲೇ ಕೇಳಬೇಕಾಗಿತ್ತು.

ಸಾಹಿತ್ಯದ ಬಗ್ಗೆ ಒಂದಿಷ್ಟು ಆಸಕ್ತಿ ಬೆಳೆಯುವಲ್ಲಿ ಇವರ ಕೊಡುಗೆಯೂ ಇತ್ತು. ನಮಗಂತೂ ಅವರ ಮೇಲೆ ಅಪಾರ ಗೌರವ, ಅವನ ಎದುರು ಅಪರಾಧಿಯಾಗಿ ಕೈ ಕಟ್ಟಿ ನಿಂತಾಗಲೇ ಅರ್ಧ ಸತ್ತಿದ್ದೆನು. ಅವರು ನನ್ನ ಅಣ್ಣನ ಪರಮಾತ್ಮಮ ಗುರುಗಳು ಮತ್ತು ಸ್ನೇಹಿತರು. ದಿನಕ್ಕೊಂದು ಬಾರಿ ಇಬ್ಬರ ಭೇಟಿ ಆಗದೇ ಇರುತ್ತಿರಲಿಲ್ಲ. (ಅಣ್ಣ ತಾನು ಬರೆದ ಇಂಗ್ಲೀಶ್ ವ್ಯಾಕರಣ ಪುಸ್ತಕವನ್ನು ಅವರಿಗೇ ಅರ್ಪಿಸಿದ್ದಾನೆ)

ಅವರು ನನ್ನನ್ನು ನೋಡಿದ್ದೇ ಕರೆದು ಕೊಂಡು ಬಂದ ಮಾಸ್ತರರನ್ನು ಕುರಿತು “ಈತನನ್ನು ಯಾಕೆ ಕರೆತಂದಿರಿ. ಈತ ಅಂತವನಲ್ಲ, ಸಾಹಿತಿ ಆರ್.ವಿಯವರ ಮಗ ಈತ. ಅವನ ಅಪ್ಪ ನನ್ನ ಆದರ್ಶ ವಿದ್ಯಾರ್ಥಿ. ಅವನ ಮಗ ಹಾಗೆ ಮಾಡಲಿಕ್ಕಿಲ್ಲ. ನಿಮ್ಮ ಕಣ್ಣು ಸುಳ್ಳು ಹೇಳಿರಬೇಕು” ಎಂದು ಹೇಳಿದವರೇ ನನ್ನನ್ನು ಕ್ಲಾಸಿಗೆ ಕಳುಹಿಸಿದರು.

ಅಂದು ನನಗೆ ಖುಷಿ ಆಗುವ ಬದಲು ಬೇಸರ ಆಯಿತು.

ಅಣ್ಣನ ಮಾನ ಎಷ್ಟು ದೊಡ್ಡದೆಂದೂ, ಅದನ್ನು ನಾನು ಕೆಡಿಸುತ್ತಿರುವ ಅನುಭವ ಆಯಿತು; ತಪ್ಪಿನ ಅರಿವಾಯಿತು. ಅಂದೇ ಕೊನೆ, ಮತ್ತೆ ಇಂತಹ ಕೃತ್ಯಕ್ಕೆ ಕೈ ಹಾಕಲಿಲ್ಲ, ಅಂದಿನಿಂದ ಅಣ್ಣನನ್ನು ಸರಿಯಾಗಿ ಗಮನಿಸುತ್ತಾ ಬಂದೆ. ಪ್ರತಿ ತಪ್ಪು ಮಾಡುವಾಗಲೂ ಅಣ್ಣ ದುತ್ತನೆ ಎದುರು ಬಂದಂತಾಗುತ್ತಿತ್ತು. ಇದು ನನ್ನದು ಮಾತ್ರವಲ್ಲ, ನಮ್ಮೂರಲ್ಲಿ ಅವನ ಸಖ್ಯದಲ್ಲಿರುವ ಹಲವರ ಪಾಡು ಕೂಡ ಆಗಿತ್ತು.

ಕಾಲೇಜಿಗೆ ಬರುವಾಗಲೂ ಹಾಗೆ. ಶ್ರೀಧರ ಪ್ರೆಸ್‍ನ ಎದುರು ಜಿ.ಎಸ್. ಅವಧಾನಿಯವರು ಭೇಟಿಯಾದರು, ಅವರ ಪರಿಚಯ ನನಗೆ ಮೊದಲೇ ಇತ್ತು. ಎದುರಿಗೆ ಡಾ. ಎನ್.ಆರ್. ನಾಯಕ ಅವರು ಬಂದರು. ಅವರು ಹೊನ್ನಾವರ ಕಾಲೇಜಿನ ಪ್ರಾಚಾರ್ಯರಾಗಿದ್ದರು. ನನ್ನನ್ನು ಡಾ. ನಾಯಕರಿಗೆ ಪರಿಚಯಿಸುತ್ತಾ “ಈತ ಆರ್.ವಿ. ಯವರ ಮಗ. ಈ ವರ್ಷ ನಮ್ಮ ಕಾಲೇಜಿಗೆ ಬರುತ್ತಾನೆ. ಅಪ್ಪನಂತೆ ಬುದ್ಧಿವಂತ. ನಮ್ಮ ಕನ್ನಡ ಸಂಘಕ್ಕೆ ಸೂಕ್ತ ವ್ಯಕ್ತಿ. ಚೆನ್ನಾಗಿ ಓದಿಕೊಂಡಿದ್ದಾನೆ” ಎಂದೆಲ್ಲಾ ಹೇಳಿದರು. ಹೊಟ್ಟೆಯಲ್ಲೆಲ್ಲಾ ಸಂಕಟ ಸುರುವಾಯ್ತು.

ಯಾಕೆಂದರೆ ಆ ಕ್ಷಣದವರೆಗೂ ನಾನು ಸಾಹಿತ್ಯವನ್ನು ದೊಡ್ಡ ಪ್ರಮಾಣದಲ್ಲಿ ಓದಿದವನಾಗಿರಲಿಲ್ಲ.

ಪಿ.ಯು.ಸಿಯಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ (SFI) ಸಂಘಟನೆ ಸೇರಿದ್ದರಿಂದ ಅಣ್ಣ ತಂದುಕೊಟ್ಟ ‘ಮಾರ್ಕ್ಸ್ ವಾದ ಎಂದರೇನು?’ ‘ಸಮಾಜವಾದದ ತತ್ವಗಳು’ ‘ನಾನೇನೆ ನಾಸ್ತಿಕ’ ಇತ್ಯಾದಿ ಸಣ್ಣ ಪುಟ್ಟ ಪುಸ್ತಕ ಓದಿದ್ದೆ. ಗೋರಾ, ಚಿರಸ್ಮರಣೆ, ‘ಜೇಡರ ಬಲೆ’ ‘ಡಾ.ಅಂಬೇಡ್ಕರ’ ‘ಪ್ರೇಮಚಂದ್ರ ಕತೆ’ಗಳನ್ನು ಮೇಲ್ಮಟ್ಟದಲ್ಲಿ ಓದಿದ್ದೆ ಅಷ್ಟೇ.

ಆದರೆ ಅವಧಾನಿಯವರ ಈ ಪರಿಚಯ ನನಗೆ ಕಷ್ಟಕ್ಕೆ ತಂದಿತು. “ಆರ್.ವಿ.ಯ ಮಗ ಓದದಿರಲು ಹೇಗೆ ಸಾಧ್ಯ” ಎನ್ನುವ ಅವರ ನಂಬಿಕೆಯನ್ನು ನಾನು ಸ್ವಲ್ಪ ಮಟ್ಟಿಗಾದರೂ ಈಡೇರಿಸಲೇಬೇಕಾಯ್ತು. ನನ್ನ ಸಲುವಾಗಿ ಅಲ್ಲದಿದ್ದರೂ ಅಣ್ಣನ ಸಲುವಾಗಿ ನಾನು ಓದಲೇ ಬೇಕಾಯ್ತು.

ಕಾಲೇಜಿನಲ್ಲಿ ಯಾವ ಕಾರ್ಯಕ್ರಮವಾಗಲಿ, ಭಾಷಣ ಸ್ಪರ್ಧೆಯಾಗಲಿ, ಸಂಘಟನೆಯ ಸಭೆಯಾಗಲಿ, ನಾಟಕದ ತರಬೇತಿಯಾಗಲಿ ನಾನು ಭಾಗವಹಿಸುವುದು ಅನಿವಾರ್ಯವಾಯಿತು. ಆರ್.ವಿ. ಭಂಡಾರಿಯವರ ಮಗನೆಂದು ಕಾಲೇಜಿನ ಸ್ಟಾಫಿನಲ್ಲಿ ಪ್ರಚಾರ. ಹಾಗಾಗಿ ನಾನು ಅನ್ಯ ಮಾರ್ಗವನ್ನು ಹಿಡಿಯಲು ಅವಕಾಶವೇ ಇರಲಿಲ್ಲ. ಶಿಕ್ಷಕರಿಗೆ ಗೌರವ ಕೊಡಬೇಕಾಯಿತು. ತರಗತಿಗೆ ಕುಳಿತುಕೊಳ್ಳಬೇಕಾಯಿತು. ಓದಬೇಕಾಯಿತು, ಗ್ರಂಥಾಲಯದಲ್ಲಿ ಕೂಡ್ರಬೇಕಾಯಿತು.. ಹೀಗೆ..

ಹೀಗೆ ನಾನು ಅನಿವಾರ್ಯವಾಗಿ ಉಳಿದವರ ನಂಬಿಕೆ ಹುಸಿ ಮಾಡಲಾಗದ ಇಕ್ಕಟ್ಟಿಗೆ ಸಿಲುಕಿದೆ. ಆದರೆ ಒಂದು ದಿನವೂ ಮಗ ಹೇಗೆ ಓದುತ್ತಾನೆಂದಾಗಲೀ, ಎಷ್ಟು ಅಂಕ ಪಡೆದನೆಂದಾಗಲೀ ಕಾಲೇಜಿಗೆ ಬಂದು ಕೇಳಿಲ್ಲ.

ಪ್ರಾಥಮಿಕ ಶಾಲೆಗೆ ಹೋಗುವಾಗಲೂ ಹಾಗೆ. ಎಂದೂ ಮಾರ್ಕ್ಸ್ ಕಾರ್ಡ್ ನೋಡಿದ್ದಿಲ್ಲ. ಕವಳ ಬಾಯಲ್ಲಿರುವಾಗ ಅಥವಾ ಆತ ಶಾಲೆಗೆ ಹೊರಟು ನಿಂತಾಗ ಮಾರ್ಕ್ಸ್ ಕಾರ್ಡ್ ತೋರಿಸುತ್ತಿದ್ದೆ. ಗಡಿಬಿಡಿಯಲ್ಲಿ ಕಣ್ಮುಚ್ಚಿ ಸಹಿ ಹಾಕುತ್ತಿದ್ದ. ಅಥವಾ ಅಕ್ಕನ ಹತ್ತಿರ ಸಹಿ ಹಾಕಿಕೋ ಅಂತ ಹೇಳುತ್ತಿದ್ದ.

ಬಹುತೇಕ ಸಂದರ್ಭದಲ್ಲಿ ಅಕ್ಕನೇ ‘ಸುಬ್ಬಿ ಕೋಂ ರೋಹಿದಾಸ ಭಂಡಾರಿ’ ಎಂದು ಸಹಿ ಹಾಕಿಕೊಡುವುದು. ಪರೀಕ್ಷೆಯ ಫಲಿತಾಂಶ ಬರುವ ದಿನ “ಆತನ ರಿಸಲ್ಟನ್ನು ಯಾರೂ ಕೇಳಬಾರದು. ಪಾಯಸ ಮಾಡಿಡು’ ಎಂದು ಆದೇಶ ಇರುತ್ತಿತ್ತು. ಹಾಗಾಗಿ ಮಾರ್ಕ್ಸ್ ಎಷ್ಟೇ ಬೀಳಲಿ ಮನೆಯಲ್ಲಿ ಪಾಯಸವಂತೂ ಇದ್ದೇ ಇರುತ್ತಿತ್ತು.

ತುಂಬಾ ಜನ ಪಾಲಕರು ‘ಭಂಡಾರಿ ಮಾಸ್ತರರ ಹತ್ತಿರ ರಿಸಲ್ಟ್ ಹೇಳಿ ಕೈಮುಗಿದು ಬಾ’ ಎಂದು ತಮ್ಮ ಮಕ್ಕಳಿಗೆ ಹೇಳಿ ಕಳಿಸುತ್ತಿದ್ದರು. ಆದರೆ ಆತ ಯಾರನ್ನೂನ ಕಾಲಿಗೆ ಬೀಳಿಸಿಕೊಳ್ಳುತ್ತಿರಲಿಲ್ಲ. ಬಂದ ಮಕ್ಕಳು 35 ಪರ್ಸಂಟೇಜಿನಿಂದ 90 ಪರ್ಸಂಟೇಜ್‍ವರೆಗೆ ಹೇಳಿದರೂ ಖುಷಿಯಿಂದ “ಗೂsssಡ್” ಎನ್ನುತ್ತಿದ್ದ. ಮುಂದೆ ಚೆನ್ನಾಗಿ ಓದು ಅನ್ನುತ್ತಿದ್ದ.

ಏನೇ ಮಾಡು ಒಳ್ಳೆಯ ಮನುಷ್ಯನಾಗಬೇಕೆನ್ನುವುದು, ಆ ಮೂಲಕ ಸಮಾಜಕ್ಕೆ, ನಾಲ್ಕು ಜನಕ್ಕೆ ಒಳಿತನ್ನು ಮಾಡಬೇಕೆನ್ನುವುದು ಆತನ ನಿಲುವಾಗಿತ್ತು.

ಹಾಗಾಗಿ ಆತ ನನಗೆ ಮೊದಲಿಂದಲೂ ಮಾರ್ಕ್ಸ್ ಓದುವ ಬದಲು ಮಾರ್ಕ್ಸ್ ವಾದ, ಲೆನಿನ್ ವಾದ, ಅಂಬೇಡ್ಕರ್ ವಾದ ಓದಲು ಹೇಳುತ್ತಿದ್ದ. ಇವರನ್ನು ಓದಿ ಅರಗಿಸಿಕೊಂಡ ಈತನೆದುರು ನಾನು ಒಂದಿಷ್ಟಾದರೂ ಒಳ್ಳೆಯವನಾಗದೇ ಬೇರೆ ದಾರಿ ಇರಲಿಲ್ಲ.

Leave a Reply