fbpx

ಕೋಮುವಾದದ ಸೋಲು ಹೇಗೆ ? 

ಜಿ ಎನ್ ನಾಗರಾಜ್ 

ಕೋಮುವಾದದ ಸೋಲು ಹೇಗೆ ? 

ಕೋಮುವಾದವನ್ನು ಸೋಲಿಸುವುದು, ಕೋಮುವಾದಿಗಳನ್ನು ಸೋಲಿಸುವುದು ಎರಡೂ ಒಂದರೊಡನೊಂದು ಹೆಣೆದುಕೊಂಡಿದೆ.

ಕೋಮುವಾದದ ವಿರುದ್ಧ ಜನರಿಗೆ ಅರಿವು ಮೂಡಿಸದೆ, ಜನರೇ ಕೋಮುವಾದವನ್ನು ತಿರಸ್ಕರಿಸುವಂತೆ ಮಾಡದೆ ಕೋಮುವಾದವನ್ನು ಸೋಲಿಸಲು ಸಾಧ್ಯವಿಲ್ಲ.

ಕೋಮುವಾದದ ಬಗ್ಗೆ ಮಾತೇ ಆಡದೆ, ಕೋಮುವಾದದ ದಾಂಧಲೆಗಳಿಗೆ ತಳಮಟ್ಟದಲ್ಲಿ ಎದುರಾಗದೆ, ವೈಯಕ್ತಿಕವಾಗಿ ವಿಶ್ವ ಹಿಂದೂ ಪರಿಷತ್‌ನಂತಹ ಕೋಮುವಾದಿ ಸಂಘಟನೆಗಳ ಸಭೆಗಳಲ್ಲಿ ಎಗ್ಗಿಲ್ಲದೆ ಭಾಗವಹಿಸುವ, ಹಿಂದೆ ನಿಂತು ಬೆಂಬಲಿಸುವ , ತಮ್ಮ ಕ್ಷೇತ್ರದಲ್ಲಿ ಕೋಮುವಾದಿಗಳ ಬೆಳವಣಿಗೆಯನ್ನು ತಡೆಯುವ ಯಾವ ಪ್ರಯತ್ನ ಮಾಡದೆ ತಟಸ್ಥ ಧೋರಣೆ ವಹಿಸುವುದು, ಕೋಮುವಾದಿಗಳ ಚಿಂತನೆಗಳೊಂದಿಗೆ ಸಹಮತ ಹೊಂದಿರುವುದು ಇಂತಹ ವರ್ತನೆಗಳನ್ನು ಜಾತ್ಯಾತೀತ ಎಂಬ ಪಕ್ಷಗಳಲ್ಲಿ ನೋಡುತ್ತಿದ್ದೇವೆ.

ಆ ಪಕ್ಷಗಳ ನಾಯಕರಲ್ಲಿ ಮುಖ್ಯವಾದ ಚಿಂತನೆ ಎಂದರೆ ಅವರು ಅಧಿಕಾರದಲ್ಲಿರುವ, ಅಧಿಕಾರಕ್ಕೆ ಬರಬಹುದಾದ ಪಕ್ಷದಲ್ಲಿ ಸ್ಥಾನ ಪಡೆದುಕೊಳ್ಳಬೇಕು. ಅದಾದರೂ ಅಷ್ಟೇ, ಇದಾದರೂ ಅಷ್ಟೇ. ತಮ್ಮ ವ್ಯವಹಾರ, ದುರ್ವ್ಯವಹಾರಗಳಿಗೆ, ಭ್ರಷ್ಟಾಚಾರಗಳಿಗೆ ಅವಕಾಶ ಮತ್ತು ರಕ್ಷಣೆ ಬೇಕು ಅಷ್ಟೇ. ಆ ಪಕ್ಷದಲ್ಲಿದ್ದರೆ ಅವರಂತೆ, ಈ ಪಕ್ಷದಲ್ಲಿದ್ದರೆ ಇವರಂತೆ . ಅಲ್ಲಿದ್ದರೆ ಕೋಮುವಾದಿ, ಇಲ್ಲಿದ್ದರೆ ಜಾತ್ಯಾತೀತ.

ಇವರು ಯಾವಾಗ ಬೇಕಾದರೂ ಯಾವ ಪಕ್ಷಕ್ಕೆ ಬೇಕಾದರೂ ಜಿಗಿಯುವಂತಹವರು. ಈ ಜಾತ್ಯಾತೀತ ಪಕ್ಷಗಳೆಂಬುವಕ್ಕೂ ಅಂತಹವರನ್ನು ಸೇರಿಸಿಕೊಳ್ಳಲು ಯಾವ ಸಿಗ್ಗೂ ,ಅಡ್ಡಿಯೂ ಇಲ್ಲ.

ಜಾತ್ಯಾತೀತ ಪಕ್ಷಗಳೆಂಬುದರ ಕಾರ್ಯಕರ್ತರಿಗೆ, ಎಂಎಲ್‌ಎ, ಎಂಪಿ, ಮಂತ್ರಿ ಮಾನ್ಯರುಗಳಿಗೂ ಜಾತ್ಯಾತೀತತೆ, ಕೋಮುವಾದ, ಫ್ಯಾಸಿಸಂ ಎಂದರೇನು, ಅದರ ವಿವಿಧ ಆಯಾಮಗಳೇನು ಎಂಬುದರ ಬಗ್ಗೆ ಅರಿವೂ ಇಲ್ಲ ಮತ್ತು ಚಿಂತೆಯೂ ಇಲ್ಲ. ಈ ಪಕ್ಷಗಳ ಸರ್ವೋಚ್ಚ ನಾಯಕರಿಗೂ ಕೂಡಾ ಇವುಗಳ ಬಗ್ಗೆ ಅಧ್ಯಯನವಿಲ್ಲ. ಹಿಂದೂ ಮುಸ್ಲಿಂ ಜಗಳವಿಲ್ಲದುದೇ ಜಾತ್ಯಾತೀತತೆ ಎಂಬ ತೆಳು ಕಲ್ಪನೆಯಷ್ಟೇ ಅವರಿಗೆ.

ಹೀಗಾಗಿ ಅವರ ಮಾತು, ಭಾಷಣಗಳಲ್ಲಿ ಅವರ ಪಕ್ಷದೊಳಗಿನ ಚರ್ಚೆಗಳಲ್ಲಿ ಕೂಡಾ ಕೋಮುವಾದ, ಜಾತ್ಯಾತೀತತೆಯ ಬಗ್ಗೆ ಮಾತುಗಳೇ ಇರುವುದಿಲ್ಲ. ಕೋಮುವಾದದ ಹಲವು ರೂಪಗಳಿಗೆ ಇವರಲ್ಲಿ ಉತ್ತರವಿರುವುದಿಲ್ಲ. ಒಂದಾನೊಂದು ಕಾಲದಲ್ಲಿ ನೆಹರೂರಂತಹ ಕೈಬೆರಳೆಣಿಕೆಯ ಜನರಿಗಷ್ಟೇ ಈ ವಿಷಯಗಳ ಅಧ್ಯಯನ ಇದ್ದದ್ದು.

ತಮಗೆ ಬೆಂಬಲ ನೀಡುವ ಅಪಾರ ಜನರಲ್ಲಿ ಕೋಮುವಾದ, ಫ್ಯಾಸಿಸಮ್, ಜಾತ್ಯಾತೀತತೆಗಳ ಬಗ್ಗೆ ಪ್ರಾಥಮಿಕ ಅರಿವೂ ಮೂಡಿಸುವ ಯಾವ ಪ್ರಯತ್ನವನ್ನೂ ಮಾಡುವುದಿಲ್ಲ. ಅದರಿಂದಾಗಿ ಜನ ಸಮುದಾಯಗಳು ಕೋಮುವಾದಕ್ಕೆ ಸುಲಭವಾಗಿ ಬಲಿ ಬೀಳುವಂತಹವರು.

ಇದು ಈಗಿನ ನಮ್ಮ ದೇಶದ ಪಾಲಿಟಿಯ ಸ್ಥಿತಿ. ಅದರಿಂದಾಗಿ ಪಾಲಿಟಿಕ್ಸ್‌ನ ದುಸ್ಥಿತಿ.

ಇಂದಿನ ಚುನಾವಣೆಯ ಸಂದರ್ಭದಲ್ಲಿ ಈ ಎಲ್ಲ ಸಂಗತಿಗಳ ಬಗ್ಗೆ ಪೂರ್ಣ ಅರಿವಿನೊಂದಿಗೇ ಪ್ರಜ್ಞಾವಂತರು ನಿರ್ಧಾರ ಕೈಗೊಳ್ಳಬೇಕಾಗಿದೆ.

ಕೋಮುವಾದ ಬೆಳೆಯಲು ಜಾತ್ಯಾತೀತ ಕಾರಣಗಳು-

ಕೇಂದ್ರದಲ್ಲಿ 25 ವರ್ಷಗಳ ನಂತರ ಬಹುಮತ ಪಡೆದ ಏಕಮಾತ್ರ ಪಕ್ಷವಾಗಿ ಗೆದ್ದ ಬಿಜೆಪಿ ಪಡೆದ ಶೇ.31 ಮತಗಳಲ್ಲಿ ಕೋಮುವಾದಿ- ಅಂದರೆ ಮುಸ್ಲಿಂ ದ್ವೇಷ, ಹಿಂದೂತ್ವ ಪ್ರೇಮಕ್ಕಾಗಿ ನೀಡಿದ ಮತಗಳೆಷ್ಟು ಮತ್ತು ಕಾಂಗ್ರೆಸ್- ಯುಪಿಎ ಆಡಳಿತದ ವಿರುದ್ಧದ ಸಿಟ್ಟಿನಿಂದ ಪಡಕೊಂಡ ಜಾತ್ಯಾತೀತ ಪ್ರಜೆಗಳ ಮತಗಳೆಷ್ಟು ಎಂಬ ಬಗ್ಗೆ ಸರಿಯಾದ ಶೋಧ ಮತ್ತು ವಿಶ್ಲೇಷಣೆ ನಡೆದಿಲ್ಲ.

ಆದರೆ ಕೋಮುವಾದಿ ಮತಗಳ ಪ್ರಮಾಣ ಬಹಳ ಕಡಿಮೆ ಎಂಬುದನ್ನಂತೂ ಸ್ಪಷ್ಟವಾಗಿ ಹೇಳಬಹುದು. ಯುಪಿಎ ಬಗ್ಗೆ ಸಿಟ್ಟಿದ್ದರೂ ಸೆಕ್ಯುಲರ್ ಮತದಾರರು ಬಿಜೆಪಿಗೆ ಒಲಿಯುವುದು ಸುಲಭವಾಗಿರಲಿಲ್ಲ. ಸೆಕ್ಯುಲರ್ ಮತದಾರರಿಗೆ ಆರೆಸ್ಸೆಸ್- ಬಿಜೆಪಿಯ ಕೋಮು ದಂಗೆಗಳು ಮುಖ್ಯವಾಗಿ ಗುಜರಾತ್‌ನ ಮಾರಣಹೋಮಗಳಿಂದಾಗಿ ಬಿಜೆಪಿ ಬಗ್ಗೆ ಜನರಿಗೆ ಅಸಹ್ಯ ಭಾವನೆ ಉಂಟಾಗಿತ್ತು . ಈ ಕಾರಣದಿಂದಾಗಿ ಪ್ರಧಾನಿ ಹುದ್ದೆಗೆ ಬಿಂಬಿತವಾಗಲು ಮೋದಿಯವರಿಗೇ ಹಿಂಜರಿಕೆಯಿತ್ತು. ಆರೆಸ್ಸೆಸ್‌ಗೆ ಕೂಡಾ ಧೈರ್ಯವಿರಲಿಲ್ಲ.

ಆಗ ಮೋದಿ, ಬಿಜೆಪಿಯ ನೆರವಿಗೆ ಬಂದವರು ನಮ್ಮ ದೇಶದ ಮತ್ತು ವಿದೇಶದ ಬೃಹತ್ ಕಾರ್ಪೊರೇಟ್‌ಗಳು. ಅಂಬಾನಿ ನೇತೃತ್ವದಲ್ಲಿ ಅವರನ್ನು ಭೇಟಿಯಾಗಿ ಅವರ ಮೇಲಿನ ದುರಭಿಪ್ರಾಯವನ್ನು ಮರೆಸಲು ಹಾಗೂ ವಿಕಾಸ ಪುರುಷನೆಂದು ಬಿಂಬಿಸಲು ತಮ್ಮೆಲ್ಲಾ ಟಿವಿ, ಪತ್ರಿಕೆಗಳ ಒಡೆತನವನ್ನು ಬಳಸಿ ದೊಡ್ಡ ಪ್ರಮಾಣದ ಬಿಟ್ಟಿ ಪ್ರಚಾರ ನೀಡುವ ಅಶ್ವಾಸನೆ ನೀಡಿದರು.

ಅದನ್ನು ಮೀರಿ ಜಾಹೀರಾತುಗಳಿಗೆ, ಸಾಮಾಜಿಕ ಜಾಲ ತಾಣಗಳು, ವಿದೇಶಿ ಸಲಹೆಗಾರರುಗಳಿಗೆ ಮತ್ತು ಕ್ಷೇತ್ರಗಳಲ್ಲಿ ಹಣ ಎರಚಲು ಹಣ ಹೂಡಿದರು.

2004 ರಿಂದ 2014 ರವರೆಗೂ ಕಾಂಗ್ರೆಸ್‌ಗೆ ಆಧಾರವಾಗಿದ್ದ ಮತ್ತು ಆ ಸರ್ಕಾರದಿಂದ ಪಡೆಯಬಹುದಾದ ಎಲ್ಲ ಲಾಭ ಪಡೆದಿದ್ದ ಈ ಕಾರ್ಪೊರೇಟ್‌ಗಳು ಬಹುದೊಡ್ಡ ಪ್ರಮಾಣದಲ್ಲಿ ಬಿಜೆಪಿಯ ಕಡೆಗೆ ತಿರುಗಿದರು. ಅವರ ಈ ದೃಢ ಬೆಂಬಲವೇ ಮೋದಿಯ ದುರ್ನೀತಿಗಳ ಬಗ್ಗೆ ಜನರಲ್ಲಿ ಸಿಟ್ಟು ಸಿಡಿದೇಳದಂತೆ ತಡೆದಿರುವುದು. ಹೀಗೆ ಜನರ ಸಿಟ್ಟು, ಕಾರ್ಪೊರೇಟ್ ಹಣ , ಮಾಧ್ಯಮ ಸ್ವಾಮ್ಯ ಕೂಡಿ ಸೆಕ್ಯುಲರ್ ಮತಗಳು ಗಣನೀಯ ಪ್ರಮಾಣದಲ್ಲಿ ಬಿಜೆಪಿ ಬುಟ್ಟಿಗೆ ಬೀಳಲು ಕಾರಣವಾಯಿತು.

ಇವುಗಳ ಜೊತೆಗೆ ಯುಪಿಯಲ್ಲಿ ಅಮಿತ್ ಶಾ ಎಬ್ಬಿಸಿದ ಮುಜಾಫರ್ ನಗರದ ಕೋಮುಗಲಭೆಗಳು , ಅದನ್ನು ನಿಯಂತ್ರಣ ಮಾಡುವಲ್ಲಿ ಎಸ್.ಪಿ. ಪಕ್ಷದ ಸರ್ಕಾರ ಹಾಗೂ ಬಿಎಸ್‌ಪಿ ಪಕ್ಷದ ವೈಫಲ್ಯಗಳು ಕೂಡಾ ಬಿಜೆಪಿಯ ಸ್ಥಾನಗಳು ಹೆಚ್ಚಲು ಕಾರಣವಾಗಿದೆ.

ಬಿಜೆಪಿಯ ಖಾಯಂ ಕೋಮುವಾದಿ ಮತಗಳ ಗಣನೀಯ ಸಂಖ್ಯೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಮಾತ್ರ ಅಸ್ತಿತ್ವದಲ್ಲಿರುವ ಕೌಬೆಲ್ಟ್ ಎಂದು ಪರಿಗಣಿತವಾದ ರಾಜ್ಯಗಳೇ ಮುಖ್ಯ ಕೊಡುಗೆ ನೀಡಿವೆ. ಇದಕ್ಕೆ ಮುಖ್ಯ ಕಾರಣ ಈ ಪ್ರದೇಶಗಳಲ್ಲಿ ವಿಪುಲವಾಗಿದ್ದ ಸಣ್ಣ, ಮಧ್ಯಮ ರಾಜ, ಪಾಳೆಯಗಾರರ ಸಂಸ್ಥಾನಗಳಲ್ಲಿನ ಪಾಳೆಯಗಾರಿ ವ್ಯವಸ್ಥೆ ಮತ್ತು ಮೌಲ್ಯಗಳು .

ಈ ರಾಜ್ಯಗಳಲ್ಲಿ ಸ್ವಾತಂತ್ರ್ಯ ಚಳುವಳಿ ಬೆಳೆಸಲು ಅವಕಾಶ ನೀಡದುದರಿಂದ ಇಲ್ಲಿ ಆರೆಸ್ಸೆಸ್ ಬೆಳವಣಿಗೆ, ಸ್ವಾತಂತ್ರ್ಯ ಕಾಲದಲ್ಲಿ ಅತಿ ಹೆಚ್ಚು ಕೋಮು ಗಲಭೆಗಳು ಈ ಪ್ರದೇಶಗಳಲ್ಲಿ ಹಬ್ಬಿಸಲು ಅವಕಾಶವಾಗಿದ್ದು . ಕಾಂಗ್ರೆಸ್ ಆಳುತ್ತಿದ್ದ ನಾಲ್ಕು ದಶಕಗಳಲ್ಲಿ ಭೂಸುಧಾರಣೆ ಮಾಡಿ , ಕೈಗಾರಿಕೆಗಳ ಬೆಳವಣಿಗೆ ಮಾಡಿ ಪಾಳೆಯಗಾರಿ ಶಕ್ತಿಗಳ ಮಗ್ಗಲು ಮುರಿಯಲು ವಿಫಲವಾಗಿದ್ದು ಈ ರಾಜ್ಯಗಳಲ್ಲಿ ಕೋಮುವಾದಿ ನೆಲೆ ಗಟ್ಟಿಗೊಳ್ಳಲು ಕಾರಣವಾಯಿತು.

ಈ ಮಧ್ಯೆ ಮಧ್ಯಪ್ರದೇಶ ಹಾಗೂ ರಾಜಾಸ್ಥಾನ, ಛತ್ತೀಸಘಢ, ಹಿಮಾಚಲಗಳಲ್ಲಿ ಮತ್ತೆ ಕಾಂಗ್ರೆಸ್‌ಗೆ ಅಧಿಕಾರ ಸಿಕ್ಕಾಗಲೂ ಕೋಮುವಾದಿ ಶಕ್ತಿಗಳ ಮೇಲೆ ದೃಢ ಕ್ರಮ ತೆಗೆದುಕೊಳ್ಳಲು ಹಿಂಜರಿಯಿತು. ಅವರ ದುರಾಡಳಿತವೂ ಆಯಾ ರಾಜ್ಯಗಳ ಗಣನೀಯ ಸೆಕ್ಯುಲರ್ ಮತದಾರರು ಮತ್ತೆ ಬಿಜೆಪಿಯ ತೆಕ್ಕೆಗೆ ಬಿದ್ದರು.

ಇನ್ನು ಭಾರತ ವ್ಯಾಪಿಯಾಗಿ ಹೇಳುವುದಾದರೆ ಸ್ವಾತಂತ್ರ್ಯ ಕಾಲದಲ್ಲಿ ದೊಡ್ಡ ಪ್ರಮಾಣದ ಕೋಮು ದಂಗೆಗಳು ಮತ್ತು 1949ರಲ್ಲಿ ಬಾಬರಿ ಮಸೀದಿಯಲ್ಲಿ ರಾಮನ ಮೂರ್ತಿಯನ್ನು ಕಳ್ಳತನದಿಂದ ಇರಿಸುವ ಪ್ರಯತ್ನಗಳೂ ಕೂಡಾ ಭಾರತವನ್ನು ಕೋಮುವಾದಿಯಾಗಿಸಲಿಲ್ಲ.

ನಂತರದ ಹಲವು ದಶಕಗಳು ಭಾರತದಲ್ಲಿ ಸಾರ್ವಜನಿಕ ಕೈಗಾರಿಕೆಗಳ ಬೆಳವಣಿಗೆ, ನೀರಾವರಿಯ ವಿಸ್ತರಣೆ, ಶಿಕ್ಷಣ ಆರೋಗ್ಯ ಮೊದಲಾದ ಸರ್ಕಾರಿ ಸೇವೆಗಳ ವಿಸ್ತರಣೆಗಳ ಮೂಲಕ ಉದ್ಯೋಗದ ಅವಕಾಶಗಳು ಹೆಚ್ಚುತ್ತಿರುವಾಗ ಕೋಮುವಾದಕ್ಕೆ ನೆಲೆ ದೊರಕಲಿಲ್ಲ.

ಜನಸಂಘಕ್ಕೆ 1952 ರ ಚುನಾವಣೆಗಳಲ್ಲಿ ಕೇವಲ ಮೂರು ಲೋಕಸಭಾ ಸ್ಥಾನಗಳು‌ ಮತ್ತು ಶೇ 3 ರಷ್ಟು ಮತಗಳು.
ಆದರೆ ದೇಶದ ಅಭಿವೃದ್ಧಿ ನಿಧಾನವಾಗಿ ಉದ್ಯೋಗಗಳ ನಿರ್ಮಾಣ ಕುಂದಿದ ಮೇಲೆ, ಆಹಾರಕ್ಕಾಗಿ ಹಾಹಾಕಾರದ‌ ಪರಿಸ್ಥಿತಿ ಉಂಟಾದ ಮೇಲೆಯೇ 1967ರಲ್ಲಿ ಜನಸಂಘದ ಸ್ಥಾನಗಳು 35ಕ್ಕೆ ಮತ ಪ್ರಮಾಣ ಶೇ 9.5 ಕ್ಕೆ ಏರಿತು. ಎಂಟು ರಾಜ್ಯಗಳಲ್ಲಿ ಕಾಂಗ್ರೆಸ್ ಸೋತು ಹೋಯಿತು. ಇವುಗಳಲ್ಲಿ ಉತ್ತರದ ಆರು ರಾಜ್ಯಗಳಲ್ಲಿ ಜನಸಂಘಕ್ಕೆ ರಾಜ್ಯ ಸರ್ಕಾರಗಳ ಭಾಗೀದಾರನಾಗುವ ಆಡಳಿತ ಯಂತ್ರದ ಮೇಲೆ ಹಿಡಿತ ದೊರೆಯಿತು.

ಇಂದಿರಾಗಾಂಧಿಯವರ ಹಸಿರು ಕ್ರಾಂತಿ, ಬ್ಯಾಂಕ್ ರಾಷ್ಟೀಕರಣ, ಗರೀಬಿ ಹಠಾವ್‌ಗಳನ್ನು ಮೀರಿ ಬಿಹಾರ, ಗುಜರಾತುಗಳಲ್ಲಿ , ದೇಶಾದ್ಯಂತ ವಿವಿಧ ಪ್ರಮಾಣದಲ್ಲಿ ಅತೃಪ್ತಿ ಸಿಡಿದಾಗ ಜನಸಂಘ ಈ ಚಳುವಳಿಗಳಲ್ಲಿ ತಮ್ಮ ಬೆಳೆದ ಶಕ್ತಿಯನ್ನು ಬಳಸಿ ಮತ್ತಷ್ಟು ಬೆಳೆಯಿತು. ಇದೇ ಸಮಯದಲ್ಲಿ ಇಂದಿರಾ ಆರೆಸ್ಸೆಸ್ ಮೇಲಿನ ನಿಷೇಧವನ್ನು ತೆಗೆದುಹಾಕಿ ಅದರ ಬೆಳವಣಿಗೆಗೆ ಅವಕಾಶ ನೀಡಿದರು ಎಂಬುದು ಕೇವಲ ಕಾಕತಾಳಿಯವಲ್ಲ .

ಈ ಚಳುವಳಿಗಳಲ್ಲಿ ಪಾಲ್ಗೊಂಡ ಜನಸಂಘ ಜನತಾ ಪಕ್ಷದ ಭಾಗವಾಗಿ ತನ್ನ ಲೋಕಸಭಾ ಸ್ಥಾನಗಳನ್ನು 97ಕ್ಕೆ ಹೆಚ್ಚಿಸಿಕೊಂಡಿತು. ಇದಕ್ಕೆ ಅಂದಿನ ಸಮಾಜವಾದಿಗಳೂ ಸೇರಿ ಕಾಂಗ್ರೆಸ್ಸೇತರ ಸೆಕ್ಯುಲರ್ ಪಕ್ಷ, ಶಕ್ತಿಗಳು ಕೋಮುವಾದದ ಅಪಾಯಕ್ಕೆ ಕುರುಡಾದದ್ದು ಕೂಡಾ ಒಂದು ಮುಖ್ಯ ಕಾರಣವಾಯಿತು.

1980 ರ ದಶಕದಲ್ಲಿ ಮತ್ತೆ ಕಾಂಗ್ರೆಸ್ ಆಡಳಿತ , 91ರಿಂದ ಆರಂಭವಾದ ಜಾಗತೀಕರಣ, ಖಾಸಗೀಕರಣ ಸಾರ್ವಜನಿಕ ಕೈಗಾರಿಕೆ, ನೀರಾವರಿ , ಸರ್ಕಾರಿ ಶಿಕ್ಷಣ, ಆರೋಗ್ಯ ರಂಗಗಳ ಸ್ಥಗಿತತೆ , ಇವುಗಳಿಂದಾಗಿ ನಿರುದ್ಯೋಗದ ವಿಸ್ತರಣೆ, ಮೀಸಲಾತಿ ವಿರೋಧಿ ಚಳುವಳಿ, ವಿಪುಲ ಭ್ರಷ್ಟಾಚಾರ ಇವುಗಳ ವಿರುದ್ಧ ಜನರ ಅತೃಪ್ತಿ, ಸಿಟ್ಟು ಬೆಳೆಯಿತು. ಇದನ್ನು ದಮನ ಮಾಡಲು ಕಾಂಗ್ರೆಸ್ ಹೇರಿದ ತುರ್ತು ಪರಿಸ್ಥಿತಿ ಈಗಾಗಲೇ ಬಲ ಹೆಚ್ಚಿಸಿಕೊಂಡ ಬಿಜೆಪಿಗೆ ದೊಡ್ಡ ಅವಕಾಶ ಒದಗಿಸಿತು .

ರಾಮನ ಹೆಸರಿನ ರಾಮ ಜ್ಯೋತಿ, ಇಟ್ಟಿಗೆ, ರಥಯಾತ್ರೆ, ಬಾಬ್ರಿ ಮಸೀದಿ ನಾಶ, ನಂತರದ ಕೋಮುದಂಗೆಗಳನ್ನು ಯೋಜಿಸಿ ಬೆಳೆಯಿತು.

ಇತ್ತೀಚಿನ ಭಯೋತ್ಪಾದಕ ಕೃತ್ಯಗಳು ಇದಕ್ಕೆ ಮತ್ತಷ್ಟು ಗೊಬ್ಬರ, ನೀರು ಹಾಕಿದೆ.

ಈ ಸಮಯದಲ್ಲಿ ಆಳುತ್ತಿದ್ದ ಕಾಂಗ್ರೆಸ್ ಮತ್ತಿತರ ಸರ್ಕಾರಗಳು ತೀಕ್ಷ್ಣ ಕ್ರಮಗಳನ್ನು ಕೈಗೊಳ್ಳದ ದೌರ್ಬಲ್ಯ ಒಂದೆಡೆ, ಕೋಮುವಾದದ ವಿರುದ್ಧ ಜನರನ್ನು ಎಚ್ಚರಿಸಲು ರಾಜಕೀಯ ಸಂಘಟನೆಗಳಾಗಿ ಕಾಂಗ್ರೆಸ್‌ ಮತ್ತು ಇತರ ಸೆಕ್ಯುಲರ್ ಪಕ್ಷಗಳ ನಿರಾಕರಣೆ ಕೋಮುವಾದದ ಮತ್ತು ಕೋಮುವಾದಿ ಪಕ್ಷದ ಮತ ಬೆಂಬಲದ ಬೆಳವಣಿಗೆಗೆ ಕಾರಣವಾಯಿತು.

ಹೀಗೆ ಒಂದು ಕಡೆ ಜನರಲ್ಲಿ ಅತೃಪ್ತಿ ಹೆಚ್ಚಿಸುವ ದುರಾಡಳಿತ ಮತ್ತು ಕೋಮುವಾದವನ್ನು ಮುಖಾಮುಖಿಯಾಗಿ ಎದುರಿಸಲು ನಿರಾಕರಣೆ ಕೋಮುವಾದದ ಬೆಳವಣಿಗೆಗೆ ಇಂಬಾದ ಸೆಕ್ಯುಲರ್ ಕಾರಣಗಳು.

ಈ ಸೆಕ್ಯುಲರ್ ಪಕ್ಷಗಳ ಸ್ವರೂಪವನ್ನು ಗಮನಿಸಿದರೆ ತಮ್ಮ ದುರಾಡಳಿತದ ವಿರುದ್ಧ ಜನರ ಅತೃಪ್ತಿ ಕೋಮುವಾದಿ , ಜಾತೀವಾದಿ ರೂಪ ಪಡೆಯುವುದೇ ಅವರಿಗೆ ಹೆಚ್ಚು ಇಷ್ಟ. ಏಕೆಂದರೆ ಸೆಕ್ಯುಲರ್ ಪಕ್ಷಗಳು ಸೋತರೆ ತಮ್ಮದೇ ಬಂಧುಗಳು ಇರುವ ಕೋಮುವಾದಿ ಪಕ್ಷ ಅವರಿಗೆ ಆಶ್ರಯ ನೀಡುತ್ತದೆ ಎಂಬ ಖಾತರಿ.

ಇಲ್ಲದಿದ್ದರೆ ಸಮಾಜವಾದಿ, ಅಂಬೇಡ್ಕರ್‌ವಾದಿ, ಕಮ್ಯೂನಿಸ್ಟ್, ರೈತ ,ಕಾರ್ಮಿಕ, ದಲಿತ ಮಹಿಳಾ ಮೊದಲಾದ ಎಡ ಚಳುವಳಿಗಳು ಹಳ್ಳಿ ಹಳ್ಳಿಗಳಲ್ಲಿ, ನಗರ, ಪಟ್ಟಣಗಳಲ್ಲಿ ಬೆಳೆದು ಗಟ್ಟಿಯಾದರೆ ತಮ್ಮ ಭ್ರಷ್ಟಾಚಾರ , ಅಕ್ರಮ ಆಸ್ತಿ ಶೇಖರಣೆಗೆ ಕಲ್ಲು‌ಬೀಳುತ್ತದೆ ಮತ್ತು ತಮ್ಮ ಬುಡವೇ ಅಲುಗಾಡುತ್ತದೆಯಲ್ಲಾ .

 

ಪ್ರಾದೇಶಿಕ ಪಕ್ಷಗಳ ಬೆಳವಣಿಗೆ ಮತ್ತು ಕೋಮುವಾದ.

ಪ್ರಾದೇಶಿಕ ಪಕ್ಷಗಳು ದೇಶದ ವಿವಿಧ ಭಾಗಗಳಲ್ಲಿ ಕೋಮುವಾದದ ಹರಡುವಿಕೆಗೆ ಒಂದು ಮುಖ್ಯ ತಡೆಗೋಡೆಯಾಗಿದ್ದಾರೆ. ಅದರೆ ತಾವೇ ಕೋಮುವಾದಿಗಳ ಅಧಿಕಾರಕ್ಕೆ ಬೆಂಬಲ ನೀಡಿದ್ದಾರೆ. ಇದರಿಂದಾಗಿ ಜನ ಸಾಮಾನ್ಯರಲ್ಲಿ ಕೋಮುವಾದಿಗಳ ಬಗ್ಗೆ ಇದ್ದ aversion ಅನ್ನು ತೊಡೆದು ಹಾಕಿ ಜನರಿಗೂ ಕೋಮುವಾದಿ ಪಕ್ಷಕ್ಕೂ ಇದ್ದ ದೊಡ್ಡ ಅಂತರವನ್ನು ತೊಡೆದು ಹಾಕಲು ಕಾರಣರಾಗಿದ್ದಾರೆ.

1967ರಲ್ಲಿ ಕಾಂಗ್ರೆಸ್ ಪಕ್ಷದ ನೀತಿಗಳ ವಿರುದ್ಧ ಜನರಲ್ಲಿ ಅತೃಪ್ತಿ, ಸಿಟ್ಟುಮೊಳೆತಾಗ ವಿವಿಧ ರಾಜ್ಯಗಳಲ್ಲಿ ವಿವಿಧ ರಾಜಕೀಯ ಪಕ್ಷಗಳು ಬೆಳೆದವು. ಅತ್ಯಂತ ಹಿಂದುಳಿದ ರಾಜ್ಯಗಳಲ್ಲಿ ಜನಸಂಘ – ಬಿಜೆಪಿಗೆ ಈ ಅತೃಪ್ತಿಯ ಲಾಭ ದೊರೆತರೆ, ಕೈಗಾರಿಕೆ, ಶಿಕ್ಷಣ ಮೊದಲಾದವುಗಳಲ್ಲಿ ಮುಂದುವರೆದಿದ್ದ ದಕ್ಷಿಣ ಮತ್ತು ಕರಾವಳಿಯ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಬೆಳೆದವು.

ಅಂದರೆ ಯಾವ ರಾಜ್ಯಗಳಲ್ಲಿ ಅಲ್ಲಿಯ ಬಂಡವಾಳಶಾಹಿ ಹೆಚ್ಚು ಬೆಳೆದಿತ್ತೋ ಆ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಸ್ತಿತ್ವಕ್ಕೆ ಬಂದವು. ಈ ಪಕ್ಷಗಳ ಬೆಳವಣಿಗೆ ದೇಶದ ವಿಸ್ತಾರ ಪ್ರದೇಶಗಳಲ್ಲಿ ಕೋಮುವಾದದ ಬೆಳವಣಿಗೆಯನ್ನು ತಡೆಗಟ್ಟಿ ದೇಶದ ಸೆಕ್ಯುಲರ್ ಸ್ವರೂಪವನ್ನು ಕಾಪಾಡಲು ಐದು ದಶಕಗಳಿಂದ ಸಹಕಾರಿಯಾಗಿವೆ.

ತಮಿಳುನಾಡಿನಂತೆ ಒಂದು ರಾಜ್ಯದಲ್ಲಿ ಎರಡು ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿದ್ದರೆ ಅಲ್ಲಿ ಬಿಜೆಪಿಗೆ ನೆಲೆಯೇ ಇಲ್ಲದಂತಾಗಿದೆ.

ಆದರೆ ಕೌ ಬೆಲ್ಟ್ ರಾಜ್ಯಗಳಲ್ಲಿ ಕಾಂಗ್ರೆಸ್‌ನ ನೀತಿಗಳ ಫಲವಾಗಿ 1998ರಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಸಾಧ್ಯತೆ ಕಂಡು ಬಂದಾಗ ಮೊದಲ ಬಾರಿಗೆ ಪ್ರಾದೇಶಿಕ ಪಕ್ಷಗಳಲ್ಲಿ ಕೆಲವು ಕೇಂದ್ರದಲ್ಲಿನ ಅಧಿಕಾರದ ಪ್ರಯೋಜನ ಪಡೆಯಲು ಬಿಜೆಪಿಗೆ ಬೆಂಬಲ ನೀಡಿದವು.

ಆದರೆ ಪ್ರಾದೇಶಿಕ ಪಕ್ಷಗಳಲ್ಲಿ ಭಾಷೆ, ಸಂಸ್ಕೃತಿ ಮತ್ತಿತರ ಪ್ರಾದೇಶಿಕ ಭಾವನೆಗಳನ್ನು ಹೊರತುಪಡಿಸಿದರೆ ಅವುಗಳ ನೀತಿ, ಆಡಳಿತ ವಿಧಾನಗಳಲ್ಲಿ ಕಾಂಗ್ರೆಸ್‌ಗಿಂತ ಬಹಳ ವ್ಯತ್ಯಾಸವೇನೂ ಇಲ್ಲದುದರಿಂದ ಜನರಿಂದ ಹಲವು ಬಾರಿ ತಿರಸ್ಕಾರಕ್ಕೆ ಒಳಗಾಗಿವೆ.

ಜೊತೆಗೆ ಈ ಪಕ್ಷಗಳ ನಾಯಕರ ಪಾಳೆಯಗಾರಿ ಮನೋಭಾವ ಈ ಪಕ್ಷಗಳನ್ನು ಒಂದು ಕುಟುಂಬದ ಹಿಡಿತಕ್ಕೊಳಪಡಿಸಿ ಅದರ ಜನಾಧಾರ ಒಂದೆರಡು ಜಾತಿಗೆ ಸಂಕುಚಿತವಾಗುವಂತೆ ಮಾಡಿ ದುರ್ಬಲಗೊಂಡಿವೆ. ಇದು ಆ ರಾಜ್ಯಗಳಲ್ಲಿ ಕೋಮುವಾದಿಗಳ ಕಾಲೂರಲು ಅವಕಾಶ ಮಾಡಿಕೊಟ್ಟಿವೆ.

ಕರ್ನಾಟಕದ ವಿಷಯಕ್ಕೆ ಬಂದರೆ ತಾಂತ್ರಿಕವಾಗಿ ಯಾವುದೇ ಪ್ರಾದೇಶಿಕ ಪಕ್ಷ ಇಲ್ಲ ಎನ್ನಬಹುದು. ಏಕೆಂದರೆ ಜನತಾ ಪಕ್ಷ ಒಂದು ರಾಷ್ಟ್ರೀಯ ಪಕ್ಷವಾಗಿದ್ದು ಜನತಾ ದಳ ಇನ್ನು ಆ ಉಡುಗೆಯಲ್ಲಿಯೇ ಇದೆ. ಆದರೆ ತಮ್ಮ ವ್ಯಾಪ್ತಿಗನುಗುಣವಾಗಿ ಪ್ರಾದೇಶಿಕ ಪಕ್ಷವಾಗಿ ಬಿಟ್ಟಿದೆ. ಆದರೆ ಇತರ ಪ್ರಾದೇಶಿಕ ಪಕ್ಷಗಳಂತೆ ಇದು ಭಾಷೆ, ಸಂಸ್ಕೃತಿ ಮೊದಲಾದ ಪ್ರಾದೇಶಿಕ ಪ್ರಶ್ನೆಗಳ ಆಧಾರದ ಮೇಲೆ ರೂಪುಗೊಂಡಿಲ್ಲ. ಇನ್ನು ಅದು ಆಡಳಿತ ನಡೆಸುವಾಗಲೂ ಒಂದೆರಡು ಭಿನ್ನತೆಗಳನ್ನು ಹೊರತುಪಡಿಸಿದರೆ ಕಾಂಗ್ರೆಸ್‌ನಷ್ಟೇ ಜನ ವಿರೋಧಿಯಾಗಿದೆ.

ಜನತಾದಳದ ನಾಯಕರುಗಳ ನಡುವಣ ಭಿನ್ನಾಭಿಪ್ರಾಯಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸದ ಕಾರಣದಿಂದ ಪದೇ ಪದೇ ವಿಭಜನಗೊಳಗಾಗಿ ರಾಜ್ಯ ವ್ಯಾಪ್ತಿಯನ್ನೂ ಕಳೆದುಕೊಂಡು ಒಂದು ಜಾತಿಗೆ ಸೀಮಿತವಾಗಿದೆ.

ಬೇರೆಲ್ಲಾ ಪ್ರಾದೇಶಿಕ ಪಕ್ಷಗಳು ಕೇಂದ್ರದ ಅಧಿಕಾರದ ಉಪಯೋಗ ಪಡೆಯಲು ಕೇಂದ್ರದಲ್ಲಿ ಮಾತ್ರ ಬಿಜೆಪಿಗೆ ಬೆಂಬಲ ನೀಡಿದರೆ, ಜನತಾದಳ ರಾಜ್ಯದಲ್ಲಿಯೂ ಬಿಜೆಪಿಯೊಡನೆ ಅಧಿಕಾರ ಹಂಚಿಕೊಂಡ ಕಾರಣ ಅದನ್ನು ಅನುಮಾನದಿಂದ ನೋಡುವಂತಾಗಿದೆ. ಈ ಬಾರಿ ಓವೈಸಿಯ ಬೆಂಬಲವನ್ನು ಸ್ವಾಗತಿಸಿರುವುದು ಕೂಡಾ ಮತ್ತೊಂದು ದಿಕ್ಕಿನ ಕೋಮುವಾದಕ್ಕೆ ಮಣೆ ಹಾಕುವ ಜಾತ್ಯಾತೀತತೆ ವಿರೋಧಿ ನೀತಿಯಾಗಿದೆ‌.

ಇಷ್ಟಾದರೂ ಅದು ಬಲವಾಗಿರುವ ಪ್ರದೇಶದಲ್ಲಿ ಕೋಮುವಾದಿ ಪಕ್ಷದ ಬೆಳವಣಿಗೆಗೆ ನಗರಗಳಿಗಷ್ಟೇ ಸೀಮಿತವಾಗಿದೆ.
ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ಗಳು ಬೃಹತ್ ಕಾರ್ಪೊರೇಟ್ ಕಂಪನಿಗಳ ದೇಣಿಗೆಯ ಬಲದಿಂದ ಹಣದ ಚೆಲ್ಲಾಟದ ಜೊತೆ ಸ್ಫರ್ಧಿಸಲಾಗದುದೂ ಅದರ ದುರ್ಬಲತೆಗೆ ಮತ್ತೊಂದು ಕಾರಣವಾಗಿದೆ.

ಹೀಗೆ ಪ್ರಾದೇಶಿಕ ಪಕ್ಷಗಳ ಅಸ್ತಿತ್ವದ ಕಾರಣ, ಅವುಗಳ ಬಲ ದೌರ್ಬಲ್ಯಗಳ ಆಧಾರದ ಮೇಲೆ ಕರ್ನಾಟಕದ ಇಂದಿನ ಚುನಾವಣೆಗಳಲ್ಲಿ ಜನರು ತಮ್ಮ ನಿಲುವನ್ನು ರೂಪಿಸಿಕೊಳ್ಳಬೇಕಾಗಿದೆ.

1 Response

 1. Kiran says:

  ಜಗತ್ತಿನಲ್ಲಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಇರುವ ೩೦-೪೦ ದೇಶಗಳು ತಮ್ಮನ್ನು ಯಾವುದೇ ಹಿಂಜರಿಕೆ ಮುಜುಗರ ಇಲ್ಲದೆ ಇಸ್ಲಾಮಿಕ್ ದೇಶ ಎಂದು ಕರೆದುಕೊಳ್ಳುತ್ತವೆ, ಆದರೆ ಅದರರ್ಥ ಆ ದೇಶಗಳಲ್ಲಿ ಬರಿ ಮುಸ್ಲಿಮರೇ ಇದ್ದಾರೆ ಅಂತಲ್ಲ.
  ಬಹುತೇಕ ಯುರೋಪಿಯನ್ ದೇಶಗಳು, ಅಮೇರಿಕಾ ಸಹಿತ ಅಫಿಷಿಯಲಿ ಕ್ರಿಶ್ಚಿಯನ್ ದೇಶ ಎಂದು ಕರೆದುಕೊಳ್ಳುತ್ತವೆ, ಮತ್ತೆ ಅದರರ್ಥ ಅಲ್ಲಿ ಕ್ರಿಶ್ಚಿಯನ್ ಜನರು ಮಾತ್ರ ಇದ್ದಾರೆ ಅಂತಲ್ಲ, ಎಲ್ಲ ಧರ್ಮದವರು ಅಲ್ಲಿ ಸೌಹಾರ್ದದಿಂದಿದ್ದಾರೆ, ಭಾರತಕ್ಕಿಂತ ಚೆನ್ನಾಗಿ..
  ಆದರೆ ೮೦%ಕ್ಕಿಂತ ಹೆಚ್ಚು ಹಿಂದುಗಳಿರುವ ನಮ್ಮ ಭಾರತವನ್ನು ಹಿಂದೂದೇಶ ಅನ್ನುವುದು ಹೇಗೆ ತಪ್ಪು? ಹಿಂದೂ ದೇಶ ಅಂದ ಮಾತ್ರಕ್ಕೆ ಬೇರೆ ಧರ್ಮದವರು ಇರಬಾರದು ಅಂತಲ್ಲವಲ್ಲ!
  ಆದರೆ ಈಗಿನ ಉದ್ವಿಗ್ನ ಪರಿಸ್ಥಿತಿಯಲ್ಲಿ ಹಿಂದೂ ಎಂಬ ಪದ ಬಾಯಿಂದ ಬಂದ ತಕ್ಷಣ ಆ ಮನುಷ್ಯನಿಗೆ ಕೋಮುವಾದಿ ಎಂಬ ಬಿರುದು!
  ಮೊದಲಿಗೆ ಈ ಕೋಮುವಾದಿ ಎಂಬ ಪದವೇ ಅಸಂಬದ್ಧ, ಆಷಾಢಭೂತಿತನ, ಎಡಬಿಡಂಗಿ ಬುದ್ದಿ ತೋರಿಸುತ್ತೆ!!
  ಪ್ರತಿಯೊಬ್ಬ ಮನುಷ್ಯನು ತನ್ನ, ತನ್ನ ಸಂಸಾರದ, ತನ್ನ ಪರಿವಾರದ, ತನ್ನ ಸಮುದಾಯದ, ತನ್ನ ಊರಿನ ಹಿತ ಕೋರುವುದರಲ್ಲಿ ತಪ್ಪೇನಿದೆ? ತಾನು ಕೋಮುವಾದಿ ಅಲ್ಲ ಅಂತ ಸರ್ಟಿಫಿಕೇಟ್ ಪಡೆಯಲು ತನ್ನ ಸ್ವಾಭಾವಿಕ ಬುದ್ದಿಯನ್ನು ತ್ಯಜಿಸಿ ನಾಟಕ ಆಡಬೇಕೆ?
  ಇಂಗ್ಲಿಷರು ಹಿಂದೂಗಳು ಒಗ್ಗಟಾಗಿದ್ದಷ್ಟು ತಮ್ಮ ಬೇಳೆ ಬೇಯುವುದಿಲ್ಲ ಅಂತ ಜಾತಿ, ಮತ, ಪಂಥ, ವರ್ಗ, ಮೇಲು ಕೀಳು ಅಂತ ಸಾವಿರಾರು ವಿಭಜನೆಗಳನ್ನು ಹುಟ್ಟಿಹಾಕಿ, ಆರ್ಯ-ದ್ರಾವಿಡ ಅಂತಾ ಕಾಗೆ ಕಥೆಗಳನ್ನೆಲ್ಲ ಸೃಷ್ಟಿಸಿ ಆದಷ್ಟು ಭಾರತೀಯರು ತಮ್ಮ-ತಮ್ಮಲ್ಲೇ ಕಚ್ಚಾಡಿ ಅವರ ತಂಟೆಗೆ ಹೋಗದಂತೆ ಮಾಡಿ, ನಮ್ಮವರನ್ನು ಮಂಗಾ ಮಾಡಿ ೨೦೦ ವರ್ಷ ರಕ್ತ ಹೀರಿದರು, ಅವರು ಬಿಟ್ಟು ಹೋದ ಮೇಲೆ ಅದನ್ನೆಲ್ಲ ಅರಿತಿರಬೇಕಿದ್ದ ನಮ್ಮ ಧುರೀಣರು ಮೊದಲು ಸಾವಿರಾರು ಚೂರುಗಳಾಗಿದ್ದ ನಮ್ಮ ಸಮಾಜವನ್ನು ಆದಷ್ಟು ಒಂದುಗೂಡಿಸಿ ಪ್ರಗತಿಯ ಕಡೆಗೆ ನೆಡೆಸಬೇಕಿತ್ತು, ಆದರೆ ಅವರು ಮಾಡಿದ್ದೇನು?
  ಅದೇ ಇಂಗ್ಲಿಷ್ ನೀತಿಯನ್ನು ಇವರು ಇನ್ನೂ ಬೆಳೆಸಿ ತಮ್ಮ ಬೇಳೆ ಬೇಯಿಸಿಕೊಂಡಿದ್ದು..
  ಆ ಇಂಗ್ಲಿಷ್ನವರು, ಅವರ ನಂತರ ನಮ್ಮ (ಕಳ್ಳ)ಮೇಧಾವಿ ಇತಿಹಾಸಕೋರರು ಬರೆದ ಅದೇ ಪರಮ ಕೊರಮ ಸುಳ್ಳುಗಳನ್ನು ಓದಿ ಬೆಳೆದ ಗಡ್ಡ ಬೆಳೆಸಿಕೊಂಡ ಬುದ್ಧಿಯೇ ಇಲ್ಲದ ಬುದ್ಧಿಯನ್ನೇ ತಿಂದು, ಉಸಿರಾಡಿ ಬದುಕುವ ಬುದ್ದಿಜೀವಿಗಳು ಅದನ್ನು ಸಾಂಗೋಪಾಂಗವಾಗಿ ಮುಂದುವರೆಸುತ್ತಿದ್ದಾರೆ, ರಾಜಕಾರಣಿಗಳಿಗೆ ಅಧಿಕಾರ ಮತ್ತು ಅದರಿಂದ ಬರುವ ದುಡ್ಡಿನ ಅಸೆ, ಆದರೆ ಕೊನೆಗೆ ಈ ಬುದ್ದಿಜೀವಿಗಳ ಗುರಿಯಾದರು ಏನು? ಅವರು ಸಾಧಿಸಬೇಕೆಂದಿರುವುದು ಏನನ್ನ?

Leave a Reply

%d bloggers like this: