fbpx

ಬೆಟದೂರು ಹಳ್ಳಿಯ ನೆನಪು..

 

 

 

ರಹಮತ್ ತರೀಕೆರೆ

 

ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನಲ್ಲಿ ಬೆಟದೂರು ಎಂಬ ಹಳ್ಳಿಯಿದೆ. ಅಲ್ಲಿನ ರೈತಾಪಿ ಕುಟುಂಬವೊಂದರಿಂದ ಸಾರ್ವಜನಿಕ ಮಹತ್ವವುಳ್ಳ ಅನೇಕ ವ್ಯಕ್ತಿಗಳು ಮೂಡಿಬಂದರು. ಅವರಲ್ಲಿ ಶಾಂತಿನಿಕೇತನದಲ್ಲಿ ಕಲಿತುಬಂದ ಶಂಕರಪ್ಪ; ರೈತನಾಯಕರೂ ಚಿಂತಕರೂ ಆದ ಚನ್ನಬಸವಪ್ಪ; ಹೋರಾಟಗಾರ-ಕವಿ ಅಲ್ಲಮಪ್ರಭು; ರೈತನಾಯಕ ಚಾಮರಸ ಪಾಟೀಲ; ಜನಪ್ರಿಯ ವೈದ್ಯ ರಾಯಚೂರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವಪ್ರಭು ಪಾಟೀಲ ಅವರು ಸೇರಿದ್ದಾರೆ.

ಇಂತಹುದೇ ಇನ್ನೊಂದು ನಿದರ್ಶನ ಸಿಂದಗಿ ಸೀಮೆಯ ಸಾಸನೂರು ಕುಟುಂಬದ್ದು. ಸಾಸನೂರು ಮನೆತನದವರು ವಿದ್ವತ್ತು ಮತ್ತು ಅಧಿಕಾರ ಕ್ಷೇತ್ರದಲ್ಲಿ ಸಾಧನೆ ಮಾಡಿದರೆ, ಬೆಟದೂರು ಮನೆತನದವರು ಸಾರ್ವಜನಿಕ ಚಳುವಳಿಯಲ್ಲಿ ನಾಯಕರಾದರು. ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವುದೆ ಎಂದರೆ, ಊರಿಗಾಗಿ ಅತ್ತು ಕಣ್ಣು ಕಳೆದುಕೊಂಡಂತೆ. ವೈಯಕ್ತಿಕ ಫಾಯದೆ ಕಡಿಮೆ. ಸಮಾಜಕ್ಕೆ ಕೊಡುಗೆ ಹೆಚ್ಚು. ಕೆಲವೊಮ್ಮೆ ಸಮಾಜ ಅವರ ಕೊಡುಗೆಯನ್ನು ನೆನಪೂ ಇಡುವುದಿಲ್ಲ.

ಸರಳತೆ, ನೇರಮಾತು, ವೈಚಾರಿಕತೆ, ಮುಗ್ಧತೆ, ಛಲ-ಇವು ಬೆಟದೂರು ಮನೆತನದ ಗುಣಗಳು. ಈ ಗುಣಗಳು ಅತಿಹೆಚ್ಚು ಪ್ರಮಾಣದಲ್ಲಿ ನೆರೆದಿರುವುದು ಅಲ್ಲಮಪ್ರಭು ಅವರಲ್ಲಿ. ಬೆಟದೂರು ಮನೆತನದವರ ಹೆಸರುಗಳು ಶರಣರವು ಮತ್ತು ವೀರಶೈವ ಕವಿಗಳವು ಎಂಬುದು ಮಾರ್ಮಿಕವಾಗಿದೆ. ಸಾರ್ವಜನಿಕ ಚಳುವಳಿಗೆ ಧುಮುಕುವ ಇವರ ಮನೋಭಾವಕ್ಕೆ ಬುನಾದಿ ಬಿದ್ದಿದ್ದು, ಅಣ್ಣತಮ್ಮಂದಿರಾದ ಚನ್ನಬಸವಪ್ಪ ಹಾಗೂ ಶಂಕರಪ್ಪ ಅವರಿಂದ.

ಇಬ್ಬರಿಗೂ ಪ್ರೇರಣೆ ಚಿಂತಕರೂ ವೈದ್ಯರೂ ಸ್ವಾತಂತ್ರ್ಯ ಚಳುವಳಿಗಾರರೂ ಆದ ಪಂಡಿತ ತಾರಾನಾಥರದು. ಬೆಟದೂರು ಸೋದರರು ತರುಣರಾಗಿದ್ದಾಗ ಶಾಂತರಸ, ವಿಶ್ವನಾಥರೆಡ್ಡಿ ಮುದ್ನಾಳ್, ವೀರಣ್ಣಗೌಡ ನೀರಮಾನ್ವಿ, ಸಿದ್ಧರಾಮ ಜಂಬಲದಿನ್ನಿ ಮುಂತಾದವರೊಡನೆ `ಗೆಳೆಯರ ಗುಂಪು’ ಮಾಡಿಕೊಂಡು, ನಿಜಾಮ್ ಆಳ್ವಿಕೆ ವಿರುದ್ಧ ಹೋರಾಡಿದವರು; ಜೈಲು ಕಂಡವರು; ಆಡಳಿತ ಭಾಷೆಯಾದ ಉರ್ದುವಿನ ದಟ್ಟ ಪರಿಸರದಲ್ಲಿ ಕನ್ನಡದಲ್ಲಿ ಬರೆದವರು. ಉರ್ದುವನ್ನು ಚೆನ್ನಾಗಿ ಕಲಿತು, ಅಲ್ಲಿದ್ದ ಸಾಹಿತ್ಯವನ್ನು ತರ್ಜುಮೆ ಮಾಡಿದವರು.

ಹಿರಿಯ ಮಿತ್ರರಾದ ಅಲ್ಲಮಪ್ರಭು ಬೆಟದೂರರ ಮೂಲಕ ಚನ್ನಬಸವಪ್ಪನವರ ಸಂಪರ್ಕ ನನಗೆ ಏರ್ಪಟ್ಟಿತು. ಚನ್ನಬಸವಪ್ಪನವರೂ ಶಾಂತರಸರೂ ಶತಮಾನದ ಜೋಡಿ. ಸಂಗೀತವಿರಲಿ, ಚಳುವಳಿಯಿರಲಿ, ಭಾಷಣವಿರಲಿ ಒಟ್ಟಿಗೇ ಹಾಜರಾಗುತ್ತಿದ್ದವರು. ಶಾಂತರಸರಿಗೆ ಕನ್ನಡ ವಿಶ್ವವಿದ್ಯಾಲಯ ನಾಡೋಜ ಪದವಿ ಕೊಡಮಾಡುವ ಹೊತ್ತಲ್ಲಿ, ಚನ್ನಬಸವಪ್ಪ ಗೆಳೆಯನ ಸಂಭ್ರಮದಲ್ಲಿ ಭಾಗಿಯಾಗಲು ಬಂದಿದ್ದರು. ಶಾಂತರಸರು ತೀರಿಕೊಂಡ ಕೆಲವೇ ದಿನಗಳಲ್ಲಿ ಗೆಳೆಯನಿಲ್ಲದ ಲೋಕದಲ್ಲಿ ಇರಲಾರೆ ಎಂಬಂತೆ ಅವರೂ ತೆರಳಿದರು.

ನಾನು ಬೆಟದೂರು ಕುಟುಂಬದ ಎಲ್ಲರನ್ನು ಭೇಟಿಮಾಡಿದ್ದರೂ ಶಂಕರಗೌಡರನ್ನು ಕಾಣಲು ಸಾಧ್ಯವಾಗಿರಲಿಲ್ಲ. ಶಾಂತಿನಿಕೇತನಕ್ಕೆ ಪ್ರವಾಸ ಹೋಗುವ ಮುನ್ನ ಅಲ್ಲಿ ಕಲಿತ ಕನ್ನಡಿಗರು ಯಾರೆಂದು ಹುಡುಕುವಾಗ ಶಂಕರಗೌಡರ ಹೆಸರು ನನಗೆ ಕಂಡಿತ್ತು.

ಗೌಡರು ರಚಿಸಿದ ಸಂತಾಲ ದಂಪತಿಗಳ ಚಿತ್ರದ ನೆನಪಿನಲ್ಲಿ, ಶಾಂತಿನಿಕೇತನಕ್ಕೆ ಸಮೀಪವಿರುವ ಸಂತಾಲರ ಒಂದು ಹಳ್ಳಿಗೂ ಹೋದೆ. ಗೌಡರು ಐವತ್ತರ ದಶಕದಲ್ಲಿ ಶಾಂತಿನಿಕೇತನಕ್ಕೆ ಹೋಗಿ, ನಂದಾಲಾಲ್ ಬಸು ಶಿಷ್ಯರಾಗಿ ಚಿತ್ರಕಲೆ ಕಲಿತವರು; ಗಾಂಧೀಜಿ ತಮ್ಮ ಕೊನೆಯ ದಿನಗಳನ್ನು ಬಿರ್ಲಾಭವನದಲ್ಲಿ ಕಳೆಯುವಾಗ, ಅವರ ಜತೆಯಿದ್ದು ಅವರ ಜೀವನ ಕುರಿತ ಭಿತ್ತಿಚಿತ್ರಗಳನ್ನು ರಚಿಸಿದವರು. ಲಾಲ್ ಬಹಾದ್ದೂರ್ ಶಾಸ್ತ್ರಿಗಳಿಗೆ ಪ್ರಿಯರಾಗಿದ್ದವರು. ಇಷ್ಟು ಹಿನ್ನೆಲೆಯಿದ್ದರೂ ಅವರು ಕಲಾಲೋಕದಿಂದ ವಿಮುಖರಾಗಿ ರೈತಾಪಿ ಕೆಲಸ ಮಾಡಿಕೊಂಡು ಹಳ್ಳಿಯಲ್ಲೇ ಉಳಿದಿದ್ದು ಅರ್ಥವಾಗಿರಲಿಲ್ಲ.

ಶಂಕರಗೌಡ

ಗೌಡರು ತಮ್ಮ ಚಿತ್ರಕಲೆಗಳ ಸಂಪುಟವನ್ನು ಪ್ರಕಟಿಸುವ ಕಾರ್ಯದಲ್ಲಿ ಹರಿದಾಡುತ್ತ ಇರುವಾಗ ಹಂಪಿಗೂ ಬಂದರು-ಲೋಟ ಹಾಲಿಗೆ ಪರಿತಪಿಸುವಾಗ ಕರೆಯವ ಹಸು ಬಾಗಿಲಿಗೆ ಬಂದಂತೆ. ತುಸು ಬಾಗಿದ ಜೋಳದ ದಂಟಿನಂತಹ ಸಪೂರ ದೇಹ; ಖಡಕ್ಕಾದ ಮಾತು; ಮಕ್ಕಳ ಮುಗ್ಧತೆ. ಮುಂದೆ ಲೇಖಕ ಚಿದಾನಂದ ಸಾಲಿ ಒಳ್ಳೆಯ ವಿಶ್ಲೇಷಣೆಯೊಂದಿಗೆ ಗೌಡರ ಚಿತ್ರಗಳ ಸಂಪುಟವನ್ನು ಸಂಪಾದಿಸಿ ಉಪಕರಿಸಿದರು. ಗೌಡರ ಶರಣ ಚಿಂತನೆಗೆ ಅಷ್ಟೇನೂ ಸಂಬಂಧವಿಲ್ಲದ ಸಂಸ್ಥೆಯೊಂದರಿಂದ ಈ ಸಂಪುಟ ಪ್ರಕಟವಾಯಿತು. ಪ್ರಕಟಿಸಬೇಕಾಗಿದ್ದ ಕಲಾಸಂಸ್ಥೆಗಳು ಕೈಚೆಲ್ಲಿದರ ಪರಿಣಾಮವಿದು.

ಶಂಕರಗೌಡರ ಚಿತ್ರಗಳಲ್ಲಿ ಎದ್ದುಕಾಣುವುದು ಕಾಯಕಪ್ರಜ್ಞೆ. ರೈತನ ಮಗನಾದ ಕಾರಣದಿಂದ ಇರಬೇಕು, ಅವರು ಹೆಚ್ಚು ಚಿತ್ರಿಸಿರುವುದು ದುಡಿಮೆಯಲ್ಲಿ ನಿರತರಾದ ಜನರನ್ನು; ಚಪ್ಪಲಿ ಹೊಲೆಯುವ ಚಮ್ಮಾರ; ಹೊಲದಲ್ಲಿ ದುಡಿಯುತ್ತಿರುವ ಒಕ್ಕಲಿಗ; ಚಕ್ಕಡಿ ಹೊಡೆಯುವ ರೈತ;, ದೋಣಿ ನಡೆಸುತ್ತಿರುವ ಅಂಬಿಗ; ಕುರಿ ಕಾಯುವ ಪಶುಗಾಹಿ; ಬುಟ್ಟಿಹೊತ್ತ ಮಹಿಳೆ; ಗಂಟೆಕಾಯಕದ ಜಂಗಮಯ್ಯ; ಮಡಕೆ ಮಾರುತ್ತಿರುವ ಕುಂಬಾರಗಿತ್ತಿ; ಕಸಬರಿಗೆ ಕಟ್ಟುತ್ತಿರುವ ಸಂತಾಲ ವ್ಯಕ್ತಿ; ಅಕ್ಕಿ ಹಸನು ಮಾಡುತ್ತಿರುವ ಮಹಿಳೆ; ತಂಬೂರಿ ಹಿಡಿದು ಹಾಡುತ್ತಿರುವ ಗಾಯಕ-ಎಲ್ಲರೂ ತಂತಮ್ಮ ಕಾಯಕದಲ್ಲಿ ನಿರತರಾದವರು.

ಶರಣರಿಂದ ಲೋಕದೃಷ್ಟಿಯನ್ನು ಪಡೆದಿದ್ದ ಬೆಟ್ಟದೂರು ಕುಟುಂಬದ ವೈಚಾರಿಕ ಪರಂಪರೆಗೆ ಅನುಗುಣವಾದ ಚಿತ್ರಗಳಿವು. ಈ ಚಿತ್ರಗಳಿಗೂ ಶಂಕರಗೌಡರು ಎಕರೆಗೆ 30 ಕ್ವಿಂಟಲ್ ಜೋಳಬೆಳೆದು ಬಹುಮಾನ ಪಡೆದಿದ್ದಕ್ಕೂ ಸಂಬಂಧ ಇರಬಹುದು. ನನ್ನ ಮನಸ್ಸಿನಲ್ಲಿ ಈಗಲೂ ಉಳಿದಿರುವ ಚಿತ್ರವೆಂದರೆ, ತಾಯಿ ಕೋಳಿಯೊಂದು ಮರಿಗಳಿಗೆ ಹಾವಿನ ಮರಿಯನ್ನು ಕೊಂದು ಉಣಿಸುತ್ತಿರುವುದನ್ನು ಸೋಜಿಗ ಮತ್ತು ವಿಷಾದದಲ್ಲಿ ನೋಡುತ್ತಿರುವ ಹುಡುಗನದು.

ಕನ್ನಡ ನಾಡಿನಲ್ಲಿ ರೈತಾಪಿ ಮನೆತನದಿಂದ ಬಂದು ಲೇಖಕರಾಗಿ ಕಲಾವಿದರಾಗಿ ಬೆಳೆದ ಬಹಳ ಜನರಿದ್ದಾರೆ. ಕಲಾಕ್ಷೇತ್ರದಲ್ಲಿ ಹೆಸರು ಮಾಡಿದವರು ರೈತರಾಗಿ ಮರಳಿದ ನಿದರ್ಶನ ಕಡಿಮೆ. ಗ್ರಾಮೀಣ ಮುಗ್ಧತೆ ಎಂಬ ಕ್ಲೀಷೆಯ ಮಾತನ್ನು ಶಂಕರಪ್ಪನವರಿಗೆ ಶಂಕೆಯಿಲ್ಲದೆ ಬಳಸಬಹುದಿತ್ತು. ಆದರೆ ಈ ಮುಗ್ಧಜನ ಸಾರ್ವಜನಿಕರಿಗೆ ಅನ್ಯಾಯವಾದರೆ ಬೀದಿಗಿಳಿದು ಪ್ರತಿಭಟಿಸುತ್ತಿದ್ದರು; ಕಡ್ಡಿಮುರಿದಂತೆ ಗೆರೆಕೊರೆದಂತೆ ಮಾತಾಡುತ್ತಿದ್ದರು; ತಮಗನಿಸಿದ್ದನ್ನು ಮುಖದಮೇಲೆ ಹೇಳಿ ಜನಪ್ರಿಯತೆ ಕಳೆದುಕೊಳ್ಳುವುದಕ್ಕೆ ಹಿಂಜರಿಯುತ್ತಿರಲಿಲ್ಲ.

ಇಂತಹ ವರ್ಣರಂಜಿತ ವ್ಯಕ್ತಿತ್ವದ ಕಲಾವಿದ ಯಾಕೆ ಕಲಾಕ್ಷೇತ್ರದಲ್ಲಿ ಉಳಿಯಲಿಲ್ಲ? ಕರ್ನಾಟಕದ ಚಿತ್ರಕಲಾ ಕ್ಷೇತ್ರದಲ್ಲೂ ಅಪರಿತರಾಗಿ ಹೇಗೆ ಉಳಿದರು? ಅವರ ಸಹಜವಾದ ಸಾವು ಯಾಕೆ ಸುದ್ದಿಯಾಗಲಿಲ್ಲ? ಮಾಧ್ಯಮಗಳಿಗೆ ಕರ್ನಾಟಕದ ಸಾಂಸ್ಕøತಿಕ ಪರಂಪರೆಯ ಪ್ರಜ್ಞೆಯೇ ಕಡಿಮೆಯಾಗಿದೆಯೊ ಅಥವಾ ರಾಜಕೀಯದ ಸುದ್ದಿ ಮಾಡಿಮಾಡಿ ಪ್ರಜ್ಞೆಗೆ ಮಂಕು ಕವಿದಿದೆಯೊ?

ಇದಕ್ಕೆ ಪ್ರಚಾರವಿಲ್ಲದೆ ಅಜ್ಞಾತವಾಗಿ ಬದುಕುವ ಹಾದಿಯನ್ನು ಆಯ್ಕೆ ಮಾಡಿಕೊಂಡ ಶಂಕರಗೌಡರು ಸಹ ಇದಕ್ಕೆ ಕಾರಣರೇ? ಗ್ಲಾಮರಿಲ್ಲದೆ ಘನತೆಯ ಬಾಳನ್ನು ಬಾಳಿದ ಸಾಮಾನ್ಯ ಮನುಷ್ಯರನ್ನು ಗುರುತಿಸುವ, `ಸಣ್ಣ’ಸಂಗತಿಗಳನ್ನು ಕಾಣುವ ಕಣ್ಣನ್ನು ಹೆಚ್ಚಿನ ಮಾಧ್ಯಮಗಳು ಕಳೆದುಕೊಳ್ಳುತ್ತಿವೆಯೇ? ಈ ಪ್ರಶ್ನೆಗಳಿಗೆ ಯಾರು ಉತ್ತರಿಸಬೇಕು?

ರಾಜಕಾರಣಿಗಳು ಏನೇನು ತಿನ್ನುತ್ತಾರೆ, ಕುಡಿಯುತ್ತಾರೆ, ಉಡುತ್ತಾರೆ-ತೊಡುತ್ತಾರೆ ಎಂಬ ವಿವರಗಳನ್ನು ವರದಿ ಮಾಡುವ ಮಾಧ್ಯಮಗಳಿಗೆ ಶಂಕರಗೌಡರಂತಹವರು ಕಾಣದಿದ್ದರೆ ಸೋಜಿಗವಲ್ಲ. ಆದರೆ ಪ್ರತಿಯೊಂದು ಸಂಸ್ಕೃತಿಯೂ ಸಮಾಜದಲ್ಲಿ ಘಟಿಸುವ ಅರ್ಥಪೂರ್ಣವೂ ಗಾತ್ರದಲ್ಲಿ `ಸಣ್ಣ’ವೂ ಆದ ಘಟನೆ ಅಥವಾ ವ್ಯಕ್ತಿಗಳನ್ನು ಮಹತ್ವಗೊಳಿಸುವಂತಹ ಒಳಉಪಾಯಗಳನ್ನು ಇರಿಸಿಕೊಂಡಿರುತ್ತದೆ. ಚರಿತ್ರೆಯಲ್ಲಿ ಮರೆಯಾಗಿ ಹೋಗುವಂತಹದ್ದು ಬಹುಶಃ ಯಾವುದೂ ಇರುವುದಿಲ್ಲ.

Leave a Reply