fbpx

ಭೂತಾನ್ ನಲ್ಲಿ ರಸ್ತೆ ದಾಟುವುದು ಹೇಗೆ ?

ಶ್ರೀಪಾದ ಹೆಗ್ಡೆಭೂತಾನ್ ದೇಶದ ಅಭಿವೃದ್ಧಿಗೆ ದುಡ್ಡು ಮಾನದಂಡವಾಗದೆ ಜನರ ಬದುಕಿನ ಸಂತೋಷವೇ ಮಾನದಂಡವಾಗಿರುವುದು ನಾವು ಕಲಿಯಬೇಕಾಗಿದೆ ಎನ್ನುತ್ತಾರೆ ಶ್ರೀಪಾದ ಹೆಗ್ಡೆ ಫೇಸ್ ಬುಕ್ ನಲ್ಲಿ

ಭೂತಾನ್ ಪ್ರವಾಸ ಮುಗಿಸಿ ಬೆಂಗಳೂರಿಗೆ ಹೊರಟಿದ್ದಾಯ್ತು. ಬಾಗದೋಗ್ರ ವಿಮಾನ ನಿಲ್ದಾಣದಲ್ಲಿದ್ದೇವೆ. ಇಲ್ಲಿಂದ ಕೊಲ್ಕೊತ್ತಾ ಮೂಲಕ ಊರು ತಲುಪುತ್ತೇವೆ. ಇಲ್ಲಿ ಒಂದು ವಿಶೇಷವಾದ ಅನುಭವ ಹೇಳ ಬಯಸುತ್ತೇನೆ.

ಅದು ರಸ್ತೆ ದಾಟುವದರ ಬಗೆಗೆ. ಬೆಂಗಳೂರಿನಲ್ಲಿ ರಸ್ತೆ ದಾಟುವುದೆ ದುಸ್ತರದ ಕೆಲಸ. ಸಿಗ್ನಲ್ ಗಳಲ್ಲಿ ಸಹ ನಾವು ರಸ್ತೆ ಅರ್ಧ ದಾಟುವದರಲ್ಲಿಯೇ ಹಸಿರು ದೀಪ ಹೋಗಿ ಕೆಂಪು ದೀಪ ಬಂದು ನಮ್ಮನ್ನು ಬಹಳ ಸಲ ಕಂಗೆಡಿಸುತ್ತದೆ. ವಾಹನ ಸವಾರರು ನಮ್ಮ ಮೈಮೇಲೆಯೆ ಬರ ತೊಡಗುತ್ತಾರೆ. ಸಿಗ್ನಲ್ ಇಲ್ಲದ ಕಡೆಯಲ್ಲಂತು ರಸ್ತೆ ದಾಟುವುದಕ್ಕೆ ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ಅಂಜುತ್ತಲೇ ದಾಟ ಬೇಕಾದ ಅನುಭವ ನಮಗೆಲ್ಲರಿಗೂ ಆಗಿಯೇ ಆಗಿರುತ್ತದೆ.

ಭೂತಾನಿನ ಮುಖ್ಯ ನಗರಗಳಲ್ಲಿ ಹಾಗಲ್ಲ. ಇಲ್ಲಿ ಜೀಬ್ರಾ ಕ್ರಾಸಿಂಗ್ ನಲ್ಲಿ ಮಾತ್ರ ರಸ್ತೆ ದಾಟಬೇಕು ಮತ್ತು ಥಿಂಪುವಿನಂತಹ ನಗರಗಳಲ್ಲಿ ಪ್ರತಿ ಐವತ್ತು ನೂರು ಮೀಟರಿಗೆ ಜೀಬ್ರಾ ಕ್ರಾಸಿಂಗ್ ಇವೆ. ಇಲ್ಲಿ ಯಾವುದೇ ವ್ಯಕ್ತಿ ಭಯವಿಲ್ಲದೆ ರಸ್ತೆ ದಾಟಬಹುದು. ರಸ್ತೆ ದಾಟುತ್ತಿರುವವರನ್ನು ಅಥವಾ ರಸ್ತೆ ದಾಟಲು ಅಣಿಯಾಗಿ ನಿಂತವರನ್ನು ಕಂಡ ತಕ್ಷಣ ವಾಹನಗಳು ಜೀಬ್ರಾ ಕ್ರಾಸಿಂಗಿಗಿಂತ ಒಂದೆರಡು ಅಡಿ ಹಿಂದೆಯೇ ನಿಂತು ಬಿಡುತ್ತವೆ.

ವಾಹನ ಹತ್ತಿರದಲ್ಲಿಯೇ ಬರುತ್ತಿದ್ದರೂ ಕ್ಯಾರೆ ಅನ್ನದೆ ಜನ ತಮ್ಮಷ್ಟಕ್ಕೆ ತಾವು ರಸ್ತೆ ದಾಟುತ್ತಾರೆ. ವಾಹನಗಳು ಮುನ್ನುಗ್ಗಿ ಬರದೆ ಜೀಬ್ರಾ ಕ್ರಾಸ್ ಗಿಂತ ಹಿಂದೆಯೆ ಶಿಸ್ತಿನಿಂದ ನಿಂತು ಬಿಡುತ್ತವೆ. ಬೆಂಗಳೂರಿನಲ್ಲಿ ಜೀವ ಕೈಯಲ್ಲಿ ಹಿಡಿದು ಭಯದಿಂದಲೇ ರಸ್ತೆ ದಾಟುವ ನಾನು ಇಲ್ಲಿ ರಸ್ತೆ ದಾಟುವುದನ್ನುಎಂಜಾಯ್ ಮಾಡಿದೆನಾದರೂ ಇಲ್ಲಿಯ ಜನರಂತೆ ಅತ್ತ ಇತ್ತ ಕತ್ತು ಹೊರಳಿಸಿ ನೋಡದೆ ಬಿಂದಾಸಾಗಿ ರಸ್ತೆ ದಾಟುವುದು ನನ್ನಿಂದಾಗಲೇ ಇಲ್ಲ. ಅದೆಷ್ಟೊ ವರ್ಷದಿಂದ ಬೆಳಸಿಕೊಂಡ ರೂಢಿ ತಾನೆ.

ಒಟ್ಟಿನಲ್ಲಿ ಇಲ್ಲಿ ಮನುಷ್ಯರಿಗೆ ಮೊದಲ ಆದ್ಯತೆ ವಾಹನಗಳಿಗಲ್ಲ. ದೇಶದ ಅಭಿವೃದ್ಧಿಗೆ ದುಡ್ಡು ಮಾನದಂಡವಾಗದೆ ಜನರ ಬದುಕಿನ ಸಂತೋಷವೆ ಮಾನದಂಡವಾಗಿರುವ ದೇಶದಲ್ಲಿ ಇದು ಸ್ವಾಭಾವಿಕ. ದುಡ್ಡೆ ಎಲ್ಲವೂ ಆಗಿರುವ ನಮ್ಮಲ್ಲಿ ಇಂತಹವುಗಳನ್ನು ನಿರೀಕ್ಷಿಸಲಾಗದು. ನಮ್ಮ ನೆರೆಯ ಅತಿ ಪುಟ್ಟ ದೇಶ ಭೂತಾನಿನಿಂದ ನಾವು ಕಲಿಯುವುದು ಸಾಕಷ್ಟಿದೆ.

1 Response

  1. Kiran says:

    Well, this is how people behave and live in any sensible society, if it is not the case with India that shows we as a society have not raised above the uncivilized and barbaric nature of ours. It is just a shame…

Leave a Reply

%d bloggers like this: