fbpx

ರಾಮಾಯಣ, ಮಹಾಭಾರತಗಳಿಂದ ಕಲಿಯಬೇಕಾದುದಕ್ಕಿಂತ ಕಲಿಯಬಾರದ್ದೇ ಹೆಚ್ಚಾಗಿ ಇದೆ

ಧರ್ಮ- ಸಂಸ್ಕೃತಿ ಯಾವುದಯ್ಯಾ ?

ಕೆ. ರಘುನಾಥ್

ಸುವ್ಯವಸ್ಥಿತ ಸಮಾಜ ನಿರ್ಮಾಣವನ್ನು ಗುರಿಯನ್ನಾಗಿಸಿಕೊಂಡು ರೂಪುಗೊಂಡವುಗಳಲ್ಲಿ ಪುರುಷಾರ್ಥ ಮತ್ತು ಆಶ್ರಮ ಧರ್ಮಗಳು ಮುಖ್ಯವಾದವು.

ಅವುಗಳಲ್ಲಿ ಮೊದಲನೆಯದು ಧರ್ಮ, ಅರ್ಥ, ಕಾಮ, ಮೋಕ್ಷಗಳು ವ್ಯಕ್ತಿತ್ವದ ಸಹಜ ವಿಕಸನದ ಪರಿಕಲ್ಪನೆಗೆ ಅನುಗುಣವಾಗಿದೆ.

ಅದರಂತೆ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸಗಳು ಕೂಡ ಈ ಸಹಜ ವಿಕಸನದ ಪರಿಕಲ್ಪನೆಯನ್ನು ಆಧರಿಸಿವೆ.

ಮೊದಲನೆಯದರಲ್ಲಿ ಧರ್ಮವನ್ನು ಕರ್ತವ್ಯವೆಂದು ಪರಿಗಣಿಸಿದರೆ, ಎರಡನೆಯದು ಅದರಿಂದ ದೊರೆಯುವ ಫಲಕ್ಕೆ ಸಂಬಂಧಿಸಿದೆ. ಮೂರನೆಯದು ಫಲದಿಂದ ಮನುಷ್ಯನ ಕಾಮನೆಗಳನ್ನು ಈಡೇರಿಸಿಕೊಳ್ಳುವ ಅವಕಾಶವನ್ನು ಕಲ್ಪಿಸುತ್ತದೆ. ಕೊನೆಯದು ಎಲ್ಲವೂ ಈಡೇರಿದಮೇಲೆ ತಲಪಬಹುದಾದ ಮರಣದ ಸಿದ್ಧಿಯನ್ನು ಸೂಚಿಸುತ್ತದೆ.

ಇದೇ ರೀತಿಯಲ್ಲಿ ಬಾಲ್ಯದಲ್ಲಿ ಬ್ರಹ್ಮಚರ್ಯವೆನ್ನುವುದು ಅಧ್ಯಾಪನದ ಅವಧಿಯಾದರೆ, ಎರಡನೆಯದು ಮೇಲಿನ ಅರ್ಥ ಮತ್ತು ಕಾಮಗಳನ್ನು ಪೂರೈಸಿಕೊಳ್ಳುವ ಸಾಧನವಾಗಿದೆ. ಅದು ಮುಗಿದನಂತರ ಮುಂದಿನ ತಲೆಮಾರಿಗೆ ಎಡೆಮಾಡಿಕೊಡಲು ವಾನಪ್ರಸ್ಥದ ಹಾದಿಯನ್ನು ಹಾಕಿಕೊಡಲಾಗಿದೆ. ತರುವಾಯ ಬೇಕಾದವರು ಸನ್ಯಾಸವನ್ನು ಸ್ವೀಕರಿಸಬಹುದು. ಮನುಷ್ಯನ ಮನಸ್ಸಿನ ಕಾಮ, ದೇಹದ ವಿಕಾಸ, ಅದರ ಅವಶ್ಯಕತೆಗಳನ್ನು ಅರ್ಥಮಾಡಿಕೊಂಡು ರೂಪಿಸಿದ ಇದು ಅತ್ಯಂತ ಸುಭದ್ರ ತಳಪಾಯವನ್ನು ಯಾವುದೇ ಸಮಾಜದ ಸ್ಥಿರತೆಗೆ ಹಾಕಿಕೊಡಬಲ್ಲಷ್ಟು ಆರೋಗ್ಯಕಾರಿಯಾಗಿದೆ.

ಆದರೆ ಮೇಲಿನ ಈ ವ್ಯವಸ್ಥೆಯನ್ನು ರೂಪಿಸಿದವರು ಇದನ್ನು ಅನುಸರಿಸಿದ್ದು ಮಾತ್ರ ಬಹುತೇಕ ಕಂಡುಬರುವುದಿಲ್ಲ. ಇದಕ್ಕೆ ನಿದರ್ಶನಗಳನ್ನು ಈಗ ನೋಡಬಹುದು.

ರಾಮಾಯಣ : ದಶರಥ ತನ್ನ ಇಳಿವಯಸ್ಸಿನಲ್ಲಿ ಕೈಕೇಯಿಯನ್ನು ಮದುವೆಯಾಗುತ್ತಾನೆ. ಅವಳ ಮೋಹದಲ್ಲಿ ಅವಳಿಗೆ ಕೊಟ್ಟ ಎರಡು ವರಗಳೇ ಅವನಿಗೂ ಮತ್ತು ಉಳಿದವರಿಗೂ ಶಾಪವಾಗಿ ಪರಿಣಮಿಸುತ್ತದೆ. ರಾಮಲಕ್ಷ್ಮಣರೂ ಕೂಡ ತಮ್ಮ ಧರ್ಮವನ್ನು ಮೀರಿದವರೇ ಆಗಿದ್ದಾರೆ. ಅಪ್ಪ ತನ್ನ ಹೆಂಡತಿಗೆ ಕೊಟ್ಟ ಮಾತನ್ನು ಈಡೇರಿಸುವ ಭ್ರಮೆಯಲ್ಲಿ ತಮ್ಮ ಆಶ್ರಮಧರ್ಮ ( ಗೃಹಸ್ಥಾಶ್ರಮ) ವನ್ನು ಮರೆತು ತಾವು ಕಷ್ಟಗಳನ್ನು ಕೈಮಾಡಿ ಕರೆದುಕೊಂಡದ್ದಲ್ಲದೇ ತಮ್ಮ ಕೈಹಿಡಿದವರನ್ನೂ ಕಷ್ಟಗಳಿಗೆ ದೂಡುತ್ತಾರೆ. ವಿವೇಕರಾಹಿತ್ಯವಾದ ವಿಧೇಯತೆಯನ್ನೇ ಸಂಸ್ಕೃತಿಯೆಂದು ವೈಭವೀಕರಿಸುವುದು ಆತ್ಮವಂಚನೆಯಲ್ಲದೆ ಪರವಂಚನೆಯೂ ಆಗಿದೆ.

ಮಹಾಭಾರತ : ಶಂತನು ತನ್ನ ಇಳಿವಯಸ್ಸಿನಲ್ಲಿ ಮತ್ಸ್ಯಗಂಧಿಯನ್ನು ಕೈಹಿಡಿಯಲು ಆಶಿಸುತ್ತಾನೆ. ಇದಕ್ಕಾಗಿ ಭೀಷ್ಮ ತನ್ನ ಆಶ್ರಮ ಧರ್ಮವನ್ನು ಮೀರಬೇಕಾಗುತ್ತದೆ. ವ್ಯಾಸರೂ ಕೂಡ ತಮ್ಮ ಆಶ್ರಮ ಧರ್ಮವನ್ನು ಮೀರಿ ಅಂಬಿಕೆ ಅಂಬಾಲಿಕೆಯರನ್ನು ಕೂಡುತ್ತಾರೆ (ತಾಯಿಯ ಮಾತಿಗೆ ವಿಧೇಯರಾಗಿ) ಇದರ ಪರಿಣಾಮವಾಗಿ ರೋಗಿ ಪಾಂಡು ಮತ್ತು ಕುರುಡ ಧೃತರಾಷ್ಟ್ರನ ಜನನವಾಗುತ್ತದೆ.

ಪಾಂಡುವೂ ತನ್ನ ಆಶ್ರಮ ಧರ್ಮವನ್ನು ಮೀರಿ ಶಾಪಕ್ಕೆ ಗುರಿಯಾಗುತ್ತಾನೆ. ಧರ್ಮರಾಯನಾದರೋ ತನ್ನ ವಿವೇಕವನ್ನು (ರಾಜಧರ್ಮ) ಬದಿಗೊತ್ತಿ ನಾರದನ ಮಾತಿನ ಬಲೆಗೆ ಬಲಿಯಾಗಿ ಮುಂದಿನ ಅನಾಹುತಗಳನ್ನು ಕೈಮಾಡಿ ಕರೆದುಕೊಳ್ಳುವುದಲ್ಲದೇ ತನ್ನ ಸೋದರರನ್ನೂ ಹೆಂಡತಿಯನ್ನೂ ಕೇಳದೆಯೇ ಅವರನ್ನು ಅಗ್ನಿದಿವ್ಯಕ್ಕೆ ದೂಡುತ್ತಾನೆ.

ಯಾರು ಧರ್ಮದ ಪ್ರತಿಪಾದಕರೋ ಅವರೇ ಸ್ವತಃ ಧರ್ಮವನ್ನು ಉಲ್ಲಂಘಿಸಿದರೆ, ಬೇಲಿಯೇ ಎದ್ದು ಹೊಲ ಮೇದಂತಾಗುವುದಿಲ್ಲವೇ? ಇದರಿಂದ ಅನ್ಯರಿಗೆ ಮಾದರಿಯಗಬೇಕಾದವರು ಕೆಟ್ಟ ಮಾದರಿಗಳಾಗಿ ಪರಿಣಮಿಸಿದ್ದಾರೆ.

ರಾಮಾಯಣ, ಮಹಾಭಾರತಗಳಿಂದ ಕಲಿಯಬೇಕಾದುದಕ್ಕಿಂತ ಕಲಿಯಬಾರದ್ದೇ ಹೆಚ್ಚಾಗಿ ಇದೆ. ಅವುಗಳನ್ನು ನಮ್ಮ ಸಂಸ್ಕೃತಿಯ ಪ್ರತೀಕಗಳೆಂದು ಪ್ರತಿಪಾದಿಸುವವರು ಪೂರ್ವಗ್ರಹಪೀಡಿತರಲ್ಲದೇ ಬೇರೇನೂ ಅಲ್ಲ. ಧೃತರಾಷ್ಟ್ರ ಕಣ್ಣಿಲ್ಲದವನಾದರೆ, ಉಳಿದವರು ಕಣ್ಣಿದ್ದೂ ವಿವೇಕ ಕಳೆದುಕೊಂಡ ಕುರುಡರಾಗಿದ್ದಾರೆ.

(ಮೇಲಿನ ಈ ಮಾತುಗಳು ಈಗ ಪ್ರಚಲಿತದಲ್ಲಿರುವ ರಾಮಾಯಣ ಮಹಾಭಾರತಗಳನ್ನು ಕುರಿತ ಚಿಂತನೆಯೇ ಹೊರತು ಜನಪದ ಇಲ್ಲವೇ ಬೇರೆ ಕಡೆ ದೊರೆಯುವ ಕೃತಿಗಳಿಗೆ ಅನ್ವಯಿಸುವುದಿಲ್ಲ).

ಗೌತಮನಿಗೂ ಇದು ಅನ್ವಯವಾಗುತ್ತದೆ. ಗೌತಮ ತನ್ನ ಆಶ್ರಮ ಧರ್ಮವನ್ನು ಮರೆತಿದ್ದರಿಂದಾಗಿ ಅಹಲ್ಯೆ ಇಂದ್ರನಿಗೆ ಒಲಿಯಬೇಕಾಗುತ್ತದೆ. ಅದರ ಪರಿಣಾಮವಾಗಿ ಶಾಪಕ್ಕೆ ಒಳಗಾಗಿ ಪರಿತಪಿಸಬೇಕಾಗುತ್ತದೆ. ಅವಳಿಗೆ ಅದರಿಂದ ಬಿಡುಗಡೆ ದೊರೆಯಬೇಕಾದರೆ ಕಲ್ಲಿಗಿಂತ ಕಡೆಯಾಗಿ ತನ್ನ ಹೆಂಡತಿಯನ್ನು ನಡೆಸಿಕೊಂಡ ರಾಮನೇ ಬರಬೇಕಾದದ್ದು ಒಂದು ವಿಪರ್ಯಾಸ.

ಯಯಾತಿಯ ತೀರದ ದಾಹ ಮತ್ತು ಗೃಹಸ್ಥಾಶ್ರಮದ ಉಲ್ಲಂಘನೆಗಳು ಶಾಪವನ್ನು ಕೈಮಾಡಿ ಕರೆದುಕೊಳ್ಳುವಂತಾಗುವುದಲ್ಲದೇ ತನ್ನ ಮಗನ ಬಾಳಿಗೇ ಶಾಪವಾಗುವುದು ಒಂದು ದುರಂತ.

ಗೌತಮ ಬುದ್ಧನೂ ತನ್ನಆಶ್ರಮ ಧರ್ಮವನ್ನು ಮರೆತು ಕೈಹಿಡಿದವಳನ್ನು ಮಧ್ಯರಾತ್ರಿಯಲ್ಲಿ ಕೈಬಿಟ್ಟು ನಡೆಯುವುದರ ಮೂಲಕ ಆಶ್ರಮ  ಧರ್ಮಕ್ಕೆ ದ್ರೋಹವೆಸಗುತ್ತಾನೆ. ಇನ್ನೊಬ್ಬರ ಒಪ್ಪಿಗೆಯಿಲ್ಲದೇ ಆಶ್ರಮಧರ್ಮವನ್ನು ಮುರಿಯುವುದು ಹೇಗೆ ಎನ್ನುವ ಯಶೋಧರೆಯ ಪ್ರಶ್ನೆಗೆ ಅವನಲ್ಲಿ ಉತ್ತರವಿಲ್ಲ. ‘ಸಾವಿರ ಮನೆಗಳ ದೀಪಬೆಳಗಿತು ಎಂದು ಆನಂದ ಹೇಳಿದರೆ, ಸಾವಿರ ಮನೆಗಳು ಕತ್ತಲಿನ ಗೂಡಗಳಾದವು’ (ಮಾಸ್ತಿ, ‘ಯಶೋಧರಾ’) ಎನ್ನುವ ಯಶೋಧರೆಯ ಮಾತುಗಳು ಮಾರ್ಮಿಕವಾದವು.

ಗೃಹಸ್ಥಮಧರ್ಮಕ್ಕೆ ಇಬ್ಬರೂ ಬಾಧ್ಯರಾದವರು (ಧರ್ಮೇಚ, ಅರ್ಥೇಚ, ಕಾಮೇಚ ನಾತಿಚರಾಮಿ). ಒಬ್ಬರ ಒಪ್ಪಿಗೆಯಿಲ್ಲದೆ ಇನ್ನೊಬ್ಬರು ಅದನ್ನು ಮುರಿಯುವಂತಿಲ್ಲ. ಹಾಗೆ ಮುರಿಯುವುದು ಆ ಆಶ್ರಮ  ಧರ್ಮಕ್ಕೆ ವಿರುದ್ಧವಾದುದು. ಆಧುನಿಕ ಕನ್ನಡದ ಮೊದಲ ನಾಟಕ “ಇಗ್ಗಪ್ಪ ಹೆಗ್ಗಡೆಯ ಪ್ರಹಸನ, ಅಥವಾ ಕನ್ಯಾವಿಕ್ರಯವು” ಮೇಲಿನ ವಸ್ತುವನ್ನು ಹೊಂದಿರುವುದು ನಿರಂತರವಾಗಿ ಈ ಸಮಾಜದಲ್ಲಿ ಆಶ್ರಮ ಧರ್ಮದ ಉಲ್ಲಂಘನೆ ನಡೆಯುತ್ತಾ ಬಂದಿರುವುದರ ದ್ಯೋತಕವಾಗಿದೆ. ಇದನ್ನು ಸರಿಪಡಿಸಲು ಇಂಗ್ಲಿಷರ ಕಾನೂನು ಪ್ರವೇಶಿಸಬೇಕಾಗುತ್ತದೆ.

ಇದು ಕೇವಲ ಹಿಂದೂ ಸಮಾಜಕ್ಕೆ ಅಂಟಿದ ಶಾಪ ಮಾತ್ರವಲ್ಲ, ಮುಸ್ಲಿಮ್ ಸಮಾಜಕ್ಕೂ ಅಂಟಿರುವ ಶಾಪವಾಗಿದೆ. ಇದನ್ನು ತಡೆಗಟ್ಟಲು ಈಚೆಗೆ ತಲಾಖ್ ವಿರುದ್ಧ ತಂದ ಕಾನೂನು ಸಾಕ್ಷಿಯಾಗಿದೆ.

19 Responses

 1. ಭಾರತಿ ಬಿ ವಿ says:

  ಚೆನ್ನಾಗಿದೆ ಸರ್
  ಇಷ್ಟವಾಯ್ತು

 2. ಶಿವಶಂಕರ ಭಟ್ಟ says:

  ಮಹಾಭಾರತ ಮತ್ತು ರಾಮಾಯಣ ಹಿಂದುಗಳು ದಿನ ನಿತ್ಯ ಅನುಸರಿಸಲೇಬೇಕಾದ ಕಾನೂನುಗಳ ಕ್ರೋಡೀಕರಣದ ಗ್ರಂಥಗಳಲ್ಲ. ಅವು ಕೇವಲ ಕಾವ್ಯಗಳು ಅಷ್ಟೇ. ಇಷ್ಷವಿರುವವರು ಓದಿಕೊಳ್ಳಲಿ. ಬೇಡದವರು ಬಿಡಲಿ. ಇದು ಸರಳ. ಅದನ್ನು ಪರ-ವಿರೋಧದ ಸಮಸ್ಯೆ ಮಾಡುವುದರಲ್ಲಿ ಏನು ಸುಖ?

  • Hari says:

   ಸರಳವಾಗಿ ಪ್ರಸಿದ್ದಿ ಪಡೆಯಲು ಇರುವಂತಹ ಸುಲಭ ಮಾರ್ಗ. ಲಾಭವೂ ಬಹಳ.

 3. ಶ್ರೀರಂಗ ಯಲಹಂಕ says:

  ರಾಮಾಯಣ ಮತ್ತು ಮಹಾಭಾರತಗಳು ರಚಿತವಾದ ಕಾಲ ಮರೆತು ಮಾತನಾಡಿದರೆ, ಚರ್ಚೆ ಮಾಡಿದರೆ ಸರಿಯೆ?ಯಾವುದೇ ಕೃತಿ ಓದುವಾಗ ದೇಶ-ಕಾಲಗಳ ಪ್ರಜ್ಞೆ ನಮ್ಮಲ್ಲಿ ಮಾಸದಂತೆ ಎಚ್ಚರವಹಿಸುವುದು ಮುಖ್ಯ.

 4. ರಘುನಾಥ says:

  ಈ ಲೇಖನದ ಶೀರ್ಷಿಕೆ ಆಶ್ರಮ ಧರ್ಮ ಮತ್ತು ನಮ್ಮ ಸಂಸ್ಕೃತಿ’ ಎಂದು ಇದ್ದುದನ್ನು ರೋಚಕ ವಾಗಿರಬಹುದೆಂಬ ಕಾರಣದಿಂದಲೋ ಏನೋ ಸಂಪಾದಕರು ಶೀರ್ಷಿಕೆಯ ನ್ಪು ಬದಲಾವಣೆ ಮಾಡಿರುವ ಕಾರಣ ಅದು ಕೆಲವು ತಪ್ಪು ಅರ್ಥಕ್ಕೇ ಎಡೆಮಾಡಿಕೊಟ್ಟಿದೆ.
  ರಾಮಾಯಣ ಮಹಾಭಾರತಗಳು ನಮ್ಮಲ್ಲಿ ಕೇವಲ ಕಾವ್ಯ ಗಳಾಗಿ ಉಳಿದಿಲ್ಲ . ಅವು ನಮ್ಮ ಭಾವಕೋಶದಲ್ಲಿ ಸೇರಿಹೋಗಿವೆ. ಅವು ಇಂದಿಗೂ ನಮ್ಮ ನ್ನ ನಿಯಂತ್ರಿಸುವ ಮಾದರಿಗಳಾಗಿವೆ. ಇಂತಹ ಕೆಟ್ಟ ಮಾದರಿಗಳ ನಿಯಂತ್ರ ಗಳಿಂದ ನಾವು ತಪ್ಪಿಸಿಕೊಳ್ಳಬೇಕು ಎಂಬುದಷ್ಪೇ ಈ ಬರಹದ ಸಾರ.ಈ ಗ್ರಂಥ ಗಳನ್ಪು ಕೇವಲ ಪೂಜೆ ಮಾಡುವವರು ಈ ಕಹಿಸತ್ಯ ವನ್ನು ಒಪ್ಪಿಕೊಳ್ಳಲಾರರು. ಅದಕ್ಕೆ ಧೈರ್ಯ ಬೇಕು.

 5. ಶ್ರೀರಂಗ ಯಲಹಂಕ says:

  ರಘುನಾಥ ಅವರಿಗೆ— ನಿಮ್ಮ ಲೇಖನದ ಆಶಯಗಳಿಗೆ ವಿರುದ್ಧವಾಗಿ ಪ್ರತಿಕ್ರಿಯಿಸಿದವರು ಲೇಖನ ಓದದೆ ಕೇವಲ ಶೀರ್ಷಿಕೆ ಓದಿದವರು ಎಂದು ತಮ್ಮ ಅಭಿಪ್ರಾಯವೆಂದು ಅಂದುಕೊಂಡಿದ್ದೀರಿ. ಓದುಗರನ್ನು ಈ ರೀತಿ degrade ಮಾಡುವುದು ಸರಿಯೆ? ನಿಮ್ಮ ಲೇಖನದಲ್ಲಿರುವ ಒಂದು ವಾಕ್ಯವನ್ನು ಸಂಪಾದಕರು ಶೀರ್ಷಿಕೆ ಮಾಡಿದ್ದಾರಷ್ಟೆ. ನಿಮ್ಮ ಲೇಖನದಲ್ಲಿ ಆ ವಾಕ್ಯ ಇರದಿದ್ದರೆ ಅವರ ಮೇಲಿನ ನಿಮ್ಮ ಆರೋಪಕ್ಕೆ ಸ್ವಲ್ಪಮಟ್ಟಿಗೆ ಸಾಕ್ಷಿ ಸಿಗುವ ಸಾಧ್ಯತೆಯಿರುತ್ತಿತ್ತೇನೋ?

 6. ರಘುನಾಥ says:

  ನನ್ನ ಬರಹ ಕೇವಲ ರಾಮಾಯಣ ಮಹಾಭಾರತಗಳಿಗೆ ಸೀಮಿತವಾಗಿಲ್ಲ.ಅಲ್ಲವೇ?

 7. Kiran says:

  ಇಲ್ಲಿ ಈಗಾಗಲೇ ಬೇರೆ ಕಾಮೆಂಟ್ನಲ್ಲಿ ಹೇಳಿರುವ ಹಾಗೆ ರಾಮಾಯಣ, ಮಹಾಭಾರತಗಳು ಪ್ರಾಚೀನ ಮಹಾಕಾವ್ಯಗಳು. ಅವು ಹಿಂದೂ ಧರ್ಮ ಗ್ರಂಥಗಳಲ್ಲ!
  ಧರ್ಮಗ್ರಂಥಗಳು ಅಂದರೆ ವೇದ, ಉಪನಿಷತ್ಗಳು ಇವೆ..
  ರಾಮಾಯಣ, ಮಹಾಭಾರತಗಳು ಬೃಹತ್ ನೀತಿ ಕಥೆಗಳು ಅನ್ನಬಹುದು, ಅದರಲ್ಲಿ ಒಳ್ಳೆಯದು, ಕೆಟ್ಟದ್ದು ಎಲ್ಲವು ಇದೆ, ಎಲ್ಲ ರಸಗಳು ಅವುಗಳಲ್ಲಿ ಇರೋದಕ್ಕೆ ಅವು ಜನಪ್ರಿಯವಾಗಿ ನಮ್ಮ ಮನಸ್ಸಿನಲ್ಲಿ ಉಳಿದಿರೋದು, ಬರಿ ನೀತಿಭೋದೆ ಮಾತ್ರ ಇದ್ದಿದ್ದರೆ ಅವುಗಳನ್ನು ಈಗ ಓದಿರುವ ೧% ಜನ ಕೂಡ ಓದುತ್ತಿರಲಿಲ್ಲ..
  ರಾಮಾಯಣ, ಮಹಾಭಾರತಗಳಿಂದ ಕಲಿಯಬೇಕಾದುದಕ್ಕಿಂತ ಕಲಿಯಬಾರದ್ದೇ ಹೆಚ್ಚಾಗಿ ಇರಬಹುದು, ಆ ಗ್ರಂಥಗಳ ಉದ್ದೇಶ ಕೂಡ ಅದೇ ಇರಬಹುದು! ಅವುಗಳಿಂದ ಏನು ಕಲಿಯಬೇಕು, ಏನು ಕಲಿಯಬಾರದು ಅನ್ನೋದು ಅವರವರ ಮನೋಧರ್ಮಕ್ಕೆ ಬಿಟ್ಟಿದ್ದು, ನಮ್ಮ ಆದರ್ಶವಾಗಿ ಧರ್ಮರಾಯ ಬೇಕೋ, ದುಶ್ಯಾಸನ ಬೇಕೋ ಅನ್ನೋದನ್ನು ಓದಿದವನು ನಿರ್ಧರಿಸಬೇಕು, ಅದು ಬಿಟ್ಟು ಅದರ ಬಗ್ಗೆ ನಿಮ್ಮಂತೆ ತೀರ್ಮಾನ ಕೊಡುವುದು ಬಾಲಿಶ!
  ಆ ಭಗವಾನ್ ಸಿಂಡ್ರೋಮ್ ಅಷ್ಟೇ!

 8. Girijashastry says:

  ನಾವೇ ಹಾಕಿಕೊಂಡ ವ್ಯವಸ್ಥೆಯ ಚೌಕಟ್ಟನ್ನು ನಾವೇ ಹೇಗೆ ಮುರಿದಿದ್ದೇವೆ ಹಾಗೆ ಮುರಿಯುವುದಿದ್ದರೂ ಪತಿಪತ್ನಿಯರಿಬ್ಬರ ಒಪ್ಪಿಗೆಯೂ ಬೇಕು ಎನ್ನುವುದಕ್ಕೆ ಕೆಲವು ಉದಾಹರಣೆಗಳನ್ನು ಲೇಖಕರು ಕೊಟ್ಟಿದ್ದಾರೆ ಅಷ್ಟೇ. ಆ ಉದಾಹರಣೆಗಳು ಕೇವಲ ರಾಮಾಯಣ ಮಹಾ ಭಾರತಗಳಿಂದ ಮಾತ್ರ ಆಯ್ದಿಲ್ಲ ಎನ್ನುವುದು ಲೇಖನವನ್ನು ಪೂರ್ತಿ ಓದಿದ ಯಾರಿಗಾದರೂ ತಿಳಿಯುವ ಅಂಶ.
  ಸನಾತನವಾದದ್ದೆಲ್ಲವೂ ಶ್ರೇಷ್ಠ ಎಂದು ಅನುಸರಿಸಿದರೆ ಅದು ನಮ್ಮ hypocrisy ಆಗುತ್ತದೆ. ಅಥವಾ ಪಿತೃಪ್ರಧಾನ ಸಮಾಜಕ್ಕೆ ಈ hypocrisy ಯೇ ಪ್ರಿಯವೇನೋ.

 9. sriranga yalahanka says:

  (೧) ರಾಮಾಯಣ ಮತ್ತು ಮಹಾಭಾರತದ ಬಗ್ಗೆ ಪ್ರತಿಕ್ರಿಯಿಸುತ್ತಿರುವ ಈ ನಮ್ಮಲ್ಲಿ ಸುಮಾರು ನಲವತ್ತು,ಐವತ್ತು,ಅರವತ್ತು ವಯೋಮಾನದವರಿದ್ದರೆ ,ನಾವುಗಳು ನಮ್ಮ ಬಾಲ್ಯದಲ್ಲಿ ಅವುಗಳ ಬಗ್ಗೆ ತಿಳಿದುಕೊಂಡಿದ್ದು ‘ಚಂದಮಾಮ’, ‘ಬಾಲಮಿತ್ರ’,ಮತ್ತು ಅಂಗಡಿಗಳಲ್ಲಿ ಸಿಗುತ್ತಿದ್ದ ಬಾಲ ರಾಮಾಯಣ, ಬಾಲ ಮಹಾಭಾರತ, ಪುಸ್ತಕಗಳಲ್ಲಿ. ಟಿವಿ ಬಂದಮೇಲೆ ಅದರಲ್ಲಿ ಪ್ರತಿವಾರ ಬರುತ್ತಿದ್ದ ರಾಮಾಯಣ ಮತ್ತು ಮಹಾಭಾರತ ಸೀರಿಯಲ್ ಗಳ ಮೂಲಕ. ಎ.ಆರ್ . ಕೃಷ್ಣಶಾಸ್ತ್ರಿಗಳ ‘ವಚನ ಭಾರತ’ದ ಮೂಲಕ. ಆಮೇಲೆ ಯೌವನಕ್ಕೆ ಕಾಲಿರಿಸಿದ ಮೇಲೆ ,ಓದುವ ಆಸಕ್ತಿಯಿದ್ದವರು ರಾಮಾಯಣ,ಮಹಾಭಾರತಗಳು ಜೀವವಿರೋಧಿ ಕೃತಿಗಳು ಅವುಗಳನ್ನು ಓದುವುದು ತಪ್ಪು ಎಂದು ಬರೆದ ಲೇಖನಗಳು ಮತ್ತು ಪುಸ್ತಕಗಳ ಮೂಲಕ. ಬಾಲ್ಯದ ಓದು ಪ್ರಾಥಮಿಕ ಹಂತದ್ದಾದರೆ ಯೌವನದ ಓದು ಋಣಾತ್ಮಕ ನೆಲೆಯದ್ದು. ಸಂಸ್ಕೃತದಲ್ಲಿರುವ ಮೂಲ ವ್ಯಾಸ ಮಹಾಭಾರತ ಮತ್ತು ವಾಲ್ಮೀಕಿ ರಾಮಾಯಣವನ್ನು ಆಸಕ್ತಿಯಿಂದ ಓದಿರುವವರು ಇಲ್ಲವೆಂದಲ್ಲ. ಇದ್ದಾರೆ. ಅವರುಗಳು ಈಗ ನಡೆಯುತ್ತಿರುವ ಚರ್ಚೆಯಲ್ಲಿ ಭಾಗವಹಿಸಿದ್ದಾರೋ ಇಲ್ಲವೋ ತಿಳಿಯದು. ಭಾಗವಹಿಸಿದ್ದರೆ ಅವರ ಕ್ಷಮೆ ಬೇಡಿ ಮುಂದಿನ ಈ ಕೆಲವು ಮಾತುಗಳನ್ನುಆಡುತ್ತಿರುವೆ. ಭೈರಪ್ಪನವರು ಮೂಲ ಮಹಾಭಾರತವನ್ನು ಆಧರಿಸಿ ಬರೆದಿರುವ ‘ಪರ್ವ ‘ ಕಾದಂಬರಿಯನ್ನು ಈ ಚರ್ಚೆಯಲ್ಲಿ ಭಾಗವಹಿಸಿರುವವರು ಓದಿರಬಹುದು; ಅಥವಾ ನಾನಾ ಕಾರಣಗಳಿಂದ ಓದದೇಯಿರಲೂಬಹುದು. ಒಂದು ಸಾಹಿತ್ಯ ಕೃತಿ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಿಯಮವೇನೂ ಇಲ್ಲವಲ್ಲ. ಆ ಕಾದಂಬರಿಯನ್ನು ಓದಿ ಎಂದು ಹೇಳುವುದೂ ಈ ನನ್ನ ಪ್ರತಿಕ್ರಿಯೆಯ ಉದ್ದೇಶವೂ ಅಲ್ಲ. . ನನ್ನ ಸ್ನೇಹಿತರೊಬ್ಬರು ಪರ್ವ ಕಾದಂಬರಿಗಿಂತ ಭೈರಪ್ಪನವರು ಬರೆದಿರಿರುವ ‘ಪರ್ವ ಬರೆದಿದ್ದು’ ಎಂಬ ಲೇಖನವೇ ಚೆನ್ನಾಗಿದೆ ಎಂದಿದ್ದೂ ಇದೆ. ಇದು ಒಂದು ಭಾಗ. ಮತ್ತೊಂದು ಪರ್ವ ಕಾದಂಬರಿಯ ಬಗ್ಗೆ ಬಂದಿರುವ ‘ಪರ್ವ:ಒಂದು ಸಮೀಕ್ಷೆ’ ( ಸಂ: ವಿಜಯ , ಪ್ರ; ಇಳಾ ಪ್ರಕಾಶನ , ಬೆಂಗಳೂರು) ಪುಸ್ತಕದಲ್ಲಿರುವ ಬನ್ನಂಜೆ ಗೋವಿಂದಾಚಾರ್ಯರ ಲೇಖನ. ನನ್ನ ಈ ಪ್ರತಿಕ್ರಿಯೆ ಆ ಲೇಖನಕ್ಕೆ ಸಂಪೂರ್ಣ ಋಣಿಯಾಗಿದೆ. ಅದನ್ನು ಸ್ಮರಿಸುವುದು ನನ್ನ ಕರ್ತವ್ಯ. ಬನ್ನಂಜೆ ಅವರು ಸನಾತನವಾದಿಗಳಲ್ಲ. ಹಿಪೊಕ್ರೇಟ್ ಸಹ ಅಲ್ಲ. ಅವರ ವಿದ್ವತ್ತಿನ ಬಗ್ಗೆ ಯಾರೂ ಅನುಮಾನಪಡುವ ಹಾಗಿಲ್ಲ. (ಪ್ರತಿಕ್ರಿಯೆ ಸ್ವಲ್ಪ ಜಾಸ್ತಿಯಿರುವುದರಿಂದ ಎರಡನೇ ಭಾಗದಲ್ಲಿ ಮುಂದುವರಿದಿದೆ… )

 10. Sriranga Yalahanka says:

  (೨)ಕೆ ರಘುನಾಥ್ ಅವರ ಲೇಖನಕ್ಕೆ ಪ್ರತಿಕ್ರಿಯಿಸಿರುವ ಒಬ್ಬ ಓದುಗರು ‘ನಾವೇ ಹಾಕಿಕೊಂಡ ವ್ಯವಸ್ಥೆಯ ಚೌಕಟ್ಟನ್ನು ನಾವೇ ಹೇಗೆ ಮುರಿದಿದ್ದೇವೆ …… ‘ ಇತ್ಯಾದಿಯಾಗಿ ಹೇಳಿದ್ದಾರೆ. ಅವರ ದೃಷ್ಟಿಯಲ್ಲಿ ‘ವ್ಯವಸ್ಥೆ’ ಎಂದರೆ ರಾಮಾಯಣ ಹಾಗು ಮಹಾಭಾರತದ ಕಾಲದ ವ್ಯವಸ್ಥೆ ಈಗಲೂ ಇದೆ ಎಂದು ಅರ್ಥವೇ? ಮೂಲ ಮಹಾಭಾರತದ ಕಾಲದಲ್ಲಿ ಸಾಮಾನ್ಯವಾಗಿ ಇತ್ತು ಹಾಗೂ ಅದು ಆ ಕಾಲದ ಧಾರ್ಮಿಕ, ರಾಜಕೀಯ ವ್ಯವಸ್ಥೆ ಒಪ್ಪಿಕೊಂಡ ಸಂಗತಿ ಎಂದು ಆ ಕಾವ್ಯಗಳಲ್ಲಿ ಹೇಳಿರುವ ಮೂರ್ನಾಲಕ್ಕು ಸಂಗತಿಗಳತ್ತ ನೋಡೋಣ.
  (ಅ)ಕಾನೀನ:- ಮದುವೆಗೆ ಮುಂಚೆ ಗರ್ಭವತಿಯಾಗಿ ಮಕ್ಕಳನ್ನು ಪಡೆಯುವುದು. ಉದಾ:-ಕರ್ಣ
  (ಆ)ನಿಯೋಗ:- ಮದುವೆಯಾದ ಮೇಲೆ ಪತಿಯಿಂದ ಮಕ್ಕಳನ್ನು ಪಡೆಯಲು ಆಗದಿದ್ದರೆ, ಪತಿಯೇ ತಮ್ಮ ವಂಶ ಬೆಳೆಯಲಿ ಎಂದು ಬೇರೊಬ್ಬರ ಮೂಲಕ ತನ್ನ ಹೆಂಡತಿಗೆ ಗರ್ಭದಾನ ಮಾಡಿಸುವುದು.
  ಕಾನೀನ ಮತ್ತು ನಿಯೋಗದ ‘ವ್ಯವಸ್ಥೆಯ ಚೌಕಟ್ಟು ‘ ಈಗಿನ ಕಾಲದಲ್ಲಿ ಇದೆಯೇ?ಒಂದು ವೇಳೆ ಮದುವೆಗೆ ಮುಂಚೆ ಈಗ ಒಬ್ಬಳು ಯುವತಿ ಗರ್ಭವತಿಯಾದರೆ ನಮ್ಮ ಸದ್ಯದ ಸಾಮಾಜಿಕ ಜೀವನದಲ್ಲಿ ಆಕೆ ಮತ್ತು ಆಕೆಯ ತಂದೆ ತಾಯಿ ಇನ್ನಿತರ ಸಂಬಂಧಿಕರ ಸ್ಥಿತಿ ಏನೆಂಬುದನ್ನು ವಿವರಿಸುವ ಅಗತ್ಯವಿಲ್ಲ. ಮಹಾಭಾರತದ ಕಥೆ ನಡೆಯುವ ವೇಳೆಗೇ ಈ ಪದ್ಧತಿ ಬಗ್ಗೆ ಸಮಾಜದಲ್ಲಿ ಅಂತಹ ಒಳ್ಳೆಯ ಅಭಿಪ್ರಾಯವಿರಲಿಲ್ಲ.ಕಾನೀನ ಮಕ್ಕಳಿರುವ ರಾಜಪುತ್ರಿಯರನ್ನು ‘ಇದು ನಮ್ಮ ಸನಾತನ ಕಾಲದ ಪದ್ಧತಿ ‘ಎಂದು ರಾಜವಂಶದ ಪುತ್ರರು ಮದುವೆಯಾಗುತ್ತಿರಲಿಲ್ಲ. ಅದು ‘ಯುಗ ಸಂಘರ್ಷದ ಕಾಲ ‘. ಕುಂತಿಗೆ ಮದುವೆಗೆ ಹುಟ್ಟಿದ ಮಗುವನ್ನು (ಕರ್ಣ) ಸೂತರೊಬ್ಬನ ಸಂಸಾರಕ್ಕೆ ಕೊಟ್ಟಿದ್ದಕ್ಕೆ ಅದೇ ಕಾರಣ.
  (ಇ) ಜೂಜು ಮತ್ತು ದ್ರೌಪತಿಯ ವಸ್ತ್ರಾಪಹರಣ :-ಧರ್ಮರಾಯ ಜೂಜಾಡಿದ್ದು,ಅದರಲ್ಲಿ ಸೋತಿದ್ದು ಮತ್ತು ಅದರಿಂದ ಪ್ರಾರಂಭವಾದ ಅವರ ಕಷ್ಟ ಪರಂಪರೆಯನ್ನು ಸದ್ಯ ನಾವು ಚರ್ಚಿಸುತ್ತಿರುವ ರಘುನಾಥ್ ಅವರು ತಮ್ಮ ಲೇಖನದಲ್ಲಿ’ ಧರ್ಮರಾಯ ತನ್ನ ವಿವೇಕವನ್ನು (ರಾಜಧರ್ಮ) ಬದಿಗೊತ್ತಿ …….. ‘ ಇತ್ಯಾದಿ ಹೇಳಿದ್ದಾರೆ. ಜೂಜಾಡುವುದು ಆ ಕಾಲದಲ್ಲಿ ಕಾನೂನು ಒಪ್ಪಿದ ರಾಜಧರ್ಮವಾಗಿತ್ತು. ಅದಕ್ಕೆ ಪಣವಾಗಿ ತನ್ನ ಚರ, ಸ್ಥಿರ ಆಸ್ತಿ ಹೆಂಡತಿ ಮಕ್ಕಳು ತಮ್ಮಂದಿರನ್ನು ಇಡುವುದೂ ಸಹ. ಸೋತ ಮೇಲೆ ಹೆಂಡತಿ ಗೆದ್ದವನ ಸೊತ್ತು. ಆಕೆ ದಾಸಿಗೆ ಸಮಾನ. ಆ ಕಾಲದಲ್ಲಿ ತಾವೇ ಜಾರಿಗೆ ತಂದಿದ್ದ ಕಾನೂನು, ರಾಜಧರ್ಮದ ಕಾರಣದಿಂದ ದ್ರೌಪತಿಯ ವಸ್ತ್ರಾಪಹರಣವಾಗುತ್ತಿದ್ದರೂ ಭೀಷ್ಮ ಮುಂತಾದವರು ಸುಮ್ಮನಿರಬೇಕಾಗಿತ್ತು(ಈ ನನ್ನ ಪ್ರತಿಕ್ರಿಯೆಯ ಮೂರನೇ ಹಾಗೂ ಕೊನೆಯ ಭಾಗ ……..)

 11. sriranga yalahanka says:

  (೩) ಈಗಿನ ಕಾಲದಲ್ಲಿ ಜೂಜು,ಮಟ್ಕಾ, ಕ್ರಿಕೆಟ್ ಆಟದ ಮೇಲೆ ಬೆಟ್ಟಿಂಗ್ ಕಟ್ಟುವುದು ಕಾನೂನುಬಾಹಿರ. ಸುಮಾರು ವರ್ಷಗಳ ಹಿಂದೆ ನಮ್ಮ ಸರ್ಕಾರವೇ ಲಾಟರಿ ನಡೆಸುತ್ತಿತ್ತು. ಅದಕ್ಕಾಗಿ ಸರ್ಕಾರದಲ್ಲಿ ಒಂದು ವಿಭಾಗವೇ ಇತ್ತು. ಕಾಲ ಕಳೆದಂತೆ ಅದರಿಂದ ಜನರ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರಲು ಶುರುವಾಯಿತು. ಲಾಟರಿ ಚಟಕ್ಕೆ ಬಿದ್ದವರ ಸಂಸಾರಗಳು ಬೀದಿ ಪಾಲಾದವು. ಆಗ ಸರ್ಕಾರ ಲಾಟರಿಯನ್ನು ನಡೆಸುವುದನ್ನು ನಿಲ್ಲಿಸಿತು. ಈಗ ಬೇರೆ ರಾಜ್ಯದ ಲಾಟರಿ ಟಿಕೆಟ್ಟುಗಳನ್ನು ನಮ್ಮ ರಾಜ್ಯದಲ್ಲಿ ಮಾರಾಟಮಾಡುವುದೂ ಕಾನೂನುಬಾಹಿರ ಕೃತ್ಯ. ಬನ್ನಂಜೆ ಗೋವಿಂದಾಚಾರ್ಯರು ಪರ್ವ ಕಾದಂಬರಿಯನ್ನು ಕುರಿತ ತಮ್ಮ ಲೇಖನದಲ್ಲಿ ಒಂದು ಕಡೆ ‘ ಯಾವುದನ್ನು ನಾವು ಧರ್ಮವೆಂದು ತಿಳಿದು ಅದರಂತೆ ನಡೆಯುತ್ತಿರುತ್ತೇವೆಯೋ ಅದು ಅಧರ್ಮವೂ ಆಗಿರಬಹುದು. ಇದನ್ನು ಮಹಾಭಾರತದ ಕಥೆ ಹೇಳುತ್ತದೆ’ ಎಂದಿದ್ದಾರೆ. ಬನ್ನಂಜೆ ಅವರು ಸನಾತನ ಧರ್ಮವೇ ಶ್ರೇಷ್ಠ ಎಂದು ತಿಳಿದವರಲ್ಲ; ಅವುಗಳನ್ನು ಪೂಜೆ ಮಾಡುವವರಲ್ಲ. ಬದಲಾಗಿ ಮಹಾಭಾರತದ insight ಏನೆಂದು ತಿಳಿದವರು. ಇನ್ನೂ ಸಾಕಷ್ಟು ಉದಾಹರಣೆಗಳ ಮೂಲಕ ಯಾವುದನ್ನೂ ಪೂರ್ತಿ ತಿಳಿಯದೆ ಹಿಂದಿನದೆಲ್ಲವನ್ನೂ ಟೀಕಿಸುವುದೇ ಆಧುನಿಕತೆ ,ವೈಚಾರಿಕತೆ ಎಂದು ಬೀಗುವ ನಮ್ಮ ಕಾಲದ hypocrisyಯನ್ನು ಹೇಳುತ್ತಾ ಹೋಗಬಹುದು. ಆದರೆ ಈಗಾಗಲೇ ನನ್ನ ಪ್ರತಿಕ್ರಿಯೆ ಸಾಕಷ್ಟು ಉದ್ದವಾಯಿತು.

 12. Sriranga Yalahanka says:

  ಮರೆತಮಾತು:- ನನ್ನ ಪ್ರತಿಕ್ರಿಯೆಯ ಎರಡನೇ ಭಾಗದಲ್ಲಿ ಮಹಾಭಾರತದ ಕಾಲದಲ್ಲಿತ್ತೆಂದು ಹೇಳಿರುವ ನಿಯೋಗ ಪದ್ಧತಿ ಮೂಲಕ ಮಕ್ಕಳನ್ನು ಪಡೆದ ವಿಷಯಕ್ಕೆ ಒಂದು ಉದಾಹರಣೆ:- ಧರ್ಮರಾಯ, ಭೀಮ, ಅರ್ಜುನ, ನಕುಲ ಮತ್ತು ಸಹದೇವ. ಇವರು ಪಾಂಡುರಾಜನ ಸಮ್ಮತಿಯಿಂದ ಕುಂತಿ ಬೇರೆಯವರಿಂದ ನಿಯೋಗದ ಮೂಲಕ ಪಡೆದ ಮಕ್ಕಳು.

 13. Vijendra says:

  Melkanda granthagaleredu agina kaalamaanakke anvayisidanthe baredavu.tappu sarigaleredannu bareda kaaranave granthagalige moulvikatheyannu tandive. Dharma and vyavasteya nibandenegau bere bere irabahudada saadyategalannu manassinalli irisikonde odabahudaada granthagalu.Bere naagarikatheya barahalige holisinodi.Bari ee nelada REETI neetigalannu Tikisi buddijivivigalennisuva brame saakasthu janarigide.!!!!

 14. says:

  ರಾಜರು ಆಶ್ರಮದ ಧರ್ಮಕ್ಕೆ ಬದ್ದರಾಗಬೇಕಾದ ಅಗತ್ಯವಿಲ್ಲವೇ? ನೀವು ಉಲ್ಲೇಖಿಸಿದ ಬನ್ಶಂಜೆಯವರ ಹೇಳಿಕೆ ಮಹಾಭಾರತಕ್ಕೆ ಅನ್ವಹಿಸುತ್ತದಲ್ಲವೇ?ವ್ಯಾಸನಮಗನೆಂದುಕರೆದುಕೊಳ್ಳುವ ಕುಮಾರವ್ಯಾಸ ಧರ್ಮರಾಯನನ್ನು ಕುರಿತು “ಮುನಿಯ ಮಾತಿನ ಬಲೆಗೆ ಸಿಲುಕಿತು ಜನಪತಿಯ ಚೈತನ್ಯಮೃಗ”ಎಂದು ಏಕೆ ಕರೆಯುತ್ತಾನೆ?ನಾನು ಗೌತಮ ಬುದ್ಧ ಇಸ್ಲಾಂ ನ ಕುರಿತು ಆಶ್ರಮದ ಧರ್ಮದ ಉಲ್ಲಂಘಿಸಿದ್ದನ್ನು ಯಾಕೆ ಗಮನಿಸುವುದಿಲ್ಲ.ಬುದ್ದಿಜೀವಿಗಳಾಗುವುದು ಅಪರಾಧ ವೇ? ನಮ್ಮ ಆಚಾರ್ಯರೆಲ್ಲ ಇತರರ ತತ್ವಗಳ ಖಂಡನ ಮಂಡನಗಳಲ್ಲಿ ತೊಡಗಿದರು.ಅವರೆಲ್ಲ ಹಾಗಾದರೆ?

 15. Sriranga Yalahanka says:

  ಬುದ್ಧಿಜೀವಿಗಳು ಎಂಬ special category ಇದೆಯೆಂದು ನಾನು ಒಪ್ಪುವುದಿಲ್ಲ. ಕಾರಣ ಅಂತಹ name plate ಹಾಕಿಕೊಂಡವರನ್ನು ಬಿಟ್ಟರೆ ಉಳಿದವರೆಲ್ಲಾ ಬುದ್ಧಿಯಿಲ್ಲದವರು ಎಂಬ ಅರ್ಥ ಬರುತ್ತದೆ!! ಪಶು ಪಕ್ಷಿಗಳಿಗೂ ಬುದ್ಧಿಯಿಲ್ಲವೆ? . ‘ರ’ ಅವರೆ ನನ್ನ ಪ್ರತಿಕ್ರಿಯೆಯ ಅಂಶಗಳನ್ನು ತಾವು ಗಮನಿಸಿಲ್ಲವೆಂದು ನನ್ನ ಭಾವನೆ. ಮಹಾಭಾರತದ ಕಥೆ ಮನುಷ್ಯನ basic instincts ಅನ್ನು ಹೇಳುತ್ತದೆಯೇ ಹೊರತು ನೀತಿ ಪಾಠವನ್ನಲ್ಲ. ಯಾಯಾತಿ, ಶಂತನು, ದುರ್ಯೋಧನ, ದುಶ್ಯಾಸನ, ಧರ್ಮರಾಯ, ಅರ್ಜುನ, ಇತ್ಯಾದಿಯವರ ಅಂಶಗಳೆಲ್ಲಾ ನಮ್ಮ ಭಾವಕೋಶದಲ್ಲಿ ಸುಪ್ತವಾಗಿರುತ್ತವೆ. ಸಮಾಜ, ಕಾನೂನಿಗೆ ಹೆದರಿ ಹಲವರು ಸುಮ್ಮನಿದ್ದಾರೆ. ಕೆಲವರು ಪತ್ರಿಕೆ, ನ್ಯೂಸ್ ಚಾನೆಲ್ ಗಳ crime storyಗಳಲ್ಲಿ ಸುದ್ದಿಯಾಗುತಾರೆ. ಅಷ್ಟೇ ವ್ಯತ್ಯಾಸ. ನಾನು ಉದಾಹರಿಸಿದ ಬನ್ನಂಜೆ ಗೋವಿಂದಾಚಾರ್ಯರ ಲೇಖನವನ್ನು ತಾವು ಓದಿರುವಿರಿ ಎಂದು ಭಾವಿಸುವೆ.

 16. ರಘುನಾಥ says:

  ನೀವೇಹೇಳಿದ ಮೂಲಭೂತ ಪ್ರವೃತ್ತಿಗಳನ್ನು ತಣಿಸುವ ಸುವ್ಯವಸ್ಥಯೇ ಆಶ್ರಮಧರ್ಮ.ಆ ಕಾಲದಲ್ಲಿ ಅದು ಜಾರಿಯಲ್ಲಿತ್ತು ಎನ್ನುವುದಕ್ಕೆ ಆಧಾರ ದೃತರಾಷ್ಟ್ರ ಗಾಂಧಾರಿ ಕುಂತಿಯರೆಲ್ಲ ವಾನಪ್ರಸ್ತಕ್ಕೆ ಹೋಗಿದ್ದು.ಅದನ್ನು ಸರಿಯಾಗಿ ಅನುಸರಿಸದೇ ಹೋಗಿದ್ದರ ಪರಿಣಾಮಗಳ ವಿಶ್ಲೇಷಣೆಯೇ ನನ್ನ ಲೇಖನ.ನೀವು ಕಾಂತಾಸಂಮಿತಿಯ ಪರಿಕಲ್ಪನೆಯನ್ನು ಗಮನಿಸಿದರೆ ನೀತಿಭೋದೆಯೇ ಅವುಗಳ ಉದ್ದೇಶವೆಂದು ಮನದಟ್ಟಾಗುತ್ತದೆ ಇಲ್ಲದಿದ್ದರೆ “ಇದು ಧರ್ಮವೆಂದು ಯಾರೂ ನನ್ನ ಮಾತನ್ನು ಕೇಳುತ್ತತಿಲ್ಲ:”ವೆಂದು ವ್ಯಾಸ ಕೈಯೆತ್ತಿ ಕೂಗ ಬೇಕಾಗಿರಲಿಲ್ಲವಲ್ಲವೇ. ಬನ್ನಂಜೆಯವರ ಲೇಖನ ಓದಿಲ್ಲ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

Leave a Reply

%d bloggers like this: