fbpx

ಜೋಯಿಸರಿಗೆ ಅಂಜನದಲ್ಲಿ ಕಂಡದ್ದು..

ಸುರೇಶ್ ಕಂಜರ್ಪಣೆ 

ಮೋದಿಯ ಮುಂದಿನ ಹೆಜ್ಜೆಗತಿ ಸ್ಪಷ್ಠವಾಗಿದೆ. 2014ರಲ್ಲಿ ಅಧಿಕಾರಕ್ಕೆ ಬಂದಾಗ ಎರಡು parallel ನಡೆಗಳನ್ನು ಯೋಜಿಸಲಾಗಿತ್ತು.

1. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಘೋಷಣೆಯ ಮೂಲಕ ಕನಸುಗಳನ್ನು ಮಾರುವುದು. ಸಾಧ್ಯವಾದರೆ UPA ಯೋಜನೆಗಳನ್ನು ದ್ರುತ ಗತಿಯಲ್ಲಿ ಮುಂದುವರಿಸುವುದು.

2. ಇನ್ನೊಂದೆಡೆ RSS ಅಜೆಂಡಾವನ್ನು ಸಾಮಾಜಿಕವಾಗಿ ಮುಂದೊತ್ತುವುದು.

ಅಭಿವೃದ್ಧಿಯ ಅಜೆಂಡಾದ ಶಕ್ತಿಯ ಪರಿ ಎಂಥಾದ್ದೆಂದರೆ ಅದು ನೆಟ್ಟಗಿದ್ದರೆ ಜನ ಕೋಮು ವಿಷಯದಲ್ಲಿ ತಲೆ ಕೆಡಿಸಿಕೊಳ್ಳುವುದಿಲ್ಲ.. ಆದರೆ ನಾಲ್ಕು ವರ್ಷದ ಬಳಿಕ ತಿರುಗಿ ನೋಡಿದರೆ ಮೋದಿಯ ಆಡಳಿತಾತ್ಮಕ ಅನನುಭವ ಅವರಿಗೆ ಸುತ್ತಿಕೊಂಡದ್ದು ಕಾಣಿಸುತ್ತದೆ. ಇದ್ದಲ್ಲೇ ಇದ್ದರೂ ಪರವಾಗಿಲ್ಲ. ತೈಲ ಬೆಲೆ ಕನಿಷ್ಠ ಇದ್ದ ಕಾರಣ ಮೋದಿಯವರ ಈ ಮಿತಿಗಳು ಸ್ಫೋಟಿಸಲಿಲ್ಲ. ಆದರೆ ಈ ವರ್ಷದ ನಡೆ ಕಂಡರೆ ಆರ್ಥಿಕತೆ ಇನ್ನೂ ಹದಗೆಡುತ್ತೆ.

ಮೋದಿಯವರಿಗಿದ್ದ ಬಲು ದೊಡ್ಡ ಆಸೆ, ಮುಂದಿನ ಸಾಲಿಗೆ ರೈತರ ಸಾಲ ಮನ್ನಾ ಮತ್ತು ಸ್ವಸಹಾಯ ಸಂಘದ ಮಹಿಳೆಯರ ಸಾಲ ಮನ್ನಾ. ಇವೆರಡಕ್ಕೂ ಬೇಕಾದ ಕಾಸು ಸರ್ಕಾರಕ್ಕೆ ಜಮೆಯಾಗಿಲ್ಲ!! ಸೈನ್ಯದ ಅವಶ್ಯಕತೆಗೇ ದುಡ್ಡು ಕೊಡಲಾರದ ಸ್ಥಿತಿ ಇದೆ.

ಹಾಗಿದ್ದರೆ ಮುಂದಿನ ವರ್ಷ? 

ಕರ್ನಾಟಕದಲ್ಲಿ ಅವರು ಆಡಿದ ಮಾತಿನ ಮಾದರಿ ಮೋದಿ ಮುಂದುವರಿಸುವುದು ಖಚಿತ. ಸುಳ್ಳುಗಳನ್ನು ಹೇಳಿ ಮುಂದಕ್ಕೆ ಓಡುವುದು. ಅದನ್ನು ನಾವೆಲ್ಲಾ ವಿಮರ್ಶಿಸುವಾಗ ಇನ್ನೊಂದು ಸುಳ್ಳು. ಹೀಗೆ.. ಇದು ಇನ್ನಷ್ಟು ಕರ್ಕಶವಾಗುತ್ತಾ ಹೋಗುತ್ತದೆ. ಮಾಧ್ಯಮವನ್ನು ಹಿಡಿತದಲ್ಲಿಟ್ಟುಕೊಂಡ ಕಾರಣ ಸದಾ ಮೋದಿಯವರ ಮಾತುಗಳನ್ನು ಎಲ್ಲರೂ ಯಾವಾಗಲೂ ಕೇಳುವ ಸ್ಥಿತಿ ಹೆಚ್ಚುತ್ತದೆ.

ಆದರೆ RSS ಹೆದರಿರುವುದು ಅದರದೇ ವಿಶ್ಲೇಷಣೆಗೆ. 9 ರಾಜ್ಯಗಳಲ್ಲಿ ಭಾಜಪ saturation ತಲುಪಿದೆ. ಇನ್ನು ಅಲ್ಲಿ ಗೆಲ್ಲಲು ಸೀಟುಗಳಿಲ್ಲ. ಅಷ್ಟು ಗೆದ್ದೂ ಭಾಜಪದ ಸ್ಥಾನ ಬಲ 280. ಮುಂದಿನ ವರ್ಷ 50 ಸೀಟು ಕಡಿಮೆ ಆದರೂ ಮೋದಿಯವರು ಮನಮೋಹನ್ ಸಿಂಗ್ ಅವರಿಗಿಂತಲೂ ದಯನೀಯ ಸ್ಥಿತಿ ತಲುಪುತ್ತಾರೆ. 2-3 ಸ್ಥಾನ ಬಲ ಇರುವ ಗೌಡರಿಂದ ಹಿಡಿದು ಶಿವಸೇನೆವರೆಗೆ ಪ್ರಾದೇಶಿಕ ದಿಂಡಾಳುಗಳು ಮೋದಿ ಅವರನ್ನು ಬೆಂಬಲದ ಹೆಸರಿನಲ್ಲಿ ಬೆದರಿಸಿ ಅವನ್ನು ಹಿಡಿ ಗಾತ್ರಕ್ಕೆ ಇಳಿಸುತ್ತಾರೆ. ಈ ದುಸ್ವಪ್ನದ ಸಾಧ್ಯತೆ RSSಗೆ ಕಂಡಿದೆ

ಆದ್ದರಿಂದಲೇ ಕರ್ನಾಟಕ ಮೋದಿಗೆ ಮುಖ್ಯ. ಇಲ್ಲಿ ಪ್ರಯೋಗಿಸಿದ ಸುಳ್ಳುಗಳ ಪ್ರಯೋಗ ಮುಖ್ಯ. ಎಲ್ಲೂ ಏನು ಮಾಡುತ್ತೇನೆ ಎಂಬುದನ್ನು ಹೇಳದೇ, ಅವರು ಹೇಳಿದ ಸುಳ್ಳುಗಳನ್ನು ನಾವು ಹೆಕ್ಕಿ ತನಿಖೆ ಮಾಡುತ್ತಿರುವಾಗ ಇನ್ನೆಲ್ಲೋ ಇನ್ನೊಂದು ಸುಳ್ಳು ಎಸೆಯುತ್ತಿರುವ ತಂತ್ರ ಇದು.

ಇದನ್ನು ವ್ಯವಸ್ಥಿತವಾಗಿ ಹರಡಲು ಅವರ ಕನಸಿನ ಮಾಧ್ಯಮ ತಂಡ ಇದೆ. ಆದರೆ ಈ ತಂತ್ರ ಎಲ್ಲಾ ಕ್ರಿಕೆಟಿನ ಹೊಸ ತಂತ್ರದ ಹಾಗೆ..! ‘ದೂಸ್ರಾ’ ಒಮ್ಮೆ ಕಂಗೆಡಿಸುತ್ತೆ. ಆದರೆ ಆಮೇಲೆ ಎದುರಾಳಿಗಳು ಇದನ್ನು ಪ್ರಯೋಗಿಸುವ/ ಎದುರಿಸುವ ತಂತ್ರ ಕಲಿಯುತ್ತಾರೆ..

ಪರಿಸ್ಥಿತಿ ನಾಜೂಕಾಗುವುದು ಇನ್ನೊಂದು ಕಾರಣಕ್ಕೆ. ಈಗ ಬಳಸಿಕೊಳ್ಳುತ್ತಿರುವ OBC ಪಡೆ ಇಷ್ಟು ಕ್ರಿಯಾಶೀಲವಾಗಿರುವುದು doubt . ಪ್ರಾಯಶಃ ಮೋದಿಯವರ ಮುಂದಿನ ಹೆಜ್ಜೆ ದಲಿತರ ಬಗ್ಗೆ ಅಸಹನೆ ಇರುವ OBCಗಳನ್ನು ಇನ್ನಷ್ಟು ಪಳಗಿಸುವುದು.

ಆದ್ದರಿಂದಲೇ ಯುಪಿಯ ಠಾಕೂರರು ಜಾಠರು ಕೈಗೊಂಬೆಗಳಾಗಬಹುದು. ಜೊತೆಗೆ ತನ್ನನ್ನು ಸಹಿಸುತ್ತಿಲ್ಲ ಎಂಬ ಎದೆ ಬಡಕೊಳ್ಳುವ ನಾಟಕ ಹೆಚ್ಚುತ್ತದೆ.
ಆದರೆ ಮೋದಿಗೆ ಬಡಿದ ಶಾಪವೆಂದರೆ ಎಂದೂ ಯಾರಲ್ಲೂ honest ಆಗಿ ಮಾತಾಡಲಾಗದ ಅವರ ವ್ಯಕ್ತಿತ್ವ. ತನ್ನ ಕನಸುಗಳೆಂಬ ಕನಸುಗಳೂ ಡೈಲಾಗುಗಳೇ. ಇಂದಿರಾ ಗಾಂಧಿಯ ಸರ್ವಾಧಿಕಾರೀ ಪ್ರವೃತ್ತಿ ಹೇಗಿತ್ತೆಂದರೆ ಕೊನೆ ಕೊನೆಗೆ ಅವರಿಗೆ ರಾಜಕೀಯದಲ್ಲಿ ಗೆಳೆಯರೇ ಇರಲಿಲ್ಲ. ಮೋದಿ ಇದಕ್ಕಿಂತಲೂ ಕಠಿಣ ಸ್ಥಿತಿಗೆ ಬರುತ್ತಾರೆ. ಯಾಕೆಂದರೆ ಅವರಿಗೆ ವಿಷಯಾಧಾರಿತ ತಜ್ಞರ ಗೆಳೆತನವೂ ಇದ್ದಂತೆ ತೋರುತ್ತಿಲ್ಲ. ಸ್ವತಃ ತಜ್ಞತೆಯೂ ಇಲ್ಲ. ಅಧಿಕಾರಿಗಳ ಮೂಲಕ ಕಣ್ಣಿಡುವ ಪುರಾತನ ವಿದ್ಯೆಯ ಮೂಲಕ ಅವರು ಗುಜರಾತನ್ನು ನಿಭಾಯಿಸಿದ್ದು. ದೆಹಲಿ ಎಂಬ ನಾಯಕಸಾನಿ ಇದಕ್ಕೆ ಬಗ್ಗುವ ಗಿರಾಕಿ ಅಲ್ಲ!!

ಅತೀ ಜಾಣನನ್ನೂ ಯಾರೂ ನಂಬಲ್ಲ ಅಂತ ಹಳ್ಳಿಕಡೆ ಹೇಳುವುದಿದೆ.

ನಾಯಕ ನೆಲೆ ಕಳಕೊಳ್ಳುವುದಕ್ಕೆ ಮೂರು ಹಂತಗಳಿವೆ. ಮೊದಲು ಪಕ್ಷದೊಳಗೆ ಮೌನ ತಳಮಳ ಇರುತ್ತದೆ. ಬಳಿಕ ಪಕ್ಷದ ಎರಡನೇ ಹಂತದ ನಾಯಕರ ಮೂಲಕ ಗಾಸಿಪ್ಪು, ಹಳಹಳಿಕೆ ಮೂಲಕ ಇದು ಕಾರ್ಯಕರ್ತರನ್ನು ತಲುಪುತ್ತದೆ. ಆಮೇಲೆ ಅದು ಮತದಾರರನ್ನು ಈ ಕಾರ್ಯಕರ್ತರ ನೆಂಟರಿಷ್ಟರ ಉಭಯ ಕುಶಲೋಪರಿ ಮೂಲಕ ತಲುಪುತ್ತದೆ!! ಕಾಂಗ್ರೆಸ್ ಶಿಥಿಲವಾದದ್ದು ಹೀಗೆ. ಜನತಾ ದಳ ಶಿಥಿಲವಾದದ್ದೂ ಹೀಗೆ. ಇದಕ್ಕೆ ಐದಾರು ವರ್ಷ ತಗಲುತ್ತದೆ!! ನಾಳೆಗೇ ಜರುಗುವ ಪ್ರಕ್ರಿಯೆ ಅಲ್ಲ ಇದು!! ಯಾವುದೇ ದೈತ್ಯ ನಾಯಕರಿಗೆ ದೇವರು ಅಂಟಿಸಿದ expiry date ನ ಚೀಟಿ ಇದು!!

ಆದ್ದರಿಂದಲೇ
ಮುಂದಿನ ದಿನಗಳು ನಮಗೂ- ಮೋದಿಯವವರಿಗೂ ಸವಾಲಿನದ್ದು. !!!!

Leave a Reply