fbpx

ನಾನೇ ಆ ಮಗು..!

ಮಾಸದ ನೆನಪುಗಳ ನಡುವೆ ಅಮ್ಮನ ಕನವರಿಕೆ

 

 

 

ನಾ ದಿವಾಕರ

 

ಅಮ್ಮಅದೇಕೋ ತಾಯಿ, ಮಾತೆ ಎನ್ನುವ ಪದಕ್ಕಿಂತಲೂ ಈ ಪದದಲ್ಲಿ ಕಂಡುಬರುವ ಭಾವನಾತ್ಮಕ ಪ್ರತಿಧ್ವನಿ ಹೆಚ್ಚು ಅಪ್ಯಾಯಮಾನ ಎನಿಸುತ್ತದೆ.

ಬಾಲ್ಯದಿಂದಲೂ ಬಳಕೆಯಲ್ಲಿರುವ ಪದ ಎಂದೇನೂ ಅಲ್ಲ. ಈ ಪದದ ಹಿಂದಿನ ಭಾವಾರ್ಥ ಜೀವಾತ್ಮಗಳ ಸಂಬಂಧಗಳನ್ನು ಮೀರಿ ಮನಸನ್ನು ದಿಗಂತದಾಚೆಗೆ ಕೊಂಡೊಯ್ಯುತ್ತದೆ.

ನೋವುಂಡ ಮನಸ್ಸು , ಹರ್ಷಚಿತ್ತ ಮನಸ್ಸು , ಬಸವಳಿದ ಮನಸ್ಸು ಅಮ್ಮ ಎನ್ನುತ್ತಲೇ ತನ್ನ ಭಾವನೆಯನ್ನು ವ್ಯಕ್ತಪಡಿಸುತ್ತದೆ.

ಇಲ್ಲಿ ಅಮ್ಮ ಎಂದರೆ ಹೆತ್ತ ತಾಯಿ ಎಂದೇ ಅರ್ಥೈಸಬೇಕಿಲ್ಲ. ಏಕೆಂದರೆ ಅಮ್ಮ ಎನ್ನುವ ಪದ ಹೆರುವ, ಸಲಹುವ, ಪಾಲಿಸಿ ಪೋಷಿಸುವ ಜೀವದ ಹಂಗನ್ನು ಮೀರಿ ನಿಲ್ಲುವ ಒಂದು ಅಭಿವ್ಯಕ್ತಿ.  ಮನುಜ ಸಂಬಂಧಗಳನ್ನು ಮೀರಿ ನಿಲ್ಲುವ ಒಂದು ಅದ್ಭುತ ಭಾವುಕ ಶಕ್ತಿ ಅಮ್ಮ. ಈ ಅಮ್ಮನ ಹೃದಯದಲ್ಲಿ ಕರುಣೆಯ ಸಾಗರ , ಪ್ರೀತಿಯ ಗಣಿ, ಭಾವನೆಗಳ ಭಂಡಾರ, ಕಳಕಳಿಯ ಪ್ರವಾಹ, ತಾಳ್ಮೆಯ ಪರ್ವತ, ಸಹನೆಯ ಶಿಖರ ಎಲ್ಲವೂ ಅಡಗಿರುತ್ತದೆ. ಇದರೊಂದಿಗೇ ಭಾವನೆಗಳ ತೊರೆಗಳು ಅಮ್ಮನ ಹೃದಯದಲ್ಲಿ ಸದಾ ಪ್ರವಹಿಸುತ್ತಲೇ ಇರುತ್ತದೆ.

ನಾನು ಕೇಳಿದ್ದನ್ನ ಕೊಡಿಸೋಕಾಗಲ್ಲ ನೀನೆಂತಹ ಅಮ್ಮಎಂದು ಹುಂಬ ಮಗನೊಬ್ಬ ಮೂದಲಿಸಿದಾಗ ಅಮ್ಮನ ಹೃದಯದೊಳಗೆ ರಿಂಗಣಿಸುವ ನೋವು ತಾಳ್ಮೆಯ ಪರ್ವತದ ನಡುವೆ ಮರೆಯಾಗಿಬಿಡುತ್ತದೆ. ನಿನಗೆ ಬೇಕಿತ್ತು ಹುಟ್ಟಿಸಿದೆ ಆಗಲೇ ಕತ್ತು ಹಿಸುಕಿ ಸಾಯಿಸಬೇಕಿತ್ತು ಎಂಬ ಮಕ್ಕಳ ಕ್ರೋಧದ ನುಡಿಗಳು ಅಮ್ಮ ಹೃದಯದೊಳಗಿನ ಕರುಣೆಯ ಸಾಗರದಲೆಗಳಲ್ಲಿ ಬೆರೆತು ಶಾಂತವಾಗುತ್ತವೆ.

ನೀನೂ ಒಬ್ಬ ಅಮ್ಮಾನಾಎಂಬ ಹರೆಯದ ಮಗನ ಆಕ್ರೋಶದ ಕೂಗು ಅಮ್ಮನ ಪ್ರೀತಿಯ ಗಣಿಯಲ್ಲಿ ಹುದುಗಿಹೋಗುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ಅಮ್ಮ ಸಾನ್ನಿಧ್ಯ-ವಿರಹಗಳ ದ್ವಂದ್ವಗಳ ನಡುವೆಯೇ ಬಾಳುತ್ತಾಳೆ. ನಮ್ಮ ಸಂಸಾರದಲ್ಲಿ ಯಾಕೆ ಮೂಗು ತೂರಿಸ್ತೀಯಾ ನಿನ್ನ ಪಾಡಿಗೆ ಇರೋಕಾಗೋಲ್ವೇ”  ಎಂದು ಮೂದಲಿಸುವ ಮಕ್ಕಳು ಸನಿಹದಲ್ಲಿದ್ದೇ ದೂರದಲ್ಲಿಡುತ್ತಾರೆ.

ನಿನಗ್ಯಾಕಮ್ಮಾ ಈ ವಯಸ್ಸಿನಲ್ಲಿ ಟೆನ್ಷನ್ ನಿನ್ನ ಪಾಡಿಗೆ ಆರಾಮವಾಗಿದ್ದುಬಿಡುಎಂದು ಹೇಳಿ ವೃದ್ಧಾಶ್ರಮದಲ್ಲಿರಿಸುವ ಮಕ್ಕಳು ದೂರದಲ್ಲಿದ್ದರೂ ಸನಿಹದಲ್ಲಿರುವಂತೆ ನಟಿಸುತ್ತಾರೆ. ಈ ಎರಡೂ ಸನ್ನಿವೇಶಗಳಲ್ಲಿ ಅಮ್ಮ ಮಕ್ಕಳಿಂದ ದೂರವಾಗಿಯೇ ಉಳಿಯುತ್ತಾಳೆ. ಆದರೆ ಆಕೆಯ ಹೃದಯ ಮಕ್ಕಳಿಗಾಗಿ ಬಡಿಯುತ್ತಲೇ ಸವೆಯುತ್ತದೆ.  ಜೀವನ ಒಂದು ನಾಟಕ ರಂಗ ಎಂದಾದರೆ ಆ ನಾಟಕದಲ್ಲಿ ಹಲವಾರು ಪಾತ್ರಗಳನ್ನು ಏಕಾಂಗಿಯಾಗಿ ನಿರ್ವಹಿಸುವ ಏಕೈಕ ವ್ಯಕ್ತಿ ಎಂದರೆ ಅಮ್ಮ ಮಾತ್ರ. ಈ ವೈವಿಧ್ಯಮಯ ಪಾತ್ರಗಳ ನಡುವೆಯೂ ಅಮ್ಮನ ಪಾತ್ರಧಾರಿ ತನ್ನ ಅಸ್ತಿತ್ವವನ್ನು ಗುರುತಿಸಿಕೊಳ್ಳಲು ಹೆಣಗಾಡಿದರೂ  ಅಮ್ಮ ಕೊಸರಾಡುವುದಿಲ್ಲ. ಏಕೆಂದರೆ ಬದುಕು ಜಟಕಾ ಬಂಡಿ ಎಂದಾದರೆ ಬಂಡಿಯ ಜೀವನಾಡಿ ಅಮ್ಮ.

ಈ ಸಾರ್ವತ್ರಿಕ ಸತ್ಯಗಳ ನಡುವೆಯೇ ವ್ಯಕ್ತಿಗತ ನೆನಪಿನ ಮೆರವಣಿಗೆಯತ್ತ ನನ್ನ ಚಿತ್ತ ಸಾಗುತ್ತಿದೆ. ನನ್ನ ವ್ಯಕ್ತಿಗತ ಜೀವನದಲ್ಲಿ ಅಮ್ಮ ಮರೆಯಾಗಿ 27 ವರ್ಷಗಳೇ ಕಳೆದಿವೆ. ಆದರೆ ಅಮ್ಮ ಮರೆಯಾಗಿದ್ದಾಳೆ, ಕಾಣೆಯಾಗಿಲ್ಲ. ನಾನು ಅವಳನ್ನು ವೈಕುಂಠಕ್ಕೂ ಕಳುಹಿಸಲಿಲ್ಲ, ಕಾಗೆಯ ರೂಪದಲ್ಲಿ ಬಾ ಎಂತಲೂ ಕರೆಯಲಿಲ್ಲ. ಅವಳು ಕಾ..ಕಾ.. ಎನ್ನುವುದೂ ಇಲ್ಲ. ಸ್ವಾಭಿಮಾನಿ ಅಲ್ಲವೇ ಎಂದಿಗೂ ಕಾ..ಕಾ.. ಎಂದವಳಲ್ಲ. ಆದರೆ ನಮ್ಮ ಮನದಾಳದಲ್ಲಿ ಅವಳ ಕೂಗು ಸದಾ ಕೇಳಿಸುತ್ತಲೇ ಇರುತ್ತದೆ. ಮಗೂ.. ಎನ್ನುವ ಎರಡಕ್ಷರ ಕೇಳಿ 27 ವರ್ಷಗಳೇ ಸಂದಿವೆ ಆದರೆ ಅಮ್ಮ ಎನ್ನುವ ಎರಡಕ್ಷರದ ನೆನಪು ಅದನ್ನೂ ಮರುಕಳಿಸುವಂತೆ ಮಾಡುತ್ತಿರುತ್ತದೆ.

ಈ ಮಾರ್ದನಿಯ ನೆನಪಿನಲ್ಲೇ ಒಂದೆರಡು ಕನವರಿಕೆಗಳು :

ಹೀಗೇ ಒಮ್ಮೆ ಬಸ್ಸಿನಲ್ಲಿ ಪಯಣಿಸುತ್ತಿದ್ದೆ, 1983 ನನಗೆ 22ರ ಹರೆಯ.  ಅಮ್ಮನೊಡನೆ ಸೋದರಿಯೂ ಇದ್ದಳು. ಬಸ್ಸು ಹೊರಡುವ ಮುನ್ನ ಕಾಫಿಯ ಚಪಲ ಹೆಚ್ಚಾಯಿತು, ಇಳಿದು ಹೋಟೆಲಿಗೆ ಹೋದೆ. ಚಾಲಕನಿಗೆ ಅದೇನು ಅವಸರವಾಗಿತ್ತೋ , ನಾನು ಕಾಫಿ ಹೀರುತ್ತಿರುವಾಗಲೇ ಬಸ್ಸನ್ನು ಸ್ಟಾರ್ಟ್ ಮಾಡಿಯೇ ಬಿಟ್ಟ. ಬಸ್ಸು ಮುಂದಕ್ಕೆ ಚಲಿಸುತ್ತಲೇ ಅಮ್ಮ ಅರಚಾಡಲಾರಂಭಿಸಿದಳು ಅಯ್ಯೋ ನನ್ನ ಮಗು ಬಂದಿಲ್ಲ ನಿಲ್ಸಿ ನಿಲ್ಸಿ ”. ಕಂಡಕ್ಟರ್ ಕೂಗಾಡಲಾರಂಭಿಸಿದ ಮಗುವನ್ನೇಕಮ್ಮಾ ಕೆಳಗೆ ಇಳಿಸಿದ್ದೀರಿಎಂದು. ಅಷ್ಟರಲ್ಲಿ ಅಮ್ಮನ ಕೂಗು ಕೇಳಿ ಬಸ್ಸು ಹತ್ತಿದ ನಾನು ‘ನಡೀರಿ ಕಂಡಕ್ಟ್ರೇ’ ಎಂದೆ. ‘ಓ.. ನೀವೇನಾ ಆ ಮಗೂ’ ಎಂದು ಹೇಳುತ್ತಲೇ ರೈಟ್ ರೈಟ್ ಹೇಳಿದ್ದ.

ಮತ್ತೊಂದು ದಿನ, ನಾನು ಬಂಗಾರಪೇಟೆಯಿಂದ 12 ಕಿಲೋಮೀಟರ್ ದೂರದ ಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದೆ. ಒಮ್ಮೆ ಬಸ್ ಸಿಗದ ಕಾರಣ ಬೈಕ್‍ನಲ್ಲಿ ಹೋಗಿದ್ದೆ. ಬರುವಾಗ ಪೆಟ್ರೋಲ್ ಮುಗಿದುಹೋಯಿತು. ಹಳ್ಳಿಗಾಡುಗಳ ಪ್ರದೇಶ ಪೆಟ್ರೋಲ್‍ನ ಸುಳಿವೂ ಇರಲಿಲ್ಲ. ಸುಮಾರು ಆರೇಳು ಕಿಲೋಮೀಟರ್ ದೂರದವರೆಗೆ ಬೈಕನ್ನು ತಳ್ಳಿಕೊಂಡೇ ಬರಬೇಕಾಯಿತು. ಅಷ್ಟರಲ್ಲಿ ಕತ್ತಲು ಕವಿದಿತ್ತು. ಸಾಮಾನ್ಯವಾಗಿ ಆರು ಗಂಟೆಗೆ ಮುನ್ನ ಮನೆ ಸೇರುತ್ತಿದ್ದ ನಾನು ಏಳೂವರೆಯಾದರೂ ಬರದಿದ್ದುದನ್ನು ನೋಡಿ ಅಮ್ಮನ ಎದೆಬಡಿತ ಹೆಚ್ಚಾಗಿತ್ತೇನೋ. ಆಗ ದೂರವಾಣಿಯೂ ಇರಲಿಲ್ಲವಲ್ಲ. ಉಸ್ಸಪ್ಪಾ ಎಂದು ಮನೆ ತಲುಪುವ ವೇಳೆಗೆ ಅಮ್ಮ ನನ್ನ ಅಣ್ಣನ ಮೂಲಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೂ ಆಗಿತ್ತು.  ಸಂಜೆ ಐದೂವರೆಯಿಂದ ಎಂಟು ಗಂಟೆಯವರೆಗೂ , ನೀರೂ ಕುಡಿಯದೆ, ಕಾಫಿ ಕುಡಿಯದೆ, ಗೇಟಿನ ಬಳಿಯಲ್ಲೇ ನಿಂತಿದ್ದ ಅಮ್ಮನ ಬಾಯಲ್ಲಿ ಬರುತ್ತಿದ್ದ ಒಂದೇ ಮಾತು ಮಗೂ ಯಾಕೆ ಇನ್ನೂ ಬರ್ಲಿಲ್ಲ! ”. ಪಕ್ಕದ ಮನೆಯವರು ನಗುತ್ತಲೇ ಹೇಳಿದ್ದು ಇನ್ನೂ ನೆನಪಿದೆ.

ಇನ್ನು ಅಮ್ಮನ ಲೌಕಿಕ ಜೀವನದ ಕೊನೆಯ ದಿನ. ಏನೆಲ್ಲಾ ಪ್ರಯತ್ನಿಸಿದೆ ಆದರೆ ಕಾಲನ ಕರೆಯನ್ನು ತಡೆಗಟ್ಟಲಾಗಲಿಲ್ಲ. ಕುಸಿಯುತ್ತಿದ್ದ ಜೀವಕ್ಕೆ ಒಂದು ತೊಟ್ಟು ಜೀವಜಲ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಸಿಗಬಹುದೇನೋ ಎನ್ನುವ ಕೊನೆಯ ಹಂಬಲ. ಅಣ್ಣನ ಮಾತಿಗೂ ಬೆಲೆ ಕೊಡದೆ ಬೆಂಗಳೂರಿಗೆ ಕರೆದೊಯ್ದೆ. ಆದರೆ ಮುಂಜಾನೆ ಹೊರಟವರು ಸಂಜೆಗೆ ಮರಳಿ ಬರದಂತೆ ಹೊರಟುಬಿಟ್ಟರು. ಕೇವಲ ಎರಡು ಮೂರು ಗಂಟೆಗಳ ಅವಧಿಯಲ್ಲಿ ಏನೆಲ್ಲಾ ಪ್ರಯತ್ನಗಳು ವಿಫಲವಾದವು. ನನ್ನ ತೆರೆದ ಕಣ್ಣುಗಳು ಶಾಶ್ವತವಾಗಿ ಮುಚ್ಚಿದ ಕಣ್ಣುಗಳನ್ನು ಕಂಡಾಗ , ಓಹ್ ! ಬಹುಶಃ ವರ್ಣಿಸಲಾರೆ. ಅಮ್ಮನ ಪಯಣ ಮುಗಿದಿತ್ತು.

ಬೆಂಗಳೂರಿಗೆ ಕಾರಿನಲ್ಲಿ ಬರುವಾಗ ಅಕ್ಕನ ಬಳಿ ನನಗಾಗಿ ಆ ಮಗು ಯಾಕೆ ಹಾಗೆ ಒದ್ದಾಡುತ್ತೆ ಹೋಗುವ ಜೀವ ಬಿಟ್ಟುಬಿಡಬಾರದೇಎಂದು ಹೇಳಿದ್ದಳಂತೆ. ಈಗಲೂ ಮಗು ಅವಳ ಕರೆಗಾಗಿ ಹಾತೊರೆಯುತ್ತಲೇ ಇದೆ. ಆದರೆ ಕೃಷ್ಣನ ಕೊಳಲಿನ ಕರೆಯಂತಲ್ಲವಲ್ಲಾ ಅದು. ಅಮ್ಮ ನೆನಪಾಗುತ್ತಿರುತ್ತಾಳೆ. ಅಮ್ಮ ಎಂದರೆ ಒಂದು ವಿಶ್ವ-ಕೋಶ ಒಂದು ಸೃಷ್ಟಿ-ಲೋಕ. ವರ್ಷಕ್ಕೊಮ್ಮೆ ಸಾಂಪ್ರದಾಯಿಕವಾಗಿ ನೆನೆಯೋಣ, ಪ್ರತಿಕ್ಷಣವೂ ಅಮ್ಮನಲ್ಲಿಯೇ ಲೀನವಾಗೋಣ . ಹಾಗೆನಿಸುವುದಿಲ್ಲವೇ ?.

3 Responses

  1. Anasuya M R says:

    ಕಣ್ಣಾಲಿಗಳು. ತುಂಬಿದವು

  2. Oh amma antha kiruchi joragi alabekenusuttide

Leave a Reply

%d bloggers like this: