fbpx

ಅವರ ಅನುಭವಗಳ ಆಲೆಮನೆಯಲ್ಲಿ ನಾವು ಸುತ್ತಬೇಕು..

“ಹಿರೇಗುತ್ತಿಗೆ ಗಾಣ ಬಂದದೆ ಬರ್ತೀಯೇನೆ?” ಅಮ್ಮ ಫೋನಾಯಿಸಿದ್ದರು.

ಸರಿಯಾಗಿ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪರೀಕ್ಷಾ ಸಮಯ. ಬಿಟ್ಟು ಹೋಗೋದಾದರೂ ಹೇಗೆ ಎಂಬ ನಿರಾಸೆಯಲ್ಲೇ “ಎಷ್ಟು ದಿನ ಗಾಣ ಇರ್ತದೆ.?” ಎಂದು ವಿಚಾರಿಸಿದೆ. “ನಾಳೆ ಮಧ್ಯಾಹ್ನ ಮುಗಿಯುತ್ತದೆ” ಎಂದು ಅಪ್ಪ ಹೇಳಿದ್ದರು. “ಇಲ್ಲಮ್ಮ, ಒಂದು ಬಾಟಲಿಯಲ್ಲಿ ಕಬ್ಬಿನ ರಸ ತುಂಬಿಸಿ ಡೀಪರ್ ನಲ್ಲಿಡು.. ಶನಿವಾರ ಬರ್ತೆ” ಎಂದಿದ್ದೆ.

“ಆಲೆಮನೆ ಎಂದರೆ ಎಲ್ಲಿದ್ದರೂ ಬರ್ತಿದ್ದೆ ನೀನು. ಈಗ ಯಾವುದೂ ಬೇಡ ನಿನಗೆ. ಸಂತೋಷನ ಮನೆ ಆಗಿದ್ದರೆ ಆಲೆಮನೆ ತಪ್ಪಿಸ್ತಾನೇ ಇರಲಿಲ್ಲ.” ಅಮ್ಮ ಒಂದಿಷ್ಟು ಮುನಿಸಿಕೊಂಡು ಫೋನ್ ಇಟ್ಟಿದ್ದರು.

ಹಿರೇಗುತ್ತಿಯ ಬೆಲ್ಲ ಎಂದರೆ ಅದು ತುಂಬಾ ಪ್ರಸಿದ್ದ. ನಮ್ಮಲ್ಲಿ “ಹಿರೇಗುತ್ತಿ ಬೆಲ್ಲದಂತಹ ಬೆಲ್ಲ ಇಲ್ಲ…” ಎಂಬ ಮಾತು ತುಂಬಾ ಪ್ರಚಲಿತವಾದದ್ದು. ನಮ್ಮದೇ ಗದ್ದೆಯಲ್ಲಿ ಚಿಕ್ಕಪ್ಪ ಕೂಡ ಗಾಣ ಹಾಕುವುದರಿಂದ ಶುಂಠಿ, ಲಿಂಬು ಏನನ್ನೂ ಸೇರಿಸದ ತಾಜಾ ಶುದ್ಧ ಕಬ್ಬಿನ ರಸ ಕುಡಿಯುವ ನನ್ನ ಆಸೆ ಯಾವಾಗಲೂ ಈಡೇರುತ್ತಿತ್ತು.

ಆಲೆಮನೆಯ ವೈಭವವನ್ನು ಬಾಯಿ ಮಾತಲ್ಲಿ ಹೇಳಿ ಪೂರೈಸುವಂತಹುದ್ದಲ್ಲ.  ರಾತ್ರಿ ಇಡೀ ಕೋಣವನ್ನು ಗಾಣಕ್ಕೆ ಕಟ್ಟಿ ಕಬ್ಬಿನ ಹಾಲು ತೆಗೆದು ಕೊಪ್ಪರಿಗೆಗೆ ಸುರಿಯುವ, ದೊಡ್ಡ ದೊಡ್ಡ ಉರಿಯಲ್ಲಿ ಕೊಪ್ಪರಿಗೆಯನ್ನು ಕುದಿಸಿ ಹದಕ್ಕೆ ತಂದು ಬೆಲ್ಲ ಮಾಡುವ ವಿಧಾನವೇ ಒಂದು ವಿಸ್ಮಯ ನನ್ನ ಪಾಲಿಗೆ.

ಕೆಲವೊಮ್ಮೆ ಅಜ್ಜಿಮನೆ ಶಿರಗುಂಜಿಯಲ್ಲಿ ಬೆಲ್ಲ ಕಾಯಿಸುವಾಗ ಕೊಪ್ಪರಿಗೆಗೆ ಪಪ್ಪಾಯಿಕಾಯಿ, ಎಳೆಯ ತೆಂಗಿನ ಕಾಯಿ, ಒಣ ಕೊಬ್ಬರಿ, ಏನೂ ಸಿಗಲಿಲ್ಲವೆಂದರೆ ಬಾಳೆದಿಂಡು, ಏನೆಲ್ಲವನ್ನು ಹಾಕಿ ಕಬ್ಬಿನ ಹಾಲಿನೊಂದಿಗೆ ಕುದಿದು, ಬೆಲ್ಲದ ಪಾಕವನ್ನು ಅಂಟಿಸಿಕೊಂಡ ಅವನ್ನು ತಿನ್ನುತ್ತಿದ್ದುದು ನೆನಪಾಗುವಂತೆ ಮಾಡಿದ್ದು  ನನ್ನ ಗುರುಗಳಾದ ಶ್ರೀಧರ ಬಳಗಾರರ ಕಾದಂಬರಿ ‘ಆಡುಕುಳ’.

ಮೊನ್ನೆಯಷ್ಟೇ ಮುಗಿದ ಎಸ್ ಎಸ್ ಎಲ್ ಸಿಯ ಪೇಪರ್ ವಾಲ್ಯುಯೇಶನ್ ನಲ್ಲಿ ನನ್ನ ಬಿ ಇಡಿ ಸಹಪಾಠಿ ಮಾಯಾ Education is nothing but..” ಎಂದು ನಿಧಾನವಾಗಿ ಧ್ವನಿ ಎಳೆದೆಳೆದು ಹೇಳುವಾಗ ಅಲ್ಲಿದ್ದ ಎಂಟು ಹತ್ತು ಶಿಕ್ಷಕರು ಅಂದರೆ- ಕಮಲಾ ಬಾಳಿಗಾ ಕಾಲೇಜಿನ ಹಳೆಯ ವಿದ್ಯಾರ್ಥಿಗಳೆಲ್ಲರೂ ಶ್ರೀಧರ ಬಳಗಾರರ ನೆನಪಾಗಿ ಮನಸಾರೆ ನಕ್ಕಿದ್ದೆವು.

ಶ್ರೀಧರ ಬಳಗಾರರು ನನ್ನ ಬಿ ಇಡಿ ಯ ಇಂಗ್ಲೀಷ್ ಮೆಥಡ್ ಲೆಕ್ಚರರ್. ನನ್ನ ಫೆವರಿಟ್ ಸರ್ ಎಂದು ನಾನು ಹೇಳಿಕೊಳ್ಳುವಂತೆ, ನನ್ನ ಪೆಟ್ ಸ್ಟುಡೆಂಡ್ ಎಂದು ಅವರೂ ಹೇಳಿಕೊಳ್ಳುತ್ತಾರೆ.

ಹಾಗೆ ನೋಡಿದರೆ ನನ್ನ ವಿದ್ಯಾರ್ಥಿ ಜೀವನದಲ್ಲಿ ಎಷ್ಟೇ ತುಂಟತನ, ಕಿಲಾಡಿ ಮಾಡಿದ್ದರೂ ಶಿಕ್ಷಕರಿಗೆ ಮಾತ್ರ ಯಾವತ್ತೂ ಪ್ರೀತಿಯ ಶಿಷ್ಯಳೇ ಆಗಿರುತ್ತಿದ್ದೆ. ಅದರಲ್ಲೂ ಕೇವಲ ಐದೇ ಇಂಗ್ಲೀಷ್ ಮೆಥಡ್ ನ ವಿದ್ಯಾರ್ಥಿಗಳಿರುವ ನಮ್ಮ ಬ್ಯಾಚ್ ನಲ್ಲಿ ನಮ್ಮ ಯಾವ ತರಗತಿಗಳೂ ಕ್ಲಾಸ್ ರೂಂ ಎಂಬ ಫಾರ್ಮಾಲಿಟಿಗೆ ಸಿಕ್ಕಿ ಹಾಕಿಕೊಳ್ಳುತ್ತಲೇ ಇರಲಿಲ್ಲ.

ತೀರಾ ಇಕ್ಕಟ್ಟಾದ ಕಿಷ್ಕಿಂದೆಯಂತಹ ಸರ್ ರೂಂನಲ್ಲಿ ಐದೂ ಜನ ಸರ್ ಸುತ್ತಲೂ ಕುಳಿತುಕೊಳ್ಳುತ್ತಿದ್ದೆವು. ಲೆಕ್ಕ ಹಾಕಿದಂತೆ ನಿಮಿಷಕ್ಕೆ ಐದು ಶಬ್ಧಗಳಿಗಿಂತ ಹೆಚ್ಚು ಶಬ್ಧಗಳನ್ನು ಉಚ್ಚರಿಸಬಾರದೆಂದು ಶಪಥ ಮಾಡಿದವರಂತೆ  ಶ್ರೀಧರ ಬಳಗಾರರು ತಮ್ಮ ಯಾವತ್ತಿನ ಸಣ್ಣ ದನಿಯಲ್ಲಿ ಪಾಠ ಹೇಳುತ್ತಿದ್ದರೆ ತಣ್ಣಗೆ ಜೋಗುಳ ಹಾಡಿದ ಅನುಭವ ಆಗುತ್ತಿತ್ತು.

ನನ್ನ ಸಹಪಾಠಿಯೊಬ್ಬ ಪದೇ ಪದೇ ಕ್ಲಾಸ್ ನ ನಡುವೆಯೇ  ಸರ್ ಹೊರಗೆ ಹೋಗಿ ಬರ್ತೇನೆ ಎನ್ನುತ್ತ ಹೋಗಿ ನೀರು ಕುಡಿದು, ಕಣ್ಣಿಗೆ ನೀರು ಹಾಕಿಕೊಂಡು ಮುಖ ತೊಳೆದು ಬಂದರೂ ಎರಡು ಸಾಲಿಗಿಂತ ಮುಂದಕ್ಕೆ ಪಾಠ ಹೋಗಿರುತ್ತಿರಲಿಲ್ಲ. ಹಾಗಂತ ಅವರ ಕ್ಲಾಸ್ ಬೋರ್ ಹೊಡೆಸುತ್ತಿತ್ತು ಎಂದು ನೀವು ಭಾವಿಸಿಕೊಂಡರೆ ಅದು ನಿಮ್ಮ ತಪ್ಪು ತಿಳುವಳಿಕೆ. ಸರ್ ಕಲಿಸಿದ್ದನ್ನು ಗಮನವಿಟ್ಟು ಕೇಳಿದರೆ ಮುಂದೆ ಆ ಪಾಠವನ್ನು ಓದಬೇಕಾದ ಅಗತ್ಯವೇ ಇರದಂತೆ ಮನದಟ್ಟು ಮಾಡಿಸುತ್ತಿದ್ದರು. ಆದರೆ ಆ ನಿಧಾನ ಗತಿಗೆ ನಮ್ಮನ್ನು ನಾವು ಟ್ಯೂನ್ ಮಾಡಿಕೊಳ್ಳಬೇಕಾಗುತ್ತಿತ್ತು ಅಷ್ಟೆ.

ಇಂತಹ ಮೆಲು ದನಿಯ, ನಿಧಾನ ಮಾತಿನ ಶ್ರೀಧರ ಬಳಗಾರರ ಈ ‘ಆಡುಕುಳ’ ಕಾದಂಬರಿಯನ್ನು ಓದಿದಾಗಲೂ ನನಗೆ ನಾನು ಮರಳಿ ಬಿ ಇಡಿ ತರಗತಿಗೆ ಹಿಂದಿರುಗಿದ ಅನುಭವ ಆಗಿದ್ದು ನಾನು ಆ ಟ್ಯೂನ್ ಗೆ ನನ್ನನ್ನು ಒಗ್ಗಿಸಿಕೊಂಡಿದ್ದು ಕಾರಣವೇ ಎಂದು ಯೋಚಿಸಿದರೆ ಖಂಡಿತಾ ಅಲ್ಲ.

ಮುನ್ನುಡಿ ಬರೆದ ಮನು ಚಕ್ರವರ್ತಿಯವರು ಹೇಳುವಂತೆ ಒಂದು ಪುಟ್ಟ ಹಳ್ಳಿಯಲ್ಲಿ ನಡೆಯುವ ಸ್ಥಿತ್ಯಂತರಗಳ, ದುರಂತಗಳ, ಧಾರ್ಮಿಕ ಡೊಂಬಿತನಗಳ ನವಿರು ನಿರೂಪಣೆಯನ್ನು ಅಬ್ಬರದಲ್ಲಿ ಮಾಡಲಾಗುವುದಿಲ್ಲ ಎಂಬ ಅವರ  ಸೂಕ್ಷ್ಮ ಸಂವೇದನೆಯೇ ಕಾರಣ.

ಬಿ ಇಡಿ ಮುಗಿದ ನಂತರವೂ ಆಗಾಗ್ಗೆ ಕಾಲೇಜಿಗೆ ಭೇಟಿ ಕೊಡುವ ರೂಢಿ ಇಟ್ಟುಕೊಂಡಿರುವ ವಿರಳಾತಿ ವಿರಳರಲ್ಲಿ ನಾನೂ ಒಬ್ಬಳು. ಬಿ ಇಡಿ ಮುಗಿದು, ಸಿ ಇ ಟಿ ಬರೆದು, ನೌಕರಿಯೂ ಸಿಕ್ಕು, ಮದುವೆ ಆಗಿ ಬಾಣಂತನ ಮುಗಿಸಿ ಅದರ ರಜೆ ಮುಗಿಸಿ ಶಾಲೆಗೆ ಹೋದವಳು ನಂತರ ಎರಡೇ ತಿಂಗಳಲ್ಲಿ ಬಂದ ಅಕ್ಟೋಬರ್ ರಜೆಯಲ್ಲಿ ಮತ್ತೆ ಕಮಲಾ ಬಾಳಿಗಾ ಪ್ರಶಿಕ್ಷಣ ಮಹಾವಿದ್ಯಾಲಯಕ್ಕೆ ಹೋಗಿದ್ದೆ.

ಎಲ್ಲ ಪ್ರೊಫೆಸರ್ ಗಳನ್ನು ಮಾತನಾಡಿಸಿ, ಒಂದಿಷ್ಟು ನಗು, ಹುಸಿ ಜಗಳವನ್ನೆಲ್ಲ ಮುಗಿಸಿದರೂ ಅಲ್ಲಿಯೇ ಇದ್ದ ಶ್ರೀಧರ್ ಬಳಗಾರರು ಒಂದೂ ಮಾತನಾಡಿರಲಿಲ್ಲ. ನಂತರ ಹೊರಗೆ ಹೊರಟ ಅವರ ಹಿಂದೆ ಸುಮ್ಮನೆ ಹಿಂಬಾಲಿಸಿದ್ದೆ. ಅವರ ಅದೇ ಚಿಕ್ಕ ರೂಂ ನಲ್ಲಿ ಆರಾಂ ಖುರ್ಚಿಯಲ್ಲಿ ಕುಳಿತುಕೊಳ್ಳುತ್ತ “ಇದೇನೇ ಕಟ್ಟಿ ಹಾಕಿ ಸಾಕಿದ ಎಮ್ಮೆ ಹಂಗೆ ಆಗಿದ್ದೆ? ಒಂದಿಷ್ಟು ತಿನ್ನುದು ಕಡಿಮೆ ಮಾಡಿ, ಡಯಟ್ ಮಾಡು” ಮತ್ತದೇ ಮೆಲುವಾದ ಮಾತು.

ಎಲ್ಲರ ಎದುರು ಏನನ್ನೂ ಹೇಳದ ಅವರ ಸೂಕ್ಷ್ಮತೆ ಈ ಕಾದಂಬರಿ ಓದುವಾಗ ಮತ್ತೆ ಮತ್ತೆ ನೆನಪಿಗೆ ಬಂದದ್ದು ಒಂದೆಡೆಯಾದರೆ, ಕಟ್ಟಿ ಹಾಕಿ ಸಾಕಿದ ಎಮ್ಮೆ ಮತ್ತು ಎಮ್ಮೆ ಕರು ಮಾಡಿದ ಅವಾಂತರಗಳ ವಿವರಣೆ ಇಡೀ ಕಾದಂಬರಿಯನ್ನು ಒಂದು ರೀತಿ ನವಿರಾದ ಹಾಸ್ಯಕ್ಕೂ ಮತ್ತು ಕಾದಂಬರಿಯನ್ನು ಮುನ್ನಡೆಸುವ ಸಂಚಲನ ಶಕ್ತಿಯಾಗಿಯೂ ನಿರೂಪಿತವಾಗಿದ್ದು ಇನ್ನೊಂದೆಡೆ.

ಎರಡು ಮೂರು ವರ್ಷಗಳ ಹಿಂದೆ ಕದಂಬೋತ್ಸವಕ್ಕೆ ಹೋಗಿದ್ದೆ. ಕವನ, ಗಾಯನ ಮತ್ತು ಚಿತ್ರ ಎಂಬ ಮೂರರ ಸಂಗಮವಿದ್ದ ಕಾರ್ಯಕ್ರಮ ಅದು. ನಾವು ಕವನ ವಾಚಿಸಿದ ಮೇಲೆ ಅದಕ್ಕೆ ರಾಗ ಸಂಯೋಜನೆ ಮಾಡಿದವರು ಹಾಡುತ್ತಿದ್ದರು. ಅದೇ ಸಮಯಕ್ಕೆ ಪಕ್ಕದಲ್ಲಿ ಆ ಕವನಕ್ಕೆ ಸೂಕ್ತವಾದ ಚಿತ್ರದ ರಚನೆ ಕೂಡ ಆಗುತ್ತಿತ್ತು. ಇರುವುದು ಐದೇ ಕವಿಗಳ ಕವನ ವಾಚನವಾದರೂ ಮೂರು ಕಾರ್ಯಗಳು ಒಟ್ಟಿಗೆ ನಡೆಯುತ್ತಿದ್ದುದರಿಂದ ಕವಿತೆ ವಾಚಿಸಿ ಕೆಳಗೆ ಬರುವುದು ತುಂಬಾ ತಡವಾಗಿತ್ತು.

ಕವನ ವಾಚನಕ್ಕೆಂದು ವೇದಿಕೆಯ ಮೇಲೆ  ಕುಳಿತವಳಿಗೆ ಎದುರುಗಡೆ ಪ್ರವೀರ ಯಾರೊಂದಿಗೋ ಮಾತನಾಡುತ್ತಿರುವುದು ಕಾಣಿಸುತ್ತಿತ್ತು. ಯಾರಾತ…? ನೆನಪಿಸಿಕೊಳ್ಳಲು ಹರಸಾಹಸ ಪಟ್ಟರೂ ಒಂದಿಷ್ಟು ಸ್ಥೂಲಕಾಯದ ಆತ ನೆನಪಿಗೇ ಬರಲಿಲ್ಲ. ವೇದಿಕೆಯಿಂದ ಬಂದವಳನ್ನು ಶ್ರೀ ಎಂದು ಹೆಗಲ ಮೇಲೆ ಕೈ ಇಟ್ಟು ಆತ್ಮೀಯತೆಯಿಂದ ಮಾತನಾಡಿಸಿದಾಗ ಒಂದು ಕ್ಷಣ ಮುಜುಗರದ ಅನುಭವ.

ಆತನ ಸುತ್ತಲೂ ಒಂದು ಸಾದಾರಣ ಗುಂಪು. ಯಾಕೋ ರಾಜಕೀಯ ವ್ಯಕ್ತಿ ಎನ್ನಿಸಬಹುದಾದ ನಿಲುವು. ಆದರೂ ತಕ್ಷಣ ಆತ  ನನ್ನ ಬಾಲ್ಯ ಸ್ನೇಹಿತ ಸಂತೋಷ ಎಂಬುದು  ನೆನಪಾಗಿತ್ತು. ಒಂದು ಕ್ಷಣ ಮನಸ್ಸು ಎಷ್ಟು ಖುಷಿಯಿಂದ ತುಂಬಿ ಹೋಯಿತೆಂದರೆ ಸಿನೇಮಾದಂತೆ ಬಾಲ್ಯವೆಲ್ಲ ಕಣ್ಣೆದುರಿಗೆ ಸುತ್ತತೊಡಗಿತ್ತು.

ಆ ಹೊತ್ತಿಗೆ ಶಿರಸಿ ತಾಲೂಕಾ ಪಂಚಾಯತ ಅಧ್ಯಕ್ಷನಾಗಿದ್ದ ಆತನ ಬಳಿ ಹೇಗೆ ಮಾತನಾಡುವುದು? ತಾಲೂಕಾ ಪಂಚಾಯತ್ ಅಧ್ಯಕ್ಷನನ್ನು ಬಹುವಚನ ಬಳಸಿ ಮಾತನಾಡದಿದ್ದರೆ ಸುತ್ತಲೂ ಇದ್ದ ಹಿಂಬಾಲಕರು ಸಿಟ್ಟಿಗೇಳಬಹುದೇ ಎಂಬ ನನ್ನೆಲ್ಲ ಅನುಮಾನ ಕ್ಷಣದಲ್ಲೇ ನಿವಾರಣೆಯಾಗುವಂತೆ ಆತ ಹಳೆಯ ದಾಟಿಯಲ್ಲೇ ಮಾತನಾಡತೊಡಗಿದ.

ಆತ ನನ್ನ ಬಾಲ್ಯ ಸ್ನೇಹಿತ. ನನಗಿಂತ ಒಂದು ತರಗತಿ ಮೇಲಿದ್ದವನು ಇವನು.ಸುಮಾರು ಹತ್ತು ಕಿಮಿ ದೂರದ ಊರಿನಿಂದ ಬಸ್ ನಲ್ಲಿ ಆ ಶಾಲೆಗೆ ಬರುತ್ತಿದ್ದ.  ನನ್ನ ಅಪ್ಪ ಅದೇ ಶಾಲೆಯ ಹೆಡ್ ಮಾಸ್ಟರ್. ಅಮ್ಮ ಕೂಡ ಅದೇ ಶಾಲೆಯ ಶಿಕ್ಷಕಿ.

ಸುಮಾರು ನಾಲ್ಕನೇ ತರಗತಿಗೆ ಬರುವ ಹೊತ್ತಿಗೇ ಮನೆಯಲ್ಲಿರುವ ಮಾವನ ಮಗಳು ಮಾಲಕ್ಕನ ಹಾಗೂ ಮನೆಯ ಓನರ್ ತೇಜಕ್ಕನ ಓದುವ ಆರ್ಭಟದಲ್ಲಿ ನಾನೂ ಕೂಡ  ಮಾಮೂಲಿ ಸಾಮಾಜಿಕ ಕಾದಂಬರಿಗಳನ್ನೆಲ್ಲ ಓದಿ ಮುಗಿಸಿ ನಂತರದ ಹಂತವಾಗಿ ಅತಿಯಾದ ಪತ್ತೇದಾರಿ ಕಾದಂಬರಿಗಳನ್ನು ಓದಿ ಮುಗಿಸಿದ್ದೆ.

ಹೆಡ್ ಮಾಸ್ಟರ್ ಆಗಿದ್ದ ನನ್ನ ಅಪ್ಪನನ್ನು ಯಾರಾದರೂ  ಶಾಲೆಯಲ್ಲಿ ಭೇಟಿ ಆಗಲು ಬಂದಿದ್ದರೂ ನಾನು ಅವರ ಹಿಂದೆಯೇ ಓಡುತ್ತಿದ್ದೆ. ಅವರೇನಾದರೂ ನನ್ನ ಅಪ್ಪನಿಗೆ  ಅಪಾಯ ಮಾಡಿ ಬಿಡಬಹುದು ಎಂಬ ಅಂಜಿಕೆಗೆ. ಆಗೆಲ್ಲ ನನ್ನ ಈ  ಹುಚ್ಚು ಕಲ್ಪನೆಗಳಿಗೆ ಜೊತೆಯಾಗುತ್ತಿದ್ದುದು ಇಂತಹ ಕೆಲವು ಆತ್ಮೀಯ ಸ್ನೇಹಿತರು.

ಒಂದೇ ರೂಂ ನಲ್ಲಿ ಎರಡೆರಡು ತರಗತಿಗಳು ನಡೆಯುತ್ತಿದ್ದುದರಿಂದ ಸಂತೋಷ ಸಾಮಾನ್ಯವಾಗಿ ನಮ್ಮ ಜೊತೆಗೇ ಇರುತ್ತಿದ್ದ ನೆನಪು.  ಇದೆಲ್ಲಕ್ಕಿಂತ ಹೆಚ್ಚಾಗಿ ಆ ಪ್ರಾಥಮಿಕ ಶಾಲಾ ಹಂತದ ಸಮಯದಲ್ಲಿ ಆತ ನನಗೆ ಹೆಚ್ಚು ನೆನಪಾಗೋದು ಆತನಿಗೆ ನನ್ನ ಅಪ್ಪ ಹೆಚ್ಚಿನ ಪ್ರೀತಿಯ ಗುರುವಾಗಿದ್ದರು. ಎಷ್ಟೆಂದರೆ ಆತ ನನ್ನ ಅಪ್ಪನ ಸಹಿಯನ್ನೇ ಅನುಕರಿಸಿ ತಾನೂ ತನ್ನ ಸಿಹಿಯನ್ನು ರೂಢಿಸಿಕೊಂಡಿದ್ದಲ್ಲದೇ ನನಗೆ ನನ್ನಪ್ಪನ ಸಹಿಯಂತೆ ಅವೇನೇಕೆ ತನ್ನ ಸಹಿ ಹಾಕಬೇಕು ಎಂಬ ಸಿಟ್ಟು ತರಿಸಿ ನಾನೂ ಅದೇ ರೀತಿ ಸಹಿಯನ್ನು ರೂಢಿ ಮಾಡಿಕೊಳ್ಳುವುದಕ್ಕೆ ಕಾರಣನಾಗಿದ್ದ.

ಆದರೆ ಸಂತೋಷ ಹೆಚ್ಚು ಆತ್ಮೀಯನಾಗಿದ್ದು ಅವನ ಊರಿನ ಪಕ್ಕದ ಹಳ್ಳಿಯ ಶಾಲೆಗೆ ಅಪ್ಪ ಅಮ್ಮ ಇಬ್ಬರಿಗೂ ವರ್ಗ ಆದ ನಂತರ. ಹೈಸ್ಕೂಲಿನಲ್ಲಿ ಓದುತ್ತಿದ್ದ ಸಮಯ ಅದು. ಹೈಸ್ಕೂಲಿಗೆ ಪುನಃ ನಾನು ಮೊದಲಿದ್ದ ಊರಿನ ಸಮೀಪಕ್ಕೇ ಹೋಗಬೇಕಿತ್ತು. ಹೀಗಾಗಿ ಬಸ್   ಓಡಾಟ ಅನಿವಾರ್ಯವಾಗಿತ್ತು. ಆ ಓಡಾಟದಲ್ಲಿ ನನ್ನ ಕಾಲೇಜು ಮುಗಿಯುವವರೆಗೂ ನನ್ನನ್ನು ಕಾಳಜಿ ಮಾಡುತ್ತಿದ್ದವನು ಇವನೇ.

ನನ್ನ ಬೈಕ್ ಕಲಿಯುವ ಉಮ್ಮೇದಿಗೆ ತಕ್ಷಣಕ್ಕೆ ಒದಗಿದವನೂ ಇವನೇ. ಬಹುಶಃ ಮೆಚ್ಚಿನ ಗುರುಗಳ ಪ್ರೀತಿಯ ಮಗಳು ಎಂಬ ಕಾರಣಕ್ಕೆ ತನ್ನ ಸುಜುಕಿ ಬೈಕನ್ನು ನನಗೇ ಬಿಟ್ಟುಕೊಟ್ಟು ಬಿಟ್ಟಿದ್ದ. ಒಂದಿಷ್ಟು ದಿನ ಹಿಂದೆ ಕುಳಿತು  ಹೇಳಿ ಕೊಡುವ ಸಾಹಸ ಮಾಡಿದನಾದರೂ, ನಂತರ ಅದು ಒಗ್ಗದೇ ತಿಂಗಳ ನಂತರ ಆತ ಬೈಕ್ ಒಯ್ದಾಗ ಅದನ್ನು ಮನೆಗೇ ತೆಗೆದುಕೊಂಡು ಹೋದನೋ ಅಥವಾ ಗುಜರಿಗೆ ಕೊಟ್ಟನೋ ಎಂಬ ಪ್ರಶ್ನೆಯನ್ನು ಕೇಳದೇ ಹಾಗೇ ಉಳಿಸಿಕೊಂಡು ಬಿಟ್ಟಿದ್ದೇನೆ.

ಈ ಸಂತೋಷನ ಮನೆಯ ಗಣೇಶ ಚೌತಿ ಹಾಗೂ ಆಲೆಮನೆ ನನಗೆ ಪದೇ ಪದೇ ನೆನಪಾಗುವ ವಿಷಯಗಳು. ಲಿಂಗಾಯತರಾಗಿದ್ದರೂ ಅದ್ದೂರಿ ಗಣೇಶ ಚತುರ್ಥಿ ನಡೆಸುತ್ತಿದ್ದ ಅವರ ಮನೆಯ ಆಚರಣೆಯಲ್ಲಿನ ವಿಶಿಷ್ಟತೆಯೇ ನನಗಿನ್ನೂ ಅದರ ನೆನಪಿಡುವಂತೆ ಮಾಡಿದೆ. ಈ ವರ್ಷ ತಂದ ಗಣೇಶನ ಮೂರ್ತಿಯನ್ನು ಮುಂದಿನ ವರ್ಷ ಮುಳುಗಿಸುತ್ತಿದ್ದರು. ಈ ವರ್ಷಕ್ಕೆ ಹಿಂದಿನ ಚೌತಿಗೆ ತಂದ ಗಣೇಶನ ಮೂರ್ತಿ ವಿಸರ್ಜನೆ ಆಗುತ್ತಿತ್ತು. ಆದರೆ ಇವೆಲ್ಲಕ್ಕಿಂತ ಹೆಚ್ಚು ನೆನಪಾಗುವುದು ಆಲೆಮನೆ.

ಶಿರಸಿಯ ಹಳ್ಳಿಗಳಲ್ಲಿ ಆಲೆಮನೆ ಮತ್ತು ಚೌತಿಯ ಚಕ್ಕುಲಿ ಕಂಬಳ ಎಂಬುದು ತೀರಾ ವಿಶಿಷ್ಟ. ಆಲೆ ಮನೆ ಪ್ರಾರಂಭವಾದರೆ ಸಾಕು ಸುತ್ತಲಿನ ಹಳ್ಳಿಗರೆಲ್ಲ ಕಬ್ಬಿನ ಹಾಲು ಕುಡಿಯಲು ಬರುತ್ತಿದ್ದರು. ಈಗ ಯೋಚಿಸಿದರೆ ಅಷ್ಟೆಲ್ಲ ಜನರಿಗೆ ಸಾಕಾಗುವಷ್ಟು ಕಬ್ಬಿನ ಹಾಲನ್ನು ಕೊಟ್ಟ ಮೇಲೂ ಬಾಟಲಿ ತಂದವರಿಗೆ ಅದರಲ್ಲಿ ತುಂಬಿಸಿ ಕೊಡುವ ಪರಿಪಾಠ ತೀರಾ ವಿಚಿತ್ರ ಎನ್ನಿಸುತ್ತದೆ. ವ್ಯವಹಾರಿಕವಾಗಿ ನೋಡಿದರೆ ಅದು ತೀರಾ ನಷ್ಟದ ಕೆಲಸ ಎನ್ನಿಸಿದರೂ ಆಗಿನ ಕಬ್ಬಿನ ತೋಟದ ಮಾಲಿಕರಾರೂ ಹಾಗೆ ತಿಳಿದುಕೊಳ್ಳುತ್ತಿರಲಿಲ್ಲ.

ಸುತ್ತಲಿನ ಹಳ್ಳಿಗಳಲ್ಲಿ ಫೆಬ್ರುವರಿಯಿಂದ ಎಪ್ರಿಲ್ ತಿಂಗಳವರೆಗೆ ಒಂದಲ್ಲಾ ಒಂದು  ಕಡೆ ಆಲೆ ಮನೆ ನಡೆಯುತ್ತಿದ್ದರೂ ನನಗೆ ಸಂತೋಷನ ಮನೆಯ ಆಲೆಮನೆಯ  ಗಮ್ಮತ್ತೇ ಬೇರೆ ಎನ್ನಿಸುತ್ತಿತ್ತು. ಆಲೆಮನೆ ನಡೆಯುವ ಮೂರ್ನಾಲ್ಕು ದಿನವೂ ನಾನು ಅಲ್ಲಿಗೆ ಹೋಗಲೇ ಬೇಕು. ಒಂದು ದಿನ ತಪ್ಪಿಸಿಕೊಂಡರೂ “ಮಾಸ್ತರ ಮಗಳು ಯಾಕೋ ಬಂದಿಲ್ಲ. ಹೋಗಿ ನೋಡ್ಕಂಡು ಬಾರೋ ..” ಎಂದು ಸಂತೋಷನ ತಂದೆ ಚಾಮರಾಜ ಗೌಡರು ತಮ್ಮ ಎರಡನೆಯ ಮಗ ಸಂಪತ್ತುವನ್ನು ಕಳುಹಿಸುವಷ್ಟು ಪ್ರೀತಿ, ಆತ್ಮೀಯತೆ. ಆ ನಾಲ್ಕೂ ದಿನ ನಮ್ಮ ಮನೆಯಲ್ಲಿ ವಿಶಿಷ್ಟವಾದ ಕಬ್ಬಿನ ಹಾಲಿನ ದೋಸೆ. ಕಮ್ಮಗಿನ ಹಸುವಿನ ತುಪ್ಪವನ್ನೋ ಅಥವಾ ಹರಳು ಹರಳಾದ ಉಪ್ಪಾಗೆ ಬೀಜದ ತುಪ್ಪವನ್ನೋ ಹಾಕಿಕೊಂಡು ತಿನ್ನುತ್ತಿದ್ದರೆ ಹೊಟ್ಟೆಗೆ ಎರಡೆರಡು ಬಾಯಿ.

ಇಷ್ಟೆಲ್ಲ ಆದ ಮೇಲೆ ಸುತ್ತಲಿನ ಹವ್ಯಕರ ಮನೆಗಳಲ್ಲಿ ಆಲೆಮನೆಯಾದರೆ ನಾನು ಅಲ್ಲಿಗೆ ಹೋಗದಿದ್ದರೂ ದೊಡ್ಡ ದೊಡ್ಡ ಬಾಟಲಿಗಳಲ್ಲಿ ಕಬ್ಬಿನ ರಸ ಬರುತ್ತಿದ್ದುದು ಅಷ್ಟೇ ಅಲ್ಲ, ರುಚಿರುಚಿಯಾದ ತೆಳ್ಳಗಿನ ತೊಡದೇವೂ ಬರುತ್ತಿತ್ತು. ಬಹುಶಃ ಆ ಎರಡು ತಿಂಗಳು ನಾನು ಸರಿಯಾಗಿ ಅನ್ನ ಊಟ ಮಾಡುತ್ತಿದ್ದುದೇ ಸುಳ್ಳೇನೋ. ಆಲೆಮನೆಯ ವೈಭವವನ್ನು ಆಡುಕಳದ ಮಣ್ಮನೆಯವರ ವರ್ಣನೆಯನ್ನು ಓದಿಯೇ ತಿಳಿಯಬೇಕು..

ತೀರಾ ಎದುರಾ ಎದುರು ಹೇಳಿ ಬಿಡುವವಳು ಎಂಬ ಖ್ಯಾತಿಗೆ ಒಳಗಾಗಿದ್ದ ನಾನು ಬಿ ಇಡಿ ದಿನಗಳಲ್ಲಿ ನನ್ನ ಸ್ವಭಾವಕ್ಕೆ ತೀರಾ ವಿರುದ್ಧವಾಗಿ ಎಲ್ಲವನ್ನೂ ನನ್ನಲ್ಲೇ ನುಂಗಿಕೊಳ್ಳುವ ಗುಣವನ್ನು ಪ್ರಯತ್ನಪೂರ್ವಕವಾಗಿ ರೂಢಿಸಿಕೊಂಡಿದ್ದೆ. ‘ಕೇವಲ ಮೇಲ್ವರ್ಗದವರಿಗಷ್ಟೇ ಒಳ್ಳೆಯ ಇಂಟರ್ನಲ್ ಮಾರ್ಕ್ಸ್ ಸಿಕ್ತದೆ” ಎಂಬ ಸಣ್ಣ  ಗುಸುಗುಸುವಿಕೆಗೆ ಒಳಗಾಗಿರುವ  ಕಾಲೇಜಿನಲ್ಲಿ ಹಾಗೆ ಬಾಯಿ ಮುಚ್ಚಿಕೊಂಡು ಆಂತರಿಕ ಅಂಕಗಳನ್ನು ಪಡೆಯಬೇಕಾದ ಅನಿವಾರ್ಯತೆ  ನನ್ನ ಪಾಲಿಗಿತ್ತು.

ಇಷ್ಟಾಗಿಯೂ  ಒಮ್ಮೆ ಯಾರೋ ರಾಮಾಯಣದ ಪ್ರಸ್ತುತತೆಯ ಬಗ್ಗೆ ಮಾತನಾಡಲು ಬಂದವರ ಬಳಿ ರಾಮ ಪತಿಧರ್ಮವನ್ನು ಸರಿಯಾಗಿ ನಿಭಾಯಿಸಲಿಲ್ಲ. ಹೀಗಾಗಿ ಆತ  ಪುರುಷೋತ್ತಮನಾಗಲು ಹೇಗೆ ಸಾಧ್ಯ ಎಂದು ಕಿರಿಕ್ ಮಾಡಲು ತೊಡಗಿದ್ದೆ. ಬಹುಶಃ ಅವರನ್ನು ವಿರೋಧಿಸುತ್ತ ಎರಡು ಪ್ರಶ್ನೆ ಕೇಳಿದ್ದೆನೇನೋ ಅದೆಲ್ಲಿದ್ದರೋ ಎಸ್ ಜಿ ಹೆಗಡೆ ಸರ್. ಒಳ ಬಂದು ನನ್ನ ದಿಟ್ಟಿಸಿದ್ದರು. ಪ್ರಶಾಂತವಾಗಿದ್ದ ಅವರ ಕಣ್ಣುಗಳಲ್ಲಿ “ಮುಂದೆ ಪ್ರಶ್ನೆ ಕೇಳಬೇಡ” ಎಂಬ ಅಣತಿ ಇರುವ ಹಾಗೆ ಸುಮ್ಮನೆ ಕುಳಿತುಬಿಟ್ಟೆ. ಅದಾದ ನಂತರ ಬಿ ಇಡಿ ಮುಗಿಸಿದ ನಂತರ, “ಈ ಹುಡುಗಿ ಇಷ್ಟೆಲ್ಲ ಜೋರಿದ್ದಾಳೆ ಅಂತಾ ಗೊತ್ತೇ ಇರಲಿಲ್ಲ ಬಿ ಇಡಿಲಿ ಇದ್ದಾಗ” ಎಂದು ರೇಗಿಸಿದಾಗಲೆಲ್ಲ, “ಆಗ ಇಂಟರ್ನಲ್ ಮಾರ್ಕ್ಸ್ ಎನ್ನೋ ಭೂತ ಇತ್ತಲ್ಲ” ಎಂದು ನಗುತ್ತೇನೆ.

ಎಸ್ ಜಿ ಹೆಗಡೆಯವರಿಗೆ ನಾನೆಂದರೆ ವಿಶೇಷ  ಅಕ್ಕರೆ ಇರೋದಕ್ಕೆ ಕಾರಣ ಆ ಹೊತ್ತಿಗಾಗಲೇ ನಾನು ಕವನ ಕಥೆ ಬರೆಯಲು ತೊಡಗಿದ್ದೆ ಎಂಬುದೊಂದೇ ಆಗಿರದೇ ಅಪ್ಪಟ ಹವ್ಯಕ ಭಾಷೆಯಲ್ಲಿ ಮಾತನಾಡುತ್ತಿದ್ದೆ ಎಂಬುದೂ ಆಗಿರಬಹುದೇ ಎಂಬ ಅನುಮಾನ ಒಮ್ಮೊಮ್ಮೆ ಕಾಡುತ್ತದೆ. ಶಿರಸಿಯ ಬರೀ ಹವ್ಯಕರೇ ತುಂಬಿರುತ್ತಿದ್ದ ಹಳ್ಳಿಗಳಲ್ಲಿ ನನಗಿರುವ ಎಲ್ಲ ಸ್ನೇಹಿತರೂ ಹವ್ಯಕರೇ.

ಸ್ನೇಹಿತೆ ಮಧುರಾ ಮತ್ತು ಅವಳಕ್ಕ ಸಂಧ್ಯಾ ನನಗೆ ತೀರಾ ಆತ್ಮೀಯರು. ಅವರ  ಮನೆಯ ಎಲ್ಲಾ ಕಾರ್ಯಕ್ರಮಗಳಿಗೆ  ನಾನು ಹೋಗಿಯೇ ಹೋಗುತ್ತಿದ್ದೆ. ಅದಾಗಲೇ ಹೆಣ್ಣಿನ ಅಭಾವದಿಂದ ಬಳಲುತ್ತಿದ್ದ ಆಕೆಯ ಸಂಬಂಧಿಯೋರ್ವರು ನನ್ನನ್ನು ಅಲ್ಲಿ ಪದೇ ಪದೇ ನೋಡಿ  ನನ್ನ ಸ್ನೇಹಿತೆಯ ಬಳಿ “ಕೂಸಿನ್ ಜಾತಕ ಹೊರ್ಗಾಕಿದ್ವ?” ಎಂದು ವಿಚಾರಿಸಿದ್ದರು. ತೀರಾ ತರಲೆಯಾಗಿದ್ದ ನನ್ನ ಸ್ನೇಹಿತೆ, “ಜಾತ್ಕ ಪಾತ್ಕ ಎಂತದ್ದೂ ಬ್ಯಾಡ, ಹುಡ್ಗಿನ ಒಪ್ಪಸ್ತೆ. ಆದ್ರೆ ಕೂಸು ಮೀನು ತಿಂತು. ಆಗ್ತ? ಎಂದು ಕೇಳಿ ಎಲ್ಲರನ್ನೂ ಕಕ್ಕಾಬಿಕ್ಕಿಯಾಗಿಸಿದ್ದಳು. ಚಂದದ ಹವ್ಯಕ ಮಾತನಾಡುತ್ತ ಬೆರೆಯುವ ಹುಡುಗಿ ಮೀನು ತಿನ್ನುವವಳೇ ಎಂದು ನಂಬಲೂ ಆಗದ, ನಂಬದಿರಲೂ ಆಗದ ದ್ವಂದ್ವದಲ್ಲಿ ಸಿಲುಕಿದ್ದರು.

ಅದೇ ಸಮಯದಲ್ಲಿ ಮಧುರಾ ತಾಯಿ ಕುಂದಾಪುರ, ಮಂಗಳೂರಿನ ಕಡೆಯಿಂದ ಹೆಣ್ಣು ತಂದ ಕಥೆಯನ್ನು ಸ್ವಾರಸ್ಯವಾಗಿ ವಿವರಿಸಿದ್ದರು. “ನಮ್ ಪೈಕಿನೆಯಾ. , ಆದರೆ ದಕ್ಷಿಣ ಕನ್ನಡದವರು. ಹಿಂಗಾಗಿ ಆಚಾರ ಎಲ್ಲ ಬ್ಯಾರೆ ಇದ್ದು..” ಎಂದು ಮನೆ ತುಂಬಿಸಿಕೊಂಡಿದ್ದ ಹುಡುಗಿಯರು ಮಳೆಗಾಲದಲ್ಲಿ ತೋಟ, ಗದ್ದೆಯ ಸಮೀಪದಲ್ಲಿ ಬರುವ ಏಡಿಗಳನ್ನು ಹಿಡಿದು ಗುಟ್ಟಾಗಿ ಪದಾರ್ಥ ಮಾಡಿ ತಿಂದು, ಜಾತಿ ಬಾಂಧವರಲ್ಲಿ ಅಲ್ಲೋಲಕಲ್ಲೋಲವಾಗಿ, ಸೀಮೆಯ ಗುರುಗಳಿಂದ ಪರಿಹಾರ ಮಾಡಿಸಿಕೊಂಡ ಕಥೆಯನ್ನು ಕೇಳಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದೆವು.

ಅದೇ ಕಥೆ  ಕಾದಂಬರಿಯಲ್ಲಿಯೂ  ವಾಸುದೇವನ ಮದುವೆಯ ವಿಷಯದಲ್ಲಿ ಪ್ರಸ್ತಾಪಿತವಾಗಿದ್ದು ಗಂಡು ಮಕ್ಕಳೇ ಈಗಿನ ಬದುಕಿಗೂ ಮತ್ತು ಸತ್ತ ನಂತರ ಸದ್ಗತಿ ನೀಡುವವರು ಎಂಬ ನಂಬಿಕೆಯಲ್ಲಿ ಹೆಣ್ಣು ಬ್ರೂಣವನ್ನು ನಾಶ ಮಾಡಿದ್ದರ ಫಲ ಹೆಣ್ಣಿನ ಅಭಾವ  ಉಂಟಾಗಿದೆ ಎಂಬ ಮಾತನ್ನು  ಮತ್ತೆ ಮತ್ತೆ ನೆನಪಿಸುವಂತೆ ಮಾಡಿತು. ಆತ್ಮೀಯನೊಬ್ಬನಿಗೆ “ಮದುವೆ ಆಗೋ ಮಾರಾಯ ಬೇಗ” ಎಂದಾಗ “ನನ್ನಂಗೆ ಪುರೋಹಿತ್ಗೆ ಮಾಡ್ಕಂಡವ್ರಿಗೆ ಹೆಣ್ಣು ಸಿಗ್ತಿಲ್ಯೆ…” ಎಂದು ಮುಖ ಚಿಕ್ಕದು ಮಾಡಿಕೊಂಡಿದ್ದು ಬೇಡವೆಂದರು ನೆನಪಾಗಿ ಬೇಸರ ಹುಟ್ಟಿಸಿತು.

ಇಡೀ ಕಾದಂಬರಿ ಪ್ರಾರಂಭವಾಗುವುದೇ ಕಾಮಾಕ್ಷಿ ಎಂಬ ಕೆಲಸದ ಹೆಣ್ಣಿಗೆ ಮೈಮೇಲೆ ಬರಲು ಪ್ರಾರಂಭವಾದ ಮೇಲೆ. ಮೊದಲಿನ ದಶರಥನ ಕಥೆ, ಹುಮಾಟಿಯ ಕಥೆ, ಮದ್ಗುಣಿ ಡಾಕ್ಟರ್ ಕಥೆಗಳೆಲ್ಲ ಕಾದಂಬರಿಯ ಪೀಠಿಕೆಗಳಂತೆ ಭಾಸವಾದರೂ ಮೂಲ ಕಥೆಯ ವೇಗವನ್ನು ಹೆಚ್ಚಿಸಿಕೊಳ್ಳಲು ವೇಗೋತ್ಕರ್ಷಕವಾಗಿ ಕೆಲಸ ಮಾಡುತ್ತದೆ ಎನ್ನಬಹುದು.

ಕೃಷ್ಣ ಕೊಟ್ಟ ಯಕ್ಷಿ ಎಂಬ ಆಕಾರವೇ ಇಲ್ಲದ ಲೋಹದ ಮೂರ್ತಿ  ನಂತರದ ದಿನಗಳಲ್ಲಿ ಆಡುಕಳ ಎಂಬ ಮಣ್ಮನೆಯ ಮನೆತನವನ್ನು ಸಂಪೂರ್ಣ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವುದನ್ನು ಕಾಣಬಹುದು. ಹೆಂಡತಿ ಸಾವಿತ್ರಿಗೆ ಗಡ್ಡ ಮೀಸೆ ಬೆಳೆದು ಆಕೆ ಮನೆ ಬಿಟ್ಟು ನಾಪತ್ತೆಯಾದ ಮೇಲೆ, ಒಂಟಿಯಾದ ದಶರಥನ ಮನೆಯೊಳಗೆ ಇರುವ ಗುಪ್ತ ನಿಧಿಯ ಆಸೆಗೆ ಬಂದ ಕಳ್ಳರು ಏನು ಸಿಗದ ಸಿಟ್ಟಿನಲ್ಲಿ  ಆತನನ್ನು ಬೆತ್ತಲೆಯಾಗಿಸಿ ಕಟ್ಟಿ ಹಾಕಿ, ಎಮ್ಮೆಯನ್ನು ಹೊಡೆದುಕೊಂಡು, ಅದರ ಕರುವನ್ನು ದಶರಥನ ಪಕ್ಕದಲ್ಲೇ ಕಂಬಕ್ಕೆ ಕಟ್ಟಿಹಾಕಿ ತಾಯಿಯ ಹಾಲಿನ ಆಸೆಗೆ ಆ ಎಮ್ಮೆ ಕರು ಬೆತ್ತಲೆ ದಶರಥನನ್ನೇ ಎಳೆದಾಡಿದ ಪ್ರಸಂಗದಿಂದ ಪ್ರಾರಂಭವಾಗುವ ಕಾದಂಬರಿ, ಅದೇ ದಶರಥ ಅವನ ಅಣ್ಣನ ಮಗನ ಕರಾರುವಕ್ಕಾದ ಲೆಕ್ಕಾಚಾರದಲ್ಲಿ ಗುರು ಮಂದಿರದ ಗುರುವಾಗಿ ಉಪ್ಪು ಹುಳಿ ಖಾರವನ್ನೆಲ್ಲ ಬಿಟ್ಟು, ದಿನಕ್ಕೆ ಇಂತಿಷ್ಟೇ ಆಹಾರದ ಪಥ್ಯದಲ್ಲಿ ನಿಜವಾಗಿಯೂ ಸನ್ಯಾಸಿ ಆಗಬೇಕಾದ ಪ್ರಸಂಗದವರೆಗೂ ಮನುಷ್ಯನ ಸ್ವಾರ್ಥ, ಸಣ್ಣತನ ಮತ್ತು ಆಸೆಬುರುಕತನವನ್ನು ತೀರಾ ಸೂಕ್ಷ್ಮವಾಗಿ ಹೇಳಿಯೂ ಹೇಳದಂತೆ ಹೇಳುತ್ತ ಹೋಗುತ್ತದೆ.

ಇದು ಕೇವಲ ದಶರಥ, ಗಂಗಣ್ಣ, ಕೃಷ್ಣ, ಅವನ ಮಗ ಸೂರಣ್ಣ, ಪರಮೇಶ್ವರ, ಭವಾನಿಯರ  ಸ್ವಾರ್ಥ ಸಣ್ಣತನವನ್ನಷ್ಠೇ ವಿವರಿಸುವುದಿಲ್ಲ. ದೇವಿ ಮೈಮೇಲೆ ಆವಾಹಿತಳಾಗುವ ಕಾಮಾಕ್ಷಿ ಎಂಬ ಕೆಲಸದವಳು ಮಾಡುವ  ದೇವಿಯನ್ನು ದೇಗುಲದಲ್ಲಿ ಕಟ್ಟಿ ಹಾಕಿದರೆ ತನಗೆ ಲಾಭವಾಗದು ಎಂಬ ಸ್ವಾರ್ಥ ಸಾಧನೆ, ದೇಗುಲದ ಹೆಸರಲ್ಲಿ ಹೋಮ ಹವನ ಮಾಡಿ ತನ್ನ ಲಾಭ ನೋಡಿಕೊಳ್ಳುವ ಯಜ್ಞೇಶ್ವರರ ಸ್ವಾರ್ಥ, ಮದುವೆಗಾಗಿ ಪರಜಾತಿಯವಳನ್ನು ದತ್ತಕ ತೆಗೆದುಕೊಂಡು ಕನ್ಯಾದಾನ ಮಾಡುವ ಗಣಪತಯ್ಯ-ಪದ್ಮಾವತಿ ದಂಪತಿಗಳ ಸ್ವಾರ್ಥ ಎಲ್ಲವೂ ಎಳೆಎಳೆಯಾಗಿ ಬಿಚ್ಚಿಕೊಳ್ಳುತ್ತದೆ.

ಕಾದಂಬರಿ ಪ್ರಸ್ತುತ ಸನ್ನಿವೇಶದ ಕನ್ನಡಿಯಂತೆ ಗೋಚರವಾಗುತ್ತದೆ. ದೇವರು ಧರ್ಮ ಮತ್ತು ದೇವಾಲಯಗಳ ಹಿಂದಿನ ದುರುದ್ದೇಶಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕೆಂದರೆ ನೀವೊಮ್ಮೆ ಈ ಕಾದಂಬರಿಯನ್ನು ಓದಲೇ ಬೇಕು. ಸುಲಲಿತವಾದ ಭಾಷೆ, ಶ್ರೀಧರ ಬಳಗಾರರ ನವಿರು ಕಥೆಗಳಂತೆ ಆಡುಕಳವನ್ನು ಅತಿಯಾಗದ ಒಳಪ್ರವೇಶವಿಲ್ಲದ ನೇರ ನಿರೂಪಣೆಯ ಮೂಲಕ ಒಂದೇ ಗುಕ್ಕಿಗೆ ಓದಿ ಚಿಂತನೆಗೆ ಹಚ್ಚಬಹುದಾದ ಚಂದದ ಕಾದಂಬರಿಯನ್ನಾಗಿಸಿದ್ದಾರೆ.

19 Responses

 1. ಋತಊಷ್ಮ says:

  ಅಂಕಣ ಕಾಣಲಾರದ ಲೋಕಕ್ಕೆ ಕರೆದೊಯ್ದಂತಾಯಿತು. ಖಂಡಿತ ಓದುವೆ ಮ್ಯಾಮ್.

  • Shreedevi keremane says:

   ಋತಾ ನಿಮ್ಮಂತಹ ಸಾಹಿತ್ಯದ ವಿದ್ಯಾರ್ಥಿಗಳು ಓದಲೇ ಬೇಕು

 2. ರಾಜು ಪಾಲನಕರ says:

  ಶ್ರೀದೇವಿ ಮೇಡಂ ಈ‌ ವಾರದ ಅವಧಿಯಲ್ಲಿ ನಾನು ನಿಮ್ಮ ಅಂಕಣದ ಬರಹ ಓದಿದೆ…ನೀವು ಚಿಕ್ಕವರಿದ್ದಾಗ ಶಿರಸಿ ತಾಲೂಕಿನಲ್ಲಿ ನಿಮ್ಮ ವಿಧ್ಯಾರ್ಥಿ ಜೀವನ ಹಾಗೂ ನಿಮ್ಮ. ಸಹಪಾಠಿಗಳ ಜೊತೆ ಒಡನಾಟದ ಕುರಿತು ವಿವರವಾದ ಮಾಹಿತಿ ತಿಳಿಯಿತು.. ಹಾಗೂ ಆ ಸಮಯದಲ್ಲಿ ನೀವು ಅಪ್ಪಟ ಹವ್ಯಕ ಭಾಷೆಯಲ್ಲಿ ಮಾತನಾಡುವ ವಿಷಯ ಕೇಳಿ ತುಂಬಾ ಆಶ್ಚರ್ಯವೇನಿಸಿತು ಹಾಗೂ ಈಗ ಪುನಃ ನಿಮ್ಮ ಬಾಯಲ್ಲಿ ಹವ್ಯಕ ಮಾತುಗಳು ಕೇಳಬೇಕು ಎನಿಸಿತು… ಅಂಕಣದಲ್ಲಿ ನೀವು ಹೀರೇಗುತ್ತಿಯ ಅಲೆಮನೆ ಬೆಲ್ಲದ ಕುರಿತು ಬರೆದದ್ದು ನಿಜ…ನಾನು ಕೂಡ ಈ ಹಿಂದೆ ಹೀರೇಗುತ್ತಿಯ ಅಲೆಮನೆ ಬೆಲ್ಲದ ಸವಿಯನ್ನು ಹಲವಾರು ಬಾರಿ ನನ್ನ ಗೆಳೆಯರ ಮೂಲಕ ಸವಿದಿದ್ದೇನೆ…ಈಗಲೂ ಕೂಡ ಹೀರೇಗುತ್ತಿಯ ಅಲೆಮನೆ ಬೆಲ್ಲದ ಸುದ್ದಿ ತೆರೆದರೆ ಬಾಯಲ್ಲಿ ನೀರು ಬರುತ್ತದೆ… ನಿಮ್ಮ ಗುರುಗಳಾದ ಶ್ರೀಧರ ಬಳಗಾರ ಅವರ .‌‌.‌ಆಡುಕಳ.‌‌.ಕಾದಂಬರಿಯ ಕುರಿತು ನಿಮ್ಮ ವಿಮರ್ಶೆ ತುಂಬಾ ಚೆನ್ನಾಗಿದೆ ಪ್ರತಿವಾರ ನಿಮ್ಮ ಈ ಅಂಕಣ ತುಂಬಾ ಚೆನ್ನಾಗಿ ಬರುತ್ತಿದೆ ನಿಮಗೆ ಅಭಿನಂದನೆಗಳು

  • Shreedevi keremane says:

   ರಾಜು ಸರ್ ಅಪ್ಪಟ ಕೊಂಕಣಿಯ ಕಾರವಾರದಲ್ಲಿ ನಿಮ್ಮ ಕನ್ನಡ ಪ್ರೀತಿ ನನಗೊಂದು ವಿಸ್ಮಯ

 3. ರಮೇಶ ಗಬ್ಬೂರ್ says:

  ಆಡುಕುಳ ಕಾದಂಬರಿ ಪರಿಚಯಿಸ್ತಾರೋ ಅಥವಾ ತಮ್ಮ ಆತ್ಮಕಥೆಯನ್ನೆ ಕಾದಂಬರಿ ರೂಪದಲ್ಲಿಡಲು ಪ್ರಯತ್ತಿಸ್ತಾರೋ ಅನ್ನುವ ಬ್ರಮೆಯಂತು ಬರುತ್ತೆ…ಹಾಗಂತ ಪುಸ್ತಕ ಪರಿಚಯವನ್ನೂ ತಿರಸ್ಕರಿಸ್ತಾರೆ ಅಂದುಕೊಂಡರೆ ತಪ್ಪಾಗ್ತದೆ… ಇವರ ಮಾತುಗಳು ಕಥೆಯೊಳಗೊಂದು ಕಥೆಯಿದ್ದಂತೆ… ಸುಂದರವಾಗಿ ಮಾತುಗಳ ಪೋಣಿಸುತ್ತಾ ಪುಸ್ತಕ ಪರಿಚಯಿಸುವ ಪರಿಯೇ ಹೊಸದು… ಓದಿದ ನಂತರ ಹಿರೇಗುತ್ತಿ ಆಲೆಮನೆಗೆ ಹೋಗಿ ಬಂದ ಅನುಭವ..ಶ್ರೀದೇವಿ ಕೆರೆಮನೆ ಅವರೆ ಪುಸ್ತಕ ಸಿಕ್ಕರೆ ಖಂಡಿತ ಓದುವೆ.. ಧನ್ಯವಾದ..
  ರಮೇಶ ಗಬ್ಬೂರ್…

  • Shreedevi keremane says:

   ರಮೇಶ ಸರ್ ನಿಮ್ಮ ಗಜಲ್ ಗಳ ಅಪ್ಪಟ ಅಭಿಮಾನಿ ನಾನು

 4. ಪುಷ್ಪಾ ನಾಯ್ಕ ಅಂಕೋಲ says:

  ಆಡುಕಳ ಪರಿಚಯಿಸುವದರೊಂದಿಗೆ ಬರಹಗಾರ ವ್ಯಕ್ತಿ ತ್ವದಪರಿಚಯವೂ ಅಷ್ಟೇ ನಾಜೂಕಾಗಿ ನವಿರಾಗಿ ಮೂಡಿದೆ ಈ ಅಂಕಣ ಆಲೇ ಮನೆಯ ನೆನಪು ಮತ್ತೆ ಮೂಡಿಸಿತು ಧನ್ಯವಾದಗಳು ನಿಮಗೆ ಮುಂದಿನ ಅಂಕಣಕ್ಕಾಗಿ ಕಾಯುತ್ತಾ ಇರುವೆ

  • Shreedevi keremane says:

   ಥ್ಯಾಂಕ್ಯೂ… ಈ ನಿರೀಕ್ಷೆ ಗಳೇ ನನಗೆ ಸ್ಪೂರ್ತಿ..

 5. Prabhakar says:

  ಅವಧಿಯಲ್ಲಿ ಈ ಅಂಕಣ ನಿಜಕ್ಕೂ ಅತ್ಯಂತ ಮಹತ್ವದ್ದು. ಶ್ರೀದೇವಿ ಕೆರೆಮನೆಯವರು ಈ ಅಂಕಣದಲ್ಲಿ ಅಪರೂಪದ ಮತ್ತು ಬೆಲೆ ಬಾಳುವ ಪುಸ್ತಕಗಳ ಕುರಿತು ಬರೆಯುತ್ತಿದ್ದಾರೆ.

  • Shreedevi keremane says:

   ಎ. ಎಸ್ ಪ್ರಭಾಕರ್ ಸರ್…. ನಿಮ್ಮ ಮಾತಿಗೆ ಏನು ಹೇಳಲಿ? ನನ್ನ ಬಗ್ಗೆ ನನಗೆ ಈಗ ನಂಬಿಕೆ ಬರ್ತಿದೆ

 6. SUDHA SHIVARAMA HEGDE says:

  ಶ್ರೀಧರ ಬಳಗಾರ ನನ್ನ ನೆಚ್ಚಿನ ಗುರುಗಳು. ಅವರ ಮೊದಲ ಕಥಾ ಸಂಕಲನ ಅಧೋಮುಖ ನಮ್ಮ ಬ್ಯಾಚ್ ನಲ್ಲೇ ಬಿಡುಗಡೆಯಾಗಿದ್ದು. ಆಡುಕಳ ನನ್ನ ಊರು ಕೂಡಾ. ಕಾದಂಬರಿಯನ್ನು ಓದಬೇಕು.

  • Shreedevi keremane says:

   ಶ್ರೀಧರ ಬಳಗಾರ ತಮ್ಮ ಎಲ್ಲ ವಿದ್ಯಾರ್ಥಿಗಳಿಗೆ ನೆಚ್ಚಿನ ಗುರುಗಳು

 7. ತಮ್ಮಣ್ಣ ಬೀಗಾರ says:

  ಆಲೆಮನೆಯಲ್ಲಿ ನೊರೆಬೆಲ್ಲ ಸವಿದಹಾಗಾಯಿತು.ಆಡುಕುಳ ಓದಬೇಕೆನಿಸಿತು.ಅಭಿನಂದನೆಗಳು.

 8. Ashwini.v says:

  ನಾನು ನಿಮ್ಮ ಅಭಿಮಾನಿ ಆಗ್ಬಿಟ್ಟೆ. ತುಂಬಾ ಚೆಂದ ಬರೀತಿರಿ ನೀವು,

 9. Prakash Nayak says:

  ಅಲೆಮನೆಯ ಅನುಭವ ಇರಬಹುದು ಎಂದು ಓದಹೋದರೆ ಎಲ್ಲೆಲ್ಲೋ ಅಲೆದಾಡಿಸಿತು. ಎಷ್ಟೆಲ್ಲ ಒಳ್ಳೆಯ ಪುಸ್ತಕಗಳು! ಸರಣಿ ಚೆನ್ನಾಗಿ ಬರುತ್ತಿದೆ

  • Shreedevi keremane says:

   ಥ್ಯಾಂಕ್ಯೂ ಪ್ರಕಾಶಣ್ಣ. ನನ್ನ ಲೇಖನ ಸಾಗರವನ್ನೂ ದಾಟಿ ನಿಮ್ಮನ್ನು ತಲುಪಿದೆ ಎನ್ನವುದೇ ಖುಷಿ

 10. Sreedhar says:

  ಮೇಡಂ ,

  ನೀಮಗೆ ಇಷ್ಟೊಂದು ವಿಮರ್ಶೆಯ ಶಕ್ತಿ ದೇವರು ಕೊಟ್ಟಿದ್ದಾರೆ , Really great.
  ನಾನು ಓದಿನಲ್ಲಿ ಕಳೆದು ಹೋದೆ.

Leave a Reply

%d bloggers like this: