fbpx

ನರೇಂದ್ರ ಮೋದಿಯ `ನೋಟ್ ಬ್ಯಾನು’  ಮತ್ತು ನನ್ನ ಒಡಹುಟ್ಟಿದ ಅಕ್ಕನ ಸಾವು

ಆರ್. ರಾಮಕೃಷ್ಣ

ಅದು ನವೆಂಬರ್ 23, 2017.

ಸಮಯ ಮಧ್ಯಾನ್ಹ ಸುಮಾರು 1.30.

ನನಗೆ ಒಂದು ಫೋನ್ ಕರೆ ಬಂತು.

ಆ ಸುದ್ದಿ ಕೇಳಿ ನಮ್ಮ ಮೈಯಲ್ಲಿ ಒಂದು ಕ್ಷಣ ರಕ್ತ ತಣ್ಣಗಾದ ಅನುಭವ.

ನನ್ನ ಒಡಹುಟ್ಟಿದ ಅಕ್ಕ ರತ್ನಕ್ಕ (ಆರ್. ನಾಗರತ್ನ) ನೇಣಿಗೆ ಶರಣಾಗಿದ್ದರು. ಫ್ಯಾನಿನಿಂದ ತತ್‍ಕ್ಷಣ ಇಳಿಸಿ ಚಿಕಿತ್ಸೆಗೆ ಪ್ರಯತ್ನ ಮಾಡಿ ಅಂತ ನಾನು ಹೇಳಿದೆ. `ಏನೂ ಪ್ರಯೋಜನ ಇಲ್ಲ, ಎಲ್ಲ ಮುಗಿದುಹೋಗಿದೆ’ ಎಂದರು ಆ ಕಡೆಯಿಂದ. ತಕ್ಷಣ ಕೆಲಸ ಬಿಟ್ಟು ಆ ಕಡೆಗೆ ಓಡಿದೆ. ಇನ್ನೆಲ್ಲಿಯ ಅಕ್ಕ. !!! ನನಗಿಂತ ಎರಡು ವರ್ಷ ದೊಡ್ಡವರಾದ ನನ್ನ ಪ್ರೀತಿಯ ಅಕ್ಕ ಇನ್ನಿಲ್ಲವಾಗಿದ್ದರು.

ಹೆಚ್ಚೇನು ಓದಿರದಿದ್ದರೂ, ನನ್ನ ಅಕ್ಕ ಸ್ವಂತ ಆಸಕ್ತಿಯಿಂದ ಟೈಲರಿಂಗ್ ಕೆಲಸ ಕಲಿತು ಸ್ವಾವಲಂಬಿ ಜೀವನ ನಡೆಸುತ್ತಿದ್ದರು. ಮದುವೆಯಾದ ಮೇಲೂ ಈ ವೃತ್ತಿ ಮುಂದುವರಿಸಿದ್ದರು.

ಆದರೆ ಅಕ್ಕ ಸುಮಾರು ಹತ್ತು ವರುಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಕೂಡ ನಡೆಯುತ್ತಿತ್ತು. ಹಲವು ಬಾರಿ ಚೇತರಿಸಿಕೊಂಡಿದ್ದರು. ಮತ್ತೆ ಖಿನ್ನತೆಗೆ ಗುರಿಯಾದಾಗ ಮತ್ತೆ ಚಿಕಿತ್ಸೆ ಕೊಡಿಸುತ್ತಿದ್ದೆವು.

ಮನುಷ್ಯನ ಮನಸ್ಸು ಬಹಳ ಸಂಕೀರ್ಣವಾದುದು. ನಾನು ನಂಬುವಂತೆ ಸಾಮಾನ್ಯವಾಗಿ ಯಾವುದೇ ಮನುಷ್ಯನ ಖಿನ್ನತೆಗೆ ಅಥವಾ ಆತ್ಮಹತ್ಯೆಗೆ ಒಂದೇ ಒಂದು ಕಾರಣ ಎಂಬುದು ಇರಲಾರದು. ಹಲವು ಕಾರಣಗಳಿರಬಹುದು. ಅದರಲ್ಲಿ ಕೆಲವು ಪ್ರಧಾನ ಕಾರಣಗಳಿರಬಹುದು.

ಸುಮಾರು ಹತ್ತು ಹನ್ನೆರಡು ವರ್ಷಗಳ ಹಿಂದೆಯೇ ನನ್ನ ಅಕ್ಕನ ಗಂಡ (ನನ್ನ ಮಾಮ) ಅನಾರೋಗ್ಯಕ್ಕೆ ತುತ್ತಾಗಿದ್ದರು. ವೈದ್ಯರ ಸಲಹೆಗಳನ್ನು ನಿರ್ಲಕ್ಷಿಸುತ್ತಲೇ ಬಂದ ಪತಿ ಅದೇ ನಿರ್ಲಕ್ಷ್ಯದಿಂದಲೇ ಪ್ರಾಣ ಕಳೆದುಕೊಂಡರು. ಇಷ್ಟಾದರೂ ಅಕ್ಕ ಸ್ವಂತ ಮನೆ ಇತ್ಯಾದಿ ಅನುಕೂಲಗಳೊಂದಿಗೆ ಹೇಗೋ ಬಟ್ಟೆ ಹೊಲಿಯುತ್ತ, ಮಕ್ಕಳನ್ನು ಸಾಕುತ್ತಾ ಜೀವನ ನಡೆಸುತ್ತಾ ಬರುತ್ತಿದ್ದರು.

ಇತ್ತೀಚೆಗೆ ಅವರು ತಮ್ಮ ಕುಟುಂಬದ ಅಗತ್ಯಗಳಿಗಾಗಿ ಬೆಂಗಳೂರಿನ ಹೊರವಲಯದಲ್ಲಿರುವ ನಿವೇಶನವೊಂದನ್ನು ಮಾರಾಟ ಮಾಡಲು ಬಯಸಿದ್ದರು. ಆದರೆ ಆ ನಿವೇಶನಕ್ಕೆ ಅವರು ನಿರೀಕ್ಷಿಸಿದ ಬೆಲೆ ಸಿಗುವ ಲಕ್ಷಣ ಕಾಣಲಿಲ್ಲ. ಕೊಂಡುಕೊಳ್ಳುವವರು ಹೆಚ್ಚಾಗಿ ಮುಂದೆ ಬರಲಿಲ್ಲ.

ಇದರಿಂದ ಅವರಿಗೆ ಒಂದು ರೀತಿಯಲ್ಲಿ ಅಘಾತವಾಗಿತ್ತು. ಏಕೆಂದರೆ ನರೇಂದ್ರ ಮೋದಿ ಸರಕಾರವು ಸಾವಿರ ಮತ್ತು ಐದುನೂರರ ನೋಟುಗಳನ್ನು ಬ್ಯಾನ್ ಮಾಡಿದ್ದು ನಿವೇಶನಗಳ ಖರೀದಿ ಮಾರಾಟದ ಮೇಲೆ ಸಹ ಅಘಾತವನ್ನು ನೀಡಿತ್ತು. ಈ ನೋಟ್ ಬ್ಯಾನ್ ಜನಸಾಮಾನ್ಯರ ಬದುಕಿನ ಮೇಲೆ, ಇಡೀ ಸಮಾಜದ ಆರ್ಥಿಕತೆಯ ಮೇಲೆ ನಡೆಸಿದ ಗದಾ ಪ್ರಹಾರವಾಗಿತ್ತು.

ಬ್ಯಾಂಕಲ್ಲಿ ದುಡ್ಡಿದ್ದರೂ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ಕೊಡಿಸಲಾಗದೇ ಪರದಾಡಿದವರು, ವಾರಗಟ್ಟಲೇ ಕೂಲಿ ಕೆಲಸ ಮಾಡಿದರೂ ಮಾಲಿಕರಿಂದ ಕೂಲಿ ಹಣ ಪಡೆದುಕೊಳ್ಳಲಾಗದೇ ಹಸಿವಿನಿಂದ ಕಂಗೆಟ್ಟ ಕೂಲಿಕಾರರು, ವ್ಯಾಪಾರ ವಹಿವಾಟು ಕುಸಿದು ಕಂಗೆಟ್ಟ ಸಣ್ಣ ವ್ಯಾಪಾರಿಗಳ ಪರಿಸ್ಥಿತಿ, ಮುಚ್ಚಿಹೋದ ಸಣ್ಣ ಪುಟ್ಟ ಕಾರ್ಖಾನೆಗಳÀ ಉದ್ದಿಮೆಗಳ ಕಾರ್ಮಿಕರು, ಮಾಲೀಕರ ಕಷ್ಟ ಏನೆಂದು ಎಲ್ಲರಿಗೂ ಗೊತ್ತು. ಆ ಬಗೆಗೆ ಹೆಚ್ಚು ವಿವರಿಸಬೇಕಾದ ಅಗತ್ಯವಿಲ್ಲ.

ನಮ್ಮ ಆರ್ಥಿಕತೆ ಬೆನ್ನು ಮೂಳೆ ಮುರಿದು ಹೋದದ್ದರ ಫಲವಾಗಿ ನಿವೇಶನಗಳ ಮಾರಾಟ-ಕೊಳ್ಳುವಿಕೆ ಎರಡೂ ಕುಸಿದುಹೋದವು. ಸ್ವಲ್ಪ ದಿನಗಳಾದ ಮೇಲಾದರೂ ಕುಸಿದ ಬೆಲೆ ಏರಿ ಮಾಮೂಲಿ ಸ್ಥಿತಿಗೆ ಬರಬಹುದು ಎಂದು ಅಕ್ಕ ಕಾದರು. ಇಲ್ಲ. ಬೆಲೆ ಮಾಮೂಲಿ ಮಟ್ಟಕ್ಕೆ ಬರಲೇ ಇಲ್ಲ. ಮೊದಲಿನಂತೆ ಕೊಳ್ಳುವವರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಲೂ ಇರಲಿಲ್ಲ. ಬಡವರು, ಕೆಳ ಮಧ್ಯಮವರ್ಗ, ಮಧ್ಯಮವರ್ಗದ ಜನರ ಬದುಕನ್ನು ದ್ವಂಸ ಮಾಡಿದ ನೋಟ್ ಬ್ಯಾನ್ ಎಂಬುದು ನನ್ನ ಅಕ್ಕನ ಕುಟುಂಬದ ಆರ್ಥಿಕತೆಯನ್ನು ತಟ್ಟಿತ್ತು.

ಎಂಟನೇ ತರಗತಿಗೇ ಶಾಲೆ ಬಿಟ್ಟ ನನ್ನ ಅಕ್ಕನಿಗೆ ನೋಟ್ ಬ್ಯಾನ್ ಅಂತ ಹೇಳಲು ಬರುತ್ತಿರಲಿಲ್ಲ. ಅದಕ್ಕೆ ಅವರು ಕೊಟ್ಟಿದ್ದ ಹೆಸರು `ಮೋದಿ ಬ್ಯಾನ್’. “ ಈ ಮೋದಿ ಬ್ಯಾನ್ ಆದ ಮೇಲೆ ವ್ಯಾಪಾರ-ವ್ಯವಹಾರ ಎಲ್ಲ ನಿಂತೋಗೈತೇ ಕಣೋ. ಯಾವುದೂ ಸರಿಯಾಗಿ ನಡೀತಾ ಇಲ್ಲ.’’ ಅಂತ ಆಗಾಗ ಅಕ್ಕ ಹೇಳುತ್ತಾ ಇದ್ದರು.

ನನ್ನ ಅಕ್ಕನ ಸಾವಿಗೆ ನೋಟ್ ಬ್ಯಾನ್ ಒಂದೇ ಕಾರಣ ಅಂತ ನಾನು ಹೇಳಲಾರೆ. ಆದರೆ `ನೋಟ್ ಬ್ಯಾನ್’ ಎಂಬ ನರೇಂದ್ರ ಮೋದಿಯವರ ಹುಚ್ಚು ನಿರ್ಧಾರ ನನ್ನ ಅಕ್ಕನ ಸಾವಿನ ಒಂದು ಪ್ರಧಾನ ಕಾರಣ ಅಂತ ಮಾತ್ರ ಖಂಡಿತವಾಗಿ ಹೇಳಬಲ್ಲೆ.
ಈ ವಿಷಯವನ್ನು ಇಷ್ಟು ದಿನ ಯಾಕೆ ಹೇಳಲಿಲ್ಲ. ಕರ್ನಾಟಕ ರಾಜ್ಯ ಚುನಾವಣೆಯ ಹೊಸ್ತಿಲಿನಲ್ಲಿರುವಾಗ ಯಾಕೆ ಹೇಳುತ್ತಿರುವುದು ಎಂಬ ಪ್ರಶ್ನೆಗಳನ್ನು ಯಾರಾದರೂ ಕೇಳಬಹುದು.

ನನ್ನ ಅಕ್ಕನದು ಸ್ವಲ್ಪ ಅಂತರ್ಮುಖಿ ಸ್ವಭಾವ. ಮನಸ್ಸಿನಲ್ಲಿರುವುದನ್ನು ಪೂರ್ಣ ಬಿಚ್ಚಿ ಎಲ್ಲರೊಂದಿಗೆ ಹಂಚಿಕೊಳ್ಳುವ ಪ್ರವೃತ್ತಿ ಇರಲಿಲ್ಲ. ನಿಧಾನ ನಿಧಾನವಾಗಿ ನಮಗೆ ವಾಸ್ತವ ಏನೂ ಅನ್ನುವುದು ಅರ್ಥವಾಗುತ್ತಾ ಬಂತು. ಜೊತೆಗೆ ಹೆಣವನ್ನು ಬೀಳಿಸಿ, ಅಥವಾ ಬಿದ್ದ ಹೆಣವನ್ನು ಮುಂದೆ ಇಟ್ಟುಕೊಂಡು ರಾಜಕಾರಣ ಮಾಡುವುದು ನರೇಂದ್ರ ಮೋದಿಯವರ ಸಂಘಪರಿವಾರದ ಕ್ಷುದ್ರ ಸಂಸ್ಕೃತಿ ಅಷ್ಟೆ.

ಉದ್ದೇಶಪೂರ್ವಕವಾಗಿಯೇ ಈ ವಿಷಯವನ್ನು ಚುನಾವಣೆಯ ಸಮಯದಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ದೇಶದ ಆರ್ಥಿಕತೆಯನ್ನು ದ್ವಂಸ ಮಾಡಿದ, ಜನಸಾಮಾನ್ಯರ ಬದುಕನ್ನು ಹಿಂಡಿ ಹಿಪ್ಪೆ ಮಾಡಿದ `ನೋಟ್ ಬ್ಯಾನ್’ ನಂತಹ ಕ್ರೂರ ನಿರ್ಧಾರವನ್ನು ದೇಶದ ಮೇಲೆ ಹೇರಿದ ಭಾರತೀಯ ಜನತಾ ಪಕ್ಷದ ಸರಕಾರ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಬಾರದು.

ನನ್ನ ಅಕ್ಕನ ಸಾವಿಗೆ ಮತ್ತು ದೇಶದಲ್ಲಿ ಅಂತಹ ನೂರಾರು ಆತ್ಮಹತ್ಯೆ, ಸಾವುಗಳಿಗೆ ಕಾರಣವಾಗಿರುವ ಪಕ್ಷ ಅಧಿಕಾರಕ್ಕೆ ಬರಲೇ ಬಾರದು. ದೇಶಕ್ಕೆ ವಕ್ಕರಿಸಿರುವ ಈ `ಮೋದಿ ಬ್ಯಾನೆ’ ಬೇಗ ತೊಲಗಬೇಕು.

1 Response

  1. ನೋಟ್ ಬ್ಯಾನ್ ಆದಾಗ ನನಗೆ ತೀವ್ರ ಹೃದಯಾಘಾತ ವಾಗಿತ್ತು . ಸ್ಟೆಂಟ್ ಅಳವಡಿಸಲಾಗಿತ್ತು. ದೊಡ್ಡ ಮೊತ್ತದ ಬಿಲ್. ನೋಟ್ ಬ್ಯಾನ್. ಬ್ಯಾಂಕಿನಲ್ಲಿ ಕೊಡಲು ಹಣವಿಲ್ಲ. ಎಟಿಎಂ ಖಾಲಿ. ಡಾಕ್ಟರ್ ಚೆಕ್ ಸ್ವೀಕರಿಸುತ್ತಿರಲಿಲ್ಲ… ಹಣ ಹೊಂದಿಸಿದ ಮೇಲೆ ಕಳ್ಳರ ಕಾಟ… ಜನಸಾಮಾನ್ಯರು ಈ ರೀತಿ ಕಷ್ಟ ಪಟ್ಟರೆ, ದೊಡ್ಡವರು ಸದ್ದಿಲ್ಲದೆ ತಮ್ಮ ಕಪ್ಪು ಹಣಕ್ಕೆ ಫೇರ್ ಅಂಡ್ ಲವ್ಲೀ ಬಡಿದು ಬಿಳಿ ಮಾಡಿಕೊಂಡುಬಿಟ್ಟರು.

Leave a Reply

%d bloggers like this: