fbpx

ಅವಳು ಅಮ್ಮ..

ತಾರಾ ಶೈಲೇಂದ್ರ

ಮಗುವಿನೊಂದಿಗೆ ತಾಯಿಯ ಭಾವನಾತ್ಮಕ ಸಂಬಂಧ ತನಗೊಂದು ಮಗು ಬೇಕು ಎಂದು ಕನಸು ಕಾಣುವಾಗಲೇ ಶುರುವಾಗುತ್ತದೆ.

ಅದಕೊಂದು ಚಂದದ ಹೆಸರು, ಅದಕ್ಕೊಪ್ಪುವ ವಸ್ತ್ರ ಎಲ್ಲವನ್ನೂ ಯೋಚಿಸಿರುತ್ತಾಳೆ.

ಗರ್ಭವತಿಯಾದಾಗ ನೂರಾರು ಶಾರೀರಿಕ ತೊಂದರೆಗಳು ಅವಳನ್ನು ಕಾಡಿದರೂ, ಆಗಿನಿಂದಲೇ ಮಗುವಿಗಾಗಿ ತನ್ನನ್ನು ತಾನು ಬದಲಾಯಿಸಿಕೊಳ್ಳುತ್ತಾ ಹೋಗುತ್ತಾಳೆ. ಅವಳ ಆಹಾರ, ಜೀವನಕ್ರಮ ಎಲ್ಲವೂ ತನ್ನ ಮಗುವಿಗೆ ಹೊಂದುವಂಥದ್ದಾಗಿರುತ್ತದೆ.

ಹೆರಿಗೆಯು ಒಬ್ಬ ತಾಯಿಯ ಮರುಜನ್ಮವಾಗಿರುತ್ತದೆ. ಅಪಾರ ನೋವನ್ನನುಭವಿಸಿದರೂ, ತನ್ನ ಕಂದನ ಮುಖ ನೋಡುತ್ತಿದ್ದಂತೆಯೇ ಅದೆಲ್ಲವನ್ನು ಮರೆಯುತ್ತಾಳೆ. ನಂತರ ಬರುವ ನಿದ್ರಾಹೀನ ರಾತ್ರಿಗಳು, ಮಗುವಿನ ಲಾಲನೆ ಪಾಲನೆ ಅವಳ ಬದುಕನ್ನೇ ಬದಲಿಸುತ್ತದೆ. ಆ ಮಗು ಬೆಳೆಯುವವರೆಗೆ ಅದು ನಕ್ಕಾಗ ನಕ್ಕು, ಅತ್ತಾಗ ಅತ್ತು, ತನ್ನೆಲ್ಲ ಸಮಯವನ್ನು ಅದಕ್ಕೆ ಮೀಸಲಿಡುತ್ತಾಳೆ.

ಮನೆಯೇ ಮೊದಲ ಪಾಠಶಾಲೆ, ತಾಯಿಯವಳೇ ಮೊದಲ ಗುರುವಲ್ಲವೇ? ಹಾಗಾಗಿ ಮಗುವಿಗೆ ಸರಿದಾರಿ ತೋರಲು ಶ್ರಮಿಸುತ್ತಾಳೆ. ಎಳೆಯ ಮನಸಿಗೆ ತಾಯಿ ಹೇಳಿದ್ದೇ ವೇದವಾಕ್ಯವಾದ್ದರಿಂದ ಅವಳು ನುಡಿಯುವುದಕ್ಕೂ, ನಡೆಯುವುದಕ್ಕೂ ವ್ಯತ್ಯಾಸವಿರಬಾರದು. ಹಾಗಾಗಿ ನಾಡಿನ ಸತ್ಪ್ರಜೆಯನ್ನು ರೂಪಿಸುವಲ್ಲಿ ತಾಯಿಯ ಕೊಡುಗೆ ಮಹತ್ವದ್ದು.

ಮುಂದೆ ಶಾಲೆ ಸೇರಿದ ಮಗುವಿನ ವಿದ್ಯಾಭ್ಯಾಸ , ಆಟೋಟಗಳು, ಹವ್ಯಾಸಗಳು, ಸ್ನೇಹಿತರು ಎಲ್ಲವೂ ತಾಯಿಯ ಜವಾಬ್ದಾರಿಯಾಗಿರುತ್ತದೆ. ಮಕ್ಕಳೊಂದಿಗೆ ಸ್ನೇಹದಿಂದ ವರ್ತಿಸುವ ತಾಯಿ ಮಕ್ಕಳಿಗೆ ಆಪ್ತಳಾಗುತ್ತಾಳೆ. ತಂದೆಯೊಂದಿಗೆ ಸಾಧಾರಣವಾಗಿ ಆ ವಯಸ್ಸಿನಲ್ಲಿ ಒಂದು ಗೌರವಮಿಶ್ರಿತ ಭಯ ಇರುತ್ತದೆ.

ಹದಿಹರೆಯದ ಮಕ್ಕಳನ್ನು ಸಂಭಾಳಿಸುವುದು ಸುಲಭವಲ್ಲ. ಆಗಷ್ಟೇ ಪ್ರೌಢ ಭಾವನೆಗಳನ್ನು ಹೊಂದಿರುವ ಮಕ್ಕಳಲ್ಲಿ ಸ್ವಲ್ಪ ಕ್ರಾಂತಿಕಾರಿ ಮನೋಭಾವವಿರುತ್ತದೆ. ಅದನ್ನು ಸರಿಯಾದ ಹಾದಿಯಲ್ಲಿ ಬಳಸುವಂತೆ ಮಾಡುವುದಿದೆಯಲ್ಲ, ಅದು ಸವಾಲು. ಆದರೆ ಅದನ್ನು ಮಕ್ಕಳಿಗೆ ತಿಳಿಯದಂತೆ ಮಾಡಬೇಕು. ಇಲ್ಲದಿದ್ದರೆ ತಮ್ಮ ಭಾವನೆಗಳನ್ನು ಹತ್ತಿಕ್ಕುತ್ತಿದ್ದೇವೆನಿಸುತ್ತದೆ ಮಕ್ಕಳಿಗೆ.
ಶಿಕ್ಷಣವೆಂದರೆ ಬರೀ ಪದವಿಗಳನ್ನು ಪಡೆಯುವುದಲ್ಲ. ಜೀವನ ಕೌಶಲ್ಯಗಳನ್ನೂ, ಮಾನವೀಯ ಮೌಲ್ಯಗಳನ್ನು ಮಕ್ಕಳಿಗೆ ಕಲಿಸಬೇಕು. ಆಗಷ್ಟೇ, ಮಗುವೊಂದು ಜವಾಬ್ದಾರಿ ಅರಿತ ಸತ್ಪ್ರಜೆಯಾಗಲು ಸಾಧ್ಯ.

ಶಿಕ್ಷಣದ ನಂತರ ಉದ್ಯೋಗ ಪರ್ವ. ತಮ್ಮಿಚ್ಛೆಯ ಕೆಲಸ ಹುಡುಕಲು ಮಕ್ಕಳ ಅಲೆದಾಟ. ಅದು ಸಾಧ್ಯವಾಗದಾಗ ನಿರಾಸೆಯನ್ನು ಹತ್ತಿಕ್ಕಿ, ಮುಂದಿನ ಸಂದರ್ಶನಕ್ಕೆ ಮಕ್ಕಳನ್ನು ತಯಾರಾಗುವಂತೆ ಪ್ರೇರೇಪಿಸುವಲ್ಲಿ ತಾಯಿಯ ಪಾತ್ರ ಹಿರಿದು. ನನ್ನ ಅನಿಸಿಕೆಯಂತೆ, ಈ ಹಂತದಲ್ಲಿ ತಂದೆ ಬೆಳೆದ ಮಕ್ಕಳಿಗೆ ಉತ್ತಮ ಸ್ನೇಹಿತನಾಗಿ, ಮಾರ್ಗದರ್ಶಕನಾಗಬೇಕು. ಅದರಲ್ಲೂ ಗಂಡುಮಕ್ಕಳಿದ್ದರೆ, ಈಗಿನಿಂದಲೇ ತಾಯಿಯೊಂದಿಗಿನ ಬಂಧ ಸ್ವಲ್ಪ ಸಡಿಲಗೊಂಡು ತಂದೆಯೊಂದಿಗಿನ ಅನುಬಂಧ ಗಾಢವಾಗುತ್ತಾ ಹೋಗಬೇಕು.

ಇದರಿಂದ ತಮ್ಮ ಅನಿಸಿಕೆಗಳನ್ನೂ, ತುಮುಲಗಳನ್ನೂ ಗಂಡುಮಕ್ಕಳು ತಂದೆಯೊಂದಿಗೆ ಮುಕ್ತವಾಗಿ ಹಂಚಿಕೊಳ್ಳಬಹುದು. ಇನ್ನು ಹೆಣ್ಣುಮಕ್ಕಳು ಅಪ್ಪನ ತೊಡೆ ಮೇಲೆಯೇ ಬೆಳೆದರೂ, ಹರೆಯಕ್ಕೆ ಬಂದಾಗ ತಾಯಿಯೇ ಪರಮಾಪ್ತ ಸಖಿ.
ಗಂಡುಮಕ್ಕಳು ತಂದೆಗೆ ಹತ್ತಿರವಾದಷ್ಟೂ, ಅವರ ವಿವಾಹಾನಂತರ ಮನೆಯಲ್ಲಿ ಶಾಂತಿ ಇರುತ್ತದೆಂಬುದು ನನ್ನ ಅನಿಸಿಕೆ. ಕಾರಣ ಇಷ್ಟೇ – ತಾಯಿಯ ಮೇಲಿನ ಅವಲಂಬನೆ ಕಡಿಮೆಯಾದಷ್ಟೂ, ಮುಂದೆ ಮಡದಿ ಬಂದಾಗ, ತಾಯಿಗೆ ಮಗ ತನ್ನನ್ನು ಕಡೆಗಣಿಸುತ್ತಿದ್ದಾನೆ ಎಂಬ ಅಭದ್ರತೆ ಕಾಡುವುದಿಲ್ಲ.

ಹೆಣ್ಣುಮಕ್ಕಳನ್ನು ಬೆಳೆಸುವ ವಿಷಯ ಬಂದಾಗ, ತಾಯಿಯಾದವಳು ಮಗಳನ್ನು ಸ್ವಾವಲಂಬಿಯಾಗಿ ರೂಪಿಸಬೇಕಲ್ಲದೆ, ಮದುವೆಯಾಗಿಹೋಗುವಾಗ ತಮ್ಮನ್ನು ಪ್ರೀತಿ, ವಿಶ್ವಾಸದಿಂದ ಕಂಡಂತೆಯೇ, ಹೊಕ್ಕ ಮನೆಯವರನ್ನೂ ಕಾಣುವಂತೆ ಕಿವಿಮಾತು ಹೇಳಿ ಕಳುಹಿಸಿದರೆ, ಪ್ರತಿ ಮನೆಯೂ ನಂದಗೋಕುಲವಾಗುವುದರಲ್ಲಿ ಸಂಶಯವಿಲ್ಲ.

ಇಷ್ಟೆಲ್ಲವನ್ನೂ ನಿಸ್ವಾರ್ಥ ಭಾವದಿಂದ ಬಾಳುವ ತಾಯಿಗೆ ಒಂದು ದಿನವಷ್ಟೇ ಮುಡಿಪಾಗಿಟ್ಟರೆ ಸಾಲದು ಅಲ್ಲವೇ ? ಪ್ರತಿದಿನವೂ ಅವಳ ದಿನವೇ  .

ಅಮ್ಮ
———
ಉಸಿರು ನೀಡಿದ ಅಮ್ಮನಿಗೆ ,
ಧನ್ಯವಾದ ನಾ ಉಸುರಲಾರೆ .
ಉಸಿರ ಬಸಿದು ಹೆತ್ತವಳಿಗೆ ,
ಒಂದೇ ದಿನ ಮೀಸಲಿಡಲಾರೆ .
ಎಂದೆಂದೂ ಅಳಿಸದ ಬಂಧವಿದು ,
ಅವಳ ನಾ ಮರೆಯಲಾರೆ .
ಕಣ್ಗೊಂಬೆಯಾಗಿ ಕಾಯುವೆನು ಸದಾ ,
ಜನ್ಮದಾತೆಯ ಋಣ ತೀರಿಸಲಾರೆ .

1 Response

  1. ಎಂ.ಶ್ರೀನಿವಾಸ ಅಬ್ಬಿನಹೊಳೆ. says:

    ಸರಳವಾಗಿ,ಸುಂದರವಾಗಿ ತಾಯಿಯನ್ನು ಕುರಿತಾಗಿ ಬರೆದಿರುವ ಲೇಖನವಿದು…

Leave a Reply

%d bloggers like this: