fbpx

ಅಬ್ಬಿಗೇರಿ-ಮಣ್ಣು-ಗಿರಡ್ಡಿ

ಸಿದ್ದು ಯಾಪಲಪರವಿ

ಗದಗ ಜಿಲ್ಲೆಯ ಅಬ್ಬಿಗೇರಿ‌ ಗಿರಡ್ಡಿ ಸರ್ ಅವರ ಊರು ಹಾಗೂ ಕಥೆಗಳ ಪಾತ್ರವೂ ಹೌದು.

‘ಮಣ್ಣು’ ‘ಒಂದು ಬೇವಿನ ಮರದ ಕತೆ’ಗಳಲಿ ಅಬ್ಬಿಗೇರಿಯ ವಿವರಗಳ ಓದಿದ ನೆನಪು.

ಅಂತ್ಯಕ್ರಿಯೆಯ ವಿವರಗಳನ್ನು ಕಣ್ಣಿಗೆ ಕಟ್ಟುವಂತೆ ಬರೆದು ಹಳ್ಳಿಯ ಸಂಸ್ಕೃತಿಯನ್ನು ನಿರೂಪಿಸಿದ್ದು, ಇಂದು ಅವರ ಮಣ್ಣಿನ ಸಂದರ್ಭದಲ್ಲಿ ನೆನಪಾಯಿತು.

ಊರಿಂದ ಬೀಗರು ಬರುವವರೆಗೆ ಹೆಣ ಎತ್ತುವುದಿಲ್ಲ. ‘ಇನ್ನೇನು ಬಂದೇ ಬಿಟ್ರು’ ಅಂತ ಕಾಯ್ತಾರೆ.

ಗಿರಡ್ಡಿಯವರ ಮಣ್ಣಿನಲ್ಲೂ ಅದೇ ಕಾಯುವಿಕೆ. ಕಾದದ್ದು ಅವರ ಆತ್ಮೀಯ ಗೆಳೆಯ ‘ಸಂಕ್ರಮಣ’ದ ಸಂಗಾತಿ ಪ್ರೊ. ಚಂಪಾ ಅವರಿಗಾಗಿ. ಬೆಂಗಳೂರಿಂದ ಮುಂಜಾನೆ ಹೊರಟು ಬರುವ ದಾರಿಯಲ್ಲಿದ್ದರು.

ಅವರು ಬಂದು ಅಂತಿಮ ನಮನ ಸಲ್ಲಿಸಿದ ಮೇಲೆ ಅಂತಿಮ ಯಾತ್ರೆ ಆರಂಭ.
ನಿರ್ಭಾವುಕ ಚಂಪಾ ಅವರು ಭಾವುಕರಾದ ಕ್ಷಣಗಳ ದಾಖಲಿಸುವ ವೇದನೆ.

ನಗು-ಹಾಸ್ಯ-ಜಗಳ ಇತ್ಯಾದಿ ಹೊತ್ತು ತಿರುಗುತಿದ್ದ ಗುರುಗಳು ಇಂದು ಆತಂಕಕೆ ಒಳಗಾಗಿದ್ದರು.
ಸಾವೇ ಹಾಗೆ ನಮ್ಮನ್ನು ಕೆಲ ಕ್ಷಣ ಎಲ್ಲಿಗೋ ಕೊಂಡೊಯ್ಯುತ್ತೆ. ದುಃಖ ಉಮ್ಮಳಿಸುತ್ತೆ.

ಮಣ್ಣಿಂದ ಮಣ್ಣಿಗೆ ಸೇರುವ, ಬಯಲಿಂದ ಬಯಲಲಿ ಬಯಲಾಗುವ ಹೊತ್ತೇ ಹಾಗೆ.
ಶೂನ್ಯ ಭಾವ. ಶೂನ್ಯ ಸಂಪಾದನೆ.

ಧಾರವಾಡದ ಸಂಭ್ರಮದ ಸಂಗಾತಿಗಳಾದ ಸಮೀರ ಜೋಷಿ, ಎಚ್.ವಿ. ಕಾಖಂಡಕಿ, ಬಾಳಣ್ಣ ಸೀಗಿಹಳ್ಳಿ, ಜಾಡರ ಸರ್, ಪ್ರಕಾಶಕ ಸುಬ್ರಮಣ್ಯ, ಬಸವರಾಜ ಸೂಳಿಬಾವಿ, ಶಂಕರ ಹಲಗತ್ತಿ, ಶಂಕರ ಕುಂಬಿ, ಬಸಯ್ಯ ಶಿರೋಳ, ಶಶಿಧರ ತೋಡ್ಕರ್ ಇತರರು ಬಂದಿದ್ದರು.

ಗದುಗಿನಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣು ಗೋಗೇರಿ, ಡಾ.ಜಿ.ಬಿ.ಪಾಟೀಲ, ಡಾ.ಎಸ್.ಎ.ಪಾಟೀಲ ಹಾಗೂ ಅಬ್ಬಿಗೇರಿಯ ಎಲ್ಲ ಗೆಳೆಯರೂ ಇದ್ದರು.

ಸರ್ ಮಗ ಸುನಿಲ್ ನನ್ನ ಕಾಲೇಜಿನ ಸಂಗಾತಿ. ಅವನ ಜೊತೆ ಮಾತಾಡಿದೆ.

ಅವತ್ತು ಚುನಾವಣೆಯ ಅಬ್ಬರ ಬೇರೆ.
ರಾಜಕಾರಣಿಗಳೂ ಹಾಜರಿ ಹಾಕಿದರು.

ಅವರ ಸಾಹಿತ್ಯದ ಪಯಣ. ಕಥೆಗಳು, ವಿಮರ್ಶೆ.
ಅವರು ಹಾಕಿಕೊಟ್ಟ ಮಧ್ಯಮ ಮಾರ್ಗ.
ದಿವ್ಯ ಮೌನವಾಗದಿರಲಿ. ಇದು  ಹಲವರ ಆಶಯವೂ ಹೌದು.

ಅವಮಾನ ಎದುರಿಸಿ, ಸಹಿಸಿಕೊಂಡು ಎದುರಿಸಿದ ಮಧ್ಯಮ ಮಾರ್ಗದ ಚರ್ಚೆ ಇಲ್ಲಿಗೇ ನಿಲ್ಲದಿರಲಿ.

ಧಾರವಾಡ ಸಾಹಿತ್ಯ ಸಂಭ್ರಮ ಆರಂಭಿಸಿದ ಡಾ.ಕಲಬುರ್ಗಿ ಅವರು ಹೋದ ಮೇಲೆ ಈಗ ಗಿರಡ್ಡಿ ಸರ್.

ಮುಂದೆ ಸಂಭ್ರಮ ಹೇಗೆ? ಎಂಬ ಆತಂಕ ಧಾರವಾಡದ ಗೆಳೆಯರ ಮುಖದ ಮೇಲಿತ್ತು.
ಕಾಲ ನಿಲ್ಲುವುದಿಲ್ಲ ತನ್ನ ಹಾದಿ ತಾನೇ ಕಂಡುಕೊಳ್ಳುತ್ತೆ.

ಆದರೂ ಸಾವು ಸಾವೇ. ಅದು ಉಂಟು ಮಾಡುವ ತಲ್ಲಣ ಭಯಾನಕ.

ಓಡಾಡಿಕೊಂಡು ಲವಲವಿಕೆಯಿಂದ, ಗಟ್ಟಿಮುಟ್ಟಾಗಿದ್ದವರು ಹೀಗೆ ಏನೂ ಹೇಳದೇ ಕೇಳದೇ, ಆಸ್ಪತ್ರೆಯ ಹಾಸಿಗೆ ಹಿಡಿಯದೇ ಥಟ್ ಅಂತ ಹೋಗುವುದಕ್ಕೆ *ಪುಣ್ಯದ ಸಾವು* ಅಂತಾರೆ.

ಎಂಬತ್ತರ ಆಸುಪಾಸಿನ ಸರ್ ಸಾಕಷ್ಟು ಬರೆದು ಓದಲು ಬಿಟ್ಟು ಹೋಗಿದ್ದಾರೆ.

ನಾವು ಇದ್ದವರು ಹೋಗುವುದರೊಳಗೆ ಓದಿ,ಬರೆದು ಅವರನ್ನು ನೆನಪಿಸಿಕೊಳ್ಳುತ್ತಲೇ ಇರೋಣ.

ಇಂದು ಅವರು, ನಾಳೆ ಮತ್ಯಾರೋ, ಮುಂದೊಂದು ದಿನ ನಾವೂ.
ಇದ್ದಷ್ಟು ದಿನ ಅರ್ಥಪೂರ್ಣವಾಗಿ ಬಾಳಲು ‘ಮಣ್ಣು’ ಎಚ್ಚರಿಸುತ್ತದೆ.
ನಮಗಿದು ಸ್ಮಶಾನ ವೈರಾಗ್ಯ ಆಗದಿದ್ದರೆ ಸಾಕು.

ಹೋಗಿ ಬರ್ರಿ ಸರ್. ನಿಮಗಿದು ಅಂತಿಮ ನಮಸ್ಕಾರ.

1 Response

  1. Lalitha siddabasavayya says:

    ಗಿರಡ್ಡಿ ಸರ್ ಅವರ ಮಣ್ಣು ಕತೆಯನ್ನು ಅದೆಷ್ಟು ಸಲ ಓದಿದ್ದೆವೋ ನಾವು , ಆ ಕತೆಯ ಅನುಕರಣೆಗಳೂ ಬಂದವು. ಹೀಗೇ ಸಜ್ಜನಿಕೆಯಲ್ಲೂ ಅವರು ಅನುಕರಣೀಯರು. ಅವರ ಆತ್ಮಕ್ಕೆ ಭಗವಂತನು ಸದ್ಗತಿಯನ್ನೀಯಲಿ.

Leave a Reply

%d bloggers like this: