ಸೋಲಿಸಿಕೊಳ್ಳುವ ಆಟದಲ್ಲಿ ಗೆದ್ದ ಕಾಂಗ್ರೆಸ್

ನಡೆದದ್ದು ಕತ್ತುಕತ್ತಿನ ಕದನ. ಅದನ್ನು ಓಟಿಂಗ್ ಪರ್ಸೆಂಟೇಜ್ ಖಚಿತಪಡಿಸುತ್ತದೆ. ಕಾಂಗ್ರೆಸ್ ನ್ನು ಜನ ನಿರಾಕರಿಸಿದ್ದಾರೆ. ಬಿಜೆಪಿ  ಕೊನೆಯ ಇಂಚು ಹಿಂದೆ ಉಳಿದಿದೆ ಎಂಬುದು ಈ ಕ್ಷಣದ ವಾಸ್ತವ.

ಈಗ ಕರ್ನಾಟಕಕ್ಕೆ ಸಿಕ್ಕಿರುವುದು ಚೌಚೌ ಬಾತ್. ನ್ಯೂಟ್ರಲ್ ಗ್ರೌಂಡಿನಲ್ಲಿ ಚೌಚೌ ಬಾತ್ ಪ್ರಜಾಪ್ರಭುತ್ವಕ್ಕೆ ಬಹಳ ಆರೋಗ್ಯಕರ. ಆದರೆ ಗ್ರೌಂಡ್ ನ್ಯೂಟ್ರಲ್ ಆಗಿಲ್ಲದಿರುವುದು ಕೂಡ ಈವತ್ತಿಗೆ ವಾಸ್ತವ.

ಬಿಜೆಪಿ ಅಭ್ಯರ್ಥಿಗಳನ್ನು ಜನತೆ ಅತಿಹೆಚ್ಚಿನ  ಸಂಖ್ಯೆಯಲ್ಲಿ ಆರಿಸಿದ್ದಾರಾದರೂ, ಅಂತಿಮವಾಗಿ ಫೋಟೋ ಫಿನಿಷ್ ಫಲಿತಾಂಶ ಇದು. ಹಾಗಾಗಿ, ಅವರ ಮೇಲುಗೈಗಿಂತ ಕಾಂಗ್ರೆಸ್ಸನ್ನು ಜನ ಯಾಕೆ ತಿರಸ್ಕರಿಸಿದರು, ಕಾಂಗ್ರೆಸ್ ಎಲ್ಲಿ ಹಾದಿ ತಪ್ಪಿತು ಎಂಬುದನ್ನು ವಿವರವಾಗಿ ನೋಡಬೇಕು.

ತಕ್ಷಣಕ್ಕೆ ನನಗೆ ಹೊಳೆದ ಐದಾರು ಅಂಶಗಳು ಇಲ್ಲಿವೆ:

೧. ಯಾವುದೇ ಚುನಾವಣೆಯಲ್ಲಿ ಜನರಿಂದ ಆರಿಸಿಬರಲು ಎಲ್ಲಕ್ಕಿಂತ ಮೊದಲು, ತಲುಪಲು ಒಂದು ಸ್ಪಷ್ಟ ಗುರಿ ಬೇಕು, ಆ ಗುರಿ ತಲುಪಲು ಹಾದಿ ಬೇಕು ಮತ್ತು ಆ ಹಾದಿ ಕ್ರಮಿಸಲು ಸ್ಪಷ್ಟ ತಂತ್ರಗಳು ಬೇಕು. ಕಾಂಗ್ರೆಸ್ ಇಲ್ಲಿ ಸೋತಿದೆ. ಒಟ್ಟು ಪೋಲಾದ ಮತಗಳ ಶೇಕಡಾವಾರು ಲೆಕ್ಕಾಚಾರ ಕಂಡರೆ ಇದು ಖಚಿತವಾಗುತ್ತದೆ. ಕಾಂಗ್ರೆಸ್ + ಜೆ ಡಿ ಎಸ್ ಪೋಲಾದ ಒಟ್ಟು ಮತಗಳಲ್ಲಿ 55-60% ಗಳಿಸಿಕೊಂಡಿವೆ. ಕಾಂಗ್ರೆಸ್ಸಿನ ಹೋರಾಟ ಕೋಮುವಾದದ ವಿರುದ್ಧ ಎಂದಾದರೆ ಆ ಖಚಿತ ಗುರಿ ತಲುಪಲು ಖಚಿತ ಹಾದಿ ಬೇಕಿತ್ತು.

ಆದರೆ ಅಲ್ಲಿ ಎಡವಿದ ಕಾಂಗ್ರೆಸ್ ಮೊದಲ ಹಂತದಲ್ಲೇ ಜೆಡಿಎಸ್ ಜೊತೆ ತಿಕ್ಕಾಟಕ್ಕಿಳಿಯಿತು. ಅದೇ ವೇಳೆ ಜೆಡಿಎಸ್, ಅತಂತ್ರ ಬಂದರೆ ತಾನು ‘ಕಿಂಗ್ ಮೇಕರ್’ ಎಂಬುದು ಖಚಿತ ಇದ್ದುದರಿಂದ, ತನ್ನ ಗುರಿ ಮತ್ತು ಹಾದಿಯನ್ನು ಸ್ಪಷ್ಟವಾಗಿ ಗುರುತಿಸಿಕೊಂಡಿತ್ತು ಹಾಗೂ ಅದು ಬಹುತೇಕ ಅಲ್ಲಿಗೆ ತಲುಪಿತು. ಬಿಜೆಪಿಗೆ ಮೊದಲಿನಿಂದಲೂ ತನ್ನ ಗುರಿ ಸ್ಪಷ್ಟ ಇತ್ತು. ಸ್ಥಳೀಯವಾಗಿ ಆರಂಭಿಕ ಗೊಂದಲಗಳಿದ್ದದ್ದನ್ನು ಸರಿಯಾಗಿಯೇ ಗುರುತಿಸಿದ್ದ ಬಿಜೆಪಿ ಹೈಕಮಾಂಡ್, ಸಕಾಲದಲ್ಲಿ ಅದನ್ನೆಲ್ಲ ಸರಿಪಡಿಸಿಕೊಂಡು, ಅಂತಿಮವಾಗಿ ಗೆಲ್ಲುವುದಕ್ಕಾಗಿಯೇ ಹೋರಾಟ ನೀಡಿತು.

ಪ್ರಚಾರದ ಅಂತಿಮ ಸುತ್ತಿನಲ್ಲಿ ಅವರ ಚುನಾವಣಾ ಯಂತ್ರ ಟಾಪ್ ಗಿಯರ್ ನಲ್ಲಿತ್ತು ಕಾಂಗ್ರೆಸ್ ಅಂತಹ ಆಂಟಿ ಇನ್ಕಂಬೆನ್ಸಿಯಾಗಲೀ, ಜನವಿರೋಧವಾಗಲೀ ಇಲ್ಲದೆ ಸುಲಭವಾಗಿ ಸರಳ ಬಹುಮತ ಪಡೆಯಬಲ್ಲ ಸ್ಥಿತಿಯಲ್ಲಿದ್ದದ್ದು, ತಲುಪಬೇಕಾದ ಗುರಿಯಾಗಲೀ, ತಲುಪುವ ಹಾದಿಯಾಗಲೀ, ತಲುಪಬೇಕಾದ ವೇಗವಾಗಲೀ ಖಚಿತವಿಲ್ಲದೆ ಚುನಾವಣೆಯ ಕೊನೆಯ ಹಂತಕ್ಕೆ ಬಂದಾಗ ಕಾಲೆಳೆದುಕೊಂಡು ಸಾಗುತ್ತಿತ್ತು.

೨. ಈ ಬಾರಿ ಕಾಂಗ್ರೆಸ್ಸಿಗೆ ಅ ದೊಡ್ಡ ಹೊಡೆತ ನೀಡಿದ್ದು, ಇಲ್ಲಿಯ ತನಕ ಕೇವಲ ಒಳಸುಳಿ ಆಗಿ ಉಳಿದಿದ್ದ ಹಳೆಕಾಂಗ್ರೆಸ್-ಹೊಸ ಕಾಂಗ್ರೆಸ್ ಎಂಬ ವರ್ಟಿಕಲ್ ಸ್ಪ್ಲಿಟ್. ಯಾವತ್ತಿಗೆ ಚುನಾವಣಾ ಪೂರ್ವದಲ್ಲೇ ಸಿದ್ಧರಾಮಯ್ಯನವರದೇ ನೇತ್ರತ್ವ, ಅವರದೇ ಟಿಕೇಟು ಹಂಚಿಕೆ ಎಂಬುದು ಖಚಿತವಾಗಿದೆಯೋ, ಅಂದೇ ಮೂಲ ಹಳೆಯ ಕಾಂಗ್ರೆಸ್ಸಿಗರಲ್ಲಿ ಸಣ್ಣದೊಂದು ಹತಾಶೆಯ ಲಕ್ಷಣ ತೋರಿಬಂದಿತ್ತು. ಇದಕ್ಕೆ ಇಂಬು ಕೊಡುವಂತೆ ಹೈಕಮಾಂಡ್ ಕಡೆಯಿಂದ ಪದೇ ಪದೇ ಸಿದ್ಧರಾಮಯ್ಯ ಅವರನ್ನೇ ಪ್ರಾಜೆಕ್ಟ್ ಮಾಡುತ್ತಾಬಂತು. ಇದನ್ನು ಸಿದ್ಧರಾಮಯ್ಯ ಅವರ ಸನಿಹದಲ್ಲಿದ್ದವರು ಗುರುತಿಸಲಿಲ್ಲ. ಹಾಗಾಗಿ, ಹಳೆಯ-ಹೊಸ ಕಾಂಗ್ರೆಸ್ ನಡುವಿನ ತಿಕ್ಕಾಟ, ಮೌನ ಇವೆಲ್ಲ ಎಲ್ಲ ಕ್ಷೇತ್ರಗಳಲ್ಲೂ ತೋರುವಷ್ಟು ಢಾಳಾಗಿದ್ದವು.  ಈ ನಡುವೆ ಸಿದ್ಧರಾಮಯ್ಯ ಅವರು ಕೇಂದ್ರದಲ್ಲಿ ಮೋದಿಗೆ ಎದುರಾಳಿ ಎಂಬ ಮಟ್ಟದಲ್ಲಿ ಮಾಧ್ಯಮಗಳು ಸ್ಪಿನ್ ಮಾಡಿದ್ದು, ಮೂಲ ಕಾಂಗ್ರೆಸ್ಸಿಗರಲ್ಲಿ ತಳ ತಪ್ಪುತ್ತಿರುವ ಅನುಭವ ತಂದದ್ದೂ ಸುಳ್ಳಲ್ಲ.

೩. ಒಂದಾನೊಂದು ಕಾಲದಲ್ಲಿ ಕೆಡೇರ್  ಬೇಸ್ಡ್ ಪಕ್ಷ ಆಗಿದ್ದ ಕಾಂಗ್ರೆಸ್ ಬರಬರುತ್ತಾ ನಾಯಕರ ಪಕ್ಷ ಆಗಿಬಿಟ್ಟಿದೆ. ತಳದಲ್ಲಿ ವಾರ್ಡ್-ಬೂತ್ ಮಟ್ಟದ ಕಾರ್ಯಕರ್ತರ ಜೊತೆ ನಾಯಕರ ಸಂಪರ್ಕ ಎಂದೋ ಕಡಿದು ಹೋಗಿದೆ. ಸೇವೆ ಆಧರಿತ ರಾಜಕೀಯ ಹಿನ್ನೆಲೆಗೆ ಸರಿದು ಕಾಸು ಚೆಲ್ಲುವ ರಾಜಕೀಯ ಮುನ್ನೆಲೆಗೆ ಬಂದಾಗಲೇ ಈ ಬದಲಾವಣೆ ಆಗಿಹೋಗಿದೆ. ಅಭ್ಯರ್ಥಿಗಳನ್ನು ಮೇಲಿನಿಂದ ಹೇರಲಾಯಿತೇ ಹೊರತು ನಿಜವಾದ ತಳಮಟ್ಟದ ಕಾರ್ಯಕರ್ತರ ಮಾತುಗಳಿಗೆ ಬೆಲೆಯಾಗಲೀ, ಅಲ್ಲಿಂದ ಆರಿಸಿಕೊಟ್ಟವರ ಗೆಲುವನ್ನು ಖಚಿತಪಡಿಸುವ ಸಂಘಟನಾ ಚಾತುರ್ಯವಾಗಲೀ ಕಾಂಗ್ರೆಸ್ಸಿನಲ್ಲಿ ಈಗ ಉಳಿದಂತಿಲ್ಲ. ಅವರ ಲೆಕ್ಕಾಚಾರದಲ್ಲಿ ಕಳೆದ ಬಾರಿ ಗೆದ್ದವರೆಲ್ಲ ಈ ಬಾರಿ ಅದೇ ಸಾಧನೆ ಪುನರಾವರ್ತಿಸಿಯಾರು ಎಂಬ ನಿರೀಕ್ಷೆ ಹುಸಿಯಾಯಿತು. ಹದಿಮೂರು ಮಂದಿ ಸಚಿವ ಸಂಪುಟದ ಸದಸ್ಯರೇ ಸೋತಿದ್ದಾರೆ (ಅದೂ ಪ್ರಬಲ ಸರಕಾರ ವಿರೋಧಿ ಅಲೆ ಇಲ್ಲದಿದ್ದಾಗ) ಎಂಬುದು ಬಹಳಷ್ಟನ್ನು ಹೇಳುತ್ತದೆ.

೪. ಕಳೆದ 10-15 ವರ್ಷಗಳಿಂದ ದೊಡ್ಡ ಪ್ರಮಾಣದಲ್ಲಿ ಎಳೆಯ ಮತದಾರರು ದೇಶದ ರಾಜಕೀಯದಲ್ಲಿ ಆಸಕ್ತಿ ವಹಿಸತೊಡಗಿದ್ದಾರೆ. ಅವರ ನಿರೀಕ್ಷೆಗಳನ್ನು ತಲುಪುವುದು ಕಾಂಗ್ರೆಸ್ಸಿಗೆ ಸಾಧ್ಯವಾಗಿಲ್ಲ. ಹಾಗಾಗಿ, ಎಳೆಯರು ಮತ್ತು ಕಾಂಗ್ರೆಸ್ಸಿನ ನಡುವೆ ದೊಡ್ಡದೊಂದು ಕಂದಕ ಹುಟ್ಟಿಕೊಳ್ಳುತ್ತಿದ್ದು, ಅದು ಎಲ್ಲ ಸಾಂಪ್ರದಾಯಿಕ ಜಾತಿ ಲೆಕ್ಕಾಚಾರಗಳನ್ನು ಬುಡಮೇಲು ಮಾಡುತ್ತಿದೆ. ಕರಾವಳಿಯಲ್ಲಿ ಬಿಜೆಪಿಯ ಸ್ವೀಪ್ ಈ ನಿಟ್ಟಿನಲ್ಲಿ ಬಹಳಷ್ಟನ್ನು ಹೇಳುತ್ತಿದೆ. ಇನ್ನು ಬರಬರುತ್ತಾ ಕಾಂಗ್ರೆಸ್ ತನ್ನ ರೆಲವೆನ್ಸ್ ಉಳಿಸಿಕೊಳ್ಳಬೇಕಿದ್ದರೆ ಎಳೆಯರ ಜೊತೆ ಸಂವಹನ ಸಾಧಿಸಿಕೊಳ್ಳುವುದು ಅನಿವಾರ್ಯ.

೫. ಧರ್ಮದ ಹೆಸರಲ್ಲಿ ಜನಸಾಮಾನ್ಯರ ಬಳಿ ತಲುಪುವುದು ಸುಲಭ. ಅದರಲ್ಲಿ ಬಿಜೆಪಿ ಯಶಸ್ಸನ್ನು ಕಂಡಿದೆ. ಇಂತಹ ಸ್ಥಿತಿಯಲ್ಲಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಚೌಕಟ್ಟಿನಿಂದ ಹೊರಗೆ ನಿಂತು ಅಗ್ರೆಷನ್ ಮೂಲಕ ಅದನ್ನು ಎದುರಿಸಲು ಹೊರಟದ್ದು ಹೆಚ್ಚಿನಂಶ ಕಾಂಗ್ರೆಸ್ ಈ ಬಾರಿ ಇಟ್ಟ ತಪ್ಪು ಹೆಜ್ಜೆ. ಟಿಪ್ಪು ಜಯಂತಿ, ಲಿಂಗಾಯತ-ವೀರಶೈವ ವರ್ಗೀಕರಣದಂತಹ ಸಂಗತಿಗಳಲ್ಲಿ ಕಾಂಗ್ರೆಸ್ ನ ಈ ದೌರ್ಬಲ್ಯವನ್ನು ಬಿಜೆಪಿ ಯಥೇಚ್ಛವಾಗಿ ಬಳಸಿಕೊಂಡಿತು ಮತ್ತು ಒಂದು ಹಂತದಲ್ಲಿ ಬಾಲ್ ಬಿಜೆಪಿ ಅಂಗಣದಲ್ಲಿ ಉಳಿದು, ಕಾಂಗ್ರೆಸ್ ತಾನೇ ಎತ್ತಿಕೊಂಡ ಸಂಗತಿಗಳಿಗೆ ಕಡೆಗೆ ತಾನೇ ಪ್ರತಿಕ್ರಿಯೆದಾರನಾಗುವ ಪರಿಸ್ಥಿತಿ ಎದುರಾಯಿತು. ಈ ಚುನಾವಣೆಯಲ್ಲಿ ಇಂತಹ “ಮೂಲಭೂತವಲ್ಲದ” ಸಂಗತಿಗಳೇ ಮಹತ್ವ ಪಡೆಯತೊಡಗಿ, ಕಾಂಗ್ರೆಸ್ಸಿನ ನಿಯಂತ್ರಣ ತಪ್ಪಿಸಿದವು. ಸರ್ಕಾರ ಮಾಡಿದ ಕೆಲಸಗಳು, ಕೊಟ್ಟ ಭಾಗ್ಯಗಳು, ಶ್ರಮ ಎಲ್ಲವೂ ನಿರರ್ಥಕ ಆದವು.

೬. ದುಡ್ಡೇ ಎಲ್ಲವೂ ಆಗಿರುವ ಈಗಿನ ಚುನಾವಣೆಗಳಲ್ಲಿ ಕೊನೆಯ ಹಂತದಲ್ಲಿ ಅಚಾನಕ್ಕಾಗಿ ಎದ್ದ ಐಟಿ ದಾಳಿಗಳ ಸರಣಿ, ಕಾಂಗ್ರೆಸ್ಸಿನ ಮಟ್ಟಿಗೆ ಇನ್ನೊಂದು ನೋಟು ರದ್ಧತಿಯ ಅನುಭವ ತಂದುಕೊಟ್ಟಿತೆಂದರೆ ತಪ್ಪಾಗದು. ಹಾಗಾಗಿ, ಅಲ್ಲಲ್ಲಿ ಕಾರ್ಯಕರ್ತರಿಗೆ ಹಣ ಸಿಗಲಿಲ್ಲ ಎಂಬ ದೂರುಗಳೂ ಬಹಿರಂಗವಾಗಿಯೇ ಕೇಳಿಬಂದವು. ಈ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಸ್ಪಷ್ಟವಾದ ಒಂದು ಗೇಂ ಪ್ಲಾನ್ ಜೊತೆಗೇ ಫೀಲ್ಡಿಗಿಳಿದಿತ್ತು ಎಂಬುದರಲ್ಲಿ ಸಂದೇಹವಿಲ್ಲ.

1 thought on “ಸೋಲಿಸಿಕೊಳ್ಳುವ ಆಟದಲ್ಲಿ ಗೆದ್ದ ಕಾಂಗ್ರೆಸ್”

Leave a Reply