ಪೂಜಾಗಾಂಧಿಯವರು ಈ ಸಿನೆಮಾವನ್ನು ಅವಶ್ಯ ನೋಡಬೇಕು..

ಕೆ ಪುಟ್ಟಸ್ವಾಮಿ 

ಭಾರತೀಯ ಸಿನಿಮಾದ ದೊಡ್ಡ ತಾರೆಯಾಗಿ ದುರಂತದಲ್ಲಿ ಬದುಕನ್ನು ಕೊನೆಗಾಣಿಸಿಕೊಂಡ,ಪ್ರಧಾನವಾಗಿ ತೆಲುಗು ತಮಿಳು ಚಿತ್ರಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಪಡೆದಿದ್ದ ಕಲಾವಿದೆ ಸಾವಿತ್ರಿ ಅವರ ಬದುಕನ್ನು ಆಧರಿಸಿದ ತೆಲುಗು ಚಿತ್ರ ‘ಮಹಾನಟಿ’ ಹಲವು ಕಾರಣಗಳಿಗೆ ಇಷ್ಟವಾಗುವ ಸಿನೆಮಾ.

ನನಗೆ ತಿಳಿದ ಮಟ್ಟಿಗೆ ಮರಾಠಿ ಚಿತ್ರರಂಗದ ನಟಿ ಹನ್ಸಾ ವಾಡ್ಕರ್ ಬದುಕು ಆಧರಿಸಿದ, ಶ್ಯಾಂ ಬೆನಗಲ್ ಅವರ ‘ಭೂಮಿಕ’ ಬಿಟ್ಟರೆ ಗುಣಮಟ್ಟದಲ್ಲಿ ‘ಮಹಾನಟಿ’ ಮುಖ್ಯವಾದ ಚಿತ್ರ.

ಸಾವಿತ್ರಿಯವರ ಬದುಕಿನ ಎಲ್ಲ ಪದರುಗಳನ್ನು ಪ್ರತಿನಿಧಿಸಿರುವ ಈ ಚಿತ್ರಕ್ಕೆ ನಿರ್ದೇಶಕರು ಮಾಡಿಕೊಂಡಿರುವ ಸಿದ್ಧತೆ ಬೆರಗು ಹುಟ್ಟಿಸುತ್ತದೆ.

ಆಕೆಯ ಬಗ್ಗೆ ಇದ್ದ ಹಲವಾರು ಪೂರ್ವಗ್ರಹಗಳನ್ನು (ಆಕೆ ಜೆಮಿನಿ ಗಣೇಶನ್ ಮನೆ ಮುರಿದಳು, ಹಠಮಾರಿ, ಅಹಂಕಾರಿ, ವ್ಯವಹಾರ ತಿಳಿಯದ ಮೂರ್ಖ ಹೆಂಗಸು ಇತ್ಯಾದಿ) ಈ ಚಿತ್ರ ಚದುರಿಸಲು ಯತ್ನಿಸಿದೆ. ತೆಲುಗು ಸಿನಿಮಾ ತೆರೆಯನ್ನು ಆಳುತ್ತಿದ್ದ ಭಾನುಮತೀ, ಅಂಜಲಿ ಯಂಥ ಹಿರಿಯ ನಟಿಯರು. ಕೃಷ್ಣಕುಮಾರಿ, ಜಮುನಾ, ಸರೋಜಾದೇವಿ, ಸಾ.ಜಾನಕಿಯಂಥ ಸಮಕಾಲೀನ ನಟಿಯರ ತೀವ್ರ ಸ್ಪರ್ಧೆಯನ್ನು ಎದುರಿಸಿ ಯಶಸ್ಸಿನ ಶಿಖರವನ್ನು ಸಾವಿತ್ರಿ ತನ್ನ ಸಹಜ ನಟನೆ, ಯಾವುದೇ ಭಾವವನ್ನು ಹೊಮ್ಮಿಸಬಲ್ಲ ಪ್ರತಿಭೆಯಿಂದ ಏರಿ ಇತಿಹಾಸ ಸೃಷ್ಟಿಸಿದಳು.

ನಟನೆ ಆಕೆಗೆ ಮಕ್ಕಳಾಟದಷ್ಟೇ ಸಹಜವೂ ಸರಳವೂ ಆಗಿತ್ತು. ಒಬ್ಬ NTR, ಒಬ್ಬ ANR, ಒಬ್ಬ SV ರಂಗಾರಾವ್ ಇಲ್ಲದೆ ಮಾಯಾಬಜಾರ್ ಸಿನಿಮಾವನ್ನು ಹೇಗೆ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲವೋ, ಶಶಿರೆಖೆಯ ಪಾತ್ರದ ಸಾವಿತ್ರಿಯಿಲ್ಲದೆ ಆ ಚಿತ್ರ ಅಪೂರ್ಣ.

ಈ ಮೊದಲೇ ಎರಡು ಬಾರಿ ಮದುವೆಯಾಗಿ, ಮಕ್ಕಳಿರುವ ಜೆಮಿನಿ ಗಣೇಶನ ಪ್ರೀತಿಗೆ ಸಿಕ್ಕಿ ನಿಜ ತಿಳಿಯುವ ವೇಳೆಗೆ ಹಿಂದಿರುಗಿ ಬರಲಾಗದಷ್ಟು ದೂರ ಸಾಗಿದ್ದ ಆಕೆ ಮನೆಮುರುಕ ಪಟ್ಟವನ್ನು, ಬಂಧುಗಳ ಭರ್ತ್ಸನೆಯನ್ನು ಎದುರಿಸಬೇಕಾಗುತ್ತದೆ. ಮದುವೆ ಸುದ್ದಿ ಬಹಿರಂಗವಾದ ನಂತರ ಆಕೆಯ ವೃತ್ತಿಬದುಕು ನಿಲುಗಡೆಯಾಗುತ್ತದೆಂಬ ನಿರೀಕ್ಷೆಗೆ ವಿರುದ್ಧವಾಗಿ ಆಕೆ ಬೇಡಿಕೆಯ ನಟಿಯಾಗಿ ಊಹೆಗೆ ನಿಲುಕದ ರೀತಿಯಲ್ಲಿ ಯಶಸ್ಸು ಕಾಣುತ್ತಾಳೆ.

ಈ ಯಶಸ್ಸಿನ ಗರ್ಭದಲ್ಲಿ ದುರಂತದ ಬೀಜಗಳು ಮೋಳಕೆಯೊಡೆಯುತ್ತವೆ. ಪತ್ನಿಯ ಯಶಸ್ಸನ್ನು ಅರಗಿಸಿಕೊಳ್ಳಲಾಗದ ಗಂಡ: ಅವನ ಒಲವನ್ನು ಗಳಿಸಿಕೊಳ್ಳಲು ಕುಡಿತಕ್ಕೂ ತೆರೆದುಕೊಂಡು, ಕೊನೆಗೆ ಗಂಡನ ಮೋಸದ ವಿರುದ್ಧ ಸಿಡಿದೆದ್ಧು ನಂಬಿದವರಿಂದಲೇ ವಂಚನೆಗೊಳಗಾದರೂ ಮುರಿದು ಬಿದ್ದ ಬದುಕನ್ನು ಮತ್ತೆ ಕಟ್ಟುವ ಹಂತದಲ್ಲಿ ಸೋಲೊಪ್ಪುವ ಸಾವಿತ್ರಿಯ ಕತೆ ಬಣ್ಣದ ಬದುಕಿನ ನೂರೆಂಟು ಕತೆಗೆ ಸಾಕ್ಷಿಯಾಗುತ್ತದೆ.

ಈ ಚಿತ್ರದ ಯಶಸ್ಸು ಅದನ್ನು ಕಟ್ಟಿರುವ ಕ್ರಮವನ್ನು ಆಧರಿಸಿದೆ.

ಬೆಂಗಳೂರಿನಲ್ಲಿ ಮಲಗಿದ್ದಲ್ಲಿಯೇ ಕೋಮಾಗೆ ಜಾರಿದ ಸಾವಿತ್ರಿಯ ಸುದ್ದಿಯ ಬೆನ್ನುಹತ್ತಿದ ಪತ್ರಕರ್ತೆ ಮತ್ತು ಫೋಟೋಗ್ರಾಫರ್ ಅವರು ಕಲೆಹಾಕುವ ಮಾಹಿತಿ ಸಾವಿತ್ರಿಯ ಕತೆಯಾಗಿ ರೂಪ ತಳೆಯುತ್ತದೆ. 50ರ ದಶಕದಲ್ಲಿ ಚಿತ್ರರಂಗಕ್ಕೆ ಬರುವ ಆಕಾಂಕ್ಷಿಗಳ ಪಡಿಪಾಟಲು, ತೆಲುಗು ಚಿತ್ರರಂಗದ ದಿಗ್ಗಜರಾದ ಕೆ.ವಿ. ರೆಡ್ಡಿ, ನಾಗಿರೆಡ್ಡಿ,ಚಕ್ರಪಾಣಿ, ಎಲ್.ವಿ.ಪ್ರಸಾದ್, ಪುಲ್ಲಯ್ಯ, ನಟರಾದ ಎಸ್.ವಿ.ರಂಗಾರಾವ್, ಅಕ್ಕಿನೇನಿ ಮೊದಲಾದ ಕಲಾವಿದರ ಭಾಗಗಳನ್ನು ಸಮುಚಿತವಾಗಿ ಬಳಸಿ ಚಿತ್ರರಂಗದ ಕತೆಯನ್ನೂ ಹೆಣೆದಿದ್ದಾರೆ.

ನಟಿ ಕೀರ್ತಿ ಸುರೇಶ್ ಸಾವಿತ್ರಿ ಪಾತ್ರದಲ್ಲಿ ವಿಜೃಂಭಿಸಿದರೆ, ಜೆಮಿನಿ ಗಣೇಶನ್ ಪಾತ್ರದ ಸಂಕೀರ್ಣತೆಯನ್ನು ದುಲ್ಖರ್ ಸಲ್ಮಾನ್ ಅನಾವರಣಗೂಳಿಸಿದ್ದಾರೆ. ನಿರ್ಮಾಣ ಗುಣಮಟ್ಟ ಮೇಲ್ಮಟ್ಟದ್ದು. ಆದರೆ ಸಾವಿತ್ರಿ ಕತೆಯನ್ನು ಹೆಳುವುದರ ಜೊತೆಯಲ್ಲಿ ಪತ್ರಕರ್ತೆ ಮತ್ತು ಫೊಟೋಗ್ರಾಫರ್ ನ ಪ್ರೀತಿಯ ಸಬ್ ಪ್ಲಾಟ್ ಅನವಶ್ಯವಾಗಿತ್ತು. ತುರುಕಿದಂತೆ ಕಾಣುವ ಆ ಪಾತ್ರ ಪೋಷಣೆಯಿಂದ ಚಿತ್ರ ದೀರ್ಘವಾಗಿದೆ. ಸ್ವಲ್ಪ ಲಂಬಿಸಿದ ಭಾವಾವೇಶದ ಸನ್ನಿವೇಶಗಳನ್ನು ಹ್ರಸ್ವಗೊಳಿಸಬಹುದಿತ್ತು.

ಆದರೂ ಸುಮಾರು ಮೂರೂವರೆ ದಶಕ ನಟಿಯಾಗಿ ಸಮ ಪ್ರಮಾಣದಲ್ಲಿ ಪುರುಷ ಮಹಿಳಾ ಅಭಿಮಾನಿಗಳನ್ನು ಗಳಿಸಿಕೊಂಡಿದ್ದ ಸಾವಿತ್ರಿ ಅವರಿಗೆ ಇದೊಂದು ಅಭಿಮಾನದ ಗೌರವಾರ್ಪಣೆಯಾಗಿ ನಿರ್ದೆಶಕ ನಾಗ್ ಅಶ್ವಿನ್ ಅವರ ಪ್ರಯತ್ನ ಶ್ಲಾಘನೀಯ.

ಕೊನೆಯದಾಗಿ, ನಮ್ಮ ಕಲ್ಪನಾ ಬದುಕನ್ನು ಆಧರಿಸಿದ್ದೆಂದು ಹೇಳಲಾದ ‘ಅಭಿನೇತ್ರಿ’ ಸಿನಿಮಾದ ನಟಿ, ನಿರ್ಮಾಪಕಿ ಪೂಜಾಗಾಂಧಿಯವರು ಇದನ್ನು ಅವಶ್ಯ ನೋಡಬೇಕು

Leave a Reply