fbpx

ರೇಣುಕಾ ರುಚಿ ಹಚ್ಚಿಕೊಂಡ ಕವಿತೆಗಳು

ಸುಧಾ ಚಿದಾನಂದಗೌಡ

ರೇಣುಕಾ ರಮಾನಂದ ಬರೆಯುವಷ್ಟು ದಿನವೂ ಮಾಡಿದ ಒಳ್ಳೆಯ ಕೆಲಸವೆಂದರೆ ಕವಿತೆ ಬರೆಯುವ ಅವಸರಕ್ಕೆ ಬೀಳದೇ ಇದ್ದದ್ದು.

ಅಂತರಂಗದ ತುರ್ತಿಗೆ ಹೃದಯ ದರ್ದಿಗೆ ಬಿದ್ದಾಗ ಮಾತ್ರವೇ ಲೇಖನಿ ತಡವಿದ್ದು. ಮತ್ತು ಆಗಾಗ ಮಾತ್ರ ಬರೆದ ಕವಿತೆಗಳನ್ನು ಕನ್ನಡದ ಮುಖ್ಯ ಸ್ಫರ್ಧೆಗಳಿಗೆ ದಾಟಿಸಿದಾಗ ಈ ಸಹಜಭಾವದ ಕವಿತೆಗಳು ಸಹಜವಾಗಿಯೇ ಬಹುಮಾನ ಪಡೆದುಕೊಂಡವು ಎಂಬುದಕ್ಕಿಂತ ಓದುಗರ ಹೃದಯ ಸ್ಪರ್ಷಿಸಿದವು ಎನ್ನಲಡ್ಡಿಯಿಲ್ಲ.

ಹಾಗಾಗಿ ಅವರ ಪದ್ಯಗಳು ಅಪರೂಪಕ್ಕೆ ಒದಗಿದ ಭಾವಗಳನ್ನು ಅಭಿವ್ಯಕ್ತಿಸುವ ಕವನಗಳಾಗಿದ್ದು ಬರೆಯುವ ದಣಿಯುವ ಕ್ರಿಯೆಯಿಂದ ಪಾರಾಗಿ ಹಗುರಾಗಿ ಓದುಗರ ಎದೆಗೆ ದಾಟುತ್ತಿವೆ.

ನಲವತ್ತೇಳು ಪದ್ಯಗಳು ಒಟ್ಟುಗೂಡಿದ ಪುಸ್ತಕ “ಮೀನುಪೇಟೆಯ ತಿರುವು “ನಲ್ಲಿ ಕವಯಿತ್ರಿ ಒಂದೇ ಭಾವನೆಗೆ, ಒಮ್ಮುಖ ಅಭಿಪ್ರಾಯಕ್ಕೆ ಅಂಟಿಕೊಂಡಿಲ್ಲ. ಒಂದೊಂದೂ ವಿಭಿನ್ನ ವಸ್ತು ಹೊಂದಿರುವ ಪದ್ಯಗಳು ಇವು.

ತೊಂಭತ್ತರ ದಶಕದಲ್ಲಿ ನಾನೂ, ನನ್ನಂಥ ಅನೇಕರೂ ಮಾಡಿದಂತೆ ಪತ್ರಿಕೆಗಳಿಗೆ ಕಳಿಸಿ, ಸಂಪಾದಕರ ಸ್ವೀಕೃತಿ ಪತ್ರವನ್ನೂ, ಪ್ರಕಟವಾಗುವುದನ್ನೂ ಕಾಯುತ್ತಾ ಕೂಡುವ ಜಾಯಮಾನವಂತೂ ಈ ಹೊತ್ತಿನ ಆಧುನಿಕ ಕವಿಗಳದಲ್ಲ. ಫೇಸ್ ಬುಕ್ ಎಂಬ ನಿತ್ಯನೂತನ, ವೈಯಕ್ತಿಕ ಪತ್ರಿಕೆಯ ಗೋಡೆಗೆ ಮೆತ್ತಿಬಿಟ್ಟರೆ ತೀರಿತು.. ಚರ್ಚೆ ಶುರುವಾಯಿತೆಂದೇ.

ರೇಣುಕಾ ಕೂಡಾ ಸಾಮಾಜಿಕ ಜಾಲತಾಣವನ್ನು ವೇದಿಕೆಯನ್ನಾಗಿ ಚೆನ್ನಾಗಿಯೇ ಬಳಸಿಕೊಂಡರು. ಅದೂ. ನನ್ನಂತೆ ದೊಡ್ಡ ಸ್ಕ್ರೀನಿನ ಡೆಸ್ಕ್ ಟಾಪ್ ಗೆ (ಈಗೀಗ ಲ್ಯಾಪ್ ಟಾಪ್ ) ಅಂಟಿಕೊಳ್ಳದೆ ಮೊಬೈಲ್ ಮೂಲಕವೇ ಕವಿತೆಗಳನ್ನು ಹಂಚಿಕೊಳ್ಳತೊಡಗಿದವರು. ಹಾಗೆ ಸೃಷ್ಟಿಯಾದ ಫೇಸ್ ಬುಕ್ ಸ್ನೇಹವಲಯದ ಎಲ್ಲರನ್ನೂ ನೆನೆಸಿಕೊಳ್ಳುವ ನಿಟ್ಟಿನಲ್ಲಿ ಸ್ನೇಹಿತರ ಉದ್ದದ ಪಟ್ಟಿಯೂ ಕೃತಜ್ಞತೆಗಳ ಪುಟದಲ್ಲಿದೆ.

ಭೌತಿಕವಾಗಿ “ಮೀನುಪೇಟೆಯ ತಿರುವು” ಕೈತೊಳೆದು ಮುಟ್ಟುವಂತಿದೆ. ಹಿತವಾದ ವರ್ಣಸಂಯೋಜನೆ, ಜಿ ಅರುಣಕುಮಾರ್ ಅವರ ಸೊಗಸಾದ ವಿನ್ಯಾಸ ಜೊತೆಗೆ ಸಂವೇದನಾಶೀಲ ಕಲಾವಿದ ಸೃಜನ್ ಅವರ ರೇಖಾಚಿತ್ರಗಳು ಒಳಭಾಗದಲ್ಲಿವೆ. ಇಂದಿನ ಟೆಕ್ನಾಲಜಿಯಲ್ಲಿ ಪುಸ್ತಕಗಳು ಅದೆಷ್ಟು ಸುಂದರವಾಗಿ ಮುದ್ರಿತಗೊಳ್ಳಬಲ್ಲವು ಎಂಬುದಕ್ಕೆ ಈ ಕವನ ಸಂಕಲನ ಸಾಕ್ಷಿ.

ಈ ಎಲ್ಲ ಚಂದಗಳೊಡನೆ ಒಳಹೂರಣವೇನಿದೆಯೆಂದು ತಡಕಾಡಬೇಕಿಲ್ಲ. ಏಕೆಂದರೆ ಇಲ್ಲಿನ ಬಹುತೇಕ ಪದ್ಯಗಳು ಓದುಗರಿಗೆ ಅಪರಿಚಿತವೇನಲ್ಲ. ಫೇಸ್ ಬುಕ್ ನಲ್ಲಿ ಓದಿದ ಕವಿತೆಗಳೇ ಇವು ಆದರೂ ಒಟ್ಟುಗೂಡಿ ಪುಸ್ತಕರೂಪದಲ್ಲಿ ಕೈಸೇರಿದಾಗ ಆಗುವ ಓದಿನ ಅನುಭವವೇ ಬೇರೆ. ಒಂದು ಒಟ್ಟಂದದಲ್ಲಿ ಕವಿತೆಗಳನ್ನು ಓದುತ್ತಾ ಹೋಗಬಹುದು.

ಸಮುದ್ರಕ್ಕೆ ಹತ್ತಿರವಾದ ಪ್ರದೇಶಗಳಲ್ಲಿ ಹುಟ್ಟಿ, ಬೆಳೆದು, ಬದುಕು ಕಟ್ಟಿಕೊಂಡಿರುವ ರೇಣುಕಾರ ಈ ಪುಸ್ತಕದ ಮೊದಲ ಕವಿತೆ “ಹಚ್ಚಿಕೊಂಡ ಸಮುದ್ರ”. ಸಾಕಷ್ಟು ಮಸಾಲೆ ಹಚ್ಚಿಕೊಂಡ ಎಲ್ಲ ಕವಿತೆಗಳನ್ನು ಇದು ಪ್ರತಿನಿಧಿಸುತ್ತದೆ. ನಾನೆಂಬ ಯಾರನ್ನೂ ಬಿಡದೆ ಆಕರ್ಷಿಸುವ, ಮನಸು ಹೃದಯಗಳನ್ನು ಪೊರೆಯುವ ಸಮುದ್ರ ರೇಣುಕಾ ರಮಾನಂದರನ್ನೂ ಹಚ್ಚಿಕೊಂಡುಬಿಟ್ಟಿದೆ.

ಪದೇಪದೇ ಹತ್ತಿರ ಸೆಳೆಯುವ ಮಾಂತ್ರಿಕ ಸಮುದ್ರದ ಅಲೆ, ಮೊರೆತದ ಸದ್ದು, ನಿರಂತರ ಚಲನೆಯ ಸಾದೃಶ್ಯ ಅಥವಾ ಮರಳಿನ ಹಾಸು.. ಯಾವುದರ ಇಂದ್ರಜಾಲ ಹೆಚ್ಚು ಎಂದು ಮಾತುಗಳಲ್ಲಿ ಹಿಡಿದಿಡಲು ಶಕ್ಯವೇ..? ಎಂದು ತುಸು ಭೀತಿಗೊಂಡು, ಇನ್ನು ತುಸು ಮೈಮರೆತು, ಶರಣಾಗಿ ಸುಮ್ಮನಾಗಿಬಿಡುವ ಬಯಲುಸೀಮೆಯ ಮಂದಿಯ ಪೈಕಿಯಲ್ಲ ಇವರು.

ಒಂದು ಪ್ರಯತ್ನ ಮಾಡಿಬಿಡುವಾ ಎಂದು ಸಮುದ್ರವನ್ನು ಹಚ್ಚಿಕೊಳುವ ಸಾಹಸ ಅಥವಾ ಸಮುದ್ರವೇ ಅವರನ್ನು ಹಚ್ಚಿಕೊಳ್ಳಲು ಇಚ್ಛಿಸುವ ಕಲ್ಪನೆಯಲ್ಲಿ ಮುಳುಗೇಳುವ ಪ್ರಯತ್ನವನ್ನು ಮಾಡಿದ್ದಾರೆ. ಬಹುತೇಕವಾಗಿ ಯಶಸ್ವಿಯಾಗಿದ್ದಾರೆ. ಈ ಯಶಸ್ವೀ ಪ್ರಯತ್ನಕ್ಕೆ ಹೊಸಕಾವ್ಯದ ಓದಿಗೆ ಸದಾ “ಒಡ್ಡಿಕೊಂಡ ಸಮುದ್ರ” ಎನ್ನಬಹುದಾದ ಜಿ ಎನ್ ಮೋಹನ್ ಅವರ ಬೆನ್ನುಡಿಯಿದೆ.

ರೇಣುಕಾ ರಮಾನಂದರ ಮುಖ್ಯ ಕವಿತೆ “ಭತ್ತ ಬೆಳೆಯುವುದೆಂದರೆ” ಇದನ್ನು ಹಲವು ಕವಿಗೋಷ್ಠಿಗಳಲ್ಲಿ ವಾಚಿಸಿದ್ದಾರೆ ಮತ್ತು ಸಾಕಷ್ಟು ಉತ್ತಮ ಪ್ರತಿಕ್ರಿಯೆ ಪಡೆದಿದೆ. ರೈತ ಸಮುದಾಯದ ಈ ಹೊತ್ತಿನ ತಲೆಮಾರು ಕೂಡಾ ವ್ಯವಸಾಯದಿಂದ ದೂರಸರಿದಿರುವಾಗ ಹೊಸ ತಲೆಮಾರು ಕೃಷಿ, ಹೈನುಗಾರಿಕೆಯತ್ತ ಮುಖ ಮಾಡುವ ಆಶಾಭಾವನೆ ಹೊಂದಿದ, ಅಜ್ಜಿ, ತಾತ, ಪೂರ್ವಜರೆಲ್ಲರೂ ಪ್ರತಿಫಲಿಸುವ ಭತ್ತ ಬೆಳೆಯುವ ಕ್ರಿಯೆಯಲ್ಲಿ ಹಲವು ದೂರದರ್ಶಿಭಾವಗಳನ್ನು ಈ ಕವಿತೆ ವ್ಯಕ್ತಪಡಿಸುವುದನ್ನು ಮತ್ತೆ ಮತ್ತೆ ಓದಲೊಂದು ಚಂದ.

ನೆಲಕ್ಕೆ, ಮಣ್ಣಿಗೆ ಹತ್ತಿರವಾಗಿರಲು ಬಯಸುವವರೆಲ್ಲ ಈ ಕವಿತೆಯನ್ನು ಮೆಚ್ಚದೇ ಇರಲಾರರು. “ಬೇಸಾಯ…. ನೀ ಸಾಯ, ನಾ ಸಾಯ..” ಎಂಬುದೊಂದು ನೋವಿನ ಜೋಕ್ ಬಯಲುಸೀಮೆ ಕಡೆ ಚಾಲ್ತಿಯಲ್ಲಿದೆ. ಏನೂ ಲಾಭವಿಲ್ಲ ಇದರಲ್ಲಿ ಎಂಬ ಅಸಹಾಯ ದನಿಯ ಜೊತೆಗೆ ರೈತರ ಆತ್ಮಹತ್ಯೆಯಂಥಾ ದಾರುಣ ಘಟನೆಗಳ ಸರಮಾಲೆ ನಮ್ಮೆದುರಿಗಿರುವಾಗ ಈ ಕವಿತೆಯ ಆಶಾಭಾವನೆ ಹೊಸ ತಲೆಮಾರಿಗೆ ಕೃಷಿಯೆಡೆಗೆ ಉತ್ಸಾಹವನ್ನೂ ಹುಟ್ಟಿಸಬಲ್ಲುದು. ಆಧುನಿಕ ಬದುಕಿಗೆ ಒಡ್ಡಿಕೊಂಡೇ ನೆಲಕ್ಕೂ ಹತ್ತಿರವಾಗುವ ಸೊಗಸಾದ ಕಲ್ಪನೆಯ ಕವಿತೆ ಇದು.

“ಇನ್ನೇನು ಇತ್ತು ಹೇಳು ನಮ್ಮಿಬ್ಬರ ಮಧ್ಯೆ..?” ಮತ್ತೊಂದು ತೀವ್ರ ಭಾವನೆಯ ಪದ್ಯ. ಏನಿಲ್ಲ, ಆದರೂ ಇತ್ತಲ್ಲ ಏನೋ ಎನ್ನುವಂಥ, ಕಾಡಿತ್ತಲ್ಲ ಹಲವು ದಿನ, ಇನ್ನೂ ಕಾಡುತ್ತಲೇ ಇದೆಯಲ್ಲ ಎಂಬಂಥಾ, ಅದರ ಜೊತೆಗೆನೇ ಬೇಕಾದರೂ, ಬೇಡವಾದರೂ ಜೀಕುತ್ತಿದೆಯಲ್ಲ ಜೀವನಜೋಕಾಲಿ ಎಂಬುದನ್ನು ಸೂಕ್ಷ್ಮವಾಗಿ ನಿರೂಪಿಸುವ ಕವಿತೆ.

ಜೊತೆಗೆ ಹಾಗೆ ಏನೂ ಇದ್ದಿಲ್ಲದ ಒಂದು ಭಾವಪೂರ್ಣ ಮಾನಸಿಕ ಸಂಬಂಧ ಕಲ್ಪನೆಯಲ್ಲೇ ಕೈಹಿಡಿಯುವುದು ನಿಜವೇ. ನೆನಸಿಕೊಳ್ಳುವುದರಲ್ಲಿ ಬಿಟ್ಟರೆ ಬೇರೆಲ್ಲೂ ಠಾವಿಲ್ಲದೇ ಇರುವ ಇಂಥ, ಹೆಸರಿಡಲು ಕಷ್ಟವಾದ ಸಂಬಂಧಗಳು ಯಾಕಾಗಿ ಜನ್ಮಪೂರ್ತಿ ಆವರಿಸಿಕೊಳ್ಳುತ್ತವೆಂಬುದೊಂದು ಯಕ್ಷಪ್ರಶ್ನೆಯೇ ಸರಿ. ಅದನ್ನು ನವಿರಾಗಿ, ಸ್ವಲ್ಪ ಹತಾಶೆ, ಸ್ವಲ್ಪ ನಿರಾಶೆ ಬೆರೆಸಿ “ಇನ್ನೇನು ಇತ್ತು” ಎಂದು ಪ್ರಶ್ನಿಸುವುದರೊಂದಿಗೆ ಕವಿತೆ ಓದುಗರೊಂದಿಗೆ ಆಪ್ತವಾಗುತ್ತದೆ.

“ಅವನನ್ನು ನನ್ನಷ್ಟಕ್ಕೆ ಬಿಡಿ” ಇಂಥದ್ದೇ ಮತ್ತೊಂದು ನವಿರುಭಾವನೆಯ ಕವಿತೆ. ಆ ಪಕ್ಕ, ಈ ಪಕ್ಕ ಇರುವವರನ್ನು ನಯವಾಗಿಯೇ ಎಚ್ಚರಿಸುವ, ಹೊಸ ಪದ ಜೋಡಣೆಯ ಈ ಪದ್ಯ ಕೂಡಾ ನೆನಪಿನಲ್ಲಿ ಉಳಿಯುವಂಥದ್ದು. ಇದರ ಮುಂದುವರಿದ ಭಾಗದಂತಿರುವುದು “ನನಗಾಗಿ ಕಾದಿರುವಂತೆ ಹೇಳಬೇಕು ನೀನು”. “ನಿಲ್ಲು ಮುತ್ತಿಡಬೇಡ” ಸಂಬಂಧದ ಇನ್ನೊಂದು ಮುಖವನ್ನು ಎಲ್ಲೂ ಒರಟೆನಿಸದೆ ಹೇಳುವಂಥದ್ದು.

ರೇಣುಕಾ ರಮಾನಂದ ವಿಭಿನ್ನತೆಯನ್ನು ಪ್ರಜ್ಞಾಪೂರ್ವಕವಾಗಿ ವ್ಯಕ್ತಪಡಿಸಿದ್ದಾರೆನ್ನುವುದಕ್ಕಿಂತ ಸಹಜವಾಗಿ ಕಂಡುಂಡ ಘಟನೆಗಳನ್ನೂ ಆಧರಿಸಿ ಬರೆದಿರುವುದು ಕವಿತೆಗಳನ್ನು ಏಕತಾನದಿಂದ ಪಾರಾಗಿಸಿದೆ. ಪ್ರಾಯಷಃ ಅದರ ಪರಿಣಾಮವಾಗಿ “ಮಕ್ಕಳ ದಿನದಂದೇ ಕಂಡ ಮುಖ” “ಕುರುಹುಗಳು” “ಪೇಪರ್ ಹುಡುಗ”, “ಹಿಂದೆಲ್ಲ ಹೀಗಿರಲಿಲ್ಲ” “ಪ್ರಸ್ತುತ ಜೀವದ ಪ್ರಶ್ನೆ ಇಷ್ಟೇ” ಇಂಥಾ ಪದ್ಯಗಳು ಮೂಡಿಬಂದಿವೆ.

ರೇಣುಕಾ ಕನ್ನಡದ ಕುವರಿ. ಕನ್ನಡ ಓದಿಕೊಂಡವರು. ಮುಗ್ಧತೆಯ ಪ್ರತಿರೂಪಗಳಾದ ಪುಟ್ಟಮಕ್ಕಳೊಂದಿಗೆ ಕಾಲಕಳೆಯುವವರು. ಅವರು ಇನ್ನುಮುಂದಿನ ಕವನದ ಪ್ರಯತ್ನಗಳಲ್ಲಿ ಕಾವ್ಯದ ಹಲವು ರೂಪಗಳನ್ನು ಪ್ರಯತ್ನಿಸಬಹುದೇನೋ… ಸಾನೆಟ್, ಓಡ್, ಖಂಡಕಾವ್ಯ ಹೀಗೆ.

ಈ ನಿರ್ದಿಷ್ಟ ಮಾತುಗಳನ್ನು ಏಕೆ ಹೇಳುತ್ತಿದ್ದೇನೆಂದರೆ “ನಾನಿನ್ನೂ ಹೊಸ ಕವಯಿತ್ರಿ” ಎಂಬ ವಿನಯ, ಹಂಬಲ್ ನೆಸ್ ರೇಣುಕಾರಲ್ಲಿದೆ.

“ನಾನಾಗಲೇ ಬೆಳೆದುಬಿಟ್ಟಿದೇನೆ, ನನಗೆಲ್ಲಾ ಗೊತ್ತು” ಎಂದುಕೊಳ್ಳುವವರಿಗೆ ಏನೂ ಹೇಳುವ ಅವಶ್ಯಕತೆಯೇ ಬರುವುದಿಲ್ಲ ಎಂದು ನಾನು ನಂಬಿದ್ದೇನೆ. ಇದಕ್ಕಿಂತ ಮುಖ್ಯವಾದ ಮತ್ತು ಎರಡನೆಯ ಕಾರಣವೇನೆಂದರೆ ಈ ಕವನಸಂಕಲನದಲ್ಲಿ “ಹಾಲಕ್ಕಿ ಹಾಡು” ಎಂಬ ಗಮನಿಸತಕ್ಕ ಕವಿತೆಯಿದೆ. ಹಾಲಕ್ಕಿ ಜನಾಂಗವನ್ನು ಕುರಿತು ಅವರದೇ ಜಾನಪದ ಧಾಟಿಯಲ್ಲಿ ಬರೆದ ತುಂಬ ಗಮನಾರ್ಹ ಪದ್ಯ ಇದು ಎಂದು ನಾನು ಗುರುತಿಸಬಯಸುತ್ತೇನೆ.

ರೇಣುಕಾ ರಮಾನಂದರು ಸುತ್ತಲಿನ ವಾತಾವರಣಕ್ಕೆ, ತಾವು ಬದುಕುತ್ತಿರುವ ಸ್ಥಳದ ಸಮುದಾಯದೊಂದಿಗೆ ಸ್ಪಂದಿಸುವುದರ ಸ್ಪಷ್ಟ ದ್ಯೋತಕ ಇದು. ಉಳಿದಂತೆ ಎಲ್ಲ ಹೊಸತಲೆಮಾರಿನ ಕವಿಗಳಂತೆ ರೇಣುಕಾರವೂ ಮುಕ್ತಛಂದದ ಪದ್ಯಗಳೇ. ಈ ಪ್ರಯತ್ನ ಮಾಡಿರುವ ರೇಣುಕಾರಿಗೆ ಉಳಿದ ಕಾವ್ಯಪ್ರಕಾರಗಳನ್ನು ಪ್ರಯತ್ನಿಸುವುದು ಕಷ್ಟವೇನಾಗಲಿಕ್ಕಿಲ್ಲ. ಅನೇಕ ಹೊಸಕವಿಗಳು ಗಜಲ್, ಶಾಯಿರಿ ರೂಪಗಳಲ್ಲಿ ಸೊಗಸಾಗಿ ಬರೆಯುತ್ತಿರುವುದೂ ಇಲ್ಲಿ ನೆನಪಾಗುತ್ತಿದೆ.

“ಆರಂಭಕ್ಕೊಂದು ಮುಕ್ತಾಯ” ಮತ್ತೊಂದು ಹೊಸ ದೃಷ್ಟಿಕೋನದ ಕವಿತೆ. ನೋವಿನೊಂದಿಗೆ ಆರ್ತವಾಗುವ ಬದುಕಬೇಕೆಂಬ ಆಸೆ, ಹಠಕ್ಕೆ ಬಿದ್ದ ಮನಸುಗಳ ನೋವು ತುಂಬಿದ ರೂಪಕಗಳಿವೆ ಇದರಲ್ಲಿ.

ದಿನದ ಕೊನೆಯ ಒಲೆಉರಿಗಾಗಿ
ಬಿಂಬ ಮೂಡದ ಕೆಂಪುದೀಪದ ಕೆಳಗೆಬಿಕರಿಯಾಗುವ ಕ್ಷಣವ ಕಾದು ನಿಲ್ಲುತ್ತವೆ
ತೊಡೆ ಬತ್ತಿದ ಎದೆಯ ಮೇಲಿನ ಮುತ್ತ
ಕಿತ್ತಿಡಲಾರದೇ ಕಂಡೋರ ಕೆನೆವ ಕುದುರೆಗಳಿಗೆಬೇರು ಕೊಡುವ ಭೂಮಿಯಾಗಿ
ಮತ್ತೆಮತ್ತೆ ಕತ್ತಲಿನ ಗುಚ್ಛವಾಗುತ್ತದೆ
ರೆಕ್ಕೆಬಿಡಿಸಲು ಹೋಗಿ
ಚಕ್ರವ್ಯೂಹಕೆ ಸಿಲುಕಿ

“ಅವನು” ಪದ್ಯದಲ್ಲಿ ಕಾಲುಂಗುರ- ಕೈಯುಂಗುರಗಳ ಕಣ್ಣಾಮುಚ್ಚಾಲೆಯಾಟವಿದೆ. ಕೊನೆಯಲ್ಲೊಂದು ವಿಷಾದವಲ್ಲದ, ನಿರ್ವಿಕಾರವೆಂಬಂತೆ ಕೇಳುವ ಪ್ರಶ್ನೆಯಿದೆ. “ಹೊಸಹೆಸರು” ತನ್ನ ತಾನು ಹುಡುಕಿಕೊಳುವ ನಿರಂತರ ಕ್ರಿಯೆಯ ಪ್ರತಿಬಿಂಬ. ಕೊನೆಯ ಕವಿತೆ ಮಾಗಿಯ ಹೆಜ್ಜೆಯಲ್ಲೂ ಕಣ್ಣಿಗೆ ಕಾಣದ ಆದರೆ ಮನಸನ್ನು ಕಾಡುವ ಏನನ್ನೋ ಹುಡುಕುವ ತಹತಹವೇ ಕಂಡುಬರುತ್ತದೆ.

“ಗರ್ವ” ಎಂಬ ಕವಿತೆಯಲ್ಲೂ ಇಂಥದೊಂದು ಕತ್ತಲೆಯಲ್ಲೂ ಬೆಳಕಿನ ಕಿರಣ ಹುಡುಕುವ ಜೀವನಪ್ರೀತಿ ಇಣುಕುವುದರೊಂದಿಗೆ ಈ ಕವಿತೆಗಳು ಮನಸಿಗೆ ನಾಟುತ್ತವೆ. “ನೂರಕ್ಕೆ ನೂರು” ಎಂಬ ಕವಿತೆ ಸ್ವಾರಸ್ಯವಾಗಿ ಮಜಬೂತಾಗಿದೆ. ಇದನ್ನು ಓದುವಾಗ ತುಟಿಯ ಮೇಲೊಂದು ಕಿರುನಗೆ ಮೂಡಿದರೆ ಆಶ್ಚರ್ಯವಿಲ್ಲ. ಪರ್ಫೂಮು, ಏಸಿಗಳ ವಿರುದ್ಧ ಬೆವರಗಂಧ, ತಿದ್ದಿಸಿಕೊಳ್ಳದ ಹುಬ್ಬುಗಳು ಜಯಸಾಧಿಸುವ, ವಿಜಯದ ಪತಾಕೆ ಹಾರಿಸುವ ಲವಲವಿಕೆಯ ಕವಿತೆ.

ಅಕ್ಕಪಕ್ಕದಲ್ಲೇ ಹೀಗೆ ವಿವಿಧಭಾವದ ಕವಿತೆಗಳನ್ನು ಕೊಟ್ಟಿರುವುದು “ಮೀನುಪೇಟೆಯ ತಿರುವು” ಓದನ್ನು ಆಸಕ್ತಿಕರವಾಗಿಸಿದೆ. ಹಾಗೆಯೇ “ ಮೀನುಪೇಟೆಯ ತಿರುವಿನಲ್ಲಿ ಎದೆಯ ಧಡಕನ್ ಹೆಚ್ಚಿಸುವ ಅತೀ ಪ್ರೀತಿಪಾತ್ರರಾದವರು ಎದುರಾಗಿ ಖುಷಿ ಹುಚ್ಚೆದ್ದು ಕುಣಿಯಲಿ” ಎಂಬ ಸಖತ್ತಾದ ಸಾಲು ಸಹಾ ಓದುಗರ ಮನಸಿನ ಮೂಲೆಯಲ್ಲಿ ಆಹ್ಲಾದಕರ ನಸುನಗುವನ್ನು ಖಂಡಿತಾ ಮೂಡಿಸುತ್ತದೆ.

ಈ ಬಗೆಯ ಚೇತೋಹಾರಿ ಅನುಭವದ ಓದನ್ನು ಕೊಟ್ಟಿದ್ದಕ್ಕಾಗಿ ಅಭಿನಂದನೆಗಳು ರೇಣುಕಾ ರಮಾನಂದರಿಗೆ.

2 Responses

  1. Lalitha siddabasavayya says:

    A beautiful article and a tribute to the new comers , thanks sudha

  2. Sudha ChidanandGowd says:

    Thanq Lalitha mam

    Thanq Avadhi

Leave a Reply

%d bloggers like this: