fbpx

‘ಅಸ್ತವ್ಯಸ್ತ ಬದುಕಿನ ಸ್ತ್ರೀಯರು’ ಎಂಬ ಕಾದಂಬರಿಯ ಇಳಾ ಅಲವತ್ತುಕೊಂಡಂತೆ..

“ಈ ಸಲ ರಜೆಯಲ್ಲಿ ಹಿರೇಗುತ್ತಿಯಲ್ಲಿ ಉಳಿಯಲಾ?”-

ಇದು ಸುಮಾರು ಎರಡು ವರ್ಷಗಳಿಂದಲೂನಾನು ಪ್ರವೀರ್ ಹತ್ತಿರ ಕೇಳುವ ಮಾತು.

ರಾಷ್ಟ್ರೀಯ ಹೆದ್ದಾರಿ ಅಗಲೀಕರಣವಾಗಿ ನಮ್ಮ ಮನೆ ಹೋಗುತ್ತದೆ ಎಂದು ತಿಳಿದಾಗಿನಿಂದಲೂ ನನಗೆ ಒಂದು ರೀತಿಯ ಒತ್ತಡ.

ಹುಟ್ಟಿ ಆಡಿ ಬೆಳೆದ ಮನೆಯನ್ನು ಕೆಡವುವ, ಬಿಟ್ಟು ಕೊಡುವ ಸಂಕಟ ಬಲ್ಲವರಿಗಷ್ಟೇ ಗೊತ್ತು.

ಅದರಲ್ಲೂ ವಾರಗಟ್ಟಲೇ ಮನೆಯೊಳಗೇ ನನ್ನೊಬ್ಬಳನ್ನೇ ಕೂಡಿ ಹಾಕಿಟ್ಟು ಹೋದರೂ ಹಾಯಾಗಿ ನನ್ನ ಪಾಡಿಗೆ ನಾನು ಉಳಿದು ಬಿಡಬಹುದಾಗಿದ್ದ ಮನೆ ಅದು.ಮಾಳಿಗೆಯ ಮೇಲಿನ ಪುಟ್ಟ ಕೋಣೆಯಲ್ಲಿ, ಬಿಸಿಲು ಮಚ್ಚಿನಲ್ಲಿರುವ ಜೋಕಾಲಿಯಲ್ಲಿ ಮಲಗಿ ಪುಸ್ತಕ ಓದುತ್ತಿದ್ದರೆ ಜಗತ್ತನ್ನೇ ಮರೆತುಬಿಡುವ ತನ್ಮಯತೆ.

ಇಂತಹ ಮನೆಯನ್ನು ಹೆದ್ದಾರಿ ಅಗಲೀಕರಣದಲ್ಲಿ ಕೆಡವಬೇಕಾಗುತ್ತದೆ ಎಂದಾಗ ಒಮ್ಮೆ ಉಸಿರು ನಿಂತ ಅನುಭವ. ಅಲ್ಲೇ ಸ್ವಲ್ಪ ದೂರದಲ್ಲಿರುವ ಮಾವಿನ ತೋಟದಲ್ಲಿ ಮನೆ ಕಟ್ಟೋಣ ಅಂದರೆ ಅದೇಕೋ ಅಪ್ಪ ಸಿದ್ಧನಿಲ್ಲ. ತಾನು ಕೊಂಡು, ಖುದ್ದಾಗಿ ನಿಂತು ಕಟ್ಟಿಸಿದ ಮನೆಯನ್ನು ಬಿಟ್ಟು ದೂರ ಇರುವ ಮನಸಿಲ್ಲ. ಹೀಗಾಗಿ ಅಕ್ಕಪಕ್ಕದಲ್ಲೆಲ್ಲ ಮನೆ ಹಾಗು ಮರಗಳುರುಳಿ ರಸ್ತೆಯಾಗಿದ್ದರೂ ರಸ್ತೆ ಪಕ್ಕದಲ್ಲಿರುವ ದೇವಸ್ಥಾನ ಪುರಾತತ್ವ ಇಲಾಖೆಗೆ ಸಂಬಂಧಿಸಿರೋದ್ರಿಂದ ರಸ್ತೆ ಅಗಲಿಕರಣದ ಕುರಿತಾದ ವ್ಯಾಜ್ಯ ಕೋರ್ಟನಲ್ಲಿದೆ.

ಹೀಗಾಗಿ ‘ಮನೆ ಹೋಗ್ತದೆ’ ಎನ್ನುವ ಎರಡು ವರ್ಷಗಳ ನೋವಿನ ಹೊರತಾಗಿಯೂ ಮನೆ ಹಾಗೇ ಇದೆ. ಯಾವ ಕ್ಷಣದಲ್ಲಿ ಹೆದ್ದಾರಿ ಪ್ರಾಧಿಕಾರದವರು ಬಂದು ನಮ್ಮನ್ನೆಲ್ಲ ಒಕ್ಕಲೆಬ್ಬಿಸುತ್ತಾರೋ ಅದಾವ ಮಧ್ಯರಾತ್ರಿ ಗೂಡಚಾಪೆ ಕಟ್ಕೊಂಡು ಮನೆಯಿಂದ ಹೊರ ಬೀಳಬೇಕಾಗ್ತದೋ ಎನ್ನುವ ಅಂಜಿಕೆಯಲ್ಲೇ ದಿನ ಕಳೆಯುತ್ತಿದೆ

ಥೇಟ್ ಸಾಹಿತ್ಯ ಅಕಾದೆಮಿ ಪ್ರಶಸ್ತಿಯನ್ನು ಪಡೆದ, ಮಾಲತಿ ರಾವ್ ಅವರು ಇಂಗ್ಲೀಷ್ ನಲ್ಲಿ ಬರೆದ, ಎಂ ವಿ ವಸಂತಕುಮಾರಿಯವರು ಕನ್ನಡಕ್ಕೆ ಅನುವಾದಿಸಿದ ‘ಅಸ್ತವ್ಯಸ್ತ ಬದುಕಿನ ಸ್ತ್ರೀಯರು’ ಎಂಬ ಕಾದಂಬರಿಯ ಇಳಾ ಅಲವತ್ತುಕೊಂಡಂತೆ.

ಹೆಣ್ಣಿಗೆ ಹೀಗೇ. ತವರು ಮನೆಯ ವಾಂಛಲ್ಯ ಬಿಡುವುದೇ ಇಲ್ಲ. ಯಾವ ಆಸರೆಯೂ ಇಲ್ಲ ಎಂದುಕೊಂಡಾಗಲೂ ತವರು ತನ್ನ ಬೆಂಬಲಕ್ಕೆ ಇರುತ್ತದೆ ಎಂಬ ನಂಬಿಕೆ ಅವಳದ್ದು. ಅಣ್ಣ ತಮ್ಮ ಎಂಬ ಒಡಹುಟ್ಟಿದವರಾರೂ ತನ್ನನ್ನು ಆದರಿಸುವುದಿಲ್ಲ ಎಂದಾದರೂ ‘ಹೊಳೆ ದಂಡೆಲಿರುವ ಕರಕಿಯ ಕುಡಿಯಂಗೆ ಹಬ್ಬಲಿ ನನ್ನ ತವರ ಬಳ್ಳಿ’ ಎಂದು ಹಾರೈಸುತ್ತಾಳೆ.

ಹಿಮಾಲಯದ ಹೆಣ್ಣುಮಕ್ಕಳೂ ಹೀಗೇ. ಅದು ಭಾರತ ಸ್ವಾತಂತ್ರ ಪಡೆಯುವ ಕಾಲದ ಆಸುಪಾಸಿನಲ್ಲಿರುವ ಕಮಲಾ ಇರಬಹುದು ಅಥವಾ ಆಧುನಿಕ ಕಾಲದ ಇಳಾಳೇ ಇರಬಹುದು. ಅಥವಾ ಕಮಲಾಳಿಗಿಂತ ಹಿಂದಿನ ಕಾಲದ ಸುಬ್ಬಿಯೇ ಆಗಿರಬಹುದು. ಅವರಿಗೆ ಹಿಮಾಲಯ ಎಂದರೆ ಮನೆ ಮಾತ್ರವಲ್ಲ ಅದೊಂದು ಭರವಸೆ, ನಂಬಿಕೆ.

ಹಿಮಾಲಯದ ಪುರುಷ ದಬ್ಬಾಳಿಕೆಯ ಹೊರತಾಗಿಯೂ ಅದನ್ನು ಕೇವಲ ಕಲ್ಲು ಮಣ್ಣಿನ ಕಟ್ಟಡವನ್ನಾಗಿಸದೇ ಮನೆಯ ಪ್ರೀತಿಯ ಚೌಕಟ್ಟನ್ನಾಗಿಸಿದವರು ವೆಂಕೂಬಾಯಿ ಹಾಗೂ ರುಕ್ಮಿಣಿಯಂತಹ ತಾಯಿ ಹೃದಯದವರು.

ಇಡೀ ಕಾದಂಬರಿ ಇಳಾಳ ನಿರೂಪಣೆ. ಆಕೆ ತನಗೆ ಸಿಕ್ಕಿದ ಕಮಲಾಳ ಡಯರಿಯ ಆಧಾರದ ಮೇಲೆ ಇಡೀ ಕಾದಂಬರಿಯನ್ನು ಹೇಳುತ್ತಿದ್ದಾಳೆ ಎಂಬ ಭಾವ ಮೂಡಿಸಿದರೂ ಕಾದಂಬರಿಯ ಓಘಕ್ಕೆ ಈ ಪ್ರಥಮ ಪುರುಷದ ನಿರೂಪಣೆ ಎಲ್ಲಿಯೂ ಇಣುಕಿ ಅಡಚಣೆಯನ್ನು ಉಂಟುಮಾಡುವುದಿಲ್ಲ.

ಹಿಮಾಲಯ ಹೇಗೆ ತನ್ನ ತಲೆತಲೆಮಾರುಗಳ ಹಿಂದಿನ ಹಿರಿಯರ ಉಸಿರು ಉಸಿರನ್ನು, ಇಲ್ಲಿಯ ಬದುಕಿನ ನಿಗೂಢವನ್ನು ಅಡಗಿಸಿಕೊಂಡಿದೆ ಎಂಬುದನ್ನು ಇಳಾ ತಾನಾಗಿ ಅನುಭವಿಸುತ್ತ ಹೇಳುತ್ತ ಹೋಗುತ್ತಾಳಾದರೂ ಅದನ್ನು ಕಮಲಳ ದೃಷ್ಟಿಯಲ್ಲಿಯೂ ನೋಡುತ್ತ ವಿವರಿಸುತ್ತಾಳೆ.

ಇತ್ತೀಚಿನ ದಿನಗಳಲ್ಲಿ ನಾನೊಂದು ವಿಷಯವನ್ನು ಉದ್ದೇಶಪೂರ್ವಕವಾಗಿ ಗಮನಿಸುತ್ತಿದ್ದೇನೆ. ಮನೆ ಎಂಬ ಕಟ್ಟುಪಾಡಿಗೆ ಒಳಪಟ್ಟು ಬದಲಾದ ಹೆಣ್ಣಿನ ಮನಸ್ಥಿತಿ.

ನನ್ನ ಅಜ್ಜಿಯರ ಕಾಲದಲ್ಲಿ ಗಂಡ ಎಷ್ಟೇ ಹೊಡೆಯಲಿ ಬಡಿಯಲಿ ಅದನ್ನಾಕೆ ತಪ್ಪು ಎಂದೇ ಪರಿಗಣಿಸುತ್ತಿರಲಿಲ್ಲ. ಹೊಡೆಯುವುದು ಗಂಡನ ಅಧಿಕಾರ, ಹೊಡೆಸಿಕೊಳ್ಳುವುದು ಹೆಂಡತಿಯರ ಕರ್ಮ ಎಂಬ ಮನೋಭಾವನೆ, ಥೇಟ್ ಈ ಕಾದಂಬರಿಯಲ್ಲಿ ಬರುವ ವೆಂಕೂಬಾಯಿ ಹಾಗೂ ನಾಗಮ್ಮನಂತೆ.

ಗಂಡ ಎಷ್ಟೇ ದೈಹಿಕ ಹಿಂಸೆ ಕೊಟ್ಟರೂ ಅದನ್ನು ಸಹಿಸಿಕೊಂಡು ಆತನೊಂದಿಗೆ ಬಾಳು ಸಾಗಿಸುವ ಸಹನೆ ಅವರಿಗೆ ಅದೆಲ್ಲಿತ್ತೋ. ಈ ಕಾದಂಬರಿಯಲ್ಲಿ ರುಕ್ಮಿಣಿಯ ತಾಯಿ ನಾಗಮ್ಮನಿಗೆ ಅಂತಹ ದೈಹಿಕ ಹಿಂಸೆಯಿಲ್ಲ. ಆದರೂ ಮನೆಯಿಂದ ಹೊರಹೋಗುವ ಅಧಿಕಾರವಿಲ್ಲ. ಆದರೆ ವೆಂಕುಬಾಯಿ ಮಾತ್ರ ಶೇಷಗಿರಿ ರಾಯರ ದೌರ್ಜನ್ಯಕ್ಕೆ ನಲುಗಿದವಳು. ಪ್ರತಿದಿನದ ಹಿಂಸೆ ಆಕೆಗೆ ರೂಢಿಯಾಗಿ ಹೋಗಿದೆಯೇನೋ ಎಂಬಷ್ಟು. ಗಂಡ ಒಂದು ದಿನ ರೋಷ ತಾಪ ತೋರಿಸದಿದ್ದರೆ ಆಕೆಗೂ ಏನನ್ನೋ ಕಳೆದುಕೊಂಡ ಭಾವ.

ಆದರೆ ನನ್ನ ಅಮ್ಮಂದಿರ ಕಾಲದಲ್ಲಿ ಒಂದಿಷ್ಟು ಬದಲಾವಣೆ. ದೈಹಿಕ ದೌರ್ಜನ್ಯವನ್ನು ಎಂದೂ ಒಪ್ಪಿದವರಲ್ಲ. ಆದರೆ ಒಂದು ವೇಳೆ ದೈಹಿಕ ದೌರ್ಜನ್ಯ ನಡೆದರೂ ಅದನ್ನು ಹಾದಿಬೀದಿಗೆ ತಂದು ಸಂಸಾರವನ್ನು ಹಾಳು ಮಾಡಿಕೊಂಡವರಲ್ಲ. ನನ್ನ ತಲೆಮಾರಿಗೆ ಗಂಡ ಕೊಂಚ ಗದರುವಂತೆಯೂ ಇಲ್ಲ. ಒಂದು ಮಾತಾಡಿದರೆ ಕಡಿಮೆ, ಎರಡು ಮಾತಾಡಿದರೆ ಹೆಚ್ಚಾಯ್ತು ಎಂಬ ಗೋಳಿನವರು ನಾವು.

ಗಂಡ ಮಾತನಾಡುವುದೇ ತಡ ನಮ್ಮದೆಲ್ಲ ಕಟ್ಟಿಕೊಂಡು ಅಪ್ಪನ ಮನೆಗೆ ಹೊರಟೇ ಬಿಡುವವರು. ಒಂದೆರಡು ದಿನಗಳ ನಂತರ ಕೋಪ ತಣ್ಣಗಾಗಿ, ಅತ್ತಲಿಂದ ಬಾರೆ, ಸಾಕಾಗಿದೆ ನೀನಿಲ್ಲದೇ ಎಂದು ಬರುವ ಒಂದು ಫೋನ್ ಕಾಲ್ ಗಾಗಿ ಕಾದು ಮೀಸೆ ಮಣ್ಣಾಗದ ಫೋಸ್ ನಲ್ಲಿ ಮತ್ತೆ ಮರಳುವವರು. ನನ್ನ ನಂತರದ ತಲೆಮಾರು ಹಾಗಿಲ್ಲ. ಆಫೀಸಿಂದ ಬರುವಾಗ ಊಟದ ಪಾರ್ಸೆಲ್ ತಂದಿಲ್ಲ ಎಂದು ಡೈವೋರ್ಸ ಕೊಡುತ್ತಿದ್ದಾರೆ. ಆದರೂ ಹೆಣ್ಣಿನ ಮೇಲಾಗುವ ದೌರ್ಜನ್ಯ ಮಾತ್ರ ಆ ಕಾಲದಿಂದ ಈ  ಕಾಲದವರೆಗೂ ನಿಲ್ಲುತ್ತಿಲ್ಲ ಎಂಬುದೇ ವಿಷಾದನೀಯ.

ಆ ಕಾಲದಲ್ಲಿ ಹೆಣ್ಣಾಗಿ ಹುಟ್ಟುವುದೇ ಗಂಡನ ಸೇವೆ ಮಾಡುವುದಕ್ಕೆ. ಮಗಳು ಹುಟ್ಟಿ ಹನ್ನೆರಡನೆಯ ದಿನಕ್ಕೆ ತೊಟ್ಟಿಲಲ್ಲಿ ಹಾಕುವಾಗಲೇ ಅದರ ಮದುವೆಯ ಸಂಭ್ರಮದ ಆಲೋಚನೆ. ಆಗಿನಿಂದಲೇ ಒಂದೂ ತಿರುಗಿ ಮಾತನಾಡದೆ ಹಿಂಸೆಯನ್ನು ಅನುಭವಿಸಲು ತರಬೇತಿ ನೀಡುವ ಸಿದ್ಧತೆಯ ಆರಂಭ. ಹನ್ನೆರಡು ವರ್ಷಕ್ಕೂ ಮೊದಲು ಮದುವೆ ಆಗದಿದ್ದರೆ ಆಕೆಯನ್ನು ತೀರಾ ಕೀಳಾಗಿ ನೋಡುವ ಪರಿಪಾಠ.

ಋತುಸ್ರಾವಕ್ಕೂ ಮುನ್ನವೇ ಅವಳು ಒಬ್ಬನ ಪತ್ನಿಯಾಗಿರಲೇಬೇಕು. ತಾಯಿ ಮನೆಯಲ್ಲಿ ಆಕೆ ಆಗುವ ಪ್ರತಿ ಋತುಸ್ರಾವವೂ ಆಕೆಯ ಹೆತ್ತವರನ್ನು ನರಕದ ಘೋರ ಶಿಕ್ಷೆಯನ್ನು ದ್ವಿಗುಣಗೊಳಿಸುತ್ತದೆ ಎಂದು ಓದಿದ ನೆನಪು. ಆದರೆ ಕಾಲ ಬದಲಾದರೂ ಅದು ಹೆಣ್ಣಿನ ಪಾಲಿಗೆ ನಿಂತ ನೀರೇ.

ಹೀಗಾಗಿ ಮಾನಸಿಕ ಅಸ್ವಸ್ಥನ ಹೆಂಡತಿ ಜಾಗಿರದಾರ ಅಮೃತಾಬಾಯಿ ಊರ ಉಳಿದ ಹೆಂಗಸರ ಬಾಯಲ್ಲಿ ಸೂಳೆ. ಇಂದಿನ ಸಮಾಜದಲ್ಲೂ ಹೆಣ್ಣು ಒಂದಿಷ್ಟು ದಿಟ್ಟತನ ತೋರಿದರೆ ಸಾಕು, ಆಕೆ ಯಾರ್ಯಾರ ಜೊತೆ ಮಲಗಿದ್ದಾಳೋ ಎಂಬ ಸುಲಭದ ವಾಕ್ಯ ಕೇವಲ ಗಂಡಸರ ಬಾಯಲ್ಲಷ್ಟೇ ಅಲ್ಲ, ಹೆಂಗಸರ ನಾಲಿಗೆಗೂ ಉಪ್ಪಿನ ಕಾಯಂತೆ ಚಪ್ಪರಿಸುವ ಶಬ್ಧಗಳಾಗುತ್ತವೆ. ಹೀಗಾಗಿ ಹೆಣ್ಣಿಗೆ ಇಂದಿಗೂ ನಾಲ್ಕು ಗೋಡೆಗಳ ನಡುವಣ ಬದುಕು ಅನಿವಾರ್ಯವೇ.

ಈ ಕಾದಂಬರಿಯಲ್ಲೂ ಹಾಗೆಯೇ. ಜೈಲಿನ ಗೋಡೆಗಳಂತಹ ದೊಡ್ಡ ದೊಡ್ಡ ಗೋಡೆಗಳ ನಡುವಿನ ಕಗ್ಗತ್ತಲಲ್ಲಿ, ಸರಳುಗಳ ಸಂದಿಯಿಂದ ಇಣುಕುವ ಮಹಿಳೆಯರ ಸ್ಥಿತಿಯನ್ನು ಅನಾವರಣಗೊಳಿಸುವ ಈ ಕಾದಂಬರಿ ಸ್ವಾತಂತ್ರ್ಯ ಪೂರ್ವ ಕಾಲದ ಸ್ತ್ರೀಯರ ಬದುಕಿನ ರೀತಿಗಳನ್ನು ಹೇಳುತ್ತ ಹೋಗುತ್ತದೆ.

ಇಳಾ ಸ್ವಾತಂತ್ರ್ಯಾ ನಂತರದ ದಿಟ್ಟ ಮಹಿಳೆ. ತನ್ನದೇ ಉದ್ಯೋಗದಲ್ಲಿ ಯಶಸ್ಸನ್ನು ಗಳಿಸಿ, ಸ್ವಂತ ಕಾಲ ಮೇಲೆ ನಿಂತ ಛಲಗಾತಿ. ಸ್ವ ಇಚ್ಛೆಯಿಂದಲೇ ಮದುವೆಯನ್ನು ನಿರಾಕರಿಸಿ ಸ್ವತಂತ್ರವಾದ ಬದುಕನ್ನು ಕಟ್ಟಿಕೊಂಡಾಕೆ. ವೃತ್ತಿಯ ನಿವೃತ್ತಿಯ ಅಂಚಿನಲ್ಲಿರುವ ಆಕೆಗೆ ಮನೆಯೆಂದರೆ ಅದು ಹಿಮಾಲಯ ಮಾತ್ರ. ಆ ಮನೆಯಲ್ಲಿ ಹುದುಗಿರುವ ಹಿರಿಯರನ ಆಸೆ ಆಕಾಂಕ್ಷೆ, ಹಾರೈಕೆ, ನಿಟ್ಟುಸಿರು, ಏಳು ಬೀಳುಗಳನ್ನೆಲ್ಲ ಅಲ್ಲಿಯ ಗಾಳಿಯ ಸೂಕ್ಷ್ಮ ಚಲನೆಯಲ್ಲೇ ಅರ್ಥ ಮಾಡಿಕೊಂಡವಳು.

ನಿವೃತ್ತಿಯ ನಂತರ ತನ್ನದೇ ಮನೆಯಾದ ಹಿಮಾಲಯಕ್ಕೆ ಹಿಂದಿರುಗಿ ತನ್ನ ಪ್ರೀತಿಯ ಅತ್ತೆಯಾದ ಕಮಲಾಳ ರೂಮಿನಲ್ಲೇ ಉಳಿಯಬೇಕೆಂದುಕೊಂಡವಳು. ಆದರೆ ಅವಳ ತಮ್ಮ ಪ್ರದಿ ಅಥವಾ ಪ್ರದ್ಯುಮ್ನನಿಗೆ ಮನೆಯನ್ನು ಮಾರಿಬಿಡುವ ಆತುರ. ತನ್ನ ಅಕ್ಕಂದಿರ ಅಭಿಪ್ರಾಯ ಕೇಳಬೇಕು, ಮನೆ ಮಾರಿದರೆ ಅದರಿಂದ ಬರುವ ಹಣದಲ್ಲಿ ಹೆಣ್ಣುಮಕ್ಕಳಿಗೂ ಪಾಲಿದೆ ಎಂಬ ಯಾವ ಮೂಲ ಜ್ಞಾನವೂ ಇಲ್ಲದವನಂತೆ ಆತ ಮನೆಯೆಂಬ ಪ್ರೀತಿಯನ್ನು ಕೇವಲ ಕಲ್ಲು ಮಣ್ಣಿನ ಕಟ್ಟಡವಾಗಿಸಿ ಮಾರಲು ಹೊರಡುತ್ತಾನೆ. ಅದನ್ನು ವಿರೋಧಿಸುತ್ತ ಇಳಾ ಈ ಮನೆ, ಹಿಮಾಲಯದ ಕಥೆಯ ನಿರೂಪಣೆಗೆ ತೊಡಗುತ್ತಾಳೆ.

ನಾನು ಆಗ ಪಿಯುಸಿ ಓದುತ್ತಿದ್ದೆ. ಮದುವೆ ಸಂಸಾರದ ಕಲ್ಪನೆಗಳು ಇನ್ನೂ ಬಲಿತಿರಲಿಲ್ಲ. ನನ್ನ ಮಾವನ ಮಗಳನ್ನು ನನ್ನದೇ ಊರಿಗೆ ಮದುವೆ ಮಾಡಿಕೊಡುವ ಮಾತುಕತೆ ನಡೆದಿತ್ತು. ನನಗೇಕೋ ಈ ಮದುವೆ ಸರಿ ಬರೋದಿಲ್ಲ ಎನ್ನುವ ಭಯ. ಅಮ್ಮನಿಗೆ ಹೇಳಿದೆ. ಮಾವ-ಅತ್ತೆಗೂ ಹೇಳಿದೆ. ಆ ಮನೆ, ಮನೆತನ ಇವಳಿಗೆ ಹೊಂದಿಕೆಯಾಗದು ಎಂಬ ನನ್ನ ಆತಂಕವನ್ನು ಯಾರೂ ಕೇಳಿಸಿಕೊಳ್ಳಲೇ ಸಿದ್ಧರಿರಲಿಲ್ಲ.

ಹೇಗಾದರೂ ಮಾಡಿ ಅವಳಿಗೇ ವಿಷಯ ತಿಳಿಸೋಣ ಎಂದರೆ ನನ್ನ ಬುದ್ಧಿ ಗೊತ್ತಿದ್ದ ಹಿರಿಯರು ನನ್ನನ್ನು ಅವಳ ಬಳಿ ಏಕಾಂತದಲ್ಲಿ ಬಿಡದಂತೆ ಕಾವಲು ಕಾಯುತ್ತಿದ್ದರು. ಆದರೂ ಒಂದೆರಡು ಸಲ “ಅಕ್ಕ ಯೋಚನೆ ಮಾಡು. ನಿನಗೆ ಹೊಂದಿಕೆ ಆಗುತ್ತೆ ಅನ್ನಿಸ್ತಿದೆಯಾ?” ಎಂದು ಪ್ರಶ್ನಿಸಿದ್ದೆ. ನಾನೇನೋ ಅನಾಹುತ ಮಾಡಿಬಿಡುತ್ತೇನೆ ಎನ್ನುವಂತೆ ನನ್ನ ಕೈಯ್ಯನ್ನು ಬಿಗಿಯಾಗಿ ಹಿಡಿದು ಹೊರಗೆ ಕರೆದೊಯ್ದಿದ್ದರು.

ನಮ್ಮದೇ ಮನೆಯಲ್ಲಿ ಉಳಿದುಕೊಂಡು, ನನ್ನ ಅಸಾಧ್ಯ ತುಂಟತನವನ್ನೆಲ್ಲ ಸಹಿಸಿಕೊಂಡು ಓದಿ ಅದ್ಭುತ ಮಾರ್ಕ್ಸ್ ಪಡೆದವಳ ಬಗ್ಗೆ ನನಗೆ ಅದೇನೋ ಕುಕ್ಕುಲಾತಿ. ನಾನು ಈ ರೀತಿಯ ದೈತ್ಯ ಓದುಗಳಾಗಲು ಕಾರಣವೇ ಅವಳು. ಸ್ವಂತ ಅಕ್ಕ ಇಲ್ಲ ಎಂಬ ಕೊರತೆ ನೀಗಿಸಿದವಳು. ಹೀಗಾಗಿ ಅವಳನ್ನು ಏನಾದರೂ ಮಾಡಿ ಈ ಮದುವೆಗೆ ಒಪ್ಪದಂತೆ ತಡೆಹಿಡಿಯಲೇ ಬೇಕಿತ್ತು.

ಆದರೆ ಅವಳು ಅದಾವುದೋ ಟ್ರಾನ್ಸ್ ನಲ್ಲಿದ್ದವಳಂತಿದ್ದಳು. ಮದುವೆ ಎಂಬ ಶಬ್ಧವೇ ಅವಳಲ್ಲಿ ಆ ಮೋಡಿ ಮಾಡಿತ್ತೇನೋ ಎಂಬುದನ್ನು ಅರ್ಥೈಸಿಕೊಳ್ಳಲು ನಾನು ನನ್ನ ಮದುವೆಯವರೆಗೆ ಕಾಯಬೇಕಾಯ್ತು. ನಾನು ಏನೇ ಹೇಳಿದರೂ ಇವಳಿಗೆ ಅರ್ಥವಾಗುವುದಿಲ್ಲ ಎಂಬುದು ನನಗೆ ಅರ್ಥವಾಗುತ್ತಿರಲಿಲ್ಲ. ಅಂತೂ ನನ್ನ ವಿರೋಧದ ನಡುವೆಯೂ ಅವಳ ಮದುವೆ ಮುಗಿದಿತ್ತು.

ನಮ್ಮೂರಿಗೇ ಬಂದವಳನ್ನು ಆಗಾಗ ಮಾತನಾಡಿಸಲು ಹೋಗುತ್ತಿದ್ದೆ. ಎರಡು ದಿನಕ್ಕೊಮ್ಮೆಯಾದರೂ. ಮೊದಲ ಕೆಲವು ದಿನಗಳು ನನಗೆ ನಾಲು ವಿಪರೀತ ಕಲ್ಪನೆ ಮಾಡಿಕೊಂಡೆನೇನೋ ಎನ್ನುವಷ್ಟು ಎಲ್ಲವೂ ಸುರಳೀತವಾಗಿ ನಡೆದು ಹೋಗುತ್ತಿತ್ತು. ಅದಾದ ನಂತರ ನನಗೆ ಯಾಕೋ ಯಾವುದೂ ನಾನು ಮೇಲ್ನೋಟಕ್ಕೆ ಕಾಣುವಂತೆ ಸರಿಯಾಗಿಲ್ಲ ಎನ್ನಿಸತೊಡಗಿತು.

ಒಮ್ಮೆಯಂತೂ ಚಹಾ ಮಾಡಲು ಆಕೆ ಚಹಾ ಪುಡಿಗಾಗಿ ಅವಳ ಮಾವ ಒಳಕೋಣೆಯ ಬೀಗ ತೆಗೆದುಕೊಡುವುದಕ್ಕಾಗಿ ಕಾಯುತ್ತ ನಿಂತಿದ್ದಳು. ಆಗ ಅವಳ ಮುಖದಲ್ಲಿದ್ದ ಮುಜುಗರ, ಅವಮಾನ ನನಗೆ ಸ್ಪಷ್ಟವಾಗಿ ಕಾಣುತ್ತಿತ್ತು. ಅಡುಗೆ ಕೋಣೆಯಲ್ಲಿ ಚಹಾ ಮಾಡುತ್ತಿದ್ದವಳ ಬಳಿ ಹೋಗಿ ಒಂದು ಚಹಾಪುಡಿಗಾಗಿ ಕಾಯುವುದೇಕೆ ಎಂದು ಪ್ರಶ್ನಿಸಿದ್ದೆ. ಅದು ಅವರ ಮನೆಯ ರೂಢಿ. ಎಲ್ಲವನ್ನೂ ಒಳ ಕೋಣೆಯಲ್ಲೇ ಇಡ್ತಾರೆ. ಬೇಕಾದಷ್ಟು ತಂದು ಕೊಳ್ತಾರೆ. ಕೋಣೆಯ ಬೀಗದ ಕೈ ಮಾವನ ಬಳಿ ಇರುತ್ತದೆ.” ಆಕೆ ತನ್ನ ಮುಖಭಾವವನ್ನು ಸಹಜವಾಗಿ ಇಟ್ಟುಕೊಳ್ಳಲು ಯತ್ನಿಸುತ್ತ ನುಡಿದಿದ್ದಳು.

ಆಕೆ ನಮ್ಮ ಮನೆಯಲ್ಲಿ ಇರುವಾಗ ಬೇಕಾದಷ್ಟು ನೋಟ್ ಬುಕ್, ಪೆನ್ ಗಳಿರುತ್ತಿದ್ದವು. ಓದಲು ಬಂದ ಹುಡುಗಿಗೆ ಪದೇ ಪದೇ ತಮ್ಮನ್ನು ಕೇಳುವ ಮುಜುಗರವಾಗಬಾರದೆಂದು ಅಪ್ಪ ಅದನ್ನು ಎಲ್ಲರಿಗೂ ಕಾಣುವಂತೆ, ಯಾರು ಬೇಕಾದರೂ ತೆಗೆದು ಬಳಸುವಂತೆ ಇಟ್ಟಿರುತ್ತಿದ್ದರು. ಇದು ಸುಮಾರು ಮೂವತ್ತು ವರ್ಷಗಳ ಹಿಂದೆ. ಆಗಲೇ ಅಪ್ಪ ಹಣದ ಕಪಾಟಿಗೆ ಬೀಗ ಹಾಕಿಡುತ್ತಿರಲಿಲ್ಲ. ಹಾಗೆ ಬೀಗ ಹಾಕಿದರೆ ಅವಳಿಗೆ ತಾನು ಬೇರೆ ಎಂಬ ಭಾವನೆ ಬಂದುಬಿಡುತ್ತದೆ ಎಂದು ಯೋಚಿಸುತ್ತಿದ್ದರು.

ಅವಳೆಂದೂ ಹಣ ತೆಗೆದುಕೊಳ್ಳದಿದ್ದರೂ ಅವಳಿಗೆ ಬೇಕಾದ ಹಣವನ್ನು ಅವಳು ತೆಗೆದು ಕೊಳ್ಳುವಷ್ಟು ಸ್ವಾತಂತ್ರ್ಯವೂ ಅವಳಿಗಿತ್ತು. ಅಂತವಳು ಹೀಗೆ ಚಹಾಪುಡಿಗಾಗಿ ಕಾದು ನಿಂತಿದ್ದು ನನಗೇ ಹಿಂಸೆಯೆನಿಸಿಬಿಟ್ಟಿತ್ತು,

“ಅಕ್ಕ ಕೈ ಹೇಗೆ ಸುಟ್ಟಿತು? ಹೀಗೆ ಬೊಬ್ಬೆ ಎದ್ದಿದೆಯಲ್ಲೇ? ಏನಾದರೂ ಔಷಧಿ ಹಚ್ಚಿದ್ದೀಯಾ?” ನನ್ನ ಆತಂಕವನ್ನೂ ಗಮನಿಸದಂತೆ ಆಕೆ ತನ್ನ ಕೈಯ್ಯನ್ನು ಸೆರಗಿನಡಿಯಲ್ಲಿ ಮುಚ್ಚಿಟ್ಟುಕೊಳ್ಳುವಲ್ಲಿ ತಲ್ಲೀನಳಾಗಿದ್ದಳು. “ಏನಿಲ್ಲ ಚಹಾ ಚೆಲ್ಲಿತು. ಸ್ವಲ್ಪ ಸುಟ್ಟಿದೆ ಬಿಡು.” ಆಕೆ ಸಣ್ಣಗೆ ಹೇಳಿದ್ದರೂ, “ನಿಮ್ಮ ಅಕ್ಕಂಗೆ ಯಾವ ಕೆಲಸವೂ ನೆಟ್ಟಗೆ ಮಾಡೋಕೆ ಬರೋದಿಲ್ಲ ಬಿಡು.” ವರಾಂಡದಲ್ಲಿದ್ದ ಅವಳ ಅತ್ತೆ ರಾಗವಾಗಿ ಹೇಳಿದ್ದರು.

ಚಿಕ್ಕಂದಿನಿಂದಲೂ ನನ್ನ ಅಮ್ಮನ ಗರಡಿಯಲ್ಲಿ ಪಳಗಿದವಳು, ಅವಳ ಮನೆಯಲ್ಲಿ “ಸಾಲಿಯಕ್ಕನ ನಂತರ ನೀಟಾದ ಕೆಲಸಕ್ಕೆ ವಾರಸುದಾರಳು” ಎನ್ನಿಸಿಕೊಂಡವಳಿಗೆ ಯಾವ ಕೆಲಸವೂ ಬರೋದಿಲ್ಲ ಎನ್ನುವುದು ನನಗೆ ತೀರಾ ಅಚ್ಚರಿ ಹುಟ್ಟಿಸಿತ್ತು. ನನ್ನ ಅಜ್ಜಿ ಮನೆಯ ಇಡೀ ಮನೆತನದಲ್ಲಿ ನನ್ನ ಅಮ್ಮನೇ ಮೊದಲು ನೌಕರಿಗೆ ಸೇರಿದ್ದು. ಶಾಲಾ ಶಿಕ್ಷಕಿಯಾದ್ದರಿಂದ ಮಾವನ ಮಕ್ಕಳಿಗೆ, ಅಕ್ಕಪಕ್ಕದವರಿಗೆ, ಅಷ್ಟೇಕೆ ಇಡೀ ಊರಿಗೂ ಅಮ್ಮ ಸಾಲಿಯಕ್ಕ.

ಸಾಲಿಯಕ್ಕನ ಕೆಲಸ ಎಂದರೆ ಅವರಿಗೆಲ್ಲ ಅಷ್ಟೊಂದು ಚೆಂದ, ಊರಿನ ಯಾವ ಮಕ್ಕಳು ಶಾಲೆ ತಪ್ಪಿಸುತ್ತೇನೆಂದರೂ, ಓದು ಬರೆಹ ಮಾಡದಿದ್ದರೂ, ತಮ್ಮ ವಸ್ತುಗಳನ್ನು ನೀಟಾಗಿ ಇಡದಿದ್ದರೂ “ಸಾಲಿಯಕ್ಕ ಬರಲಿ. ಹೇಳಿ ಕೊಡ್ತೇನೆ” ಎಂದರೆ ಸಾಕಿತ್ತು. ಉಳಿದದ್ದೆಲ್ಲ ನಂತರ ಸುಸೂತ್ರವಾಗಿ ನಡೆದು ಹೋಗುತ್ತಿತ್ತು. ಇಂತಹ ಸಾಲಿಯಕ್ಕನ ಜೊತೆಯಲ್ಲೇ ಬೆಳೆದವಳಿಗೆ ಕೆಲಸ ಬೊಗಸೆ ಬರೋದಿಲ್ಲ ಅಂದರೆ ಹೇಗೆ? (ಕೊನೆಗೆ ಅದೇ ಸಾಲಿಯಕ್ಕನ ಮಗಳು ಮದುವೆ ಆಗುವವರೆಗೂ ಅನ್ನ ಮಾಡುವುದು ಹಾಗೂ ಚಹಾ ಮಾಡುವುದು, ಇವೆರಡನ್ನು ಬಿಟ್ಟು ಬೇರೆ ಯಾವ ಅಡುಗೆಯನ್ನೂ ಕಲಿಯದೇ ಇದ್ದದ್ದು, ತೀರಾ ಆಲಸಿ, ಚೆಲ್ಲಾಪಿಲ್ಲಿ ಹರಡಿಕೊಳ್ಳುವ ಅವ್ಯವಸ್ತಿತಳಾಗಿದ್ದು ಬೇರೆ ವಿಷಯ.)

ಕೈ ತುಂಬಾ ಬಳೆ ಧರಿಸುವುದೆಂದರೆ ಅವಳಿಗೆ ಪಂಚಪ್ರಾಣ. ಒಂದು ದಿನ ಅವಳ ಅರಡೂ ಕೈ ಖಾಲಿ ಖಾಲಿ.ಸೂಕ್ಷ್ಮವಾಗಿ ನೋಡಿದರೆ ಕೈ ತುಂಬಾ ಬಳೆಯ ಚೂರು ಚುಚ್ಚಿ ಆದ ಗಾಯ. “ಅಕ್ಕಾ ಏನಾಯ್ತೆ?” ನನ್ನ ನಡುಕಕ್ಕೆ ಬಟ್ಟೆ ಒಗೆಯುವಾಗ ಕಲ್ಲಿಗೆ ತಾಗಿ ಬಳೆ ಒಡೆಯಿತು. ಬಳೆಯ ಚೂರು ತಾಗಿ ರಕ್ತ ಬಂತು.” ಸಲೀಸಾಗಿ ಹೇಳಿದ್ದಳು.

ಇನ್ನೊಂದು ದಿನ ತೋಳಿಗೆ ಆದ ಏಟು ಬಿದ್ದ ಕಪ್ಪು ಬಾವು ಗಡಿಬಿಡಿಯಿಂದ ಹೋಗುವಾಗ ಬಾಗಿಲ ಚಿಲಕ ಜಪ್ಪಿ ಆದ ನೋವು ಎಂದು ಮಾತು ತಿರುಗಿಸಲು ಯತ್ನಿಸಿದ್ದಳು. ಆ ದಿನ ಮಾತ್ರ ನಾನು ಅನುಮಾನದಿಂದ ಘಟ್ಟಿಸಿ ಕೇಳಿದ್ದೆ. ಏನಾಗ್ತಿದೆ ನಿನಗಿಲ್ಲಿ? ನಿನ್ನನ್ನು ಇಲ್ಲಿ ಸರಿಯಾಗಿ ನೋಡ್ಕೋತಿಲ್ವಾ?” ಎಂದು ರೇಗಾಡಿದ್ದೆ.

“ಏಯ್ ಸುಮ್ನಿರು. ನೀನಿನ್ನು ಚಿಕ್ಕವಳು. ನಿಂಗೆಂತ ಗೊತ್ತಾಗ್ತದೆ?” ಆಕೆ ನನ್ನ ಬಾಯಿ ಮುಚ್ಚಿಸಿದ್ದಳು. ಅದಾದ ಮೂರನೇ ದಿನಕ್ಕೆ ಚಿಕ್ಕಪ್ಪನ ಮಗಳು ಭಾರತಿ ಗಡಿಬಿಡಿಯಿಂದ ಫೋನ್ ಮಾಡಿದ್ದಳು. ಚಿಕ್ಕಪ್ಪನ ಮನೆಯಿಂದ ಅನತಿ ದೂರದಲ್ಲಿ ಅಸ್ಪಷ್ಟವಾಗಿ ಕಾಣುತ್ತಿದ್ದ ಅವಳ ಮನೆಯಲ್ಲಿ ದೊಡ್ಡ ದೊಡ್ಡ ಮಾತು ಕೇಳಿ ಬರುತ್ತಿತ್ತು. ಯಾರೋ ಹೆಣ್ಣೊಬ್ಬಳ ಆಕ್ರಂದನ. “ಅಕ್ಕ ಅವಳನ್ನು ಸಾಯ್ಸೇ ಬಿಡ್ತಾರೇನೋ… ನೀನು ಬೇಗ ಬಾರೆ…” ಭಾರತ್ತಿ ದೊಡ್ಡದಾಗಿ ಅಳುತ್ತ ಫೋನ್ ಮಾಡಿದಾಗ ನಾನು ಮರಗಟ್ಟಿ ಹೋಗಿದ್ದೆ.

ಮನೆಯಲ್ಲಿ ಅಪ್ಪ ಅಮ್ಮ ಇರಲಿಲ್ಲ. ಅತ್ತ ಚಿಕ್ಕಪ್ಪ ಚಿಕ್ಕಮ್ಮನೂ ಅವರ ಮನೆಯಲ್ಲಿರಲಿಲ್ಲ. ಹಿಂದೆ ಮುಂದೆ ಯೋಚಿಸದೇ ನಾನು ಅವರ ಮನೆಗೆ ನುಗ್ಗಿದ್ದೆ. ಬಚ್ಚಲ ಕೋಣೆಯಲ್ಲಿ ಅವಳ ಗಂಡ ಕಟ್ಟಿಗೆ ಹಿಡಿದು ದನಕ್ಕೆ ಬಡಿವಂತೆ ಬಡಿಯುತ್ತಿದ್ದ. ನಾನು ಅಲ್ಲಿಗೆ ತಲುಪುವಷ್ಟರಲ್ಲಿ ಅದು ಹೇಗೋ ಆಕೆ ಬಚ್ಚಲ ಮನೆಯಿಂದ ತಪ್ಪಿಸಿಕೊಂಡು ಹೊರಗೆ ಬಂದಿದ್ದಳು. ಆದರೂ ಆತ ರಾಕ್ಷಸನಂತೆ ಹೊಡೆಯುತ್ತಲೇ ಇದ್ದ.

ಸುತ್ತ ನಿಂತ ಜನ ನಾಟಕ ನೋಡುವಂತೆ ಸುಮ್ಮನೆ ನಿಂತಿದ್ದರು. ನಾನು ಹೋದವಳೇ ಆತನನ್ನು ದೂಡಿ ಕೆಡವಿದ್ದೆ. ಬಹುಶಃ ಮತ್ತೆ ಮುಂದೆ ಬಂದರೆ ಸಾಯಿಸ್ತೇನೆ ಎಂದೇನೋ ಅವಾಜು ಹಾಕಿದ ನೆನಪು. ಆದರೆ ಅವಳ ಕಡೆಯವರಾರೂ ಬರಲಾರರು ಎಂದುಕೊಂಡವನು ನನ್ನನ್ನು ಹಠಾತ್ತಾಗಿ ನೋಡಿ ಕಕ್ಕಾಬಿಕ್ಕಿಯಾಗಿದ್ದ. ಅಷ್ಟೆಲ್ಲ ಆದ ಮೇಲೆ ಅವಳ ಮೈದುನ ಒಳಗೆ ಹೋಗಿ, ಕುಳಿತು ಮಾತನಾಡೋಣ ಎಂದು ಅನುನಯಿಸತೊಡಗಿದ್ದ.

ನಾನು ಅವಳ ಮುಖ ನೋಡಿದ್ದೆ. ಮುಖದ ತುಂಬಾ ತರಚು ಗಾಯ. ಮೈ ತುಂಬಾ ಬಾಸುಂಡೆ. “ನಾನು ಒಳಗೆ ಹೋಗೋದಿಲ್ಲ. ಒಳಗೆ ಹೋದರೆ ನನ್ನ ಸಾಯಿಸೇ ಬಿಡ್ತಾರೆ. ನನ್ನ ಕರ್ಕೊಂಡು ಹೋಗು ತಂಗಿ..” ಆಕೆ ನನ್ನ ಕೈ ಹಿಡಿದು ಅಕ್ಷರಶಃ ಬೇಡಿಕೊಳ್ಳುತ್ತಿದ್ದಳು.

ಚಿಕ್ಕಪ್ಪನ ಮಗಳು ಭಾರತಿಯ ಮುಖ ನೋಡಿದೆ. ಅರ್ಥ ಮಾಡಿಕೊಂಡವಳಂತೆ ತಕ್ಷಣ ಮನೆಗೆ ಹೋಗಿ ದೊಡ್ಡದೊಂದು ಶಾಲಿನಂತಹ ಹೊದಿಕೆ ತಂದಳು. ಅವಳಿಗೆ ಅದನ್ನು ಹೊದಿಸಿ ನಮ್ಮ ಮನೆಗೆ ಕರೆದುಕೊಂಡು ಹೋಗಿ ಬಿಟ್ಟೆ. ಸಂಜೆ ಬಂದ ಅಪ್ಪ ಅಮ್ಮ, ಇತ್ತ ಸುದ್ದಿ ತಿಳಿದು ರಾತ್ರಿ ಬಂದ ಚಿಕ್ಕಪ್ಪ ಎಲ್ಲರ ಮುಖದಲ್ಲೂ ಆತಂಕ. ನಾನು ಹಾಗೆ ಕರೆದುಕೊಂಡು ಬಂದು ಬಿಡಬಾರದಿತ್ತೇನೋ ಎಂಬ ಭಯ.

ಒಂದು ವಾರವಾಯಿತು. ಅವಳನ್ನು ಕಳುಹಿಸಿಕೊಡೋಣ ಎಂದರೆ ಅಲ್ಲಿಗೆ ಹೋದರೆ ನನ್ನ ಹೆಣವನ್ನು ನೋಡಲೂ ನಿಮಗೆ ಸಿಕ್ಕುವುದಿಲ್ಲ” ಎಂದು ಭಿಕ್ಕಳಿಸುವ ಇವಳು. ಹೋಗಲಿ ಅವಳ ಗಂಡನ ಮನೆಯಿಂದ ಯಾರಾದರೂ ಕರೆಯಲು ಬಂದರೆ ಕಳುಹಿಸಿ ಕೊಡೋಣ ಎಂದರೆ ಅವರೂ ಯಾರೂ ಬರುತ್ತಿಲ್ಲ. “ಯಜಮಾನಿಕೆ ವಹಿಸಿ ಕರ್ಕೊಂಡು ಹೋಗಿದ್ದಾಳಲ್ಲ? ಅವಳೇ ಬಂದು ಕಳುಹಿಸಿ ಕೊಡ್ಲಿ.” ಅವಳ ಗಂಡ ಯಾರ ಬಳಿಯೋ ಹೇಳುತ್ತಿದ್ದ ಮಾತು ಕಿವಿಗೆ ಬಿತ್ತು.

ಮನೆಯವರೆಲ್ಲ ನಾನೇ ಅವಳ ಸಂಸಾರ ಮುರಿದು ಬಿಟ್ಟೆನಾ ಎಂಬ ಆತಂಕಕ್ಕೆ ಬಯ್ಯಲಾರಂಭಿಸಿದ್ದರು. “ಅವಳು ನನ್ನ ಜೀವ ಉಳಿಸಿದ್ದಾಳೆ. ಅವಳಿಗೆ ಬಯ್ಯೋದಾದರೆ ನಾನು ವಾಪಸ್ ಹೋಗ್ತೇನೆ. ಆದರೆ ಅಲ್ಲಿ ನನ್ನನ್ನು ಬದುಕೋಕೆ ಬಿಡ್ತಾರೆ ಎನ್ನುವ ನಂಬಿಕೆ ಇಲ್ಲ. ನಾನು ಜೀವಂತವಾಗಿರಲಿ ಅಂತಾದ್ರೆ ನನ್ನನ್ನು ಬಿಟ್ಟು ಬಿಡಿ.” ಆಕೆ ಎಲ್ಲರಲ್ಲಿ ಕೇಳಿಕೊಂಡಿದ್ದಳು. ಅಲ್ಲಿಗೆ ಅವಳ ಸಂಸಾರ ಸರಿಯಾಗುವ ಸಣ್ಣ ಆಸೆಯೂ ಮುರಿದು ಬಿತ್ತು.

ಕಮಲಾಳ ಮದುವೆ ಮುರಿದು ಬಿದ್ದು ಆಕೆ ಅದೆಷ್ಟೋ ದೂರದಿಂದ ಹೇಗೋ ಟ್ರೈನ್ ಹತ್ತಿ ಹಿಮಾಲಯದ ಅವಳ ತವರು ಮನೆ ಸೇರುವ ಘಟನೆ ಓದುವಾಗ ನನಗೆ ಕಣ್ಣಿರು ತಡೆಯಲಾಗದ್ದು ಇದೇ ಕಾರಣಕ್ಕೆ.

ಹೆಣ್ಣೊಬ್ಬಳ ಮೇಲೆ ನಡೆಯುವ ದೌರ್ಜನ್ಯವನ್ನು ಕೇವಲ ಕಪೋಲ ಕಲ್ಪಿತ ಎನ್ನುವ ನಮ್ಮ ಸಮಾಜದ ಪ್ರಭೃತಿಗಳಿಗೆ, ಸ್ತ್ರೀವಾದವನ್ನು ತುಚ್ಛಿಕರಿಸಿ ಬರೆಯುವ ಈ ಕಾಲದ ಮಹಾನ್ ಸಾಹಿತಿಗಳಿಗೆ ಇಂತಹ ಸೂಕ್ಷ್ಮಗಳೇಕೆ ಅರ್ಥವಾಗುವುದಿಲ್ಲ ಎಂಬ ನೋವು ಪದೇ ಪದೇ ಕಾಡಿತು. ಸ್ತ್ರೀವಾದಿಯನ್ನು ತೀರಾ ಕೆಟ್ಟದಾಗಿ ಸಲಿಂಗ ಕಾಮಿಯಂತೆ, ಒಂದಿಷ್ಟು ಸೋಶಿಯಲ್ ಆಗಿರುವಾಕೆ ದಾರಿ ತಪ್ಪಿದವಳು ಎಂದು ಬಿಂಬಿಸುವ ಕವಲು ಓದಿದಾಗಲೂ ನಾನು ನನ್ನ ಅಕ್ಕನ ಬದುಕನ್ನೊಮ್ಮೆ ಬಂದು ನೋಡಿ ಎಂಬ ಆಹ್ವಾನ ಕೊಡಲೇ ಎಂಬ ಕುದಿತದಲ್ಲಿದ್ದೆ.

ಕೆಲವು ದಿನಗಳ ಹಿಂದೆ ಗೆಳತಿ ಮಮತಾ ಅರಸಿಕೆರೆ ತನ್ನ ಚಿಕ್ಕಪ್ಪನ ಮಗಳು ಇಂತಹುದ್ದೇ ದೌರ್ಜನ್ಯದಲ್ಲಿ, ವರದಕ್ಷಿಣೆಯ ಕಿರುಕುಳದಲ್ಲಿ ಸಾವನ್ನಪ್ಪಿದ್ದನ್ನು ಹೇಳಿಕೊಂಡು ಬಿಕ್ಕಳಿಸಿದ್ದಳು. ಹೆಣ್ಣನ್ನು ತೀರಾ ವಿಕೃತವಾಗಿ, ಘಟೋತ್ಕಜಳಂತೆ, ಹಿಡಂಬಿಯಂತೆ, ಪಾಪದ ಗಂಡನ ಕಾಲನ್ನು ಎತ್ತಿ ಎತ್ತಿ ಬಟ್ಟೆ ತೊಳೆದಂತೆ ಬಡಿಯುವಂತೆ ಚಿತ್ರಿಸುವಾಗಲೆಲ್ಲ ನನಗೆ ಹಾಗೆ ಚಿತ್ರಿಸುವವರ ಬುದ್ಧಿಯ ಬಗ್ಗೆಯೇ ಸಂಶಯ ಮೂಡತೊಡಗುತ್ತದೆ.

ಇಲ್ಲಿನ ಕಮಲಾ ಮದುವೆಯಾಗಿ ಗಂಡನಿಂದ ದೌರ್ಜನ್ಯಕ್ಕೊಳಗಾಗಿ ತವರಿಗೆ ಬಂದವಳು ಎಂಬುದು ಎದ್ದು ಕಾಣುವ ಅಂಶವಾದರೂ ಅಪ್ಪ ಶೇಷಗಿರಿರಾಯರೂ ಮಗಳ ಬದುಕನ್ನು ತಮ್ಮ ಅಹಂ, ಹಾಗೂ ಪ್ರತಿಷ್ಟೆಯ ಹೆಸರಿನಲ್ಲಿ ಹಾಳು ಮಾಡಿದ್ದನ್ನು ಮರೆಯುವಂತೆಯೇ ಇಲ್ಲ. ಒಂದು ದೃಷ್ಟಿಯಿಂದ ನೋಡಿದರೆ ಶೇಷಗಿರಿರಾಯರ ಎಲ್ಲ ಅಹಂಕಾರ, ಅಧಿಕಾರದ ಮದದ ಹೊರತಾಗಿಯೂ ವಾರಾನ್ನಕ್ಕೆ ಬರುವ ವಾಸುದೇವ ಮಗಳನ್ನು ಚೆನ್ನಾಗಿ ನೋಡಿಕೊಳ್ಳಲಾರ ಎಂಬ ಪಿತೃ ಸಹಜವಾದ ಕಳಕಳಿಯೂ ಇಲ್ಲಿ ಕೆಲಸ ಮಾಡಿರಬಹುದು.

ಒಟ್ಟಿನಲ್ಲಿ ವಾಸುದೇವ ಕಮಲಾ ಬೇರೆಯಾದರೂ ಮತ್ತೆಂದೋ ತನ್ನದೇ ಜಂಬದಲ್ಲಿ ಬರುವ ವಾಸುದೇವ ಕಮಲಾಳ ಬದುಕಿನ ಮೇಲೆ ಮತ್ತೆ ಪ್ರಭಾವ ಬೀರುವುದನ್ನು ಅರ್ಥೈಸುವುದಾದರೂ ಹೇಗೆ? ಮದುವೆ ಆದವನೆಂದು ಗೊತ್ತಿದ್ದರೂ ತನ್ನ ಹತ್ತೋ ಹನ್ನೆರಡೋ ವಯಸ್ಸಿನಲ್ಲಿ ಮನೆಯೆದುರಿನ ನೀಲಿ ಹೂವಿನ ಮರದ ಬುಡದಲ್ಲಿ ತಬ್ಬಿ ಎದೆಗೊರಗಿಸಿಕೊಂಡವನ ಹುಡುಕಿ ಬಾಂಬೆಗೆ ಹೊರಟ ಕಮಲಾಳ ಮನಸ್ಥಿತಿಯಾದರೂ ಹೇಗಿದ್ದಿರಬಹುದು?

ಗಂಡು ಕಾಮಕ್ಕಾಗಿ ಪ್ರೀತಿಯ ನಾಟಕವಾಡುತ್ತಾನೆ, ಹೆನ್ಣು ಪ್ರೀತಿಗೋಸ್ಕರ ಕಾಮಕ್ಕೆ ಬಲಿಯಾಗುತ್ತಾಳೆ ಎಂಬ ಮಾತಿಗೆ ತಕ್ಕುನಾದಂತೆ ಕಮಲಾ ಬಯಕೆ ಬುಗಿಲೆದ್ದರೂ ಕಾಮಕ್ಕೆ ಒಪ್ಪಲಾರದವಳು. ಆದರೆ ವಾಸುದೇವನಿಗೆ ಅವಳ ಸ್ನಿಗ್ಧ ಸೌಂದರ್ಯವನ್ನು ಒಟ್ಟಾಗಿ ಹೀರಿಬಿಡುವ ಆಸೆ. ಕೊನೆಗೂ ಕಮಲಾ ವಾಸುದೇವನ ಸಂಸಾರದ ನೆಪದಲ್ಲಿ ತಾನು ಏನೂ ಆಗದೆ ಹಿಂದಿರುಗುತ್ತಾಳೆ. ಒಂದು ರೀತಿಯ ವಿರಕ್ತ ಜೀವನಕ್ಕೆ ಹೊಂದಿಕೊಳ್ಳುತ್ತಾಳೆ. ಇತ್ತ ರಾಜೇಂದ್ರ ಅದಾವುದೋ ಕ್ಷಣದಲ್ಲಿ ಊರಿಗೆ ಬಂದ ಪರ ಊರಿನ ಸುಗುಣಾಳ ಮೇಲೆ ಅತ್ಯಾಚಾರವೆಸಗಿ ಕೊನೆಗೆ ಸನ್ಯಾಸತ್ವ ಸ್ವೀಕರಿಸುತ್ತಾನೆ.

ಅಪ್ಪ ಶೇಷಗಿರಿರಾಯರು ತನ್ನ ಅಮ್ಮ ವೆಂಕೂಬಾಯಿಯನ್ನು ಮನಬಂದಂತೆ ತಳಿಸುವುದನ್ನು ನೋಡಿ, ಎಂದಿಗೂ ಅಪ್ಪನಂತೆ ಆಗಬಾರದು ಎಂದುಕೊಳ್ಳುತ್ತಲೇ ಕೃಷ್ನ ಮದುವೆಯಾದ ಹೊಸತರಲ್ಲಿ ರುಕ್ಮಿಣಿಯನ್ನು ಬದಲಾಯಿಸಲು ನೋಡಿ ಅವಳನ್ನು ಹಿಂಸಿಸುತ್ತಾನೆ.

ಇಡೀ ಕಾದಂಬರಿ ಮಹಿಳಾ ಕೇಂದ್ರಿತವಾಗಿರಬಹುದು ಎಂದು ನೀವು ತಿಳಿದುಕೊಂಡಿದ್ದರೆ ಅದು ನಿಮ್ಮ ತಪ್ಪು ತಿಳುವಳಿಕೆ. ಕಾದಂಬರಿಯ ಹೆಸರು ಹೇಳುವಂತೆ ಅದು ಬರೀ ಕಮಲಾ, ಇಳಾ ಸುಗುಣಾ, ಜಾನಕಿ ಬೋರಿ, ಮುಂತಾದ ಹೆಂಗಸರ ಅಸ್ತವ್ಯಸ್ತ ಬದುಕಲ್ಲ, ರಾಜ, ಶೇಷಗಿರಿ ರಾಯರು, ಕೃಷ್ಣನ ತಿಕ್ಕಲುತನ, ಅಮೃತಾ ಬಾಯಿಯ ಗಂಡ, ಮನೆಗೆ ಮರಳಲು ಬಯಸದ ಗೋವಿಂದ, ಎಲ್ಲಕ್ಕಿಂತ ಹೆಚ್ಚಾಗಿ ವಾಸುದೇವನ ಕಾಮುಕತೆ, ಪ್ರದ್ಯುಮ್ನನ ಹಣದ ದಾಹ, ನರಸಿಂಹನ ಹಪಾಹಪಿತನ, ಸುಳ್ಳು ಸುದ್ದಿ ಹಬ್ಬಿಸಿ ಕಾರ್ಯ ಸಾಧಿಸುವ ನರಸಿಂಹನ ಚಾಣಾಕ್ಷತೆ ಎಲ್ಲವನ್ನೂ ಒಳಗೊಂಡಿದೆ. ಗಂಡಸರ ಕುಟಿಲತೆ, ಅದರಿಂದ ಹೆಣ್ಣು ಅನುಭವಿಸುವ ಯಾತನೆ, ಅವಮಾನವನ್ನು ಒಳಗೊಂಡಿದೆ.

ಬದುಕಿನ ಪ್ರತಿ ಹಂತವೂ ಕಾದಂಬರಿಯಲ್ಲಿ ಚಂದವಾಗಿ ನಿರೂಪಿತವಾಗಿದೆ. ಹಿಂದಿನ ಕಾಲದ ಸಾಮಾಜಿಕ ಅಧ್ಯಯನ ಮಾಡುವುದಿದ್ದರೆ ಈ ಕಾದಂಬರಿ ಮಾಹಿತಿಗಳ ಆಕರ ಗೃಂಥವಾಗಬಹುದು. ಒಂದು ಕಾಲದಲ್ಲಿ ಸಮಾಜದ ಶ್ರೇಣಿಕೃತ ಸ್ಥರದಲ್ಲಿ ತುತ್ತ ತುದಿಯಲ್ಲಿರುವ ಬ್ರಾಹ್ಮಣ ವರ್ಗದ ಆಚರಣೆಗಳು ಮೂಢನಂಬಿಕೆಗಳು, ಸಂಪ್ರದಾಯದ ಹೆಸರಿನಲ್ಲಿ ಹೆಣ್ಣಿನ ಮೇಲಾಗುವ ಶೋಷಣೆ ಎಲ್ಲವನ್ನೂ ಈ ಕಾದಂಬರಿ ವಿಷದೀಕರಿಸುತ್ತದೆ.

ಅಲ್ಲಲ್ಲಿ ಕಾಣುವ ಅನುವಾದದ ಭಾಷೆಯಲ್ಲಿನ ಒಂದಿಷ್ಟು ತೊಡಕುಗಳನ್ನು ಹೊರತುಪಡಿಸಿದರೆ ಕುತೂಹಲವನ್ನು ಕಾಯ್ದಿಟ್ಟುಕೊಳ್ಳುತ್ತ ಓದಿನ ಮಧ್ಯೆ ವಿರಾಮ ಬೇಡದೇ ಒಂದೇ ಗುಕ್ಕಿಗೆ ಓದಿಸಿಕೊಳ್ಳುತ್ತದೆ. ಅದರಲ್ಲೂ ಸಾಮಾಜಿಕ ಹಾಗೂ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಅಧ್ಯಯನ ಮಾಡುವವರು ಒಮ್ಮೆಯಾದರೂ ಓದಲೇಬೇಕೆನ್ನಿಸುವಂತಿದೆ ಈ ಕಾದಂಬರಿ.

17 Responses

 1. prathibha nandakumar says:

  good

  • Shreedevi keremane says:

   ಮೇಡಂ ನಿಮ್ಮ ಮೆಚ್ಚುಗೆ ಅಂದರೆ ಅದೊಂದು ಪ್ರಶಸ್ತಿ ಇದ್ದಂತೆ‌. ಥ್ಯಾಂಕ್ಯೂ

 2. Indira Hegde says:

  Chennagi bandied

 3. Deepthi bhadravathi says:

  ಉಸಿರುಗಟ್ಟಿ ಓದಿದೆ ಶ್ರೀ… ಒಳ್ಳೆಯ ಬರಹ

 4. ರಮೇಶ ಗಬ್ಬೂರ್ says:

  ಇದು ಇನ್ನೊಂದು ಸಂಸ್ಕಾರವೇ ಆಗಿರಬೇಕು… ಓದುವೆ..
  ಚೆನ್ನಾಗಿದೆ ಬರಹ

 5. ಮುರ್ತುಜಾಬೇಗಂ says:

  ಉಫ್ ! ಏನ ಚಂದ ಬರೆದಿದೀರೀ. ಓದಲೇಬೇಕು ಅನಿಸ್ತೀದೆ

 6. ರಾಜು ಪಾಲನಕರ ಕಾರವಾರ says:

  ಶ್ರೀದೇವಿ ಮೇಡಂ ಅವಧಿಯಲ್ಲಿ ಈ ವಾರದ ನಿಮ್ಮ ಅಂಕಣ ಓದಿದೆ…..ಹೀರೇಗುತ್ತಿಯ ನಿಮ್ಮ ತವರುಮನೆಯ ಕುರಿತು ತುಂಬಾ ಚೆನ್ನಾಗಿ ಬರೆದಿರುವಿರಿ …ಯಾವುದೇ ಹೆಣ್ಣಿಗೆ ಅವಳ ಗಂಡನ ಮನೆಯಲ್ಲಿ ಎಷ್ಟೇ ಶ್ರೀಮಂತಿಕೆ ಇರಲಿ ಏನೇ ಇರಲಿ ಆದರೆ ಅವಳಿಗೆ ತವರುಮನೆಯಲ್ಲಿ ಉಳಿದಷ್ಟು ಸಂತೋಷ ತ್ರಪ್ತಿ ಸಿಗುವುದಿಲ್ಲಾ ನಿಜ‌ಕ್ಕೂ ನಿಮ್ಮ ಈ ಲೇಖನ ತುಂಬಾ ಅರ್ಥಪೂರ್ಣವಾಗಿದೆ…ಮತ್ತು ಅಸ್ತವ್ಯಸ್ತ ಬದುಕಿನ ಸ್ತ್ರೀಯರು…ಕಾದಂಬರಿಯ ಕುರಿತು ನಿಮ್ಮ ಬರಹ ತುಂಬಾ ಚೆನ್ನಾಗಿದೆ ಪ್ರತಿವಾರ ನಿಮ್ಮ ಈ ಅಂಕಣ ತುಂಬಾ ಚೆನ್ನಾಗಿ ಬರುತ್ತಿದೆ ನಿಮಗೆ ಅಭಿನಂದನೆಗಳು…

 7. Sreedhar says:

  ಮೇಡಂ, ಇದೆಲ್ಲಕ್ಕೂ ಮುಕ್ತಿ ಎಂದು ? ನಿಜ ಜೀವನದ ಕಠೋರತೆ ಬಗ್ಗೆ ನೀವು ಬರೆಯುವ ಶೈಲಿ ಭಾವನೆಗಳನ್ನು ಮೀರಿಸಿ ಬರೆಯುವ ಅಗಾಧ ಶಕ್ತಿ ಇದೆ,,

 8. ಅನುಪಮಾ ಪ್ರಸಾದ್ says:

  ವಿರಾಮ ಬೇಡದೆ ಕಾದಂಬರಿ ಓದಿಸಿಕೊಂಡಿತು ಅಂದಿರುವಿರಿ. ನಿಮ್ಮ ಈ ಬರಹವೂ ಹಾಗೇ ಓದಿಸಿಕೊಂಡಿತು ಶ್ರೀದೇವಿ.

 9. Sujatha lakshmipura says:

  ಅಸ್ತವ್ಯಸ್ತ ಬದುಕಿನ ಸ್ರೀ ಯರ ಪರಿಚಯ ವಿಶಿಷ್ಟವಾಗಿದೆ ಶ್ರೀ ಮೇಡಮ್..ಒಂದೇ ಉಸಿರಿಗೆ ಓದಿಸಿಕೊಂಡಿತು ನಿಮ್ಮ ಬರಹ..ಬಹಳ ಆಪ್ತವಾಗಿ ನಮ್ಮ ನಡುವೇಯೇ ನಡೆವ ಘಟನೆಗಳಂತಿವೆ.ನಿಜ, ಹೆಣ್ಣಿನ ಮೇಲಾಗುವ ಕುಟುಂಬದ ಒಳಗೇ ನಡೆವ ಹಿಂಸೆ ಹೊರಗೆ ಕಾಣದಂತೆ ಎಷ್ಟೋ ಜೀವಗಳು ಕ್ಷಣ ಕ್ಷಣವೂ ಸತ್ತು ಬದುಕುತ್ತಿವೆ.
  ಇಡಿ ಕಾದಂಬರಿಯ ಕಥೆಯನ್ನು, ಓದುಗರನ್ನು ಹಿಡಿದಿಡುವಂತೆ ಬರೆವ ನಿಮ್ಮ ಬರಹದ ಶೈಲಿಗೆ ಬೆರಗಾಗಿದ್ದೇನೆ. ಒಂದೇ ಮಾತಲ್ಲಿ ಹೇಳುವುದಾದರೆ ನಿಮ್ಮ ಲೇಖನ ಓದು ಹೇಳಲಾಗದಷ್ಟು ಖುಷಿ ನೀಡಿದೆ.ಅದಕ್ಕಾಗಿ ಧನ್ಯವಾದಗಳು ಶ್ರೀದೇವಿಯವರೆ.

 10. ganga says:

  bahala chennagide nimma vimarshe kadambari odidaaga nanagu bahala novagittu adare adannu bahala sogsasagi abhivyaktisiddiri

Leave a Reply

%d bloggers like this: