fbpx

ಕಥೆಗಳ ಬೋಗಿ..

ಸದಾಶಿವ್ ಸೊರಟೂರು

ಹೊರಗಿನ ಬಿಸಿಲು ಹೊಟ್ಟೆಯಲ್ಲೂ ಉರಿಯುತ್ತಿತ್ತು! ಬೆಳಗ್ಗೆ ತಿಂದ ಎರಡು ಇಡ್ಲಿ ಸುಟ್ಟು ಹೋಗಿ ಯಾವ ಕಾಲವಾಗಿತ್ತೊ! ಟ್ರಾಫಿಕ್ ಗಳ ಮಧ್ಯೆ ಹಂತ ಹಂತವಾಗಿ ಸವೆದು ಬಂದಿದ್ದೆ.

ಗಾಲಿ ಉರುಳಲು ಶುರುವಿಟ್ಟು ಒಂದು ಸುತ್ತು ಸುತ್ತುವಷ್ಟರಲ್ಲೇ ಓಡಿ ಬಂದು ಟ್ರೈನ್ ಹತ್ತಿದೆ. ಕಾಯ್ದಿರಿಸಿದ ತೊಂಭತ್ತು ನಂಬರಿನ ಕಿಟಕಿ ಪಕ್ಕದ ಸೀಟು ನಿಕ್ಕಿಯಾದ್ದರಿಂದ ಕೂರುವ ಜಾಗದ ಯಾವ ಗಡಿಬಿಡಿಯೂ ಇರಲಿಲ್ಲ. ಸಿಕ್ಕ ಯಾವುದೊ ಒಂದು ಬೋಗಿ ಏರಿ ಅಲ್ಲಿಂದ ನನ್ನ ಬೋಗಿ ತಲುಪಿದೆ.

ಅದಾಗಲೇ ನನ್ನ ಸೀಟನ್ನು ಕಿಟಕಿಯ ಕಾರಣಕ್ಕೆ ಯಾರೋ ಆಕ್ರಮಿಸಿಕೊಂಡಿದ್ದರು. ಅವರಿಗೆ ಇದು ನನ್ನದೇ ಸೀಟು ಅಂತ ಅರ್ಥ ಮಾಡಿಸಿ ಅವರನ್ನು ಅಲ್ಲಿಂದ ಖಾಲಿ ಮಾಡಿಸಲು ಸಾಕಾಗಿ ಹೋಯಿತು.

ಕೂತು ಕಿಟಕಿಯಾಚೆ ನೋಡಿದೆ. ನುಗ್ಗುತ್ತಿರುವ ಗಾಳಿಯ ಕಂಡು ಗಾಳಿ ಬಿಸಿಲಿನೊಂದಿಗೆ  ಈ ಪರಿಯ ಸ್ನೇಹ ಮಾಡಬಾರದಿತ್ತು ಅನಿಸಿತು. ಹೊಟ್ಟೆಯ ಉರಿಗೆ ಒಂದಿಷ್ಟು ನೀರು ಹೊಯ್ದು ಕೊಂಡೆ! ಕಿಟಕಿಯಿಂದ ಹಾಯ್ದು ಬಂದ ಬಿಸಿ ಗಾಳಿಯನ್ನೆ‌ ತಣ್ಣಗೆ ಅನುಭವಿಸಿ ಸ್ವಲ್ಪ ಹಾಯೆನಿಸಿಕೊಂಡೆ ಮನಸ್ಸಿಗೆ.

ಎದುರಿಗೆ ಕೂತವರ ಮುಖಗಳಲ್ಲಿ, ಅವರ ಪಕ್ಕದಲ್ಲಿ ಕೂತವರ ಮುಖಗಳಲ್ಲಿ ಒಂದರ ಮೇಲೊಂದು ಕಥೆಗಳು ಕಾಣಿಸುತ್ತಿದ್ದವು. ಮನೆ ಸಾಲದ ಕಂತುಗಳು ಇನ್ನೆಷ್ಟು ಉಳಿದಿವೆ? ಫಾರಿನ್ ಗೆ ಹೋದ ಮಗ ಈ ನಡುವೆ ಪೋನ್ ಮಾಡಿಲ್ಲ, ಮಗಳಿಗೊಂದು ಒಳ್ಳೆ ಕಡೆ ವರ ಸಿಕ್ಕರೆ ಸಾಕು, ಗಂಡನ ವರ್ತನೆಯಾಕೆ ಈ ನಡುವೆ ಬದಲಾಗಿದೆ?… ಹೀಗೆ ನೋಡಿದಷ್ಟು ಕಾಣಿಸುತ್ತಲೇ ಇದ್ದವು. ರೆಪ್ಪೆಗಳ ಮೇಲೆ ಬಲ ಹೇರದಿದ್ದರೂ ಯಾಕೊ ತಮ್ಮಷ್ಟಕ್ಕೆ ತಾವೇ ಮುಚ್ಚಿಕೊಂಡವು. ಒಂದು ದೀರ್ಘ ದಣಿವು, ಹಸಿವು, ಬಿಸಿಯ ಸಂಕಟ ಎಲ್ಲವೂ ಸೇರಿ ನನ್ನನ್ನು ಒಂದು ಝೋಂಪಿಗೆ ರೆಡಿ ಮಾಡಿದ್ದವು.

‘ಯಾರಿಗಿಲ್ಲಿ ನೋವಿಲ್ಲ, ಯಾರಿಗಿಲ್ಲಿ ಸಾವಿಲ್ಲ, ಕಾಲ ಕಳೆದ ಹಾಗೆ ಎಲ್ಲ ಮಾಯವಾಗುವಂತದು…’ ಹಾಡಿನ ಧನಿ ಕಿವಿಯ ಮೇಲೆ ಬಿದ್ದಿದಕ್ಕೆ ಝೋಂಪು ಸಡಿಲಿಸಿತೊ, ಝೋಂಪು ಸಡಿಲವಾದ ಕಾರಣಕ್ಕೆ ಹಾಡು ಕಿವಿಯ ಮೇಲೆ ಬಿತ್ತೊ ಗೊತ್ತಾಗಲಿಲ್ಲ! ಸಿನೆಮಾ ಶೈಲಿಯಲ್ಲಿಯೆ ಹಾಡುವ ಪ್ರಯತ್ನವಿತ್ತು ಧನಿಯಲ್ಲಿ! ಅನುಮಾನವಿಲ್ಲ ಆ ಧನಿಯು ಹಾಡುವವನ ಗೋಳನ್ನೆ ಹೇಳುವಂತಿತ್ತು. ಗಿಜಿ ಗಿಜಿ ಮಧ್ಯೆಯೂ ಯಾಕೊ ಬೋಗಿ ನಿಶ್ಯಬ್ದವಾದಂತೆ ಭಾಸವಾಯಿತು. ಹಾಡಿನ ಹಿಂದಿನ ವಿಷಾದ ಧನಿ ಅಲ್ಲಿಯ ಅವಕಾಶವನ್ನು ತುಂಬಿಕೊಂಡಿತ್ತು!

ಮುಖ ನೋಡಿ ನೋಡಿ ಕಥೆಗಳನ್ನು ಹುಡುಕುತ್ತಿದ್ದ ನನಗೆ ಕೇಳಿದ ಆ ಒಂದು ಧನಿಯಲ್ಲೇ ನೂರು ಕಥೆಗಳು ಸಿಕ್ಕವು! ಹಾಡುತ್ತಾ ಹಾಡುತ್ತಾ ಮುಂದೆ ಬರುತ್ತಿದ್ದ ಆಕೃತಿಯನ್ನೊಮ್ಮೆ ನೋಡಿದೆ. ಎಡಗೈ ಊರುಗೋಲು ಹಿಡಿದಿತ್ತು, ಬಲಗೈ ಭಿಕ್ಷೆಗೆ ಚಾಚಿತ್ತು! ಕಣ್ಣು ಗುಡ್ಡೆಗಳೇ ಇಲ್ಲವೇನೊ ಎಂಬಂತೆ ಕಣ್ಣುಗಳು ರೆಪ್ಪೆಯನ್ನು ಸೆಳೆದುಕೊಂಡು ಆಳವಾದ ಗುಳಿ‌ ಬೀಳಿಸಿದ್ದವು! ಕಣ್ಣಿಲ್ಲ ಎಂಬುದಕ್ಕೆ ನನಗೆ ಬೇರೆ ವಿವರಣೆಗಳು ಬೇಕಿರಲಿಲ್ಲ. ಅಂಗಿ ಅಲ್ಲಲ್ಲಿ ಹರಿದಿದ್ದರೂ ಕೈಯಲ್ಲೇ ಹಾಕಿದ ಹೋಲಿಗೆಗಳು ಮೈಯನ್ನು ಮುಚ್ಚಿದ್ದವು. ಕೂದಲು ಕೆದರಿದ್ದವು. ಬಹುಶಃ ಬದುಕಿನ ದರಿದ್ರವೇ ಕೇವಲ ಅವನೊಬ್ಬನ‌ ಪಾಲಿಗಿತ್ತೇನೊ ಅನಿಸಿಬಿಟ್ಟಿತು.

ನಿಜಕ್ಕೂ ಇಷ್ಟವಾಗಿದ್ದು ಅವನ ನಿಷ್ಠೆ! ಸುಮ್ಮನೆ ಖಾಲಿಯಾಗಿ ಭಿಕ್ಷೆ ಕೇಳಲು ಅವನು ಸಿದ್ದನಿರಲಿಲ್ಲ. ತನಗೆ ಗೊತ್ತಿದ್ದ, ಕಲಿತಿದ್ದ ಹಾಡುಗಳನ್ನು ತಕ್ಕಮಟ್ಟಿಗೆ ಚನ್ನಾಗಿಯೆ ಹಾಡಿ ರಂಜಿಸುವ ಪ್ರಯತ್ನ ಮಾಡಿದ್ದ. ಅದು ನಮಗೆ ಇಷ್ಟವಾಗಿದ್ದರೆ ಎಂಟಾಣೆಯೊ, ಒಂದು ರೂಪಾಯಿಯನ್ನೊ ಕೊಡಬಹುದು ಅನ್ನುವಂತಿತ್ತು ಅವನ ಬಗೆ. ಆರ್ಕೇಸ್ಟ್ರಾಗಳು, ರಸಸಂಜೆಗಳು, ಸಿನೆಮಾಗಳು ಕೂಡ ಬೆಸಿಕಲಿ ಇದೇ ತತ್ವದಲ್ಲಿ ತಾನೆ ಬದುಕಿರೋದು! ಆದರೆ ಇಲ್ಲಿ ಮಾತ್ರ ಆತ ಬಹುತೇಕರಿಗೆ ಭಿಕ್ಷುನಾಗಿ ಕಾಣುತ್ತಿರುವುದು ವಿಪರ್ಯಾಸವೆನಿಸಿತು.

ಅಪ್ಪ ಅಮ್ಮ ಸತ್ತ ಮೇಲೆ ಮನೆಯಿಂದ ಹೊರಬಿದ್ದನೊ? ನೀನು ವೇಷ್ಟು ಅಂತ ಹೊರ ದಬ್ಬಿದರೊ? ಒಂಟಿಯೊ? ಅವನದೂ ಒಂದು ಸಂಸಾರವಿದೆಯೊ? ಅವನ ಹೊಟ್ಟೆಯಲ್ಲದೆ ಜೊತೆಗಿದ್ದವರ ಹೊಟ್ಟಯನ್ನೂ ತುಂಬಿಸಬೇಕೊ? ಗುಡಿಸಲಿನಂತಹ ಒಂದು ತಾವು ಇದೆಯೊ? ಬಸ್ಟ್ಯಾಂಡ್ ಮೂಲೆಯೆ ಮನೆಯೊ? ಅದೆಷ್ಟು ರಾತ್ರಿಗಳು ಅವನನ್ನು ಉಪವಾಸ ಕೆಡವಿರಬಹುದು? ಪೋಲಿಸ್ ಏಟು ಅದೆಷ್ಟು ಬಾರಿ ಬಿದ್ದಿರಬಹುದು? ಜ್ವರ ಬಂದ ಕಾಲದಲ್ಲಿ ದಿನವಿಡೀ ಬಿದ್ದುಕೊಂಡೇ ಇದ್ದಾಗ ಬದುಕು ಅವನ ಪಾಲಿಗೆ ಏನು ಅನಿಸಿರಬಹುದು? ಅಥವಾ ಕುರುಡನ್ನು ಒಂದು ನ್ಯೂನತೆ ಅಂದುಕೊಳ್ಳದೇ ಬದುಕಿರಬಹುದಾ? ಅವನಿಗೆ ಹೆಂಡತಿ ಮಕ್ಕಳು ಚಂದದ ಸಂಸಾರವಿದೆಯಾ?

ಬಡತನವಿದ್ದರೂ ಒಂದು ಸವಾಲಿನಲ್ಲಿ ಬದುಕುತ್ತಿರಬಹುದಾ? ಅವನ ಹೆಂಡತಿ ಅವನಿಗೆ ಹಾಡಲು ಕಲಿಸುತ್ತಿರಬಹುದಾ? ಆತ ಆ ಹಾಡನ್ನು ಮಧ್ಯೆ ರಾತ್ರಿಯವರೆಗೂ ಕೂತು ಹಾಡಿಕೊಳ್ಳುತ್ತಿರಬಹುದಾ? ಕೂಡಿಟ್ಟ ಭಿಕ್ಷೆ ಹಣ ಇದುವರೆಗೂ ಎಷ್ಟು ಸಾರಿ ಕಳ್ಳರ ಪಾಲಾಗಿದೆ? ನೋಟ್ ಬ್ಯಾನ್ ಕಾರಣಕ್ಕೆ ಕೂಡಿಟ್ಟ ಐನೂರರ ಹತ್ತು ನೋಟುಗಳು ಈಗ ಕೇವಲ ಕಾಗದಗಳಾಗಿರಬಹುದಾ? ಬದುಕು ಇನ್ನೂ ಇದೆ, ಇನ್ನೂ ಬೇಕು ಅನಿಸಿದೆಯಾ? ಸಾಕು ಹೊರಟು ಬಿಡೋಣ ಅಂದುಕೊಂಡಿದ್ದಾನಾ? ರೈಲಿನ‌ಲ್ಲಿ ನಿತ್ಯ ತೆರೆದುಕೊಳ್ಳುವ ಬೂಟಾಟಿಕೆಯ ಜಗತ್ತನ್ನು ಕಂಡು ಮತ್ತೆ ಮತ್ತೆ ಆತ ನಗಬಹುದಾ?… ಅಬ್ಬಾ ಅವನ ಬಳಿ ಅದೆಷ್ಟು ಕಥೆಗಳಿರಬಹುದು!

ಕೊಡಲೆಂದು ಪರ್ಸ್ ನಿಂದ ಹತ್ತು ರೂಪಾಯಿ ತಗೆದು ಕೈಯಲ್ಲಿಟ್ಟುಕೊಂಡಿದ್ದೆ! ನನ್ನದೇ ಲಹರಿಯಲ್ಲಿ ಮುಳುಗಿ ಹೋಗಿದ್ದೆ! ಆತ ನನ್ನ ಬಳಿ ಬಂದು ಇನ್ನೂ ಮುಂದಕ್ಕೆ ಹೋಗಿದ್ದು ಗೊತ್ತೆ ಆಗಲಿಲ್ಲ. ಯಾವುದೊ ನಿಲ್ದಾಣದಲ್ಲಿ ರೈಲು ನಿಂತು ಹತ್ತುವ ಇಳಿವವರ ಸದ್ದಿಗೆ ಲಹರಿ ಕತ್ತರಿಸಿಹೋಯಿತು! ಆತನಿರಲಿಲ್ಲ. ಈಗ ತಾನೇ ಇಳಿದು ಹೋಗಿರಬೇಕು. ಪ್ರಯಾಣಿಕರ ಹತ್ತುವಿಕೆ ಇಳಿಯುವಿಕೆ ಸಾಗೇ ಇತ್ತು. ಮತ್ತೇ ನೂರಾರು ಕಥೆಗಳನ್ನು ಬೋಗಿ ತುಂಬಿಕೊಂಡಿತು. ಹತ್ತು ರೂಪಾಯಿ ಕೈಯಲ್ಲೇ ಉಳಿಯಿತು!

2 Responses

  1. Sowmya S says:

    ರೈಲು ವೇಗವಾಗಿ ಚಲಿಸುವಾಗ ಕಾಣುವ ಬೋಗಿಗಳಷ್ಟೇ ವೇಗವಾಗಿವೆ ನಿಮ್ಮ ಆಲೋಚನೆಗಳು…!ಎಷ್ಟೇ ಆದರೂ ಮನಸಿನದು ಶರವೇಗ; ಮಿಂಚಿನ ವೇಗ ಅಲ್ಲವೇ…? ಕಾಣುವ ಪ್ರತಿ ದೃಶ್ಯದಲ್ಲೂ ಕಥೆ ಇರುತ್ತದೆ, ಕಾಣುವವ ಕಥೆಗಾರನಾಗಿದ್ದಾಗ… !

  2. sadaask says:

    Thank u madam

Leave a Reply

%d bloggers like this: