fbpx

ಪ್ರೀತಿಯ ಕುಮಾರಣ್ಣನಿಗೆ..

ಎನ್ ರವಿಕುಮಾರ್ /ಶಿವಮೊಗ್ಗ 

ನಿಮ್ಮನ್ನು ಇಲ್ಲಿ ‘ಕುಮಾರಣ್ಣ’ ಎಂದು ಸಂಬೋಧಿಸಲು ಪ್ರಮುಖ ಕಾರಣಗಳಿವೆ.

ಹೆಚ್.ಡಿ.  ಕುಮಾರಸ್ವಾಮಿ ಎಂದು ಕರೆದಾಗ ಅಂತರವೊಂದು ನಮ್ಮ ನಡುವೆ ಇದ್ದು ಬಿಡುವ ಸುಳಿವೊಂದು  ಗೋಚರಿಸಬಹುದು. ಅದು ನಮ್ಮಿಬ್ಬರ ನಡುವಿನ ಅಥವಾ ನಿಮ್ಮನ್ನು ಕುಮಾರಣ್ಣ ಎಂದು ಬಾಯಿತುಂಬಾ ಕೊಂಡಾಡುವವರ ನಡುವಿನ ಗೋಡೆಯೂ ಆಗಿಬಿಡಬಹುದು.

ಹಾಗಾಗಿ ಜನಸಾಮಾನ್ಯರ ಪಾಲಿನ ‘ಕುಮಾರಣ್ಣ’ನಂತೆ  ನಿಮ್ಮನ್ನು ಕರೆಯಲು ನನಗೆ ಇಷ್ಟವಾಗುತ್ತದೆ.

೨೦೦೬ ರಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದ ನಂಟು ಕಳಚಿ ಕೋಮುವಾದಿ ಬಿಜೆಪಿಯೊಂದಿಗೆ ಗಂಟು ಬಿಗಿದುಕೊಂಡು ಜಾತ್ಯಾತೀತ  ಜಗಲಿಯನ್ನು  ನುಚ್ಚುನೂರು ಮಾಡಿದ ಅರೋಪದ ಮೇಲೆ  ಕಟಕಟೆಯಲ್ಲಿ ನಿಮ್ಮನ್ನು ನಿಲ್ಲಿಸಲಾಗಿತ್ತು. ೨೦ ತಿಂಗಳ  ಮುಖ್ಯಮಂತ್ರಿಯಾಗಿ ನೀವು ನಡೆದುಕೊಂಡ ರೀತಿ ಸೈದ್ದಾಂತಿಕತೆ ಎಂಬ ಗೋಡೆಗಳ ಜಿಗಿದು ಜನಮೆಚ್ಚುಗೆಗೆ ಕಾರಣವಾಯಿತು. ಎಲ್ಲಿಯ ಸಿದ್ಧಾಂತ  ರೀ.. ಕಷ್ಟದಲ್ಲಿರುವವರಿಗೆ ನೋವಿನಲ್ಲಿರುವವರಿಗೆ ಸಹಾಯ ಮಾಡೋದು ಮುಖ್ಯ. ಸಿದ್ಧಾಂತ ತಗೊಂಡು ಏನ್ಮಾಡ್ತಿರಾ?,

-ಎಂಬ ನಿಮ್ಮ ಮಾತುಗಳನ್ನು ನಾನು ಆಗಾಗ್ಗೆ ಕೇಳಿಸಿಕೊಂಡಿದ್ದೇನೆ. ಅದೊಂದು ದಿನ ‘ಸೆಕ್ಯೂಲರ್ ಅಂದ್ರೆ ಏನೂ?’ಅಂತ ಕೇಳಿದ್ದನ್ನು ಕಂಡು ಕಂಗಾಲಾಗಿದ್ದು ಇದೆ.!

ನೊಂದವರಿಗೆ, ಬಡವರಿಗೆ, ಕಣ್ಣಿಗೆ ಬಿದ್ದ ಕಡುಕಷ್ಟದಲ್ಲಿರುವವರಿಗೆ ಜಾತಿ, ಮತದ ಹಂಗಿಲ್ಲದೆ ನೆರವಿನ ಕೈಚಾಚುವ ನಿಮ್ಮ ಕಕ್ಕುಲಾತಿತನ ‘ಸಿದ್ದಾಂತ’  ಎಂಬ ಬೌದ್ಧಿಕ ಪರಿಭಾಷೆಯ ಪದಗಳನ್ನು  ಮೀರಿದ್ದು ಎಂದು ಭಾವಿಸುತ್ತೇನೆ.

ಇಂತಹ ಸಂದರ್ಭದಲ್ಲಿ ಜಡ್ಡುಗಟ್ಟಿದ, ಏಕತಾನದ ನಾಯಕತ್ವದ ಪ್ರಭಾವಳಿಯಿಂದ ಸಿಡಿದು ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಕರ್ನಾಟಕದ ರಾಜಕಾರಣ ನಿಮ್ಮ ಮೂಲಕ ಹೊಸ ನಾಯಕತ್ವದೆಡೆಗೆ, ಹೊಸ ಬದಲಾವಣೆಯೆಡೆಗೆ ಹೊರಳಿತ್ತು. ಸಮರ್ಥ ಪ್ರಾದೇಶಿಕ ನಾಯಕತ್ವವನ್ನು ಕಂಡುಕೊಂಡ ಸಂಭ್ರಮದಲ್ಲಿತ್ತು. (ನೆರೆಯ ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಮಾದರಿ)  ಅದು ಅತ್ಯಲ್ಪ ಕಾಲದಲ್ಲೇ ಕುಸಿದು ಹೋದದ್ದು ಮಾತ್ರ ದುರಂತದ ಸಂಗತಿ.

ಅಲ್ಲಿಂದ ಇಲ್ಲಿಯವರೆಗೂ ನಡೆದದ್ದು ಇತಿಹಾಸ . ಇದೀಗ ರಾಜ್ಯ ರಾಜಕಾರಣ ಮತ್ತೊಂದು ಸುತ್ತು ಬಂದು ನಿಮ್ಮ ಮುಂದೆಯೇ ನಿಂತಿದೆ.  ನಿರ್ಣಾಯಕ ಹಂತಕ್ಕೆ ಬಂದಿದೆ. ಕಾಲದ ಕರೆಯೇ ಎಂಬಂತೆ ನೀವೀಗ ಮುಖ್ಯಮಂತ್ರಿಯಾಗಿದ್ದೀರ. ನಿಮ್ಮ ನಂಬುಗೆಯ ಜನಪರ  ಸಿದ್ಧಾಂತ ಎಂಬುದು  ಒಳಿತು ಬಯಸುವುದೇ ಆಗಿರುವಾಗ ನೀವು ಅಂದುಕೊಂಡ ‘ಕುಮಾರ ಕರ್ನಾಟಕ’ ವನ್ನು ಕಟ್ಟಿರಿ.

ಅದಕ್ಕೆ ಮುನ್ನ ಸ್ವಲ್ಪ ಕೇಳಿಸಿಕೊಳ್ಳಿ:

ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಎಂಬ ಬೇಟೆಗಾರರ ಸರ್ಕಾರವೊಂದು ಅಸ್ತಿತ್ವದಲ್ಲಿದೆ. ಅವರು ಪ್ರಜಾಸತ್ತಾತ್ಮಕ ರಾಜಕೀಯ ಸಂಸ್ಕೃತಿಯನ್ನು ವ್ಯಕ್ತಿಗತ ದ್ವೇಷದ ನೆಲೆಯ ಮಟ್ಟಕ್ಕೆ ತಂದು ನಿಲ್ಲಿಸಿ ಬಿಟ್ಟಿದ್ದಾರೆ.  ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದೇಶದ್ರೋಹದ ಗೋರಗಂಬಕ್ಕೆ ಕಟ್ಟಲಾಗುತ್ತಿದೆ.

ದೇಶದೊಳಗಿನ  ಜಾಗತಿಕ ದಲ್ಲಾಳಿಗಳನ್ನು ಸಾಕುತ್ತಾ, ಜನಸಾಮಾನ್ಯರ ದುಡಿಮೆಗೂ ಕೈಚಾಚಿರುವ ಇವರ ಆರ್ಥಿಕ ನೀತಿ ದುಸ್ತರವಾಗಿದೆ. ತಮಗಾಗದವರನ್ನು ಹಣಿಯುವ ಎಲ್ಲಾ ಸಾಧ್ಯತೆಗಳನ್ನು ಸಾಂವಿಧಾನಿಕ ಸಂಸ್ಥೆಗಳ ಮೂಲಕವೇ ನಡೆಸಲಾಗುತ್ತಿದೆ.

ಒಟ್ಟಾರೆ ಅದರ ದಿಕ್ಕು ಮತ್ತು ಗುರಿ ಒಂದು ಸರ್ವಾಧಿಕಾರದ ಕಡೆಗೆ ನೆಟ್ಟಿದೆ. ಈ ದೇಶದ  ಸಂವಿಧಾನದತ್ತ ಫೆಡರಲ್ ಸ್ಟ್ರಕ್ಚರ್ ಮತ್ತು ಕಲ್ಚರ್‌ನ್ನು ನಾಶಮಾಡುವತ್ತ ಸಾಗಿರುವ   ಕೇಂದ್ರ ಸರ್ಕಾರದ ನಡೆ ಪ್ರಾದೇಶಿಕ ಪಕ್ಷಗಳು ಮತ್ತು ಪ್ರಾದೇಶಿಕ ನಾಯಕತ್ವಕ್ಕೆ ದೊಡ್ಡ ಅಪಾಯ.

ಯಾವ ಹೊತ್ತಿನಲ್ಲಾದರೂ ಇಂತಹ ಅಪಾಯವನ್ನು ನೀವು ಎದುರುಗೊಳ್ಳಲೇ ಬೇಕಾಗಬಹುದು. ಅಂತಹ ಸಂದರ್ಭ ಒದಗಿಬಂದಾಗ ರಾಜ್ಯ ನಿಮ್ಮೊಂದಿಗಿರುತ್ತದೆ ಎಂಬ ಭರವಸೆ ಇಟ್ಟುಕೊಳ್ಳಿ.

ಇತ್ತ ರಾಜ್ಯದಲ್ಲಿ ಇದೇ ಬಿಜೆಪಿ ಅಧಿಕಾರ ದಕ್ಕಿಸಿಕೊಳ್ಳಲಾಗದೆ , ಇಲ್ಲಿ ತನ್ನ ವಸಾಹತುಶಾಹಿ ಸಾಮ್ರಾಜ್ಯವನ್ನು ಸ್ಥಾಪಿಸುವುದು ಕೈಗೂಡದೆ ಚಡಪಡಿಸುತ್ತಿದೆ. ಇಂತಹ ಅಪಾಯದ ಸಂದರ್ಭದಲ್ಲಿ ನೀವು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದೀರ. ರಾಜ್ಯದಲ್ಲಿ ರೈತರು ,ದಲಿತರು , ಹಿಂದುಳಿದವರ್ಗಗಳು ಇಂದು ರಾಜಕೀಯ ತೆವಲಿನ ಬಂಡವಾಳದ ಸರಕುಗಳಾಗಿ ಬಳಕೆಯಾಗುತ್ತಿದ್ದಾರೆ.

ಇದಕ್ಕೆ ಯಾವ ಪಕ್ಷಗಳು ಹೊರತಲ್ಲ. ಇವರ ಬದುಕು ಹಸನಾಗಬೇಕಾದರೆ  ದುಡಿಯುವ ಕೈಗಳು ಪವಿತ್ರವಾಗಿದ್ದಾಗ, ಮಿಡಿಯುವ ಮನಸ್ಸುಗಳು ನಿಷ್ಕಲ್ಮಶವಾಗಿದ್ದಾಗ ಮಾತ್ರ ಸಾಧ್ಯ. ಈ ವಿಷಯಗಳಲ್ಲಿ ಇನ್ನಷ್ಟು ನಿಮ್ಮ ಕೈ ಮತ್ತು ಹೃದಯ  ಪವಿತ್ರವಾಗಿರಲಿ. ರೈತರ ಸಾಲ ಮನ್ನಾ ಬಗ್ಗೆ ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಿ, (ನಿಮ್ಮ ಪಾಲುದಾರ ಪಕ್ಷ ಕಾಂಗ್ರೆಸ್ ಕೂಡ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು.)

ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ , ನೆಲೆ ಸಿಗುವಂತೆ ಮಾಡಿ ಅವನನ್ನು ನೇಣುಗಂಬಗಳಿಂದ ಪಾರು ಮಾಡಿ. ಅನ್ನದಾತ ಕಣ್ಣೀರಿಟ್ಟರೆ ನಾಡು ಸುಭಿಕ್ಷವಾಗಿರದು ಅರಿವಿರಲಿ.

ಗ್ರಾಮವಾಸ್ತವ್ಯ ಎಂಬ ದೇಶ ಮೆಚ್ಚಿದ ನಡೆ, ದಂತಗೋಪುರವ ತೊರೆದು ಜೋಪಡಿಗೆ ಬಂದು ಗ್ರಾಮೀಣ ಬದುಕಿನ ಕಷ್ಟ-ಕಾರ್ಪಣ್ಯಗಳ ಅರಿಯುವ, ತನ್ನ ನಾಯಕನನ್ನು (ಸರ್ಕಾರವನ್ನೆ)  ಕೈಕುಲುಕಿ ಸಲುಗೆ, ಸಹಜ ಪ್ರೀತಿಯಿಂದ ಮಾತನಾಡಿಸುವ , ದುಃಖದುಮ್ಮಾನಗಳನ್ನು ತೋಡಿಕೊಳ್ಳುವ ಮಟ್ಟಿಗೆ  ಪ್ರಭುತ್ವವನ್ನು ಸಾಮಾನ್ಯ ಜನರ ಮನೆಬಾಗಿಲಿಗೆ ಕೊಂಡೊಯ್ದವರು ನೀವು. ಇದು ಎಂದಿಗೂ ವಿಶ್ವಾಸ ದ್ರೋಹದ ನಂಜಿಗೆ  ಸಿಲುಕದಂತೆ ನೋಡಿಕೊಳ್ಳಿ.

ಸೆಕ್ಯೂಲರ್, ಕಮ್ಯೂನಲ್, ಆಸ್ತಿಕ, ನಾಸ್ತಿಕ, ಪ್ರಗತಿಪರ, ಬುದ್ದಿಜೀವಿ, ಚೆಡ್ಡಿಜೀವಿ..ಎಡ-ಬಲ ಇಂತಹ ಯಾವುದೇ ಡಿವಿಷನ್ ಗಳ ಕಟ್ಟುಪಾಡಿಗೆ ಬೀಳದಿದ್ದರೂ ಪರವಾಗಿಲ್ಲ. ರಾಜ್ಯದಲ್ಲಿ ಧರ್ಮ, ಜಾತಿ ಹೆಸರಿನಲ್ಲಿ ನಡೆಯುವ ಎಲ್ಲಾ ರೀತಿಯ ಜೀವ ಹತ್ಯೆ, ಶೋಷಣೆಯನ್ನು,ಸಾಮಾಜಿಕ ಸಾಮರಸ್ಯ ಕದಡುವ ಶಕ್ತಿ, ವ್ಯಕ್ತಿಗಳನ್ನು ಮಟ್ಟಹಾಕಿ, ದೇವರು, ದರ್ಗಾ, ಇಗರ್ಜಿಗಳ ನೆಪದಲ್ಲಿ ಜನರನ್ನು ಮೂಢನಂಬಿಕೆಗೆ ತಳ್ಳಿ ಸುಲಿಯುವವರಿಗೆ ಒಂದು ಗತಿ ಕಾಣಿಸಿ.

ನೀವು ಅಪಾರ ದೈವ ಭಕ್ತರೆಂಬುದು ಗೊತ್ತು. ಯಾರೊಬ್ಬರಿಗೂ ಅಪಾಯ, ನಷ್ಟವಿಲ್ಲದ ಯಾವುದೇ ನಂಬಿಕೆಗಳು ಪ್ರಶ್ನಾರ್ಹವಲ್ಲ. ವ್ಯಕ್ತಿಗತ ನಂಬಿಕೆಯೊಂದು ಸಮಾಜದ ಒಳಿತನ್ನೆ ಒಳಗೊಂಡಿದ್ದರೆ ಅದು ಸಮ್ಮತವೆಂದೇ ಭಾವಿಸುತ್ತೇನೆ. ಆದರೆ ಜನನಾಯಕರಾದ ನಿಮ್ಮ ನಡೆಯನ್ನು ಜನರೂ ಗಮನಿಸುತ್ತಿರುತ್ತಾರೆ ಎಂಬ ಎಚ್ಚರವಿರಲಿ.!

ದಲಿತರು, ಅಲ್ಪಸಂಖ್ಯಾತರು ಎಂದಿಗೂ ರಾಜಕೀಯ ಗುರಾಣಿಯಾಗದಂತೆ ನೋಡಿಕೊಳ್ಳಿ, ಎಲ್ಲಾ ಕಾಲಕ್ಕೂ ಈ ಸಮುದಾಯಗಳು  ನರಳುವುದು ತಪ್ಪಿಲ್ಲ. ಅವರ ಅಭಿವೃದ್ದಿ ಕೇವಲ ಭಾಷಣಗಳಿಗೆ, ತುಟಿ ಮೇಲಿನ ಕರುಣೆಗೆ ಸೀಮಿತವಾಗದೆ ಕ್ರಿಯಾತ್ಮಕ ರೂಪತಾಳಲಿ.

ಈ ಸಮುದಾಯಗಳಿಗೆ ಈ ಹೊತ್ತಿನವರೆಗೂ ರಾಜಕೀಯ ಹಕ್ಕಿನ ಪ್ರಾಧಾನ್ಯತೆ ದಕ್ಕಿಲ್ಲ. ಆ ಕೊರತೆ ನಿಮ್ಮಿಂದಾದರೂ ದೂರಾಗಲಿ.

ಇವತ್ತಿನ ರಾಜಕಾರಣ ದುಡ್ಡಿನ ಮೇಲೆ ನಿಂತಿದೆ. ಶಾಸಕರನ್ನು ಸಾಕಲು(?) ಹಣ ಬೇಕು, ಪಕ್ಷ ಕಟ್ಟಲು, ಚುನಾವಣೆಗಳನ್ನು ಎದುರಿಸಲು ಹಣ ಮುಖ್ಯ ಎಂಬ ಮಾತುಗಳನ್ನು ನಿಮ್ಮ ಬಾಯಿಯಿಂದಲೆ ಕೇಳಿದ್ದೇನೆ. ನೀವು ಹೇಳಿದ್ದು ಅಕ್ಷರಶಃ ನಿಜ, ನೀವು ನಿರ್ಭಯವಾಗಿ ರಾಜಕೀಯ ವ್ಯವಸ್ಥೆಯ ಒಳಸುಳಿಗಳನ್ನು ಬಯಲಲ್ಲಿ ಬಿಚ್ಚಿಟ್ಟಿದ್ದೀರ.

ಹಾಗಾಗಿಯೇ ನೀವು ಇತರೆ ರಾಜಕಾರಣಿಗಳಿಗಿಂತ ಭಿನ್ನರಾಗಿ ಕಾಣುತ್ತೀರ. ಇಂತಹ ಸನ್ನಿವೇಶವಿರುವಾಗ ಅಧಿಕಾರಸ್ಥರು ಭ್ರಷ್ಟರಾಗುವ ಸುಲಭ ಹಾದಿಗಳನ್ನು ಹುಡುಕುತ್ತಲೆ ಇರುತ್ತಾರೆ. ನಿಮ್ಮ ಮತ್ತು ನಿಮ್ಮ ಸಂಪುಟದ ಸಚಿವರ , ನಿಗಮ, ಮಂಡಳಿಗಳ ಅಧ್ಯಕ್ಷರ ಕೈ ಬಾಯಿ ಆದಷ್ಟೂ  ಶುದ್ದವಾಗಿಟ್ಟುಕೊಳ್ಳುವಂತೆ ನೋಡಿಕೊಳ್ಳಿ, ಈ ನೆಪದಲ್ಲಿ ರಾಜಕೀಯ ಶುದ್ಧೀಕರಣದ ಪ್ರಯತ್ನವೂ ನಿಮ್ಮಿಂದಾಗಲಿ. (ಯಡಿಯೂರಪ್ಪ ಅವರನ್ನು ಅಧಿಕಾರದಿಂದಿಳಿಸಿದ್ದು ನೀವು ಬಯಲಿಗೆಳೆದ ಭ್ರಷ್ಟಾಚಾರಗಳೇ ಕಾರಣ  ನೆನಪಿರಲಿ).

‘ಮನುಷ್ಯ ವ್ಯಕ್ತಿತ್ವವೂ ಆತನ ಸಾಮಾಜಿಕ ಪರಿಸರದಿಂದ ರೂಪಿತವಾಗಿರುತ್ತದೆ ಎನ್ನುವುದೇ ಆದರೆ ಆತನ ಸಾಮಾಜಿಕ ಪರಿಸರವೂ ಹೆಚ್ಚು ಮಾನವೀಯಮುಖವುಳ್ಳದ್ದಾಗಿರಬೇಕು.’ ಕಾರ್ಲ್ ಮಾರ್ಕ್ಸ ನ ಈ ಮಾತುಗಳನ್ನು ನೆನಪಿಸುತ್ತಾ ನನ್ನ ಮಾತುಗಳನ್ನು ಮುಗಿಸುತ್ತಿದ್ದೇನೆ.

ಜನಪ್ರೀತಿ ಎಂಬ ತೊರೆಯಲ್ಲಿ ಉಬ್ಬಿನಿಂತ ನೊರೆಯಾಗದೆ. ತಳದಲ್ಲಿ ಹೊಳೆವ ಮುತ್ತಿನಂತೆ ಘನವಾಗಿರಿ.

ಆಲ್ ದಿ ಬೆಸ್ಟ್ ಕುಮಾರಣ್ಣ.

ನಮಸ್ತೆ

2 Responses

  1. prabhakar joshi says:

    super letter

  2. ರವಿಕಾಂತ says:

    ರವಿಕುಮಾರ್‌ರವರ ನಂಬಿಕೆಗಳಿಗೆ ಒಳ್ಳೆಯದಾಗಲಿ.

Leave a Reply

%d bloggers like this: