fbpx

ನಿನ್ನ ಸೇಫ್ ಝೋನ್ ಗಳು ನನ್ನವೂ ಆಗದ ಹೊರತು…

ಪ್ರತಿಭಾ ಕುಡ್ತಡ್ಕ

‘ರಾಝಿ’ ಚಿತ್ರ ನೋಡಿ ಬಂದೆ. ಸಂಜೆ 7.30ರ ಪ್ರದರ್ಶನ. ಮುಗಿದದ್ದು ರಾತ್ರಿ 10 ಕ್ಕೆ.

ಅಂತೂ ಮಲ್ಟಿಪ್ಲೆಕ್ಸ್ ಎಂಬುದು ಬಂದ ಬಳಿಕ ಹೆಣ್ಣು ಒಬ್ಬಳೇ ಸರಿರಾತ್ರಿಯವರೆಗೆ ಸಿನಿಮಾ ನೋಡುವಂತಾಯಿತು. ಇದೇನಾ ಗಾಂಧಿ ಬಯಸಿದ ಸ್ವಾತಂತ್ರ್ಯ?

ಹಾಗಂತ ನಾನು ಒಬ್ಬಳೇ ಸಿನಿಮಾ ನೋಡಲು ಹೋಗಿದ್ದು ಇದೇ ಮೊದಲಲ್ಲ.
ಆ ಕಾಲದಲ್ಲೇ ಲೋಕಲ್ ಟಾಕೀಸ್ ನಲ್ಲಿ ಒಬ್ಳಳೇ ಸಿನಿಮಾ ನೋಡಿದ್ದೇನೆ. ಅದೂ ಯಾವುದು? ‘ಎ’, ‘ಉಪೇಂದ್ರ’ದಂಥ ಚಿತ್ರಗಳು…

ವ್ಯತ್ಯಾಸ ಅಂದ್ರೆ ಆ ಕಾಲದಲ್ಲಿ ಹಗಲು ಹೊತ್ತಲ್ಲಷ್ಟೇ ಹೋಗಲು ಸಾಧ್ಯ ಆಗ್ತಿತ್ತು. ಈಗ ಮಲ್ಟಿಪ್ಲೆಕ್ಸ್ ಬಂದ ಮೇಲೆ‌ ರಾತ್ರಿ ಹತ್ತೂವರೆಯ ಪ್ರದರ್ಶನಕ್ಕೂ ಒಂಟಿಯಾಗಿ ಹೋಗಿ, ಒಂದು ಗಂಟೆ ರಾತ್ರಿಗೆ ಮನೆಗೆ ಬರಲು ಸಾಧ್ಯ ಆಗ್ತಿದೆ.

ಇನ್ನೂ ವ್ಯತ್ಯಾಸ ಅಂದ್ರೆ ಮೈಯೆಲ್ಲ ಕಣ್ಣಾಗಿ ಮುಳ್ಳಿನ ಮೇಲೆ ಕುಳಿತಂತೆ ಎರಡೂವರೆ ಗಂಟೆ ಕೂರಬೇಕಾಗಿದ್ದ ಆ ಅನಿವಾರ್ಯತೆ ಮಲ್ಟಿಪ್ಲೆಕ್ಸ್ ನಲ್ಲಿಲ್ಲ. ನಿರಾಳ ಕುಳಿತು ಸರ್ವೇಂದ್ರಿಯಗಳನ್ನೂ ತೆರೆಯ ಮೇಲೆ ಕೇಂದ್ರೀಕರಿಸಿ ಸಿನಿಮಾ ಸವಿಯಬಹುದು.

ಮಲ್ಟಿಪ್ಲೆಕ್ಸ್ ನ ಸೋ ಕಾಲ್ಡ್ ನಾಗರಿಕರು ಮತ್ತು ಲೋಕಲ್ ಥಿಯೇಟರಿನ ಗಾಂಧಿ ಕ್ಲಾಸು ಪ್ರೇಕ್ಷಕರ ಹೋಲಿಕೆಯೂ ಇದಲ್ಲ. ಬಿಗಿ ಕಣ್ಗಾವಲಿನ ಆವರಣದೊಳಗೆ ಎಲ್ಲರೂ ಸಂಭಾವಿತರೇ…

ಸಿನಿಮಾ ಮುಗಿಸಿ, ಮಾಲ್ ನಿಂದ ಹೊರಬಂದು, ಈ ಹೊತ್ತಿಗೆ ಬಸ್ ಇರಬಹುದಾ? ಅಲ್ಲ, ಆಟೋ ಹತ್ತೋದಾ ಅಂತ ಅಂದಾಜಿಸುತ್ತಿದ್ದೆ ಅಷ್ಟೇ. ಕೆನ್ನೆ ಕೆರೆಯುತ್ತ ಹಲ್ಲು ಗಿಂಜಿತು ಪಕ್ಕದಲ್ಲೊಂದು ಜೀವ.

“ಅಯ್ಯೋ ಕರ್ಮವೇ…” ಅಂತ ಬೈದುಕೊಂಡು ಆಚೀಚೆ ನೋಡದೆ ರಿಕ್ಷಾ ಹತ್ತಿ ಬಂದೇ ಬಿಟ್ಟೆ ಬುರ್ರಂತ…

ಹಾಗೆ ಹೊರಗೆ ಹಲ್ಲುಗಿಂಜಿದ ಆ ಜೀವ ಒಳಗೆ ನನ್ನೊಂದಿಗೇ ಕುಳಿತು ಅಷ್ಟು ಹೊತ್ತು ಸಿನಿಮಾ ನೋಡಿದ ಸಂಭಾವಿತನೇ ಇರಬಹುದು.

ಹೀಗೆ ಒಂಟಿಯಾಗಿ ಸಿನಿಮಾ ನೋಡಲು ಹೋಗುವುದು ಮಧ್ಯಮ ವರ್ಗದ ದುಡಿಯುವ ಹೆಣ್ಣಾದ ನನಗೆ ಒಂದು ಸಾಹಸೀ ಕೆಲಸವಾಗಲೀ, ಶೋಕಿಯಾಗಲಿ ಅಲ್ಲ. ಆ ಕಾಲದಲ್ಲೂ ಈ ಕಾಲದಲ್ಲೂ ಅದು ನನ್ನ ಅನಿವಾರ್ಯತೆ ಅಷ್ಟೇ. ದುರಹಂಕಾರ!!! ಏನು ಸಿನಿಮಾ ನೋಡದಿದ್ರೆ ಇವಳು ಸತ್ತು ಹೋಗ್ತಾಳಾ? ಅಲ್ಲ ಪ್ರಪಂಚ ಮುಳುಗಿ ಹೋಗುತ್ತಾ? ಅಂತ ಹಲವರಿಗೆ ಅನ್ನಿಸಬಹುದು… ಇರಲಿ.

ವಿಷಯ ಅಂದರೆ, ಮಹಾನಗರಗಳಲ್ಲಿ ಹೆಣ್ಣು ಸಮಾನ ಸುಖ ಅನುಭವಿಸುತ್ತಿದ್ದಾಳೆ ಎಂಬುದೂ ಭ್ರಾಮಕ ಕಲ್ಪನೆ!

ನಗರಗಳಲ್ಲಿ ಅಲ್ಲಲ್ಲಿ ಕಠಿಣ ಕಣ್ಗಾವಲಿನಡಿ ನಿರ್ಮಾಣಗೊಂಡಿರುವ ಈ ಪುಟ್ಟ ಪುಟ್ಟ ಸೇಫ್ ಝೋನ್ ಗಳ ಒಳಗಷ್ಟೇ ನಮ್ಮ ಕಾರುಬಾರು. ರಾತ್ರಿ 10ರವರೆಗೂ ಶಾಪಿಂಗ್ ಮಾಡಬಹುದು; ಮಾಲ್ ನಿಂದ ಹೊರಬಿದ್ದ ಕ್ಷಣ ರಿಕ್ಷಾ, ಕಾರು ಹತ್ತಿ ದೌಡಾಯಿಸಬೇಕು ಮನೆ ಎಂಬ ಇನ್ನೊಂದು ಸೇಫ್ ಝೋನ್ ಗೆ. ಆ ನಡುವೆ ರಿಕ್ಷಾ/ ಟ್ಯಾಕ್ಸಿಯವರೂ ವೃತ್ತಿಯಾಚೆಗೆ ಕೈಚಳಕ ತೋರಿದಾಗೆಲ್ಲ; ಸ್ವಂತ ಕಾರಿನ ನಂಬಿಕಸ್ಥ ಚಾಲಕನಿಗೂ ತಾನು ಪುರುಷ, ಕಾರಿನ ಒಡತಿ ಹೆಣ್ಣು ಎಂಬ ಪ್ರಜ್ಞೆ ಜಾಗೃತವಾದಾಗೆಲ್ಲ ದೇಶವೇ ಬೆಚ್ಚಿ ಬೀಳುವಂಥ ಘಟನೆಗಳು ದಾಖಲಾಗಿವೆ.

ನಾನು ಒಂಟಿ ಸಂಚಾರಿ ಅಂತ ಬೀಗುವ, ಸಾರುವ ಮೇಲ್ವರ್ಗದ ಹೆಣ್ಣೂ ಈ ಸೇಫ್ ಝೋನ್ ನ ಒಳಗಿನ ಬಂಧಿ.
ವಿಮಾನದಲ್ಲಿ ಯಾನ, ಸ್ಟಾರ್ ಹೊಟೇಲಿನಲ್ಲಿ ವಾಸ್ತವ್ಯ, ಟ್ಯಾಕ್ಸಿಯಲ್ಲೇ ತಿರುಗಾಟ… ಇನ್ನೂ ಬಹಳಷ್ಟು ಸಲ ಪ್ರವಾಸ ಯಾವುದೋ ಅಸೈನ್ ಮೆಂಟ್ ನ ಭಾಗವಾಗಿದ್ದಾಗ ಬೆನ್ನಲ್ಲೇ ಬಾಡಿಗಾರ್ಡ್ ಇಲ್ಲದೇ ಹೋದರೂ ಒಂದಿಡೀ ವ್ಯವಸ್ಥೆಯೇ ಇರುತ್ತದೆ ರಕ್ಷಣೆಗೆ. ಹಾಗೊಂದು ಪೂರ್ವ ಯೋಜನೆ ಇಲ್ಲದೆ ತಿರುಗಾಡಲು ಹೋದ ಒಂಟಿ ಹೆಣ್ಣೂ ಇಲ್ಲಿ ಸುದ್ದಿಯಾಗಿದ್ದಾಳೆ.

ಈ ಎಲ್ಲ ಸೇಫ್ ಝೋನ್ ಗಳ ನಿರ್ಮಾಣವೂ ಹೆಣ್ಣಿಗಾಗಿ ಅಲ್ಲ, ಅವರವರ ಗ್ರಾಹಕಿಗಾಗಿ…
ರಾತ್ರಿಯಿಡೀ ರಿಕ್ಷಾ, ಟಾಕ್ಸಿ ಓಡಿಸುವ ಚಾಲಕರ ಪಾಲಿಗೂ ನಾನು ಒಂದೂವರೆ ಬಾಡಿಗೆ ತೆರುವ ಗ್ರಾಹಕಿ…
ವ್ಯಾಪಾರೀ ಜಗತ್ತು ಕಾಳಜಿ ಮಾಡುವುದು ತನ್ನ ಸರಕುಗಳು ಮತ್ತು ಗ್ರಾಹಕರನ್ನು ಮಾತ್ರ. ಅವರೆಡೂ ಅಲ್ಲದ ಹೆಣ್ಣು ಆ ವ್ಯವಸ್ಥೆಯ ಜವಾಬ್ದಾರಿ ಅಲ್ಲ… ಎಂಬುದು ಅರ್ಥವಾದ ಈ ಕ್ಷಣ ಮತ್ತೆ ಮತ್ತೆ ಕಾಡುವ ಒಂಟಿಭಾವ. ಗಂಡಿನ ಸೇಫ್ ಝೋನ್ ಗಳೆಲ್ಲವೂ ನನ್ನವೂ ಆಗದ ಹೊರತು… ಹೆಣ್ಣು ಎಂಬ ಪ್ರಜ್ಞೆಯನ್ನು ಅನುಕ್ಷಣವೂ ಎಚ್ಚರಿಡುವ ಅನಿವಾರ್ಯತೆಯೊಂದಿಗೆ ಈ ಒಂಟಿ ಪಯಣ…

 

3 Responses

  1. Yashaswini MV says:

    Reality

  2. ಶ್ರೀದೇವಿ ಕೆರೆಮನೆ says:

    ನಿಜ ಪ್ರತಿಭಾ. ಇಂತಹುದ್ದೊಂದು ಸೇಪ್ ಜೋನ್ ನೊಳಗೇ ನಾವು ಸ್ವತಂತ್ರರು ಎಂದು ಬೀಗುತ್ತೇವೆ. ನಾನು ಸಿನೇಮಾ ನೋಡುವುದಿಲ್ಲ. ಆದರೆ ಉಳಿದ ಕಾರ್ಯಕ್ರಮಗಳಿಗೆ ಹೋದಾಗ ಈ ಸಂಕಟ ಅನುಭವಿಸುತ್ತಿರುತ್ತೇನೆ. ಥ್ಯಾಂಕ್ಸ್ ಕಣೊ.. ನನ್ನದೇ ಮಾತನ್ನು ಬರೆದಿದ್ದಕ್ಕೆ…

  3. Narayana Pr says:

    Yes it’s fact.

Leave a Reply

%d bloggers like this: