fbpx

ಎಚ್.ಡಿ.ದೇವೇಗೌಡ ಅವರು ಸುಮ್ಮನಿರುವುದಿಲ್ಲ..

ರಾಷ್ಟ್ರ ರಾಜಕಾರಣಕ್ಕೆ ಕರ್ನಾಟಕದ ಮುನ್ನುಡಿಯೇ ?

ಚಿದಂಬರ ಬೈಕಂಪಾಡಿ

ರಾಜಕೀಯದಲ್ಲಿ ಏನೂ ನಡೆಯಬಹುದು ಎನ್ನುವುದಕ್ಕೆ ನಿನ್ನೆ ಅಧಿಕಾರ ಸ್ವೀಕರಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಾಕ್ಷಿ.

ಕರ್ನಾಟಕದ 24 ನೇ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ರಾಜಕೀಯಕ್ಕೆ ಹೊಸಬರೂ ಅಲ್ಲ ಅಥವಾ ಅನನುಭವಿಯೂ ಅಲ್ಲ. ರಾಜಕೀಯದ ಒಳ- ಹೊರವನ್ನು ಚೆನ್ನಾಗಿ ಅರಿತವರೇ ಆಗಿದ್ದಾರೆ. ಆದರೆ ನಾವು ನೋಡಬೇಕಾದ ಸಂಗತಿಯೇನೆಂದರೆ ಮುಖ್ಯಮಂತ್ರಿಯವರು ಅಧಿಕಾರ ಸ್ವೀಕರಿಸುವುದಕ್ಕೆ ಸಾಕ್ಷಿಯಾದವರು ಮತ್ತು ಅವರ ಉದ್ದೇಶ ಏನಿರಬಹುದು ಎನ್ನುವುದೇ ಕುತೂಹಲ.

ಕುಮಾರಸ್ವಾಮಿ ಅವರು ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಎಚ್.ಡಿ.ದೇವೇಗೌಡರು ತುಂಬಾ ಲವಲವಿಕೆಯಿಂದ ಇದ್ದರು, ಅದು ನಿಜವೂ ಹೌದು. ಆದರೆ ಅವರ ಲವಲವಿಕೆಯ ಹಿಂದೆ ಇದ್ದು ಕಾರಣ ಸರಳ. ದಕ್ಷಿಣ ಭಾರತದಲ್ಲಿ ‘ಕಾಂಗ್ರೆಸ್ ಮುಕ್ತ’ ಎನ್ನುವಂತೆ ಮಾಡುತ್ತೇನೆ ಅಥವಾ ಮಾಡಬೇಕು ಅಂದುಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಕನಸನ್ನು ಭಗ್ನ ಮಾಡಿದ್ದೇನೆ ಎನ್ನುವುದು ಒಂದು ಕಾರಣವಾದರೆ 2019ರ ಲೋಕಸಭಾ ಚುನಾವಣೆಗೆ ಇದು ಮುನ್ನುಡಿ ಎಂಬ ಸಂದೇಶ ರವಾನಿಸಿದ್ದು ಕೂಡಾ ಮಹತ್ವದ್ದು.

ನೀವು ಅಲ್ಲಿಗೆ ಬಂದಿದ್ದ ಘಟಾನುಘಟಿಗಳನ್ನು ಒಂದು ಕ್ಷಣ ನೋಡಿಕೊಳ್ಳಿ ಆಗ ನಿಮಗೇ ಅರ್ಥವಾಗುತ್ತದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಂಧ್ರಪ್ರದೇಶ ಚಂದ್ರಬಾಬು ನಾಯ್ಡು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ , ಪಾಂಡಿಚೇರಿ ಮುಖ್ಯ ಮಂತ್ರಿ ನಾರಾಯಣಸ್ವಾಮಿ, ಎನ್ ಸಿಪಿ ರಾಷ್ಟ್ರೀಯ ಅಧ್ಯಕ್ಷ ಶರದ್ ಪವಾರ್, ಜೆಡಿಯು ಅಧ್ಯಕ್ಷ ಶರದ್ ಯಾದವ್, ಬಿಎಸ್ ಪಿ ನಾಯಕಿ ಮಾಯಾವತಿ, ಉತ್ತರ ಪದ್ರೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್, ಜಾರ್ಖಂಡ್ ವಿಕಾಸ್ ಮೋರ್ಚಾದ ಬಾಬು ಲಾಲ್ ಮರಂಡಿ, ಸಿಪಿಐನ ಸೀತಾರಾಮ್ ಯೆಚೂರಿ, ರಾಷ್ಟ್ರೀಯ ಲೋಕದಳದ ಸಂಸ್ಥಾಪಕ ಅಜಿತ್ ಸಿಂಗ್, ಬಿಹಾರದ ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಮುಂತಾದವರು.

ಇಷ್ಟೂ ಜನ ಗಣ್ಯರು ಒಂದೇ ವೇದಿಕೆಯಲ್ಲಿ ಕುಳಿತು ಯಾವ ಸಂದೇಶ ರವಾನಿಸಿದರು ?.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವೆಲ್ಲರೂ ಒಗ್ಗಟು ಮತ್ತು ಸಹಬಾಳ್ವೆಯಲ್ಲಿದ್ದೇವೆ. ಇದರ್ಥ ಎಲ್ಲರೂ ಹೀಗೇ ಇರುತ್ತಾರೆ ಎಂದಲ್ಲ. ಆದರೆ ಒಬೊಬ್ಬರದೂ ಒಂದು ಕಡೆಮುಖ, ಆದರೂ ನಾವಿದ್ದೇವೆ ಎಂದರೆ ಇದು ನಗಣ್ಯವಲ್ಲಾ.
ಎಲ್ಲರೂ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಾರೆಂದು ಭಾವಿಸಬೇಡಿ. ಇವರು ಪ್ರಯೋಗಶೀಲ ವ್ಯವಸ್ಥೆಯನ್ನು ಖಂಡಿತಾ ಮಾಡುತ್ತಾರೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾಷಣದಲ್ಲಿ ‘ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಅಶ್ವಮೇಧ ಕುದುರೆ ಬಿಟ್ಟಿದ್ದೇವೆ ಎಂದಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ಜೊತೆ ಸೇರಿ ಕುದುರೆಯನ್ನು ಕಟ್ಟಿ ಹಾಕಿದ್ದೇವೆ’. ಈ ಮಾತನ್ನು ನೀವು ಹೇಗೆ ಬೇಕಾದರೂ ವ್ಯಾಖ್ಯಾನಿಸಬಹುದು. ಆದರೆ ಕುಮಾರಸ್ವಾಮಿಯವರು ಮುಂದಿನ ದಿನಗಳಲ್ಲಿ ನಾವೂ ಹೇಗಿರುತ್ತೇವೆ ಮತ್ತು ನಾವೆಲ್ಲರೂ (ಅಲ್ಲಿಗೆ ಬಂದಿದ್ದ ರಾಷ್ಟ್ರೀಯ ನಾಯಕರನ್ನು ಉದ್ದೇಶಿಸಿ) ಒಂದಾದರೆ ಮುಂದಿನ ಭವಿಷ್ಯ ಏನು ಎನ್ನುವುದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ.

‘ಅಶ್ವಮೇಧ ಕುದುರೆ’ ಈಗ ಕರ್ನಾಟಕದಲ್ಲಿ ನಿಂತಿದೆ. ಇದನ್ನು ಬಿಡಿಸಿಕೊಳ್ಳುವ ಸರದಿ ಬಿಜೆಪಿಗೆ. ಅದು ಮಾಡಿಸಿಕೊಳ್ಳಲು ಏನು ಮಾಡುತ್ತದೆ ಎನ್ನುವುದು ಕುತೂಹಲ. ಬಿ.ಎಸ್.ಯಡಿಯೂರಪ್ಪ ಅವರು ಕೈಕಟ್ಟಿ ಕೂರುವುದಿಲ್ಲ ಎನ್ನುವುದನ್ನು ಕುಮಾರಸ್ವಾಮಿಯವರಿಗೂ ಅರಿವಿದೆ. ಇದಕ್ಕೆ ಬೇಕಾದ ಕಾರ್ಯಸೂಚಿಯನ್ನು ಹೊಂದಿದ್ದಾರೆ. ಅದನ್ನು ಮುಂದಿನ ದಿನಗಳಲ್ಲಿ ಒಂದೊಂದಾಗಿ ಬಿಡುತ್ತಾರೆ ಕೂಡಾ.

ರಾಷ್ಟ್ರೀಯ ನಾಯಕರು ಕೂಡಾ ಈ ಘಟನೆಯನ್ನು ಗಮನಿಸಿ ಕಾರ್ಯೋನ್ಮುಖವಾಗಬೇಕು ಎನ್ನುವುದು ಕುಮಾರಸ್ವಾಮಿಯವರ ತುಡಿತವೂ ಆಗಿದೆ. ಕಾಂಗ್ರೆಸ್ ಪಕ್ಷ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಆದ್ದರಿಂದ ಆ ಪಕ್ಷಕ್ಕೆ ಹೆಚ್ಚಿನ ಜವಾಬ್ದಾರಿ ಇರಬೇಕಾಗುತ್ತದೆ. ಉಳಿದವು ಪ್ರಾದೇಶಿಕ ಪಕ್ಷಗಳು, ಈ ಪಕ್ಷಗಳ ಅಗತ್ಯ ಮತ್ತು ಔಚಿತ್ಯವೇ ಬೇರೆ. ಆದರೆ ಇವುಗಳು ಒಟ್ಟಾಗಿ ಬಿಜೆಪಿಯನ್ನು ಎದುರಿಸಬೇಕಾದರೆ ಏನು ಮಾಡಬೇಕು ಎನ್ನುವುದನ್ನು ತಿಳಿಯುವ ಅಗತ್ಯವಿದೆ.

ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಹಿಡಿತವನ್ನು ಬಿಟ್ಟುಕೊಡಲು ಬಯಸುವುದಿಲ್ಲ. ಅದು ಇದ್ದಹಾಗೆಯೇ ಇರಲೂ ಬಯಸುವುದಿಲ್ಲ. ಪ್ರಾದೇಶಿಕ ಪಕ್ಷಗಳ ಗುಣಧರ್ಮವನ್ನು ಚೆನ್ನಾಗಿ ಬಲ್ಲ ಎಚ್.ಡಿ.ದೇವೇಗೌಡ ಅವರು ಸುಮ್ಮನಿರುವುದಿಲ್ಲ. ಹಾಗಾದರೆ ಬಿಜೆಪಿಯನ್ನು ಕಟ್ಟಿಹಾಕುವುದು ಹೇಗೆ ಎನ್ನುವ ಲೆಕ್ಕಾಚಾರವನ್ನು ಮಾಡಲಿದ್ದಾರೆ ಮತ್ತು ಅವರಿಗೆ ಈಗಾಗಲೇ ಲೆಕ್ಕಾಚಾರವಿದೆ.

ಕೂಡಿಕಳೆದು ಸರಿಯೆಂದುಕೊಂಡಿರುವ ದೇವೇಗೌಡರು ಗುಟ್ಟು ಬಿಡುವುದಿಲ್ಲ. ಯಾಕೆಂದರೆ ರಾಮಕೃಷ್ಣ ಹೆಗಡೆ ಅವರಿಗೆ ಗುಟ್ಟುಬಿಟ್ಟ ಕಾರಣವೇ ತಾವು ಮುಖ್ಯಮಂತ್ರಿಯಾಗಲು ಬಹಳ ವರ್ಷ ಕಾಯಬೇಕಾಯಿತು ಎನ್ನುವ ಅರಿವಿದೆ.

ಈ ಎಲ್ಲಾ ವರ್ತಮಾನಗಳನ್ನು ಅವಲೋಕಿಸಿದಾಗ ಕರ್ನಾಟಕವನ್ನು ಕಾದುನೋಡಿ ಎನ್ನುವ ಸಂದೇಶ ಈಗ ಗೋಚರಿಸುತ್ತದೆ. ಈ ಸಮ್ಮಿಶ್ರ ಸರ್ಕಾರ ಹೇಗೆ ನಡೆಯುತ್ತದೆ ಎನ್ನುವುದನ್ನು ನೋಡಬೇಕಾಗುತ್ತದೆ. ಈ ನೋಡುವಿಕೆಯೂ ಕೂಡಾ ತುಂಬಾ ಕುತೂಹಲ. ಈ ಕುತೂಹಲವನ್ನು ನೀವು ನೋಡುತ್ತಿರಿ ಎನ್ನುವುದಷ್ಟೇ ಈಗಿನ ಉತ್ತರ.

Leave a Reply