fbpx

ಪ್ರೊ ಸಿಎನ್ನಾರ್ ಲೇಖನ: ನಂಗ್ಯಾಕೋ ಡೌಟು.

 

ನಂಗ್ಯಾಕೋ ಡೌಟು

ಕರ್ನಾಟಕದ ಚುನಾವಣೋತ್ತರ ಬೆಳವಣಿಗೆಗಳನ್ನು ವಿಶ್ಲೇಷಿಸಿರುವ ಪತ್ರಿಕಾ ಲೇಖನಗಳಲ್ಲಿ ಹಾಗೂ ವಿವಿಧ ವಾಹಿನಿಗಳ ಚರ್ಚೆಗಳಲ್ಲಿ ಹೆಚ್ಚಿನವು ಈ ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಲು ಅಸಮರ್ಥವಾದುದನ್ನು ‘ಇದು ದೆಹಲಿ ಪ್ರಭುಗಳಿಗೆ ಆದ ಮುಖಭಂಗ,’ ‘ಮೋದಿ-ಅಮಿತ್ ಷಾ ಅವರ ಅಶ್ವಮೇಧದ ಕುದುರೆಯನ್ನು ಕರ್ನಾಟಕದ ಜನರು ಕಟ್ಟಿಹಾಕಿ ಅದರ ನಾಗಾಲೋಟವನ್ನು ತಡೆದಿದ್ದಾರೆ,’ ಎಂದೆಲ್ಲಾ ವಿಶ್ಲೇಷಿಸಿದ್ದಾರೆ.

ಹೌದೆ? ಆಧುನಿಕ ಚಾಣಕ್ಯನ ತಂತ್ರಗಾರಿಕೆ ಇಷ್ಟು ಸುಲಭವಾಗಿ ಸೋಲುತ್ತದೆಯೆ? ನಂಗ್ಯಾಕೋ ಡೌಟು.

‘ಚಾಣಕ್ಯ’ ಪದವನ್ನು ಇಲ್ಲಿ ನಾನು ಉದ್ದೇಶಪೂರ್ವಕವಾಗಿ ಬಳಸಿದ್ದೇನೆ. ವಿಶಾಖದತ್ತನ “ಮುದ್ರಾ ರಾಕ್ಷಸ,” ಕೆಂಪುನಾರಾಯಣನ “ಮುದ್ರಾ ಮಂಜೂಷ,” ಇತ್ಯಾದಿ ಕೃತಿಗಳಲ್ಲಿ ಬರುವ ಅತಿ ಮುಖ್ಯವಾದ ಘಟನೆಯೆಂದರೆ ಚಂದ್ರಗುಪ್ತ-ಚಾಣಕ್ಯ ಕಲಹ.

ಈ ಕಲಹದಲ್ಲಿ ಚಂದ್ರಗುಪ್ತನು ಮೊದಲನೆಯ ಬಾರಿಗೆ ಚಾಣಕ್ಯನನ್ನು ಎಲ್ಲರೆದುರಿಗೆ ಧಿಕ್ಕರಿಸುತ್ತಾನೆ ಮತ್ತು ಅವನನ್ನು ನಿಂದಿಸುತ್ತಾ ಚಾಣಕ್ಯನು ಹೊರಗೆ ಹೋಗುತ್ತಾನೆ. ಸಭಿಕರೆಲ್ಲರೂ ‘ಇದು ಚಾಣಕ್ಯನ ಸೋಲು,’ ‘ಇಂದಿಗೆ ರಾಜ್ಯದ ಮೇಲಿದ್ದ ಚಾಣಕ್ಯನ ಹಿಡಿತ ತಪ್ಪಿತು’ ಎಂದೆಲ್ಲಾ ಭಾವಿಸುತ್ತಾರೆ. ಆದರೆ ಈ ನಾಟಕ/ಕಥನವು ಮುಂದುವರೆದಂತೆ, ಇದು ಕಪಟ ಕಲಹ; ಅಮಾತ್ಯ ರಾಕ್ಷಸನನ್ನು ಚಂದ್ರಗುಪ್ತನ ಪರವಾಗಿರುವಂತೆ ಮಾಡಲು ಚಾಣಕ್ಯನು ಯೋಜಿಸಿದ ತಂತ್ರಗಾರಿಕೆ ಎಂದು ಅರ್ಥವಾಗುತ್ತದೆ.

ಚುನಾವಣೆಯಲ್ಲಿ ಬಿಜೆಪಿಗೆ ಗೆಲವು ದೊರಕದೇ ಇದ್ದುದು, ಪ್ರಾಯಃ, ಅನಿರೀಕ್ಷಿತ; ಆದರೆ, ನನ್ನ ದೃಷ್ಟಿಯಲ್ಲಿ, ಫಲಿತಾಂಶವು ಹೊರಬಿದ್ದ ನಂತರ ನಡೆದ ಎಲ್ಲಾ ಬೆಳವಣಿಗೆಗಳೂ ನಿರೀಕ್ಷಿತವೆ.

ಇಲ್ಲದಿದ್ದರೆ, ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಕೊಡುವ ಮೊದಲೇ –ಅದೂ ಬೆಳಿಗ್ಗೆ 10.30 ಕ್ಕೇ ಸುಪ್ರೀಂ ಕೋರ್ಟ್ ಚರ್ಚೆಯನ್ನು ಮುಂದುವರೆಸುತ್ತದೆ ಎಂಬುದು ಗೊತ್ತಿದ್ದರೂ –ತುಂಬಾ ಆತುರದಿಂದ ಪ್ರಮಾಣವಚನ ಸ್ವೀಕಾರಕ್ಕೆ ಯಡಿಯೂರಪ್ಪನವರಿಗೆ ಹಸಿರು ನಿಶಾನೆ ದೆಹಲಿಯಿಂದ ದೊರಕುತ್ತಿರಲಿಲ್ಲ.

ಅನಂತರ, ವಿಶ್ವಾಸಮತ ಯಾಚನೆಯಲ್ಲಿ ಯಡಿಯೂರಪ್ಪನವರು ಸೋಲುವಂತೆ ಕಂಡಾಗ ಆ ಪರೀಕ್ಷೆಗೇ ಹೋಗದೆ ಅತ್ಯಂತ ಭಾವುಕ ಭಾಷಣ ಮಾಡಿ ರಾಜೀನಾಮೆ ಕೊಟ್ಟುದೂ ದೆಹಲಿಯ ಪ್ರಭುಗಳು ಯೋಜಿಸಿದ ತಂತ್ರಗಾರಿಕೆಯ ಭಾಗ ಎಂದು ನನಗನಿಸುತ್ತದೆ.

ಎಂದರೆ, ಆ ಚುನಾವಣೋತ್ತರ ಬೆಳವಣಿಗೆಗಳನ್ನು ಮಾನ್ಯ ಮೋದಿ-ಅಮಿತ್ ಷಾ ಹೀಗೆ ವಿಶ್ಲೇಷಿಸಿರಬಹುದು: ಅಧಿಕಾರವನ್ನು ಪಡೆದು ಯಡಿಯೂರಪ್ಪನವರೇ ವಿಶ್ವಾಸಮತ ಗಳಿಸುವಲ್ಲಿ ಸಫಲರಾದರೆ 23ನೆಯ ರಾಜ್ಯವಾಗಿ ಕರ್ನಾಟಕವೂ ಬಿಜೆಪಿ ಅಧಿಕಾರವಲಯಕ್ಕೆ ಬರುತ್ತದೆ; ಸೋತರೆ ‘ಜನಾದೇಶವಿದ್ದರೂ ವಿರೋಧ ಪಕ್ಷಗಳ ಕುತಂತ್ರದಿಂದ ಬಿಜೆಪಿ ಸೋಲಬೇಕಾಯಿತು, ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ’ ಎಂದು ಇಡೀ ವರ್ಷದುದ್ದಕ್ಕೂ ಹೇಳುತ್ತಾ ಮುಂದಿನ ವರ್ಷ ಆಗುವ ಮಹಾ ಚುನಾವಣೆಯ ಸಂದರ್ಭದಲ್ಲಿ ಆ ಘಟನೆಯನ್ನು ತಮ್ಮ ಟ್ರಂಪ್ ಕಾರ್ಡ್‍ನಂತೆ ಉಪಯೋಗಿಸಬಹುದು.

(ಹಾಗೆಯೇ, 75 ವರ್ಷಗಳಾದ ನಂತರ ಯಾವ ವ್ಯಕ್ತಿಗೂ ಅಧಿಕಾರವನ್ನು ಕೊಡುವುದಿಲ್ಲ ಎಂಬ ನಿಲುವನ್ನೂ ಸುಲಭವಾಗಿ ನಿಭಾಯಿಸಬಹುದು.)

ಅರ್ಥಾತ್, ಚುನಾವಣೆಯ ನಂತರ, ದೆಹಲಿ ಪ್ರಭುಗಳಿಗೆ ಕರ್ನಾಟಕದಲ್ಲಿ ಅಧಿಕಾರವನ್ನು ಪಡೆಯುವುದಕ್ಕಿಂತ ಹೆಚ್ಚಾಗಿ (ವಾಜಪೇಯಿ ಅವರು ಸಮಾನ ಸಂದರ್ಭದಲ್ಲಿ ಮಾಡಿದ ಭಾಷಣವನ್ನು ನೆನಪಿಗೆ ತರುವ) ಯಡಿಯೂರಪ್ಪನವರ ‘ಭಾವುಕ ವಿದಾಯ ಭಾಷಣ’ ಮುಖ್ಯವಾಗಿತ್ತು ಮತ್ತು ಆ ಮೂಲಕ ಮುಂದಿನ ಮಹಾ ಚುನಾವಣೆಗೆ ತಮ್ಮ ಕಾರ್ಯಕ್ಷೇತ್ರವನ್ನು ಹಸನುಗೊಳಿಸುವುದು ಮುಖ್ಯವಾಗಿತ್ತು ಎಂದು ಕಾಣುತ್ತದೆ.

ಪ್ರಾಯಃ ಈ ತಂತ್ರಗಾರಿಕೆಯಲ್ಲಿ ಮೂರ್ನಾಲ್ಕು ತಿಂಗಳುಗಳ ಕಾಲ ಇಡೀ ಕರ್ನಾಟಕವನ್ನು ಸುತ್ತಿ ಬಳಲಿದ ಹಾಗೂ ಅಧಿಕಾರಕ್ಕೆ ಬರುವ ತಮ್ಮ ಕೊನೆಯ ಅವಕಾಶವನ್ನು ಕಳೆದುಕೊಂಡ ಯಡಿಯೂರಪ್ಪನವರು ‘ಬಲಿಪಶು’ವಾದರು ಎಂದು ಹೇಳಬಹುದೆ? ನಂಗ್ಯಾಕೋ ಡೌಟು.

1 Response

  1. Kiran says:

    Very good analysis sir, I guess Modi/Shah had a two pronged plan, (A) If BJP gets simple majority no issues, make Yedyurappa CM until next big election and then change him for a younger one (B) If BJP falls short of majority portray them as victims and come back stronger as the coalition between Cong+JDS is bound to end in a disaster..

Leave a Reply

%d bloggers like this: