fbpx

ಮುಂದಿನ ಪ್ರಧಾನಿ ನಾನೇ ಎಂದು ಹೇಳುವ ರಾಹುಲ್ ಗಾಂಧಿ

ತ್ಯಾಗದ ‘ಮಾದರಿ ರಾಜಕಾರಣ’ವೇ ‘ಮಹಾಮೈತ್ರಿ’ ಯಶಸ್ಸು!

ಕರ್ನಾಟಕದ ವಿಧಾನಸೌಧದ ಮೆಟ್ಟಿಲುಗಳು ಒಂದು ಐತಿಹಾಸಿಕ ರಾಜಕೀಯ ಮನ್ವಂತರಕ್ಕೆ ಸಾಕ್ಷಿಯಾಯಿತು.

ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರದ ಪ್ರಮಾಣ ವಚನ ಸಮಾರಂಭ ಭವಿಷ್ಯದಲ್ಲಿ ರಾಷ್ಟ್ರ ರಾಜಕಾರಣ ಸ್ವರೂಪದ ಪೀಠಿಕೆಯಂತೆ ಕಾಣುತ್ತಿತ್ತು.

ಕಾಂಗ್ರೆಸ್, ಬಿಎಸ್ಪಿ, ಸಮಾಜವಾದಿ ಪಕ್ಷ, ಎಡಪಕ್ಷಗಳು, ಆಮ್ ಆದ್ಮಿ, ಎನ್ ಸಿ ಪಿ, ಆರ್‌ಜೆಡಿ, ತೃಣಮೂಲ ಕಾಂಗ್ರೆಸ್, ಕಮಲ್ ಹಾಸನ್ ಸೇರಿದಂತೆ ೧೦ಕ್ಕೂ ಹೆಚ್ಚಿನ ಪ್ರಾದೇಶಿಕ ಪಕ್ಷಗಳ ೩೦ಕ್ಕೂ ಹೆಚ್ಚಿನ ನಾಯಕರುಗಳು ಕೈ ಕೈ ಹಿಡಿದುಕೊಂಡು ಒಗ್ಗಟ್ಟಿನ ಸಂಕೇತವನ್ನು ಮತ್ತು  ಎದುರಾಳಿಯ ವಿರುದ್ಧದ ಹೋರಾಟಕ್ಕೆ ಪಣತೊಟ್ಟ ಸಂದೇಶವನ್ನು ಸಾರಿದರು.

ಈ ದೇಶದ ರಾಜಕೀಯ ಅಧಿಕಾರ ಸೂತ್ರ ಹಿಡಿದವರು ಸರ್ವಾಧಿಕಾರ ಧೋರಣೆ, ರಾಜಕೀಯ ಚಕ್ರಾಧಿಪತ್ಯ ಸಾಧನೆಯ ಜೈತ್ರಯಾತ್ರೆ ಹೊರಟಾಗಲೆಲ್ಲಾ ಜನಸಂಗ್ರಾಮಗಳು ನಡೆದು  ಮಗ್ಗಲು ಮುರಿದದ್ದು ಇತಿಹಾಸ.

೧೯೭೫ರಲ್ಲಿ ಶ್ರೀಮತಿ ಇಂದಿರಾಗಾಂಧಿ ಅವರ ವಿರುದ್ಧ ನಡೆದ ಜಯಪ್ರಕಾಶ್ ನಾರಾಯಣ ಅವರ ‘ನವನಿರ್ಮಾಣ’ ಚಳವಳಿಯ ಪರಿಣಾಮ ಕಾಂಗ್ರೆಸೇತರ ರಾಜಕೀಯ ಶಕ್ತಿಗಳ ಒಗ್ಗೂಡುವಿಕೆಗೆ  ಕಾರಣವಾಯಿತು.ಇದು ಹೆಚ್ಚು ದಿನ ಉಳಿಯಲಿಲ್ಲ. ಜೆಪಿ ಚಳವಳಿಯ ಭಾಗವಾಗಿದ್ದ ಜನಸಂಘ, ಜನತಾಪಕ್ಷ ಸಿಡಿದು ಚೂರು ಚೂರಾದವು. ನಾಯಕರ ಸ್ವಪ್ರತಿಷ್ಠೆ, ಅಧಿಕಾರದಾಸೆಗಳು ದೇಶದ ಪರ್ಯಾಯ ರಾಜಕಾರಣವನ್ನೇ ನೆಲಕಚ್ಚಿಸಿದ್ದು ನಮ್ಮ ಕಣ್ಣಮುಂದೆ ಇದೆ.

ಈ ಕಾರಣಗಳಿಂದಲೇ ವಿಧಾನ ಸೌಧದ ಮೆಟ್ಟಿಲುಗಳ ಮೇಲೆ ನಡೆದ ಮಹಾಮೈತ್ರಿಯನ್ನು ಗುಮಾನಿಯಿಂದ ನೋಡಬೇಕಾಗಿದೆ. ವಿ ಪಿ ಸಿಂಗ್, ಚಂದ್ರಶೇಖರ್, ಎಚ್‌ ಡಿ ದೇವೇಗೌಡ, ಇಂದ್ರಕುಮಾರ್ ಗುಜ್ರಾಲ್ ಅವರು ಇಂತಹ ಒಕ್ಕೂಟಗಳ ನೆರಳಿನಲ್ಲೇ ಪ್ರಧಾನಿಯಾಗಿ ಆಡಳಿತ ನಡೆಸಿದವರು. ಆದರೆ  ರಂಗದೊಳಗಿನ ನಾಯಕರ ಸ್ವಪ್ರತಿಷ್ಠೆ, ಅಧಿಕಾರದಾಸೆಗಳು ಪರ್ಯಾಯ ರಾಜಕಾರಣವನ್ನು ಭದ್ರವಾಗಿ ಉಳಿಸಿಕೊಳ್ಳುವಲ್ಲಿ ಸಾಧ್ಯವಾಗಲಿಲ್ಲ.

ದೇಶದಲ್ಲಿ ೧೯೯೯ ರಿಂದ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಎನ್ ಡಿ ಎ ಮತ್ತು ಯುಪಿಎ ಎಂಬ  ಒಕ್ಕೂಟ ರಚನೆಯೊಂದಿಗೆ ಮುಖಾಮುಖಿಯಾಗುತ್ತಾ ಬಂದಿವೆ. ಇದು ತೃತೀಯ ರಂಗ ಎಂಬ ಮೂರನೇ ರಾಜಕೀಯ ಶಕ್ತಿಯನ್ನು  ಹತ್ತಿಕ್ಕುವ ರಾಜಕೀಯವೂ ಆಗಿತ್ತು.

೨೦೧೪ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ೨೮೨ ಸೀಟುಗಳ ಸ್ಪಷ್ಟ ಬಹುಮತವನ್ನು ಗೆದ್ದುಕೊಂಡರು ಎನ್.ಡಿಎ ಅಸ್ತಿತ್ವವನ್ನು ಬಿಟ್ಟುಕೊಡಲಿಲ್ಲ. ಇದೀಗ ನರೇಂದ್ರ ಮೋದಿ ಕೇಂದ್ರಿಕೃತ ಆಡಳಿತದ ಹವಾದಲ್ಲಿ ಎನ್‌ಡಿಎ ಮಿತ್ರಪಕ್ಷಗಳು ತೂರಿ ಹೋಗಿವೆ.

ಈ ಕಾರಣದಿಂದಲೆ ತೆಲುಗು ದೇಶಂನ ಚಂದ್ರಬಾಬು ನಾಯ್ಡು ಎಚ್ಚೆತ್ತುಕೊಂಡು ಹೊರ ನಡೆದಿದ್ದರೆ, ಶಿವಸೇನೆ ಇದ್ದೂ ಇಲ್ಲದಂತೆ ಯಾವುದೇ ಕ್ಷಣದಲ್ಲೂ ಹೊರಬರುವ ಯೋಚನೆಯಲ್ಲಿದೆ. ೨೦೧೯ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರನ್ನು ಕಟ್ಟಿಹಾಕಲು ಮಹಾಮೈತ್ರಿಗೆ ಕಾಲ ಸನ್ನಿಹಿತವಾಗಿದೆ. ದೇಶದ ಬಹುತೇಕ ಪ್ರಾದೇಶಿಕ ಪಕ್ಷಗಳು ಕೈಜೋಡಿಸಿವೆ. ಆದರೆ ಇದು ಕಡೆಗೋಲು ತಿರುವಿನಲ್ಲಿ ತೇಲುವ ಬೆಣ್ಣೆಯಂತಾದರೆ ಶತೃಪಾಳೆಯದ ಕಾವಿಗೆ ಯಾವುದೇ ಕ್ಷಣ ಕರಗಿಬಿಡಬಹುದು. ಈ ಬಗ್ಗೆ ಎಚ್ಚರವಿರಬೇಕು.

ಮಹಾಮೈತ್ರಿ ಯಲ್ಲಿ ಘಟಾನುಘಟಿ ನಾಯಕರುಗಳೇ ಇದ್ದಾರೆ. ಮಾಯಾವತಿ, ಮಮತಾಬ್ಯಾನರ್ಜಿ, ಚಂದ್ರಬಾಬು ನಾಯ್ಡು, ಮುಲಾಯಂ ಸಿಂಗ್ ಯಾದವ್, ಫಾರೂಕ್ ಅಬ್ದುಲ್ಲಾ, ತೆಲಂಗಾಣ ರೂವಾರಿ ಚಂದ್ರಶೇಖರ್‌ ಅವರೆಲ್ಲಾ ರಾಜ್ಯರಾಜಕಾರಣದಲ್ಲಿ ಮಾಗಿ ರಾಷ್ಟ್ರ ರಾಜಕಾರಣದ ಗದ್ದುಗೆಯ ಮೇಲೆ ಕಣ್ಣಿಟ್ಟವರೆ. ಈ ಹಿಂದೆಯೇ ಯುಪಿಎ ಅದಕ್ಕೂ ಮುಂಚೆ ತೃತೀಯ ರಂಗಗಳಲ್ಲಿ ಈ ಹೆಸರುಗಳು ಪ್ರಧಾನಿ ಹುದ್ದೆಗೆ ತೇಲಿ ಬಂದಿದ್ದವು. ೨೦೧೪ ಚುನಾವಣಾ ಸಂದರ್ಭದಲ್ಲಿ ಮಾಯಾವತಿ ಅವರ ಹೆಸರು ಪ್ರಧಾನಿ ಪಟ್ಟದ ಸುತ್ತ  ತಿರುಗುತ್ತಿತ್ತು. ಎರಡನೇ ಅವಧಿಯ ಯುಪಿಎ ಆಡಳಿತ ಹಿಡಿದಾಗ ಮಮತಾ ಬ್ಯಾನರ್ಜಿ ಅವರ ಹೆಸರೂ ಪ್ರಬಲವಾಗಿ ಕೇಳಿ ಬಂದಿತ್ತು.

ಈಗಿನ ಮಹಾಮೈತ್ರಿ, ಅಥವಾ ಫೆಡರಲ್ ಫ್ರೆಂಟ್‌ನ ಮುಂಚೂಣಿಯಲ್ಲಿ ನಿಂತಿರುವ ಎಚ್.ಡಿ ದೇವೇಗೌಡರೇ ಮತ್ತೊಮ್ಮೆ ಕೆಂಪು ಕೋಟೆಯತ್ತ ನೋಡುತ್ತಿದ್ದಾರೆ. ಮೋದಿ ಎಂಬ ವೈರಿಯ ವಿರುದ್ಧ ಹೋರಾಡಲು ಈ ಮಹಾಮೈತ್ರಿಯ ನಾಯಕರಿಗೆ ಈಗ  ಬೇಕಾಗಿರುವುದು ‘ಆತ್ಮ ವಿಶ್ವಾಸ’ ಮತ್ತು ‘ತ್ಯಾಗ’.

೨೦೦೪ ರಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಸೋನಿಯಾಗಾಂಧಿ ಅವರಿಗೆ ಪ್ರಧಾನಿಯಾಗುವ ಅವಕಾಶ ರತ್ನಖಚಿತ ತಟ್ಟೆಯಲ್ಲಿಟ್ಟುಕೊಟ್ಟಂತೆ ಅವರ ಮುಂದೆ ಬಂದು ನಿಂತಿತ್ತು. ಬಿಜೆಪಿ ಸೋನಿಯಾಗಾಂಧಿ ಅವರನ್ನು ವಿದೇಶಿ, ಅನನುಭವಿ ,ವಂಶರಾಜಕಾರಣದ ತಳಿ ಎಂದೆಲ್ಲಾ ಜರಿದರೂ ಜನತೆ ಸೋನಿಯಾ ಅವರ ನಾಯಕತ್ವವನ್ನು ಮೆಚ್ಚಿತ್ತು.

ಆದರೆ ಸೋನಿಯಾಗಾಂಧಿ ಅವರು ಪ್ರಧಾನಿ ಪಟ್ಟವನ್ನು ನಿರ್ಮೋಹಕವಾಗಿ ತಳ್ಳಿ ರಾಜಕೀಯ ವಿಮರ್ಶಕರ, ಎದುರಾಳಿಗಳಿಗೆ ನಿಲುಕದಷ್ಟು ಎತ್ತರಕ್ಕೆ ಬೆಳೆದು ನಿಂತರು. ಈ ದೇಶಕ್ಕೆ ಬಲಿದಾನಗೈದ ಕುಟುಂಬದ  ಹೆಣ್ಣುಮಗಳು ಎರಡು ಬಾರಿ ಜನರೆ ತಂದುಕೊಟ್ಟ ಪ್ರಧಾನಿ ಪಟ್ಟವನ್ನು ಗೌರವದಿಂದ ನಿರಾಕರಿಸಿದ ತ್ಯಾಗ ‘ಮಾದರಿ ರಾಜಕಾರಣ’
ದ ಹೆಗ್ಗುರುತು.

ಕರ್ನಾಟಕದ ವಿಧಾನ ಸಭಾ ಚುನಾವಣಾ ಸಂದರ್ಭದಲ್ಲಿ ರಾಹುಲ್ ಗಾಂಧಿ ಮುಂದಿನ ಪ್ರಧಾನಿ ನಾನೇ ಎಂದು ಹೇಳುವ ಮೂಲಕ ತನ್ನ ತಾಯಿಯ ‘ಮಾದರಿ ರಾಜಕಾರಣ’ ವನ್ನು ನುಚ್ಚುನೂರು ಮಾಡುವಷ್ಟರ ಮಟ್ಟಿಗೆ ತಮ್ಮ ಅಪ್ರಬುದ್ಧತೆಯನ್ನು ತೋರಿಕೊಂಡದ್ದು ಮಾತ್ರ ವಿಪರ್ಯಾಸ.  ದೇಶದಲ್ಲಿ ಫೆಡರಲ್ ಫ್ರಂಟ್ ಗಾಗಿ ಕೈ ಕೈ ಗಳು ಜೋಡಿಸುತ್ತಿರುವಾಗ ರಾಹುಲ್ ಗಾಂಧಿ ಪ್ರಧಾನಿ ಹುದ್ದೆಯ ಮೋಹ ವ್ಯಕ್ತಪಡಿಸಿದ್ದು ಆತುರವೇ ಸರಿ.

ಬಹುಶಃ ಇದು ಈ ಮಹಾಮೈತ್ರಿಗೆ ಒಡಕಿನ ಕಂಡಿಯೂ ಆಗಬಹುದು. ಇಲ್ಲವೇ ಆ ಮೈತ್ರಿ ಎಂಬುದು ಘನಗೊಳ್ಳುವ ಮುಂಚೆಯೇ ಗರ್ಭಪಾತಕ್ಕಿಡಾಗಿ ಬಿಡುಬಹುದು. ರಾಹುಲ್ ಗಾಂಧಿ ತಾನಿನ್ನೂ ರಾಜಕೀಯವಾಗಿ ಚಿಕ್ಕವನು ಎನ್ನುವುದನ್ನು ಪ್ರದರ್ಶಿಸಬೇಕಿತ್ತು. ಇಂತಹ ಸಂದರ್ಭದಲ್ಲಿ ಮೌನಕ್ಕೆ ಬಂಗಾರದ ಬೆಲೆ ಖಂಡಿತ ಸಿಗುತ್ತದೆ. ಒಂದು ಪಕ್ಷ ಅವರ ಬಯಕೆ ಈಡೇರಬೇಕು ಎಂದರೆ ಅದು ಚುನಾವಣೆಯ ಫಲಿತಾಂಶದ ನಂತರ.

ಕಾಂಗ್ರೆಸ್‌ಗೆ ಅಂತಹ ಬೆಂಬಲ ವ್ಯಕ್ತವಾದರೆ ಅವರನ್ನು ಬಿಟ್ಟು ಇನ್ಯಾರು ಆಗಲು ಸಾಧ್ಯ. ಯಾರನ್ನೇ ಆದರೂ ರಾಹುಲ್‌ ಗಾಂಧಿ ಅವರೇ ಅಂಕಿತ ಹಾಕಿ ಅನುಮೋದಿಸಬೇಕು. ಪಕ್ಷದಲ್ಲಿ ಅಂತಹ ಸುಪ್ರೀಂ ಪವರ್‌ ಇಟ್ಟುಕೊಂಡು ಆತುರ ತರವಲ್ಲ ಎನ್ನುವುದು ಅವರು ಮಾತ್ರ ಅಲ್ಲ ಒಕ್ಕೂಟದ ಎಲ್ಲರೂ ಅರಿಯಬೇಕು. ಮೊದಲ ಆದ್ಯತೆ ತಮ್ಮ ಚುನಾವಣಾ ಹೋರಾಟ ಮತ ಗಳಿಕೆಯೇ ಹೊರತು ಪ್ರಧಾನಿ ಪೀಠ ಅಲ್ಲ.

ವೈರಿಯ ಹತ್ತು ಹಲವು ಲೋಪ ದೋಷಗಳತ್ತ ಕಣ್ಣು ನೆಟ್ಟು ಅವುಗಳನ್ನು ಸರಿಪಡಿಸುವ ಹೋರಾಟ ನಮ್ಮದು ಎನ್ನುವುದಕ್ಕೆ ರಚನಾತ್ಮಕ ನೀಲ ನಕ್ಷೆಯನ್ನು ತಯಾರಿಸುವುದು. ಮತ್ತೆ ಕುಮಾರ ಸ್ವಾಮಿ ಅವರ ಮುಖ್ಯಮಂತ್ರಿಯ ಪದಗ್ರಹಣದ ಕ್ಷಣ ನೋಡಿದರೆ ಅದೆಲ್ಲವೂ ಸಾಧ್ಯ ಎನ್ನುವುದು ವಿಧಿತವಾಗುತ್ತಿದೆ. ಆದರೆ ಮೈತ್ರಿ ಕೂಟದಲ್ಲಿ ಬೇಕಿರುವುದು ‘ತ್ಯಾಗ’ ಮತ್ತು ‘ಅವಿರತ ಹೋರಾಟ’.ಅದರೊಳಗೆ ಅಡಗಿದೆ ಮಹಾಮೈತ್ರಿಯ ಯಶಸ್ಸು.

6 Responses

 1. Prabhakar says:

  ಒಳ್ಳೆಯ ವಿಶ್ಲೇಷಣೆ. ‘ಮಹಾಘಟಬಂಧನ್’ ಎಂಬುದು ಅವಕಾಶವಾದಿ ರಾಜಕಾರಣ ಮಾತ್ರ. ಇಲ್ಲಿ ಭಿನ್ನ ಪಕ್ಷಗಳ ಜನಪರ ವೈಚಾರಿಕತೆಯ ಮೈತ್ರಿಯಾಗಬೇಕಿದೆ. ಬಿಜೆಪಿಯನ್ನು ಸೋಲಿಸುವುದೇ ಪರಮ ಧ್ಯೇಯ ಎಂಬ ನಕಾರಾತ್ಮಕ ರಾಜಕಾರಣಕ್ಕೆ ತಕ್ಷಣದ ಯಶಸ್ಸು ಸಿಕ್ಕರೂ, ಅದು ಬಹಳ ದಿನ ಬದುಕಲಾರದು. ಇದಕ್ಕೆ ಇಂಡಿಯಾದ ರಾಜಕೀಯ ಇತಿಹಾಸದಲ್ಲಿ ಬೇಕಾದಷ್ಟು ಉದಾಹರಣೆಗಳಿವೆ.

 2. Kiran says:

  There are many irregularities in this write-up..
  First, if Congress is part of this opportunistic alliance how can it be “third front”? it should be 2nd or 2.5 front 🙂
  Sonia didn’t sacrifice the PM position or anything, as some sycophants claim, there were some constitutional technical issues, like reciprocity using which her eligibility for the PM post could be challenged in courts, which is why she backed off, wisely!
  And, please for Gods’ sake don’t call Nehru family as “ಈ ದೇಶಕ್ಕೆ ಬಲಿದಾನಗೈದ ಕುಟುಂಬ”, their family has inflicted maximum damage to our country more than any one family can do to any nation on this planet, the less said about this the better..

 3. ಶ್ರೀರಂಗ ಯಲಹಂಕ says:

  ಮೈತ್ರಿ ಕೂಟದಲ್ಲಿ ಬೇಕಿರುವುದು ‘ತ್ಯಾಗ’ ಎಂಬ ಮಾತು ಸತ್ಯ. ತೃತೀಯರಂಗದವರು ಬೆಂಗಳೂರಿನ ವಿಧಾನಸೌಧದ ಮೆಟ್ಟಿಲುಗಳ ಮೇಲೆ ‘ಮಹಾಘಟಬಂಧ್’ನ ಸಂಕೇತವಾಗಿ ಕೈ ಕೈ ಹಿಡಿದುಕೊಂಡು ದಿಲ್ಲಿಗೆ ಸಂದೇಶ ರವಾನಿಸಿದರು ಎಂದು ಮಾಧ್ಯಮಗಳು ವರದಿ ಮಾಡಿದವು. ಅದೆಲ್ಲಾ ಸರಿಯೇ. ಈಗ ಆ ಮಹಾಬಂಧನದಲ್ಲಿ ತ್ಯಾಗಕ್ಕೆ ಸಿದ್ಧರಾಗಿರುವವರು ಯಾರು ಎಂಬುದು ಯಕ್ಷಪ್ರಶ್ನೆ.ಕಾಂಗ್ರೆಸ್ ಈಗ ಭಾರತದಲ್ಲಿ ಅಷ್ಟಿಷ್ಟು ( ಒಂದು ಕೇಂದ್ರ ಆಡಳಿತ, ಒಂದು ರಾಜ್ಯ ಮತ್ತು ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರದ ಭಾಗ)
  ಅಧಿಕಾರ ಉಳಿಸಿಕೊಂಡಿರುವವರು.ಆದರೂ ಅವರಿಗೆ ರಾಷ್ಟ್ರೀಯ ಪಕ್ಷ ಎಂಬ ಹೆಸರಿದೆ. ಅದನ್ನು ಮರೆಯಬಾರದು. ಅದರ ಅಧ್ಯಕ್ಷರು ರಾಹುಲ್ ಗಾಂಧಿ ಅವರು. ಇನ್ನು ಮುಖ್ಯ ಮಂತ್ರಿಗಳಾಗಿ ಈಗ ಹೆಸರು ಮಾಡಿರುವವರು ಟಿ.ಆರ್.ಎಸ್. ಚಂದ್ರಶೇಖರ್ ಮಮತಾ ಬ್ಯಾನರ್ಜಿ ಮತ್ತು ಚಂದ್ರ ಬಾಬು ನಾಯ್ಡು. ಉಳಿದವರು ಅಧಿಕಾರವಿಲ್ಲದವರು. (Continued)

 4. ಶ್ರೀರಂಗ ಯಲಹಂಕ says:

  ಈಗ ಅಧಿಕಾರವಿಲ್ಲದವರನ್ನು ಬಿಟ್ಟರೂ ಸಹ ಉಳಿದ . ಮೂವರಲ್ಲಿ ‘ದೇಶದ ಹಿತ ದೃಷ್ಟಿಯಿಂದ (?!)ಯಾರು ತ್ಯಾಗಕ್ಕೆ ಸಿದ್ಧರಾಗಿದ್ದಾರೆ? ಹೀಗಾಗಿ ಚುನಾವಣೆಗೆ ಮುಂಚೆಯೇ ಆ ಮಹಾಘಟಬಂಧನ ವಿಘಟನೆ ಆಗುತ್ತದೆ. ಒಂದು ವೇಳೆ ತ್ಯಾಗಕ್ಕೆ ಸಿಧ್ದರಾಗಿ ಒಬ್ಬರನ್ನು ಅದರ ನಾಯಕರನ್ನಾಗಿ ಅವರುಗಳು ಆರಿಸಿದರೆ ಅದು ಭಾರತದ ರಾಜಕೀಯದಲ್ಲಿ ಒಂದು ಮಹಾ ಆಶ್ಚರ್ಯ. ಆದರೆ ಬಿ.ಜೆ.ಪಿ. ಟೀಂ ನವರು ಕೈಕಟ್ಟಿ ಕುಳಿತು ಆ ಮಹಾ‌ನಾಟಕ ನೋಡುತ್ತಾ ಕುಳಿತಿರುತ್ತಾರೆಯೇ?

 5. ಶ್ರೀರಂಗ ಯಲಹಂಕ says:

  ಈಗ ತಾನೇ ಟಿವಿಯಲ್ಲಿ ಬಂದ ಸುದ್ದಿ. ಉತ್ತರ ಪ್ರದೇಶದಲ್ಲಿ ಮಾಯಾವತಿ ಪಕ್ಷವೊಂದೇ ಏಕಾಂಗಿಯಾಗಿ ಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತೀರ್ಮಾನಿಸಿದೆಯಂತೆ. So ಮಹಾಘಟಬಂಧನ್ ಮೈನಸ್ ಒಂದು. ಲೋಕಸಭಾ ಚುನಾವಣೆಗೆ ಇನ್ನೂ ಒಂದು ವರ್ಷವಿದೆ. ನೋಡೋಣ.ಬೆಂಗಳೂರಿನಲ್ಲಿ ತೆಗೆಸಿಕೋಂಡ ಫೋಟೋ ಬಿ.ಜೆ.ಪಿ. ವಿರುದ್ಧ ಮಾತ್ರವೇ ಅಥವಾ ತ್ಯಾಗದ ಸಂಕೇತವೆ? ನೋಡೋಣ. ಅಭೀ ಪಿಕ್ಚರ್ ಬಾಕಿ ಹೈ.

 6. Prakash says:

  kumaraswmayyavara maatannu keliddira samputa vistarane vicharavagi. Ravikumar swalpa dina kaleda mele ee ankana bareyabekittu. vastustitiya arivaguttittuu

Leave a Reply

%d bloggers like this: