fbpx

ಇಡೀ ಪುಸ್ತಕ ಥೇಟ್ ಕಚ್ಚಾ ಮಾಂಗೋ ಚಾಕಲೇಟ್ ತಿಂದಂತೆ..

“ತದಡಿಲಿ ಉಷ್ಣ ಸ್ಥಾವರ ಆಗ್ತದಂತೆ. ಹಂಗೇನಾದ್ರೂ ಆದ್ರೆ ಹಿರೇಗುತ್ತಿ, ತೊರ್ಕೆ, ಬೆಟ್ಕುಳಿ, ಗಜನಿ ಎಲ್ಲ ಹಾರೂಬೂದಿಯಿಂದ ತುಂಬ್ಕೊಳ್ತದಂತೆ.”

ಒಬ್ಬರ ಆತಂಕದ ಧ್ವನಿಯ ನಡುವೆಯೇ ಮತ್ತೊಬ್ಬರು ಹೇಳುತ್ತಿದ್ದರು

“ಬರೀ ಗಜನಿ ಅಷ್ಟೇ ಅಲ್ಲ ನಮ್ಮ ಮನೆ ಮೇಲೂ ಹಾರೂ ಬೂದಿ ಕವಚಿಕೊಳ್ತದೆ. ನಮ್ಮ ಮೀನಾಸಿಯ ಪಾತ್ರೆ ಮೇಲೂ ಬೂದಿ, ಹುರ್ಯುಕೆ ಹಾಕಿದ್ ಮೀನ್ ಮೇಲೂ ಅದೇ ಬೂದಿ, ಅದ್ನೆಲ್ಲ ಹೆಂಗ್ ತಿನ್ನೂದು?”

ಇದೆಲ್ಲಕ್ಕಿಂತ ಹೆಚ್ಚು ಭಯಾನಕ ಮಾತನ್ನು ಮತ್ತೊಬ್ಬರು ಹೇಳುತ್ತಿದ್ದರು.

“ಮೀನು…? ಅದೆಲ್ಲಿ ಇರ್ತದೋ ಮಾರಾಯಾ? ತದಡಿಲಿ ಉಷ್ಣಸ್ಥಾವರ ಆದ್ ಕೂಡ್ಲೆ ಅದರ ನೀರು ಅಘನಾಸ್ನಿಗೆ ಬಿಡೂರು. ಆ ಹಾಳ್ ಬಿದ್ದ ನೀರೀಂದ ಮೀನು ಉಳ್ಯುದೇ? ಸಮುದ್ರಾನೂ ಕುಲ್ಗೆಟ್ಟು ಹೋಗುದು. ಮತ್ತೆ ಮೀನ್ ಎಲ್ಲಿ ಸಿಕ್ಕೂದು? ಬೇಲೆಕೇರಿ ನೋಡ್ನೆಲ್ಲಾ? ಮ್ಯಾಂಗನೀಸ್ ಧೂಳಿಗೇ ಮೀನ್ ಎಲ್ಲ ಬುರ್ ನಾಸಾ ಆಗೋಗಿದು. ಇನ್ನು ಇಲ್ಲ ಆಗದೇ ಇರೂದೇ?”

ಹಿರೇಗುತ್ತಿಯ ಬಸ್ ಸ್ಟಾಪ್ ನ ಹತ್ತಿರ ಬ್ರಹ್ಮಜಟಕನ ಮನೆಯ ಎದುರು ನಿಂತ ಎಲ್ಲರ ಬಾಯಲ್ಲೂ ಇದೇ ಮಾತು. “ಏನೇ ಆಗ್ಲಿ, ಉಷ್ಣ ಸ್ಥಾವರ ಆಗೂಕೆ ಜೀಂವ ಹೋದ್ರೂ ಬಿಡ್ವಂಗಿಲ್ಲ.” ಬೆಟ್ಕುಳಿ, ನುಸಿಕೋಟೆ, ಹಿರೇಗುತ್ತಿ, ಎಣ್ಣೆಮಡ್ಡಿ, ಮಾದನಗೇರಿ, ಬಳಲೆ, ಹಿತ್ತಲಮಕ್ಕಿ, ದೇವರಬಾವಿ, ತೊರ್ಕೆ, ದೇವಣ, ಸಾಣಿಕಟ್ಟಾ ಅಷ್ಟೇಕೆ ನದಿಯ ಅತ್ತ ಕಡೆಯ ಊರುಗಳಾದ ಅಘನಾಶಿನಿ, ಬಾಡ, ಕಾಗಲ್ ಕಡೆಯಿಂದಲೂ ಜನ ಜಮಾಯಿಸಿದ್ದರು.

ಅದೇ ಹೊತ್ತಿಗೆ ಯಾರೋ ಎಲ್ಲಿಂದಲೋ ಸುದ್ದಿ ತಂದಿದ್ದರು.

ಉಷ್ಣಸ್ಥಾವರ ಬೇಡ ಎಂದು ಹೋರಾಟಕ್ಕೆ ಕುಳಿತ ಹಣಕೋಣದ ಜನರನ್ನು ಹೆಂಗಸರು ಮಕ್ಕಳು ಎಂದು ನೋಡದೇ ಪೋಲೀಸರು ತದುಕಿದ್ದರು. ಸೀರೆ ಎತ್ತಿ ತಮ್ಮ ನಿತಂಬವನ್ನು ಟಿ ವಿ ಚಾನಲ್ ಗಳಿಗೆ ತೋರಿಸುತ್ತಿದ್ದ ಹೆಂಗಳೆಯರ ಮುಖದಲ್ಲಿ ನಾಚಿಕೆಯಿರಲಿಲ್ಲ. ಆದರೆ ತಮ್ಮ ಮೇಲೆ ಆದ ದೌರ್ಜನ್ಯದ ಬಗ್ಗೆ ಅವಮಾನವಿತ್ತು. ಸ್ತ್ರೀ ಸಹಜ ಮುಜುಗರವಿರಲಿಲ್ಲ, ಬದಲಿಗೆ ಆಕ್ರೋಶವಿತ್ತು, ಅಸಹಾಯಕತೆಯೂ ಕಾಡುತ್ತಿತ್ತು.

ತಮ್ಮೂರಿಗೆ ಬೇಡ ಎಂದದ್ದನ್ನು, ತಾವೆಲ್ಲರೂ ತಿರಸ್ಕರಿಸಿದ್ದನ್ನು ತಮ್ಮ ಮೇಲೆ ಬಲವಂತವಾಗಿ ಹೇರುವ ಪ್ರಭುತ್ವದ ನೀತಿಯಿಂದಾಗಿ ಜನರು ರೋಸಿ ಹೋಗಿದ್ದರು. ಬೇಡ ಎಂದರೆ ಜೀವವನ್ನೇ ಕಸಿದುಕೊಳ್ಳುವ ರಾಕ್ಷಸೀತನಕ್ಕೆ ಜನ ದಿಗಿಲುಗೊಂಡಿದ್ದರು.

ಅಂತೂ ಉಷ್ಣ ಸ್ಥಾವರ ಎಂಬ ಬೂದಿ ದೆವ್ವ ಜಿಲ್ಲೆಯಿಂದ ಸಂಪೂರ್ಣ ಉಚ್ಛಾಟನೆಗೊಂಡಾಗ ಜನ ನೆಮ್ಮದಿಯ ಉಸಿರು ಬಿಟ್ಟಿದ್ದರು. ಆ ಸಂದರ್ಭದಲ್ಲಿ ನಾನೊಂದು ಕಥೆ ಬರೆದಿದ್ದೆ. ಜಿಲ್ಲೆಯ ಹೆಚ್ಚಿನ ಕವಿಗಳು, ಕಥೆಗಾರರು, ಲೇಖಕರು ತಮ್ಮ ಪ್ರಕಾರಗಳಲ್ಲಿ ಈ ಎಲ್ಲಾ ಘಟನೆಗಳನ್ನು ಹಿಡಿದಿಡಲು ಪ್ರಯತ್ನಿಸಿದ್ದರು.

ನಮ್ಮ ಸುತ್ತಲಿನ ಬದುಕಿಗೆ ತಲ್ಲಣಗಳಿಗೆ ಸ್ಪಂದಿಸದೇ ಹೋದರೆ ಒಬ್ಬ ವ್ಯಕ್ತಿ ಸಾಹಿತಿ ಎನ್ನಿಸಿಕೊಳ್ಳುವುದಾದರೂ ಹೇಗೆ ಸಾಧ್ಯ?

ಬದುಕಿನ ಹಾದಿಯಲ್ಲಿ ಎದುರಾಗುವ ವರ್ತಮಾನದ ಸಮಸ್ಯೆಯೊಳಗೆ ಇಳಿಯದೇ ಅದು ತನಗೇಕೆ ಎಂದು ಅಡ್ಡದಾರಿ ಹಿಡಿದು ಹೊರಟು ಬಿಡುವವರು ಅವಕಾಶವಾದಿ ಸಾಹಿತಿಗಳಾಗುತ್ತಾರೆ, ಜನಮಿಡಿತವನ್ನರಿಯದ ಸಾಹಿತಿಯಾಗುತ್ತಾರೆ.

ಪ್ರಸ್ತುತ ನನ್ನ ಮುಂದಿರುವ ಕಥೆಗಾರ ಕವಿ ವರ್ತಮಾನದ ತಲ್ಲಣಗಳಿಗೆ ಒಂದಿಷ್ಟು ಹೆಚ್ಚೇ ಎಂಬಂತೆ ಸ್ಪಂದಿಸುವ ಚಲಂ. ತುಸು ಉದ್ದ ಎನಿಸುವ ಮೂಗಿನ ಮತ್ತು ಆ ಮೂಗಿನ ತುದಿಯಲ್ಲಿ ಸದಾ ಕೋಪದ ಜ್ವಾಲೆ ಎಂದೂ ನಂದಿಹೋಗದಂತೆ ಕಾದಿಟ್ಟುಕೊಳ್ಳುವ ಚಲಂ ನಮ್ಮ ಸಮಕಾಲೀನ ಲೇಖಕರಲ್ಲಿ ಎದ್ದು ಕಾಣುವ ಹೆಸರು.

ಕೇವಲ ಅವರ ಕೆಂಡದುಂಡೆಗಳಂತಹ ಕವಿತೆ, ಕಥೆಗಳಿಂದ ಮಾತ್ರವಲ್ಲ, ಅದೆಲ್ಲಕ್ಕೂ ಭಿನ್ನವಾದ ತಮ್ಮ ವಿಶಿಷ್ಟ ನಡುವಳಿಕೆಯಿಂದಲೂ.

ಕೆಲವು ದಿನಗಳ ಹಿಂದೆ ಫೇಸ್ ಬುಕ್, ಚಲಂರೊಂದಿಗೆ ಸ್ನೇಹವಾಗಿ ಒಂದು ವರ್ಷ ಎಂದು ತೋರಿಸಿದಾಗ ನಾನು ನಗು ತಡೆಯಲಾಗದೇ ಜೊರಾಗಿಯೇ ಗಹಗಹಿಸಿದ್ದೆ. ಸುಮಾರು ಎಂಟು- ಒಂಬತ್ತು ವರ್ಷಗಳ ನಮ್ಮ ಸ್ನೇಹದಲ್ಲಿ ಅದೆಷ್ಟು ಸಲ ಸ್ನೇಹಿತರಾದೆವೋ, ಅದೆಷ್ಟು ಸಲ ಕಿತ್ತಾಡಿಕೊಂಡು ಅನ್ ಪ್ರೆಂಡ್ ಆದೆವೋ, ಮತ್ತೆ ಅದೆಷ್ಟು ಸಲ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಪುನಃ ಸ್ನೇಹಿತರಾದೆವೋ ಲೆಕ್ಕವಿಡಲು ಇಬ್ಬರಿಗೂ ಪುರುಸೊತ್ತಿಲ್ಲ.

ಬಹುಶಃ ಇತ್ತೀಚಿನ ದಿನಗಳಲ್ಲಿ ನಾನು ಅವರ ಯಾವುದೇ ಪೋಸ್ಟ್ ಗಳಿಗೆ ಏನೂ ಉತ್ತರಿಸುತ್ತಿಲ್ಲ ಎಂಬ ಕಾರಣಕ್ಕೆ ಈ ಸ್ನೇಹ ಒಂದು ವರ್ಷ ಹಾಗೇ ಉಳಿದುಕೊಂಡಿದೆ ಮತ್ತು ಅದನ್ನೇ ಫೇಸ್ ಬುಕ್ ತೋರಿಸುತ್ತಿದೆ ಎಂದು ನಗುತ್ತಲೇ ಬರೆದದ್ದಕ್ಕೆ ಮತ್ಯಾರೋ ಕಮೆಂಟ್ ಹಾಕಿದ್ದರು. “ಈಗ ಸಮಾಧಾನ ಆಯ್ತು. ನನ್ನನ್ನಷ್ಟೇ ಅನ್ ಫ್ರೆಂಡ್ ಮಾಡ್ತಾರೆ ಅಂದ್ಕೊಂಡಿದ್ದೆ” ಎಂದು.

ಬಹುಶಃ ಯಾರಾದರೂ “ಇತ್ತೀಚಿನ ದಿನಗಳಲ್ಲಿ ತುಂಬಾ ಇಷ್ಟ ಆಗುವಂತೆ ಕವನ ಬರೆಯುವ ಹಾಗೆಯೇ ಇಷ್ಟವೇ ಆಗದಂತೆ ಬರೆಯುವ ಕವಿ ಯಾರು?” ಎಂದೇನಾದರೂ ನನ್ನನ್ನು ಪ್ರಶ್ನಿಸಿದರೆ ನಾನು ಹಿಂದೆ ಮುಂದೆ ಯೋಚಿಸದೇ ಎರಡೂ ಪ್ರಶ್ನೆಗಳಿಗೂ ಚಲಂ ಎಂಬ ಎರಡುವರೆ ಅಕ್ಷರದ ಶಬ್ಧವನ್ನು ತಕ್ಷಣ ಹೇಳಿ ಬಿಡಬಲ್ಲೆ.

ಬರೆಯುವ ಶೈಲಿ, ನಿರರ್ಗಳತೆ ಮತ್ತು ಶಬ್ಧವನ್ನು ಜೋಡಿಸುವುದರಲ್ಲಿ ಚಲಂಗೆ ಚಲಂ ಮಾತ್ರ ಸಾಟಿಯಾಗಲು ಸಾಧ್ಯ ಎನ್ನುತ್ತಿರುವಾಗಲೇ ಎಲ್ಲೋ ಒಂದು ಕಡೆ ತೀರಾ ವಿಕ್ಷಿಪ್ತನಾಗಿ ಬರೆದು ಸಾಕಪ್ಪ ಇವನ ಸಹವಾಸ ಎನ್ನಿಸಿ ಬಿಡುತ್ತಾರೆ.

ಈ ವಿಕ್ಷಿಪ್ತ ಎಂಬ ಶಬ್ಧವನ್ನು ನೋಡಿದಾಗಲೆಲ್ಲ ನನಗೆ ಚಲಂ ಮತ್ತೆ ಮತ್ತೆ ನೆನಪಾಗುತ್ತಾರೆ. ವಿ ಆರ್ ಕಾರ್ಪೆಂಟರ್ ಪತ್ರಿಕೆ ಪ್ರಾರಂಭಿಸಿದಾಗ ನಾನು ವಿಕ್ಷಿಪ್ತ ಲೇಖಕರು ಎಂಬ ಅಂಕಣ ಬರೆಯುತ್ತಿದ್ದೆ. “ಬರೀ ಪಾಶ್ಚಾತ್ಯ ಲೇಖಕರನ್ನಷ್ಟೇ ಯಾಕೆ ಬರಿತೀಯ? ಕನ್ನಡದ ಲೇಖಕರ ಬಗ್ಗೆಯೂ ಬರಿ..” ಕಾರ್ಪೆಂಟರ್ ಹೇಳಿದಾಗಲೆಲ್ಲ “ಬರಿತೀನಿ, ಮುಂದಿನ ವಾರ ಚಲಂ ಬಗ್ಗೆ… ಕನ್ನಡದಲ್ಲಿ ಅವರೊಬ್ಬರೇ ಈ ಕಾಲಂಗೆ ಸೂಟ್ ಆಗೋದು” ಎನ್ನುತ್ತ ನಗುತ್ತಿದ್ದೆ. ಯಾಕೆಂದರೆ ಈ ಚಲಂ ಎಂಬ ಮಹಾನುಭಾವ ಮಾಡುವ ಕೆಲಸಗಳೇ ಹಾಗೆ.

ಅವರ ಮದುವೆಗೆ ಬಹುಶಃ ಹತ್ತು ದಿನ ಇರಬಹುದೇನೋ… ಹಠಾತ್ತಾಗಿ ಫೋನಾಯಿಸಿದ್ದರು. “ಮದುವೆಗೆ ಬರ್ತಿಲ್ಲ ಅಂತಾ ಯಾವ ಕಾರಣ ಹೇಳಲಿ ಎನ್ನುತ್ತ ಫೋನ್ ರಿಸಿವ್ ಮಾಡಿದವಳಿಗೆ ಅತ್ತ ಕಡೆಯಿಂದ ಒಂದು ಶಬ್ಧವನ್ನೂ ಕೇಳಿಸಿಕೊಳ್ಳಲಾಗದಂತಹ ಶಬ್ಧ.

ಎಲ್ಲಿದ್ದೀರಿ?
ಟ್ರೈನ್ ನಲ್ಲಿ
ಎಲ್ಲಿಗೆ ಹೊರಟ್ರಿ?
ಕಾಡಿಗೆ…

ನನಗೆ ದಿಗ್ಭ್ರಮೆ. ಇವರ ಕಾಡು ಸುತ್ತುವ ಹುಚ್ಚು ನಮಗೆ ಗೊತ್ತಿಲ್ಲದ ವಿಷಯವೇನಲ್ಲ. ಆದರೆ ಹೀಗೆ ಮದುವೆಯನ್ನು, ಅದೂ ತನ್ನದೇ ಸ್ವಂತ ಮದುವೆಯನ್ನು ಎದುರಿಗಿಟ್ಟುಕೊಂಡು ಕಾಡಿಗೆ ಹೊರಟೆ ಎಂದರೆ ಏನೆಂದು ಪ್ರತಿಕ್ರಿಯಿಸುವುದು?

“ಮನೆಯವರಿಗೆ ಹೇಳಿದ್ದೀರಾ?” ಎಂದೆ
“ನಾನು ಕಾಡಿಗೆ ಹೋಗೋದನ್ನು ಅವರಿಗೆ ಯಾಕೆ ಹೇಳಬೇಕು? ಮದುವೆಗೆ ಇನ್ನೂ ಟೈಂ ಇದೆ. ಅಷ್ಟರಲ್ಲಿ ಬರ್ತೇನೆ” ಅತ್ತಲಿಂದ ನಿರಾಳ ಪ್ರತಿಕ್ರಿಯೆ. “ಇನ್ನೈದು ನಿಮಿಷಕ್ಕೆ ಸಿಗ್ನಲ್ ಹೋಗುತ್ತೆ, ಯಾರಾದ್ರೂ ನಿನ್ನ ಕೇಳಿದ್ರೆ ಹೇಳಿ ಬಿಡು ಆಯ್ತಾ?” ಫೋನ್ ಕಟ್
ನಾನು ಅಕ್ಷರಶಃ ಕಂಗಾಲಾಗಿಬಿಟ್ಟಿದ್ದೆ. ಈ ಮನುಷ್ಯ ಮದುವೆಗೂ ಮುನ್ನ ಕಾಡಿಗೆ ಹೋಗೋದು, ಏನಾದರೂ ಹೆಚ್ಚು ಕಡಿಮೆ ಆಗೊದು…

ಆದರೆ ಅದರ ನಂತರ ಇಲ್ಲಿಯವರೆಗೂ ಆ ವಿಷಯದ ಬಗ್ಗೆ ಚಕಾರವನ್ನೂ ಎತ್ತಿಲ್ಲ. ನಿಜಕ್ಕೂ ಕಾಡಿಗೆ ಹೋಗಿದ್ದರೋ… ಮನೆಯವರಿಗೆ ಅದು ಗೊತ್ತಾಗಿ ಕರೆ ತಂದರೋ… ನಾನೇನಾದರೂ ಈಗ ಆ ವಿಷಯ ಕೇಳಿದರೂ ಕೋಪ ಧುತ್ತೆಂದು ಭುಗಿಲೇಳಬಹುದು.

ಆದರೆ ನಾನು ಹೇಳ ಹೊರಟಿದ್ದು ಅವರ ವಿಕ್ಷಿಪ್ತ ಮನಸ್ಥಿತಿಯ ಬಗ್ಗೆ. ಹೀಗಾಗಿಯೇ ಮುನ್ನುಡಿ ಬರೆದ ಡಾ. ರಾಜಶೇಖರ ಮಠಪತಿ ಚಲಂ: ಇವನೊಂದು ರೀತಿ ಅಜೂಬಾ ಎನ್ನುವುದರಲ್ಲಿ ನನಗೆ ಯಾವ ತಪ್ಪೂ ಕಾಣುವುದಿಲ್ಲ. ಅವರೇ ಹೇಳುವಂತೆ ಚಲಂ ಎಂಬ ಚಂಚಲ ಸದಾ ಸ್ವತಃ ತಾನೇ ಕಕ್ಕಾಬಿಕ್ಕಿಯಾಗುತ್ತ, ಎದುರಿಗಿದ್ದವರನ್ನೂ ಕಕ್ಕಾಬಿಕ್ಕಿಯಾಗಿಸುವ ಮಹಾ ಸೋಂಬೇರಿ.

ಇವರ ತಲೆಗಳಲ್ಲಿ ಓಡುವ ಕಲ್ಪನೆಗಳನ್ನೇನಾದರೂ ಒಂದೆಡೆ ಅಚ್ಚುಕಟ್ಟಾಗಿ ಕುಳಿತು ಬರೆದು ಬಿಟ್ಟಿದ್ದರೆ ಇಷ್ಟು ಹೊತ್ತಿಗೆ ಅದಾವ ತುತ್ತ ತುದಿಯಲ್ಲಿರುತ್ತಿದ್ದರೋ… ಆದರೆ ಹಾಗಾಗದಿರಲು ಅದೇ ಅವರ ವಿಕ್ಷಿಪ್ತ ಮನಸ್ಥಿತಿ ಕಾರಣವೋ ಅಥವಾ ಆಲಸಿತನವೋ ಎಂಬುದನ್ನು ನಾನಿನ್ನೂ ಅಂದಾಜಿಸಲಾಗದೇ ಕೈಚೆಲ್ಲಿದ್ದೇನೆ.

ಹಾಗೆಂದು ಪೂರ್ತಿ ನಿರಾಶರಾಗಬೇಕಾದ ಅವಶ್ಯಕತೆಯೇನೂ ನನಗೆ ಕಾಣಿಸುತ್ತಿಲ್ಲ. ಯಾಕೆಂದರೆ ಈಗಾಗಲೇ ತನ್ನೆಲ್ಲ ಹಳವಂಡಗಳನ್ನು ಪಾಕವಾಗಿಸಿ ಎರಕ ಹೊಯ್ದ ಒಂದು ವಿಲಕ್ಷಣ ಪುಸ್ತಕ ನನ್ನ ಕೈಲಿದೆ. ಖಂಡಿತವಾಗಿಯೂ ನೀವಿದನ್ನು ಇದರ ವಿಕ್ಷಿಪ್ತತೆಗಾಗಿ, ವಿಲಕ್ಷಣತೆಗಾಗಿಯೇ ಓದಬೇಕು.

ಕವನ ಸಂಕಲನದ ಕರಡು ಪ್ರತಿಯನ್ನು ಮೊದಲನೆಯದಾಗಿ ನಾನೇ ಓದಿದ್ದರೂ ನನಗೆ ಈ ಕಥಾ ಸಂಕಲನದ ವಿಲಕ್ಷಣತೆ ಅಲ್ಲಿ ಕಾಣಿಸಲಿಲ್ಲ. ಬಹುಶಃ ಕಥಾ ಸಂಕಲನ ಬರುವ ಕಾಲಕ್ಕೂ, ಕವನ ಸಂಕಲನ ಪ್ರಕಟಗೊಳ್ಳುವ ಕಾಲಕ್ಕೂ ಅವರ ಮನಸ್ಥಿತಿಯ ವ್ಯತ್ಯಾಸವೂ ಇದಾಗಿರಬಹುದು, ಬದುಕಿನಲ್ಲಾದ ಪಲ್ಲಟಗಳೂ ಕಾರಣವಾಗಿರಬಹುದು. ಆದರೆ ಕಥಾ ಸಂಕಲನವನ್ನು ಓದುತ್ತ ಹೋದಂತೆ ನಿಮಗೆ ಆಗುವ ಅನುಭವಗಳೇ ಬೇರೆ.

ನಾನು ಚಿಕ್ಕವಳಿರುವಾಗ ಮಾರ್ಚ ತಿಂಗಳು ಮುಗಿದರೆ ಸಾಕು, ನನ್ನ ಹಗಲಿನ ವಾಸ ಬೆಟ್ಟ ಗುಡ್ಡದ ಮೇಲೆಯೇ. ಅದರಲ್ಲೂ ಮಾವಿನ ಮರ, ಗೇರು ಮರ, ಸಂಪಿಗೆ ಮರ ಎಂದು ಬೆಟ್ಟದ ಎಲ್ಲ ಮರಗಳನ್ನು ಒಬ್ಬೊಬ್ಬರ ಹೆಸರಿಗೆ ರಜಿಸ್ಟರ್ ಮಾಡಿಸಿಕೊಂಡಂತೆ ನಟಿಸುತ್ತಿದ್ದೆವು.

ಮಾವಿನ ಮರದ ಎಳೆ ಕಾಯಿ ಕೊಯ್ದು ಉಪ್ಪು, ಖಾರ ಸವರಿ ತಿನ್ನುತ್ತಿದ್ದರೆ, ಆಹಾ…. ಆ ಹುಳಿಗೆ ಹೊಟ್ಟೆಯ ಪಿತ್ತವೆಲ್ಲ ಕೆರಳಿದಂತಾಗುತ್ತಿತ್ತು. ತಿನ್ನುವುದು ಬೇಡ ಎಂದು ಪಕ್ಕಕ್ಕೆ ಇಡ ಬಯಸಿದರೂ ಯಾವುದೇ ಕಾರಣಕ್ಕೂ ಅದನ್ನು ಪೂರ್ತಿ ತಿನ್ನದೇ ಪಕ್ಕಕ್ಕೆ ಇಡಲಾಗುತ್ತಿರಲಿಲ್ಲ.

ಚಲಂ ಅವರ ‘ಪುನರಪಿ’ ಕೂಡ ಹೀಗೇ. ಇದೆಂತಹ ಕಥೆ, ಮಾಮೂಲಿ ಇದೆ ಎನ್ನಿಸಿದರೂ ಇಡೀ ಪುಸ್ತಕವನ್ನು ಓದಿ ಮುಗಿಸದೇ ಕೆಳಗಿಡಲು ಮನಸ್ಸು ಬರುವುದೇ ಇಲ್ಲ. ಥೇಟ್ ಕಚ್ಚಾ ಮಾಂಗೋ ಚಾಕಲೇಟ್ ತಿಂದಂತೆ.

ರಾಜಶೇಖರ ಮಠಪತಿಯವರು ಕೆಲವು ಕಥೆಗಳು ಕಥೆಯ ಶಿಸ್ತಿಗೆ ಒಳಪಡುವುದಿಲ್ಲ ಎಂಬ ಅಭಿಪ್ರಾಯ ಸೂಚಿಸಿದರೂ ನನಗೆ ಈ ಕಥೆಗಳಲ್ಲೇನೂ ಅಂತಹ ತೀರಾ ದೊಡ್ಡ ದೋಷ ಕಾಣಿಸುವುದಿಲ್ಲ. ಹೇಳಬೇಕಾದುದನ್ನು ಯಾವುದನ್ನೂ ಮುಚ್ಚಿಡದೇ ಸಾರಾಸಗಟಾಗಿ ನೇರವಾಗಿ ಹೇಳಿಬಿಡುವ ಮಾರ್ಗವನ್ನು ಆಯ್ದುಕೊಂಡಿದ್ದು ಅವರಿಗೆ ಹಾಗನ್ನಿಸಿರಬಹುದಾದರೂ ನೇರ ಮಾತುಗಳ ಕಥೆಗಳು ಕಥಾ ಪ್ರಕಾರಗಳಲ್ಲ ಎಂದು ಅಲ್ಲಗಳೆಯುವಂತೆಯೇ ಇಲ್ಲ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಎಲ್ಲವೂ ಖುಲಂಖುಲ್ಲಾ ತೆರೆದಿಡುವುದೇ ಬದುಕು ಎಂದಾದ ಮೇಲೆ ಕಥೆಗಳಲ್ಲಿ ಖುಲಂಖುಲ್ಲಾ ಯಾಕೆ ಬೇಡ?

ಹೀಗಾಗಿಯೇ ಬೇಗೂರಿನ ಬಾನಗಡಿಗಳು ಎಂಬ ಕಥೆ ನನಗೆ ಈ ಮೊದಲು ಹೇಳಿದ ನನ್ನೂರಿನ ಉಷ್ಣ ಸ್ಥಾವರದ ವಿರುದ್ಧದ ಹೋರಾಟವನ್ನು ನೆನಪಿಸುತ್ತದೆ. ಪ್ರತಿ ಊರಿನಲ್ಲಿಯೂ ಊರನ್ನು ಬಳಸಿಕೊಂಡು ಸ್ವಂತ ಲಾಭ ನೋಡಿಕೊಳ್ಳುವ ಶಿವರಾಜಪ್ಪನಂತವರೂ, ಅದನ್ನು ವಿರೋಧಿಸುತ್ತ ಊರನ್ನು ಉಳಿಸುವ ನಿಟ್ಟಿನಲ್ಲಿ ಹೋರಾಟ ಮಾಡುವ ಜನಪರ ಕಾಳಜಿಯುಳ್ಳ ಕಿಶೋರನಂತವರೂ ಕಂಡೇ ಕಾಣುತ್ತಾರೆ.

ಆದರೆ ವೈಚಿತ್ರ್ಯವೆಂದರೆ ಈ ಶಿವರಾಜಪ್ಪ ಮತ್ತು ಕಿಶೋರ ಅಪ್ಪ ಮಗ ಆಗಿರುವುದು. ಮಗನ ಪ್ರೇಮವಿವಾಹವನ್ನೂ ತನ್ನ ಪಂಚಾಯತ್ ಇಲೆಕ್ಷನ್ ನ ಪ್ರಚಾರಕ್ಕಾಗಿ ಬಳಸಿಕೊಳ್ಳುವುದು.

‘ಕಥೆಗಾರನೊಬ್ಬನ ಬಲಿ’ ಹಾಗೂ ‘ಕವಿತೆಯೊಳಗೆ ನೀನಿರಲಿಲ್ಲ’ ಎಂಬ ಕಥೆಗಳು ಒಂದೇ ಎರಕದ ಕಥೆಗಳು ಎಂದೆನಿಸಿದರೂ ಎರಡನ್ನೂ ಬರೆಯಲು ಆಯ್ದುಕೊಂಡ ತಂತ್ರಗಾರಿಕೆ ಬೇರೆ ಬೇರೆಯಾದ್ದರಿಂದ ಕುತೂಹಲ ಮೂಡಿಸುತ್ತದೆ. ಎರಡೂ ಕಥೆಗಳಲ್ಲಿ ಕವಿತೆ ಯಾಕೆ ಮೋಸ ಮಾಡುತ್ತದೆ ಎಂಬುದನ್ನು ಮಾತ್ರ ಮತ್ತೆ ಮತ್ತೆ ಯೋಚಿಸಬೇಕಾಗಿದೆ. ನುಣ್ಣನೆಯ ಮೈಯ್ಯಿನ ಬೆಳುಂಜೆಯಂತಹ ಕವಿತೆ ಕೈಗೇ ಸಿಗದೇ ನುಣುಚಿ ಹೋಗುವಾಗ ಕಥೆಗಾರನಾಗಿರಬಹುದು ಅಥವಾ ಕೊಳಲು ವಾದಕನಿರಬಹುದು ಅಸಹಾಯಕನಾಗುತ್ತಾನೆ.

ಈ ಚಲಂ ಬಗ್ಗೆ ಮಾತನಾಡುವಾಗ ಮೀನಿನ ಬಗ್ಗೆ ಮಾತನಾಡಲೇಬಾರದು. ನನ್ನ ಪುಸ್ತಕ ಬಿಡುಗಡೆಗೆಂದು ಅಂಕೋಲೆಗೆ ಬಂದಿದ್ದರು. ಸಮಾ ಹನ್ನೊಂದು ಗಂಟೆಗೆ ಫೋನಾಯಿಸಿ ಯಾವ ಮೀನು ಒಳ್ಳೆಯದು ಎಂದು ನಾಲ್ಕಾರು ಮೀನಿನ ಹೆಸರು ಹೇಳಿದ್ದರು. ನಾನೋ ನಿದ್ದೆಗಣ್ಣಲ್ಲಿ ಬೇರೇನೂ ಯೋಚಿಸದೆ ಒಂದು ಮೀನಿನ ಹೆಸರು ಹೇಳಿ ಫೋನ್ ಕಟ್ ಮಾಡಿದ್ದೆ. ಮುಂದೇನಾಯ್ತೋ ಗೊತ್ತಿಲ್ಲ, ಆಸಾಮಿ ಹಾಸನಕ್ಕೆ ಹಿಂದಿರುಗಿದವರೇ ಒಂದು ತಿಂಗಳು ಮಾತು ಬಿಟ್ಟು, ನನ್ನನ್ನು ಬ್ಲಾಕ್ ಮಾಡಿದ್ದರು.

ವಿಷಯ ಏನು ಅಂದರೆ ಹೊಟೇಲ್ ನಲ್ಲಿ ವೇಟರ್ ನ ಬಳಿ ಕೇಳಿದ ಮೀನಿನ ಹೆಸರನ್ನು ನನಗೆ ಹೇಳಿದ್ದರು. ನಾನೋ ಅದೇಕೆ ಎಂದು ತಿಳಿಯದೇ ಮೀನಿನ ಹೆಸರು ಹೇಳಿದ್ದೆ. ಆ ಮೀನೋ ಬಲು ತುಟ್ಟಿ. “ಅಂಕೋಲೆಗೆ ಬಂದು ಜೀವನದ ಅತೀ ದುಬಾರಿ ಊಟ ಮಾಡಿದೆ” ಎಂದು ಅವರು ಬರೆದುಕೊಂಡಾಗಲೇ ನನಗೆ ಅವರು ನನ್ನನ್ನು ಬ್ಲಾಕ್ ಮಾಡಿ, ಮಾತು ಬಿಟ್ಟಿದ್ಯಾಕೆಂದು ಅಂದಾಜು ಸಿಕ್ಕಿದ್ದು.

ತೀರಾ ಸಿಲ್ಲಿ ಎನ್ನಿಸುವ, ಆದರೆ ಆ ಸಣ್ಣ ವಿಷಯದಲ್ಲೂ ಏನೋ ಅಮೋಘವಾದದ್ದು ಇದೆ ಎಂದು ಭಾವಿಸುವ ಚಲಂರವರ ಗುಣವೇ ಅವರ ವೈಶಿಷ್ಟ್ಯಕ್ಕೆ ಮೂಲ ಕಾರಣ.

ಹೀಗಾಗಿಯೇ ಉದ್ದ ಜಡೆಯ ಹುಡುಗಿ ಎಂಬ ಸೀದಾಸಾದ ವಿಷಯವೂ ಇವರ ಕೈಯ್ಯಲ್ಲಿ ಕಥೆಯಾಗುತ್ತದೆ. ಈ ಮೊದಲೇ ಹೇಳಿದಂತೆ ಕೈಕೊಡುವ ಕವಿತೆಗಳಷ್ಟೇ ಅಲ್ಲ, ನವಿರು ಕವಿತೆಗಳನ್ನು ಬಳಸಿಕೊಂಡು, ಬೀಯರ್ ಗ್ಲಾಸ್ ನ ನೊರೆಯುಕ್ಕಿಸುವ ಕಥೆಗಳನ್ನೂ ಅವರು ಹಿಂಜರಿಕೆಯಿಲ್ಲದೇ ಚಿತ್ರಿಸಬಲ್ಲರು.

‘ಸರಿಯದ ಪರದೆ’ ಹಾಗೂ ‘ಬೇಲಿ’ ಕಥೆಗಳು ಹೇಳಬೇಕಾದುದರ ಒಳಗೆ ಮತ್ತೇನನ್ನೋ ಹೇಳುತ್ತಿವೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಈ ಕಥೆಗಳ ಚಿದಾನಂದರಾಯರು, ರಾಜಶೇಖರ, ಕರಿಯಪ್ಪ, ಶಾಮಣ್ನ, ಸೋಮೆ ಗೌಡ, ಕುಶಾಲ್ ಎಲ್ಲರೂ ನಮ್ಮ ಸುತ್ತಲಿನ ಮತ್ತೊಂದು ಪಾತ್ರವಾಗಿ ನಮ್ಮ ಕಣ್ಣೆದುರು ನಿಲ್ಲುವುದನ್ನು ತಪ್ಪಿಸುವುದು ಸಾದ್ಯವೇ ಇಲ್ಲ.

‘ಪುನರಪಿ’ ಕಥೆಯೂ ಹೀಗೆಯೇ ಇನ್ನೊಂದು ಕಥೆಯನ್ನೇ ತನ್ನೆದೆಯೊಳಗೆ ಬಚ್ಚಿಟ್ಟುಕೊಂಡಿದೆ. ಕಾಲೇಜಿನ ಮಾಮೂಲಿ ಗಲಾಟೆಗಳು, ಹಗರಣಗಳು, ಉಪನ್ಯಾಸಕರ ವೈಷಮ್ಯಗಳು, ತಮ್ಮ ಸ್ವಾರ್ಥಕ್ಕಾಗಿ ಕಾಲೇಜಿನ ಹಿತಾಸಕ್ತಿಯನ್ನೇ ಬಲಿಕೊಡುವವರು ಎಲ್ಲವನ್ನೂ ಈ ಕಥೆಗಳು ನಿಧಾನವಾಗಿ ಹೇಳುತ್ತಾ ಹೋಗುತ್ತವೆ.

ಉಳಿದವೆಲ್ಲವೂ ಏನಾದರಾಗಲಿ, ಆದರೆ ನೀವು ‘ಬಿಳಿ ಎಕ್ಕದ ಗಿಡದ ಮದುವೆ’ ಮತ್ತು ‘ದೇವರಹಳ್ಳಿಯ ಸಾವಿನ ನ್ಯಾಯ’ ಎಂಬ ಎರಡು ಕಥೆಗಳನ್ನು ಓದಲೇಬೇಕು. ಜ್ಯೋತಿಷ್ಯ ಹೇಗೆ ನಮ್ಮ ಹಾದಿ ತಪ್ಪಿಸುತ್ತದೆ ಎಂಬುದನ್ನು ತೀರಾ ತಮ್ಮದೇ ಆದ ಖಾಸಗಿ ಮೊನಚಿನಲ್ಲಿ ಬರೆಯುವ ಚಲಂ ಇಲ್ಲಿಯೇ ನಮ್ಮನ್ನು ಫಿದಾ ಮಾಡಿ ಬಿಡುತ್ತಾರೆ.

ಅಕ್ಕನ ಮದುವೆಗೆ ಹೊರಡುವ ತಮ್ಮಂದಿರು ಏನೆಲ್ಲ ಕಷ್ಟ ಅನುಭವಿಸಬೇಕಾಯಿತು ಎಂಬುದನ್ನು ಚಾಬೂಕಿನ ತುದಿ ನರ್ತಿಸುವಂತೆ ಹೆಣೆಯುತ್ತಾರೆ. ಅಕ್ಕ ಮದುವೆ ಆದರೆ ಹುಡುಗನ ತಾಯಿಗೆ ತೊಂದರೆ ಎಂದೂ ಅದಕ್ಕೆ ಬಿಳಿ ಎಕ್ಕದ ಗಿಡದಿಂದ ತಾಳಿ ಕಟ್ಟಿಸಿಕೊಳ್ಳಬೇಕೆಂದು ಹೇಳುತ್ತ, ಬಿಳಿ ಎಕ್ಕದ ಗಿಡ ಹುಡುಕುವ ಕಾಯಕವೇ ನಂತರ ಮದುವೆ ಗಂಡಿನ ಹುಡುಕಾಟಕ್ಕಿಂತ ಹೆಚ್ಚು ಪ್ರಾಧಾನ್ಯತೆ ಪಡೆಯುತ್ತದೆ.

ಕೊನೆಗೂ ಜಾತಕ ನೋಡದ ಅಕ್ಕನ ಮದುವೆ, ಆರು ವರ್ಷದ ನಂತರ ಅವಳ ಅತ್ತೆಗಾದ ಪಾರ್ಶ್ವವಾಯುವಿನ ಹೊಡೆತ, ನಂತರವೂ ಅತ್ತೆ ಸುಖವಾಗಿರುವುದು ಎಲ್ಲವೂ ನಮ್ಮೊಳಗಿನ ಮೌಢ್ಯವನ್ನು ಚುಚ್ಚುತ್ತದೆ.

ಆದರೆ ‘ದೇವರ ಹಳ್ಳಿಯ ಕಥೆ’ ಹೀಗಲ್ಲ. ಇದನ್ನು ಚಲಂನಂತಹ ಚಲಂ ಮಾತ್ರ ಬರೆಯಲು ಸಾಧ್ಯ ಎಂದು ಪ್ರತಿಸಲ ಓದಿದಾಗಲೂ ಹೇಳಿಕೊಂಡಿದ್ದೇನೆ. ಸಾವಿಗಾಗಿ ಹಪಹಪಿಸುವ ದೇವರಹಳ್ಳಿಯವರು ಮಾಡುವ ಕೆಟ್ಟ ಕೆಲಸಗಳು ಮತ್ತು, ಅವು ಕೆಟ್ಟ ಕೆಲಸಗಳಾಗದೇ ಅವರು ಸಾವಿನಿಂದ ತಪ್ಪಿಸಿಕೊಳ್ಳುವ ವಿಡಂಬನೆಗಳಾಗಿ ನಗು ಹುಟ್ಟಿಸುತ್ತದೆ.

ಕೊನೆಗೂ ಸಾವಿನ ಕಲ್ಪನೆಯನ್ನು ದೇವರಹಳ್ಳಿಯವರಲ್ಲಿ ಹುಟ್ಟು ಹಾಕಿದ ಸಾಹಿತಿ ಕಲ್ಪನಿಗೆ ಸಾವು ಒಲಿಯುತ್ತದೆ. ಆದರೆ ಈ ಕಥೆ ಇಲ್ಲಿ ನಾನು ಹೇಳಿದಷ್ಟು ಸರಳವಾಗಿ, ನೀರಸವಾಗಿಲ್ಲ. ಆ ಕಥೆಯನ್ನು ಪೂರ್ತಿಯಾಗಿ ಆಸ್ವಾದಿಸಬೇಕೆಂದರೆ ನೀವು ಒಂದೆರಡು ಸಲವಾದರೂ ಓದಬೇಕು. ಓದಿ ಹೊಟ್ಟೆ ಹುಣ್ಣಾಗುವಂತೆ ನಗಬೇಕು. ನಂತರ ಮತ್ತೆ ಓದಿ ಅರ್ಥೈಸಿಕೊಳ್ಳಬೇಕು. ಅಂದಾಗ ಮಾತ್ರ ನಿಮಗೆ ಈ ಪುಸ್ತಕ ಓದಿದ ಸಾರ್ಥಕತೆ ಉಂಟಾಗುತ್ತದೆ. ಈ ಕಥೆಗಾದರೂ ನೀವು ಪುನರಪಿಯನ್ನು ಓದಲೇ ಬೇಕು.

ಅಂದ ಹಾಗೆ ಇನ್ನೂ ಒಂದು ಮಿಸ್ ಮಾಡಿಕೊಳ್ಳಲೇಬಾರದ ಮತ್ತೊಂದು ಓದು ಇಲ್ಲಿದೆ. ಅದು “ಕ್ಷಮೆ ಕೇಳದಿರುವುದು ಉದ್ದಟತನವಲ್ಲ” ಎಂಬ ಚಲಂರವರ ಆತ್ಮ ನಿವೇದನೆ. ಅದರ ಬಗ್ಗೆ ನಾನು ಒಂದಕ್ಷರವನ್ನೂ ಇಲ್ಲಿ ಬರೆಯುವುದಿಲ್ಲ. ಇದನ್ನು ನೀವು ಓದಿದ್ದೇ ಆದರೆ ನಾನು ಸಮಕಾಲಿನ ಕನ್ನಡದ ವಿಕ್ಷಿಪ್ತ ಲೇಖಕ ಎಂದ ಮಾತಿಗೆ ಪೂರ್ಣ ಸಹಮತ ವ್ಯಕ್ತಪಡಿಸುವ ನಂಬಿಕೆ ನನ್ನಲ್ಲಿದೆ.

22 Responses

 1. Prabhakar says:

  ಅಪರೂಪದ ಪುಸ್ತಕಕ್ಕೆ ಉತ್ತಮ ಪ್ರವೇಶಿಕೆ. ಇಂತಹ ಪುಸ್ತಕಗಳ ಓದು ಹೆಚ್ಚಾಗಲಿ.

  • Shreedevi keremane says:

   ಥ್ಯಾಂಕ್ಯೂ ಎ ಎಸ್ ಪ್ರಭಾಕರ್ ಸರ್…. ನಿಮ್ಮ ಮಾರ್ಗದರ್ಶನ ಸದಾ ಇರಲಿ

 2. ರಾಜು ಪಾಲನಕರ ಕಾರವಾರ says:

  ಶ್ರೀದೇವಿ ಮೇಡಂ ಅವಧಿಯಲ್ಲಿ ಈ ವಾರದ ನಿಮ್ಮ ಅಂಕಣದ ಬರಹ ಓದಿದೆ……ಅಂಕಣದಲ್ಲಿ ತದಡಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆ ವಿರೋಧದ ಕುರಿತು ಆ ಸಮಯದಲ್ಲಿ ನಡೆದ ಹೋರಾಟದ ಕುರಿತು ತುಂಬಾ ಚೆನ್ನಾಗಿ ಬರೆದಿರುವಿರಿ…ನಿಮ್ಮ ಬರಹ ಓದಿ ಆ ಸಮಯದಲ್ಲಿ ನಡೆದ ಹೋರಾಟದ ನೆನಪು ಮತ್ತೊಮ್ಮೆ ಮರುಕಳಿಸಿತು….ಅಂಕಣದಲ್ಲಿ ಚಲಂ ಅವರ ಪುನರಪಿ ಕಥಾ ಸಂಕಲನದ ಕುರಿತು ನಿಮ್ಮ ವಿಮರ್ಶೆ ತುಂಬಾ ಚೆನ್ನಾಗಿದೆ… ನಿಮ್ಮ ಅಂಕಣಕ್ಕಾಗಿ ನಾವು ಪ್ರತಿವಾರ ಕಾಯುತ್ತಿರುತ್ತೇವೆ ..ನಿಜಕ್ಕೂ ನಿಮ್ಮ ಅಂಕಣ ಬರಹ ತುಂಬಾ ಚೆನ್ನಾಗಿ ಬರುತ್ತಿದೆ ನಿಮಗೆ ಅಭಿನಂದನೆಗಳು

 3. ರಾಜು ಪಾಲನಕರ ಕಾರವಾರ says:

  ಶ್ರೀದೇವಿ ಮೇಡಂ ಅವಧಿಯಲ್ಲಿ ಈ ವಾರದ ಅಂಕಣ ಬರಹ ಓದಿದೆ…ಅಂಕಣದಲ್ಲಿ ತದಡಿ ಉಷ್ಷ ವಿದ್ಯುತ್ ಸ್ಥಾವರ ಸ್ಥಾಪನೆ ವಿರೋಧಿ ಹೋರಾಟದ ಕುರಿತು ಆ ಸಮಯದಲ್ಲಿ ನಡೆದ ಹೋರಾಟದ ಕುರಿತು ತುಂಬಾ ಚೆನ್ನಾಗಿ ಬರೆದಿರುವಿರಿ… ನಿಮ್ಮ ಬರಹ ಓದಿ ಉಷ್ಣ ವಿದ್ಯುತ್ ವಿರೋಧಿ ಹೋರಾಟದ ನೆನಪು ಮತ್ತೊಮ್ಮೆ ಮರುಕಳಿಸಿತು… ಅಂಕಣದಲ್ಲಿ ಚಲಂ ಅವರ ಪುನರಪಿ ಕಥಾ ಸಂಕಲನದ ಕುರಿತು ನಿಮ್ಮ ವಿಮರ್ಶೆ ತುಂಬಾ ಚೆನ್ನಾಗಿದೆ…ಪ್ರತಿವಾರ ನಾವು ನಿಮ್ಮ ಅಂಕಣಕ್ಕಾಗಿ ಕಾಯುತ್ತಿರುತ್ತೇವೆ ಅಂತಹ ಅದ್ಭುತ ಬರಹದ ಶಕ್ತಿ ನಿಮ್ಮಲ್ಲಿದೆ…ನಿಮಗೆ ಅಭಿನಂದನೆಗಳು

 4. Rangamma Hodekal says:

  ಚಲಂನ ವ್ಯಕ್ತಿತ್ವದ ಜತೆಗೆ ಅವರ ಕಥೆಗಳ ಬಗ್ಗೆಯೂ ಆಪ್ತವಾಗಿ ಬರೆದಿದ್ದೀರಿ.
  ಶೈನಾ ಕೈ ಬರಹದ ಪತ್ರಿಕೆ ಕೊಟ್ಟ ವಿಶೇಷ ಪರಿಚಯಗಳಲ್ಲಿ ಚಲಂ ಕೂಡ ಒಬ್ಬರು!ಈ ತನಕ ನಗ್ತ ನಗ್ತ ಮಾತಾಡಿದ್ದಕ್ಕಿಂತ ಜಗಳ ಆಡ್ಕೊಂಡು ಮಾತಾಡಿರೋದೇ ಹೆಚ್ಚು.!
  ಚಲಂ ನ ಮನಸಿನ,ಕನಸಿನ ವೇಗ ಕಂಡು ಸೋಜಿಗಪಟ್ಟವರಲ್ಲಿ ನಾನೂ ಇದ್ದೇನೆ.
  ಕತೆ,ಕಾವ್ಯ,ಸಂಘಟನೆ,ಈಗ ಪತ್ರಿಕೆ ಯ ಜೊತೆ ವಿಭಿನ್ನ ಅನ್ನಿಸಿಕೊಳ್ಳುವ ಅವರ ಪುನರಪಿಯನ್ನು ಮತ್ತೆ ಓದಿಸಿದಿರಿ ಮೇಡಂ!ಧನ್ಯವಾದಗಳು

 5. ರಾಜು ಪಾಲನಕರ ಕಾರವಾರ says:

  ಶ್ರೀದೇವಿ ಮೇಡಂ ಈ ವಾರದ ಅವಧಿಯಲ್ಲಿ ನಿಮ್ಮ ಅಂಕಣ ಬರಹ ಓದಿದೆ…ಅಂಕಣದಲ್ಲಿ ತದಡಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆ ವಿರೋಧಿ ಹೋರಾಟದ ಕುರಿತು ಆ ಸಮಯದಲ್ಲಿ ನಡೆದ ಹೋರಾಟದ ಕುರಿತು ತುಂಬಾ ಚೆನ್ನಾಗಿ ಬರೆದಿರುವಿರಿ… ನಿಮ್ಮ ಬರಹ ಓದಿ ಆ ಸಮಯದಲ್ಲಿ ನಡೆದ ಹೋರಾಟದ ನೆನಪು ಮತ್ತೊಮ್ಮೆ ಮರುಕಳಿಸಿತು…. ಅಂಕಣದಲ್ಲಿ ಚಲಂ‌ ಅವರ ಪುನರಪಿ ಕಥಾ ಸಂಕಲನದ ಕುರಿತು ನಿಮ್ಮ ವಿಮರ್ಶೆ ತುಂಅ ಚೆನ್ನಾಗಿದೆ…ನಿಮ್ಮ ಈ ಅಂಕಣಕ್ಕಾಗಿ ನಾವು‌ ಪ್ರತಿವಾರ‌ ಕಾಯುತ್ರಿರುತ್ತೇವೆ ..ಅಂತಹ ಅದ್ಭುತ ಬರಹದ ಶಕ್ತಿ ನಿಮ್ಮಲ್ಲಿದೆ ನಿಮಗೆ ಅಭಿನಂದನೆಗಳು

 6. Veerendra Ravihal says:

  ನಿಮ್ಮ ಲೇಖನ ಓದಿ ಈ ಕಥೆಗಳನ್ನು ಓದುವ ಅತ್ಯಾಸೆ ಉಂಟಾಗಿದೆ. ತುಂಬಾ ಆಪ್ತವಾದ ಬರಹ.

 7. Chalam says:

  ನನ್ನ ಹಾಗು ನನ್ನ ಕತೆಗಳ ಬಗ್ಗೆ ಇಷ್ಟೊಂದು ಬರೆದಿರುವುದು ಸಂತೋಷ ತಂದಿದೆ..ಇಷ್ಟು ಚಂದ ಬರೆದು ತನ್ನ ಸಿಟ್ಟು ತೀರಿಸಿಕೊಂಡ ಶ್ರೀದೇವಿ ಕೆರೆಮನೆಗೆ ಯಾವ ಕಾರಣಕ್ಕೂ ಕ್ಷಮೆಯಿಲ್ಲ.
  ಈ ವಿಕ್ಷಿಪ್ತತೆ, ಸಮಚಿತ್ತ,ಏಕಾಗ್ರತೆ, ಸೋಂಬೇರಿತನ,ಶಿಸ್ತು ಮುಂತಾದ ಗುಣಾವಗುಣಗಳ ಆಚೆ ನಿಂತಾಗ ಸುಖವೆನಿಸುತ್ತದೆ.
  ನನ್ನ ರೀತಿ ಬದುಕಲಾಗದೇ ಅಸಹಾಕತೆಯಿಂದ ನರಳುವವರನ್ನು ನೋಡಿದಂತೆಯೇ ಅವರುಗಳ ರೀತಿ ನಾನು ಇರಲಾಗುತ್ತಿಲ್ಲ ಅಂತ ಸಂಕಟವೂ ಆಗುತ್ತದೆ. ನಾನೇನು ಅನ್ನುವುದಕ್ಕಿಂತ ಕತೆ,ಕವಿತೆಗಳು ಏನನ್ನು ದಾಟಿಸಬೇಕಿತ್ತೋ ಅದನ್ನು ದಾಟಿಸಿವೆಯಾ ಅನ್ನೋದು ಮುಖ್ಯ..
  ನನಗಿನ್ನೂ ಅರ್ಥವಾಗಬೇಕಿರುವುದು ತುಂಬಾ ಇದೆ.. ನನ್ನ ಬಗ್ಗೆ ಬೇರೆಯವರು ತಿಳಿಯುವುದೂ ಕೂಡ.
  ಈ ನಡುವೆ ಅಕ್ಷರ ಕಟ್ಟಿಕೊಡುವ ಸಂಬಂಧಗಳಿಗೆ ಯಾವ ವಿಕ್ಷಿಪ್ತತೆ…?
  ನನ್ನ ಹೆಂಡತಿ ಈ ಲೇಖನ ಓದಿ…”ಓ..ಅಷ್ಟೊಂದು ಗೋಡಂಬಿ ಕೊಟ್ಟಿದ್ರಲ್ಲ…ಅವರು ಬರೆದದ್ದಾ‌.?” ಅಂತ ಕೇಳಿದಳು.
  ನನಗೆ ಹೆಚ್ಚು ಬೆಲೆಯ ಮೀನು ನೆನಪಿದೆ…ನಮ್ಮನೆಯವಳಿಗೆ ಅಕ್ಕರೆಯಿಂದ ಗೋಡಂಬಿ ಕೊಟ್ಟವರ ಬಗ್ಗೆ ಪ್ರೀತಿ…ಜತೆಗೆ “ನಿಮ್ ಸಿಟ್ಟು ಯಾರಿಗ್ ಗೊತ್ತಿಲ್ಲ ಹೇಳಿ..?” ಎಂಬ ಮಾತನ್ನು ಮುಖಕ್ಕೆ ಹೇಳಲು ಒಂದು ಸದವಕಾಶ ಮಾಡಿಕೊಟ್ಟವರಿಗೆ ಅಸಂಖ್ಯಾತ ಧನ್ಯವಾದಗಳು..
  ಮುಂದಿನ ಕತೆ,ಕವಿತೆಗಳ ಜತೆ ಭೇಟಿಯಾಗೋಣ.

  • Shreedevi keremane says:

   ಚಲಂ ಇದು ಬೈಯ್ದಿದ್ದಾ? ಹೊಗಳಿದ್ದೋ.. ಕನ್ಫ್ಯೂಸ್ ಆಗ್ತಿದೆ…

 8. Sujatha lakshmipura says:

  ಶ್ರೀ ಅವರ ಪುಸ್ತಕ ಪರಿಚಯದ ಲೇಖನ ವಿಶಿಷ್ಟ ಬಗೆಯದು.ಪ್ರತಿ ವಾರ ಓದುತ್ತಿದ್ದರೂ ತಾಜ ಅನುಭವ ಕೊಡುವ ರೀತಿಯದು.
  ವಿಕ್ಷಿಪ್ತ, ವಿಲಕ್ಷಣ ಸ್ವಭಾವದ ವ್ಯಕ್ತಿ ಚಲಂ ಎನ್ನುತ್ತಲೇ ಅವರ ವಿಶಿಷ್ಟ ಬಗೆಯ ಕಥೆಗಳನ್ನು ಪರಿಚಯಿಸಿದ್ದಾರೆ.
  ಶ್ರೀ ಅವರ ಬರವಣಿಗೆಯ ಪ್ಲಸ್ ಪಾಯಿಂಟ್ ಅಂದರೆ ಅದು ಅವರ ಜೀವನದ ಸಮೃದ್ದ ಅನುಭವ.ಆ ಅನುಭವಗಳನ್ನು ತಾವು ಪರಿಚಯಿಸುವ ವ್ಯಕ್ತಿ ಮತ್ತು ವಿಷಯದ ಪರಿಚಯಿಸುವಿಕೆಗೆ ಅವರು ಸಶಕ್ತವಾಗಿ ಬಳಸಿಕೊಳ್ಳಲು ಬಳಸುವ ಆತ್ಮೀಯ ಶೈಲಿ..ಎಲ್ಲವೂ ಒಟ್ಟಾಗಿ ಇಡೀ ಲೇಖನ ಒಂದೇ ಉಸುರಿಗೆ ಓದಿಸಿಕೊಂಡು ಮನದಲ್ಲಿ ಥಟ್ ಅಂತ ಖುಷಿ ಮತ್ತು ಅರಿವಿನ ಬೆಳಕು ಮೂಡಿಸಿಬಿಡುತ್ತದೆ.
  ಚಲಂ ಅವರ ಕಥೆಗಳಂತೆ ಶ್ರೀ ಅವರ ಬರಹವೂ ವಿಶಿಷ್ಠ.
  ಕಥೆಗಳನ್ನು ಓದಿರೆಂದ ಕಥೆಗಳು ಇವು.
  ಸಮಕಾಲೀನ ಸಂಗತಿಗಳಿಗೆ ಸ್ಪಂದಿಸದ ಸಾಹಿತಿ,ಸಾಹಿತಿ ಹೇಗಾದಾನೂ…ಜವಾಬ್ದಾರಿ ಮಾತುಗಳಿಗೆ ಶರಣು ಕಣ್ರೀ..

  • Shreedevi keremane says:

   ಗೆಳತಿ ಅಂತಾ ಇಷ್ಟೊಂದು ಹೊಗಳೋದಾ ಸುಜಾತಾ

   • Sujatha lakshmipura says:

    ಹೊಗಳಿಕೆ ಹೇಗಾದೀತು ಶ್ರೀದೇವಿ ಮೇಡಮ್..ನಿಮ್ಮ ವಿಶಿಷ್ಟ ಬರಣಿಗೆಯ
    ಶೈಲಿ ಬಗ್ಗೆ ಏನು ಹೇಳಿದರೂ ಕಮ್ಮಿನೇ..ನೀವು ಪರಿಚಯಿಸಲಿರುವ ಪುಸ್ತಕವನ್ನು ಅದರ ರಚನೆಕಾರರ ವ್ಯಕ್ತಿತ್ವ ಮತ್ತು ನಿಮ್ಮ ಅನುಭವಗಳೊಂದಿಗೆ ಸೇರಿಸಿ ಹೆಣೆಯುವ ಕೌಶಲ್ಯಕ್ಕೆ ಓದುಗರು ಮಾರುಹೋಗದೆ ಇರಲಾರರು. ನಿಮ್ಮಿಂದ ವಾರ ವಾರವೂ ಸವಿಉಣಿಸು.ಅದಕ್ಕೊಂದು ಧನ್ಯವಾದಗಳು..

 9. Sudha Gouda says:

  ತುಂಬಾ ಆಸಕ್ತಿಯ ವ್ಯಕ್ತಿತ್ವದ ಸಾಹಿತಿಯನ್ನು ಪರಿಚಯಿಸಿದ್ದೀರಿ.
  ಅವರ ಕಥೆ ಇನ್ನೂ ಓದಿಲ್ಲ. ಓದಬೇಕೆಂಬ ಆಸಕ್ತಿಯಂತೂ ಬಂದಿದೆ. ಸಮಯ ಮಾಡಿಕೊಂಡು ಓದಲೇಬೇಕು.
  ಆದರೆ ಉದಯೋನ್ಮುಖ ಸಾಹಿತಿ ಡಾ. ರಾಜಶೇಖರ ಮಠಪತಿ ಚಲಂ ಅವರ ಪರಿಚಯದ ನಿಮ್ಮ ಬರಹ ಯಾರಾದರೂ ಒಮ್ಮೆ ದೃಷ್ಟಿ ಹಾಯಿಸುವಂತಿದೆ. ನೀವೊಬ್ಬ ಸೂಕ್ಷ್ಮ ಚಿಂತನೆಯುಳ್ಳ ಬರಹಗಾರ್ತಿ ಎಂಬುದು ಇದರಲ್ಲೇ ಅರ್ಥವಾಗುತ್ತದೆ.
  ಇನ್ನೊಬ್ಬರ ಬರಹಕ್ಕೆ ಸ್ಪೂರ್ತಿಯಾಗುವ, ಪ್ರೇರಣೆಯಾಗುವ ನಿಮ್ಮ ವಿಶಾಲ ಮನೋಭಾವಕ್ಕೆ ನನ್ನ ನಮನಗಳು.
  ಮಹಿಳೆಯರಿಗೆ ಯಾವ ಕ್ಷೇತ್ರದಲ್ಲಾದರೂ ಸಾಧನೆಗೆ ಮುಂದಾಗುವ ಹಾದಿಯಲ್ಲಿ ಅತ್ಯಂತ ಕ್ಲಿಷ್ಟಕರವಾದ ಸಮಸ್ಯೆ ಬರುವುದು ಸ್ವತಃ ನನ್ನ ಅನುಭವದ ಸಂಗತಿ.
  ಭಗವಂತ ತಮಗೆ ಸಮಸ್ಯೆಗಳ ಮೆಟ್ಟಿ ಮುನ್ನಡೆಯುವಂತೆ ಇನ್ನೂ ಹೆಚ್ಚಿನ ಶಕ್ತಿ ಸಾಹಿತ್ಯ ಕ್ಷೇತ್ರದಲ್ಲಿ ದಯಪಾಲಿಸಲಿ ಎಂದು ಹಾರೈಸುತ್ತೇನೆ.
  ಹೆಮ್ಮೆಯಿಂದ ಹೇಳುತ್ತೇನೆ ನಾನೊಬ್ಬಳು ನಿಮ್ಮ ಅಭಿಮಾನಿ.

  • Shreedevi keremane says:

   ಸುಧಾ ಮೇಡಂ ನಿಮ್ಮಂತ ಹಿರಿಯರು ಹೀಗೆ ಹೇಳಿದರೆ. ಥ್ಯಾಂಕ್ಯೂ

 10. Shridhar Banvasi says:

  ತುಂಬಾ ಚೆನ್ನಾಗಿದೆ ಮೆಡಮ್. ನಂಗೆ ತುಂಬಾ ಇಷ್ಟವಾಯ್ತು.

 11. Shridhar Banvasi says:

  ಮೆಡಮ್, ವಿಮರ್ಶೆ ತುಂಬಾ ಇಷ್ಟವಾಯ್ತು. ನಿಮ್ಮ ಗ್ರಹಿಕೆಗೆ ಗ್ರೇಟ್ ಸಾಲ್ಯುಟ್!!!
  -ಶ್ರೀಧರ ಬನವಾಸಿ

 12. Shridhar Banvasi says:

  ಮೆಡಮ್, ಪುಸ್ತಕದ ಬಗ್ಗೆ ನಿಮ್ಮ ಗ್ರಹಿಕೆ ತುಂಬಾ ಚೆನ್ನಾಗಿದೆ. ಅತ್ಯುತ್ತಮ ಲೇಖನ.
  -ಶ್ರೀಧರ ಬನವಾಸಿ

 13. ಪುಷ್ಪಾ ನಾಯ್ಕ ಅಂಕೋಲ says:

  ಚಲಂ ರ ಬರಹ ಪರಿಚಯಿಸುವ ಪರಿ ಇಷ್ಟವಾಯ್ತು ಜೊತೆಗೆ ಚಲಂ ಬಗ್ಗೆಯೂ ಬರೆದಿದ್ದೀರಿ ತದಡಿ ಆತಂಕಗಳು ನೈಜತೆಯನ್ನು ಒಳಗೊಂಡಿದೆ ಆ ಸಂದರ್ಭದಲ್ಲಿನ ಜನಸಾಮಾನ್ಯರ ಮಾತುಕತೆ ಗಳು ಪುನಃ ನೆನಪಿಗೆ ತಂದ ಅಂಕಣ ಇಷ್ಟವಾಯ್ತು ಧನ್ಯವಾದಗಳು ನಿಮಗೆ

Leave a Reply

%d bloggers like this: