fbpx

ಸಾಲ ಮನ್ನಾ ಎಂಬ ಸವಾಲು..

ಜಿ ಎನ್ ನಾಗರಾಜ್ 

ಸಾಲ ಮನ್ನಾ ಎಂಬ ಸವಾಲು: ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಾಸ್ಥಾನಗಳಲ್ಲಿ ಚಳುವಳಿಯ ವಿಷಯ. ಕರ್ನಾಟಕದಲ್ಲಿ ಚುನಾವಣೆಯ ವಿಷಯ.

ರೈತರ ಸಮಸ್ಯೆಗಳು ಕರ್ನಾಟಕದ ಚುನಾವಣೆಯ ಕೇಂದ್ರ ವಿಷಯವಾಗಿದ್ದವು ಎಂಬುದಕ್ಕೆ ಸಾಲ ಮನ್ನಾ ಬಗ್ಗೆ ಮೂರೂ ಆಳುವ ಪಕ್ಷಗಳ ನಡುವಣ ಕಹಿ ಚರ್ಚ, ಸವಾಲುಗಳೇ ಸಾಕ್ಷಿ.

ಬಹುಸಂಖ್ಯಾತರಾದ ರೈತರ ಮತ ಗಳಿಸಲು ಸಿದ್ಧರಾಮಯ್ಯನವರ ಸರ್ಕಾರ ಕೊನೆಯ ಗಳಿಗೆಯಲ್ಲಿ ರೈತರ ಸಹಕಾರಿ ಸಾಲವನ್ನು 50,000ವರೆಗೂ ಸೀಮಿತ ಮನ್ನಾ ಮಾಡಬೇಕಾಯಿತು. ಬಿಜೆಪಿ ಪ್ರಣಾಳಿಕೆ ಅದಕ್ಕಿಂತ ಮುಂದೆ ಹೋಗಿ ಒಂದು ಲಕ್ಷದವರೆಗೆ ಸಹಕಾರಿ ಮತ್ತು ಬ್ಯಾಂಕ್ ಸಾಲ ಮನ್ನವನ್ನು ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಮಾಡುವೆನೆಂದು ಘೋಷಿಸಿತು.

ಯಡ್ಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸದ ಮೇಲೆ ಅಧಿಕಾರವಿಲ್ಲದಿದ್ದರೂ ಮಾಡುವ ನಾಟಕ ಮಾಡಿದರು.
ಜನತಾದಳ ರೈತರದು ಮಾತ್ರವೇ ಅಲ್ಲದೆ ನೇಕಾರರ, ಮೀನುಗಾರರ, ಸ್ತ್ರೀ ಶಕ್ತಿ ಸಂಘಗಳ ಒಟ್ಟು ಸಾಲ 54 ಸಾವಿರ ಕೋಟಿ ಎಂದು ಲೆಕ್ಕಿಸಿ ಮನ್ನಾ ಮಾಡುವ ಘೋಷಣೆ ಮಾಡಿತು.

ಅಧಿಕಾರಕ್ಕೆ ಬಂದ 24 ಗಂಟೆಗಳ ಒಳಗಾಗಿ ಸಾಲ ಮನ್ನಾ ಮಾಡಬೇಕೆಂಬುದು ಇಂದಿನ ರಾಜಕೀಯದ ಮುಖ್ಯ ಪ್ರಶ್ನೆಯಾಗಿದೆ.

ಈಗ ನೂತನ ಮುಖ್ಯ ಮಂತ್ರಿ ಕುಮಾರಸ್ವಾಮಿಯವರಿಗೆ ಇದೇ ಒಂದು ಸವಾಲಾಗಿ ಪರಿಣಮಿಸಿದೆ. ಅವರು ಇಷ್ಟೆಲ್ಲಾ ಘೋಷಣೆ ಮಾಡಿದರೂ ನಮಗೆ ಸ್ಥಾನಗಳು ಹೆಚ್ಚಾಗಲಿಲ್ಲ ಎಂಬ ಕೊರಗಿನಲ್ಲಿ ಆಡಿದ ಮಾತನ್ನು ಈಗ ಬಿಜೆಪಿ, ರೈತಸಂಘ, ಮಾಧ್ಯಮಗಳು ಅವರ ವಿರುದ್ಧ ಸಮರಕ್ಕೆ ನೆಪವಾಗಿ ಬಳಸುತ್ತಿದ್ದಾರೆ.

ರಾಜ್ಯದ ಸೀಮಿತ ಆರ್ಥಿಕ ಸಂಪನ್ಮೂಲಗಳ ಮಿತಿಯಲ್ಲಿ ಇದೊಂದು ದೊಡ್ಡ ಹೊರೆಯೇ ! ನೀರಾವರಿ, ವಿದ್ಯುತ್ ಸೇರಿ ಇತರನೇಕ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳಿಗೆ ಅನುದಾನ ಕುಗ್ಗುತ್ತದೆ.

ಆದಕ್ಕಾಗಿಯೇ ಸಿದ್ಧರಾಮಯ್ಯನವರ ಸರ್ಕಾರ ಇದನ್ನು ಕೇಂದ್ರ ಸರ್ಕಾರದ ಮೇಲೆ ತಿರುಗಿಸಲು ಪ್ರಯತ್ನಿಸಿದರೂ ಅದನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಲು ಮಾಡಬೇಕಾದ ಪ್ರಯತ್ನ ಮಾಡದೆ ವಿಫಲವಾಯಿತು. ಇವರ ಕೃಷಿ ಮಂತ್ರಿಗಳಂತೂ ಈ ಬಗ್ಗೆ ಬಾಯೇ ತೆರೆಯಲಿಲ್ಲ. ಕೃಷಿ ಫಸಲುಗಳ ಬೆಲೆ ಕುಸಿದು ಅವರು ಸಂಕಟದಲ್ಲಿರುವಾಗ ಕೂಡಾ ಇದರ ಆಧಾರ ಕೇಂದ್ರ ಸರ್ಕಾರ ಎಂದು ಬಾಯಿ ತೆಗೆಯಲಿಲ್ಲ. ಅದರ ಬಗ್ಗೆ ಅವರಿಗೆ ಅರಿವಾದರೂ ಇತ್ತೇ ಎಂಬುದೂ ಗೊತ್ತೇ ಆಗಲಿಲ್ಲ.

ಲಿಂಗಾಯತ, ಒಕ್ಕಲಿಗ ಜಾತಿಗಳ ರೈತರು ಆಯಾ ಜಾತಿಗಳ ಹೆಸರಿನಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ , ದೇವೇಗೌಡ ನೇತೃತ್ವದ ಜನತಾದಳಕ್ಕೆ ಮತ ಹಾಕಿದರು. ಇದು ಹೀಗೆ ಜಾತಿಯ ಮುಖವಾಡ ಪಡೆಯಿತು.

ರೈತರ ಸಾಲ ಮನ್ನಾ ಆಗಲೂ ಈಗಲೂ ಕೇಂದ್ರ ಸರ್ಕಾರದ ಸಮಸ್ಯೆಯೇ ಹೊರತು ರಾಜ್ಯ ಸರ್ಕಾರದ ಸಮಸ್ಯೆಯಲ್ಲ. ಏಕೆಂದರೆ ಈ ಸಾಲದ ಹೊರೆಯ ಮೂಲದಲ್ಲಿರುವ ಫಸಲುಗಳ ಬೆಲೆ ಕುಸಿತಕ್ಕೆ ವಿದೇಶಗಳಿಂದ ಅವುಗಳ ಆಮದುಗಳೆ ಕಾರಣ. ಅದಕ್ಕೆ ಕೇಂದ್ರ ಸರ್ಕಾರ ವಿವಿಧ ದೇಶಗಳೊಡನೆ ಮಾಡಿಕೊಂಡಿರುವ ಮುಕ್ತ ವ್ಯಾಪಾರದ ಒಪ್ಪಂದಗಳೇ ಕಾರಣ‌. ಜೊತೆಗೆ ರಸಗೊಬ್ಬರ , ಔಷಧಿಗಳ ಆಮದುಗಳು, ರೂಪಾಯಿ ಬೆಲೆ ಕಡಿಮೆಯಾಗಿರುವುದು ಇಂತದ್ದೆಲ್ಲಾ ಕಣ್ಣಿಗೆ ಕಾಣದ ಕಾರಣಗಳೂ ಇವೆ.

ಬ್ಯಾಂಕುಗಳು ಕೇಂದ್ರ ಸರ್ಕಾರದ ಒಡೆತನದಲ್ಲಿವೆ ಎಂಬ ಕಾರಣವೂ ಸೇರಿದೆ. ಆದರೆ ಮುಖ್ಯವಾಗಿ ಯಾರು ಸಮಸ್ಯೆಗೆ ಕಾರಣರೋ ಅವರೇ ಅದರ‌ ಪರಿಹಾರದ ಹೊಣೆ ಹೊರಬೇಕಾಗುತ್ತದೆ. ಇನ್ನು ದೊಡ್ಡ ಕಾರ್ಪೊರೇಟ್‌ಗಳಿಗೆ ತೆರಿಗೆಯಲ್ಲಿ ಇಪ್ಪತ್ತು ಲಕ್ಷ ಕೋಟಿ ರಿಯಾಯತಿ, ಅವುಗಳ ಎರಡೂವರೆ ಲಕ್ಷ ಕೋಟಿ ಬ್ಯಾಂಕ್ ಸಾಲ ಮನ್ನಾ ಮಾಡಿದ ದುಂದು ಕೂಡಾ ನಮ್ಮ ಮುಂದಿದೆ.

ಹೀಗಿರುವಾಗ ಕೇಂದ್ರ ಸರ್ಕಾರವೇ ರೈತರ ಸಾಲ ಮನ್ನಾ ಮಾಡಬೇಕು ಎಂಬುದು ಸಕಾರಣ ಒತ್ತಾಯವೇ !

ಆದರೆ ಈ ಬಗ್ಗೆ ರಾಜ್ಯದ ಪಕ್ಷಗಳು ಇದು ರಾಜ್ಯ ಸರ್ಕಾರದ ಹೊಣೆ ಎಂಬಂತೆ ಭಾವಿಸಿ ಅದಕ್ಕಾಗಿ ರಾಜ್ಯ ಬಜೆಟ್ ಬಲಿಕೊಡಲು ಮುಂದಾಗಿರುವುದು ಈ ಸಮಸ್ಯೆಯ ಮೂಲದ ಬಗ್ಗೆ ಅರಿವಿಲ್ಲದ ಕ್ರಮ. ಜೊತೆಗೆ ಹೇಗಾದರೂ ಮತಗಳಿಸಿ ಅಧಿಕಾರಕ್ಕೆ ಬರಬೇಕೆಂಬ ಆತುರ, ಕಾತರ.

ಅದರಿಂದಾಗಿ ಇಂತಹ ಇರುಕಿನಲ್ಲಿ ಸಿಕ್ಕಿಕೊಳ್ಳುವಂತಾಗಿದೆ.

ಇದೇ ಸಮಯದಲ್ಲಿ ಕರ್ನಾಟಕಕ್ಕಿಂತ ಸೀಮಿತ ಸಂಪನ್ಮೂಲದ ಕೇರಳ ಈ ಸಮಸ್ಯೆಯನ್ನು ಹತ್ತಾರು ಸಾವಿರ ಕೋಟಿ ಬಜೆಟ್ ಹಣ ನೀಡಿಕೆಯ ಪ್ರಶ್ನೆಯೇ ಇಲ್ಲದಂತೆ ಪರಿಹರಿಸಿಕೊಂಡಿದೆ. ಒಂದು ಋಣ ಪರಿಹಾರ ಕಾನೂನಿನ ಮೂಲಕ

ಕೇರಳದ ಋಣ ಭಾರ ಪರಿಹಾರ ಕಾಯಿದೆ

ಎಂಬ ಖಾಯಂ ವ್ಯವಸ್ಥೆ

ರೈತರಿಗೆ ಕೇವಲ ಮುಂಗಾರಿನಲ್ಲಿ 50,000 ಕೋಟಿ ನಷ್ಟ, ಕೇಂದ್ರ ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆ ಬೆಳೆ ವೆಚ್ಚಕ್ಕಿಂತ ಕಡಿಮೆಯಾದುದರಿಂದ. ಎರಡು ಲಕ್ಷ ಕೋಟಿ ರೂ ನಷ್ಟ ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಪ್ರಕಾರ ಬೆಲೆ ನಿಗದಿ ಮಾಡಲು ನಿರಾಕರಿಸಿದುದರಿಂದ.

ಇನ್ನು ಒಂದು ವರ್ಷದಲ್ಲಿ ? ಮೋದಿ ಸರ್ಕಾರದ ನಾಲ್ಕು ವರ್ಷದಲ್ಲಿ ? ರಾಜ್ಯ ಸರ್ಕಾರಗಳು ಬೆಂಬಲ ಬೆಲೆ ಹೆಚ್ಚಿಸುವಂತಿಲ್ಲ ಎಂಬ ನಿರ್ಬಂಧ ಬೇರೆ.

ಹೀಗೆ ಹಲವು ಕಾರಣಗಳಿಗಾಗಿ ಸಾಲ ಮನ್ನಾ ಕೇಂದ್ರ ಸರ್ಕಾರದ ಹೊಣೆಯೇ ಆಗಬೇಕಾಗಿದೆ.

ಕೇರಳದಲ್ಲಿ ಎಡರಂಗ ಸರ್ಕಾರ, ರೈತರ ಆತ್ಮಹತ್ಯೆ ತಪ್ಪಿಸಲು ಒಂದು ಋಣ ಭಾರ ಪರಿಹಾರ ಕಾಯಿದೆಯನ್ನು ಅಂಗೀಕರಿಸಿತು. ರೈತರು ಬ್ಯಾಂಕ್, ಸಹಕಾರಿ ರಂಗ, ಖಾಸಗಿ ಫೈನಾನ್ಸ್ ಕಂಪನಿಗಳು, ಬಡ್ಡಿ ಸಾಹುಕಾರರು ಯಾವುದೇ ಮೂಲದಿಂದ ಸಾಲ ಪಡೆದಿದ್ದರೂ ಆ ಎಲ್ಲಾ ಸಾಲ ಈ ಕಾಯಿದೆಯಲ್ಲಿ ಒಳಗೊಳ್ಳುವಂತಹ ಕ್ರಮ ಈ ದೇಶದಲ್ಲಿಯೇ ಪ್ರಪ್ರಥಮ.

ಏಕೆಂದರೆ ಎಲ್ಲರೂ ಕೇಂದ್ರ ಸರ್ಕಾರದ ಬ್ಯಾಂಕುಗಳು, ಸಹಕಾರಿ ರಂಗದ ಸಾಲಗಳ ಮಾತನ್ನಷ್ಟೆ ಆಡುತ್ತಾರೆ. ಖಾಸಗಿ ಬ್ಯಾಂಕುಗಳು, ಬಡ್ಡಿ ಸಾಹುಕಾರರುಗಳ ಮೀಟರ್ ಬಡ್ಡಿ ಸಾಲಗಳ ಮಾತೇ ಆಡುವುದಿಲ್ಲ. ರೈತರ ಆತ್ಮಹತ್ಯೆಗಳಿಗೆ ಹೆಚ್ಚು ಕಾರಣವಾಗುವುದೇ ಖಾಸಗಿಯವರ ಸಾಲ ವಸೂಲಿ ಗೂಂಡಾಗಿರಿ.

ಮತ್ತೊಂದು ಮಹತ್ವದ ವಿಷಯವೆಂದರೆ ಇದು ಒಮ್ಮೆ‌ ಮಾತ್ರ ಸಾಲ ಮನ್ನಾ ಕ್ರಮ ಅಲ್ಲ. ಇದು ಖಾಯಂ ವ್ಯವಸ್ಥೆ. ಮುಂದೆಂದೂ ರೈತರಿಗೆ ಸಾಲ ಕಟ್ಟಲಾಗದ ಕಷ್ಟಕರ ಪರಿಸ್ಥಿತಿ ಒದಗಿದರೂ ಈ ಕಾಯಿದೆ ಅನ್ವಯವಾಗುತ್ತದೆ.

ಈ ಕಾಯಿದೆ ಬೆಲೆಯ ಕುಸಿತ, ಬರಗಾಲ, ಪ್ರವಾಹ, ಬೆಳೆಯ ರೋಗ, ಕೀಟ ಬಾಧೆಗಳು ಮತ್ಯಾವುದೇ ಸಂದರ್ಭದಲ್ಲಿ ರೈತ ನಷ್ಟಕ್ಕೊಳಗಾಗಿ ಸಾಲ ಕಟ್ಟಲಾಗದ ಪರಿಸ್ಥಿತಿಗೆ ದೂಡಲ್ಪಟ್ಟರೆ ಆ ಪ್ರದೇಶದಲ್ಲಿ, ಅಥವಾ ಆ ಬೆಳೆಗಳಿಗೆ ನೀಡಿದ ಸಾಲ ವಸೂಲಾತಿಯನ್ನು ಮುಂದೂಡುವ, ಬಡ್ಡಿ ರಿಯಾಯಿತಿ, ಅಸಲಿನ ರಿಯಾಯತಿ ನೀಡುವ ಕ್ರಮಗಳನ್ನು ಸರ್ಕಾರ ಘೋಷಿಸಲು ಅವಕಾಶ ನೀಡುತ್ತದೆ.

ಕೇರಳದ ಕಾಯಿದೆ ಯಾವುದೇ ರೈತ ಯಾವುದೇ ಮೂಲದಿಂದ ಸಾಲ ಪಡೆದು ಅದನ್ನು ಕಟ್ಟಲಾಗದ ಸ್ಥಿತಿ ತಲುಪಿದ್ದರೆ ಜಿಲ್ಲಾ ಮಟ್ಟದ ಋಣ ಪರಿಹಾರ ಮಂಡಳಿಗೆ ಅರ್ಜಿ ಹಾಕಿಕೊಳ್ಳಬಹುದು. ಈ ಮಂಡಳಿ ತಕ್ಷಣ ಎಲ್ಲ ಸಾಲ ವಸೂಲಿಗೆ ತಡೆ ನೀಡುತ್ತದೆ.
ನಂತರ ಎಲ್ಲಾ ಮೂಲಗಳ ಸಾಲದ ಬಗ್ಗೆ ಸಂಬಂಧಪಟ್ಟವರು ತಮ್ಮ ಲೆಕ್ಕವನ್ನು, ರೈತ ತನ್ನ ಅಸಹಾಯಕತೆಯ ಕಾರಣಗಳನ್ನು ಈ ಮಂಡಳಿಯ ಮುಂದಿಡಬೇಕು. ನಂತರ ಮಂಡಳಿ ಬ್ಯಾಂಕುಗಳು ಎಷ್ಟು, ಸಹಕಾರಿ ರಂಗ ಎಷ್ಟು, ಖಾಸಗಿಯವರು ಎಷ್ಡು ಸಾಲ ಮನ್ನಾ ಮಾಡಬೇಕೆಂದು ಮಂಡಳಿ ನಿರ್ದೇಶ ನೀಡುತ್ತದೆ.

ಈ ಸಾಲ‌ಮನ್ನಾ ಆಯಾ ಸಹಕಾರಿ ಸಂಘ, ಬ್ಯಾಂಕಿಗೆ ಭರಿಸಲಾರದಂತಹ ಪರಿಸ್ಥಿತಿಯಲ್ಲಿ ಸರ್ಕಾರ ಸಣ್ಣ, ಮಧ್ಯಮ ರೈತರಿಗೆ ಐವತ್ತು ಸಾವಿರ ರೂಗಳಿಗೆ ಮೀರಲಾರದಂತೆ ಪರಿಹಾರ ನೀಡುತ್ತದೆ.

ಹೀಗೆ ಸರ್ಕಾರಕ್ಕೆ ಹತ್ತಾರು ಸಾವಿರ ಕೋಟಿ ಒಮ್ಮೆಗೆ ಭರಿಸುವ ಹೊರೆಯೂ ಇಲ್ಲ. ಸಾಲ ನೀಡಿದ ಸಂಸ್ಥೆಯ ಮೇಲೂ ಸಾಲ‌ಮನ್ನಾ ಹೊಣೆ ಹಾಕಲಾಗುತ್ತದೆ. ಆದ್ದರಿಂದ ಆ ಸಂಸ್ಥೆಗಳು ಬೇಜವಾಬುದಾರಿಯಿಂದ ಸಾಲ ನೀಡುವುದನ್ನು, ಅಲ್ಲಿ ಭ್ರಷ್ಟಾಚಾರವನ್ನು ಪ್ರತಿಬಂಧಿಸುತ್ತದೆ.

ಮತ್ತು ಮೇಲೆ ಹೇಳಿದಂತೆ ಇದು one time ಕ್ರಮ ಅಲ್ಲ. ಖಾಯಂ ವ್ಯವಸ್ಥೆ .

ಈ ಮಾದರಿಯನ್ನು ಹಲವು ಬಾರಿ ಸಿದ್ಧರಾಮಯ್ಯನವರ ಗಮನಕ್ಕೆ ತರಲಾಯಿತು. ಆದರೆ ಅವರ ಮನಸ್ಸಿಗೆ ಇದು ಹೋಗಲೇ ಇಲ್ಲ. ಆಗ ಅಲ್ಲಿಯೆ ಇದ್ದ ಕೃಷಿ ಸಚಿವರು,ಸಹಕಾರಿ ಸಚಿವರುಗಳಂತೂ ಇದಕ್ಕೂ ನಮಗೂ ಸಂಬಂಧವಿಲ್ಲದಂತಿದ್ದರು

2 Responses

  1. ಶ್ರೀರಂಗ ಯಲಹಂಕ says:

    ರೈತರ ಸಾಲಕ್ಕೆ ಇನ್ನೊಂದು ಕಾರಣ ಎಂದರೆ ಬೆಲೆ ಏರಿದೆಯೆಂದೋ ಅಥವಾ ಏರುತ್ತದೆ ಎಂದೋ ಎಲ್ಲರೂ ಈರುಳ್ಳಿ, ಟಮೋಟ, ಹಸಿರು ಮೆಣಸಿನಕಾಯಿ ಬೆಳೆಯುವುದು. ಒಮ್ಮೆಲೆ ಜಾಸ್ತಿ ಸರಕು ಬಂದಾಗ ಸಹಜವಾಗಿ ಬೆಲೆ ಕುಸಿತವಾಗುತ್ತದೆ. ಆಗ ತಾವು ಲಾರಿ ಬಾಡಿಗೆ ಕೊಡಲೂ ಸಾಧ್ಯವಾದಾದಾಗ, ಬೀದಿಯಲ್ಲೇ ಅವುಗಳನ್ನು ಚೆಲ್ಲಿ ಹೋಗುತ್ತಾರೆ. ಮದುವೆ ಸೀಸನ್ ನಲ್ಲಿ ಟಮೋಟ, ಹುರುಳಿಕಾಯಿಗಳ ಬೆಲೆ ಗಗನಕ್ಕೇರುತ್ತದೆ. ವರಮಹಾಲಕ್ಷಿ ಹಬ್ಬದಲ್ಲಿ ಹೂವಿನ ಬೆಲೆ ಕೇಜಿಗೆ ಒಂದೆರೆಡು ಸಾವಿರವನ್ನೂ ಮೀರುತ್ತದೆ. ಆಯುಧ ಪೂಜೆ, ಗಣಪತಿ ಹಬ್ಬಗಳಲ್ಲಿ ಬಾಳೆ ಕಂದಿನ ಬೆಲೆ ಏರುತ್ತದೆ. ಆಗ ರೈತರು ಲಾಭ ಮಾಡಿಕೊಳ್ಳುವುದಿಲ್ಲವೆ? ರೈತರಿಗೆ ಈ ಕಹಿ ಸತ್ಯವನ್ನು ಮನಗಾಣಿಸುವ ಕೆಲಸ ಮಾಡಿದರೆ ರೈತ ವಿರೋಧಿ ಎಂಬ ಪಟ್ಟ ಖಾತರಿ. ಕಳೆದ ವಾರ ಬಹುಶಃ ಮಧ್ಯಪ್ರದೇಶದಲ್ಲಿ ಇರಬಹುದು ಈರುಳ್ಳಿಯ ಬೆಲೆ ಸಗಟು ಮಾರುಕಟ್ಟೆಯಲ್ಲಿ ಕೇಜಿಗೆ ಎರಡು, ಮೂರು ರೂಪಾಯಿಗಳಿಗೆ ಇಳಿಯಿತು. ಇದಕ್ಕೆ ಕಾರಣ ಅತಿಯಾಗಿ ಸರಕು ಬಂದ್ದಿದ್ದೇ ಹೊರತು ಬೇರೇನೂ ಅಲ್ಲ.

  2. Kiran says:

    The above comment by Sriranga makes sense, it can be loosely called “agriculture management, or crop management or crop distribution” or any other way, but the basic idea is everyone growing crops blindly without looking what others are doing, someone should take a 10000 feet look and make sure there is no shortage or excess of any one particular type of crop, so no one suffers..This is based on common sense, but these days no one cares about common sense!!!
    The whole idea of waiving the loans is counter-intuitive, if the loans keep getting waived again & again & again, then the word “LOAN” loses its meaning, we could just call it free allowance.
    Repeated calls for waiving loans sets a bad precedent and gives a wrong and immoral message to the whole society…Well I don’t mean to be inhuman and loans should be either reduced/deferred/waived under extraordinary circumstances, but in last decade we are hearing about loan waiving a lot…

Leave a Reply

%d bloggers like this: