fbpx

ಕ್ಯಾಲೆಂಡರ್ ನೋಡುವುದೇ ಅಂದಿನಿಂದ ನನ್ನ ಹೊಸ ಕೆಲಸವಾಗಿ ಬಿಟ್ಟಿತು..

”ಪೆಡ್ರೋ ಮಕಾಂದಾರ ಪಾಂಡೋರಾ ಡಬ್ಬದೊಳಗೆ”

ಹಾಗೆ ನೋಡಿದರೆ ಆ ಪುಟ್ಟ ಜಾಗವು ಅಪರಿಚಿತವೇನೂ ಆಗಿರಲಿಲ್ಲ.

ವೀಜ್ ನ ಹೃದಯಭಾಗದಲ್ಲೇ ಇತ್ತು ಆ ಅಂಗಡಿ. ಇನ್ನು ಅಂಗಡಿಗೆ ಮುಖಾಮುಖಿಯಾಗಿ ವೀಜ್ ನ ಮಟ್ಟಿಗೆ ಕೊಂಚ ಹೆಚ್ಚೇ ದುಬಾರಿಯಾಗಿರುವ ಗ್ರಾಂದೆ ಹೋಟೇಲ್ ಬೇರೆ ಇತ್ತು. ನಿತ್ಯವೂ ಇವುಗಳನ್ನು ದಾಟಿಕೊಂಡೇ ನಾವು ತಿರುಗಾಡುತ್ತಿದ್ದೆವು. ತಾರಾ ಹೋಟೇಲಿನಂತಿರುವ ಗ್ರಾಂದೆಯನ್ನು ವೀಜ್ ನಂತಹ ಸ್ಥಳದಲ್ಲಿ ಹೇಗೆ ನಿಭಾಯಿಸುತ್ತಿದ್ದಾರೆ ಎಂಬುದೇ ಕೌತುಕ ನಮಗೆ ಯಾವಾಗಲೂ.

ಏಕೆಂದರೆ ವೀಜ್ ಪ್ರವಾಸಿ ತಾಣವೇನೂ ಆಗಿರಲಿಲ್ಲ. ಇತ್ತ ಸದಾಕಾಲ ಚಟುವಟಿಕೆಯಲ್ಲಿರುವ ನಗರವೂ ಆಗಿರಲಿಲ್ಲ. ಆದರೂ ಈ ಮಟ್ಟದ ಒಂದು ಹೋಟೇಲ್ ಇಲ್ಲಿ ತಲೆಯೆತ್ತಿ ನಿಂತಿತ್ತು. ಶ್ರೀಮಂತ ಅಂಗೋಲನ್ನರು, ಮೇಲ್ಮಧ್ಯಮ ವರ್ಗದ ಸರಕಾರಿ ಅಧಿಕಾರಿಗಳು ಮತ್ತು ಕೈಯಲ್ಲಿ ಒಂದಿಷ್ಟು ಡಾಲರುಗಳು ಹರಿದಾಡುತ್ತಿದ್ದ ನನ್ನಂತಹ ಬೆರಳೆಣಿಕೆಯ ವಿದೇಶೀಯರನ್ನು ಬಿಟ್ಟರೆ ಬೇರ್ಯಾರೂ ಅಲ್ಲಿಗೆ ಹೋಗುತ್ತಿರಲಿಲ್ಲ.

ಇವರನ್ನು ಹೊರತುಪಡಿಸಿದರೆ ವೀಜ್ ನ ಹೃದಯ ಭಾಗದಲ್ಲಿರುವ ಅಸೆಂಬ್ಲಿ ಸಭಾಂಗಣ, ಗವರ್ನರ್ ಕಚೇರಿ ಇತ್ಯಾದಿಗಳಿಂದಾಗಿ ಕೆಲ ಸ್ಥಳೀಯ ರಾಜಕಾರಣಿಗಳು ಅಲ್ಲಿ ಬಂದು ಹೋಗುತ್ತಿದ್ದರು. ಗವರ್ನರ್ ಸಾಹೇಬರ ಕೆಲ ಸಭೆಗಳು ಆಗಾಗ ಅಲ್ಲಿ ನಡೆಯುತ್ತಿರುವ ಬಗ್ಗೆ ನಮಗೆ ಮಾಹಿತಿಯಿತ್ತು! ಒಟ್ಟಾರೆಯಾಗಿ ವೀಜ್ ನಂತಹ ಪುಟ್ಟ ಜಾಗಕ್ಕೆ ಆ ಹೋಟೇಲು ಕೊಂಚ ಹೆಚ್ಚೇ ವಿಲಾಸಿ ವಸತಿಗೃಹವೆಂಬಂತೆ ಕಾಣುತ್ತಿದ್ದುದರಲ್ಲಿ ಸಂಶಯವಿಲ್ಲ.

ಇರಲಿ. ನಾನು ನಿಜಕ್ಕೂ ಇಂದು ಹೇಳಹೊರಟಿದ್ದು ಗ್ರಾಂದೆ ಹೋಟೇಲ್ ಬಗ್ಗೆಯಲ್ಲ. ಬದಲಾಗಿ ಅದಕ್ಕೆ ಮುಖಾಮುಖಿಯಾಗಿದ್ದ ಒಂದು ಪುಟ್ಟ ಅಂಗಡಿಯ ಬಗ್ಗೆ. ಈ ಜಾಗವು ನನ್ನ ಗಮನ ಸೆಳೆದಿದ್ದು ಹೇಗೆಂದರೆ ಅಲ್ಲಿ ಮಾರಾಟಕ್ಕಿಡಲಾಗಿದ್ದ ಕಲಾಕೃತಿಗಳು, ಬೊಂಬೆಗಳು ಮತ್ತು ಕರಕುಶಲ ವಸ್ತುಗಳಿಂದಾಗಿ. ರಾಜಧಾನಿಯಾಗಿದ್ದ ಲುವಾಂಡಾದಲ್ಲಿ ಇಂಥಾ ಅಂಗಡಿಗಳು ಸಾಕಷ್ಟಿದ್ದರೂ ವೀಜ್ ನಲ್ಲಿ ಇದೊಂದೇ ಇರುವ ಪರಿಣಾಮವಾಗಿ ಅಂಗಡಿಯ ಮಾಲೀಕನಿಗೆ ತಕ್ಕಮಟ್ಟಿನ ಲಾಭವೇ ಆಗುತ್ತಿದೆಯೇನೋ ಎಂಬುದು ನನ್ನ ಲೆಕ್ಕಾಚಾರ.

ಹಂಚಿನ ಮಾಡನ್ನು ಹೊಂದಿದ್ದ, ಒಂದೇ ಮಹಡಿಯ ಉದ್ದನೆಯ ಆ ಕಟ್ಟಡ ಸಂಕೀರ್ಣದಲ್ಲಿ ಮೂರು ಬಾಗಿಲುಗಳಿದ್ದವು. ಒಂದು ಸದಾಕಾಲ ಮುಚ್ಚಿರುತ್ತಿತ್ತು ಅಥವಾ ನಾನು ಹಾದುಹೋಗುವ ಸಮಯದಲ್ಲಿ ಅದು ಮುಚ್ಚಿಯೇ ಇರುತ್ತಿತ್ತು. ಅದರ ಪಕ್ಕ ಕ್ಯಾನ್ವಾಸೊಂದನ್ನಿಟ್ಟು ಒಬ್ಬ ಚಿತ್ರಕಲಾವಿದ ಸದಾ ಚಿತ್ರಗಳನ್ನು ಬಿಡಿಸುತ್ತಿದ್ದ. ತಯಾರಾದ ಕಲಾಕೃತಿಗಳನ್ನು ಪಕ್ಕದಲ್ಲೇ ಇಟ್ಟು ಮಾರುತ್ತಲೂ ಇದ್ದ. ಎರಡನೇ ಬಾಗಿಲು ಈ ಕರಕುಶಲ ವಸ್ತುಗಳ ಅಂಗಡಿಗೆ ಸೇರಿದ್ದಾಗಿತ್ತು.

ಮೂರನೆಯದ್ದೂ ಕೂಡ ಯಾವತ್ತೂ ತೆರೆದಿದ್ದನ್ನು ನಾನು ನೋಡಿರಲಿಲ್ಲ. ಆ ಬಾಗಿಲಿನೆದುರು ಮಾತ್ರ ಓರ್ವ ಹೆಂಗಸು ಇದ್ದಿಲಿನ ಪುಟ್ಟ ಒಲೆಯನ್ನಿಟ್ಟು ಯಾವಾಗಲೂ ಅದೇನೋ ಕರಿದ ತಿಂಡಿಗಳನ್ನು ಮಾಡುತ್ತಿದ್ದಳು. ಒಟ್ಟಾರೆಯಾಗಿ ವೀಜ್ ನ ಹೃದಯಭಾಗದಲ್ಲಿ ಬ್ಯಾಂಕು, ಪಂಚತಾರಾ ವಸತಿಗೃಹ, ನ್ಯಾಯಾಂಗ ಕಚೇರಿಯ ಕಟ್ಟಡ, ಸರಕಾರಿ ಕಚೇರಿಗಳು, ಅಸೆಂಬ್ಲಿ ಸಭಾಂಗಣ… ಇತ್ಯಾದಿಗಳ ಮಧ್ಯೆ ಇದೊಂದು ಮಾತ್ರ ಗುಂಪಿಗೆ ಸೇರದ ಪದದಂತಿದ್ದು ಕೊಂಚ ವಿಚಿತ್ರವಾಗಿ ಕಾಣುತ್ತಿದ್ದಿದ್ದಂತೂ ಸತ್ಯ.

ಒಮ್ಮೆ ಹೋಗಿ ನೋಡಬೇಕು ಎಂದು ಯಾವಾಗಲೂ ಯೋಚಿಸುತ್ತಿದ್ದ ನಾನು ಕೊನೆಗೂ ಒಂದು ದಿನ ಅತ್ತ ನಡೆದೇಬಿಟ್ಟೆ. ಅಂದು ಆ ಪುಟ್ಟ ಮೂರ್ತಿಗಳು, ಕಲಾಕೃತಿಗಳು ಹತ್ತಿರವಾದಂತೆ ಮತ್ತಷ್ಟು ಸುಂದರವಾಗಿ ಕಂಡವು. ಮೂರ್ತಿಗಳನ್ನು ಕೊಳ್ಳುವ ಗ್ರಾಹಕನ ಸೋಗಿನಲ್ಲಿ ಅಂದು ನಾನು ಹೋಗಿದ್ದರೂ ಮತ್ತಷ್ಟು ಹೆಚ್ಚಿನದನ್ನು ತಿಳಿದುಕೊಳ್ಳುವ ಉದ್ದೇಶವೇ ಮುಖ್ಯವಾಗಿತ್ತು. ಹೀಗಾಗಿ ಎಲ್ಲವನ್ನೂ ಅಚ್ಚರಿಯ ಕಣ್ಣುಗಳಿಂದ ನೋಡುತ್ತಾ ಏನಿವೆಲ್ಲಾ ಎಂಬುದನ್ನು ಅರಿತುಕೊಳ್ಳಲು ಯತ್ನಿಸಿದೆ. ಮಧ್ಯದ ಬಾಗಿಲಿನತ್ತ ಬಂದ ನಾನು ಹೊರಗಡೆಯ ವರಾಂಡಾದಲ್ಲಿಟ್ಟಿದ್ದ ಬಗೆಬಗೆಯ ಕಲಾಕೃತಿಗಳನ್ನು ನೋಡುತ್ತಾ ಒಳನಡೆದೆ.

ಈ ಬಾರಿ ಕೋಣೆಯೊಳಗೆ ಮಾತ್ರ ನನಗೆ ಅಚ್ಚರಿಯೇ ಕಾದಿತ್ತು. ನಾಲ್ಕೈದು ಜನ ಕಲಾವಿದರು ಒಂದೊಂದು ಮೂಲೆಯಲ್ಲಿ ಕುಳಿತುಕೊಂಡು ತಮ್ಮದೇ ಆದ ಕೆಲಸಗಳಲ್ಲಿ ಮಗ್ನರಾಗಿದ್ದರು. ಒಬ್ಬ ಬುಡಕಟ್ಟು ಮಹಿಳೆಯೊಬ್ಬಳನ್ನು ತನ್ನ ಕ್ಯಾನ್ವಾಸಿನಲ್ಲಿ ಮೂಡಿಸುತ್ತಿದ್ದ. ಇನ್ನೊಬ್ಬ ಮಣ್ಣಿನ ಶಿಲ್ಪವೊಂದನ್ನು ಮಾಡುತ್ತಿದ್ದ. ಮತ್ತೊಬ್ಬ ಪ್ಲಾಸ್ಟರ್ ಆಫ್ ಪ್ಯಾರಿಸ್ಸಿನಲ್ಲಿ ಏನೋ ತನ್ನ ಕೈಚಳಕವನ್ನು ಪ್ರಯತ್ನಿಸುತ್ತಿದ್ದ. ಇದು ಕಲಾವಿದರದ್ದೇ ಅಡ್ಡಾ ಅನ್ನುವುದಕ್ಕೆ ಚೆಲ್ಲಾಡಿದ್ದ ಬಣ್ಣಗಳು, ಬಣ್ಣಬಣ್ಣದ ಕಾಗದದ ಚೂರುಗಳು, ಚಿಕ್ಕಪುಟ್ಟ ಚಿತ್ರವಿಚಿತ್ರ ವಸ್ತುಗಳು ಸಾಕ್ಷಿಯಾಗಿದ್ದವು. ‘ರೋಗಿ ಬಯಸಿದ್ದೂ ಹಾಲು-ಅನ್ನ, ವೈದ್ಯರು ಹೇಳಿದ್ದೂ ಹಾಲು-ಅನ್ನ’ ಅನ್ನುವಂತೆ ನಾನು ಸರಿಯಾದ ಜಾಗಕ್ಕೇ ಬಂದು ತಲುಪಿರುವೆನೆಂದು ನನಗಂದು ಖಾತ್ರಿಯಾಯಿತು.

ಪೆಡ್ರೋ ಮಕಾಂದಾ ಎಂಬಾತ ಅಂದು ನಮ್ಮನ್ನು ಸ್ವಾಗತಿಸಿದ. ಐದಡಿಗಿಂತ ಕೊಂಚ ಎತ್ತರವಿದ್ದ ಸಣಕಲ ಆತ. ದೊಗಲು ಅಂಗಿ-ಪೈಜಾಮಾವನ್ನು ಧರಿಸಿದ್ದ, ವೃದ್ಧಾಪ್ಯಕ್ಕೆ ಆಗಲೇ ಬಲಗಾಲಿರಿಸಿ ಪ್ರವೇಶಿಸಿದ್ದ ಸಾಧು ಮನುಷ್ಯ. ಅದೇಕೋ ಏನೋ, ನಾನು ಭಾರತೀಯ ಎಂದಾಗ ಅವರ ಕಣ್ಣಲ್ಲೊಂದು ಅದ್ಭುತ ಹೊಳಪು. ಭಾರತೀಯರು ಭಾರೀ ಸ್ನೇಹಜೀವಿಗಳು ಎಂದು ನಗೆಯಾಡುತ್ತಾ ನನ್ನನ್ನವರು ಆಪ್ತವಾಗಿ ಆಲಂಗಿಸಿದರು.

ಭಾರತಕ್ಕೂ ಅವರಿಗೂ ಯಾವ ಸಂಬಂಧವೂ ಇಲ್ಲದಿದ್ದರೂ ಭಾರತವೆಂದರೆ ಅವರಿಗೆ ವಿಶೇಷವಾದ ಅಕ್ಕರೆಯಂತೆ. ಅಂತೂ ಖುಷಿಯಿಂದ ನನ್ನನ್ನು ಸ್ವಾಗತಿಸಿ ಕಾರ್ಯಾಲಯದಂತಿದ್ದ ಒಳಗಿನ ಪುಟ್ಟ ಗೂಡೊಂದರಲ್ಲಿ ನನ್ನನ್ನು ಕೂರಿಸಿಬಿಟ್ಟರು. ಒಂದು ಕುರ್ಚಿ ದುಭಾಷಿಗೂ ಸಿಕ್ಕಿತು. ಇಕ್ಕಟ್ಟಾದ ಆ ಕೋಣೆಯ ಸೂರಿನ ಮೂಲೆಯಲ್ಲಿ ಚಿಕ್ಕದೊಂದು ಬಲ್ಬ್ ಸುಮ್ಮನೆ ಉರಿಯುತ್ತಿತ್ತು. ಬಿಲದಂತಿದ್ದ ಆ ಕತ್ತಲೆಯ ಗೂಡಿನಲ್ಲಿ ಕೊಂಚವಾದರೂ ಬೆಳಕಿದ್ದಿದ್ದು ಅದರ ಕೃಪೆಯಿಂದಲೇ.

ಪೆಡ್ರೋ ಅಂದು ಬಹಳ ಸಂತಸದಿಂದಲೇ ಮಾತಾಡಿದರು. ನೋಟ್ ಮಾಡಿಕೊಳ್ಳಲೇ ಎಂದು ಕೇಳಿದರೆ ”ಓಹೋ ಧಾರಾಳವಾಗಿ…” ಅಂದೂಬಿಟ್ಟರು. ‘ಗ್ರೂಪು ದಿ ಟ್ರಡಿಸಿಯೋನಲ್ ಝೋಬೋ ದಿಯಾ ಮಕಾಂದಾ’ ಎಂಬ ಹೆಸರಿನಲ್ಲಿ ಕಲಾವಿದರ ತಂಡವೊಂದನ್ನು ಕಟ್ಟಿಕೊಂಡು ಕಳೆದ ನಾಲ್ಕು ದಶಕಗಳಿಂದ ಕ್ರಿಯಾಶೀಲರಾಗಿದ್ದರು ಪೆಡ್ರೋ. 1977 ರಲ್ಲಿ ಈ ತಂಡವನ್ನು ಅವರು ಆರಂಭಿಸಿದ್ದರಂತೆ. ಅಂದಿನಿಂದ ಇಂದಿನವರೆಗೂ ಆರ್ಥಿಕವಾಗಿ ಹೇಳಿಕೊಳ್ಳುವಷ್ಟು ಲಾಭವೇನೂ ಆಗಿರದಿದ್ದರೂ ಕಲೆಯ ಮೇಲಿನ ಪ್ರೀತಿಯಿಂದಾಗಿ ಅವರ ಪಯಣವು ನಿಲ್ಲದೆ ಸಾಗಿತ್ತು.

‘ಕಾರ್ನಿವಲ್’ ಅಂಗೋಲಾದ ಪ್ರಮುಖ ಹಬ್ಬಗಳಲ್ಲೊಂದು. ಕ್ರಿಸ್ಮಸ್ ಒಂದನ್ನು ಬಿಟ್ಟರೆ ಅಂಗೋಲಾದಲ್ಲಿ ಬಹಳ ಉತ್ಸಾಹದಿಂದ ಮತ್ತು ಅದ್ದೂರಿಯಾಗಿ ಆಚರಿಸಲ್ಪಡುವ ಹಬ್ಬವೆಂದರೆ ಇದೊಂದೇ. ದಸರೆಗೆ ನಮ್ಮ ಮೈಸೂರು ಸಜ್ಜಾದಂತೆ ಇಡೀ ದೇಶವೇ ಕಾರ್ನಿವಲ್ ಹಬ್ಬಕ್ಕೆ ಸಜ್ಜಾಗುವುದು ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಒಂದು ರೂಢಿ.

ಪೆಡ್ರೋರ ನೃತ್ಯತಂಡವು ಹಲವು ವರ್ಷಗಳಿಂದ ಹೀಗೆ ಕಾರ್ನಿವಲ್ ನಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ತನ್ನ ಹಳೆಯ ಫೋಟೋಗಳನ್ನು ತೋರಿಸುತ್ತಾ ಕೆಲ ಪ್ರಮಾಣಪತ್ರಗಳನ್ನು, ಟ್ರೋಫಿಗಳನ್ನು ಹೆಮ್ಮೆಯಿಂದ ತೋರಿಸಿದರು ಪೆಡ್ರೋ. ಚಿತ್ರದಲ್ಲಿ ಇವರಿಗೆ ಪುರಸ್ಕಾರಗಳನ್ನು ನೀಡುತ್ತಿದ್ದ ಕೆಲ ರಾಜಕಾರಣಿಗಳು ಈಗ ಸರಕಾರದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆಂದೂ ಅವರಿಂದ ತಿಳಿದುಬಂತು. ಕೆಟ್ಟದಾಗಿ ಇರಿಸಲಾಗಿದ್ದು ಧೂಳು ತಿನ್ನುತ್ತಿದ್ದ ಆ ಫೋಟೋಗಳನ್ನು ಮಟ್ಟಸವಾಗಿ ಜೋಡಿಸುತ್ತಾ ನಾನು ಮತ್ತೆ ಅವರಿಗೇ ಮರಳಿಸಿದೆ.

ಮಾತುಮಾತಲ್ಲೇ ಪಕ್ಕದ ಕೋಣೆಗಳಿಗೂ ನನ್ನನ್ನು ಕರೆದೊಯ್ದರು ಪೆಡ್ರೋ. ಮುಚ್ಚಿದ ಬಾಗಿಲಿನೆದುರು ಸದಾ ಚಿತ್ರ ಬರೆಯುತ್ತಿದ್ದ ಕಲಾವಿದ ಇವರದ್ದೇ ತಂಡದವನೆಂದೂ, ಸಂಜೆಯ ಹೊತ್ತಿಗೆ ಈ ಕೋಣೆಯಲ್ಲಿ ನೃತ್ಯದ ಪಾಠವನ್ನು ಹೇಳಿಕೊಡುತ್ತಾರೆಂದೂ ಗೊತ್ತಾಯಿತು. ಸಂಜೆಯ ಹೊತ್ತಿನಲ್ಲಿ ನಾನು ಪೇಟೆಯ ಕಡೆ ಬರುವುದಿಲ್ಲವಾದ್ದರಿಂದ ಈ ಕೋಣೆಯ ಬಾಗಿಲು ಮುಚ್ಚಿಯೇ ನನಗೆ ಕಾಣಸಿಗುತ್ತಿದ್ದಿದ್ದು ಸಹಜವಾಗಿತ್ತು.

ಆದರೆ ಅಂದು ನನ್ನ ಅದೃಷ್ಟವೋ ಎಂಬಂತೆ ಕೆಲ ತರುಣ-ತರುಣಿಯರು ಡೋಲಿನ ಸದ್ದಿಗೆ ಲಯಬದ್ಧವಾಗಿ ಕುಣಿಯುತ್ತಾ ಬಲು ಉತ್ಸಾಹದಿಂದ ನರ್ತಿಸುತ್ತಿದ್ದರು. ಎಲ್ಲಾ ಬಗೆಯ ನೃತ್ಯಗಳಂತೆ ಆಫ್ರಿಕನ್ ನೃತ್ಯಗಳೂ ಕೂಡ ದೇಹವನ್ನು ಚೆನ್ನಾಗಿ ಪಳಗಿಸಿ ಒಳ್ಳೆಯ ವ್ಯಾಯಾಮವನ್ನು ನೀಡಬಲ್ಲಂಥವುಗಳು. ನಾನು, ದುಭಾಷಿ ಮತ್ತು ಸಹೋದ್ಯೋಗಿಯೊಬ್ಬರು ಕೋಣೆಯ ಒಳನಡೆದು ಈ ರಿಹರ್ಸಲ್ ಅನ್ನು ಆಸಕ್ತಿಯಿಂದ ನೋಡುತ್ತಿದ್ದರೂ ಯಾರಿಗೂ ಇದರ ಪರಿವೆಯೇ ಇರಲಿಲ್ಲ. ಅಂಥಾ ತಾದಾತ್ಮ್ಯತೆ ಇವರೆಲ್ಲರದ್ದು.

ಅಸಲಿಗೆ ಪೆಡ್ರೋರವರು ಇಲ್ಲಿ ಆಸಕ್ತರಿಗಾಗಿ ಸಾಂಪ್ರದಾಯಿಕ ಮತ್ತು ಆಧುನಿಕ ನೃತ್ಯಪ್ರಕಾರಗಳೆರಡನ್ನೂ ಕಲಿಸುವ ವ್ಯವಸ್ಥೆಯನ್ನು ಮಾಡಿದ್ದರು. ಬ್ರೆಜಿಲ್, ಪೋರ್ಚುಗಲ್ ಗಳನ್ನೊಳಗೊಂಡಂತೆ ಪಾಶ್ಚಾತ್ಯ ಸಂಸ್ಕøತಿಯತ್ತ ಆಕರ್ಷಿತರಾಗಿ ಅಂಗೋಲನ್ ಯುವಜನರು ಅತ್ತಲೇ ವಾಲುತ್ತಿದ್ದಾರೆ ಎಂಬ ಕಾಳಜಿಯಿಂದಾಗಿ ಶುರುವಾದ ಒಂದೇ ಕೊಠಡಿಯ ನೃತ್ಯಶಾಲೆಯಿದು. ಅಂಗೋಲನ್ ಸಾಂಪ್ರದಾಯಿಕ ನೃತ್ಯಗಳನ್ನು ಇಲ್ಲಿ ಉಚಿತವಾಗಿ ಕಲಿಯಬಹುದು. ಆದರೆ ಆಧುನಿಕ ನೃತ್ಯಪ್ರಕಾರಗಳಿಗೆ ಇಂತಿಷ್ಟು ಅಂತ ಪಾವತಿಸಬೇಕಂತೆ.

”ನಾನೂ ಬರಬಹುದಲ್ವಾ ಇಲ್ಲಿ?”, ಎಂದು ನಾನು ಕಣ್ಣರಳಿಸುತ್ತಾ ಕೇಳಿದೆ. ”ಅಯ್ಯೋ… ನಂಗೆ ಇಂಗ್ಲಿಷ್ ಬರಲ್ವೇ!”, ಅಂದರು ಪೆಡ್ರೋ. ನನ್ನ ದುರಾದೃಷ್ಟವೆಂಬಂತೆ ಒಂದಿಷ್ಟು ಇಂಗ್ಲಿಷ್ ಮಾತಾಡುವ ಒಬ್ಬನೂ ಪೆಡ್ರೋರ ತಂಡದಲ್ಲಿರಲಿಲ್ಲ. ಏನಿಲ್ಲವೆಂದರೂ ‘ಕುದುರು’ ನೃತ್ಯಪ್ರಕಾರವನ್ನು ಒಮ್ಮೆ ಪ್ರಯತ್ನಿಸಬೇಕು ಎಂಬ ಉಮೇದಿನಲ್ಲಿದ್ದೆ ನಾನು. ‘ಕುದುರು’ ಅಂಗೋಲಾದ ಖ್ಯಾತ ನೃತ್ಯ ಪ್ರಕಾರಗಳಲ್ಲೊಂದು. ಅಂತೂ ಲುವಾಂಡಾದ ಝುಂಬಾ ತರಬೇತುದಾರ ವಿಕ್ಟರ್ ಮ್ಯಾಕ್ಸಿಮುಸ್ ನನ್ನಲ್ಲಿ ವಿಚಿತ್ರ ಹುಚ್ಚನ್ನೇ ಹುಟ್ಟಿಸಿದ್ದಾನೆ ಎಂಬಂತೆ ನನ್ನ ಮಾತನ್ನು ಕೇಳಿ ದುಭಾಷಿ ಮಹಾಶಯ ಕಿಸಕ್ಕನೆ ನಕ್ಕ.

ಪೆಡ್ರೋರ ಬಳಿ ಹೇಳಲು ಮತ್ತಷ್ಟು ಸಂಗತಿಗಳಿದ್ದವು. ನಲವತ್ತು ಚಿಲ್ಲರೆ ವರ್ಷಗಳ ಅನುಭವ ಬೇರೆ. ಆದರೆ ನನಗೋ ಸಮಯದ ಅಭಾವ. ಸುಮ್ಮನೆ ಕರಕುಶಲ ವಸ್ತುಗಳನ್ನು, ಕಲಾಕೃತಿಗಳನ್ನಷ್ಟೇ ನೋಡಲು ಬಂದಿದ್ದ ನನಗೆ ಅನಿರೀಕ್ಷಿತವಾಗಿ ಖಜಾನೆಯೊಂದು ಸಿಕ್ಕಂತಾಗಿತ್ತು. ಇನ್ನು ಇವೆಲ್ಲವನ್ನೂ ಒಂದೇ ಭೇಟಿಯಲ್ಲಿ ತಿಳಿಯುವುದಂತೂ ಸಾಧ್ಯವೇ ಇರಲಿಲ್ಲ. ”ಎಷ್ಟೆಲ್ಲಾ ಇದೆ ಇಲ್ಲಿ… ಕುತೂಹಲಕ್ಕಾದರೂ ತಿಳಿದುಕೊಳ್ಳುವ ಆಸೆ ನನಗೆ… ಶೀಘ್ರದಲ್ಲೇ ಮತ್ತೆ ಬರುತ್ತೇನೆ”, ಎಂದು ಕೈಜೋಡಿಸಿ ಪೆಡ್ರೋಗೆ ವಿದಾಯ ಹೇಳಿದೆ. ”ನಿಮಗೆ ಬರಬೇಕು ಅನ್ನಿಸಿದಾಗ ಮೀನಮೇಷ ಎಣಿಸದೆ ಬಂದುಬಿಡಿ”, ಎಂದು ನಗುತ್ತಾ ಹೇಳಿದ ಪೆಡ್ರೋ ಚಿಕ್ಕದೊಂದು ಚೀಟಿಯಲ್ಲಿ ತನ್ನ ದೂರವಾಣಿ ಸಂಖ್ಯೆಯನ್ನೂ ಬರೆದುಕೊಟ್ಟರು.

ಪೆಡ್ರೋರ ಅಂಗಡಿಯಲ್ಲಿ ಅದ್ಭುತ ಎನ್ನುವಂತಹ ವಸ್ತುಗಳೇನೂ ಇರದಿದ್ದರೂ ಅವರು ನಮಗಾಗಿ ಮೀಸಲಿಟ್ಟ ಸಮಯವನ್ನು ಗೌರವಿಸಿ ಸೌಜನ್ಯಪೂರ್ವಕವಾಗಿ ಏನನ್ನಾದರೂ ಖರೀದಿಸುವುದು ಒಳಿತು ಎಂದು ನನಗನ್ನಿಸಿದ್ದು ಸತ್ಯ. ”ಮುಂದಿನ ಬಾರಿ ಬಂದಾಗ ಖಾಲಿ ಕೈಯಲ್ಲಿ ಮರಳುವುದಿಲ್ಲ. ಏನಾದರೂ ನಿಮಗೆ ವ್ಯಾಪಾರ ಮಾಡಿಯೇ ಹೊರಬೀಳುತ್ತೇನೆ”, ಎಂದು ಆಶ್ವಾಸನೆಯನ್ನು ನೀಡಿದೆ ನಾನು. ಆಯ್ತಪ್ಪಾ ಎಂದು ಮುಗುಳ್ನಗುತ್ತಾ ಬೀಳ್ಕೊಟ್ಟರು ಪೆಡ್ರೋ.

ಅಲ್ಲಿಂದ ನಾನು ನೇರವಾಗಿ ಮನೆಯತ್ತ ಹೊರಟರೂ ಈ ಅಂಗೋಲನ್ ಕಲಾವಿದರ ಕೈಯಿಂದ ಮೂಡಿದ್ದ ಸುಂದರ ಕಲಾಕೃತಿಗಳು, ಡೋಲಿನ ಲಯಬದ್ಧ ಸದ್ದು ನನ್ನನ್ನು ಮತ್ತೆ ಮತ್ತೆ ಕೈಬೀಸಿ ಕರೆದಂತೆ ಭಾಸವಾಗಿದ್ದಂತೂ ಸತ್ಯ. “ಮುಂದಿನ ವಾರ ಮತ್ತೆ ಬರೋಣವಂತೆ”, ಎಂದು ನಾನು ದುಭಾಷಿಯತ್ತ ಪಿಸುಗುಟ್ಟಿದೆ. ಅಸ್ತು ಎಂದ ಆತ.

ಅಂತೂ ಮುಂದಿನ ವಾರದ ನಿರೀಕ್ಷೆಯಲ್ಲಿ ಕ್ಯಾಲೆಂಡರ್ ನೋಡುವುದೇ ಅಂದಿನಿಂದ ನನ್ನ ಹೊಸ ಕೆಲಸವಾಗಿ ಬಿಟ್ಟಿತು.

Leave a Reply