ಭಾರತಿಗೆ ಅವನು ‘ಪುಟ್ಟ’ ಅನ್ನುವುದು ತುಂಬ ಇಷ್ಟವಾಯಿತು..

ಬಿ ವಿ ಭಾರತಿ 

ಸಾಧಾರಣವಾಗಿ ಈ ಜಾಗಕ್ಕೆ ಬರುವವರು ಯಾವುದೋ ಹುಟ್ಟು ಹಬ್ಬದ ಆಚರಣೆಗೋ, ಮದುವೆ ಆ್ಯನಿವರ್ಸರಿ ಪಾರ್ಟಿಗೋ, ಕೆಲಸ ಸಿಕ್ಕಿದ್ದಕ್ಕೋ … ಒಟ್ಟಿನಲ್ಲಿ ಖುಷಿಗೆ ಬರುತ್ತಾರೆ. ಇವತ್ತು ಗೆಳೆಯನಿಗಾಗಿ ಕಾಯುತ್ತ ಕುಳಿತಿರುವಾಗಲೇ ಆ ಜೋಡಿ ಬಾಗಿಲು ತೆರೆದು ಬಂದಿದ್ದು

ವೀಕ್ ಡೇ ಎಂದು ಖಾಲಿ ಖಾಲಿಯಾಗಿದ್ದಕ್ಕೋ ಅಥವಾ ಆ ಹೆಣ್ಣು ಆತನಿಗೂ ಮುಂದೆ ಹಾಕುತ್ತಿದ್ದ ಬಿರು ಹೆಜ್ಜೆಗೋ ನನ್ನ ಗಮನ ಹಠಾತ್‌ ಆ ಕಡೆ ಹೋಗಿಯೇ ಬಿಟ್ಟಿತು.

ಇಬ್ಬರೂ ನಡೆಯುತ್ತಾ ಬಂದು ನನ್ನ ಟೇಬಲ್’ನ ಪಕ್ಕದ ಟೇಬಲ್’ನಲ್ಲಿಯೇ ಕುಳಿತರು.

ಅವನು ಮೆನು ಕಾರ್ಡ್ ತಿರುಗಿಸುತ್ತ ‘ಏನು ಹೇಳಲಿ’ ಎಂದ

ಅವಳು ಚುಟುಕಾಗಿ ‘ನಿನ್ನಿಷ್ಟ’ ಅಂದಳು

‘ವಿಸ್ಕಿ?’ ಎಂದ

ಸರಿ ಎನ್ನುವಂತೆ ತಲೆಯಾಡಿಸಿದಳು

‘ಸೋಡಾ?’

‘ಬೇಡ’

ಎಲ್ಲ ಚುಟುಕು ಉತ್ತರಗಳು….

ಅವ ತಿನ್ನುವುದಕ್ಕೂ ಏನೇನೋ ಹುಡುಕಿ ಆರ್ಡರ್ ಕೊಟ್ಟ

ಈಗ ಅವ ಬಿಡುವಾದ

ಆದರೂ ಮಾತಿಲ್ಲ, ಕತೆಯಿಲ್ಲ

ಅಲ್ಲೊಂದು ವಿಲಕ್ಷಣ ಮೌನ ಆವರಿಸಿದಂತೆನಿಸಿತು

ಅವನೇ ಗಂಟಲು ಸರಿಮಾಡಿಕೊಂಡು ‘ಸುಮ್ಮನೆ ಕುಳಿತೆಯಲ್ಲ’ ಅಂದ

‘ಮತ್ತೇನು ಮಾಡಲಿ’ ಎಂದಳು

‘ಸರಿ, ನಾನೇ ಮಾತಾಡಲೇ?’

ಅವಳು ಅವನನ್ನೇ ನೋಡುತ್ತ  ಕುಳಿತಳು

‘ಅದಾದ ನಂತರ ನಡೆದಿದ್ದು ನಿನಗೆ ಗೊತ್ತಿಲ್ಲ…’

‘ಹೇಗೆ ಗೊತ್ತಾಗಬೇಕು? ನೀನು ಸಂಪರ್ಕ ಕಡಿದುಕೊಂಡು ಬಿಟ್ಟೆಯಲ್ಲ…’ ದನಿ ನಡುಗಿದಂತೆನಿಸಿತು

ಅಷ್ಟರಲ್ಲಿ ಡ್ರಿಂಕ್ಸ್ ಬಂದಿತು

ಅವ ಅತೀವ ನಾಜೂಕಿನಿಂದ ನೀರು ಬೆರೆಸಿ, ಐಸ್ ಕ್ಯೂಬ್ ತೇಲಿಸಿ

‘ಈಗ ಹೇಳುತ್ತೇನೆ ಆಯ್ತಲ್ಲ? ಚಿಯರ್ಸ್…’ ಎಂದ

ಅವಳು ಸುಮ್ಮನೆ ಅವನ ಗ್ಲಾಸಿಗೆ ಗ್ಲಾಸ್ ತಗುಲಿಸಿ ಗುಟುಕರಿಸಿದಳು

ಅಲ್ಲಿಂದ ಬರೀ ಅವನದ್ದೇ ಮಾತು

ಸಂಪರ್ಕ ಕಡಿದುಕೊಂಡಿದ್ದು ಯಾಕೆ ಎಂದು ಹೇಳುತ್ತಲೇ ಹೋದ

ಅವಳ ಮುಖದ ಬಿಗಿ ಕಿಂಚಿತ್ತೂ ಸಡಿಲವಾಗದೇ ಸುಮ್ಮನೆ ಅವನ ಮಾತಿನ ಕಡೆ ಕಿವಿಗೊಟ್ಟು ಕೂತಳು

ಇಬ್ಬರ ಗ್ಲಾಸ್ ಖಾಲಿಯಾಯಿತು

ವೇಟರ್’ನನ್ನು ಕರೆದು ಮತ್ತೆ ಆರ್ಡರ್ ಮಾಡಿದ

ಮತ್ತೆ ಮಾತು ಶುರುವಾಯಿತು

ಆಗಲೂ ಅವನದ್ದೇ ಮಾತು

ಅವಳು ಗೋಡೆಯೆದುರು ಸಿಕ್ಕು ಬಿದ್ದ ಬೆಕ್ಕಿನಂತೆ ಹಾರಿ ಪರಚುವ ಭಂಗಿಯಲ್ಲೇ…

‘ಅಯ್ಯೋ ಅಷ್ಟೆಲ್ಲ ಹೇಳಿದರೂ ಆಕೆ ಹೋಗಲಿ ಬಿಡು ಆಗಿದ್ದಾಯ್ತು ಎನ್ನಬಾರದೇ…’ ಪಕ್ಕದ ಟೇಬಲ್’ನಲ್ಲಿ ಕುಳಿತ ನನ್ನ ಧಾರಾಳತನ!

ಏನು ಗಂಟು ಹೋಗಬೇಕು ಬೇರೆಯವರ ಬದುಕಿಗೆ ಬಿಟ್ಟಿ ಸಲಹೆ ಕೊಡಲು…

ಎರಡನೆಯ ಡ್ರಿಂಕ್ ಮುಗಿಯುತ್ತ ಬಂದಾಗ

ಅವಳು ಅವನೆದುರಿದ್ದ ಪ್ಲೇಟಿನಿಂದ ಏನನ್ನೋ ತೆಗೆದುಕೊಳ್ಳಲು ಕೈ ಹಾಕಿದಳು

ಅದೇ ಆ ಕ್ಷಣದಲ್ಲಿ ಅವನೂ ಕೈ ಇಟ್ಟ…

ಸಣ್ಣದೊಂದು ಸ್ಪರ್ಶ!

ಅವಳ ಸೆಟೆದ ಭಂಗಿ ತುಸು ಸಡಿಲವಾಯಿತು ‘ತುಂಬ ಸಿಟ್ಟು ಬಂದಿತ್ತು ನಿನ್ನ ಮೇಲೆ ….’ ಎಂದಳು

ಬಂದಿತ್ತು ಅನ್ನುವ ಭೂತಕಾಲ ಪ್ರಯೋಗಕ್ಕೆ ನಾನು ಒಳಗೊಳಗೇ ಖುಷಿಯಾದೆ

ಬಹುಶಃ ಕದನ ವಿರಾಮವಾಗಬಹುದೇ…!

ನನ್ನ ಅನಿಸಿಕೆ ಸುಳ್ಳಾಗದಂತೆ ಅವಳು ಬಾಗಿ ಅವನ ಬೆರಳಿಗೆ ಬೆರಳು ಸೇರಿಸಿದಳು

ಅಲ್ಲಿಯವರೆಗೆ ತುಂಬ ಸೀರಿಯಸ್ ಮುಖದಲ್ಲಿದ್ದ ಅವನೂ ಸಮಾಧಾನಗೊಂಡಂತೆನಿಸಿತು…

ಒಂದೈದು ನಿಮಿಷ ಬಿಡದಂತೆ ಕೈ ಹಿಡಿದು ಕುಳಿತೇ ಇದ್ದವಳು ‘ಹೋಗಲಿ ಬಿಡು’ ಎಂದಳು

ಅವ ಈ ಮಾತಿಗೇ ಕಾದಿದ್ದನೇನೋ ಅನ್ನುವಂತೆ ಮತ್ತೆ ಬೇರರ್ ಕರೆದ

‘ನನಗೆ ಸಾಕು’

‘ಇಲ್ಲ ಇದು ಇವತ್ತಿನ ಖುಷಿಗೆ’ ಅವ ಅವಳ ಮಾತಿಗೆ ಕಿವಿಗೊಡದೆ ಆರ್ಡರ್ ಮಾಡಿದವ

‘ನೀನು ತುಂಬ ಬೇಗ ಸಿಟ್ಟಾಗುತ್ತಿ ಪುಟ್ಟ’ ಎಂದ

ಅವಳು ಗುದ್ದುವಂತೆ ಮುಷ್ಠಿ ಮಾಡಿ ‘ಬೇಗಲಂತೆ ಬೇಗ! ಎಷ್ಟು ದಿನಗಳ ನೋವದು ಗೊತ್ತೇನು’ ಎಂದಳು

‘ಸಿಟ್ಟು ಮಾಡಿಕೊಂಡಿದ್ದು ಸರಿ. ಆದರೆ ಸಿಟ್ಟು ಬಂದಾಗ ಒಂದಿಷ್ಟೂ ತಾಳ್ಮೆ ಇಲ್ಲದೆ ಸಿಡಿದು ಬಿಡುತ್ತಿ…’

ಮತ್ತೆ ಸಿಡಿಯುತ್ತಾಳೇನೋ ಎಂದು ನೋಡಿದರೆ ಅವಳ ಮುಖದಲ್ಲಿನ ನಗು ಕಾಣಿಸಿತು

ಡ್ರಿಂಕ್ ಟೇಬಲ್ಲಿಗೆ ಬಂದಿತು

ಅವ ಸಿದ್ದ ಮಾಡುತ್ತಲೇ ‘ನೀನು ಅಷ್ಟು ಸಿಟ್ಟಾದಾಗಲೂ ನಾನು ಒಂದು ಸಲವಾದರೂ ಹಿಂತಿರುಗಿ ಮಾತಾಡಿದೆನೇ…’

ಇಲ್ಲವೆನ್ನುವಂತೆ ತಲೆಯಾಡಿಸಿದಳು

‘ಆಗ ನಾನೂ ಸಿಡಿದು ಬಿಟ್ಟಿದ್ದರೆ ಇವತ್ತು ನಾವಿಬ್ಬರೂ ಇಲ್ಲಿ ಕುಳಿತು ಮಾತಾಡುತ್ತಿರಲಿಲ್ಲ. ನಾನು ಒಂದೇ ಒಂದು ಸಲ react ಆಗಲಿಲ್ಲ. ಯಾಕೆ ಹೇಳು? ನಾನು ನಿನ್ನ ಪ್ರೀತಿಸುತ್ತೇನೆ ಪುಟ್ಟ….’

ಅವನು ಪುಟ್ಟ ಅನ್ನುವುದು ಯಾಕೋ ತುಂಬ ಇಷ್ಟವೆನ್ನಿಸಿತು

ಅವಳು ‘ನಾನದನ್ನು ಅಲಕ್ಷ್ಯ ಅಂತ ಭಾವಿಸಿ ಮತ್ತಿಷ್ಟು ಸಿಟ್ಟಾದೆ’ ಎಂದು ನಕ್ಕಳು….

ಅಲ್ಲಿಂದ ಮುಂದೆ ಇಬ್ಬರೂ ಏನೇನೋ ಮಾತಾಡಿಕೊಂಡರು.

ದನಿ ಇಳಿದಿತ್ತು …

ಬಹುಶಃ ಪ್ರೀತಿ ಮಾತಿರಬೇಕು!

ಇಬ್ಬರೂ ಹರಟಿದರು … ಹರಟಿದರು … ಹರಟುತ್ತಲೇ ಊಟ ಮುಗಿಸಿದರು

ಅವನು ಬಿಲ್ಲು ಕೊಟ್ಟು ಎದ್ದ

ಬರುವಾಗ ಸೆಟೆದು ಬಂದವಳು, ಈಗ ಅವನ ತೋಳನ್ನು ಹಿಡಿದು ನಡೆದಳು…

ವರ್ಷಗಳ ಹಿಂದೆ ಕಾಫಿ ಡೇಯಲ್ಲಿ ಒಂದು ಹೃದಯ ವಿದ್ರಾವಕ  ಬ್ರೇಕಪ್’ಗೆ ಸಾಕ್ಷಿಯಾಗಿದ್ದು ನೆನಪಾಯಿತು

ಕಠೋರವಾಗಿ ವರ್ತಿಸುತ್ತಿದ್ದ ಅವನು, ವಿಲವಿಲ ಒದ್ದಾಡಿ ಅತ್ತ ಅವಳು ಭಾರವಾದ ಹೆಜ್ಜೆ ಇಟ್ಟು ಹೊರಟ ನಂತರ ನಾನೆಂದೂ ಆ ಕಾಫಿ ಡೇಗೆ ಕಾಲಿಡುವ ಧೈರ್ಯ ಮಾಡಿರಲಿಲ್ಲ

ಅಷ್ಟು ಕರಾಳ ಅನುಭವ ಅದಾಗಿತ್ತು…

ಇವರಿಬ್ಬರೂ ಬಾಗಿಲ ಬಳಿ ಹೋಗುವುದಕ್ಕೂ, ಮಳೆಯಲ್ಲಿ, ಟ್ರಾಫಿಕ್’ನಲ್ಲಿ ಸಿಕ್ಕಿಬಿದ್ದ ಗೆಳೆಯ ಒಳ ಬರುವುದಕ್ಕೂ ಸರಿಯಾಯಿತು!

ಟಿಷ್ಯೂ ತೆಗೆದು ತಲೆಗೆ ಒತ್ತಿಕೊಳ್ಳುತ್ತ

‘ಸಾರಿ ಕಣೇ’ ಎಂದ

ನಾನು ‘ಥ್ಯಾಂಕ್ಸ್ ಕಣೋ’ ಎಂದೆ!

20 comments

    • ಥ್ಯಾಂಕ್ ಯೂ ಋತೂಊಷ್ಮ 🙂

    • ಥ್ಯಾಂಕ್ಸ್ ಮಾಲತಿ ಮೇಡಂ

    • ಥ್ಯಾಂಕ್ ಯೂ ಅಣ್ಣಾ 🙂 🙂

  1. ಕ್ಷಮಿಸುವ ಗುಣ ಇದ್ದರೆ ಪ್ರೀತಿಸುವ ಜೀವಗಳು ದೂರಾಗವು

  2. One lovely touch is more effective than hundred words. ನಿರೂಪಣೆ ಹೇಗಿದೆಯೆಂದರೆ ಓದುತ್ತಿದ್ದಷ್ಟು ಹೊತ್ತು ನಾನೂ ಅವಳೇ ಆಗಿದ್ದೆ

  3. ಕವಿತೆಯೆನ್ನುವುದು ನಿರಾಯಾಸ ವಾದಾಗ ಎಷ್ಟು ಚೆನ್ನ!

  4. ಮುಂಚೆ ಕಂಡರೂ ಕಾಣದಂತಿದ್ದೆ.. ಈಗೀಗ ಿಂತಹ ಸನ್ನಿವೇಶಗಳನ್ನ ಕಂಡು ಖುಷಿ ಕಾಣೋ ಅಭ್ಯಾಸ ನನಗೂ ಆಗಿದೆ… ನಿಮ್ಮಿಂದಲೇ ಅಕ್ಕ.. ❤

Leave a Reply