fbpx

ಗಿರೀಶ್ ಕಾರ್ನಾಡರು ಸಿಕ್ಕರು..

Special

ಗಿರೀಶ್‍ರೊಂದಿಗೆ ಒಂದಷ್ಟು ಹೊತ್ತು

ಗಂಗಾಧರ ಕೊಳಗಿ 

ಪತ್ರಿಕೋದ್ಯಮಕ್ಕೆ ಎರಡನೇ ಬಾರಿಗೆ ಕಾಲಿಟ್ಟ ದಿನಗಳು ಅವು

ಸುಮಾರು ಎಂಟು ವರ್ಷಗಳ ಅಜ್ಞಾತವಾಸ ಬಿಟ್ಟು, ಅಗಲಿಹೋದ ಗೆಳೆಯ ವೆಂಕಟಾಚಲನ ಹಠಕ್ಕೆ ಮಣಿದು ಮತ್ತೆ ಸಾರ್ವಜನಿಕ ಸಂಪರ್ಕ ಕ್ಷೇತ್ರಕ್ಕೆ ಬಂದಿದ್ದೆ. ಪತ್ರಿಕೋದ್ಯಮದ ಸೆಳೆತ, ಹುಚ್ಚು ನನ್ನೊಳಗೆ ಅಡಗಿ ಕೂತಿತ್ತೆಂದು ಕಾಣುತ್ತದೆ. ವೆಂಕಟಾಚಲ ಮತ್ತು ನನ್ನ ಸಂಯುಕ್ತಶ್ರಮದಿಂದ ಬಿ.ವಿ. ಸೀತಾರಾಮ್ ಮಂಗಳೂರಿನಿಂದ ಪ್ರಕಟಿಸುತ್ತಿದ್ದ ‘ಕನ್ನಡ ಜನಾಂತರಂಗ’ ದಿನಪತ್ರಿಕೆಗೆ ತಾಲೂಕು ವರದಿಗಾರಿಕೆ ದೊರಕಿತ್ತು.

ವಿಚಿತ್ರವಾದ ಹುಮ್ಮಸಿನ ದಿನಗಳು ಆಗ. ಪತ್ರಿಕೆಗೆ ಸೇರಿದ್ದೇ ಓರ್ವ ಮಾಹಿತಿದಾರನ ಮೂಲಕ ವಿವರ ಪಡೆದು ಒಂಟಿಯಾಗಿ ಪಶ್ಚಿಮಘಟ್ಟದ ದಟ್ಟಕಾಡಿನಲ್ಲಿ ನಡೆದುಹೋಗಿ ಗೇರಸೊಪ್ಪಾ ಡ್ಯಾಮ್ ಆ ಕಡೆಯ ದಟ್ಟಾರಣ್ಯದಲ್ಲಿ ಅಕ್ರಮವಾಗಿ ಬೆಳೆಯುತ್ತಿದ್ದ ಗಾಂಜಾ ಬೆಳೆಯ ಬಗ್ಗೆ ವರದಿಮಾಡಿದ್ದೆ. ಅದನ್ನು ಸಂಪಾದಕ ಬಿವಿಸೀ ಮುಖಪುಟದಲ್ಲೇ ಬೈಲೈನ್ ಸ್ಟೋರಿಯಾಗಿ ಪ್ರಕಟಿಸಿ ಅಜ್ಞಾತವಾಸದ ಕಾರಣ ಮನಸ್ಸಿನೊಳಗೆ ಆಶ್ರಯ ಪಡೆದಿದ್ದ ಕೀಳರಿಮೆ, ಸೋಲಿನ ಭಯ, ಅಸಹಾಯಕತೆಯ ಭಾವವನ್ನು ಒಂದಿಷ್ಟು ಕಡಿಮೆ ಮಾಡಿದ್ದರು.

ಆ ಹೊತ್ತಿನಲ್ಲೇ ಆಗುಂಬೆ ಸಮೀಪದಲ್ಲಿ ಗಿರೀಶ್ ಕಾರ್ನಾಡ್ ಕುವೆಂಪು ಅವರ’ ಕಾನೂರು ಹೆಗ್ಗಡತಿ’ ಕಾದಂಬರಿ ಆಧಾರಿತ ಸಿನೆಮಾದ ಶೂಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಜನಾಂತರಂಗದಲ್ಲಿ ಪ್ರಕಟವಾಗಿತ್ತು.

ಅದನ್ನು ಓದಿದ್ದೇ ನನ್ನೊಳಗೆ ಆಕಾಂಕ್ಷೆ ಹುಟ್ಟಿಕೊಂಡಿತು. ಕಾನೂರು.. ಕಾದಂಬರಿಯನ್ನ ನಾನಾಗಲೇ ಓದಿದ್ದೆ. ಕುವೆಂಪು ಅವರ ಹುಟ್ಟಿದೂರನ್ನ ಕಂಡುಬಂದಿದ್ದೆ. ಆಗಿನ್ನೂ ಕವಿಶೈಲ ರೂಪುಗೊಂಡಿರಲಿಲ್ಲ. ಗುಡ್ಡ ಹತ್ತಿಹೋಗಲು ಕಾಲುದಾರಿ ಮಾತ್ರವಿತ್ತು. ಈಗಿನಂತೆ ಯಾವ ಮ್ಯೂಸಿಯಂ, ಕಟ್ಟಡಗಳು ಇರಲಿಲ್ಲ. ಗುಡ್ಡದ ಮೇಲಿನ ಕಲ್ಲುಬಂಡೆಗಳ ಮೇಲೆ ತಾಸುಗಟ್ಟಲೆ ಒಂಟಿಯಾಗಿ ಕೂತ ಸಂದರ್ಭದಲ್ಲಿನಿಂದ ಕುವೆಂಪು ಕಾಡತೊಡಗಿದ್ದರು. ಈಗ ಅವರ ಕಾದಂಬರಿಯನ್ನ ಗಿರೀಶ್ ಸಿನೆಮಾ ಮಾಡ್ತಿದಾರೆ ಅಂದಾಗ ಮನಸ್ಸು ಜಗ್ಗೆಂದಿತ್ತು.

ನಮಗೆ ಪೇಟೆ ಅನ್ನಿಸಿಕೊಳ್ಳುವ ಸಿದ್ದಾಪುರ ಹಳ್ಳಿ ಮತ್ತು ಪೇಟೆಯ ಸಂರಚನೆಯ ಊರು; ಆಗಲು, ಈಗಲೂ. ಆ ಸುತ್ತಮುತ್ತಲೆಲ್ಲ ಜನ ಎಷ್ಟು ರಸಿಕರಿದ್ದರು ಎಂದರೆ ಬೇಸಿಗೆಯಲ್ಲಿ ಸಂತೆಯ ದಿನವಾದ ಪ್ರತಿ ಬುಧವಾರ ಯಾವುದಾದರೂ ವ್ಯವಸಾಯ ಮೇಳವೊಂದರ ಯಕ್ಷಗಾನ ಇರುತ್ತಿತ್ತು. ಉಳಿದಂತೆ ಹಳ್ಳಿಗಳಲ್ಲಿ ನಾಟಕ, ಬಯಲಾಟ. ಮಳೆಗಾಲದಲ್ಲಿ ತಾಳಮದ್ದಳೆ.

ಅದರ ನಡುವೆ ಪೇಟೆಯಲ್ಲಿ ಸಿನೆಮಾ ನೋಡಲು ಎರಡು ಟೂರಿಂಗ್ ಟಾಕೀಸು. ಸೆಂಟ್ರಲ್ ಟಾಕೀಸ್ ಹಠಾತ್ತನೆ ತಿಂಗಳುಗಟ್ಟಲೆ ಬಂದ್ ಆಗುತ್ತಿದ್ದರೆ, ಮಹಾಲಕ್ಷ್ಮೀ ಟಾಕೀಸ್ ಮಳೆಗಾಲದ ಎರಡು ತಿಂಗಳು ಕಡ್ಡಾಯವಾಗಿ ಬಂದಾಗುತ್ತಿತ್ತು. ಅಚ್ಚರಿಯ ಸಂಗತಿಯೆಂದರೆ ಅವುಗಳ ಮಾಲೀಕರಿಗೆ ಕಮರ್ಷಿಯಲ್, ಆರ್ಟ್ ಎಂದೆಲ್ಲ ವ್ಯತ್ಯಾಸ ಗೊತ್ತಿತ್ತೋ, ಇಲ್ಲವೋ? ಎಲ್ಲ ಬಗೆಯ ಸಿನೆಮಾಗಳನ್ನೂ ಪ್ರದರ್ಶಿಸುತ್ತಿದ್ದರು. ರಾಜೇಶ್ ಖನ್ನಾನ ಪ್ರಸಿದ್ಧವಾದ ‘ಆರಾಧನಾ, ಹಾಥೀ ಮೇರೆ ಸಾಥಿ, ಬಚ್ಚನ್ ಅವರ ‘ದೀವಾರ್’ ಮುಂತಾದ ಹಿಂದೀ ಸಿನೆಮಾಗಳನ್ನು ನೋಡಿದ್ದೂ ಈ ಟಾಕೀಸುಗಳಲ್ಲೇ (ಆಗಿನ ಟಾಕೀಸು, ಸಿನೆಮಾ ನೋಡುವ ಕ್ರಮ. ಇವೆಲ್ಲ ಎಷ್ಟು ಸ್ವಾರಸ್ಯಕರವಾಗಿದ್ದವು. ಈಗಿನಂತೆ ಕೃತಕ ಗಾಭೀರ್ಯದಲ್ಲಿ ನೋಡುವಂಥದ್ದಲ್ಲ. ಈಗ ನಮ್ಮಲ್ಲಿ ಸಿನೆಮಾ ಟಾಕೀಸೇ ಇಲ್ಲದ್ದು ದುರಂತ).

ಟಾಕೀಸು ಚಾಲೂ ಇದ್ದ ಇದ್ದ ದಿನಗಳಲ್ಲಿ ಸಂಜೆ 5ರ ಸುಮಾರಿಗೆ ಟಾಕೀಸ್ ಪಕ್ಕದ ಮಾವಿನಮರದ ತುದಿಯಲ್ಲಿ ಕಟ್ಟಿದ ಮೈಕ್ ‘ಗಜಮುಖನೆ, ಗಣಪತಿಯೇ..’ ಹಾಡನ್ನ ಹೊಮ್ಮಿಸಿತೆಂದರೆ ಇನ್ನೊಂದು ತಾಸಿಗೆ ಶೋ ಶುರು ಎಂದರ್ಥ. ಪ್ರೇಕ್ಷಕರಿಗೂ ಕೊರತೆಯಿರಲಿಲ್ಲ. ಸಾಕಷ್ಟು ಕಲೆಕ್ಷನ್ ಆಗುತ್ತಿತ್ತು.

ಪ್ರದರ್ಶನಗೊಳ್ಳುವ ಸಿನೆಮಾದ ಪ್ರಚಾರಕ್ಕೆಂದು ತ್ರಿಕೋನಾಕೃತಿಯ ತಳ್ಳುಗಾಡಿಯಲ್ಲಿ ಮೂರು ಕಡೆ ಪೋಸ್ಟರ್ ಕಟ್ಟಿ ಪೇಟೆಯಲ್ಲಿ ಬೆಳಿಗ್ಗೆ, ಸಂಜೆ ‘ ಟಕ್ಕರ್ ಡಮ್‍ಮ್, ಡಮ್ಮರ್ ಟಕ್ಕಾ. ಎಂದು ಬಾಜಾಭಜಂತ್ರಿಯೊಂದಿಗೆ ಪ್ರಚಾರಮಾಡುತ್ತಿದ್ದರು. ನಾನು ಆಗ ಸಿದ್ದಾಪುರದ ಹೈಸ್ಕೂಲಿಗೆ ಕಾಲಿಟ್ಟಿದ್ದೆ.

ಒಂದು ದಿನ ಬೆಳಗಿನ ಹೊತ್ತು ಕ್ಲಾಸ್ ಆಪ್ ಇದ್ದ ಹೊತ್ತಿನಲ್ಲಿ ಪೇಟೆ ಅಲೆಯಲು ಬಂದವನಿಗೆ ಈ ಮೆರವಣಿಗೆ ಇದಿರಾಯಿತು. ನೋಡುತ್ತೇನೆ, ‘ ಒಂದಾನೊಂದು ಕಾಲದಲ್ಲಿ’ ಸಿನೆಮಾದ ಪೋಸ್ಟರ್! ಆ ತನಕ ಕಂಡಿರದ ಹೊಳಪುಗಣ್ಣಿನ, ವಿಶಿಷ್ಠ ಮುಖಭಾವದ ನಟನ ಫೋಟೊ. ನಾನು ಅಚ್ಚರಿಯಿಂದ ಸಣ್ಣಗೆ ಕಂಪಿಸಿದ್ದೆ. ಅಷ್ಟರಲ್ಲಾಗಲೇ ಪ್ರಜಾವಾಣಿ, ಸುಧಾ ಮುಂತಾದವುಗಳಲ್ಲಿ ಒಂದಾನೊಂದು ಕಾಲದಲ್ಲಿ’ಸಿನೆಮಾದ ಬಗ್ಗೆ ಓದಿದ್ದೆ. ಅದರಲ್ಲೂ ಗಿರೀಶ್ ಕಾರ್ನಾಡರ ಹೊಸಬಗೆಯ ಚಿತ್ರ ಎನ್ನುವ ವಿಶೇಷತೆ ಬೇರೆ.

ಬಿಡುಗಡೆಯಾಗಿ ಸುಮಾರು 2-3 ವರ್ಷದ ನಂತರ ಇಲ್ಲಿಗೆ ಬಂದ ಸಿನೆಮಾ. ಏನೇ ಆಗಲಿ, ಇವತ್ತು ಮಧ್ಯಾಹ್ನ ಕ್ಲಾಸಿಗೆ ಚಕ್ಕರ್ ಹೊಡೆದು ಮ್ಯಾಟಿನಿ ನೋಡಬೇಕು ಎಂದು ಗಟ್ಟಿ ತೀರ್ಮಾನ ಮಾಡಿ ಚಡ್ಡಿ ಕಿಸೆಗೆ ಕೈಹಾಕಿದೆ. ಹತ್ತು, ಐದು ಎಂದು ಇಪ್ಪತ್ತೈದು ಪೈಸೆ ಇತ್ತು. ಇನ್ನೂ ಮೂವತ್ತೈದು ಪೈಸೆ ಬೇಕಿತ್ತು. ಆಗ ಟಾಕೀಸಿನಲ್ಲಿ ಕುರ್ಚಿಗೆ ಒಂದು ರುಪಾಯಿಯೋ, ಒಂದು ರೂಪಾಯಿ ಇಪ್ಪತ್ತು ಪೈಸೆಯೋ ಇತ್ತು. ನಮ್ಮದೇನಿದ್ದರೂ ಗಾಂಧಿ ಕ್ಲಾಸ್, ಅರವತ್ತೈದು ಪೈಸೆ ಟಿಕೀಟಿನ ಬೆಂಚ್. ಅಷ್ಟು ಸಣ್ಣ ವಯಸ್ಸಿನಲ್ಲೇ ಕಿಸೆಯಲ್ಲಿ ಹತ್ತಾರು ನೋಟು, ಚಿಲ್ಲರೆಗಳನ್ನಿಟ್ಟುಕೊಂಡು ನನ್ನಂಥವನಿಗೆ ವಿಸ್ಮಯ ಹುಟ್ಟಿಸುತ್ತ ನಮಗೆಲ್ಲ ಆಪದ್ಭಾಂಧವನಾಗಿದ್ದ, ಒಂದು ರೂಪಾಯಿಗೆ ದಿನಕ್ಕೆ ಹತ್ತು ಪೈಸೆ ಬಡ್ಡಿಹಾಕುತ್ತಿದ್ದ ಪೈ ಎನ್ನುವ ಕ್ಲಾಸ್ಮೇಟ್ ಕಂ ಲೇವಾದೇವಿಗಾರನ ಬಳಿ ಎಂಟಾಣೆ ಸಾಲ ಮಾಡಿದೆ.

ಮಧ್ಯಾಹ್ನದ ವಿರಾಮದಲ್ಲಿ ಮನೆಯಿಂದ ತಂದ ದೋಸೆ ತಿಂದು, ಜೊತೆಗಾರರ ಕಣ್ತಪ್ಪಿಸಿ, ಪಾಟಿಚೀಲ ಅವಚಿ ಹಿಡಿದು ಕಂಬಿ ಕಿತ್ತೆ. ಅವತ್ತಿನ ಮೊದಲ ಶೋದ ಮೊದಲ ಟಿಕೇಟು ತೆಗೆದವ ನಾನೆಂಬ ಹೆಮ್ಮೆ ಈಗಲೂ ಇದೆ. ಅದಕ್ಕೆ ಕಾರಣ ಅದು ಗಿರೀಶ್ ಕಾರ್ನಾಡ್ ಸಿನೆಮಾ ಎನ್ನುವ ಕಾರಣಕ್ಕೆ.

ಅಂಥ ಗಿರೀಶ್ ಈಗ ಸಿನೆಮಾ ಶೂಟಿಂಗ್ ಮಾಡಿಟಿದಾರೆ ಅಂದ್ರೆ ಹೊರಮನಸ್ಸು ಸುಮ್ಮನಿದ್ದರೂ ಒಳಮನಸ್ಸು ಕೇಳಬೇಕಲ್ಲ. ಆಗ ತೀರ್ಥಹಳ್ಳಿಯಲ್ಲಿ ರಾಘವೇಂದ್ರ ಅನ್ನುವವರು ಜನಾಂತರಂಗದ ವರದಿ ಮಾಡುತ್ತಿದ್ದರು. ಈಗಿನಂತೆ ಮೊಬೈಲ್, ಲ್ಯಾಂಡ್‍ಪೋನ್ ಇಲ್ಲದ ಕಾರಣಕ್ಕೆ ಪತ್ರಗಳ ಮೂಲಕವೇ ಪರಿಚಯವಾಗಿದ್ದರು. ಆಗುಂಬೆ ರಸ್ತೆಯಲ್ಲಿ ಜ್ಯೂಸ್ ಅಂಗಡಿ ನಡೆಸುತ್ತಿದ್ದ ಅವರ ಪಕ್ಕದ ಅಂಗಡಿ ನಂಬರಿಗೆ ಬೂತ್ ಒಂದರಿಂದ ಫೋನ್ ಮಾಡಿ ವಿವರ ಕೇಳಿದೆ. ‘ಹೌದು, ಶೂಟಿಂಗ್ ನಡೀತಿದೆ. ಬರ್ತಿರಾ?’ ಎಂದರು. ‘ ಬರ್ತೀನಿ, ನಾಳೆ ಆಗೊದಿಲ್ಲ, ನಾಡಿದ್ದು’ ಎಂದು ಫಿಕ್ಸ್ ಮಾಡಿದೆ.
ಮನೆಯಲ್ಲಿ ಅಮ್ಮ ಮತ್ತು ನಾನು ಇಬ್ಬರೇ. ಅಮ್ಮನಿಗೆ ಸಣ್ಣದಾಗಿ ಹುಷಾರಿರಲಿಲ್ಲ. ಅವಳನ್ನು ಬಿಟ್ಟು ಹೋಗೋದು ಹೇಗೆ? ಅನ್ನಿಸಿದರೂ ಮತ್ತೆ ಈ ಛಾನ್ಸ್ ಸಿಕ್ಕೋದಿಲ್ಲ ಅನ್ನಿಸಿ ಅವಳ ಬಳಿ ಹೇಳಿದೆ. ಅವಳಿಂದ ಒಪ್ಪಿಗೆ ಸಿಕ್ಕಿದರೂ ಡೋಲಾಯಮಾನ ಮನಸ್ಸಿನಲ್ಲೇ ಹೊರಟೆ.

ನಸುಕಿನಲ್ಲೇ ಬಸ್ ಹಿಡಿದು, ಸಾಗರ ತಲುಪಿ ಅಲ್ಲಿಂದ ತೀರ್ಥಹಳ್ಳಿಗೆ ಸುಮಾರು 110 ಕಿಮೀ. ಕ್ರಮಿಸಿ ಬರುವಾಗ ಸಾಕುಬೇಕಾಗಿತ್ತು. ತೀರ್ಥಹಳ್ಳಿಯಲ್ಲಿ ರಾಘವೇಂದ್ರ ದೊಡ್ಡಮೊಗೆಯ ತುಂಬ ತಣ್ಣನೆಯ ಜ್ಯೂಸ್ ಕುಡಿಸಿ, ಅಂಗಡಿಯ ಸಹಾಯಕನಿಗೆ ಒಂದೆರಡು ತಾಸು ಅಂಗಡಿ ನೋಡ್ತಿರು ಎಂದು ಅವರ ಎಂ-80 ಯಲ್ಲಿ ಕೂರಿಸಿಕೊಂಡು ಆಗುಂಬೆ ಸಮೀಪದ ಮೂಡುವಳ್ಳಿಯತ್ತ ಹೊರಟರು. ಅದು,ಇದೂ ಮಾತನಾಡುತ್ತ, ಆಗುಂಬೆ ಹತ್ತಿರದಲ್ಲಿ ಬಲಕ್ಕೆ ಮಣ್ಣಿನ ರಸ್ತೆಗೆ ತಿರುಗಿ ಹಳ್ಳಿಯೊಂದನ್ನು ದಾಟಿ, ಎತ್ತರದ ಉಪ್ಪರಿಗೆಯಿದ್ದ, ವಿಶಾಲವಾದ ಮನೆಯೊಂದರ ಕಂಪೌಂಡ್ ಒಳ ಹೊಕ್ಕರು.

ಆ ಕಡೆಯ ಟಿಪಿಕಲ್ ಶೈಲಿಯ ಹಳೆಯ ಕಾಲದ ಮನೆ; ಹೊರನೋಟಕ್ಕೆ ಭವ್ಯವಾಗಿ, ಗಟ್ಟಿಮುಟ್ಟಾಗಿ ಕಾಣುತ್ತಿತ್ತು. ಅಂಗಳದ ಮೂಲೆಯಲ್ಲಿ ನಿಂತ ವ್ಯಾನೊಂದರಲ್ಲಿ ಡೈನೋಮೋ ಕರ್ಕಶ ಸದ್ದು ಮಾಡುತ್ತಿತ್ತು. ಅದರಿಂದ ಹೊರಬಿದ್ದ ಬಾವಿ ಹಗ್ಗದಂಥ ವೈರುಗಳು ಅಂಗಳದಲ್ಲಿ ಹರಿದುಹೋಗಿ ಮನೆಯೊಳಗೆಲ್ಲೋ ಮಾಯವಾಗಿದ್ದವು. ಒಂದಿಷ್ಟು ಮಂದಿ ಮಾತನಾಡುತ್ತ ಅತ್ತಿಂದಿತ್ತ ಓಡಾಡುತ್ತಿದ್ದರು.

ನನಗೋ ಸಿನೆಮಾ ಶೂಟಿಂಗ್ ಹೊಸತು. ಮೂಕಿ ಸಿನೆಮಾದಿಂದ ಹಿಡಿದು ಭಾಷೆ, ದೇಶದ ಹಂಗಿಲ್ಲದೇ ಸಿದ್ದಾಪುರದ ಟಾಕೀಸುಗಳಿಗೆ ಬಂದ ಎಲ್ಲ ಸಿನೆಮಾಗಳನ್ನು ನೋಡುತ್ತಿದ್ದೆನೆ ಹೊರತು ಅದರ ಚಿತ್ರೀಕರಣ ಕಂಡವನಲ್ಲ. ಮೆಲ್ಲಗೆ ಆ ಭವಂತಿ ಮನೆಯೊಳಕ್ಕೆ ನುಸುಳಿದೆವು.

ಹತ್ತಾರು ಅಂಕಣದ ಆ ಮನೆ ವಿಶಿಷ್ಠವಾಗಿತ್ತು. ಕಟ್ಟಿಗೆಯನ್ನೇ ಹೆಚ್ಚು ಬಳಕೆ ಮಾಡಿದ್ದರು; ಎಲ್ಲವೂ ಕಪ್ಪಗೆ ಮಿರುಗುವ ಪ್ರಾಯಶ: ಬೀಟೆ ಕಟ್ಟಿಗೆಗಳಿರಬೇಕು. ದಪ್ಪನೆಯ ತೊಲೆಗಳು, ಕುಸುರಿಕೆತ್ತನೆಯ ಅಗಲವಾದ ಹೆಬ್ಬಾಗಿಲು, ವಿನ್ಯಾಸದ ಕಿಟಕಿ, ಬಾಗಿಲುಗಳು. ಗೋಡೆಗಳ ಮೇಲೆ ಹಿರಿಯರ ಫೋಟೊಗಳು. ಅವೆಲ್ಲ ಗಮನಿಸುತ್ತ ಹೋದಾಗ ಮಹಡಿ ಮೇಲೆ ಶೂಟಿಂಗ್ ನಡೀತಿದೆ ಎಂದು ಅಲ್ಲಿದ್ದ ಓರ್ವರು ಹೇಳಿದರು.

ಮಜಬೂತಾಗೇ ಇದ್ದ ಕಟ್ಟಿಗೆ ಏಣಿ ಹತ್ತಿ ಒಳಹೊಕ್ಕೆವು. ಅರೆಗತ್ತಲಿನ ಆ ವಿಶಾಲ ಕೋಣೆಯಲ್ಲಿ ಬೃಹದಾಕಾರದ ಕ್ಯಾಮರಾಗಳ ಎದುರು ನಿಚ್ಛಳ ಬೆಳಕಿನಲ್ಲಿ ಚಿತ್ರೀಕರಣ ನಡೆದಿತ್ತು. ಆ ಅಸ್ಪಷ್ಟ ಬೆಳಕಿನಲ್ಲಿ ಕ್ಯಾಮರಾದ ಪಕ್ಕ ಗಿರೀಶ್ ನಿಂತು ಸೂಚನೆ ಕೊಡುತ್ತಿದ್ದರು. ಎರಡು ನಿಮಿಷಕ್ಕೆ ಟರ್ ಎನ್ನುವ ಕ್ಯಾಮರಾ ನಿಂತು ಮತ್ತೆ ಅರೆಬೆಳಕು; ಆಗ ಪಾತ್ರಧಾರಿಗೆ ಮತ್ತೆನೇನೋ ಸೂಚನೆ. ಮತ್ತೆ ಬೆಳಕು. ಕ್ಯಾಮರಾದ ಟರ್ ಸಪ್ಪಳ. ಅದು ಹೂವಯ್ಯನ ಪಾತ್ರದ ಚಿತ್ರೀಕರಣ ಅಂತಾ ಡೈಲಾಗಿನಿಂದಲೇ ಗೊತ್ತಾಯಿತು. ಮತ್ತೆ ಮತ್ತೆ ಪುನರಾವರ್ತನೆಯಾಗುತ್ತ, ಕ್ಯಾಮರಾದ ಸ್ಥಳವನ್ನು ಬದಲಾಯಿಸುತ್ತ ಸುಮಾರು ಹೊತ್ತಿನ ತನಕ ಶೂಟಿಂಗ್ ನಡೆಯಿತು. ನಾನು ಮೂಲೆಯ ಕತ್ತಲಿನಲ್ಲಿ ಕೂತು ಮೌನವಾಗಿ ನೋಡುತ್ತಿದ್ದೆ.

ಚಿಕ್ಕವರಿದ್ದಾಗ ವಾರಿಗೆಯವರೆಲ್ಲ ಸೇರಿದಾಗ ನಡೆಯುತ್ತಿದ್ದ ಚರ್ಚೆಗಳಲ್ಲಿ ಸಿನೆಮಾದ್ದು ಒಂದು ವಿಷಯವಿರುತ್ತಿತ್ತು. ಕೆಲವೊಮ್ಮೆ ಅಪ್ಪ, ಅಮ್ಮನ ಜೊತೆ ನೋಡಿದ ಸಿನೆಮಾಗಳಾದರೆ, ಶಾಲೆಗೆ ಚಕ್ಕರ್ ಹೊಡೆದು ನೋಡಿದ ಸಿನೆಮಾಗಳೇ ಹಲವು. ಅಪ್ಪ, ಅಮ್ಮ ಇಬ್ಬರಿಗೂ ಸಿನೆಮಾದ ಹುಚ್ಚು. ಈಗಿನಂತೆ ಆಗ ಪೇಟೆಗೆ ಬರಬೇಕೆಂದರೆ ಆಟೋ, ಟಾಕ್ಸಿ ಯಾವುದೂ ಇರಲಿಲ್ಲವಲ್ಲ. ಕಾಲುನಡೆ, ಬಿಟ್ಟರೆ ಎತ್ತಿನ ಗಾಡಿ. ದಾಸರ ಮಂಜ ಎನ್ನುವವ ನಮ್ಮ ಮನೆಗೆ ಖಾಯಂ ಆಗಿ ಎತ್ತಿನ ಗಾಡಿ ಬಾಡಿಗೆಗೆ ಬರುತ್ತಿದ್ದ, ಗೊಬ್ಬರ,ಸೊಪ್ಪು, ಅಡಕೆ, ಪೇಟೆಯಿಂದ ಸಾಮಾನು ಸರಂಜಾಮು ಎಲ್ಲದರ ಸಾಗಾಟವೂ ಅವನದ್ದೇ.

ಸಿನೆಮಾಕ್ಕೆ ಹೋಗಲೂ ಅವನದೇ ಚಕ್ಕಡಿ. ಹಾಗೇ ಸಿನೆಮಾ ನೋಡಿದ ಮರುದಿನ ನೋಡದೇ ಇದ್ದವರಿಗೆ ಕಣ್ಣಿಗೆ ಕಟ್ಟುವಂತೆ ಸಿನೆಮಾದ ಕಥೆ ಹೇಳುತ್ತಿದ್ದೆ. ನನ್ನ ಗೆಳೆಯರಿಗೆ ಸಿನೆಮಾ ನಟನಾಗುವ ಕನಸಾದರೆ ನನಗ್ಯಾಕೋ ಕ್ಯಾಮರಾಮನ್ ಆಗಬೇಕು ಎನ್ನುವ ಆಸೆಯಿತ್ತು. ಕೈಗೂಡದ ಸಾವಿರಾರು ಕನಸುಗಳಲ್ಲಿ ಒಂದಾದ ಆ ಕ್ಯಾಮರಾಮನ್ ಚಳಕವನ್ನ ನೋಡುತ್ತ ಅವೆಲ್ಲ ನೆನಪಾಗಿತ್ತು.

ಅಷ್ಟರಲ್ಲಿ ರಾಘವೇಂದ್ರ ನನಗೆ ತಡವಾಗುತ್ತದೆ ಎಂದು ಹೋಗಿಬಿಟ್ಟಿದ್ದರು. ಸ್ವಲ್ಪ ಹೊತ್ತಿನಲ್ಲೇ ಚಿತ್ರೀಕರಣ ನಿಂತಿತು; ಲಂಚ್‍ಬ್ರೇಕ್ ಎಂದು ಯಾರೋ ಕೂಗಿದರು. ನನಗೆ ಗಿರೀಶ್‍ರನ್ನು ಮಾತನಾಡಿಸುವದು ಅನಿವಾರ್ಯವಾಗಿತ್ತು. ಮತ್ತೆ ಶೂಟಿಂಗ್ ಶುರುವಾದರೆ ಮಾತನಾಡಿಸೋದು ಕಷ್ಟ ಎನ್ನಿಸಿ ಕೆಳಗಿಳಿದು ಬಂದು ಅವರನ್ನ ಕಾಯುತ್ತ ನಿಂತೆ.

ಗಿರೀಶ್ ಕೆಳಗಿಳಿದುಬಂದರು. ಅದೇ ಎತ್ತರದ ನಿಲುವು. ಉದ್ದನೆಯ ಜುಬ್ಬಾ ಸಡಿಲ ಪ್ಯಾಂಟ್ ತೊಟ್ಟಿದ್ದ ಅವರ ಮುಖದಲ್ಲಿ ಎರಡು ದಿನದಿಂದ ಶೇವ್ ಮಾಡಿರದ ಬಿಳಿಕೂದಲುಗಳು. ಆಯಾಸ ಎದ್ದು ಕಾಣುತ್ತಿದ್ದರೂ ಮುಖದಲ್ಲಿ ಪ್ರಸನ್ನತೆಯಿತ್ತು. ನಾನು ತುಂಬಾ ಹಿಂದೆ ಅವರ ಕಪ್ಪು-ಬಿಳುಪು ವರ್ಣದ ಫೊಟೊವೊಂದನ್ನ ನೋಡಿದ್ದೆ. ಮನ್ವಂತರ ಎನ್ನುವ ಗ್ರಂಥದಲ್ಲಿ.

ಅದರಲ್ಲಿ ಗಿರೀಶ್ ಸುಮಾರು 20-25 ಪುಟದ ಲೇಖನ ರಂಗಭೂಮಿ ಬಗ್ಗೆ ಬರೆದಂತೆ ನೆನಪು. (ಬಹುಷ: ಮನೋಹರ ಗ್ರಂಥ ಮಾಲೆಯವರು ಪ್ರಕಟಿಸಿದ ಅದರ ಸಮಗ್ರ ವಿವರ ಮರೆತಿದೆ. ಕುರ್ತಕೋಟಿ, ಜಿ.ಬಿ.ಜೋಶಿಯವರ ಲೇಖನಗಳೂ ಅದರಲ್ಲಿದ್ದವು. ಬೆಂದ್ರೆ ಕೂಡ ಬರೆದ ನೆನಪು. ನನ್ನ ಹೈಸ್ಕೂಲ್ ದಿನಕ್ಕಿಂತ ಮೊದಲು ನೋಡಿದ, ಮತ್ತು ನನಗಾಗ ಅಷ್ಟು ಬುದ್ದಿ ಬಲಿತಿರದ ಕಾರಣ ಅಸ್ಪಷ್ಟವಾಗಿದೆ). ಅದರಲ್ಲಿ ಗಿರೀಶರ ಅರ್ಧಪುಟದಷ್ಟು ಗಾತ್ರದ ಫೋಟೊ ಕೂಡ ಇತ್ತು. ಅಗಲವಾದ, ಗಂಭೀರತೆಯಲ್ಲೂ ಮುಗ್ದತೆಯನ್ನ ಸೂಸುವ ಮುಖ, ಕಾಂತಿಯುಕ್ತ ವಿಶಾಲ ಕಣ್ಣುಗಳು ಆಕರ್ಷಿಸಿದ್ದವು.

ನಿಜವಾಗಿ ನಾನು ಗಿರೀಶರತ್ತ ಆಕರ್ಷಿತನಾದದ್ದೇ ಆ ಫೋಟೊದಿಂದ. ಗಿರೀಶ ಕಾರ್ನಾಡ್ ಎನ್ನುವದಕ್ಕಿಂತ ಗಿರೀಶ್ ಎಂದರೆ ಸುಖವೆನ್ನಿಸುತ್ತಿತ್ತು. ಸಂಸ್ಕಾರ, ವಂಶವೃಕ್ಷ ಸಿನೆಮಾ ಪಾತ್ರಗಳಲ್ಲಿ ನೋಡಿದ್ದ ಅವರನ್ನ ಈಗ ಪ್ರತ್ಯಕ್ಷದಲ್ಲಿ ನೋಡುತ್ತಿದ್ದೆ. ಅವರ ಆಳ್ತನ, ವ್ಯಕ್ತಿತ್ವದ ವರ್ಚಸ್ಸು ನನ್ನನ್ನ ಧೃತಿಗೆಡಿಸುತ್ತಿತ್ತು.

ನನ್ನೊಬ್ಬನನ್ನ ಬಿಟ್ಟರೆ ಅಲ್ಲಿ ಮತ್ಯಾರೂ ಮಿಡೀಯಾದವರು ಇರದ ಕಾರಣ ಯಾರೂ ಅವರ ತಲೆ ತಿನ್ನುವವರು ಇರಲಿಲ್ಲ. ಆದರೆ ಮೀಡಿಯಾದವರ ಮಾಡರ್ನ್ ಸ್ಟೈಲಿನಲ್ಲಿರದ ನಾನು ಅಡ್ಡಗೆರೆಗಳಿದ್ದ ಮಾಸಿದ ಟೀ ಶರ್ಟ್, ಅಷ್ಟೇ ಮಾಸಿದ ಜೀನ್ಸ್ ಪ್ಯಾಂಟನಲ್ಲಿದ್ದೆ. ಬೆನ್ನಿಗೆ ಹಳೆಯ ಮಾದರಿಯ ಬ್ಯಾಕ್‍ಪ್ಯಾಕ್. ಅಮಿತಾಬ್‍ ಶೈಲಿಯ ಹೇರ್‍ಸ್ಟೈಲ್, ಕೋಲು ಮುಖದ ನನ್ನತ್ತ ಅವರು ತಿರುಗಿಯಾದರೂ ನೋಡಿಯಾರಾ? ಅನ್ನಿಸಿತು.

ಆದರೂ ಎಂದಿನ ಹುಂಬುಧೈರ್ಯವನ್ನ ಒಗ್ಗೂಡಿಸಿಕೊಂಡು ಅವರ ಬಳಿ ಹೋಗಿ ನಮಸ್ಕಾರ ಎಂದೆ. ಅವರಿಗೂ ಇವನ್ಯಾರೋ ಹೊಸಬ ಅನ್ನಿಸಿರಬೇಕು? ಪ್ರತಿ ನಮಸ್ಕಾರ ಹೇಳಿದವರು ಸೌಮ್ಯವಾಗಿ ನೀವು ಯಾರು? ಎಂದರು. ನನ್ನ ಪ್ರವರ ಹೇಳಿದೆ. ಅವರದೇ ಆದ ಸ್ಟೈಲಿನಲ್ಲಿ ತಲೆಯಾಡಿಸುತ್ತ ಮೆಲು ನಕ್ಕರು. ‘ಬನ್ನಿ, ಊಟ ಮಾಡ್ತಾ ಮಾತಾಡೋಣ’ ಎಂದು ಕರೆದರು.

ನಾನು ಮೊದಲೇ ಎಣಿಸಿದ್ದೆ; ಊಟಕ್ಕೆ ಮೊದಲೇ ಅವರನ್ನ ಮಾತನಾಡಿಸಿಬಿಡಬೇಕು ಎಂದು. ಅನಪೇಕ್ಷಿತವಾಗಿ ಊಟ ಮಾಡಲು ಎಂದಿನಂತೆ ಅವತ್ತೂ ಮುಜುಗುರವಾಗತೊಡಗಿತು. ನನ್ನೊಳಗಿನ ಈ ಥರದ ದ್ವಂದ್ವ, ಕೀಳರಿಮೆ, ವ್ಯಕ್ತಿತ್ವದ ಭಾಗವಾಗಿರುವ ಅಂಶಗಳು ಯಾವಾಗಿನಂತೆ ಆಗಲೂ ಎದ್ದೆದ್ದು ಬರುತ್ತಿತ್ತು. ಊಟ ಬಿಟ್ಟು ಕೂತರೆ ಗಿರೀಶರ ಜೊತೆ ಮಾತು ಸಿಗೋದಿಲ್ಲ. ಊಟ ಮಾಡಲು ಮುಜುಗುರ. ಮುಂದೆ ಹೋದವರು ತಿರುಗಿ ಮತ್ತೆ ಕರೆದಾಗ ನಿರ್ವಾಹವಿಲ್ಲದೇ ಜೊತೆಗೆ ಹೋದೆ. ಮಲೆನಾಡಿನ ಭವಂತಿ ಶೈಲಿಯ ಆ ಮನೆಯ ಒಂದು ಪಾರ್ಶ್ವದ ವರಾಂಡದಲ್ಲಿ ಊಟಕ್ಕೆ ಸಿದ್ಧತೆ ನಡೆದಿತ್ತು.

ಈಗನ್ನಿಸುತ್ತದೆ; ವ್ಯಕ್ತಿ, ವ್ಯಕ್ತಿಗಳ ನಡುವೆ ಪ್ರೀತಿ, ವಿಶ್ವಾಸವಿರಲಿ, ಸಣ್ಣದೊಂದು ತಂತು ಸಾಧ್ಯವಾಗಲು ಪ್ರಮುಖ ಕಾರಣ ಪ್ರಾದೇಶಿಕ ಸಂವೇದನೆಯೂ ಕಾರಣವಾಗಿರಬಹುದು. ಆ ಕ್ಷಣ ನನ್ನ, ಗಿರೀಶರ ನಡುವೆ ಸೂಕ್ಷ್ಮ ಸಾಮೀಪ್ಯಕ್ಕೂ ಅದೇ ಕಾರಣ.
ಪಕ್ಕ ಕೂತವನನ್ನ ಮಾತಿಗೆಳೆದದ್ದು ಅವರೇ. ‘ ನೀವು ಸಿದ್ದಾಪುರದವರು ಅಂದ್ರಲ್ಲಾ? ಶಿರಸಿ-ಸಿದ್ದಾಪುರ.’ ಎಂದು ಪ್ರಶ್ನಿಸಿದವರು ಸ್ವಲ್ಪ ತಡೆದು ‘ ಈಗಲೂ ಸಿದ್ದಾಪುರದ ರಸ್ತೆಗಳ ಪಕ್ಕ ಆಲ, ದೂಪದ ಮರಗಳಿದ್ದಾವಾ?’ ಎಂದರು. ನಾನು ಅವಾಕ್ಕಾದೆ. ಬೇರೆ ಯಾವುದಾದರೂ ಪ್ರಮುಖ (ನಾನು ಅಂದುಕೊಂಡ) ವಿವರಗಳನ್ನು ಕೇಳಿಯಾರು ಅಂದುಕೊಂಡಿದ್ದರೆ ಅವರು ಕೇಳಿದ್ದು ಮರಗಳ ಬಗ್ಗೆ; ನಿಮ್ಮ ಮನೆಯಲ್ಲಿ ಎಲ್ಲರೂ ಸೌಖ್ಯವಾ? ಅವರೆಲ್ಲ ಹೇಗಿದ್ದಾರೆ? ಎನ್ನುವ ರೀತಿಯಲ್ಲಿ.

ಗಿರೀಶ್ ಕಾರ್ನಾಡ್ ಸಿದ್ದಾಪುರದಲ್ಲಿ ಆರೆಂಟು ತಿಂಗಳ ಕಾಲ ವಾಸಿಸಿದ್ದು, ಪ್ರಾಥಮಿಕ ಶಾಲೆಗೆ ಹೋಗಿದ್ದರ ಬಗ್ಗೆ ಕೇಳಿದ್ದೆ. ನಂತರ ಶಿರಸಿಗೆ ಹೋದರಂತೆ. ನನ್ನ ಕಸಿನ್ ಓರ್ವರು ಶಿರಸಿ ಹೈಸ್ಕೂಲಿನಲ್ಲಿ ಅವರ ಕ್ಲಾಸ್ ಮೇಟ್ ಕೂಡ ಆಗಿದ್ದರಂತೆ. ನಾನು ಗಿರೀಶರ ಬಗ್ಗೆ ವಿಪರೀತ ಅಭಿಮಾನವನ್ನೂ, ಆಕರ್ಷಣೆಯನ್ನೂ ಹೊಂದಲು ಅವರು ಗಿರೀಶರ ಬಗ್ಗೆ ಹೇಳಿದ ಮಾತುಗಳು ಕಾರಣವಾಗಿರಲಿಕ್ಕೂ ಸಾಕು.

ಅವರ ಬಗ್ಗೆ ಕೇಳಿದ ವಿವರಗಳಲ್ಲಿ ಒಂದು- ಗಿರೀಶರು ಹೈಸ್ಕೂಲಿನಲ್ಲಿ ಎಂಟನೇ ತರಗತಿ ಓದುತ್ತಿದ್ದರೂ ಕೆಲವೊಮ್ಮೆ ಹತ್ತನೇ ತರಗತಿಗೆ ಹೋಗಿ ಕೂರುತ್ತಿದ್ದರಂತೆ. ಆ ಕ್ಲಾಸಿನ ಮೇಷ್ಟ್ರು ಹಾಕಿದ ಲೆಕ್ಕಕ್ಕೆ ಪಟ್ಟಂತ ಉತ್ತರಿಸುತ್ತಿದ್ದರಂತೆ. ಇಂಗ್ಲೀಷ್ ಗ್ರಾಮರನ್ನೂ ಹಾಗೇ ಎಂದು.- ಗಿರೀಶರಿಗೆ ಇರಬಹುದಾದ ಬುದ್ದಿಶಕ್ತಿ, ಕಾರ್ಯಕ್ಷಮತೆಯನ್ನ ನನ್ನ ಮಿತಿಯಲ್ಲಿ ಊಹಿಸುವ ನನಗೆ ಆ ಘಟನೆ ಸುಳ್ಳೆಂದು ಈಗಲೂ ಅನಿಸುತ್ತಿಲ್ಲ.

ನಾವೆಲ್ಲ ಚಿಕ್ಕವರಿದ್ದಾಗಲೂ ಸಿದ್ದಾಪುರ ಪೇಟೆಯ ರಸ್ತೆಗಳ ಎರಡೂ ಮಗ್ಗಲುಗಳಲ್ಲಿ ಅಲ್ಲಲ್ಲಿ ವಿಶಾಲವಾದ ಆಲದ ಮರಗಳಿದ್ದವು. ಸಾಗರ, ಶಿರಸಿ, ಕುಮಟಾ, ಜೋಗ್ ಮುಂತಾದ ಹೊರ ಊರುಗಳಿಗೆ ಹೋಗುವ ರಸ್ತೆಗಳ ಮಗ್ಗಲು ಧೂಪದ ಮರಗಳ ಸಾಲೇ ಇತ್ತು. ಅವು ಊರಿಗೆ ಶೋಭೆಯನ್ನೂ, ವೈಶಿಷ್ಠ್ಯತೆಯನ್ನೂ ಕೊಡುತ್ತಿದ್ದವೇನೋ?
ಅವರಿಗೆ ಸಿದ್ದಾಪುರದಲ್ಲಿನ ಬಾಲ್ಯದ ನೆನಪು ಮರುಕಳಿಸಿರಬೇಕು. ಸುಮ್ಮನಿದ್ದರು.

‘ ಮೊದಲಿನಷ್ಟು ಈಗಿಲ್ಲ. ಕೆಲವು ಉರುಳಿಬಿದ್ದು, ಒಣಗಿ ಹೋದವು. ಹಲವನ್ನ ಜನರೇ ಕಡಿದುಹಾಕಿದರು. ಈಗ ಅಲ್ಲೊಂದು,ಇಲ್ಲೊಂದು ಉಳಿದುಕೊಂಡಿವೆ’ ಎಂದೆ. ಹೀಗೆ ಊಟದ ಜೊತೆಗೆ, ಊಟದ ನಂತರವೂ ನಮ್ಮ ಮಾತುಗಳು ಮುಂದುವರಿದವು. ನನ್ನ ಅರೆ ತಿಳುವಳಿಕೆಯಿಂದ ಬರುವ ಪ್ರಶ್ನೆಗಳಿಗೆ, ಸಂದೇಹಗಳಿಗೆ ಅವರು ಹಸನ್ಮುಖರಾಗೇ ಒಂಚೂರು ವಿಸ್ತಾರವಾಗೇ ಉತ್ತರಿಸುತ್ತಿದ್ದರು. ಮಾತು-ಕಥೆ ಪ್ರಶ್ನೋತ್ತರದ ಮಾದರಿಯಲ್ಲಿ ನಡೆಯದೇ ಪರಸ್ಪರ ಕೇಳುವ-ತಿಳಿಯುವ ರೀತಿಯಲ್ಲಿ ನಡೆಯಿತು.

ನನ್ನಂಥ ಕಿರಿಯನ ಜೊತೆ ಗಿರೀಶ್ ಮೂಡ್‍ನ್ನು ಬಿಟ್ಟುಕೊಟ್ಟು ಸಹೃದಯರಾಗಿ ಸಂಭಾಷಿಸುತ್ತಿದ್ದು ನನಗೆ ಮಾತ್ರವಲ್ಲ ಪ್ರಾಯಶ: ಅಲ್ಲಿದ್ದ ಸುಚೇಂದ್ರಪ್ರಸಾದ್, ಪ್ರೊ|ಜಿ.ಕೆ.ಗೋವಿಂದರಾವ್ ಮುಂತಾದ ಕಲಾವಿದರಿಗೂ ಅಚ್ಚರಿ ತಂದಿರಬೇಕು. ಸುಮಾರು ಎರಡು ತಾಸುಗಳ ಕಾಲ ಸಿದ್ದಾಪುರದಲ್ಲಿ ತಾನು ಕಂಡದ್ದರ, ತಮ್ಮನ್ನ ಪ್ರಭಾವಿಸಿದ ಹಿರಿಯ ರಂಗಕರ್ಮಿ ಸೀತಾರಾಮ ಶಾಸ್ತ್ರಿಗಳ, ( ಶಾಸ್ತ್ರಿಗಳು ಸಿದ್ದಾಪುರದವರೇ. ಮಕ್ಕಳನ್ನ ಕಂಡರೆ ಪ್ರೀತಿಯಿದ್ದ ಅವರು ನಾವು ಹೈಸ್ಕೂಲಿಗೆ ಊರಿನಿಂದ ಬರುವಾಗ ದಾರಿಯಲ್ಲಿ ಸಿಕ್ಕು ಮಾತನಾಡಿಸಿಯೇ ಮುಂದೆ ಹೋಗೋದಿತ್ತು), ಉತ್ತರಕನ್ನಡದ ಜನಜೀವನ, ಸಂಸ್ಕೃತಿ, ಸಾಂಸ್ಕೃತಿಕ ಪ್ರಜ್ಞೆ ಮುಂತಾದವುಗಳ ಕುರಿತು ಮಾತನಾಡಿದರು. ‘ಕಾನೂರು.. ಸಿನೆಮಾ ಮಾಡೋದರ ಪ್ರೇರಣೆ ಏನು?’ ಎಂದು ಕೇಳಿದ್ದಕ್ಕೆ ಸಾಕಷ್ಟು ವಿಸ್ತೃತವಾಗೇ ಹೇಳಿದರು.

ಅಷ್ಟರಲ್ಲಿ ನಟಿ ತಾರಾ, ಅವರ ಹಿಂದೆ ಅವರ ತಾಯಿ ಬಂದರು. ‘ಏನ್ರೀ, ತಡಮಾಡ್ಬೀಟ್ರಲ್ಲಾ?’ ಎಂದರು. ತಾವು ಹೋಗಿದ್ದ ಕೊಲ್ಲೂರು ದೇವಸ್ಥಾನದ ಭೇಟಿಯ ಬಗ್ಗೆ ಹೇಳಿದ್ದನ್ನ ಕೇಳಿಸಿಕೊಂಡವರು ‘ ನೀವು ರೆಡಿಯಾಗಿ, ಒಂದಿಷ್ಟು ಶೂಟ್ ಮಾಡೋಣ’ ಎಂದು ಚಿತ್ರೀಕರಣದ ಸಿದ್ಧತೆಗೆ ತೊಡಗಿದರು.

ನನ್ನ ಭೇಟಿಯ ಸಮಯ ಮುಗಿಯಿತು ಎಂದುಕೊಂಡು ಅವರಿಗೆ ವಿದಾಯದ ನಮಸ್ಕಾರ ಹೇಳಲು ಮುಂದಾದೆ. ‘ಏ, ಇರ್ರೀ, ಗದ್ದೆಯಲ್ಲಿ ನಾಟಿ ಮಾಡೋ ಶೂಟಿಂಗಿದೆ. ಅಲ್ಲಿಗೆ ಹೋಗೋಣ..’ ಎನ್ನುತ್ತ ತಂಡದವರಿಗೆ ಸೂಚನೆ ಕೊಡಲು ನಡೆದೇಬಿಟ್ಟರು.
ನಿರ್ವಾಹವಿಲ್ಲದೇ ನಾನು ನಿಲ್ಲಬೇಕಾಯ್ತು. ಮನಸ್ಸಿನಲ್ಲಿ ಆಗಲೇ ಜಿಗಿಜಿಗಿ ಅನ್ನತೊಡಗಿತ್ತು. ‘ಅಮ್ಮ ಒಬ್ಳೇ ಇದಾಳೆ. ಮೈಯಲ್ಲಿ ಹುಷಾರಿಲ್ಲ. ವಯಸ್ಸಾದವಳು, ಏನಾಯ್ತೋ,ಏನೋ?’ ಎಂದೆಲ್ಲ ಹಳಹಳಿಸತೊಡಗಿತ್ತು. ಆದರೂ ಗತ್ಯಂತರವಿಲ್ಲ. ಗಿರೀಶ್ ಮಾತು ಮೀರುವ ಮನಸ್ಸಾಗಲಿಲ್ಲ.

ಅಂಗಳದಲ್ಲಿ ನಿಂತಿದ್ದ ನನ್ನ ಶೂಟಿಂಗಿಗೆಂದು ಹೊರಟುನಿಂತ ಅವರು ಕರೆದು, ಅವರಿದ್ದ ಕಾರಿನಲ್ಲಿ ಜಾಗವಿಲ್ಲದ್ದರಿಂದ ಮತ್ತೊಂದು ಕಾರಿನಲ್ಲಿ ಕರೆತರಲು ಸಹಾಯಕನಿಗೆ ಹೇಳಿದರು. ನಾವು ಬಂದಿದ್ದು ಮೂಡುವಳ್ಳಿ ಪಕ್ಕದ ನಾಲ್ಕಾರು ಕಿಮೀ.ದೂರದ ಗದ್ದೆಕೋವಿಗೆ.

ಈ ಬೇಸಿಗೆಯಲ್ಲಿ ಅದ್ಹೇಂಗೆ ಸಸಿ ನಾಟಿ ಶೂಟಿಂಗ್ ಮಾಡ್ತಾರೆ ಅಂತಾ ಯೋಚಿಸಿದವನಿಗೆ ಕಂಡದ್ದು ಆ ಗದ್ದೆ ಕೋವಿನಲ್ಲಿನ ಬೇಸಿಗೆ ಭತ್ತದ ಗದ್ದೆ. ಮಲೆನಾಡಿನಲ್ಲಿ ಈ ಬೇಸಿಗೆ ಭತ್ತದ ಬೆಳೆಗೆ ಕಾರು ಬೆಳೆ ಅಂತಲೂ ಅನ್ನುತ್ತಾರೆ. ಒಬ್ಬ ನಿರ್ದೇಶಕ ಎಷ್ಟೆಲ್ಲ ಯೋಜಿಸಬೇಕು? ಎನ್ನುವದು ಅರಿವಿಗೆ ಬಂತು.

ತಾರಾ ಪಕ್ಕಾ ಗೌಡ್ತಿಯ ವೇಷದಲ್ಲಿದ್ದರು; ಕಥಾನಕದ ಮುಖ್ಯ ಪಾತ್ರ ಸುಬ್ಬಮ್ಮನಾಗಿ. ಬಿರುಬಿಸಿಲಿನಲ್ಲಿ ಸುಮಾರು ಎರಡು ತಾಸುಗಳ ಕಾಲ ಶೂಟಿಂಗ್ ನಡೆಯಿತು. ಜಾರುವ ಗದ್ದೆಹಾಳಿಗಳ ಮೇಲೆ, ಕೆಸರಿನ ಮಣ್ಣಿನಲ್ಲಿ ಹೂತುವ ಕಷ್ಟದ ನಡುವೆ ಹಳ್ಳಿಗಾಡಿನ ಅಭ್ಯಾಸವಿರದ ಅವರೆಲ್ಲ ಒದ್ದಾಡುವದು ಸಣ್ಣನೆಯ ಮರುಕ ಹುಟ್ಟಿಸುತ್ತಿತ್ತು. ಅಲ್ಲಿ ಸಿಗುವ ವಿರಾಮದ ನಡುವೆಯೇ ಗಿರೀಶ್ ನನಗೆ ತಾರಾ ಅವರನ್ನು ಪರಿಚಯಿಸಿದ್ದರು!

ಅಂತೂ ಇಂತೂ ಶೂಟಿಂಗ್ ಮುಗಿಸಿ ನಾವು ಬಂದು ನಿಂತದ್ದು ಒಂದು ಗೆಸ್ಟಹೌಸ್‍ಗೆ. –ಯಾವ ಊರು ಅಂತ ನೆನಪಿಲ್ಲ-. ಗಿರೀಶ್ ಹಾಗೂ ಮುಖ್ಯ ನಟರು ಅಲ್ಲಿ ತಂಗುತ್ತಿದ್ದರಂತೆ. ನನ್ನ ತಮ್ಮ ರೂಮಿನಲ್ಲಿ ಕೂರಿಸಿ ಗಿರೀಶ್ ಸ್ನಾನಕ್ಕೆ ಹೋದರು. ಕೂತಲ್ಲಿ ಕೂರದ ನಾನು ಸುಮ್ಮನೆ ಹೊರಗೆ ಬಂದರೆ ಆ ವರಾಂಡದ ಆ ತುದಿಯಲ್ಲಿ ತಾರಾ ಇಳಿಬಿಸಿಲಿಗೆ ತಲೆಯೊಡ್ಡಿ ಬಿಚ್ಚಿಕೊಂಡ ತಲೆಗೂದಲಿಗೆ ಎಣ್ಣೆ ತಿಕ್ಕುತ್ತಿದ್ದರು.

ಶೂಟಿಂಗ್ ಜಾಗದಲ್ಲೇ ಸಾಕಷ್ಟು ಮಾತು-ಕಥೆ ನಡೆದದ್ದರಿಂದ ಅವರ ಪರಿಚಯ ಬೆಳೆದಿತ್ತು. ಮತ್ತೊಂದಿಷ್ಟು ಲೋಕಾಭಿರಾಮದ ಮಾತುಗಳ ನಂತರ ನಮ್ಮ ವಾಡಿಕೆಯಂತೆ ‘ನಮ್ಮೂರಿಗೆ ಬನ್ನಿ’ ಎಂದೆ. ನಾನು ಹೊರಡಲಿದ್ದೇನೆ ಎನ್ನಿಸಿರಬೇಕು. ‘ ಆಗ್ಲೇ ಹೊರಟ್ರಾ, ಇರ್ರೀ, ಮತ್ತಷ್ಟು ಮಾತನಾಡೋಣ’ ಎಂದರು. ಸಹೋದರಿಯಂತೆ ನಡೆದುಕೊಂಡ ತಾರಾ ಅವರ ನಿಷ್ಕಲ್ಮಷ ಮಾತುಗಳು ನನ್ನ ಅಂತರಂಗವನ್ನ ತಟ್ಟಿದ್ದವು.

ಅಷ್ಟರಲ್ಲಿ ಗಿರೀಶ್ ಸ್ನಾನ ಮುಗಿಸಿ, ಹೊರಬಂದು ‘ ಬನ್ನಿ, ಚಹಾ ಕುಡಿಯೋಣ’ ಎಂದು ಕರೆದರು.. ಎಣ್ಣೆ ಸವರಿದ ತನ್ನ ಬಲಗೈ ಬೆರಳುಗಳಿಂದ ನನ್ನ ಕೈ ಕುಲುಕಿ ತಾರಾ ಬೀಳ್ಕೊಟ್ಟದ್ದು ಇನ್ನೂ ಉಳಿದುಕೊಂಡಿದೆ; ಈಗಲೂ ನನ್ನ ಬೆರಳುಗಳಲ್ಲಿ ಆ ಸ್ಪರ್ಶ ಹಸಿಯಾಗಿದೆ.

ಗಿರೀಶರ ಜೊತೆ ಕೂತು ಚಹಾ ಕುಡಿದ ನಂತರ ಹೊರಡಲಣಿಯಾದೆ. ಅಮ್ಮನ ನೆನಪು ಜಗ್ಗುತ್ತಿತ್ತು. ಗಿರೀಶರಿಗೆ ಹೇಳಿದೆ. ಆಶ್ಚರ್ಯದ ಮುಖದಲ್ಲಿ ‘ ಉಳೀರಿ, ನಾಳೆ ಒಂದಿನ ನೋಡಿ ಹೋಗ್ಬಹುದಂತೆ. ಈಗ ಹೊರಟರೆ, ಅದೂ ಸಮಯಕ್ಕೆ ಬಸ್ ಸಿಕ್ಕರೆ ಬೆಳಿಗ್ಗೇನೆ ಊರಿಗೆ ತಲುಪ್ತೀರಿ. ಅಷ್ಟೊಂದು ದೂರದ ಊರು. ಯಾಕಿಷ್ಟು ಅವಸರ’ ಎಂದರು.

ಅವರ ಮಾತುಗಳಲ್ಲಿ ಧಾರವಾಡದ ಸಹಜಶೈಲಿ ಇರುವದನ್ನ ಆಗಿನಿಂದಲೂ ಗಮನಸುತ್ತ ಬಂದಿದ್ದೆ. ಅದೇ ಧ್ವನಿ, ಅದೇ ಧಾಟಿ. ನನ್ನ ಕಷ್ಟ ಹೇಳಿ ಹೊರಟವನ ಕೈಹಿಡಿದು ಎಷ್ಟೊಂದು ಅಕ್ಕರೆಯಿಂದ ಕುಲುಕಿದರು!. ಆಲಂಗಿಸಿಕೊಂಡು ‘ಮತ್ತೆ ಭೆಟ್ಟಿಯಾಗೋಣ’ ಎಂದು ಅಷ್ಟೇ ಪ್ರೀತಿಯಿಂದ ಹೇಳಿದರು. ಬಗ್ಗಿ ನಮಸ್ಕರಿಸಿ ಬೀಳ್ಕೊಂಡು ಹೊರಟ ನನ್ನ ಕಣ್ಣಲ್ಲಿ ಸಣ್ಣಗೆ ಹನಿ ಮಿಡಿಯುತ್ತಿದ್ದುದು ನನಗಷ್ಟೇ ಗೊತ್ತಿತ್ತು.

ನಾಟಕ ರಚನೆ, ನಾಟಕ, ಸಿನೆಮಾ ನಿರ್ದೇಶನ, ನಟನೆ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳ ನಿರ್ವಹಣೆ..ಹೀಗೇ ಹಲವು ಕ್ಷೇತ್ರಗಳಲ್ಲಿ ಹೆಸರಾದ, ತನ್ನ ವ್ಯಕ್ತಿತ್ವ, ಬುದ್ದಿಶಕ್ತಿಯಿಂದ ಖ್ಯಾತನಾದ ಮೇರು ವ್ಯಕ್ತಿ ನನ್ನಂಥ ಕಿರಿಯನ ಜೊತೆ ನಡೆದುಕೊಂಡ ರೀತಿ, ಒಂದಷ್ಟು ಹೊತ್ತು ಕೊಟ್ಟ ಆತ್ಮೀಯತೆ, ಆಹ್ಲಾದತೆ ಮನಸ್ಸನ್ನು ಒದ್ದೆ ಮಾಡಿತ್ತು. ಅದು ಗಿರೀಶರ ದೊಡ್ಡತನ; ಅವರ ನಿಲುವಿನಂತೆ ಮನಸ್ಸು, ನಡವಳಿಕೆ ಕೂಡ.

ನನ್ನ ಅಂದಿನ ಅನುಭವ ಈಗಲೂ ಜೀವಂತವಾಗಿದೆ. ಈ ಅನುಭವ ಸುಳ್ಳೆಂದು ಹಲವರಿಗೆ ಅನಿಸಲೂಬಹುದು. ಆದರೆ ಆಗಿನ ನನ್ನ ರೋಲ್ ಕ್ಯಾಮರಾದಲ್ಲಿ ತೆಗೆದ ಚಿತ್ರಗಳಿಲ್ಲದಿದ್ದರೆ ನನಗೂ ಅದೊಂದು ಕನಸು ಅನ್ನಿಸಿಬಿಡುತ್ತಿತ್ತೇನೋ? ಆದರೆ ಆ ಚಿತ್ರಗಳು ನೆನಪನ್ನ ಜೀವಂತವಾಗಿಟ್ಟಿವೆ.

ನಂತರದಲ್ಲಿ ಕರ್ನಾಟಕ ಫಿಲಂ ಛೇಂಬರ್ ನಡೆಸಿದ ಕಮ್ಮಟದಲ್ಲಿ ಪಾಲ್ಗೊಂಡಿದ್ದ ನನಗೆ ಮತ್ತೆ ಸಿಕ್ಕರು; ಆಗ ಅವರ ಜೊತೆ ಇನ್ನೊಬ್ಬ ಗಿರೀಶ್ ಇದ್ದರು.

9 Responses

 1. ಮಮತ says:

  ಕಾನೂರುಹೆಗ್ಗಡತಿ ಪುಸ್ತಕ ಓದುವಾಗ ನನ್ನ ಕಲ್ಪನೆಯಲ್ಲಿ ಒಂದು ಚಿತ್ರ ಮೂಡಿತ್ತು.
  ಪಾತ್ರಗಳು ಮಸುಕಾಗಿದ್ದವು.
  ಚಲನಚಿತ್ರ ನೋಡಿದ ನಂತರ ಪಾತ್ರಗಳು ಹಾಗೂ ವೇಷಭೂಷಣಗಳಿಗೆ ಒಂದು ನಿರ್ದಿಷ್ಟತೆ ಬಂತು. ತರುವಾಯ ಚಿತ್ರವನ್ನು ಲೆಕ್ಕವಿಲ್ಲದಷ್ಟು ಬಾರಿ ನೋಡಿ ಈಗ ಪಾತ್ರಧಾರಿಗಳು ಹಾಗೂ ಕಥೆ ಮನಸ್ಸಿನಲ್ಲಿ ಅಚ್ಛಳಿಯದೆ ಕೂತಿದೆ. ಪ್ರಕೃತಿ / ವಿಶಿಷ್ಟ ಸಂಪ್ರದಾಯ ಆಧಾರಿತ ಕಥೆಗಳು ಹಾಗೂ ಚಲನಚಿತ್ರಗಳು ನನಗಂತೂ ತುಂಬಾ ಆಕರ್ಷಣೀಯ.

  ನಿಮ್ಮ ಈ ಲೇಖನ ಮತ್ತೊಮ್ಮೆ ಆಆ ಕಥೆಯ ಬಗೆಗಿನ ಎಲ್ಲಾ ನೆನಪುಗಳನ್ನು ತಿರುವಿಹಾಕಿದೆ.

 2. Sumithra l c says:

  ಶೂಟಿಂಗ್ ನಡೆದದ್ದು ೧೯೯೮ ರಲ್ಲಿ .ಮೇಗರವಳ್ಳಿ ಬಳಿಯ ಮೂಡುವಳ್ಳಿಯಲ್ಲಿ…ಗಿರೀಶ್ ತಂಡದ ವಾಸ್ತವ್ಯ ಕ್ಕೆ ಮೇಗರವಳ್ಳಿಯಲ್ಲಿ ಒಂದು ಮನೆಯನ್ನು ಕೊಟ್ಟಿದ್ದರು…ಆಗಲೇ ಅವರಿಗೆ ಜ್ನಾನ ಪೀಠ ಪ್ರಶಸ್ತಿ ಬಂತು…ನಾವು ಅಭಿನಂದಿಸಲು ಹೋಗಿ ದ್ದೆವು….ಅವರು ಒಂದು ತಿಂಗಳ ಕಾಲ ಇಲ್ಲಿದ್ದರು…ಕೊನೆಯಲ್ಲಿ ಸಾರ್ವಜನಿಕ ಅಭಿನಂದನೆಯೂ ದೊಡ್ಡದಾಗಿ ನಡೆಯಿತು… ನಮ್ಮ ಕಾಲೇಜಿನ ಕಾರ್ಯ ಕ್ರಮ ಕ್ಕೆ ಅತಿಥಿಯಾಗಿ ಬಂದಿದ್ದ ರು….ಸಾಗರದಿಂದ ತೀರ್ಥ ಹಳ್ಳಿ ಗೆ ೮೦ ಕಿ ಮೀ ..

  • ಧನ್ಯವಾದ. ನಾನು ಭೇಟಿಯಾಗಿ ಬಂದ ನಂತರ ಜ್ಞಾನಪೀಠ ಅವರಿಗೆ ಬಂತು. ನನಗೆ ಅದಕ್ಕೆ ಅಭಿನಂದನೆ ಹೇಳುವ ಅವಕಾಶ ದೊರೆಯಲಿಲ್ಲ. ನನ್ನೂರು ಸಿದ್ದಾಪುರ; ಇಲ್ಲಿಂದ ಸಾಗರಕ್ಕೆ 30 ಕಿಮೀ. ಮೊನ್ನೆ ನನ್ನ ಗೆಳೆಯರು- ತೀರ್ಥಹಳ್ಳಿ ಹತ್ತಿರದ ಕೋಟೆಕೊಪ್ಪದ ಶ್ರೀಧರ ಗೌಡ ೆನ್ನುವವರು. ಮೂಡುವಳ್ಳಿಯ ಅವರ ಅಜ್ಜಿಯ, ಅಜ್ಜಿ ಮನೆಯೆಂದು. ಎಷ್ಟು ಕಾಲದಿಂದ ಅದು ಉಳಿದುಬಂದಿದೆ ಎಂದು ಸೋಜಿಗವಾಯ್ತು.

 3. Vidya Hegde says:

  mattomme kaanoor heggaditiyanna oduva hambala untayitu.

 4. ತಮ್ಮಣ್ಣ ಬೀಗಾರ says:

  ನನಗೂ ಕಾರ್ನಾಡರು ಸಿಕ್ಕಷ್ಟೇ ಖುಷಿ ಆಯಿತು.ನಿಮ್ಮ ಬರೆಹ ಸಹಜತೆಯಿಂದ ಕೂಡಿದ್ದು ಆಪ್ತವಾಗಿದೆ.ಅಭಿನಂದನೆಗಳು.

 5. ರಘುನಾಥ says:

  ಚಂದದ ಬರಹ. ಮುಂಬೈನ ಮೈಸೂರು ಅಸೋಸಿಯೇಷನ ಅವರು ಅವರಿಗೆ ಜ್ಞಾನಪೀಠ ಬಂದಾಗ ಅವರ ನಾಟಕೋತ್ಸವ ಏರ್ಪಡಿಸಿದ್ದರು.ಅವರಮುಖವಾಣಿ ನೇಸರು ಸಂಪಾದಕ ಸಮಿತಿಯಲ್ಲಿದ್ದ ನಾನು ವಿಶೇಷ ಸಂಚಿಕೆಯನ್ನು ಹೊರತಂದು ಅವರು ನಾಟಕ ನೋಡಲು ಬಂದಾಗ ಕೈಕುಲಿಕಿ ಅಭಿನಂದನ ಹೇಳಿದ್ದೆ.ಅವರ ಕುರಿತು ನಾನು ಬರೆದ ಗಿರೀಶ ಕಾರ್ನಾಡ ನಾಟಕಗಳ ದೇಹಮೀಮಾಂಸೆ ಲೇಖನ ಗಾಂಧಿಬಜಾರ ಪತ್ರಿಕೆಯಲ್ಲಿ ಪ್ಪಕಟವಾಗಿದೆ

 6. Hussain pasha says:

  ನೆನಪುಗಳ ಮಾತು ಮಧುರ…

 7. ನೂತನ says:

  ನಮಸ್ಕಾರ ಗಂಗಾಧರ ಅವರೇ..ಎಷ್ಟು ಆಪ್ತವಾಗಿ ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರಿ..
  ನನಗೂ ಅನೇಕ ನೆನಪುಗಳು ಹಾದು ಹೋದವು..
  ನಿಮ್ಮ ತಣ್ಣನೆಯ ಕುತೂಹಲ ದೊಡ್ಡ ಹೈಲೈಟ್..

  ನೂತನ ದೋಶೆಟ್ಟಿ

Leave a Reply

%d bloggers like this: