fbpx

ಆತ ಕೇವಲ ಕಟಿಂಗ್ ಮಾತ್ರ ಮಾಡಲಿಲ್ಲ..

ಅಮೃತವಾಹಿನಿಯೊಂದು..

ಡಾ. ಬಿ.ಆರ್. ಸತ್ಯನಾರಾಯಣ

ಕೆಲವು ದಿನಗಳಿಂದ ನಮ್ಮ ತಂದೆಗೆ ಅನಾರೋಗ್ಯವಿದ್ದುದರಿಂದ ಶೇವಿಂಗಿಗೆ ಕರೆದುಕೊಂಡು ಹೋಗಲಾಗಿರಲಿಲ್ಲ. ಶನಿವಾರ ಸಂಜೆ ಮಳೆ ಗಾಳಿಯ ಭಯವಿದ್ದುದರಿಂದ ಮಧ್ಯಾಹ್ನವೇ ಕರೆದುಕೊಂಡು ಹೋಗಲು ನಿರ್ಧರಿಸಿದ್ದೆ.

ನನಗೆ ಪರಿಚಯವರುವ ಶಾಪಿನ ಮಾಲೀಕ ಮಧ್ಯಾಹ್ನ ಅಂಗಡಿಯಲ್ಲಿ ಇರುತ್ತಿರಲಿಲ್ಲ. ಆತನ ಸಹಾಯಕರಿರುತ್ತಾರೆ. ಒಮ್ಮೆ ರಷ್ ನೋಡಿಕೊಂಡು ಮೊದಲೇ ಹೇಳಿ ಬರಬೇಕೆಂದು ಹೋದೆ. ಅಂಗಡಿ ಖಾಲಿ ಇತ್ತು. ಹಳಬ ಸಹಾಯಕ ಇರಲಿಲ್ಲ. 18-19 ವಯಸ್ಸಿನ ಇಬ್ಬರು ಯುವಕರು ಫೋನಿನಲ್ಲಿ ಮುಳುಗಿ ಹೋಗಿದ್ದರು. ಇಬ್ಬರದೂ ಚಿತ್ರ ವಿಚಿತ್ರವಾದ ಕೇಶ ಮತ್ತು ಗಡ್ದ ಶೈಲಿ. ಜೊತೆಗೆ ಕೂದಲಿಗೆ ಅಲ್ಲಲ್ಲಿ ಚಿನ್ನದ ಹಾಗೂ ನೀಲಿಯ ಬಣ್ಣ ಬಳೆದುಕೊಂಡಿದ್ದರು! ಆಗಲೋ ಈಗಲೋ ಬಿದ್ದು ಹೋಗುವ ಜೀನ್ಸ್.

ಇವರು ವಯಸ್ಸಾದವರ ಜೊತೆ ಹೇಗೆ ನಡೆದುಕೊಳ್ಳುತ್ತಾರೊ ಎನ್ನಿಸಿದರೂ, ವಿಷಯ ತಿಳಿಸಿದೆ. ‘ಖಾಲಿಯಿದೆ ಈಗಲೇ ಕರೆದುಕೊಂಡು ಬನ್ನಿ ಸಾರ್’ ಎಂದರು.

ಕಾರಿನಲ್ಲಿ ತಂದೆಯನ್ನು ಕರೆದುಕೊಂಡು ಅಂಗಡಿಯ ಮುಂದೆ ನಿಲ್ಲಿಸಿ, ಅವರನ್ನು ಇಳಿಸಿಕೊಳ್ಳುತ್ತಿದ್ದೆ. ಅಷ್ಟರಲ್ಲಿ, ಒಳಗಿನಿಂದ ಓಡಿ ಬಂದ ಒಬ್ಬ ಹುಡುಗ, ತಾನೇ ನನ್ನ ತಂದೆಯ ಕೈಹಿಡಿದು ನಡೆಸಿಕೊಂಡು ಹೋಗಿ ಕುರ್ಚಿಯ ಮೇಲೆ ಕೂರಿಸಿದ. ನನ್ನ ಕಡೆ ತಿರುಗಿ ‘ಸರ್ ಕಟಿಂಗ್ ಶೇವಿಂಗ್ ಎರಡೂ ಮಾಡಲೆ’ ಎಂದ. ನನ್ನ ತಂದೆ ‘ಶೇವಿಂಗ್ ಸಾಕು’ ಎಂದರು. ಆತ ಮುಂದುವರೆಸಿದ.

ನಾನು ಅವನ ಕೆಲಸವನ್ನು ಗಮನಿಸುತ್ತಿದ್ದೆ. ಅವನ ಕೆಲಸ ಅತ್ಯಂತ ನಾಜೂಕಿನಿಂದ ಹಾಗೂ ಅಷ್ಟೇ ಶ್ರದ್ಧೆಯಿಂದ ಕೂಡಿತ್ತು. ಆತನ ಮುಖ ಅದಾವುದೋ ನಸುನಗೆಯಿಂದ ಕೂಡಿತ್ತು. ತುಂಬಾ ಎಚ್ಚರಿಕೆಯಿಂದ ಸಂತೋಷದಿಂದ ಕೆಲಸ ಮಾಡುವವನಂತೆ ನನ್ನ ತಂದೆಯ ಗಲ್ಲದ ಮೇಲೆ ಅತ್ಯಂತ ಪ್ರೀತಿಯಿಂದ ಕೈಯಾಡಿಸುತ್ತಿರುವನಂತೆ ಕಂಡ.

ಶೇವಿಂಗ್ ಮುಗಿಸಿದ ನಂತರ ಮೂಗು ಹಾಗೂ ಕಿವಿಯ ಕೂದಲನ್ನೆಲ್ಲಾ ತೆಗೆದು ಒಪ್ಪವಾಗಿಸಿದ. ನಂತರ ಇನ್ನೂ ಮುಂದುವರೆದು ತಲೆಗೂದಲಿನ ತುದಿಯನ್ನೂ ಅಲ್ಲಲ್ಲಿ ಕತ್ತರಿಸಿದ. ‘ಕಟಿಂಗ್ ಬೇಡ ಎಂದರೂ ಮಾಡುತ್ತಿದ್ದಾನಲ್ಲ’ ಅನ್ನಿಸಿತೋ ಏನೋ, ನನಗೆ ಏನೋ ಹೇಳಲು ಪ್ರಯತ್ನಿಸಿ ಸುಮ್ಮನಾದರು. ಅವನು ಕಟಿಂಗ್ ಮಾಡುತ್ತಿಲ್ಲ ಎಂಬುದು ನನಗೆ ಅರಿವಾಗಿತ್ತು. ಬ್ಲೇಡಿನಿಂದ ಕುತ್ತಿಗೆ ಭಾಗ, ಕಿವಿಯ ಹಂಬದಿ ಎಲ್ಲವನ್ನು ನುಣಪಾಗಿಸಿದ. ಹೆಚ್ಚು ಕಡಿಮೆ ಅರ್ಧ ಕಟಿಂಗ್ ಕೆಲಸವನ್ನೇ ಮಾಡಿ ಮುಗಿಸಿದ್ದ.

ನನಗೆ ಆಶ್ಚರ್ಯವಾಗಿತ್ತು. ಕೇವಲ ಶೇವಿಂಗ್ ಮಾಡಿಸುವವರಿಗೆ ಇಷ್ಟೊಂದೆಲ್ಲಾ ಯಾರೂ ಮಾಡುವುದಿಲ್ಲ. ಇಷ್ಟು ಶ್ರದ್ಧೆಯಿಂದ, ಪ್ರೀತಿಯಿಂದ ವಯಸ್ಸಾದವರಿಗೆ ಸ್ವಲ್ಪವೂ ಅನಾನುಕೂಲವಾಗದಂತೆ ಶೇವಿಂಗ್ ಮಾಡಿದ್ದನ್ನು ನಾನು ಅಂದೇ ನೋಡಿದ್ದು! ನಾನು ಐವತ್ತರ ನೋಟು ಕೊಟ್ಟೆ. ಹತ್ತ ರೂಪಾಯಿ ಹಿಂತಿರುಗಿಸಲು ಬಂದಾಗ, ‘ಪರವಾಗಿಲ್ಲ, ಇಟ್ಟುಕೊ’ ಎಂದೆ. ‘ಬೇಡ ಬೇಡ ಸಾರ್’ ಎಂದು ಸ್ವಲ್ಪ ಬಲವಾಗಿಯೇ ಪ್ರತಿರೋಧಿಸಿ ಹಿಂತಿರುಗಿಸಿದ.

ನಾನು ಥ್ಯಾಂಕ್ಸ್ ಹೇಳಿ, ನನ್ನ ತಂದೆಯವರನ್ನು ಕುರ್ಚಿಯಿಂದ ಎಬ್ಬಿಸಿಲು ಹೋದಾಗ, ಸ್ವತಃ ಆತನೇ ಮುಂದೆ ಬಂದು ಕೈಜೋಡಿಸಿದ. ‘ಸರ್, ಗ್ರಾಮದಲ್ಲಿ ನಮ್ಮ ಚಾಚನೂ ಇದ್ದಾನೆ. ಅವನ ನೆನಪಾಯಿತು ಇವರನ್ನು ನೋಡಿ’ ಎಂದ! ನಾನು ‘ಓ, ಹೌದಾ! ಯಾವ ಊರು ನಿಮ್ಮದು?’ ಅಂದೆ. ಉತ್ತರಪ್ರದೇಶದ ಯಾವುದೋ ಊರಿನ ಹೆಸರು ಹೇಳಿದ.

ಮುಂದುವರೆದು, ‘ನಮ್ಮ ಚಾಚನನ್ನೂ ಹೀಗೇ ಕೈಹಿಡಿದು ನಡೆಸಬೇಕು’ ಎಂದು ಹೇಳುತ್ತಲೇ ಕಾರಿನ ಡೋರ್ ತೆಗೆದು ತಂದೆಯನ್ನು ಒಳಗೆ ಕೂರಿಸಲು ಸಹಾಯ ಮಾಡಿದ. ನಾನು ಅವನ ಮುಖವನ್ನು ನೋಡಿದೆ, ಕಣ್ಣಂಚಲ್ಲಿ ನೀರು! ಮುಖ ಅದಾವುದೋ ಅಲೌಕಿಕ ಕಾಂತಿಯಂದ ಕೂಡಿದೆ ಅನ್ನಿಸಿತು.

ನಾನು ಏನಾದಾರು ಮಾತನಾಡಬೇಕು ಎನ್ನಿಸಿ, ‘ನಿನ್ನ ಹೆಸರೇನು?’ ಎಂದು ಕೇಳಿದೆ. ‘ಇಸ್ಮಾಯಿಲ್’ ಅಂದ. ಜೊತೆಗೆ ಆ ಇನ್ನೊಬ್ಬ ಹುಡುಗನೂ ಬಂದಿದ್ದ. ಅವನನ್ನು ಮಾತನಾಡಿಸಬೇಕೆನ್ನಿಸಿ ‘ನಿನ್ನ ಹೆಸರೇನು? ಇಬ್ಬರು ಒಂದೇ ಊರಿನವರಾ?’ ಎಂದೆ. ಆ ಹುಡುಗ ‘ಹೌದು ಸಾರ್, ಒಂದೇ ಊರಿನವರು. ನನ್ನ ಹೆಸರು ರಾಮಸಿಂಗ್’ ಎಂದ. ನಾನು ಮತ್ತೊಮ್ಮೆ ಥ್ಯಾಂಕ್ಸ್ ಹೇಳಿ ಹೊರಡಲನುವಾದೆ. ಆಗ ಇಸ್ಮಾಯಿಲ್, ‘ಸರ್ ನಮ್ಮ ಮಾಲೀಕನಿಗೆ ಒಂದು ಮಾತು ಹೇಳಿ. ನಿಮ್ಮ ಮನೆಗೇ ಬಂದು ತಾತನಿಗೆ ಶೇವಿಂಗ್ ಕಟಿಂಗ್ ಮಾಡಿ ಬರುತ್ತೇನೆ’ ಎಂದ. ನಾನು ಆಗಲಿ ಎಂದು ಹೊರಟೆ.

ಮನಸ್ಸು ನೂರಾರು ಭಾವಗಳಿಂದ ಉಕ್ಕೇರಿ ಬರುತ್ತಿದ್ದ ಕಡಲಾಗಿತ್ತು. ‘ಒಳ್ಳೆಯತನ ಎಂಬುದು ಮನುಷ್ಯನ ಮೂಲ ಹಾಗೂ ಸಹಜ ಗುಣ’ ಅನ್ನಿಸಿ ಆರಾಮವೆನ್ನಿಸಿತು. ‘ಅಮೃತವಾಹಿನಿಯೊಂದು ಹರಿಯುತಲಿದೆ ಮಾನವನೆದೆಯಿಂದಲೆದೆಗೆ’ ಎಂಬ ಕನ್ನಡ ಕವಿನುಡಿ ಮನಸ್ಸಿನಲ್ಲಿ ಅನುರಣಿಸತೊಗಿತು.

4 Responses

 1. Anasuya M R says:

  ಅಂತಕರಣ ತುಂಬಿ ಬಂತು

 2. Natesha Babu says:

  ‘ಒಳ್ಳೆಯತನ ಎಂಬುದು ಮನುಷ್ಯನ ಮೂಲ ಹಾಗೂ ಸಹಜ ಗುಣ’

 3. Sarojini Padasalgi says:

  ಅದೆಷ್ಟು ಅಂತ:ಕರುಣೆಯ ಆಳವಾದ ಸೆಲೆ ಆ ಹುಡುಗ ನಲ್ಲಿ??ಇಂತಹ ಜನವೂ ಇದ್ದಾರಲ್ಲಾ ಅಂತ ಧನ್ಯತಾ ಭಾವ ಮೂಡಿತು.
  ಸರೋಜಿನಿ ಪಡಸಲಗಿ

 4. Anagha LH says:

  Bhaavapoorna!!!!

Leave a Reply

%d bloggers like this: