fbpx

ಅಮ್ಮ ಏಕೋ ಬಹಳ ನೆನಪಾಗ್ತಾಳಲ್ಲಾ..

ನಾ ದಿವಾಕರ

ಜೂನ್ 5 1990 ನನ್ನ ಅಮ್ಮ ತೀರಿಕೊಂಡ ದಿನ

ಅವಳ ನೆನಪಿನಲ್ಲಿ ಈ ಅಕ್ಷರದ ನಮನ

ಅಮ್ಮ ನೆನಪಾಗ್ತಾಳೆ ಎನ್ನುವುದು ಅವಾಸ್ತವಿಕ ಎನಿಸುತ್ತದೆ. ಆದರೂ ನೆನಪಾಗ್ತಾಳೆ. ಏಕೆಂದರೆ ನಿತ್ಯ ಮನದಾಳದಲ್ಲಿ ಅವಳ ಕರೆ ಮಾರ್ದನಿಸುತ್ತಲೇ ಇದ್ದರೂ ಅಮ್ಮ ಕೆಲವೊಮ್ಮೆ ಸ್ಮೃತಿಯಿಂದ ಮರೆಯಾಗುತ್ತಿರುತ್ತಾಳೆ.

ಕೆಲಸದ ಒತ್ತಡಗಳ ನಡುವೆ, ಬರವಣಿಗೆಯ ನಡುವೆ, ಹರುಷದ ಪುಳಕದ ನಡುವೆ ಕ್ಷಣ ಕಾಲ ಮರೆಯಾಗುತ್ತಿರುತ್ತಾಳೆ. ಆದರೆ ಒಂದು ಸಣ್ಣ ನೋವು ಅವಳನ್ನು ಥಟ್ಟನೆ ಎದುರು ನಿಲ್ಲಿಸಿಬಿಡುತ್ತದೆ. 28 ವರ್ಷಗಳೇ ಕಳೆದುಹೋಗಿವೆ. ಅಮ್ಮ ದೈಹಿಕವಾಗಿ ಲೌಕಿಕ ಜಗತ್ತನ್ನು ತೊರೆದು. ನಂತರ ಎಷ್ಟೊಂದು ಸಾವುಗಳನ್ನು ಕಂಡಿಲ್ಲ. ಎಷ್ಟೊಂದು ನೋವು ಉಂಡಿಲ್ಲ. ಆದರೆ ಅವಳು ಮರೆಯಾದ ಆ ಕ್ಷಣದಲ್ಲಿ ಅನುಭವಿಸಿದ ನೋವು ವರ್ಣಿಸಲಸಾಧ್ಯ.

ಬ್ಯಾಂಕ್ ನೌಕರಿ ದೊರೆತ ಕ್ಷಣದಲ್ಲಿ ಭಾವಿಸಿದ್ದಾದರೂ ಏನು. ಅಮ್ಮನನ್ನು ಸುಖವಾಗಿರಿಸಬೇಕು. ಅಮ್ಮನಿಗೆ ತಕ್ಕ ಸೊಸೆ ಮನೆಗೆ ಬರಬೇಕು. ಅವಳಿಗೆ ಯಾವುದೇ ಆರೋಗ್ಯ ಸಮಸ್ಯೆ ಎದುರಾಗಬಾರದು. ಅವಳ ಮನಸ್ಸು ನೋಯಿಸಬಾರದು ಹೀಗೇ ಹತ್ತಾರು ಕನಸುಗಳನ್ನು ಹೊತ್ತ ಮನಸಿಗೆ ಅಮ್ಮ ಒಂದು ಸ್ಪೂರ್ತಿಯಾಗಿದ್ದಳು. ಅಮ್ಮ ಇಂದು ನೀನು ನನ್ನೆದುರು ಇಲ್ಲ ಆದರೂ ನಿನ್ನ ಅನುಮತಿ ಕೋರಿ ಒಂದು ಪ್ರಸಂಗ ನೆನಪಿಸುತ್ತೇನೆ

ಕೈವಾರದಲ್ಲಿ ನಿನ್ನೊಡನೆ ಇದ್ದ ಸಂದರ್ಭ, 1983. ನನಗೆ ಬ್ಯಾಂಕ್ ನೌಕರಿಗೆ ಸಂದರ್ಶನಕ್ಕಾಗಿ ಆದೇಶ ಬಂದಿತ್ತು. ನನ್ನ ಸೋದರನಿಗೂ ಸಹ. ನೌಕರಿ ಸಿಕ್ಕಷ್ಟೇ ಖುಷಿ ಆಗಿತ್ತು. ಬಡತನದಲ್ಲಿ ಮರೀಚಿಕೆಯ ಬೆನ್ನಟ್ಟಿ ಹೋಗುವುದು ಸಹಜವಲ್ಲವೇ ? ಬ್ಯಾಂಕ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದ ವಿಶ್ವಾಸವೂ ಮರೀಚಿಕೆಯ ಬೆನ್ನಟ್ಟಲು ಕಾರಣ.

ಸಂದರ್ಶನಕ್ಕಾಗಿ ಬೆಂಗಳೂರಿಗೆ ಹೋಗಬೇಕು. ಕೈಯ್ಯಲ್ಲಿ ಕಿಲುಬು ಕಾಸೂ ಇಲ್ಲ. ಸಂದರ್ಶನಕ್ಕೆ ಹೋಗಲು ಒಳ್ಳೆಯ ಉಡುಪು ಬೇಕು. ಅದೂ ಲಭ್ಯವಿರಲಿಲ್ಲ. ನಿನ್ನ ಬಳಿ ಹೇಗೆ ಹೇಳುವುದು ಎನ್ನುವ ಚಿಂತೆ ಬೇರೆ. ಬೆಂಗಳೂರಿಗೆ ಎರಡು ಮೂರು ದಿನ ಹೊರಟರೆ ಮನೆಯ ಖರ್ಚಿಗೆ ನಿನ್ನ ಕೈಯ್ಯಲ್ಲಿ ಸ್ಪಲ್ಪವಾದರೂ ಹಣ ಕೊಟ್ಟು ಹೋಗಬೇಕು. ಅದಕ್ಕೂ ಗತಿ ಇಲ್ಲ.

ನಿನಗೆ ಈ ಪರಿಸ್ಥಿತಿ ತಿಳಿದಿರಲಿಲ್ಲ. ಆದರೂ ಆಗಾಗ್ಗೆ ನೀನು “ ನಳಿನಾ (ನನ್ನೊಡನಿದ್ದ ಅಕ್ಕ), ಕರು ಏಕೋ ಸಪ್ಪಗಿದೆ ಯಾಕಂತ ಕೇಳಬಾರ್ದೇ ” ಎನ್ನುತ್ತಿದ್ದೆ. (ಅಮ್ಮ ನನ್ನನ್ನು ಮಗೂ ಅಥವಾ ಕರು ಎಂದೇ ಕರೆಯುತ್ತಿದ್ದರು). ಸಂದರ್ಶನಕ್ಕೆ ಹೋಗಲು ಕಿಸೆಯಲ್ಲಿ ಕಾಸಿಲ್ಲ ಎಂದರೆ ನಿನಗೆ ಆಘಾತವಾಗುತ್ತದೆ ಎಂಬ ಭೀತಿ ಬೇರೆ.

ನನ್ನ ಅದೃಷ್ಟ ನನ್ನೊಡನೆ ರೇಷ್ಮೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ (ನಾನು ದಿನಗೂಲಿ ಲೆಕ್ಕದಲ್ಲಿ ಟೈಪಿಸ್ಟ್ ಕೆಲಸ ಮಾಡುತ್ತಿದ್ದೆ) ಶ್ರೀನಿವಾಸ ಎಂಬ ಸಹೋದ್ಯೋಗಿ ಒಮ್ಮೆ ಮನೆಗೆ ಬಂದ. ಅವನ ಬಳಿ ಪರಿಸ್ಥಿತಿ ಹೇಳಿದೆ. ನನ್ನನ್ನು ಕೂಡಲೇ ಹೊರಗೆ ಕರೆದೊಯ್ದ. ಅಲ್ಲಿಯೇ ಇದ್ದ ಬಟ್ಟೆ ಅಂಗಡಿಯಲ್ಲಿ ಎರಡು ಹೊಸ ಶರ್ಟ್ ಹೊಲಿಸಲು ನೀಡಿದ. ಸಂದರ್ಶನಕ್ಕೆ ಹೋಗಲು ಅವನದೇ ಬೂಟನ್ನೂ ನೀಡಿದ. ಸದ್ಯಕ್ಕೆ ಪ್ಯಾಂಟ್ ನನ್ನ ಬಳಿ ಇತ್ತು. ಬೆಂಗಳೂರಿಗೆ ತಲುಪುವಷ್ಟು ದುಡ್ಡನ್ನೂ ನೀಡಿದ. ಇಷ್ಟರ ಮೇಲೆ ಅವನ ಬಳಿ ಏನು ಕೇಳಲಿ ಎಂದು ಸುಮ್ಮನಾದೆ. ಮನೆ ಖರ್ಚಿಗೆ ದುಡ್ಡು ಕೊಡು ಎಂದು ಕೇಳಲಾದೀತೇ ?

ಅಮ್ಮನಿಗೆ ಇದಾವುದೂ ತಿಳಿಯದು. ಮನೆಗೆ ಬಂದ ಶ್ರೀನಿವಾಸ್, ನೋಡೀಮ್ಮ ದಿವಾಕರ ಸಂದರ್ಶನ ಮುಗಿಸಿ ಅಲ್ಲಿಯೇ ಇದ್ದು ನೌಕರಿ ಗಳಿಸಲು ಪ್ರಯತ್ನ ಪಡುತ್ತಾನೆ. ಅಲ್ಲಿಯವರೆಗೂ ನಾನು ನಿಮ್ಮ ಖರ್ಚು ವೆಚ್ಚ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ. ಹಾಗೆಯೇ ನಡೆದುಕೊಂಡ ಆ ಮಹಾನುಭಾವ ಇಂದು ಎಲ್ಲಿದ್ದಾನೋ ತಿಳಿಯದು. ಎಂತಹ ವಿಡಂಬನೆ ಅಲ್ಲವೇ ?
ಖರ್ಚು ವೆಚ್ಚಕ್ಕೇನೋ ಶ್ರೀನಿವಾಸ ನೋಡಿಕೊಳ್ಳುತ್ತಾನೆ, ನನ್ನ ಕೈಯ್ಯಲ್ಲಿ ಸ್ಪಲ್ಪ ಹಣ ಕೊಟ್ಟು ಹೋಗಬಾರದೇ ಎಂದು ನೀನು ಕೇಳಿದಾಗ ನಾನು ಪೆಚ್ಚಾಗಿದ್ದೆ. ಮಾತೇ ಹೊರಡಲಿಲ್ಲ.

ಹೋಗಿಬರುತ್ತೇನೆ ಆಶೀರ್ವಾದ ಮಾಡು ಎಂದು ಕಾಲಿಗೆ ನಮಸ್ಕರಿಸಿದೆ. ನಿನಗೆ ಕೋಪ ಬಂದಿತ್ತು. ನಿನ್ನ ಸ್ವಾಭಿಮಾನಕ್ಕೆ ಕೊಡಲಿ ಪೆಟ್ಟು ಬೀಳುವ ರೀತಿಯ ಸನ್ನಿವೇಶ ಏರ್ಪಟ್ಟಿತ್ತು. ಆದರೆ ನಾನು ಅಸಹಾಯಕನಾಗಿದ್ದೆ. ನಾನು ಹೊರಡುವಾಗ ನಿನ್ನ ಕೋಪ ಆರಿರಲಿಲ್ಲ. ಹಾಳಾಗಿ ಹೋಗು ಎಂದು ಬೈದು ಕಳುಹಿಸಿದ್ದೆ. ಅದನ್ನೇ ಆಶೀರ್ವಾದ ಎಂದೆಣಿಸಿ ಸಂದರ್ಶನ ಮುಗಿಸಿದೆ ಮೂರು ತಿಂಗಳ ನಂತರ ನೌಕರಿಯನ್ನೂ ಗಳಿಸಿದ್ದೆ. ಸೋದರನೂ ಆಯ್ಕೆಯಾಗಿದ್ದ. ಆಗಲೇ ನನಗೆ ಅರಿವಾದದ್ದು ಮನಸಿಗೂ ಮಾತಿಗೂ ನಡುವೆ ಇರುವ ಸೂಕ್ಷ್ಮ ವ್ಯತ್ಯಾಸ ಏನೆಂದು. ಆಗಲೇ ನನಗೆ ಅರಿವಾದದ್ದು ನಿನ್ನ ಸ್ವಾಭಿಮಾನಕ್ಕೆ ಪೆಟ್ಟು ಬೀಳಬಾರದು ಎಂದು. ಹಾಗೆಯೇ ನಿನ್ನನ್ನು ನೋಡಿಕೊಂಡಿದ್ದೆ. ಆದರೆ ನಿನಗೇನು ಅವಸರವಿತ್ತೋ ಆರೇಳು ವರ್ಷಕ್ಕೇ ನನ್ನೊಡಗಿನ ಬಾಳಿಗೆ ಕೊನೆ ಹಾಡಿದ್ದೆ.

ಈ ಪ್ರಸಂಗ ಏಕೆ ನೆನಪಾಯಿತು ಗೊತ್ತೇನಮ್ಮಾ? ನಿನ್ನ ಆಕ್ರೋಶದ ಮಾತುಗಳು, ನಿನ್ನ ಬೈಗುಳ, ನಿನ್ನ ಹತಾಶೆ ಇವೆಲ್ಲಕ್ಕೂ ಕಾರಣ ನೀನು ಮಕ್ಕಳನ್ನು ಅಪಾರವಾಗಿ ಪ್ರೀತಿಸುತ್ತಿದ್ದುದೇ ಅಲ್ಲವೇ? ಹಾಳಾಗಿ ಹೋಗು ಎಂದು ಸಂದರ್ಶನಕ್ಕೆ ಹೋಗುವ ನನ್ನನ್ನು ಬೈದಿದ್ದು ನನ್ನ ಮೇಲಿನ ಕೋಪದಿಂದಲ್ಲ, ನೀನಿದ್ದ ಪರಿಸ್ಥಿತಿ ಹಾಗೆ ಮಾಡಿತ್ತು. ನಿನ್ನ ಜೀವನದಲ್ಲಿ ಇಂತಹ ಪರಿಸ್ಥಿತಿಯನ್ನು ಎಷ್ಟು ಸಲ ಕಂಡಿದ್ದೆ ಅಲ್ಲವೇ?

ಪತಿಯ ಶವಸಂಸ್ಕಾರದ ಮರುದಿನ ಆರು ಮಕ್ಕಳಿದ್ದ ಮನೆಯಲ್ಲಿ ಅನ್ನದ ಕೂಳೂ ಇಲ್ಲದ ಪರಿಸ್ಥಿತಿಯನ್ನು ದಿಟ್ಟವಾಗಿ ಎದುರಿಸಿದ ನಿನ್ನ ಆತ್ಮಸ್ಥೈರ್ಯದ ಮುಂದೆ ನಾನು ಏನು ಹೇಳಲು ಸಾಧ್ಯ? ಅಂತಹ ಪರಿಸ್ಥಿತಿಯಲ್ಲೂ ಧೃತಿಗೆಡದೆ ಉಪವಾಸವನ್ನೇ ಸ್ವೀಕರಿಸಿ ಮಕ್ಕಳನ್ನೂ ಸಂತೈಸಿದ ನಿನ್ನಂತಹ ಸ್ವಾಭಿಮಾನಿ ಹೃದಯಕ್ಕೆ ಅನ್ಯರ ಆಶ್ರಯ ಅಪ್ಯಾಯಮಾನ ಎನಿಸುವುದಿಲ್ಲ ಅಲ್ಲವೇ ?

ಈ ವಾಸ್ತವ ನನಗೆ ಅರಿವಾದದ್ದು ಹಲವು ವರ್ಷಗಳ ನಂತರ. ನಿನ್ನ ಆಂತರ್ಯದ ಆಶೀರ್ವಾದ ನನ್ನ ಮೇಲಿದ್ದುದನ್ನು ಅಲ್ಲಗಳೆಯಲಾದೀತೇ ಅಮ್ಮ.

ನಿನ್ನ ನೆನಪಲ್ಲಿ ಪಿಂಡ ಇಟ್ಟು, ಕಾಗೆಗಾಗಿ ಕಾಯುತ್ತಾ ಮೌಢ್ಯದ ಛಾಯೆಯಲ್ಲಿ ಬಾಳಲಿಚ್ಚಿಸದ ನಾನು ನಿನ್ನ ಅಗಲಿಕೆಯ ದಿನದಂದು ಹೀಗೆಯೇ ಸ್ಮರಿಸುತ್ತೇನೆ, ಮನದಲ್ಲೇ ನಮಿಸುತ್ತಾ, ನೆನೆಯುತ್ತಾ, ಸ್ಮರಿಸುತ್ತಾ. ಇನ್ನೂ ಏನೋ ಹೇಳಬೇಕೆನಿಸುತ್ತದೆ. ಕಂಬನಿ ಅಡ್ಡಿಯಾಗುತ್ತಿದೆ. ಅಕ್ಷರಗಳು ಕಾಣುತ್ತಿಲ್ಲ ಕ್ಷಮಿಸಮ್ಮಾ !

6 Responses

 1. Tumba chennagide

 2. LAKSHMANA RAO says:

  Dinakar – nimmannoo nimma ammanannu bahala hattiradinida nodiddene – avara nenapu nangoo ide – [DVG]
  nimma ammana nenapu nanaagoo kaduthade. dhanayavaadagalu

 3. LAKSHMANA RAO says:

  NIMMA AMMANA NENAPU NANAGOOIDE DIVAKAR – VANDANEGALU

  • I am really extremely sorry sir. My memory power is really good but i am not recalling you. pls do not feel bad but pardon me and make me recall you. DVG – does it mean Davanagere ? sorry again

 4. I am extremely sorry sir I am not able to recall you- does DVG mean Davanagere ? Even then i am not getting you. please pardon me. my memory power is failing for the first time i suppose. pls make me recall

 5. ನೀನು ಗುರುರಾಜನ ತಮ್ಮ ಲಕ್ಷ್ಮಣ ಅಲ್ಲವೇ. ಲಕ್ಷ್ಮಣರಾವ್ ಹೆಸರು ನೋಡಿ ಕೊಂಚ ಕಾಲ ನೆನಪಾಗಲಿಲ್ಲ. ಕ್ಷಮಿಸು. ನನ್ನಮ್ಮನಿಗೆ ನಿನ್ನನ್ನು ಕಂಡರೆ ಬಹಳ ಇಷ್ಟ. ನಿನ್ನ ಪ್ರತಿಕ್ರಿಯೆಗೆ ಧನ್ಯವಾದ. ಫೋನ್ ಮಾಡು 9448685755

Leave a Reply

%d bloggers like this: