fbpx

ಆ ತಾಯಿ..

ಚಂದ್ರಶೇಖರ ಮಂಡೆಕೋಲು 

ಕಳೆದ ಶನಿವಾರ ಬೆಳಗ್ಗೆ ಬೆಂಗಳೂರು ಹೊರವಲಯ ದೊಡ್ಡತೋಗೂರಿನ ಸೆಲಬ್ರಿಟಿ ಲೇಔಟ್​ನ ನಿರ್ಮಾಣ ಹಂತದ ಕಟ್ಟಡದ ಬಳಿ ಪೊದೆಯೊಂದರಲ್ಲಿ ಪುಟ್ಟ ಮಗು ಎಡೆಬಿಡದೆ ಅಳುವ ಸದ್ದು ಕೇಳಿಸಿತ್ತು…

ಅದೇ ಹಾದಿಯಲ್ಲಿ ಚಿಂದಿ ಆಯುತ್ತ ಹೋಗುತ್ತಿದ್ದ ಅನಾಮಿಕನೊಬ್ಬ ಆ ಅಳು ಕೇಳಿ ಮಗುವನ್ನು ಎತ್ತಿಕೊಂಡ… ಸುತ್ತಲಿನ ಜನರಿಗೆ ವಿಷಯ ತಿಳಿಸಿದ… ಯಾರೋ ಪೊಲೀಸ್​ ಕಂಟ್ರೋಲ್​ ರೂಂಗೆ ಫೋನ್​ ಮಾಡಿದ್ರು…

ಅದೇ ಪರಿಸರದಲ್ಲಿದ್ದ ಹೊಯ್ಸಳ ಗಸ್ತು ವಾಹನ ತಕ್ಷಣ ಸ್ಥಳಕ್ಕೆ ಬಂತು… ಹೊಯ್ಸಳದಲ್ಲಿದ್ದವರು ಅಸಿಸ್ಟೆಂಟ್​ ಸಬ್​ ಇನ್ಸ್​ಪೆಕ್ಟರ್​ ನಾಗೇಶ್​ ಆರ್​. ಮತ್ತು ಪೇದೆ ಅರ್ಚನಾ… ಪ್ಲಾಸ್ಟಿಕ್​ ಸುತ್ತಿತ್ತು, ಇನ್ನೂ ಹೊಕ್ಕುಳಬಳ್ಳಿ ಕತ್ತರಿಸಿರಲಿಲ್ಲ.. ಮಗು ಒಂದೇ ಸಮನೆ ಅಳುತ್ತಿತ್ತು…

‘ಹೊಯ್ಸಳ’ ನೇರ ಎಲೆಕ್ಟ್ರಾನಿಕ್​ ಸಿಟಿ ಪೊಲೀಸ್​ ಠಾಣೆಯತ್ತ ತೆರಳಿತು.. ‘ಹೊಯ್ಸಳ’ದಲ್ಲಿ ಪುಟ್ಟ ಮಗುವನ್ನು ಮಡಿಲಲ್ಲಿಟ್ಟುಕೊಂಡು ನಿಲ್ಲದ ಅಳುವಿಗೆ ಚಡಪಡಿಸುತ್ತ ಕುಳಿತಿದ್ದರು ಅರ್ಚನಾ…

ಠಾಣೆ ಬರುತ್ತಿದ್ದಂತೆ ನೇರ ಪ್ರತ್ಯೇಕ ಕೋಣೆಗೆ ಮಗುವನ್ನೆತ್ತಿಕೊಂಡು ಓಡಿದರು ಅರ್ಚನಾ… ಠಾಣೆಯಲ್ಲಿದ್ದವರಿಗೆಲ್ಲ ದಿಗಿಲು.. ಒಳಗೆ ಹೋದವರೇ ಅರ್ಚನಾ, ಅಳುತ್ತಿದ್ದ ಮಗುವಿಗೆ ತನ್ನ ಎದೆ ಹಾಲು ಊಡಿಸಿದರು…

ಎಷ್ಟು ಹೊತ್ತಾಗಿತ್ತೋ ಅಮ್ಮನ ಹಾಲು ಕುಡಿಯದೆ? ಯಾತಕ್ಕಾಗಿ ಆ ಅಮ್ಮ ದೂರ ಮಾಡಿದ್ದಳೋ? ಆದರೆ ಎದೆಹಾಲು ಕುಡಿಯುತ್ತಿದ್ದಂತೆ ಅಳು ನಿಂತಿತ್ತು… 2-3 ನಿಮಿಷ ಹಾಲು ಕುಡಿಸಿದ ಬಳಿಕ ಮಗು ಜೋರಾಗಿ ನಕ್ಕಿತ್ತು… ಯಾರೋ ಅದು ದೇವರ ನಗು ಎಂದರು…

ನಿತ್ಯ ಯಾವುದಾವುದೋ ಕೇಸ್​ಗಳಲ್ಲಿ ಬಿಗುವಿನಿಂದಿರುವ ಪೊಲೀಸ್​ ಠಾಣೆಯಲ್ಲಿ ಪುಟ್ಟ ಮಗುವಿನ ನಗು… ಜನ ಸೇರಿದರು… ಎಲ್ಲರೂ ಅರ್ಚನಾರ ಹೃದಯವಂತಿಕೆಯನ್ನು ಹೊಗಳಿದರು.. ಆಮೇಲೆ ನೋಡಿದರೆ ಅವರಿಗೂ 4 ತಿಂಗಳ ಮಗುವಿತ್ತು… ಕೇವಲ ವಾರದ ಹಿಂದಷ್ಟೇ ಹೆರಿಗೆ ರಜೆ ಮುಗಿಸಿ ಠಾಣೆಗೆ ಮರಳಿದ್ದರು!

ಇದ್ದಕ್ಕಿದ್ದಂತೆ ಪೊಲೀಸ್​ ಠಾಣೆಯಲ್ಲಿ ಸಂಭ್ರಮದ ವಾತಾವರಣ.. ಪೊಲೀಸರು, ಸ್ಥಳೀಯರು ಬಂದು ಮಗುವನ್ನು ನೋಡಿದರು, ಮಗುವಿನದ್ದೇ ಭಾಷೆಯಲ್ಲಿ ಮಾತನಾಡಿಸಿದರು.. ಖುದ್ದು ಪೊಲೀಸರೇ ಬಟ್ಟೆ ಅಂಗಡಿಗೆ ಹೋಗಿ ಒಂದು ಜೊತೆ ಚಂದದ ಬಟ್ಟೆ ತಂದು ತೊಡಿಸಿದರು…

ಜೊತೆಗೆ ಜನರೇ ಮಗುವಿಗೊಂದು ಹೆಸರಿಡೋಣ ಎಂದರು.. ಗುಂಪಿನಲ್ಲಿ ಯಾರೋ ಒಬ್ಬ ಕುಮಾರಸ್ವಾಮಿ ಎಂದಿಡೋಣ ಎಂದ.. ಹೇಗೂ ಈಗ ಆ ಗಂಡು ಮಗು ಸರ್ಕಾರದ ಸುಪರ್ದಿಯಲ್ಲಿದೆ… ಹಾಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯ ಹೆಸರಿಡೋಣ ಎಂದು ಎಲ್ಲರೂ ನಿರ್ಧರಿಸಿದರು…

ಈಗ ಈ ‘ಕುಮಾರಸ್ವಾಮಿ’ ವಿಲ್ಸನ್​ಗಾರ್ಡನ್​ನ ಶಿಶುಮಂದಿರದಲ್ಲಿದ್ದಾನೆ… ಒಮ್ಮೊಮ್ಮೆ ಅಳುತ್ತಾ, ಒಮ್ಮೊಮ್ಮೆ ಮೇಲೆ ಫ್ಯಾನ್​ ತಿರುಗುವುದ ಕಂಡು ನಗುತ್ತಾ… ಪುತುಪುತನೆ ಪುಟಾಣಿ ಕೈಕಾಲು ಆಡಿಸುತ್ತಾ…

ಕುಮಾರಸ್ವಾಮಿ ನೂರ್ಕಾಲ ಬಾಳಲಿ…. ಯಾರಿಗ್ಗೊತ್ತು ಮುಂದೊಮ್ಮೆ ಈತನೂ ನಮ್ಮನ್ನು ಆಳುವ ದೊರೆಯಾದಾನು..!!

ಮಗುವನ್ನು ತ್ಯಜಿಸಬೇಕೆಂದು ನಿರ್ಧರಿಸಿದ ಆ ದುರ್ಭರ ಕ್ಷಣ ಯಾವುದೋ? ಆ ತಾಯಿ, ಈ ಮಗು, ಅದಕ್ಕೆ ಹಾಲು ಕೊಟ್ಟ ಅರ್ಚನಾ, ಮಗುವಿಗೆ ಹೊಸ ಬಟ್ಟೆ ಕೊಡಿಸಿದ ಎಎಸ್​ಐ ನಾಗೇಶ್, ಆ ‘ಹೊಯ್ಸಳ’ ವಾಹನ, ಕುಮಾರಸ್ವಾಮಿ ಅಂತ ಹೆಸರಿಟ್ಟ ಆ ಅನಾಮಿಕ, ಮತ್ತು ತಾನೂ ‘ಸಾಂದರ್ಭಿಕ ಶಿಶು’ ಎಂದು ಕರೆಸಿಕೊಂಡ ನಮ್ಮ ಮುಖ್ಯಮಂತ್ರಿ ಕುಮಾರಸ್ವಾಮಿ, ಜೊತೆಗೆ ಕಣ್ಣು ತಂಪು ಮಾಡಿಕೊಂಡು ಓದುತ್ತಿರುವ ನೀವು…
‘ಈ ಸಂಬಂಜ ಅನ್ನಾದು ದೊಡ್ದು ಕನಾ…’

2 Responses

  1. LAKSHMANA RAO says:

    SAMBADAHA ANDRE IDENA !!!!

    MAGU NOORKALA BALALI

  2. Lalitha siddabasavayya says:

    ನಿಜ , ಸಂಬಂಧ ದೊಡ್ಡದು. ಯಾವ ಜೀವಕ್ಕೆ ಯಾವ ಜೀವದ ಸಂಬಂಧ ಹೇಗೆ ಕೂಡಿಬರುತ್ತದೆ ,,,, ?ಯಾರಿಗೂ ಗೊತ್ತಿಲ್ಲ. ನಮಗೆ ಆಕಾಶ ಗೊತ್ತು , ನೆಲ ಗೊತ್ತು , ಗಾಳಿ ಗೊತ್ತು , ಮಳೆ ಗೊತ್ತು ,,, ಯಾವಾವ ಕಾಲಕ್ಕೆ ಯಾವಾವುದು ಘಟಿಸುತ್ತೆ ಅಂತ ಹೇಳಬಲ್ಲೆವು. ಆದರೆ ಸಂಬಂಧ ಅಂಬುವುದು ಹೇಗೆ ಘಟಿಸುತ್ತೆ ,,, ಅದು ಗುಟ್ಟು. ಅರ್ಚನಾ ಅವರ ಎದೆಹಾಲಿನ ರುಣ ಎರಡು ನಿಮಿಷಕ್ಕಾದರೂ ಈ “ಕುಮಾರ” ಎಂಬುವ ಜೀವಕ್ಕಿತ್ತು.

    ಅರ್ಚನಾ , ನಿಮಗೆ ಎಲ್ಲ ಅಮ್ಮಂದಿರ ಪರವಾಗಿ ಧನ್ಯವಾದಗಳು . ನೀವೀಗ ಅಮ್ಮಂದಿರ ಅಮ್ಮ.

Leave a Reply

%d bloggers like this: