fbpx

ಆರೆಸ್ಸೆಸ್ ಕೇಂದ್ರದಲ್ಲಿ ಪ್ರಣಬ್ ಮುಖರ್ಜಿ ಎಂಬ ಕಾಂಗ್ರೆಸ್ ‌ನಾಯಕ

ಜಿ ಎನ್ ನಾಗರಾಜ್ 

ಪ್ರಣಬ್ ಮುಖರ್ಜಿಯವರಿಗೆ ಆರೆಸ್ಸೆಸ್ ಆಹ್ವಾನ ನೀಡುವಾಗಲೇ  ಅವರು ಏನು ಮಾತಾಡುವರು ಎಂದು ಮಾತ್ರವಲ್ಲ  ಏನು ಮಾತಾನಾಡುವುದಿಲ್ಲವೆಂದು ಚೆನ್ನಾಗಿ ಗೊತ್ತಿದ್ದದ್ದೇ.

ಮೋದಿ ಪ್ರಧಾನಿಯಾದ ಮೊದಲ ಎರಡಕ್ಕೂ ಹೆಚ್ಚು ವರ್ಷ ಅವರು ರಾಷ್ಟ್ರಪತಿಯಾಗಿದ್ದರು. ಆಗ ಮೋದಿ ಸಂಸತ್ತಿನಲ್ಲಿ ತಿರಸ್ಕಾರಕ್ಕೊಳಗಾಗುವ ಭಯದಿಂದ  ಅವರಿಗೆ ಕಳುಹಿಸಿದ ಪ್ರಜಾಪ್ರಭುತ್ವ ವಿರೋಧಿ ಕ್ರಮವಾದ  ಸುಗ್ರೀವಾಜ್ಞೆ,ಗಳಿಗೆ ಚಕಾರವೆತ್ತದೇ  ಸಹಿ ಹಾಕಿದ್ದವರಲ್ಲವೇ ?

ಒಂದಲ್ಲ ಎರಡಲ್ಲ ಇಪ್ಪತ್ತಕ್ಕೂ ಹೆಚ್ಚು ಸುಗ್ರಿವಾಜ್ಞೆಗಳಲ್ಲಿ ರೈತರ ಭೂಮಿ ಸ್ವಾಧೀನಕ್ಕೆ ಅವರದೇ ಯುಪಿಎ ಸರ್ಕಾರ ರೈತ ಚಳುವಳಿಯ ಒತ್ತಡದಲ್ಲಿ ನೀಡಿದ ರಕ್ಷಣೆಯನ್ನು ಕಿತ್ತು ಹಾಕುವ ಸುಗ್ರೀವಾಜ್ಞೆಯೂ ಸೇರಿತ್ತಲ್ಲವೇ. ಅರುಣಾಚಲ ಪ್ರದೇಶದ ಚುನಾಯಿತ ರಾಜ್ಯ ಸರ್ಕಾರವನ್ನು ಕಿತ್ತೆಸೆಯುವ ಆಜ್ಞೆಗೂ ಸಹಿ ಹಾಕಿದವರು. ಅತಿ ಹೆಚ್ಚು ಮರಣದಂಡನೆ ಆಜ್ಞೆಗಳಿಗೆ ಸಹಿ‌ ಹಾಕಿದವರು.

ರಾಷ್ಟ್ರಪತಿ ಭಾಷಣಗಳಲ್ಲಿ ಮೋದಿ ಯಾವುದೆಲ್ಲಾ ಇರಬಾರದೆಂದು ಕಟ್ಟಾಜ್ಞೆ ವಿಧಿಸಿದ್ದರೋ ಅವೆಲ್ಲಾ ಬಿಟ್ಟು ವಿಧೇಯ ರಾಷ್ಟ್ರಪತಿಯಾಗಿ ಭಾಷಣ ಮಾಡುತ್ತಿದ್ದವರಲ್ಲವೇ .

ಯುಪಿಎ ಸರ್ಕಾರದ ಅವಧಿಯಲ್ಲಿ ಅತ್ಯಂತ ಹೆಚ್ಚು ಕಾರ್ಪೊರೇಟ್‌ಗಳಿಗೆ ಕಲ್ಲಿದ್ದಲು ದರ, ಗ್ಯಾಸ್ ದರ ಮೊದಲಾದ ಅನೇಕ ಅನುಕೂಲ ಕಲ್ಪಿಸುವ ಅತಿ ಹೆಚ್ಚು ನಿರ್ಧಾರ ತೆಗೆದುಕೊಂಡು ಅತಿ ಹೆಚ್ಚು ಲಾಭ ಪಡೆದವರೂ ಕೂಡಾ ಪ್ರಣಬ್ ಮುಖರ್ಜಿಯವರೇ ಎಂಬುದನ್ನುಮರೆಯದಿರೋಣ. ಇಂತಹ ಯಾವ ಯಾವ ಕಡತ ಮೋದಿಯ ಕೈಯಲ್ಲಿದೆಯೋ ಬಲ್ಲವರ್ಯಾರು ?

ಹೀಗೆ  ಒಂದು ಕಡೆ ಉಪ ಚುನಾವಣೆಗಳ ಸೋಲಿನ‌ ನಂತರ ಆರೆಸ್ಸೆಸ್‌- ಬಿಜೆಪಿ ಕೂಟಕ್ಕೆ ತಮ್ಮ ಗೆಲುವಿನ‌ ತಂತ್ರವನ್ನು ಬದಲಾಯಿಸಿ ತಾವು ಬಹು ಉದಾರವೆಂದು ತೋರಿಸಿಕೊಳ್ಳುವ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಮತ್ತೊಂದು ಕಡೆ  ಪ್ರಣಬ್ ಎಂಬ ಮಾಜಿ‌ ರಾಜಕಾರಣಿಗೆ ತಾನು ಇನ್ನೂ ಕ್ರಿಯಾಶೀಲ ರಾಜಕಾರಣದಲ್ಲಿರಬೇಕೆಂಬ ಆಸೆ ಪ್ರಬಲವಾಗಿದೆ. ಅವರೇನು ಕೆ.ಆರ್ ನಾರಾಯಣನ್‌ರವರೇ ಗೌರವವಾಗಿ ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ. ಆದ್ದರಿಂದ ಆರೆಸ್ಸೆಸ್‌ ನೀಡಿದ ಆಹ್ವಾನವನ್ನು ತಡ ಮಾಡದೇ ಒಪ್ಪಿಕೊಂಡರು.

ಒಟ್ಟಿನಲ್ಲಿ ಇಬ್ಬರಿಗೂ win win situation.(ಲಾಭ ಮಾಡಿಕೊಳ್ಳುವ ಯೋಚನೆ.)

ಆರೆಸ್ಸೆಸ್‌ ಕೇಂದ್ರ ಕಚೇರಿಗೆ ಹೋದವರು ಆರೆಸ್ಸೆಸ್ ಸ್ಥಾಪಕ, ಭಾರತದಲ್ಲಿ ಯೋಜಿತ ಕೋಮು ದಂಗೆಗಳ ಪ್ರವಾದಿ ಹೆಗ್ಡೆವಾರ್, ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವುದು ವ್ಯರ್ಥವೆಂದು ಯುವಕರಿಗೆ ಉಪದೇಶ ಮಾಡಿದ ಹೆಗ್ಡೇವಾರ್‌ರವರ ಸ್ಮಾರಕಕ್ಕೂ ಭೇಟಿ ಕೊಡಲೇಬೇಕಲ್ಲ. ಭೇಟಿ ಕೊಟ್ಟರು. ಪುಷ್ಪಾಂಜಲಿ ಅರ್ಪಿಸಿದರು.

“ಭಾರತದ ಒಬ್ಬ ಶ್ರೇಷ್ಠ ಪುತ್ರನಿಗೆ ಗೌರವ ಮತ್ತು ನಮನ  ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ” ಎಂದು ಬಹಳ ಗೌರವ ಪೂರ್ವಕವಾಗಿ ಬರೆದರು.

ಈ ಬರಹ ಆರೆಸ್ಸೆಸ್‌ಗೆ ಎಷ್ಟೊಂದು ಸಂತೋಷ ತಂದಿದೆಯೆಂದರೆ ಶತಮಾನಗಳ ಕಾಲ ಆರೆಸ್ಸೆಸ್ ‌ಅದನ್ನು ಉಲ್ಲೇಖಿಸುತ್ತಾ ಇರಬಹುದು. ಅದನ್ನು ಈಗಾಗಲೇ ಅವರ ಪೇಡ್ ಚಾನೆಲ್‌ಗಳು ಬಹು ಉತ್ಸಾಹದಿಂದ ಕೋಟ್ ಮಾಡುತ್ತಿವೆ.

ಅಲ್ಲಿ ಪ್ರಣಬ್ ಭಾಷಣ ಮಾಡುವ ಮುನ್ನ ಆರೆಸ್ಸೆಸ್‌ನ ಮಹಾಮಹಿಮ ಸರಸಂಚಾಲಕ ಭಾಗವತ್‌ರವರಿಗೆ ಇಡೀ ದೇಶ ಅವರ ಭಾಷಣವನ್ನು ಕೇಳುವ ಅವಕಾಶ ದೊರಕಿತು. ಆರೆಸ್ಸೆಸ್ ಎಷ್ಟೊಂದು ದೇಶಪ್ರೇಮಿ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಂಘಟನೆ ಎಂದು ಸಾರಲು ಈ ಟಿಆರ್‌ಪಿ ಅವಕಾಶವನ್ನು ಸದುಪಯೋಗಪಡಿಸಿಕೊಂಡರು. ತಗೋ ಅನೇಕ ಟೀವಿ ಚಾನೆಲ್‌ಗಳಿಗೆ ಹಬ್ಬವೋ ಹಬ್ಬ. ಈ “ಉದಾರವಾದಿ ” ಹೇಳಿಕೆಯನ್ನು ಮತ್ತೆ ಮತ್ತೆ ಪ್ರಸಾರ ಮಾಡುತ್ತಾ , ಅಹಹಾ ಎಂತಹ ಆದರ್ಶದ ಮಾತುಗಳು ಎಂದು ಹೊಗಳುತ್ತಾ ಇದ್ದಾರೆ.

ನಂತರ ಮುಖ್ಯ ಭೋಜನ – ಪ್ರಣಬ್ ಮುಖ್ಯೋಪಾಧ್ಯಾಯರ ಭಾಷಣ. ಭಾರತದ ಚರಿತ್ರೆಯನ್ನು ಸಂಕ್ಷಿಪ್ತವಾಗಿ ವಿವರಿಸಿದ ಪ್ರಣಬ್ , ಅವರು ರಾಷ್ಟ್ರಪತಿಯಾಗಿ ಮಾಡುತ್ತಿದ್ದ ಭಾಷಣಗಳಲ್ಲಿ ಭಾರತದ ಬಹುತ್ವದ ಬಗ್ಗೆ, ಸಂಯೋಜಿತ ಸಂಸ್ಕೃತಿಯ ಬಗ್ಗೆ, ನೂರಾರು ಭಾಷೆಗಳು ಮತ್ತು ಸಾವಿರಾರು ಪ್ರಬೇಧಗಳನ್ನು ಮಾತನಾಡುವ ವೈವಿಧ್ಯಮಯತೆಯ ಬಗ್ಗೆ ಮಾತನಾಡಿದರು ಅಸಹನೆ ಸಲ್ಲ ಎಂದರು. ಇದನ್ನು ದೇಶದ ಹಲವು ಜನರು ಕೇಳಿದ್ದಾರೆ ಎಂಬುದು ಒಳ್ಳೆಯದೇ. ಒಳ್ಳೆಯ ವಿಚಾರಗಳೇ .
ಆದರೆ ಬಹು ಆಸಕ್ತಿಕರ ಸಂಗತಿ ಇರುವುದೇ ಅವರು ಹೇಳದೇ ಬಿಟ್ಟ ವಿಷಯಗಳಲ್ಲಿ. ಈ ಬಗ್ಗೆ ಆರೆಸ್ಸೆಸ್‌ಗೆ ಬಹಳ ಖಾತರಿ ಇತ್ತು.ನಾವು ನಾಚಿ ತಲೆ ತಗ್ಗಿಸಬೇಕಾದ ವಿಷಯಗಳನ್ನು ಅವರು ಪ್ರಸ್ತಾಪ ಮಾಡುವುದಿಲ್ಲ ಎಂದು.

ಆರೆಸ್ಸೆಸ್‌ನಿಂದ  ಗಾಂಧೀಜಿ ಕೊಲೆಯೂ ಸೇರಿದಂತೆ ಭಾರತದ ಚರಿತ್ರೆಯ ರಕ್ತ ಸಿಕ್ತ ಅಧ್ಯಾಯಗಳೊಂದೂ  ಅವರ ಚರಿತ್ರೆಯ ಪಾಠದ ಭಾಗವಾಗಿರಲಿಲ್ಲ. ಆರೆಸ್ಸೆಸ್‌ನ ದ್ವಿರಾಷ್ಟ್ರ ಸಿದ್ಧಾಂತ, ಹಿಂದೂ ರಾಷ್ಟ್ರ ಸ್ಥಾಪನೆಯ ಗುರಿ, ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸದೇ ಇದ್ದುದು ಇವುಗಳು ಅವರ ಭಾಷಣದಲ್ಲಿ ಉಲ್ಲೇಖಗೊಳ್ಳಲಿಲ್ಲ
ಸ್ವಾತಂತ್ರ್ಯ ಸಮಯದ ಕೋಮು‌ದಂಗೆಗಳು,

ನಂತರದ ಗುಜರಾತ್ ಹತ್ಯಾಕಾಂಡ, ಬಾಬರಿ ಮಸೀದಿ ನಾಶ, ಈಗಿನ ಕುಕೃತ್ಯಗಳು-  ಅಂಬೇಡ್ಕರ್ ರಚಿತ ಸಂವಿಧಾನದ ಬಗೆಗೆ ದ್ವೇಷ , ಅದನ್ನು ಬದಲಾಯಿಸುವ ನಿರಂತರ ಪ್ರಯತ್ನ, ಮೀಸಲಾತಿಯ ನಾಶದ ತವಕ, ಮುಸ್ಲಿಂ, ಕ್ರಿಶ್ಚಿಯನ್ ಧಾರ್ಮಿಕರ ಮೇಲೆ ಧಾಳಿಗಳು, ಗೋಮಾಂಸದ ಹತ್ಯೆಗಳು, ದಲಿತರ ಮೇಲಿನ ಧಾಳಿಗಳ ಹೆಚ್ಚಳ, ಮಹಿಳೆಯರ ಮೇಲಿನ   ರೇಪ್‌ಗಳು , ಕನಿಷ್ಠ ಜಮ್ಮುವಿನ‌ ಮುದ್ದು ಹುಡುಗಿಯ ರೇಪ್ ,   ವಿಶ್ವ ವಿದ್ಯಾಲಯಗಳ ಮೇಲಿನ‌ ಧಾಳಿಗಳು, ವೈಚಾರಿಕ ಸ್ವಾತಂತ್ರ್ಯಕ್ಕೆ ಒದಗಿರುವ ಧಕ್ಕೆ  ಪ್ರಜಾಪ್ರಭುತ್ವಕ್ಕೆ ಒದಗಿರುವ ಸಂಕಟ ಇವುಗಳು ಅವರ ಉಪನ್ಯಾಸದ ಪರಿಧಿಯೊಳಗೆ ಬರಲಿಲ್ಲ.

ಇಂತಹ ಕುಕೃತ್ಯಗಳಲ್ಲಿ ತೊಡಗಬಾರದೆಂದು ಎದುರು ಕುಳಿತಿದ್ದ ಇಂತಹ ಸಿದ್ಧಾಂತ ಮತ್ತು ಯೋಜನೆಗಳಲ್ಲಿ ಮೂರು ವರ್ಷ ಕಾಲ ವಿಶೇಷ ತರಬೇತಿ ಪಡೆದ ಆರೆಸ್ಸೆಸ್ “ಪದವೀಧರ” ರಿಗೆ ,  ಅವರ ಮಾತನ್ನು ಟಿವಿಗಳ ಮೂಲಕ ಕೇಳುತ್ತಿದ್ದ ಬಜರಂಗಿ ಮೊದಲಾದ ಸಂಘೀ ಗೂಂಡಾಗಳಿಗೆ   ಉಪದೇಶ ಮಾಡಲಿಲ್ಲ .
ಬದಲಾಗಿ ನೂರು ವರ್ಷಗಳ ಹಿಂದೆ ಅಥವಾ ನೂರು ವರ್ಷಗಳ ನಂತರವೂ ಮಾಡಬಹುದಾದ ಮಡಿ‌ ಮಾಡಿದ ಭಾಷಣವನ್ನು ಮಾಡಿದರು.

ಇದರಿಂದಾಗಿ ಆರೆಸ್ಸೆಸ್- ಬಿಜೆಪಿ ಪೇಡ್ ಟಿವಿ ಚಾನೆಲ್‌ಗಳು ಮತ್ತು ಉದಾರವಾದಿ ಎನಿಸಿಕೊಂಡ ಚಾನೆಲ್‌ಗಳು ಎರಡೂ ಕೊಂಡಾಡುತ್ತಿವೆ. ಆರೆಸ್ಸೆಸ್‌ಗೆ ಅತ್ಯವಶ್ಯವಾದ  acceptability ಸಿಗಲು ಒಂದಿಷ್ಟು ಸಹಾಯವಾಗಿದೆ.    ಪ್ರಣಬ್‌ ಮುಖ್ಯೋಪಾಧ್ಯಾಯರಿಗೆ ರಾಜನೀತಿಜ್ಞ ಬಿರುದೂ ಪ್ರಾಪ್ತವಾಗುತ್ತದೆ.

ಒಟ್ಟಿನಲ್ಲಿ ಇಬ್ಬರೂ ಬಯಸಿದ ಫಲ ಸಿಕ್ಕಿದೆ.  ಮುಂದಿನ ದಿನಗಳಲ್ಲಿ ಮತ್ತಷ್ಟು ‌ಇಂತಹ ಫಲಗಳನ್ನು ಪಡೆದುಕೊಳ್ಳುವ ಸಾಧ್ಯತೆಗಳು ಹೆಚ್ಚುತ್ತವೆ. ಬಿಜೆಪಿಯ ಆಳ್ವಿಕೆಯ ಆಸ್ಥಾನ ವಿದ್ವನ್ಮಣಿಗಳಾಗುವ  ‌ಆಸೆ  ಹೊತ್ತಿರುವ ಹಲವು ಮಧ್ಯಮ ಪಂಥೀಯ ಬುದ್ಧಿಜೀವಿ , ಸಾಹಿತಿಗಳಿಗೆ ಒಳ್ಳೆಯ ” ಮಾದರಿ ” ದೊರೆತಂತಾಗಿದೆ.

ಇದರಿಂದ  ಸಾಮಾನ್ಯ ಜನತೆ ಕಲಿಯಬೇಕಾದ ಪಾಠವೆಂದರೆ ಉನ್ನತ ಸ್ಥಾನದಲ್ಲಿದ್ದವರ, ಇರುವವರ ನಡೆ, ನುಡಿ ನಮಗೆ ಮಾದರಿ ಎಂಬ ಭ್ರಮೆಯನ್ನು ಕೈ ಬಿಡಬೇಕು. ಪ್ರತಿಯೊಬ್ಬರನ್ನೂ , ಪ್ರತಿ ಮಾತನ್ನು ಎಚ್ಚರಿಕೆಯಿಂದ ಪರಿಶೀಲಿಸಿಯೇ ಒಪ್ಪಿಕೊಳ್ಳಬೇಕು .

1 Response

  1. ಸುಬ್ರಹ್ಮಣ್ಯ says:

    “ರಾಷ್ಟ್ರಪತಿ ಭಾಷಣಗಳಲ್ಲಿ ಮೋದಿ ಯಾವುದೆಲ್ಲಾ ಇರಬಾರದೆಂದು ಕಟ್ಟಾಜ್ಞೆ ವಿಧಿಸಿದ್ದರೋ ಅವೆಲ್ಲಾ ಬಿಟ್ಟು ವಿಧೇಯ ರಾಷ್ಟ್ರಪತಿಯಾಗಿ ಭಾಷಣ ಮಾಡುತ್ತಿದ್ದವರಲ್ಲವೇ”
    ಅಣ್ಣೋ, ದೇವ್ರೂ… ರಾಷ್ಟ್ರಪತಿ ಭಾಷಣಗಳನ್ನು ಬರೆದುಕೊಡೋದು ಕೇಂದ್ರಸರ್ಕಾರ. ಇದು ವಾಡಿಕೆ. ರಾಷ್ಟ್ರಪತಿಗಳ ಭಾಷಣದ ಪರಿಕಲ್ಪನೆ ಆರಂಭವಾದಾಗಿನಿಂದಲೂ ಇರುವ ವಾಡಿಕೆ ಇದೆಯೇ. ಹಾಗಯೇ, ರಾಜ್ಯಪಾಲರ ಭಾಷಣವನ್ನು ಬರೆದು ಕೊಡೋದು ರಾಜ್ಯ ಸರ್ಕಾರ. ಕರ್ನಾಟಕದ ಕಾಂಗ್ರೆಸ್ ಸರ್ಕಾರವು ರಾಜ್ಯಪಾಲರಾದ ಶ್ರೀ ವಾಜುಭಾಯಿ ವಾಲಾರಿಂದ ಹೊಗಳಿಸಿಕೊಂಡ ಬಗ್ಗೆ ಮರೆತಿರಾ?

    “ಆರೆಸ್ಸೆಸ್‌ನಿಂದ ಗಾಂಧೀಜಿ ಕೊಲೆಯೂ ಸೇರಿದಂತೆ ಭಾರತದ ಚರಿತ್ರೆಯ ರಕ್ತ ಸಿಕ್ತ ಅಧ್ಯಾಯಗಳೊಂದೂ ಅವರ [ಪ್ರಣಬ್ ಮುಖರ್ಜಿಯವರ] ಚರಿತ್ರೆಯ ಪಾಠದ ಭಾಗವಾಗಿರಲಿಲ್ಲ. ”

    RSSಗೂ, ಗಾಂಧೀಜಿ ಕೊಲೆಗೂ ಯಾವುದೇ ಸಂಬಂಧವಿಲ್ಲವೆಂದು ಸುಪ್ರೀಂ ಕೋರ್ಟ್ ಈ ವಿಚಾರವನ್ನ ಖುಲಾಸೆಗೊಳಿಸಿ ಅರ್ಧ ಶತಮಾನ ಕಳೆದಿದ್ದರೂ ನೀವಿನ್ನೂ “ಹೇಳಿದ್ದೇ ಹೇಳೋ ಕಿಸುಬಾಯಿದಾಸ” ಎಂಬ ಮಾತಿಗೆ ಉದಾಹರಣೆಯಾದಂತಿದ್ದು, ನಿಮ್ಮ ಭ್ರಮಾಲೋಕದಿಂದ ಹೊರಗೇ ಬರಲಾಗಷ್ಟು ಗಟ್ಟಿಯಾಗಿ ನಿಮ್ಮ ಪೂರ್ವಾಗ್ರಹ ನಿಮ್ಮನ್ನು ತಡೆದಂತಿದೆ.

Leave a Reply

%d bloggers like this: