fbpx

ಶವಾಗಾರದಲ್ಲಿನ ಆತ್ಮದ ಜೊತೆ ಪ್ರಣಬ್ ಮಾತುಕತೆ!

ದೇಶದ ಮಟ್ಟಿಗೆ ಈ ವಾರದ ಪ್ರಮುಖ ವಿದ್ಯಮಾನವೆಂದರೆ , ಅದು ಮಾಜಿ ರಾಷ್ಟ್ರಪತಿ, ಕಾಂಗ್ರೆಸ್‍ನ ಕಟ್ಟಾಳು ಪ್ರಣಬ್‍ಮುಖರ್ಜಿ ಅವರು ನಾಗ್ಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿಕ್ಷಾವರ್ಗದ ಸಮಾರೋಪ ಸಮಾರಂಭದ ಅತಿಥಿಯಾಗಿ ಭಾಗವಹಿಸಿದ್ದು.

ಈ ಪ್ರಣಬ್ ದಾ ಅವರು ಆರ್.ಎಸ್.ಎಸ್ ನ ಸಮಾರಂಭದಲ್ಲಿ ಭಾಗವಹಿಸುವ ಸುದ್ದಿ ಹೊರಬೀಳುತ್ತಲೆ ಕಾಂಗ್ರೆಸ್‍ ವಲಯದಲ್ಲಷ್ಟೆ ಅಲ್ಲ, ಪರಿವಾರ ವಿಚಾರಧಾರೆಯ ವಿರೋಧಿಯ ವಲಯಗಳಲ್ಲಿ ವ್ಯಾಪಕ ಟೀಕೆಗಳು ಸುರಿದವು. ಆರ್. ಎಸ್ ಎಸ್ ನ ರಾಷ್ಟ್ರೀಯವಾದವನ್ನು, ಹಿಂದೂ ವಿಚಾರಧಾರೆಯ ಅಸ್ಪಷ್ಟತೆಯನ್ನು ವಿರೋಧಿಸುತ್ತಲೆ ಪ್ರತಿವಿಚಾರಧಾರೆಯ ನೆಲೆಯಲ್ಲಿ ನಿಂತಿದ್ದ ರಾಜಕೀಯ ಪಕ್ಷವೊಂದರ ಶ್ರೇಷ್ಠ ನಾಯಕನಂತಿದ್ದ ಪ್ರಣಬ್‍ ಮುಖರ್ಜಿ ಅವರು ತನ್ನ ಸೈದ್ಧಾಂತಿಕ ವಿಚಾರಧಾರೆಯ ವಿರೋಧಿ ಕಟ್ಟೆಯ ಮೇಲೆ ನಿಂತು ಮಾತನಾಡಬೇಕಾಗಿದ್ದು, ಅವರ ಆತಿಥ್ಯದಲ್ಲಿ ‘ನಮಸ್ತೇ ಸದಾ ವತ್ಸಲೇ ಮಾತೃಭೂಮಿ…..’ ಎಂದು ದನಿಗೂಡಿಸಬೇಕಾದ ಸ್ಥಿತಿ ಬಂದದ್ದು ಕಾಲದ ಮಹಿಮೆ ಎನ್ನಬಹುದು.

ಪ್ರಣಬ್‍ ಮುಖರ್ಜಿ ಅವರು ಆರ್ .ಎಸ್.ಎಸ್ ನ ಸಮಾರಂಭದಲ್ಲಿ ಭಾಗವಹಿಸಿದ್ದ ಬಗ್ಗೆ ಪರ,ವಿರೋಧದ ಅಭಿಪ್ರಾಯಗಳು ಈಗಾಗಲೆ ವ್ಯಕ್ತವಾಗಿವೆ, ಇನ್ನೂ ಚರ್ಚೆ ನಡೆಯುತ್ತಲೆ ಇವೆ.

ಪ್ರಣಬ್‍ ಮುಖರ್ಜಿ ಅವರು ಸೈದ್ಧಾಂತಿಕ ವಿರೋಧಿಯಾಗಿದ್ದರೂ ಅವರನ್ನು ತಮ್ಮ ಸಮಾರಂಭಕ್ಕೆ ಆತಿಥಿಗಳಾಗಿ ಭಾಗವಹಿಸುವಂತೆ ಆಹ್ವಾನವಿತ್ತ ಆರ್.ಎಸ್.ಎಸ್ ನ ನಡೆ ವಿಚಾರವನ್ನು ಮುಖಾಮುಖಿಯಾಗುವುದೋ? ಅಥವಾ ಅಂತಿಮವಾಗಿ ಪ್ರಣಬ್ ಅವರಂತಹ ನಾಯಕರಿಂದ ಸಂಘದ ವಿಚಾರಧಾರೆಯನ್ನು ‘ಯಥಾನ್ಯಾಯ’ (legitimacy) ಗೊಳಿಸುವ ತಂತ್ರವೋ ಗೊತ್ತಿಲ್ಲ.

ಆದರೆ ಪ್ರಣಬ್ ಮಾತ್ರ ತಮ್ಮ ರಾಜಕೀಯ ಸಂಧ್ಯಾಕಾಲದಲ್ಲಿ ವೈರುಧ್ಯದ ತಿರುವಿನಲ್ಲಿ ತಂಗಿ ಹೋದ ಚರಿತ್ರೆಗೆ ಮುನ್ನುಡಿ ಬರೆದಿದ್ದಾರೆ. ‘ಧರ್ಮ, ಸಿದ್ದಾಂತ ಅಥವಾ ಅಸಹಿಷ್ಣುತೆ ದೇಶದ ಅಸ್ತಿತ್ವವನ್ನೆ ದುರ್ಬಲಗೊಳಿಸುತ್ತಿದೆ. ಸಾರ್ವಜನಿಕ ಸಂವಾದದಿಂದ ಎಲ್ಲಾ ರೀತಿಯ ಹಿಂಸೆಯನ್ನು ತೊಡೆದು ಹಾಕಬೇಕು. ಸಹಿಷ್ಣುತೆಯೇ ದೇಶಭಕ್ತಿ. ದೇಶದ ಬಹುತ್ವವನ್ನು ಸಂಭ್ರಮಿಸಬೇಕು. ಎಲ್ಲರನ್ನೂ ಒಳಗೊಂಡದ್ದೇ ರಾಷ್ಟ್ರೀಯತೆ….’ ಎಂದು ಹೇಳುವ ಮೂಲಕ ಪ್ರಣಬ್ ಅವರು ಆರ್. ಎಸ್.ಎಸ್  ಪ್ರಾಚೀನ ತಿಳುವಳಿಕೆಯನ್ನು ತಿವಿದರೆನ್ನುವುದು ನಿಜ.

ಆದರೆ ಈ ಮಾತುಗಳನ್ನು ಸಂಘದ ಕಿವಿಗಳು, ಹೃದಯಗಳು ತಮ್ಮೊಳಗಿಳಿಸಿಕೊಳ್ಳುವಷ್ಟು ಉದಾತ್ತತೆಯ ಪರಿವರ್ತನೆಗೆ ತೆರೆದುಕೊಂಡಿದೆಯಾ? ಎಂಬ ಪ್ರಶ್ನೆ ಎಲ್ಲಾ ಹೊತ್ತಿಗೂ ಕಾಡುತ್ತಿದೆ. ಪ್ರಣಬ್ ತಮ್ಮ ಉದಾತ್ತ ರಾಷ್ಟ್ರೀಯವಾದದ ಭಾಷಣ ಮಾಡುತ್ತಲೆ ಕೇಶವ ಬಲಿರಾಂ ಹೆಡ್ಗೇವಾರ್ ಅವರು ‘ಮಾತೃಭೂಮಿ ಭಾರತದ ಶ್ರೇಷ್ಠ ಮಗ’ ಎಂದು ಕರೆಯುವ ಮೂಲಕ ಎಲ್ಲವೂ ಸಾಂಧರ್ಬಿಕ ಹರಟೆಯ ಮಾತುಗಳಂತೆ ಮುಗಿದು ಹೋಗಿವೆ ಎಂದು ಭಾವಿಸೋಣ.

ಆದರೆ…,
ಪ್ರಣಬ್ ಇಷ್ಟು ಬೇಗ ಚರಿತ್ರೆಯನ್ನು ಮರೆತು ಹೋದದ್ದು ದುರಂತದ ಸಂಗತಿ.

ಪ್ರಣಬ್ ಆರ್.ಎಸ್.ಎಸ್ ಈ ದೇಶದಲ್ಲಿ ನಿಷೇಧಕ್ಕೊಳಗಾದ ಸನ್ನಿವೇಶವನ್ನು ಮೆಲುಕು ಹಾಕಬೇಕಿತ್ತು. ಆರ್.ಎಸ್.ಎಸ್ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆಯಾಗಿ ಉಳಿದಿಲ್ಲ. ದಿಲ್ಲಿಯ ಅಧಿಕಾರ ಗದ್ದುಗೆಯ ಮೇಲೆ ಬಂದು ಕುಳಿತಿದೆ. ಮತೀಯ ರಾಜಕಾರಣವನ್ನು ಕುಯ್ಲು ಮಾಡುತ್ತಲೆ ತನ್ನ ಇಚ್ಚೆಗಳನ್ನು ಪೂರೈಸುವತ್ತ ದಾಪುಗಾಲು ಹಾಕುತ್ತಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ನಡೆದ ಜನಾಂಗೀಯ ದೌರ್ಜನ್ಯ, ಧರ್ಮಾಧಾರಿತ ದ್ವೇಷದ ಹತ್ಯೆಗಳ ಬಗ್ಗೆ ಆರ್.ಎಸ್ ಎಸ್ ಯಾಕೆ ಮಾತನಾಡಲಿಲ್ಲ. ಸಂವಿಧಾನದದ ಶ್ರೇಷ್ಠತೆಯನ್ನು ಒಪ್ಪುವ ಒಂದೇ ಒಂದು ಮಾತು ನಾಗ್ಪುರದ ಶಕ್ತಿಕೇಂದ್ರದಿಂದ ಏಕೆ ಹೊರಬೀಳಲಿಲ್ಲ.? ತನ್ನದೇ ರಾಜಕೀಯ ಕವಲು ಬಿಜೆಪಿಯ ಸಚಿವರು, ಸಂಸದರು ‘ಸಂವಿಧಾನ ಬದಲಾಯಿಸುತ್ತೇನೆ, ಅದಕ್ಕಾಗಿಯೇ ನಾವು ಅಧಿಕಾರಕ್ಕೆ ಬಂದಿದ್ದೇವೆ….’ ಎಂದು ಹೇಳುವಾಗ, ‘ಈ ದೇಶದ ಮುಸ್ಲಿಂರನ್ನು ಪಾಕಿಸ್ತಾನಕ್ಕೆ ಅಟ್ಟುತ್ತೇವೆ ಎಂದು ಘೋಷಣೆಯನ್ನು ಕೂಗುವಾಗ ಆರ್.ಎಸ್ ಎಸ್ ನ ಕಾರ್ಯನೀತಿಯ ಭಾಗವೇ ಎಂಬುದು ಸ್ಪಷ್ಟವಾಗಿತ್ತು. ಘರ್ ವಾಪಸ್ಸಿ ಎಂಬುದು ಏನನ್ನು ಸೂಚಿಸುತ್ತದೆ?

‘ನಾವು ಅಲ್ಪಸಂಖ್ಯಾತರ ಕಲ್ಪನೆಯನ್ನು ಸರ್ವಥಾ ಒಪ್ಪುವುದಿಲ್ಲ, ಅಲ್ಪಸಂಖ್ಯಾತರು ಬಹುಸಂಖ್ಯಾತರ (ಹಿಂದೂಗಳ) ಸಂಸ್ಕೃತಿಯನ್ನು ಒಪ್ಪಿಕೊಳ್ಳಬೇಕು. ಸಂವಿಧಾನವು ಜನರ ಸಂಸ್ಕಾರವನ್ನು ಪ್ರತಿಬಿಂಬಿಸುತ್ತಿಲ್ಲ. ನಾವು ನಮ್ಮದೇ ಆದ ಸಂವಿಧಾನವನ್ನು ರೂಪಿಸಬೇಕಾಗಿದೆ.’ ಆರ್.ಎಸ್ ಎಸ್ ನ ನೂತನ ಸರಸಂಘಚಾಲಕನಾಗಿ ಅಧಿಕಾರ ವಹಿಸಿಕೊಂಡ ಕೆ.ಎಸ್ ಸುದರ್ಶನ್ ಅವರು ಬಿಬಿಸಿಯಲ್ಲಿ ಕರಣ್ ಥಾಪರ್ ಅವರ ‘ಹಾರ್ಡ್ ಟಾಕ್ ಇಂಡಿಯಾ’ ಕಾರ್ಯಕ್ರಮದಲ್ಲಿ ಆಡಿದ ಮಾತುಗಳಿವು (2000 ಆಗಸ್ಟ್ 14) ಇದು ಇಂದು ಜಾರಿಗೆ ತರುವ ನಿಟ್ಟಿನಲ್ಲಿ ಸನ್ನಿವೇಶಗಳನ್ನು ರೂಪುಗೊಳಿಸಲಾಗುತ್ತಿದೆ ಎಂಬುದಲ್ಲಿ ಯಾವುದೇ ಅನುಮಾನ ಉಳಿದಿಲ್ಲ.

ಕಳೆದ ನಾಲ್ಕು ವರ್ಷಗಳಲ್ಲಿ ದೇಶವು ಆರ್ಥಿಕ, ಕೃಷಿ, ಕೈಗಾರಿಕೆ , ನೀರಾವರಿ, ವಿಜ್ಞಾನ, ಶೈಕ್ಷಣಿಕ ಪ್ರಗತಿಯ ಬಗೆಗಿನ ಚರ್ಚೆಗಿಂತ ಧರ್ಮ, ಕೋಮುವಾದ, ಜನಾಂಗೀಯ ದ್ವೇಷದ ಕುರಿತು ಹೆಚ್ಚು ಮಾತುಗಳು ಮತ್ತು ಕೃತಿ-ಕ್ರಿಯೆಗಳು ನಡೆದಿವೆ. ಎಂ.ಎಸ್ ಗೋಲ್ವಾಲ್ಕರ್ ಅವರ ‘ಬಂಚ್ ಆಫ್ ಥಾಟ್ಸ್ ‘ನ ಜನಾಂಗೀಯ ಗರ್ವವನ್ನು ಕಾರ್ಯಾನುಷ್ಠಾನಗೊಳಿಸುವ ಕೆಲಸ ನಡೆದಿದೆ. ಆರ್ .ಎಸ್.ಎಸ್ ತನ್ನ ಸಂವಿಧಾನದಲ್ಲಿ ಹೇಳಿಕೊಂಡಂತೆ (ಪರಿಚ್ಛೇದ 4(ಬಿ)) ಅದು ಪರಿಶುದ್ಧ ಸಾಂಸ್ಕೃತಿಕ ಸಂಘಟನೆಯಾಗಿ ಉಳಿದಿಲ್ಲ.

ರಾಜಕೀಯ ಚಟುವಟಿಕೆಗಳನ್ನು ನಡೆಸಲು ನಿಯಮಗಳನ್ನು ರೂಪಿಸಿಕೊಂಡಿದೆ. ಅದರ ಪರಿಣಾಮವೇ 1951ರಲ್ಲಿ ಜನಸಂಘದ ಮೂಲಕ ರಾಜಕೀಯವಾಗಿಯೂ ನೀತಿ ನಿರೂಪಣೆಗೈಯುತ್ತಿದೆ. ಪರಿಚ್ಛೇದ 18 ಮತ್ತು 19 ರ ಅಡಿಯಲ್ಲೇ ದಿಲ್ಲಿಯ ಗದ್ದುಗೆಯನ್ನು ಈಗಲೂ ನಿರ್ದೇಶಿಸುತ್ತಾ ಬಂದಿದೆ. ಇದಕ್ಕಾಗಿ ಹಿಟ್ಲರ್, ಮುಸಲೋನಿಯ ಮಾದರಿಗಳನ್ನು ಮುಂದಿಟ್ಟುಕೊಳ್ಳಲಾಗುತ್ತಿದೆ. ಆರ್.ಎಸ್ ಎಸ್ ಹೇಳುವ ‘ವಸುದೈವ ಕುಟುಂಬಕಂ’ ಎಂಬುದರ ತಾತ್ಪರ್ಯ ಶ್ರೇಷ್ಠ ಜನಾಂಗದ ಕುಟುಂಬವೇ ಹೊರತು ಈ ದೇಶದ ಬಹುತ್ವವನ್ನೊಳಗೊಂಡ ಜನಸಮುದಾಯವಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ರಾಜಧರ್ಮದ ಪ್ರಶ್ನೆ ಎದುರಾದಾಗ ನಾಗ್ಪುರ ದಿವ್ಯಮೌನದಿಂದ ಧ್ಯಾನಸ್ಥಿತಿಗೆ ತಲುಪಿಬಿಡುತ್ತದೆ.

ಆರ್ ,ಎಸ್ ಎಸ್ ತನ್ನ ಕಾರ್ಯಕ್ರಮಗಳಿಗೆ ತನ್ನ ವಿರೋಧಿ ವಿಚಾರಧಾರೆಯನ್ನು ಹೊಂದಿರುವವರನ್ನು ಆಹ್ವಾನಿಸುವುದೂ ಒಂದು ತಂತ್ರ.

ಫ್ಯಾಸಿಸ್ಟ್ ಸಿದ್ದಾಂತವನ್ನೆ ತನ್ನ ಅಚಲ ಅಜೆಂಡಾವನ್ನಾಗಿಸಿಕೊಂಡಿರುವಾಗ ವಿಚಾರ ಸಂಘರ್ಷವನ್ನು ಎಂದಿಗೂ ಅದು ಎದುರುಗೊಳ್ಳಲು ಇಚ್ಚಿಸದು. ಆದರೆ ಅದು ತನ್ನ ವಿರೋಧಿಗಳನ್ನು ಹೇಗೆ ಸೆಳೆಯಬೇಕು ಎಂಬ ತಂತ್ರವನ್ನು ಅದು ಚನ್ನಾಗಿ ಬಲ್ಲದು. ಆಧುನಿಕ ಭಾರತದಲ್ಲೂ ಕೋಮುವಾದವನ್ನು ‘ಸುಳ್ಳಿನ ಮಾದರಿ’ ವಾದವನ್ನಾಗಿ ಮುಂದುವರೆಸಿರುವ ಆರ್.ಎಸ್ ಎಸ್ ತನ್ನೊಳಗೊಂದು ‘ಸತ್ಯ ಮಾದರಿ’ಯ ಸುಧಾರಣೆಯ ಚಲನಶೀಲತೆಯನ್ನೆ ಎಂದಿಗೂ ಅಳವಡಿಸಿಕೊಳ್ಳುವ ಗೋಜಿಗೆ ಹೋಗದು.

ಗೋವು, ಗಂಜಲ, ಶ್ರೇಷ್ಠ ರಕ್ತ, ಹಿಂದೂ ಜನಾಂಗ, ಮಂದಿರ, ಮನು ಎಂಬ ಒಡಕಿನ ‘ರಾಷ್ಟ್ರೀಯವಾದ’ ವನ್ನು ಮುಂದಿಟ್ಟುಕೊಂಡು ಕೊಳೆತ ತೀರ್ಥವನ್ನು ಪವಿತ್ರವೆಂದು ಇಂದಿನ ಯುವ ಸಮುದಾಯಕ್ಕೆ ಅಫೀಮಿನಂತೆ ಬೊಗಸೆಯಲ್ಲಿ ಕುಡಿಸತೊಡಗಿದೆ.

‘ಭಾರತೀಯರಾರೂ ಆರ್. ಎಸ್.ಎಸ್ ಗೆ ಅಸ್ಪೃಶ್ಯರಲ್ಲ’ ಎಂಬ ಮೋಹನ್‍ಭಾಗವತ್ ಅವರ ಉದಾತ್ತ (?)ಮಾತುಗಳಿಗೆ ಇನ್ನಷ್ಟು ವಿವರ ಬೇಕಿದೆ. ಅದು ತುದಿ ನಾಲಿಗೆಯ ನುಡಿಯೇ ಹೊರತು, ಕರುಳ ಕೋಣೆಯ ಜೀವಧಾತವಿನ ಮಿಸುಕಾಟವೂ ಅಲ್ಲ ಎಂಬುದನ್ನು ಚರಿತ್ರೆ ನಿರೂಪಿಸಿದೆ.

ನಾಗ್ಪುರದ ಫ್ಯಾಸಿಸ್ಟ್ ಮಾತೃಭೂಮಿಯಲ್ಲಿ ನಿಂತು ಪ್ರಣಬ್ ಆಡಿದ ‘ಬಹುತ್ವವೇ ಭಾರತದ ಆತ್ಮ, ಧರ್ಮ, ದ್ವೇಷ, ಅಸಹಿಷ್ಣುತೆಯಿಂದ ರಾಷ್ಟ್ರೀಯತೆಗೆ ಧಕ್ಕೆ ಯಾಗುತ್ತದೆ’ ಎಂಬ ಮಾತುಗಳು ನಿಜಕ್ಕೂ ಆರ್. ಎಸ್ ಎಸ್ ಗೆ ಒಂದು ಪಾಠ. ಆದರೆ ಮತೀಯ ರಾಜಕಾರಣದ ರಾಜಕೀಯ ಸೂತ್ರ ಹಿಡಿದಿರುವ ಆರ್.ಎಸ್.ಎಸ್ ನ ಕಣ್ಣು, ಕಿವಿ ಆತ್ಮ ಶವಾಗಾರದಲ್ಲಿ.

ವಿರೋಧಿ ಮನೋಭೂಮಿಕೆಯಲ್ಲೂ ಉಗ್ರ ಹಿಂದುತ್ವದ ಬೆಳೆ ತೆಗೆಯಲು ಆರ್.ಎಸ್.ಎಸ್ ಯೋಜನೆ ರೂಪಿಸಿಕೊಂಡಿದೆ. ಭಾರತದ ರಾಷ್ಟ್ರೀಯ ಚಳವಳಿಯನ್ನೇ ಅನುಮಾನಿಸಿದವರ ಜೊತೆಗೆ ಸಂವಾದ ಸಾಧ್ಯವೇ ಇಲ್ಲ. ಆದರೂ ದಾ ಅಂತಹ ಹಾದಿ ಹಿಡಿದಿದ್ದಾರೆಂದು ಸಮರ್ಥಕರು ತಮ್ಮ ಸಮಾಧಾನಕ್ಕೆ ಹೇಳಿಕೊಳ್ಳಬಹುದೇ ವಿನಃ ಬೇರೆ ಇನ್ನೇನಾಗದು. ಕ್ಷಮಿಸಿ ಪ್ರಣಬ್ ದಾ, ನಿಮ್ಮ ಮಾತುಗಳು ಕಂಪು ಮತ್ತು ಇಂಪು ಮಾತ್ರ ಕೊಡಬಲ್ಲವು ಅಷ್ಟೇ.

2 Responses

 1. nutana doshetty says:

  ಪ್ರಣಬ್ ಮುಖರ್ಜಿ ಅವರು ಭಾಗವಹಿಸಿದ ಕಾರ್ಯಕ್ರಮದ ಬಗ್ಗೆ ಇಷ್ಟು ಚರ್ಚೆ ಬೇಕೆ? ಅವರು ರಾಷ್ಟ್ರಪತಿಯಾದ ಸಂದರ್ಭದಲ್ಲಿ ಒಂದು ಪಕ್ಷದೊಂದಿಗೆ ಗುರುತಿಸಿಕೊಂಡಿದ್ದರೂ ಆನಂತರ ಪಕ್ಷಾತೀತರಾಗಿಯೇ ಇದ್ದರಲ್ಲವೆ? ಹಿಂದೆಯೂ ಡಿಮೊನಿಟೈಸೇಷನ್ಗೆ ಸಂಬಂಧಿಸಿದ ಒಂದು ಕಾರ್ಯಕ್ರಮದಲ್ಲಿ ಅವರು ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂಬುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.
  ಡಾ. ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಗಳಾಗಿದ್ದಾಗ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಅದು ಪ್ರಶಂಸನೀಯವಾಗಿತ್ತೇ ಹೊರತು ಚರ್ಚಾಸ್ಪದವಾಗಿರಲಿಲ್ಲ.
  ಪ್ರಣಬ್ ಅವರ ಭಾಗವಹಿಸುವಿಕೆಯ ಹಿಂದೆ ಹಿಡನ್ ಅಜೆಂಡಾ ಇರಬಹುದಾದದ್ದನ್ನು ಅಲ್ಲಗಳೆಯಲಾಗುವುದಿಲ್ಲ. ಆದರೆ ನಾವು ಕೆಲವರಿಗೆ ಮಾತ್ರ ಹೆಚ್ಚು ಸಂವೇದನಾಶೀಲರಾಗುತ್ತಿದ್ದೆವೆಯೇ ಎಂದ ಪ್ರಶ್ನೆ ಏಳುತ್ತದೆ.

  ನೂತನ ದೋಶೆಟ್ಟಿ.

  • Ajit says:

   ಈ ಲೇಖನ ಸಕಾಲಿಕವಾಗಿದೆ. ಇಂಥ ಸಂದರ್ಭಗಳಲ್ಲಿ ಕೂಡ ಕೇಳಲೇಬೇಕಾದ ಪ್ರಶ್ನೆಗಳನ್ನು ನಾವು ಕೇಳದೆ ಇದ್ದರೆ ಅದು ಸಂವೇದನಾ ಶೂನ್ಯ ಸ್ಥಿತಿ.

Leave a Reply

%d bloggers like this: