ಅಮ್ಮನಿಲ್ಲದ ನಾನು..

ಅಂದು ಮಧ್ಯಾನ್ಹ ಅಣ್ಣ ಕರೆ ಮಾಡಿ ಹೇಳಿದ.  ‘ಅಮ್ಮ ಕೋಮಾಕ್ಕೆ ಹೋಗಿದ್ದಾರೆ. ಅವರನ್ನು ಆಂಬುಲೆನ್ಸಿನಲ್ಲಿ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗುತ್ತಿದ್ದೇನೆ ‘.  ಅದನ್ನು ಕೇಳಿದ ನನ್ನ ಮನಸ್ಥಿತಿಯೂ ಬಹುತೇಕ ಕೋಮಾದಲ್ಲೇ ಇತ್ತು. ಮನಸ್ಸಿನ ಆ ನಿರ್ವಾತ ಸ್ಥಿತಿಯಲ್ಲಿ ಅಕ್ಷರಗಳು ತಾವೇ ಮೂಡಿದವೊ, ನಾನೇ ಬರೆದೆನೋ ಗೊತ್ತಿಲ್ಲದಷ್ಟು ಖಾಲಿತನ ಆವರಿಸಿದ್ದ ಆ  ಕ್ಷಣ ‘ಅಮ್ಮ’ ಎಂಬ ಎರಡಕ್ಷರದ ಮೋಡಿಯೇ ಅದನ್ನು  ಮಾಡಿಸಿದ್ದಿರಬೇಕು.

ಸಾವೆಂಬ ಶೂನ್ಯ

ಇನ್ನೀಗ ಆಕೆ ಪೂರ ಶಾಂತ

ಕೊರಡಾದ ದೇಹದಲ್ಲಿ ಉಸಿರಾಡುತ್ತಿದೆ ಜೀವ

ಮುಲುಕುತ್ತಿದೆ ಹೋರಾಡುತ್ತ

ಉಳಿಯುವ ಆಸೆಯಿರಲಾರದು

ಎಲ್ಲ ಮುಗಿಸಿ ನಿರುಮ್ಮಳ

 

ಉಸಿರನ್ನು ಕಡ ಕೇಳಿದ್ದಾಳೆ

ಯಾರಿಗಾಗೋ ?

ತನಗಾಗಿ ಇರಲಾರದು

ಬಿಳುಪಿನ ದೇಹ ಹೀಗೆ ಅಚೇತನವಾಗಬಹುದೆ?

ಮಿಂಚು ಕಣ್ಣುಗಳು ನೋಡಲು ನಿರಾಕರಿಸಬಹುದೆ?

ಹೌದು ಎನ್ನುತ್ತಾಳೆ

ಬದುಕದು ದಿಟ್ಟ ಹೋರಾಟ

ದಣಿದರೂ ನಿಂತಿಲ್ಲ

ಈಗ ಸಾವಿನೊಂದಿಗೆ ಸೆಣೆಸು

ಬೇಕಿತ್ತೇ?

ಕರ್ಮ ತೀರಬೇಡವೇ

ಕೇಳಿ ಬಿಡುತ್ತಾಳೆ

 

ಈಗ ಬೇಕೆಂದರೂ ಆಡಲಾರೆ

ನಿನ್ನ ಅಳಿದುಳಿದ ಉಸಿರೀಗ  ಹಂಗಿಸುತ್ತಿದೆ

ಮರುಳೇ, ಬದುಕು ಇಷ್ಟೆಯೇ

ಮಾತಿನ ಪ್ರೇತಗಳು ಕುಣಿಯುತ್ತಿವೆ

ಇನ್ನು ಯಾರೊಂದಿಗೆ ಮಾತು ?

 

ವಾತ್ಸಲ್ಯದ  ಕರೆಯೊಂದು ಹಾಗೆಯೇ ಉಳಿಯಿತು

ಮಮತೆಯ ಕೈತುತ್ತು ನೀಡದೇ ಬಿದ್ದಿತು

ಹಂಗಿನ ಸೌಧವು  ಕುಸಿಯಿತು

ಜಾರಲಾರದ ಕಣ್ಣೀರ ಬಿಕ್ಕಳಿಕೆ

ಎದೆಯನ್ನು ಹೆಪ್ಪಗಟ್ಟಿಸಿತು

 

ನೋವಿಗೆ ನೀನೇ ದಿವ್ಯೌಷಧ

ನೀನೆಂದರೆ ಮನೆ, ಸ್ವರ್ಗ ..ಒಟ್ಟೆಲ್ಲ ಒಳಿತು

ಹೊರಟುಬಿಟ್ಟೆಯಾದರೆ ಎಲ್ಲ ಕಳಚಿಕೊಂಡ ನಿರ್ವಾತ

ಅಮ್ಮನೆಂದರೆ…

ಸೋಲುತ್ತಿದೆ ಶಬ್ದ

ತಡಕಾಡುತ್ತಿದೆ

ಅಂತೂ ಹೊರಡಬೇಕಿದೆ ಅವಳಿಗೆ

ಎಲ್ಲ ಮರೆತು  ವಿರಮಿಸು.

 

ನೇವರಿಸಿಬಿಡು ಕಡೆಯದಾಗಿ

ಮೈದಡವಿಬಿಡು

ಉಸಿರ ಕೊನೆಯವರೆಗೆ ನೆನಪಿರುವಂತೆ

ನೀನಿರದ ಶೂನ್ಯವೂ ಆಗಾಗ ಮಾತಾಡಲಿ

ಕಂದ ಕರೆದಾಗ ಓ ಎನ್ನಲಿ.

ಕೈಗಳು  ಹೇಗೋ  ಬರೆದು ಮುಗಿಸಿದವು. ಅಮ್ಮನನ್ನು ನೋಡಲು ಹೋಗುವ  ದಿನದವರೆಗೂ ಇದನ್ನು ಮತ್ತೆ ಮತ್ತೆ ಓದಿ ನಾನೇ ಸಮಾಧಾನ ಮಾಡಿಕೊಳ್ಳುತ್ತಿದ್ದೆ. ಅವರು  ಕಡ ಕೇಳಿಕೊಂಡ  ಉಸಿರು ಆ ಕ್ಷಣಕ್ಕೆ ಮಾತ್ರ  ಎಂದು ಗಟ್ಟಿಯಾಗಿದ್ದ ನಾನು  ಆ ನಂತರದಲ್ಲಿ ಅದು  ಸುಳ್ಳಾಗುತ್ತದೆ ಎಂದು ಹೇಗೆ ಊಹಿಸಲಿ?  ಅವರು ಆ ಉಸಿರನ್ನು ನನಗಾಗಿಯೇ ಹಿಡಿದಿದ್ದರು ಎಂದು ಗೊತ್ತಾದಾಗ  ನನ್ನ ಈ ಅಕ್ಷರಗಳು ನನ್ನನ್ನು ದಿಗಿಲುಗೊಳಿಸಿಬಿಟ್ಟವು.

ನಾನು ಶಿವಮೊಗ್ಗ ತಲುಪಿದಾಗ ಬೆಳಗಿನ ಐದು ಗಂಟೆ. ರಾತ್ರಿಯಿಡೀ ಸುರಿದ ಮಳೆಯಲ್ಲಿ ಊರಿಗೇ ಊರೇ ಸಾರಿಸಿದಂತಿತ್ತು. ನಾನು ಆಸ್ಪತ್ರೆಯ ಹೊರಗೆ  ಜಿನುಗುವ ಮಳೆಯಲ್ಲಿ, ಕಣ್ಬೆಳಕಲ್ಲಿ ನಿಂತಿದ್ದನ್ನು ಕಂಡ ವಾಚ್ ಮನ್ ಅವತ್ತು ಬೇಗನೇ ಹೊರ ಗೇಟಿನ ಬೀಗ ತೆಗೆದ. ಮೊದಲ ಮಹಡಿಯಲ್ಲಿ ಐಸಿಯುನಲ್ಲಿದ್ದ ಅವರನ್ನು ನೋಡಲು ಅಣ್ಣನೊಂದಿಗೆ ಒಂದೊಂದೇ ಮೆಟ್ಟಿಲನ್ನು ಏರುವಾಗ ನನಗೆ ಆತಂಕವಿದ್ದರೂ ನನ್ನ ದಿಟ್ಟ ತಾಯಿ ಇದನ್ನು ಜಯಿಸಿಬಿಡುತ್ತಾರೆ ಎಂಬ ನಂಬಿಕೆಯಿಂದ  ಮನಸ್ಸಿನಲ್ಲಿ ತುಮುಲವಿರಲಿಲ್ಲ.

ನಿದ್ದೆ ಮಾಡುತ್ತಿರುವಂತೆ ನಿರುಮ್ಮಳವಾಗಿ ಕಾಣುತ್ತಿದ್ದ ಅಚ್ಚ ಬಿಳುಪಿನ ಮುಖದಲ್ಲಿ ಸ್ವಲ್ಪವಾದರೂ ನೋವಾಗಲೀ, ಸಂಕಟದ ಕುರುಹಾಗಲೀ ಇರಲಿಲ್ಲ. ಹಾಗಿರುವಾಗ ನನ್ನ ಸ್ಪರ್ಶದಿಂದ, ಸಾಲವಾಗಿ ತೆಗೆದುಕೊಂಡ ಉಸಿರನ್ನು ಬಡ್ಡಿ ಸಮೇತ ಹಿಂದಿರುಗಿಸಿ ಬಿಡುತ್ತಾರೆ ಎಂಬ ಅದಮ್ಯ ನಂಬಿಕೆಯಿಂದಲೇ ಅವರ ಕೈ ಮುಟ್ಟಿದೆ. ಬೆಚ್ಚಗಿತ್ತು. ಅದು ಅಮ್ಮನ ಮಮತೆಯ ಬೆಚ್ಚನೆಯ ಅನುಭವ! ಮನಸ್ಸು ಇನ್ನಷ್ಟು ನಿರಾಳವಾಯಿತು.

ಒಂದೆರಡು ಬಾರಿ ‘ಅಮ್ಮ’ ಎಂದೂ ಕರೆದೆ. ಕೋಮಾದಲ್ಲಿದ್ದರೇನಂತೆ ? ತಾಯಿಯ ವಾತ್ಸಲ್ಯ ತನ್ನ ಕರುಳಿನ ಕರೆಯನ್ನು ಕೇಳುತ್ತದೆ ; ಅದಕ್ಕೆ ಓ ಗೊಡುತ್ತದೆ ತಾನೇ? ಇನ್ನು ಕೆಲವು ಗಂಟೆಗಳಲ್ಲಿ ಎಚ್ಚರ  ಬಂದು ಬಿಡಬಹುದು ಎಂತಲೂ ಆಸೆಪಟ್ಟೆ. ಮನಸ್ಸಿನಲ್ಲೇ  ನಡೆಯುತ್ತಿದ್ದ ಈ ಮಾತುಕತೆಗೆ ಮೌನದ ಹೊದಿಕೆಯಿತ್ತು.

ಮುಂದಿನ ನಲವತ್ತೈದು ನಿಮಿಷಗಳು ಮಾತ್ರ ಅವರು ತಮ್ಮ ಉಸಿರನ್ನು ದೇವರಿಂದ ಸಾಲ ಕೇಳಿದ್ದರೆಂದು  ತಿಳಿದಾಗ ಮೌನದ ಕಟ್ಟೆಯೊಡೆಯಿತು. ತಮ್ಮ  ಉಸಿರ ಸಾಲವನ್ನು ತೀರಿಸಿದ್ದರಿಂದ ಅವರ ಮುಖದಲ್ಲಿ ಪ್ರಸನ್ನತೆ, ಶಾಂತತೆ  ನೆಲೆಸಿತ್ತು. ಮುಟ್ಟುತ್ತಲೇ ಇದ್ದೆ. ಅದೇ ಬೆಚ್ಚನೆಯ, ಮೆತ್ತನೆಯ  ದೇಹ.  ಉಸಿರಿದ್ದ ಈ ಹಿಂದಿನ  ಕ್ಷಣ ‘ಅಮ್ಮ’ ಆಗಿದ್ದವರು  ಅದರ  ನಂತರದ ಕ್ಷಣದಲ್ಲೇ ‘ದೇಹ’ ವಾಗಿದ್ದರು.  ಅದರಿಂದ ಹೊರಬಂದ ಚೈತನ್ಯ  ನನ್ನಲ್ಲಿ ಸೇರಿಕೊಳ್ಳಲೆಂದೇ ಕಾಯುತ್ತಿದ್ದಿತೆ ?

10 thoughts on “ಅಮ್ಮನಿಲ್ಲದ ನಾನು..”

 1. ಧನ್ಯವಾದಗಳು ಮೋಹನ್..ಭಾವುಕತೆ ಅರ್ಥಹೀನವಾಗುತ್ತಿರುವ ಇಂದಿನ ದಿನಗಳಲ್ಲಿ ಅವಧಿ ಅಂತಹ ಬರಹಗಳನ್ನು ಸದಾ ಪ್ರಕಟಿಸುತ್ತದೆ..

  ಧನ್ಯವಾದಗಳು ಅನಸೂಯಾ ಅವರೆ..

 2. ನಿಮ್ಮ ಲೇಖನ ಓದಿದ ನನಗೆ…
  ಕಾಡಿದೆ ಅಮ್ಮನ ನೆನಪು
  ನೂಲು ಸೀರೆಯ ನೆನಪು
  ಬಾರಿ ಬಾರಿ ಸೆರಗಿಗೆ ಕೈ ಒರೆಸಿದ ನೆನಪು…
  ಅಂದು–
  ಸೋಮ,ಮಂಗಳ
  ಬುಧ,ಗುರು
  ಶುಕ್ರ,ಶನಿ
  ಇಲ್ಲ ಭಾನು…
  ವಾರ ತಿಥಿ
  ದಿನ ದಿನಾಂಕದ ನೆನಪಿಲ್ಲ
  ಆದರೆ —
  ಹಾಸಿಗೆ ಹಿಡಿದ ಅಮ್ಮನ
  ಮಗಳ ಕಾಳಜಿ ಮಾತ್ರ ನೆನಪು

  ಗಡಬಡಿಸಿ ಎದ್ದು
  ಮಗಳ ಕೊನೆಯೊಳಗೊಂದು ಇಣುಕು

  ಹಾಲೂಡಿಸುವ ಮಗಳು
  ಹಸಿ ಬಾಣಂತಿ – ಇರಬೇಕು ಹಸಿವು
  ಮಾಡಿಕೊಡಲೇ ಪಾಯಸ

  ಉತ್ತರಕ್ಕೂ ಕಾಯದ ಅಮ್ಮ
  ಪ್ರತ್ಯಕ್ಷವಾದದ್ದು -ಬಿಸಿಬಿಸಿ ಪಾಯಸದ ಬಟ್ಟಲಿನೊಂದಿಗೆ
  ಮಾಡಿರಬಹುದೇ ಪಾಯಸ
  ಹಾಲು ಸಕ್ಕರೆಯೊಡನೆ ಹೊಯ್ದು
  ಎಲ್ಲಾ ಪ್ರೀತಿ!!

  ಇದಾದ ಕೆಲ ದಿನದಲ್ಲೇ ಇಲ್ಲವಾದ ಅಮ್ಮ

  ಕಾಲ ಸರಿದು ನೆನಪು ಮಸುಕಾದರೂ
  ಆ ಪಾಯಸ ಮತ್ತು ಅಮ್ಮನ ನೆನಪು –ಮಾತ್ರ
  ಯಾವಾಗಲೂ ಸಿಹಿಸಿಹಿ…..

 3. ನಿಮ್ಮ ಲೇಖನ ಓದಿದ ಮೇಲೆ ಕಾಡಿದೆ ಅಮ್ಮನ ನೆನಪು
  ನೂಲು ಸೀರೆಯ ನೆನಪು, ಬಾರಿಬಾರಿ ಸೆರಗಿಗೆ ಕೈ ಒರೆಸಿದ ನೆನಪು..
  ಅಂದು …ಸೋಮ,ಮಂಗಳ,ಬುಧ,ಗುರು
  ಶುಕ್ರ,ಶನಿ ಇಲ್ಲ ಭಾನು?
  ವಾರ
  ತಿಥಿ
  ದಿನ, ದಿನಾಂಕದ ನೆನಪಿಲ್ಲ
  ಆದರೆ….
  ಹಾಸಿಗೆ ಹಿಡಿದ ಅಮ್ಮನ
  ಮಗಳ ಕಾಳಜಿ ಮಾತ್ರ ನೆನಪು…
  ಗಡಬಡಿಸಿ ಎದ್ದು
  ಮಗಳ ಕೋಣೆಯೊಳಗೊಂದು ಇಣುಕು..
  ಹಾಲೂಡಿಸುವ ಮಗಳು..ಹಸಿ ಬಾಣಂತಿ
  ಇರಬೇಕು ಹಸಿವು
  ಮಾಡಿಕೊಡಲೇ ಪಾಯಸ–
  ಉತ್ತರಕ್ಕೂ ಕಾಯದ ಅಮ್ಮ
  ಪ್ರತ್ಯಕ್ಷವಾದದ್ದು
  ಬಿಸಿಬಿಸಿ ಪಾಯಸದ ಬಟ್ಟಲೊಂದಿಗೆ
  ಮಾಡಿರಬಹುದೇ ಪಾಯಸ
  ಹಾಲು ಸಕ್ಕರೆಯೊಡನೆ ಹೊಯ್ದು
  ಎಲ್ಲಾ ಪ್ರೀತಿ…
  ಇದಾದ ಕೆಲದಿನದಲ್ಲೇ ಇಲ್ಲವಾದ ಅಮ್ಮ
  ಕಾಲ ಸರಿದು ನೆನಪು ಮಸುಕಾದರೂ
  ಆ ಪಾಯಸ ಮತ್ತು ಅಮ್ಮನ ನೆನಪು
  ಮಾತ್ರ
  ಯಾವಾಗಲೂ ಸಿಹಿ ಸಿಹಿ…….

 4. ಕುಸುಮಾ ಅವರೇ..ಈ ನಿಮ್ಮ ನೆನಪು ..ಇದನ್ನು ಓದುವ ಎಲ್ಲರದ್ದೂ..

 5. ಕುಸುಮಾ ಅವರೇ..ಅಮ್ಮನಿಗೆ ಅಮ್ಮನೇ ಸಾಟಿ

 6. Devaru vahisida karyagalannu

  Chachu thappade santruptiyinda

  Nirvahisi

  M atte thirugi devarolagondagalu

  Magala baruvikeyanne

  Kaydu kulitanthidda Ammana

  Konekshanagalu

  Kannu kattidantide

  Kanthubi baruttade

  Amma ninillade

  Niyade yella ….

 7. ಮನಸ್ಸು ಆರ್ದ್ರವಾಗುವಂತಿದೆ ನೂತನಾ

Leave a Reply