ಅಲ್ಲಿ ಸಿಕ್ಕಿತು ‘ಚವಿಟ್ಟು ನಾಡಕಂ’

ಒಂದು ಸಂಜೆ. ಮೀಟಿಂಗ್ ಗೆಂದು ಮುನ್ನಾರ್ ಗೆ ಹೋದವ ಸುಸ್ತಾಗಿ ಬಂದು ಕುಳಿತಿದ್ದೆ. ಘಟ್ಟದ ಪ್ರಯಾಣ. ಮೇಲಾಗಿ ಅಲ್ಲಿಯ ರಸ್ತೆಗಳೆಲ್ಲ ತುಂಬಾ ಕಿರಿದಾದವು. ಆದ್ಕೇ ಸ್ವಲ್ಪ ದೂರದ ಪ್ರಯಾಣವೂ ತುಂಬಾ ಹೊತ್ತು ತಗೊಳ್ಳತ್ತೆ. ಉದ್ದಕ್ಕೂ ಪ್ರಯಾಣ ಮಾಡಿ ಸ್ವಲ್ಪ ಹೊತ್ತು ಮಲಗ್ಬೇಕು ಅಂದ್ಕೋತಿರುವಾಗ್ಲೇ ‘ ಉಣ್ಣಿ’ ಯ ಕಾಲ್.

“ಸರ್ ಎಲ್ಲಿದೀರಿ?, ಫ್ರೀ ಇದ್ರೆ ಒಂದು ಸ್ಪೆಷಲ್ ನಾಟ್ಕ ತೋರಿಸ್ತೀನಿ. ತುಂಬಾ ಅಪರೂಪದ್ದು” ಅಂತ ಆಸೆ ತೋರಿಸ್ದ. ನಿಜವಾಗ್ಲೂ ಆ ಹೊತ್ತಿಗೆ ಎಲ್ಲೂ ಹೋಗೋ ಸ್ಥಿತೀಲಿರ್ಲಿಲ್ಲ ನಾನು. ಆದ್ರೆ ಅವನ ‘ ಸ್ಪೆಷಲ್’ ಶಬ್ದ ಮಾತ್ರ ನನ್ನ ಕುತೂಹಲ ಕೆರಳಿಸಿತ್ತು. ಏನೇ ಆಗ್ಲಿ ಒಂದು ಟ್ರೈ ಮಾಡೋದೇ ಅಂದ್ಕೊಂಡು, ‘ ಮನೇ ಕಡೆ ಬಾ ಹೊಗೋಣ’ ಎಂದೆ. ಐದೇ ನಿಮಿಷದಲ್ಲಿ ಆತ ನಮ್ಮನೇಲಿದ್ದ.


ಅವನ ಹೋಟ್ಲಿಗೇ ಹೋಗಿ, ಒಂದು ‘ಕಟ್ಟಂಚಾಯ’ ಕುಡಿದು ಸ್ಕೂಟರ್ ಹತ್ತಿದ್ವಿ.

ನಾವು ಹೋಗ್ಬೇಕಾಗಿದ್ದು ಪೆರಿಯಾರ್ ನದಿಯ ಇನ್ನೊಂದು ಕವಲಿನ ಮೇಲಿರೋ ‘ಗಥ್ರೂಥ್’’ ಎನ್ನೋ ಊರಿಗೆ. ಅಲ್ಲಿಯ ಚರ್ಚ್ ನಲ್ಲೊಂದು ನಾಟ್ಕ. ‘ಯೋನಾ ಪ್ರವಾಚಕನ್’’. ನಾಟ್ಕದ ಹೆಸರು.

ಇದಿಷ್ಟೇ ಆದ್ರೆ ಆ ‘ಸ್ಪೆಷಲ್’ ಇರ್ತಿರ್ಲಿಲ್ಲ.ಈ ನಾಟ್ಕ ಕಟ್ಟಲ್ಪಟ್ಟಿರೋದು ‘ಚವಿಟ್ಟು ನಾಡಕಂ’ ಅನ್ನೋ ವಿಶಿಷ್ಟ ಶೈಲಿಯಲ್ಲಿ. ಅದೇ ಕಾರಣಕ್ಕೇ ಉಣ್ಣಿ ಗಡಿಬಿಡೀಲಿ ಕಾಲ್ ಮಾಡಿದ್ದು. ನನ್ನ ನೋಡೋ ಅವಸರಕ್ಕಿಂತ ಅವನ ತೋರಿಸೋ ಅವಸರವೇ ಜಾಸ್ತಿ ಇತ್ತು.

ದಾರಿಯುದ್ದಕ್ಕೂ ಉಣ್ಣಿಯ ‘ಚವಿಟ್ಟು ನಾಡಕಂ’ ನ ಪುರಾಣ. ಆತನೇನೂ ಸಾಮಾನ್ಯದವನಲ್ಲ. ಹಲವಾರು ವರ್ಷ ನಾಟಕದವರೊಂದಿಗೇ ಕಳೆದ ಆತ ಮಲಯಾಳಂ ರಂಗಭೂಮಿಯ ಬಗ್ಗೆ ಸಾಕಷ್ಟು ತಿಳ್ಕೊಂಡಿದ್ದ. ಅವನ ತಿಳುವಳಿಕೆ ಸುಮ್ಮನೆ ಕಾಟಾಚಾರದ್ದಲ್ಲ. ಪಕ್ಕಾ ಇನ್ಫಾರ್ಮೇಶನ್.

‘ಚವಿಟ್ಟು ನಾಡಕಂ’ ಅನ್ನೋದು ಒಂದು ಲ್ಯಾಟಿನ್ ಕ್ರಿಶ್ಚಿಯನ್ ಕಲಾಪ್ರಕಾರ. ಎರ್ನಾಕುಲಂ ಭಾಗದಲ್ಲಿ ಮಾತ್ರ ಕಾಣೋವಂಥದ್ದು. “ಪೋರ್ಚುಗೀಸರು ಇದನ್ನ ಹೊತ್ತು ತಂದಿದ್ದು” ಅಂತ ಒಂದು ವಾದವಾದ್ರೆ, “ಹಾಗೇನಿಲ್ಲ, ಕೇರಳಕ್ಕೆ ಅವರು ಬರೋ ಮುಂಚೇನೂ ಯುರೋಪಿನ ಜೊತೆ ಸಂಬಂಧ ಇತ್ತು, ಆ ಸಂಬಂಧವೇ ಈ ನಾಟ್ಕಾನ ಇಲ್ಲಿಗೆ ತಂದಿದ್ದು” ಅಂತ ಕೆಲವರು ಅಂತಾರೆ.

ಏನೇ ಇದ್ರೂ, ಕೇರಳದ ಎಲ್ಲ ರಂಗಪ್ರಕಾರಗಳಿಗಿಂತ್ಲೂ ಇದು ವಿಭಿನ್ನವಾಗಿರೋದಂತೂ ಹೌದು. ಎಲ್ಲವೂ ಯುರೋಪಿಯನ್ ಶೈಲಿ. ತುಸು ಹೆಚ್ಚೇ ಥಳಕು ಅನ್ನೋವಂಥ ವೇಷಭೂಷಣಗಳು. ವಿಸ್ತಾರವಾದ ಹಾವ ಭಾವಗಳು, ಹಾಡ್ತಾನೇ ಕುಣಿಯೋ ನಟರು, ಡ್ರಂ, ಬೆಲ್ ನಂಥ ವಾದ್ಯಗಳು. ಎಲ್ಲಕ್ಕಿಂತ ‘ ಸ್ಪೆಷಲ್’, ನಟರ ಹೆಜ್ಜೆಗಳು.


‘ಚವಿಟ್ಟು ನಾಟಕಂ’ ಅಂತ ಹೆಸರು ಬಂದಿದ್ದೇ ಈ ಹೆಜ್ಜೆಗಳಿಂದ. ನಾಟ್ಕದ ಎಲ್ಲಾ ನಟರೂ ಹಾಡ್ತಾ, ಬೀಸು ಬೀಸಾಗಿ ಕೈಯನ್ನಾಡಿಸ್ತಾ, ಡ್ರಂ ನ ತಾಳಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕ್ತಾರೆ, ಇದು ಅಂತಿಂಥ ಹೆಜ್ಜೆಯಲ್ಲ, ಕರಾರುವಾಕ್ಕಾದ, ಸಧೃಢವಾದ ಹೆಜ್ಜೆ. ಕಟ್ಟಿಗೆಯ ಸ್ಠೇಜ್ ನಿಂದ ಧಡ ಭಡ ಎನ್ನೋ ಹೆಜ್ಜೆಯ ಸದ್ದು ಹೊರಡಿಸುತ್ತಾ, ಹಾಡಿನ ತಾಳಕ್ಕೆ, ಡ್ರಂ ನ ಹೊಡೆತಕ್ಕೆ ಈ ಸದ್ದನ್ನೂ ಮೇಳೈಸುವ ಪರಿ ವಿಚಿತ್ರ. ಅದಕ್ಕೇ ಇದು ‘ಚವಿಟ್ಟು ನಾಡಕಂ’…ತುಳಿತದ ನಾಟಕ.

ನಾವು ನೋಡೋಕ್ ಹೋದ ನಾಟಕದ ಹೆಸರು ‘ ಯೋನಾ ಪ್ರವಾಚಕನ್’ ಇಂಥ ನಾಟಕಗಳಲ್ಲಿ ಬೈಬಲ್ ಕಥೆಗಳೇ ಜಾಸ್ತಿ. ಈ ಕಥೆಯೂ ಅಂಥದೇ ಒಂದು. ಎಂಟನೇ ಶತಮಾನದ ಪ್ರವಾದಿಯೊಬ್ಬನ ಕತೆ.

ಆತ ಇಸ್ರೇಲಿನವನು. ‘ನಿನ್ವೇ’ ಎನ್ನೋ ಪಟ್ಟಣದ ಜನ ತುಂಬಾ ಪಾಪ ಮಾಡಿರ್ತಾರೆ. ‘”ಹೋಗು, ಅವರ ಕರ್ಮಗಳಿಗಾಗಿ ಅವರನ್ನು ಪಶ್ಚಾತ್ತಾಪಪಡುವಂತೆ ಹೇಳು, ಇಲ್ಲದಿದ್ದರೆ ಅವರು ನರಕ ಸೇರಬೇಕಾಗ್ತದೆ ಎಂದು ಹೇಳು” ಅಂದ ದೇವರು ಈ ಯೋನಾನನ್ನು ಕಳಿಸ್ತಾನೆ. ಈ ಯೋನಾ ಅಲ್ಲಿಗೆ ಹೋಗೋ ಬದಲಿಗೆ ‘ತಾರ್ಷಿಷ್’ ಗೆ ಹೋಗೋ ಹಡಗನ್ನ ಹತ್ಕೊಂಡ್ಬಿಡ್ತಾನೆ. ದೇವ್ರಿಗೆ ಗೊತ್ತಾಗ್ಬಿಡ್ತದೆ..

ಸರಿ, ಸಮುದ್ರದಲ್ಲಿ ಬಿರುಗಾಳಿಯೇಳ್ತದೆ. ದೊಡ್ಡ ತಿಮಿಂಗಲ ಎದುರಾಗ್ತದೆ. ಹಡಗಿನಲ್ಲಿರೋರನ್ನ ರಕ್ಷಿಸೋದಕ್ಕೆ ತಾನೇ ಅದರ ಬಾಯೊಳಕ್ಕೆ ಹೋಗ್ತಾನೆ ಯೋನಾ. ಮೂರು ದಿನಗಳ ನಂತರ, ‘ ನಾನು ‘ನಿನ್ವೇ’ ಗೇ ಹೋಗ್ತೀನಿ ಅಂತ ಮಾತು ಕೊಟ್ಟ ನಂತರವೇ ತಿಮಿಂಗಲ ಆತನನ್ನ ಬಾಯಿಂದ ಹೊರಗೆ ಹಾಕ್ತದೆ.

ನಿನ್ವೇಗೆ ಹೋದ ಪ್ರವಾದಿ ಅಲ್ಲಿಯ ಪಾಪಿಗಳೆಲ್ಲ ಪಶ್ಚಾತ್ತಾಪಪಡುವಂತೆ ಮಾಡ್ತಾನೆ. ಆದ್ರೂ, ಎಲ್ಲಾದ್ರೂ ಊರೇ ನಾಶವಾದೀತು ಆಂತ ಹೊರಗೇ ಕಾವಲು ನಿಲ್ತಾನೆ. ದೇವರು ಆತನಿಗೆ ಮರದ ನೆರಳು ಕೊಡ್ತಾನೆ. ಆದ್ರೂ ಈತನ್ನ ಪರೀಕ್ಷೆ ಮಾಡಿಯೇ ಬಿಡೋಣ” ಅಂತ, ಒಂದು ಕೀಟವನ್ನ ಬಿಡ್ತಾನೆ.

ಕೀಟ ಇಡೀ ಮರವನ್ನ ತಿಂದು ಹಾಕ್ತದೆ. ನೆರಳು ಕಳಕೊಂಡ ಯೋನಾನಿಗೆ ಕೋಪ. ಒದರಾಡ್ತಾನೆ. ಬರ್ತಾನೆ ದೇವರು.: ಅಲ್ಲಯ್ಯಾ, ನಿನಗೆ ನಿನ್ನ ನೆರಳು ಕಳೆದುಹೋದುದಕ್ಕೇ ಕೋಪ. ನೀನು ನೆರಳನ್ನ ಕಳ್ಕೊಂಡೆ ಅಂತ. ನೀನು ಸಮುದಾಯದ ಬಗ್ಗೆ ಯೋಚ್ನೆ ಮಾಡ್ಬೇಕು. ಅದು ಪ್ರವಾದಿಯ ಲಕ್ಷಣ” ಅಂದ ಉಪದೇಶ ಮಾಡ್ತಾನೆ. ‘ ನಿನ್ವೆ’ ಯ ಜನ ಬದುಕಿಕೊಳ್ತಾರೆ.

ಪಿ. ಪಿ. ಜೋಯ್ ಎನ್ನೋ ಅಮೆಚೂರ್ ರಂಗಭೂಮಿಯ ಹುಡುಗನೊಬ್ಬ ಪ್ರಯೋಗಾತ್ಮಕವಾಗಿ ‘ಚವಿಟ್ಟು ನಾಟಕಂ’ ನ್ನ ಉಪಯೋಗಿಸಿಕೊಂಡು ಕಟ್ಟಿದ ನಾಟ್ಕ ಇದು. ತುಂಬಾ ಒಳ್ಳೆ ಪ್ರಯೋಗವೇ. ಆದ್ರೂ ‘ತುಳಿತದ ನಾಟಕ’ ದ ಪ್ಯೂರ್ ಶೈಲಿಯನ್ನ ನೋಡಿದ ಸಮಾಧಾನ ಅಗಿರರಲಿಲ್ಲ. ಇದಾಗಿ ಒಂದೆರಡು ತಿಂಗಳುಗಳಲ್ಲೇ ನನ್ ಗೆಳೆಯ ಅದೇ ಜಾಗ್ದಲ್ಲಿ ‘ ಅಲೆಕ್ಸಾಂಡರ್’ ಎನ್ನೋ ಪ್ರಯೋಗ ತೋರಿಸಿದ.

ಕೇರಳಕ್ಕೆ ಹೋಗಿ, ಹೊಸ ಶೈಲಿಯೊಂದನ್ನ ನೋಡ್ದಂಗಾಯ್ತು.

 

 

15 comments

  1. “ಚವಿಟ್ಟು ನಾಡಕಂ ” ನಾಟಕ ತುಂಬಾ ತಿರುವುಗಳನ್ನು ಹೊಂದ್ದರು ಕುತೂಹಲಕಾರಿಯಾಗಿತ್ತು .ಕತೆಯನ್ನು ಬರೆದ ಶೈಲಿ ತುಂಬಾ ಸೊಗಸಾಗಿತ್ತು .ಹೀಗೆ ಮುಂದುವರಿಯಿರಿ .ಒಳ್ಳೆಯದಾಗಲಿ .

  2. ಬೇರೆ ಬೇರೆ ರಂಗಪ್ರಯೋಗಗಳನ್ನು ನೀವು ಪರಿಚಯಿಸ್ತಾ ಇರೋದು ಖುಶಿ, Sir.

Leave a Reply