ನಿರಂಜನರ ಕಯ್ಯೂರು ರೆಡಿಯಾದದ್ದು ಹೇಗೆ ಗೊತ್ತಾ..?

ಸಿ ಕೆ ಗುಂಡಣ್ಣ 

1981 ರಲ್ಲಿ ‘ಕರ್ನಾಟಕ ರಾಜ್ಯ ಸಮುದಾಯ ಸಮನ್ವಯ ಸಮಿತಿ’ಯ ಅಡಿಯಲ್ಲಿ ರಾಜ್ಯ ಮಟ್ಟದ ಸಾಂಸ್ಕೃತಿಕ ಜಾತಾ ನಡೆದಾಗ, ನರಗುಂದ ರೈತರ ಮೇಲೆ ಗೋಲೀಬಾರ್ ಆಗಿ, ಇಡೀ ರಾಜ್ಯದಲ್ಲಿ ರೈತರ ಪ್ರತಿಭಟನೆ ಪರಾಕಾಷ್ಠೆಯಲ್ಲಿತ್ತು.

ಈ ಹಿನ್ನಲೆಯಲ್ಲಿ, ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳೇ ಒಂದಾಗಿ ‘ರೈತನತ್ತ ಸಮುದಾಯ ಜಾಥಾ’ ಎನ್ನುವ ಶೀರ್ಷಿಕೆ ಯೊಂದಿಗೆ, ರಾಜ್ಯದ ಐತಿಹಾಸಿಕ ರೈತ ಹೋರಾಟಗಳ ಬಗ್ಗೆ ಕಿರು ಹೊತ್ತಿಗೆ ಗಳನ್ನು ‘ಸಮುದಾಯ ಪ್ರಕಾಶನ’ದ ಅಡಿಯಲ್ಲಿ ಪ್ರಕಟಿಸಿ ರಾಜ್ಯವ್ಯಾಪಿ ಜಾತಾದಲ್ಲಿ, ಎಲ್ಲಾ ತಾಲ್ಲೂಕು ಮಟ್ಟದಲ್ಲಿ ಮಾರಾಟ ಮಾಡಿದೆವು.

ಅದರಲ್ಲಿ ನಿರಂಜ‌ನ ಅವರೇ ಮತ್ತೊಮ್ಮೆ ಖುದ್ದಾಗಿ ತಾವೇ ತಮ್ಮ ಸ್ವ ಹಸ್ತದಿಂದ ಬರೆದು ಕೊಟ್ಟ ಕಿರು ಹೊತ್ತಿಗೆ ‘ಕೈಯ್ಯೂರು ರೈತ ಹೋರಾಟ’.

ಕಿರು ಹೊತ್ತಿಗೆ ಬರೆಯಲು ಅವರನ್ನು ಖುದ್ದಾಗಿ ಕಂಡು ವಿನಂತಿಸಿಕೊಂಡಾಗ, ಬರೆದುಕೊಡಲು ಒಪ್ಪಿಕೊಂಡರು.
ಆದರೆ, ಅವರ ಕರಾರುಗಳು ಮಾತ್ರ ಭಯಂಕರ, ಗಾಬರಿ ಹುಟ್ಟಿಸುವಂತದ್ದು;

ಪ್ರತಿದಿನ ಬೆಳಿಗ್ಗೆ ಮನೆಗೆ ಬಂದು ಅವತ್ತಿನ ಹಸ್ತಪ್ರತಿ ತೆಗೆದುಕೊಂಡು ಹೋಗಬೇಕು. ಒಟ್ಟಿಗೇ ಬರೆದುಕೊಡಲಾಗುವುದಿಲ್ಲ;
ಹಾಗೆ ಬಂದಾಗ, ಹಿಂದಿನ ದಿನ ಬರೆದುಕೊಟ್ಟ ಅಚ್ಚಾದ ಆ ಹಸ್ತಪ್ರತಿಯ ಪ್ರೂಫ್ ತೆಗೆದುಕೊಂಡು ಹೋಗಬೇಕು;

ಹಿಂದಿನ ದಿನದ ಹಸ್ತಪ್ರತಿಯನ್ನು ನಾವು ಪೂರ್ತಿ ಓದಬೇಕು, ಅವರಿಗೆ ಅಚ್ಚಾದ ಪ್ರತಿಯನ್ನು ಕೊಡಬೇಕು. ಅವರೇ ತಪ್ಪು-ಒಪ್ಪುಗಳನ್ನು ತಿದ್ದಿ ಕೊಡುತ್ತಾರೆ.

ಹೀಗೆ ಮೂರು ಬಾರಿ ತಪ್ಪು-ಒಪ್ಪುಗಳನ್ನು ತಿದ್ದಿದ ಮೇಲೆ ಅಂತಿಮವಾಗಿ ಮೆಶಿನ್ ಪ್ರೂಫ್ ಅವರು ತಿದ್ದಿಕೊಟ್ಟ ಮೇಲೆ ಫೈನಲ್ ಪ್ರಿಂಟ್ ಗೆ ಹೋಗಬೇಕು;

ಸಮುದಾಯ ಪ್ರಕಾಶನದ ಜವಾಬ್ದಾರಿ ಹೊತ್ತಿದ್ದ ನಾನು, ಈ ಒಂದು ತಿಂಗಳಲ್ಲಿ, ನಿರಂಜನ ಮತ್ತು ಅನುಪಮಾ ಅವರಿಗೆ, ಅವರ ಮನೆಯ ಮಗನಂತಾಗಿದ್ದೆ;

ಆಗಷ್ಟೇ ಪಾರ್ಶ್ವವಾಯುವಿನಿಂದ ಚೇತರಿಸಿಕೊಳ್ಳುತ್ತಿದ್ದ ನಿರಂಜನ ಅವರು ತಮ್ಮ ಕೈಯಲ್ಲೇ ಓರೆ-ಕೋರೆಯಾಗಿ ಬರೆಯುತ್ತಿದ್ದರೂ ಸಹ, ಅವರ ಕೈ ಬರವಣಿಗೆ ಚೆನ್ನಾಗಿತ್ತು. ಮಾತು ಸ್ವಲ್ಪ ಅಸ್ಪಷ್ಟ ವಾಗಿರುತಿತ್ತು. ಇಷ್ಟೆಲ್ಲಾ ಅನಾರೋಗ್ಯ ಇದ್ದರೂ ಒಂದು ದಿವಸವೂ ಅವರು ಹಸ್ತಪ್ರತಿ ಕೊಡುವುದನ್ನು ತಪ್ಪಿಸುತ್ತಿರಲಿಲ್ಲ.

ಈ ಕಿರು ಹೊತ್ತಿಗೆ ಜೊತೆಗೆ,

ಜಿ.ರಾಜಶೇಖರ್ ಅವರ ತೆಲಂಗಾಣ ರೈತ ಹೋರಾಟ;
ಜಿ.ಪಿ.ಬಸವರಾಜ್ ಅವರ ಶಿವಮೊಗ್ಗ ರೈತ ಹೋರಾಟ;
ಎಂ.ಕೆ. ಭಟ್ ಅವರ ರೈತ-ಕಾರ್ಮಿಕ ಸಂಘಟನೆ ಮ‌ತ್ತು ಸಮಾಜ ಬದಲಾವಣೆ;,
“ಪ್ರತ್ಯಕ್ಷ ದರ್ಶಿ” ಅವರ ನರಗುಂದ ರೈತರ ಬಂಡಾಯ;

ಸಿದ್ದಲಿಂಗಯ್ಯ ಅವರ ಸಾವಿರಾರು ನ‌ದಿಗಳು ಎರಡನೇ ಮುದ್ರಣ,
ಸಿದ್ದಲಿಂಗಯ್ಯ ಅವರ ದಲಿತರಿಗೆ ಬೇಕಾದುದು ಹೆಸರಿನ ಬದಲಾವಣೆ ಅಲ್ಲ, ಜೀವನದ ಬದಲಾವಣೆ
“ಆರ್ಯಮನ್” ಅವರ ಆರ್‌ಎಸ್ಸೆಸ್ – ಒಂದು ವಿಷವೃಕ್ಷ, (ಎರಡನೇ ಮುದ್ರಣ);
ಎಮ‌್.ಜಿ.ನರಸಿಂಹನ್ ಅವರ ಭಾರತದಲ್ಲಿ ಬಹುರಾಷ್ಟ್ರೀಯ ಸಂಸ್ಥೆಗಳು ,
ಎಸ್. ಮಾಲತಿ ಅವರ ಮ‌ಹಿಳಾ ವಿಮೋಚನೆ – ಗೊತ್ತು ಗುರಿಗಳು, ಹಾಗೂ
ಶಿವಾಜಿ ಗಣೇಶನ್ ಅವರ ಒಂದು ಕಿರು ಹೊತ್ತಿಗೆ ದಲಿತರ ಮೇಲಿನ ದೌರ್ಜನ್ಯಗಳು

ಮುಂತಾದ ಪುಸ್ತಕಗಳನ್ನು ಪ್ರಕಟಿಸಿ, ರೈತರ ಕೈಗೆಟುಕುವ ಬೆಲೆಗೆ (ರೂ.1.25 ಪೈಸೆ) ಇಡೀ ರಾಜ್ಯದಲ್ಲಿ ಮಾರಾಟ ಮಾಡಿದ ಹೆಮ್ಮೆ ಕರ್ನಾಟಕ ರಾಜ್ಯ ಸಮುದಾಯದ್ದು..

ಸಮುದಾಯ ಪ್ರಕಾಶನದ ಜವಾಬ್ದಾರಿಯನ್ನು ರಮಾಮಣಿ, ಪ್ರದೀಪ್, ಶೃಂಗೇಶ್, ನಾನು ಹೊತ್ತಿದ್ದೆವು.
ನಮ್ಮ ಮೇಸ್ತ್ರಿಗಳು ಪ್ರಸನ್ನ;

ಸಿ.ಜಿ.ಕೆ. ಪ್ರ.ಕಾರ್ಯದರ್ಶಿ ಯಾಗಿದ್ದರಿಂದ ಅವರ ಹೆಸರಿನಲ್ಲಿ ಎಲ್ಲವೂ ಪ್ರಕಟವಾಗುತಿತ್ತು.

ಕೆ.ಪಿ.ಎ. ದಲ್ಲಿ ಮುದ್ರಣ; ಪ್ರಜಾವಾಣಿಯವರು ನ್ಯೂಸ್‌ಪ್ರಿಂಟ್ ಕೊಡುತ್ತಿದ್ದರು.
ಇದೇ ಟೀಮ್ ವಾರ್ತಾ ಪತ್ರಕ್ಕೂ ಇತ್ತು.
ಸಮುದಾಯ ಪ್ರಕಾಶನ ಬಂದ್ ಆದಮೇಲೆ, ಇಲ್ಲಿನ ಅನುಭವದ ಆಧಾರದಲ್ಲಿ, ಮಾಸ್ತರ್ ಅವರ ಸಹೃದಯತೆಯಿಂದ ರಮಾ ಕ್ರಿಯಾ ಬುಕ್ ಹೌಸ್ ಗೆ ವರ್ಗಾವಣೆ ಆದರು.

ಎಲ್ಲ ಹಳೇ ನೆನಪುಗಳು……
ಕೆಲವು ನೋವಿನ ನೆನಪುಗಳು….

 

ನನಗೆ ಇನ್ನೂ ಇದೆಲ್ಲಾ ಚೆನ್ನಾಗಿ ನೆನೆಪಿದೆ.

ಬೀದರ್ ನಿಂದ ಧಾರವಾಡದವರೆಗೆ ಸಾಂಸ್ಕೃತಿಕ ಜಾಥಾ ಬಂದಿತ್ತು. ಧಾರವಾಡದಲ್ಲಿ ಸಮಾರೋಪ‌. ಸಮಾರೋಪ‌ ಭಾಷಣ ನಾನು ಮಾಡಿದ್ದೆ. ಆದನ್ನು ಪ್ರಕಟಿಸಲು ಆಗಿರಲಿಲ್ಲ. ಕೆಲ ವರ್ಷಗಳ ನಂತರ ಮಾನ್ಯ ಬೆಳೆಗೆರೆ ಕೃಷ್ಣ ಶಾಸ್ತ್ರಿಗಳ ಅಭಿನಂದನಾ ಗ್ರಂಥಕ್ಕೆ ಒಂದು ಲೇಖನ ಬರೆಯಲು ಅದರ ಸಂಪಾದಕರಾಗಿದ್ದ ಪ್ರೊ. ಎಮ್ .ವಿ. ಶ್ರೀನಿವಾಸ್ ಅವರು ಕೇಳಿದರು . ನಾನು ಈ ಲೇಖನ ಆಗಬಹುದಾ ಅಂದಾಗ ಅವರು ಒಪ್ಪಿದರು. ಅದರಲ್ಲಿ ಪ್ರಕಟವಾಗಿದೆ.
ಗುಂಡಣ್ಣನವರೆ ಶಶಿಧರ್ ಬಾರಿಘಾಟ್ ಅವರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ.
ಈ ವಿಷಯ ಈಗ ನೆನೆಪಿಗೆ ತಂದುದಕ್ಕೆ ಗುಂಡಣ್ಣನವರಿಗೆ ಧನ್ಯವಾದಗಳು.

 

Leave a Reply