ಮೇಷ್ಟ್ರ ಶಿಷ್ಯನಾಗಿದ್ದು ಅಂಥಾ ಭಾಗ್ಯ..

ಸುರೇಶ್ ಕಂಜರ್ಪಣೆ

ನಾನು ಊರಲ್ಲಿದ್ದಾಗ ಬರೆದ ಪದ್ಯಗಳನ್ನು ಯು.ಆರ್ ಎ. ಮೇಷ್ಟ್ರಿಗೆ ಅಂಚೆಯಲ್ಲಿ ಕಳಿಸುತ್ತಿದ್ದೆ. ಅವರು ಆ ಪುಟಗಳ ಮಾರ್ಜಿನ್ನಲ್ಲಿ ಕಮೆಂಟ್ ಹಾಕಿ ಮತ್ತೆ ಪೋಸ್ಟ್ ಮಾಡೊರು. ಕವನಗಳಲ್ಲಿರೋ ನಾಟಕೀಯತೆ, ಸಡಿಲು ಸಾಲು ಎಲ್ಲವನ್ನೂ ಸೂಚಿಸೋರು.

ಅಂಥಾ ಒಂದು ಪುಟದಲ್ಲಿ “ ಮಾಸ್ತರನ ಹಾಗೆ ಮಾರ್ಜಿನ್ನಲ್ಲಿ ಬರೆದದ್ದನ್ನು ನನ್ನ ಪ್ರಿಯ ಶಿಷ್ಯರಲ್ಲೊಬ್ಬನಾಗಿ ಕ್ಷಮಿಸು” ಎಂಬ ಒಕ್ಕಣೆ ಬರೆದಿದ್ದರು. ಬಾಳಲ್ಲಿ ಕೆಲವು ಭಾಗ್ಯ ಅಯಾಚಿತ. ಮೇಷ್ಟ್ರ ಶಿಷ್ಯನಾಗಿದ್ದು ಅಂಥಾ ಭಾಗ್ಯ. ಮೊನ್ನೆ ಒಂದು ಕಾಗದ ವಿಲಿವಿಲಿ ಒದ್ದಾಡುತ್ತಿದ್ದುದು ಸಿಕ್ಕಿತು. ಈ ಕವನ ಆ ಪುಟದಿಂದ ಎತ್ತಿದ್ದು.

ಬಾಲಪಾದಗಳು ಜಿಗಿದು ಕುಪ್ಪಳಿಸಿ ನೆಲವಿಡೀ,
ಬೆಳೆವ ಹೆಜ್ಜೆಗುರುತು
ನೆಲ ಬಳಿದು ಚುಮುಕು ನೀರು, ಅರಳು ರಂಗೋಲಿ, ಅಹಾ,!
ರಂಗೋಲಿ ಬೆಳಗನೇ ಎಳೆದು ತಂದಿದೆ.
ಹಕ್ಕಿ ಹೂವೊಳಗಿಣುಕಿ
ಏನನೋ ಕದ್ದೊಯ್ದಿದೆ
ಇನಿತು ಹುಳ್ಳ ಭಯವಿಲ್ಲ
ಅದರ ಬಾಲದ ತುದಿಯೋ ಜಗದ ಜೀವ ಚಿಲುಮೆ
ಸಾವಕಾಶ ಎಲೆಯೊಂದು ಅರಳಿ ಬೀಸಣಿಗೆಯಾಗಿ
ಚಿಟ್ಟೆಯಾಗಿ ತೇಲಿದೆ
ಎದೆ ಉಬ್ಬಸಕೆ ಜಿಗಿಯಲಾರದೇ
ಸೊತ ಕಾಲುಗಳು ಕುಪ್ಪಳಿಸಲಾರದೇ
ಕೈಬೀಸು ರೆಕ್ಕೆಯಾಗದೇ,
ಕೂತಲ್ಲೇ,
ಬೆಳಗು ಮೂಡಿದೆ

1 comment

  1. ಸಾವಕಾಶ ಎಲೆಯೊಂದು ಅರಳಿ ಬೀಸಣಿಗೆಯಾಗಿ
    ಚಿಟ್ಟೆಯಾಗಿ ತೇಲಿದೆ..

    ಕೂತಲ್ಲೇ ಬೆಳಗು ಮೂಡಿದೆ.

    ಚಂದದ ಸಾಲುಗಳು

Leave a Reply